ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾತಿ ಈಗ ಒಂದು affinity ಅಷ್ಟೇ

 

 

 

 

ಎಲ್ ಸಿ ನಾಗರಾಜ

 

 

 

ಫೇಸ್ ಬುಕ್ ನಲ್ಲಿ ಕೆಲವು ಪೋಸ್ಟುಗಳನ್ನ ಓದುತ್ತ ನನಗೆ ಹೀಗನಿಸಿತು

ಒಕ್ಕಲಿಗರು ಕುವೆಂಪು ಬಗ್ಗೆ ಯಾವುದೇ ಪೋಸ್ಟುಗಳನ್ನ ಹಾಕಬಾರದು , ಒಂದು ಪಕ್ಷ ಹಾಕಿದರೆ ಅವರು ಸ್ವಜಾತಿ ಪ್ರೇಮದಿಂದಲೇ ಹಾಕುತ್ತಿರಬಹುದು ; ಒಕ್ಕಲಿಗರು ಕುವೆಂಪು ಅವರು ಹುಟ್ಟಿದ ಕುಪ್ಪಳ್ಳಿಯ ಮನೆಗೆ ಹೋಗಲೇಬಾರದು. ಯಾಕೆಂದರೆ ಅವರು ಸ್ವಜಾತಿ ಪ್ರೇಮದಿಂದ ಹೋಗುತ್ತಿರಬಹುದು.ಇದರಿಂದ ಕುವೆಂಪು ಅವರು ಪ್ರತಿಪಾದಿಸಿದ ವಿಶ್ವಮಾನವತ್ವ ಎಷ್ಟೋ ಸಲ ಕೊಲೆಯಾಗಿಬಿಡಬಹುದು ಹೀಗೆ ಅನಿಸಲು ಕಾರಣ ಏನಾದರೂ ಇರಲಿ ಒಂದು ಸಮಸ್ಯೆಯಿದೆ , ಅದನ್ನ ವಿಂಗಡಿಸಿ ಹೇಳಬೇಕಾದ ಅಂದರೆ distinguish ಮಾಡಿ ಹೇಳಲೇಬೇಕಾದ ತುರ್ತು ಇದೆ.

ಒಬ್ಬರು ಲ್ಯಾಂಡ್ ಡೆವಲಪರ್ ಆಗಾಗ ನನ್ನ ಹುಡುಕಿಕೊಂಡು ಬರುತ್ತಿದ್ದರು , ಈ ಹಿಂದೆ ಅವರು ನನಗೆ ಸಹಜವಾಗಿ ಪರಿಚಯವಾದವರಲ್ಲ . ಕ್ರಮೇಣ ಅವರ ಗೊಣಗುಗಳು , ಅವರು ನಂಬಿಕೊಂಡಿದ್ದ ವಿಚಾರಗಳು ನನಗೆ ಜಿಗುಪ್ಸೆ ತರತೊಡಗಿದವು . ಅವರ ಗ್ಲಾಸಿಗೆ ಡ್ರಿಂಕ್ಸ್ ಸುರಿಯುತ್ತ ಹೇಳಿದೆ : ‘ ನೀವು ಕನ್ನಡ ಸಾಹಿತ್ಯ ಓದಲು ಶುರು ಮಾಡಿ , ನಿಮ್ಮ ಸುಮಾರು ಹತಾಷೆಗಳು , ಸಮಾಜದ ಬಗೆಗಿನ ಪೂರ್ವಾಗ್ರಹಗಳು ನಿಮ್ಮನ್ನ ಬಿಟ್ಟು ಹೋಗುತ್ತವೆ .

ಹೀಗೆ ನನ್ನ ಹುಡುಕಿಕೊಂಡು ಬರುತ್ತಿದ್ದ ಅವರು ಒಕ್ಕಲಿಗ ಜನಾಂಗಕ್ಕೆ ಸೇರಿದವರು. ಒಂದು ವಾರ ಕಳೆದು ಬಂದ ಅವರ ಲಗ್ಷುರಿ ಕಾರಿನ ತುಂಬಾ ಲಂಕೇಶ್ , ತೇಜಸ್ವಿ , ಅನಂತಮೂರ್ತಿ , ಮಾಸ್ತಿ ‌, ದೇವನೂರು ಮಹದೇವ , ಕುವೆಂಪು ಅವರ ಪುಸ್ತಕಗಳು ಕಂಡವು; ಇದಾಗಿ 4 ವರ್ಷ ಕಳೆದಿದೆ , ಈ ನಡುವೆ ಅವರು ಬರುವುದು ಕೂಡ ಕಡಿಮೆಯಾಗಿತ್ತು. ಬಹುಷಃ ಅವರು ಇನ್ನು ಮುಂದೆ ಬರಲಾರರು ಅನಿಸಿ ಮರೆತುಬಿಟ್ಡಿದ್ದೆ

ಆದರೆ ಒಂದು ದಿನ ಹೊತ್ತಲ್ಲದ ಹೊತ್ತಲ್ಲಿ ಫೋನ್ ಮಾಡಿ ‘ ಬರ್ತಿದೀನಿ ‘ ಎಂದರು ; ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತ ಕುಂತಿದ್ದ ನಾನು ‘ ಬನ್ನಿ ‘ ಎಂದೆ  ಬಂದು ಗ್ಲಾಸಿಗೆ ಡ್ರಿಂಕ್ಸ್ ಸುರಿಯುತ್ತ ‘ ನಿಮ್ಮನ್ನ ನೋಡಲೇಬೇಕು ಅನಿಸಿತು , ಬಂದುಬಿಟ್ಟೆ ‘ ಎಂದರು ಅವರ ಮಾತಿನಲ್ಲಿ ಮೊದಲಿನಂತೆ ವ್ಯಗ್ರತೆಯಾಗಲೀ , ಉಡಾಫೆ , ಅಸಹನೆ ಇದ್ದಂತೆ ಕಾಣಲಿಲ್ಲ .ಮೊದಲಿನ ವಾಚಾಳಿತನ ಕೂಡ ಕಾಣಲಿಲ್ಲ. ‘ಮಾಸ್ತಿಯವರ ಕತೆಗಳು ಚನ್ನಾಗಿರುತ್ತವೆ , ಒಡಲಾಳ ಕಾದಂಬರಿಯಲ್ಲಿ ಕೋಳಿ ಕಳೆದುಕೊಳ್ಳುವ ಸಾಕವ್ವ ನನಗೆ ಕಣ್ಣೀರು ತರಿಸಿದಳು . . . ‘ ಹೀಗೆ ಹೇಳುತ್ತಲೇ ಇದ್ದರು. ಡಾ.ಅನಂತಮೂರ್ತಿಯವರು Critical insider ಎಂಬುದೊಂದು ಪರಿಕಲ್ಪನೆ / ನುಡಿಗಟ್ಟು ಬಳಸುತ್ತಾರೆ . ನನಗಿದು practical ಆಗಿ ಕಾಣ್ತಿದೆ .

ಜಾತಿ ಈಗ ಒಂದು affinity ಯಾಗಿ ಮಾತ್ರ ಉಳಿದಿದೆ  ನಮ್ಮ ಕರ್ತವ್ಯ ಜಾತಿಗಳ ಒಳಗೆ Critical insider ಆಗಿರುವುದು. ಆದ್ದರಿಂದ ಸಂಘ ಪರಿವಾರದ ಗರ್ಭಗುಡಿಯಲ್ಲಿರುವ ಒಕ್ಕಲಿಗರಿಗಿಂತ ಕುಪ್ಪಳ್ಳಿಯ ಕುವೆಂಪು ಅವರ ಮನೆಗೆ ಹೋಗಿಬರುವ , ಅವರನ್ನಷ್ಟೇ ಅಲ್ಲ ಕನ್ನಡದ ಎಲ್ಲ ಲೇಖಕರನ್ನ ಓದುವ ಒಕ್ಕಲಿಗರು ಪ್ರಿಯರಾಗುತ್ತಾರೆ. ಇಂಜನಿಯರಿಂಗ್ ಓದುವಾಗ ನನಗೆ ಕಾರ್ಪೆಂಟ್ರಿ ಕ್ಲಾಸ್ ನಲ್ಲಿ ಒಬ್ಬರು Instructor ಇದ್ದರು , ನನಗೆ ತಿಳಿದಂತೆ ಅವರು ದಲಿತ ಸಮುದಾಯಕ್ಕೆ ಸೇರಿದವರು . ಒಂದು ದಿನ ನಾನು ಪ್ಲಂಬಿಂಗ್ ಕಲಿಯುತ್ತಿದ್ದಾಗ , ಹತ್ತಿರ ಬಂದ ಅವರು ಹೇಳಿದರು ” ಗಂಟುಗಳನ್ನ ಮಾತ್ರ ಪ್ಲಂಬಿಂಗ್ ಮಾಡು  ಸುಮ್ಮನೆ ಎಲ್ಲವನ್ನೂ ತೋಬಡ ಹೊಡೆದು ಬಿಸಾಡಬೇಡ

ಇದು ಒಂದು ವಾಕ್ಯ ಸಾಕು, ಫೇಸ್ ಬುಕ್ಕಿನ ಕೆಲವು‌ ಪೋಸ್ಟ್ ಗಳನ್ನ ನೋಡಿದಾಗ ನನಗೆ ಈ ವಾಕ್ಯ ನೆನಪಾಯಿತು ಕುಪ್ಪಳ್ಳಿಗೆ ನಾನಿನ್ನೂ ಹೋಗಿಲ್ಲ  ಹೋಗಿ ಬರಲು ನನಗೆ ಮುಜುಗರವೂ ಇಲ್ಲ  ನಾನು ತೋಪಡಾ ಹೊಡೆದು ಬಿಸಾಡುವ ಪೈಕಿಯವನಲ್ಲ

‍ಲೇಖಕರು avadhi

3 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading