ಜಿ ಎನ್ ಆರ್ ನೆನಪು: ಇನ್ನೂ ಹಲವು ಪುಟಗಳು ಬಾಕಿ ಉಳಿದಿವೆ…

ಭಾರತಿ ಹೆಗಡೆ

ಅದು ಜುಲೈ ತಿಂಗಳ ಮೊದಲ ವಾರ. ಏನೋ ಬರೆಯುತ್ತ ಕುಳಿತಿದ್ದೆ. ಇದ್ದಕ್ಕಿದ್ದ ಹಾಗೆ ಹಿರಿಯರಾದ ರಂಗನಾಥ್ ರಾವ್ ಅವರಿಂದ ಫೋನ್ ಬಂತು. ಅವರು ಯಾವತ್ತೂ ನನಗೆ ಫೋನ್ ಮಾಡಿದವರೇ ಅಲ್ಲ, ಅಂಥದ್ದರಲ್ಲಿ ಅವರ ಫೋನ್ ಯಾಕೆ ಬಂತು ಎಂದು ಕುತೂಹಲದಿಂದ ಪೋನೆತ್ತಿದೆ. ಆ ಕಡೆಯಿಂದ
‘ಭಾರತಿ ಹೆಗಡೆಯವರಾ…?’
‘ಹೌದು ಸರ್ ನಾನೇ…’
‘ನಾನಮ್ಮ, ರಂಗನಾಥ್ ರಾವ್,’,
‘ಗೊತ್ತಾಯ್ತು ಸರ್, ನಿಮ್ಮ ಹೆಸರು ನನ್ನ ಮೊಬೈಲ್‌ನಲ್ಲಿ ಸೇವ್ ಆಗಿದೆ.’
‘ನನ್ನ ನೆನಪಿದೆಯಾಮ್ಮ…?’
‘ಅಯ್ಯೋ ಸರ್, ನೆನಪಿಲ್ಲದೆ ಏನು? ನೀವು ನನಗೆ ಪತ್ರಿಕೋದ್ಯಮವನ್ನು ಕಲಿಸಿದ ಟೀಚರ್’
‘ಅದೆಲ್ಲ ಹಳೆ ಕತೆ ಬಿಡಮ್ಮ, ಈಗ ಯಾರಿಗೆ ನೆನಪಿರುತ್ತೆ ಅದೆಲ್ಲ, ಅದು ಹೋಗ್ಲಿ, ನಿಂದೊAದು ಪುಸ್ತಕ ಬಂತಲ್ಲಮ್ಮ, ಪತ್ರಿಕೆಗಳಲ್ಲಿ ಓದಿದೆ, ಪಂಚಮವೇದ ಅಂತ, ನನಗೆ ಆ ಪುಸ್ತಕ ಬೇಕು. ಅದರ ಹೆಸರೇ ತುಂಬ ಅಟ್ರಾಕ್ಟಿವ್ ಆಗಿದೆ, ಅದರ ಜೊತೆಗೆ ನಿನ್ನ ತಾಯಿಯ ಕುರಿತೂ ನೀನು ಪುಸ್ತಕ ತಂದಿದ್ದೀಯಲ್ವೇನಮ್ಮ, ಅದೂ ಬೇಕಮ್ಮ ನನಗೆ’ ಎಂದರು.
‘ಆಯ್ತು ಸರ್ ಕಳಿಸಿಕೊಡ್ತೇನೆ.’ ಎಂದೆ.
‘ನಾನೇ ಹೋಗಿ ತೆಗೆದುಕೊಳ್ಳೋಣ ಎಂದರೆ ಹೊರಗೆ ಓಡಾಡಲು ನನ್ನ ದೇಹ ಸಹಕರಿಸುತ್ತಿಲ್ಲಮ್ಮ, ವಯಸ್ಸಾಯ್ತು ನೋಡು, ಇನ್ನು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳುವ ಟೆಕ್ನಾಲಜಿಗಳೆಲ್ಲ ನನಗೆ ಗೊತ್ತಿಲ್ಲಮ್ಮ, ಅದಕ್ಕಾಗಿ ನಿನಗೆ ಕಳಿಸಲು ಹೇಳಿದೆ, ಅದಕ್ಕೆ ನಾನು ಪೇ ಮಾಡುತ್ತೇನೆ. ಆದ್ರೆ ಈ ಎರಡು ಪುಸ್ತಕ ಕಳಿಸಿಕೊಡಬಹುದೇನಮ್ಮ?’
ಎಂದು ಕೇಳಿದರು.
‘ಅಯ್ಯೋ ಸರ್, ನೀವು ಇಷ್ಟೆಲ್ಲ ಹೇಳೋದೇ ಬೇಡ. ಈ ಮೊದಲೇ ನಾನು ನಿಮಗೆ ಕಳಿಸಿಕೊಡಬೇಕಿತ್ತು. ನೀವು ನನಗೆ ಜರ್ನಲಿಸಂ ಕಲಿಸಿದವರು. ನಿಮಗೆ ಕಳುಹಿಸದೇ ಇದ್ದದ್ದು ನನ್ನದೇ ತಪ್ಪು. ಕಳಿಸಿಕೊಡ್ತೇನೆ ಸರ್, ಅದಕ್ಕೆ ದುಡ್ಡೆಲ್ಲ ಕೊಡೋದು ಬೇಡ. ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಸಾಕು’ ಎಂದೆ.
‘ಆಯ್ತಮ್ಮ. ಕಳಿಸ್ಕೊಡು, ಮರೀಬೇಡ’ ಎಂದು ಹೇಳಿ ಫೋನಿಟ್ಟರು.

ನನಗೆ ಆಶ್ಚರ್ಯವಾಯಿತು. ಇವರಂತಹ ಹಿರಿಯರು, ಪತ್ರಿಕೋದ್ಯಮದ ದಿಗ್ಗಜರು, ಹಾಗೆಯೇ ಒಳ್ಳೆಯ ಅನುವಾದಕರು, ಲೇಖಕರು, ಕತೆಗಾರರು, ಇವರಂಥವರು ನನ್ನ ಪುಸ್ತಕವನ್ನು ಕೇಳಿ ಪಡೆಯುವುದೆಂದರೇನು ಎಂದು ಆಶ್ಚರ್ಯ, ಸಂತೋಷ ಎರಡೂ ಆಗಿ, ‘ಪಂಚಮವೇದ’, ‘ಹರಿವ ನದಿ’ ಈ ಎರಡು ಪುಸ್ತಕಗಳ ಜೊತೆಗೆ ನನ್ನ ‘ಸೀತಾಳೆ ದಂಡೆಯ ಸದ್ದಿಲ್ಲದ ಕತೆಗಳು’ ಕಥಾ ಸಂಕಲನ ಸೇರಿ ಒಟ್ಟು ಮೂರು ಪುಸ್ತಕಗಳನ್ನೂ ಅವರಿಗೆ ಕಳುಹಿಸಿಕೊಟ್ಟೆ.

ಕಳಿಸಿ ಎರಡು ದಿವಸಗಳ ನಂತರ ಅವರೇ ಫೋನು ಮಾಡಿ, ‘ಪುಸ್ತಕಗಳು ಬಂದಿವೆಯಮ್ಮ, ಥ್ಯಾಂಕ್ಸ್ ನಿನಗೆ. ಓದಿ ಹೇಳುತ್ತೇನೆ’ ಎಂದರು.
ಅದಾದ ನಂತರ ಆಗೀಗ ನನಗೆ ನೆನಪಾದರೂ ಕೇಳುವ ಸುದ್ದಿಗೆ ಹೋಗಲಿಲ್ಲ. ನಾನಾಗಿಯೇ ಓದಿದ್ರಾ ಸಾರ್ ಅಂತ ಕೇಳೋಕೇನೋ ಸಂಕೋಚವೆನಿಸಿತು, ಅವರಿಗೀಗ ವಯಸ್ಸಾಗಿದೆ. ಪಾಪ ಬೇಗಬೇಗ ಓದಲು ಆಗುತ್ತದೋ ಇಲ್ಲವೋ ಎಂದು ಯೋಚಿಸಿ ಸುಮ್ಮನಾಗಿದ್ದೆ. ಒಂದು ವಾರ ಬಿಟ್ಟುಕೊಂಡು ಮತ್ತೆ ಅವರೇ ಫೋನ್ ಮಾಡಿ, ‘ನಿನ್ನ ಪುಸ್ತಕ ಬಂದಿವೆಯಮ್ಮ, ಆದರೆ ಮೊದಲಿನಷ್ಟು ಫಾಸ್ಟಾಗಿ ಓದಲು ನನಗೆ ಆಗುವುದಿಲ್ಲ. ನಿಧಾನಕ್ಕೆ ಓದಿ ಹೇಳುತ್ತೇನೆ’ ಎಂದರು.

‘ಆಯ್ತು ಸರ್, ನೀವು ಟೈಮ್ ತೊಗೊಳಿ, ಯಾವ ಅರ್ಜಂಟೂ ಇಲ್ಲ’ ಎಂದೆ.
ಅಷ್ಟರ ನಂತರ ಅವರ ಫೋನಿಲ್ಲ. ನಾನೂ ಕೇಳಲು ಹೋಗಲಿಲ್ಲ.

ಕಳೆದ ತಿಂಗಳು, ಸೆಪ್ಟೆಂಬರ್ ೨೪ ರ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಡಾ. ಜಿ.ನಾರಾಯಣ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಸಿಕ್ಕಿದ್ದರು. ನಾನೇ ಹೋಗಿ ಅವರ ಪಕ್ಕ ಕೂತು ‘ಹೇಗೀದ್ದೀರಿ ಸರ್’ ಎಂದು ಮಾತನಾಡಿಸಿದೆ.
‘ಚೆನ್ನಾಗಿಲ್ಲಮ್ಮ ನಾನು, ಆರೋಗ್ಯ ಸರಿ ಇಲ್ಲ. ಆರ್ಥರೈಟಿಸ್ ಆಗಿದೆ, ಇಡೀ ದೇಹ ನೋಯುತ್ತಿದೆ’ ಎಂದು ನೋವಿನಿಂದ ಮುಖ ಕಿವುಚಿ ಹೇಳಿದರು.
ಛೇ…ಎಂದು ಅವರನ್ನೊಮ್ಮೆ ನೋಡಿದೆ. ತುಂಬ ಜೀರ್ಣವಾಗಿದ್ದರು. ಸ್ವಲ್ಪ ಹೊತ್ತು ಅವರ ಬಳಿಯೇ ಕುಳಿತೆ.
‘ಏನ್ ಮಾಡ್ತಾ ಇದ್ದೀಯಮ್ಮ ಈಗ ನೀನು’ ನಿಧಾನಕ್ಕೆ ಕೇಳಿದರು.
‘ಏನೂ ಇಲ್ಲ ಸರ್, ಮನೆಯಲ್ಲೇ ಇದ್ದೇನೆ’ ಎಂದೆ.
‘ಒಳ್ಳೇದಾಯ್ತು, ನಿಂಗೆ ಬೇಕಾದ್ದು ಬರೆದುಕೊಂಡು ಇರು. ಏನ್ ಬರೀತಾ ಇದ್ದೀಯಾ ಈಗ’ ಎಂದು ಕೇಳಿದರು.
‘ಒಂದು ಕಾದಂಬರಿ ಬರೆಯುತ್ತಿದ್ದೇನೆ ಸರ್’ ಎಂದೆ.
‘ಗುಡ್, ಯು ಆರ್ ವರ್ಥ್, ನಿನಗೆ ಆ ಸಾಮರ್ಥ್ಯ ಇದೆ, ನಿನಗೆ ಒಳ್ಳೆಯ ಭಾಷೆ ಇದೆ. ಬರಿ… ನಿನ್ನ ಪುಸ್ತಕಗಳನ್ನು ಈಗ ಓದಲು ಶುರು ಮಾಡಿದ್ದೇನೆ. ಕೆಲವು ಪುಟಗಳನ್ನು ಓದಿದ್ದೇನೆ. ಪೂರ್ತಿ ಓದಿದ ಮೇಲೆ ನನ್ನ ಅಭಿಪ್ರಾಯ ತಿಳಿಸುತ್ತೇನೆ…’ ಎಂದರು. ‘ಥ್ಯಾಂಕ್ಸ್ ಸರ್’ ಎಂದು ಅಲ್ಲಿಂದ ಎದ್ದುಬಂದೆ.
ಬಂದ ಮೇಲೆ ಕೆಲವು ಹಿರಿಯರೊಡನೆ ಹೇಳಿದ್ದೆ ಕೂಡ. ರಂಗನಾಥ್ ಸರ್ ಸಿಕ್ಕಿದ್ದರು. ಅವರು ತುಂಬ ಕುಗ್ಗಿ ಹೋಗಿದ್ದಾರೆ. ಅವರನ್ನು ನೋಡಿದರೆ ಜಾಸ್ತಿ ದಿವಸ ಇರುತ್ತಾರೆ ಎಂದೆನಿಸುವುದಿಲ್ಲ ಎಂದಿದ್ದೆ. ಅವರಿಗೆ ಫೋನ್ ಮಾಡಿ ಅವರ ಆರೋಗ್ಯ ವಿಚಾರಿಸಬೇಕು ಎಂದೂ ಅಂದುಕೊAಡಿದ್ದೆ. ಆದರೆ ಫೋನ್ ಮಾಡಿದ ಕೂಡಲೇ ಪುಸ್ತಕದ ಸಲುವಾಗಿಯೇ ಇವಳು ಫೋನ್ ಮಾಡಿದ್ದಾಳಾ ಎಂದು ಅವರೆಲ್ಲಿ ಅಂದುಕೊAಡು ಬಿಡುತ್ತಾರೋ ಎಂದು ಫೋನ್ ಮಾಡಲು ಹೋಗಲಿಲ್ಲ. ಆದರೆ ಆಗೀಗ ನೆನಪಾಗುತ್ತಿತ್ತು, ಅವರಿಗೆ ಫೋನ್ ಮಾಡಿ ಪೂರ್ತಿ ಪುಟಗಳನ್ನು ಓದಿದ್ರಾ ಎಂದು ಕೇಳಬೇಕೆಂದು. ಆದರೆ ಕೇಳಲಿಲ್ಲ.
ಈಗ ಅವರು ನಿಧನರಾಗಿದ್ದಾರೆ. ಪೂರ್ತಿ ಪುಟಗಳನ್ನು ಅವರು ಓದಿರಲಿಕ್ಕಿಲ್ಲ…


ಭಾರತೀಯ ವಿದ್ಯಾಭವನದಲ್ಲಿ ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದಾಗ ನನಗೆ ಪತ್ರಿಕೋದ್ಯಮದ ಪಾಠ ಮಾಡಿದವರು ಅವರು.
ಅದು ೨೦೦೦ನೇ ಇಸವಿ. ಮುದ್ರಣ ಮಾಧ್ಯಮ ತುಂಬ ಪ್ರಬಲವಾಗಿದ್ದ ಕಾಲವದು. ದೃಶ್ಯ ಮಾಧ್ಯಮವೆಂದರೆ ದೂರದರ್ಶನ ಚಂದನ ಮತ್ತು ಉದಯ ಟಿವಿಗಳು ಮಾತ್ರ ಇದ್ದವು. ಇನ್ನು ಪತ್ರಿಕೋದ್ಯಮದ ತರಗತಿಗಳೆಂದರೆ ಬಹುತೇಕ ಥಿಯರಿಗಳನ್ನೇ ಕಲಿಸುವ ಕೇಂದ್ರಗಳಾಗಿದ್ದವು. ವಾಟ್ ಈಸ್ ಜರ್ನಲಿಸಂ, ಹಿಸ್ಟರೀ ಆಫ್ ಜರ್ನಲಿಸಂ, ವಾಟ್ ಈಸ್ ಸ್ಕೂಪ್, ವಾಟ್ ಈಸ್ ರಿಪೋರ್ಟಿಂಗ್, ಇಂಥವುಗಳ ಕುರಿತೇ ಓದಿಕೊಂಡು ಬಂದ ಬಹುತೇಕ ವಿದ್ಯಾರ್ಥಿಗಳು ಪತ್ರಿಕೋದ್ಯಮಕ್ಕೆ ಕಾಲಿಟ್ಟ ತಕ್ಷಣ ವರದಿ ಬರೆಯಲು, ಹೆಡ್ಡಿಂಗ್ ಕೊಡಲು ತಿಣುಕಾಡುತ್ತಿದ್ದರು.

ಇದಕ್ಕೆ ಕಾರಣ, ಪತ್ರಿಕೋದ್ಯಮ ಯಾವತ್ತೂ ಪ್ರಾಕ್ಟಿಕಲ್ ಆಗಿರಬೇಕಿತ್ತು. ಇಲ್ಲಿ ಪತ್ರಿಕೋದ್ಯಮದ ಇತಿಹಾಸ ತಗೊಂಡು ಏನೂ ಆಗಬೇಕಾಗಿರುವುದಿಲ್ಲ. ಬದಲಾಗಿ ಪ್ರತಿನಿತ್ಯದ ಆಗುಹೋಗುಗಳನ್ನು ತೆರೆದ ಕಣ್ಣುಗಳಿಂದ ನೋಡಿ, ಅದನ್ನು ಬರೆಯಬೇಕಿತ್ತು. ಶೀರ್ಷಿಕೆ ಎಂದರೇನು ಎಂದು ಓದುವುದಕ್ಕಿಂತ ಶೀರ್ಷಿಕೆಯನ್ನು ಕೊಡುವುದು ಗೊತ್ತಿರಬೇಕಿತ್ತು. ಹೀಗೆ ಸದಾ ಅಲರ್ಟ್ ಆಗಿ ಮತ್ತು ಪ್ರಾಕ್ಟಿಕಲ್ ಆಗಿರುವುದನ್ನು ಪತ್ರಿಕೋದ್ಯಮ ಅಥವಾ ಸುದ್ದಿ ಮಾಧ್ಯಮ ಬೇಡುತ್ತದೆ. ಹಾಗಾಗಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಬೇರೆಯದೇ ರೀತಿಯ ಪಾಠ ಬೇಕು ಎಂಬುದನ್ನು ಮನಗಂಡವರು ಜಿ.ಎನ್. ರಂಗನಾಥ್ ರಾವ್ ಅವರು.

ಹಲವಾರು ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿದ್ದು, ಪ್ರಜಾವಾಣಿಯ ಸಹಾಯಕ ಸಂಪಾದಕರಾಗಿಯೂ ನಿವೃತ್ತರಾಗಿದ್ದ ಜಿ.ಎನ್. ರಂಗನಾಥ್ ರಾವ್ ಅವರು ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದ ತರಗತಿಯನ್ನೂ ಪ್ರಾರಂಭಿಸಿ ಅದರ ಸಂಪೂರ್ಣ ಉಸ್ತುವಾರಿಯನ್ನು ಇವರೇ ನೋಡಿಕೊಂಡರು. ಆಗ ಅದು ಕೇವಲ ೬ ತಿಂಗಳ ಕೋರ್ಸ್ ಆಗಿತ್ತು. ಪ್ರಥಮವಾದ ಆ ಕೋರ್ಸ್ಗೆ ನಾನೂ ಸೇರಿಕೊಂಡೆ. ಆಗ ನನ್ನಜೊತೆ ನಾರಾಯಣ ಸ್ವಾಮಿ, ಬೋಪಯ್ಯ, ಅನಿಲ್, ಹಂಪಾಪತಿ ಮುಂತಾದವರು ಸೇರಿದಂತೆ ೪೦ ವಿದ್ಯಾರ್ಥಿಗಳಿದ್ದೆವು. ಅದೊಂದು ಅಪರೂಪದ ಅನುಭವ ನಮಗೆಲ್ಲ.

ರಂಗನಾಥ್ ರಾವ್ ಅವರು ನಮಗೆ ಅನುವಾದದ ತರಗತಿಯನ್ನು ತೆಗೆದುಕೊಳ್ಳುತ್ತಿದ್ದರು. ಒಂದು ಜನಾಂಗ ಮತ್ತು ಒಂದು ಸಮುದಾಯದ ಭಿನ್ನತೆ ಏನು, ಯಾವ ಪದವನ್ನು ಎಲ್ಲಿ ಬಳಸಬೇಕು ಎಂದು ನಿಖರವಾಗಿ ಹೇಳಿಕೊಡುತ್ತಿದ್ದರು. ಜೊತೆಗೆ ಕಾಫ್ಕಾನ ಕತೆಗಳು, ಜೆನ್ ಕತೆಗಳ ಕುರಿತು ಹೇಳುತ್ತಿದ್ದರು. ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ನೀವು, ದಿವಸಕ್ಕೆ ಕನಿಷ್ಠ ನಾಲ್ಕು ಪೇಪರ್‌ಗಳನ್ನಾದರೂ ಓದಬೇಕು, ಎರಡು ಇಂಗ್ಲಿಷ್, ಎರಡು ಕನ್ನಡ ಪತ್ರಿಕೆಗಳನ್ನು ಕಡ್ಡಾಯವಾಗಿ ಓದಲೇಬೇಕು. ಪಠ್ಯಪುಸ್ತಕಗಳನ್ನು ನಿಮ್ಮ ಪರೀಕ್ಷೆಗಾಗಿ ಮಾತ್ರ ಓದಿಕೊಳ್ಳಿ. ಆದರೆ ನಾಳೆ ದಿನ ನೀವು ಯಾವುದೇ ಪತ್ರಿಕೆಗಳಿಗೆ ಸೇರಿಕೊಳ್ಳುತ್ತೀರಿ ಎಂದಾದರೆ ನಿಮಗೆ ಪ್ರಾಕ್ಟಿಕಲ್ ನಾಲೆಡ್ಜ್ ಬಹಳ ಮುಖ್ಯ. ಪತ್ರಕರ್ತ ಸದಾ ಎಚ್ಚರವಾಗಿರಬೇಕು, ಸದಾ ಜಾಗೃತವಾಗಿರಬೇಕು ಎನ್ನುತ್ತಿದ್ದರು.

ಪ್ರತಿದಿವಸ ಪತ್ರಿಕೆಗಳನ್ನು ಓದಿ. ಟ್ರಾನ್ಸ್ಲೇಷನ್ಸ್ ಅಭ್ಯಾಸ ಮಾಡಿ ಮತ್ತು ಚೆನ್ನಾಗಿ ಬರೆಯುವುದನ್ನು ಕಲಿಯಿರಿ, ಎಂದು ಹೇಳಿ ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮ ಜರುಗಲಿ, ಅಲ್ಲಿಗೆ ನಮ್ಮಲ್ಲೇ ಒಂದಷ್ಟು ಗುಂಪುಗಳನ್ನು ವಿಂಗಡಿಸಿ ಒಂದೊಂದು ಗುಂಪುಗಳನ್ನು ಒಂದೊಂದು ಕಾರ್ಯಕ್ರಮಗಳಿಗೆ ಕಳಿಸುತ್ತಿದ್ದರು. ಅಲ್ಲಿಂದ ಬಂದಮೇಲೆ ಆ ಕಾರ್ಯಕ್ರಮದ ವರದಿ ಬರೆದು ಅವರಿಗೆ ಕೊಡಬೇಕಾಗಿತ್ತು. ಅಲ್ಲದೆ ವಾರಕ್ಕೊಂದು ಅಸೈನ್‌ಮೆಂಟ್ ಕೊಟ್ಟು ಕಳುಹಿಸಿ ನಮ್ಮಿಂದ ಲೇಖನಗಳನ್ನು ಬರೆಸಿ ಅದನ್ನು ತಿದ್ದುತ್ತಿದ್ದರು.

ಬೆಂಗಳೂರಿನಲ್ಲಿ ವಾಹನ ನಿಲುಗಡೆಯ ಸಮಸ್ಯೆ, ಭೂಮಿ ಕೊರೆದು ಪೈಪ್ ಹಾಕುವ ಸಮಸ್ಯೆಗಳ ಕುರಿತು ಬರೆದುಕೊಂಡು ಬರಲು ಹೇಳಿದ್ದು ಇನ್ನೂ ನನಗೆ ನೆನಪಿದೆ.

ಬರಹದಲ್ಲಿ ‘ಮಾಡಲ್ಪಡುವುದು’, ‘ಸೇರ್ಪಡೆ..’ ಇಂಥ ಶಬ್ದಗಳನ್ನು ಬಳಸುವುದು ಬೇಡ. ಈ ಅಲ್ಪಡು ಬೇಡ, ಅದರ ಬದಲು ನೇರವಾಗಿ ಮಾಡಲಾಗುವುದು, ಸೇರಿಸಲಾಗಿದೆ ಎಂದೇ ಬರೆಯಿರಿ ಎಂದಿದ್ದರು.

ಇಷ್ಟಲ್ಲದೆ ವರದಿಗಾರಿಕೆಗೆ, ಕ್ರೀಡಾ ವರದಿ, ಸಿನಿಮಾ ವರದಿ, ಡೆಸ್ಕ್ ಪತ್ರಿಕೋದ್ಯಮಕ್ಕೆ ವೃತ್ತಿ ನಿರತ ಪತ್ರಕರ್ತರನ್ನೇ ಕರೆಸಿ ಅಲ್ಲಿ ಪಾಠ ಮಾಡಿಸಿ ಅದೊಂಥರದಲ್ಲಿ ಮಿನಿ ಪತ್ರಿಕಾಲಯವೇ ಆಗಿಹೋಗಿತ್ತು.

ಆರು ತಿಂಗಳು ಅವರಿಂದ ಕಲಿತದ್ದು ಬಹಳ. ತುಂಬ ವೃತ್ತಿನಿರತರಿಂದಲೇ ಪಾಠಮಾಡಿಸಿದ್ದರಿಂದಲೋ ಏನೋ ಅಲ್ಲಿಂದ ಹೊರಬಿದ್ದವರಿಗೆಲ್ಲರಿಗೂ ಕೆಲಸ ಸಿಕ್ಕಿತು. ಹಾಗೆ ನಾನು ಕನ್ನಡ ಪ್ರಭ ಸೇರಿಕೊಂಡೆ. ನಂತರ ಬೇರೆಬೇರೆ ಕಡೆಗಳಲ್ಲಿ ಕಾರ್ಯನಿರ್ವಹಿಸಿದೆ.
೨೦೧೧ರಲ್ಲಿ ಮಾಧ್ಯಮ ಅಕಾಡಮಿ ಪ್ರಶಸ್ತಿ ಅವರಿಗೆ ಬಂದಿತ್ತು. ಆಗ ನನಗೂ ಮಾಧ್ಯಮ ಅಕಾಡಮಿ ಪ್ರಶಸ್ತಿಗೆ ಬಂದಿತ್ತು. ಅವರಿಗೆ ಆಗ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ಬಂದಿತ್ತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಅವರು ಮಾತನಾಡುವಾಗ, ‘ನನ್ನ ಜೊತೆ ನನ್ನ ಶಿಷ್ಯೆ, ಭಾರತೀಯ ವಿದ್ಯಾಭವನದಲ್ಲಿ ನನ್ನಿಂದ ಜರ್ನಲಿಸಂ ಪಾಠ ಹೇಳಿಸಿಕೊಂಡ ಭಾರತಿ ಹೆಗಡೆಗೂ ಇಂದು ಪ್ರಶಸ್ತಿ ಬಂದಿರುವುದು ನನಗೆ ತುಂಬ ಹೆಮ್ಮೆಯ ಸಂಗತಿ’ ಎಂದಿದ್ದರು.

ಇದಾದ ನಂತರ ಬಹಳ ವರ್ಷಗಳ ಕಾಲ ಅವರನ್ನು ನಾನು ಸಂಪರ್ಕಿಸಿರಲಿಲ್ಲ. ನಂತರ ಬಹುಶಃ ಅದು ೨೦೧೭ ಇರಬಹುದು, ನನಗೆ ನೆನಪಿಲ್ಲ. ಆಗ ರಾಜ್ಯೋತ್ಸವ ಪ್ರಶಸ್ತಿಸಲುವಾಗಿ ಅವರಿಗೆ ಫೋನ್ ಮಾಡಿದ್ದೆ. ‘ಸರ್ ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆಯಾ?’ ಎಂದು.
‘ಇಲ್ಲಮ್ಮ ನನಗೆ ಬರಲಿಲ್ಲ. ಆದರೆ ಬರಬೇಕೆಂಬ ಯಾವ ಆಸೆಯೂ ನನಗೂ ಇಲ್ಲ. ಅದರ ಬಗ್ಗೆ ನಾನು ತಲೆಕೆಡಿಸಿಕೊಂಡವನೂ ಅಲ್ಲ’ ಎಂದಿದ್ದರು.
ಆಶ್ಚರ್ಯವಾಯಿತು. ಇಷ್ಟು ಹಿರಿಯರಿಗೆ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲವಾ ಎಂದು ಮತ್ತೂ ಕೆಲವರನ್ನು ಸೇರಿಸಿಕೊಂಡು ಅಂದು ಫೇಸ್‌ಬುಕ್‌ಲ್ಲಿ ಒಂದು ಸಣ್ಣ ಬರಹವನ್ನು ದಾಖಲಿಸಿದ್ದೆ. ಸಮಾಧಾನದ ಸಂಗತಿಯೆAದರೆ ಅದರ ಮಾರನೇ ವರ್ಷವೇ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂತು.

‘ಏನಮ್ಮ, ನೀನು ನೆನಪಿಸಿಬಿಟ್ಯಾ ಹೇಗೆ’ ಎಂದು ನನಗೆ ತಮಾಷೆ ಮಾಡಿದ್ದರು.
‘ಇಲ್ಲ ಸರ್, ನಿಮಗೆ ಯಾವಾಗಲೋ ಬರಬೇಕಿತ್ತು. ತಡವಾಗಿಯಾದರೂ ಬಂದಿರುವುದು ಸಮಾಧಾನ’ ಎಂದಿದ್ದೆ.
ಅಷ್ಟರ ನಂತರದ ಅವರ ಸಂಪರ್ಕವೆಂದರೆ, ಅವರೇ ಫೋನ್ ಮಾಡಿ ನನ್ನ ಪುಸ್ತಕಗಳನ್ನು ತರಿಸಿಕೊಂಡಿದ್ದು, ಕೆಲವು ಪುಟಗಳನ್ನು ಓದಿರುವೆ, ಪೂರ್ತಿ ಓದುತ್ತೇನೆಂದು ಹೇಳಿದವರು ಈಗಿಲ್ಲವಾಗಿದ್ದಾರೆ. ಇನ್ನೂ ಹಲವು ಪುಟಗಳು ಬಾಕಿ ಉಳಿದುಕೊಂಡಿವೆ…ಕೆಲವಷ್ಟನ್ನಾದರೂ ಓದಿ ಚೆನ್ನಾಗಿದೆಯೆಂದು ಹರಸಿದ ಅವರಿಗೆ ಅಂತಿಮ ನಮನಗಳು…

‍ಲೇಖಕರು avadhi

October 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: