ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾತಿಪದ್ಧತಿ, ಪರಿವರ್ತನೆ ಮತ್ತು ಪ್ರತಿಗಾಮಿತನ

– ಡಾ ಎಸ್ ಬಿ ಜೋಗುರ

ಭಾರತೀಯ ಸಮಾಜ ಅನೇಕ ಬಗೆಯ ಪರಿವರ್ತನೆಗಳೊಂದಿಗೆ ಸಾಮಾಜಿಕ ರಚನೆಯಲ್ಲಿ ಸ್ಥಿತ್ಯಂತರಗಳನ್ನು ಕಂಡುಕೊಂಡು ಮುಂದೆ ಸಾಗಿ ಬಂದಿದೆಯಾದರೂ ಸಾಂಪ್ರದಾಯಿಕ ಸಂಸ್ಥೆಗಳ ವಿಷಯದಲ್ಲಿ ಮಾತ್ರ ಇಂದಿಗೂ ಅದೊಂದು ಮುಚ್ಚಿದ ವ್ಯವಸ್ಥೆಯಾಗಿಯೇ ಉಳಿದಿದೆ. ಜಾತಿಯ ವಿಷಯವಾಗಿ ಉಂಟಾಗಿವೆ ಎನ್ನಲಾಗುವ ಪರಿವರ್ತನೆಗಳು ಕೇವಲ ನಮ್ಮ ಬಾಹ್ಯ ಜೀವನಕ್ಕೆ ಮಾತ್ರ ಸಂಬಂಧಿಸಿವೆ. ಕೆಲ ಬಾರಿ ಅದು ನಮ್ಮ ಬಾಹ್ಯ ಜೀವನವನ್ನೂ ನಿರ್ಬಂಧಿಸುವ ಮೂಲಕ ಬಾಧಿಸಿರುವದಿದೆ. ಆಂತರಿಕ ಜೀವನದ ವಿಷಯದಲ್ಲಂತೂ ಅದು ಇನ್ನಷ್ಟು ಜಟಿಲಗೊಳ್ಳುತ್ತ ನಡೆದದ್ದು ವಾಸ್ತವ. ಹೊರನೋಟಕ್ಕೆ ಅದು ಸಡಿಲುಗೊಂಡಂತೆ ಬಿಂಬಿತವಾದರೂ ಅದರ ಸಾಮಾಜಿಕ ಸ್ಥಾನಮಾನಗಳಲ್ಲಿ ಮಾತ್ರ ಲಂಬರೂಪದ ಚಲನೆಗಳಾಗಿರುವದಿಲ್ಲ. ಡಿ.ಎನ್.ಮಜುಮದಾರ ರಂಥಾ ಚಿಂತಕರು ಹಿಂದೊಮ್ಮೆ ಉತ್ತರಪ್ರದೇಶದ ಮೋಹನಾ ಎಂಬ ಹಳ್ಳಿಯಲ್ಲಿಯ ದಲಿತ ಜಾತಿಗಳನ್ನು ಅಧ್ಯಯನ ಮಾಡಿ ಆ ಜಾತಿಗಳಿಗೆ ಜಾತಿಯ ಏಣಿಶ್ರೇಣಿಯಲ್ಲಿ ಮೇಲೇರುವ ಹಂಬಲವಿದ್ದರೂ ಅವರು ಮೇಲಿನ ಜಾತಿಗಳನ್ನು ಅವರ ಜೀವನ ಶೈಲಿಯನ್ನು ಅನುಕರಣೆ ಮಾಡಿ ಅವರಂತಾಗಬಯಸಿದರೂ ಅದು ಸಾಧ್ಯವಾಗದೇ ಕೇವಲ ಸಮಾನಾಂತರ ಸಂಚಲನೆಯ ಸ್ಥಾನಗಳಲ್ಲಿ ಮಾತ್ರ ಸಮಾಧಾನಪಡಬೇಕಾಯಿತು ಎನ್ನುವ ವಿಚಾರವನ್ನು ಅವರು ಹೊರಹಾಕಿದ್ದಾರೆ.
ಎಮ್.ಎನ್.ಶ್ರೀನಿವಾಸರು ತಮ್ಮ ಸಂಸ್ಕೃತಾನುಕರಣೆಯ ಸಿದ್ಧಾಂತದಲ್ಲಿ ಕೆಳಗಿನ ಜಾತಿಗಳು ಸ್ಥಾನಪಲ್ಲಟಕ್ಕಾಗಿ ಏನೇ ಕಸರತ್ತನ್ನು ಮಾಡಿದರೂ ಅದು ಕೇವಲ ಸಮಾನಾಂತರ ಸಂಚಲನೆಗೆ ನೆರವಾಗುವುದು ಎನ್ನುವ ವಿಚಾರವನ್ನು ಪ್ರತಿಪಾದಿಸಿದರು. ಸಂವಿಧಾನದ ಪೂರ್ವಪೀಠಿಕೆಯಲ್ಲಿಯೇ ಜಾತ್ಯಾತೀತತೆಯನ್ನು ಪ್ರತಿಪಾದಿಸಿರುವ ರಾಷ್ಟ್ರದಲ್ಲಿ ಲಿಂಗ, ಜನ್ಮಸ್ಥಳ ಜಾತಿ, ಹುಟ್ಟನ್ನು ಆಧರಿಸಿ ಯಾವುದೇ ಬಗೆಯ ತಾರತಮ್ಯವನ್ನು ಮಾಡಬಾರದೆಂದು ಪ್ರತಿಪಾದಿಸಿರುವ ನೆಲೆಯಲ್ಲಿಯೇ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ಜರುಗುವ ಕ್ರಮವನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ. ಈ ಬಗೆಯ ಘಟನೆಗಳು ಅಲ್ಲಲ್ಲಿ ನಿರಂತರವಾಗಿ ನಡೆಯುತ್ತಿರುವದನ್ನು ನೋಡಿದರೆ ಒಂದು ಬಗೆಯ ನಿಯಮರಾಹಿತ್ಯತೆಯ ಸ್ಥಿತಿ ಸ್ಥಾಪಕತ್ವ ಸಾಧ್ಯವಾಗಿದೆಯೆನೋ ಎಂದೆನಿಸದೇ ಇರದು.
ಯಾರು ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಪೂರ್ವನಿರ್ಧರಿತಗೊಳಿಸಲಾಗದು. ಜಾತಿ ತೀರಾ ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಹುಟ್ಟ್ತಿನೊಂದಿಗೆ ನಿರ್ಧರಿತವಾಗುವ ಅಂತಸ್ತು ಇದನ್ನು ಬದಲಾಯಿಸುವ ಹಂಬಲ ವ್ಯಕ್ತಿಗೆ ಇರುವಾಗಲೂ ಅದು ಅಸಾಧ್ಯ ಎನ್ನುವ ಸತ್ಯದ ಮನವರಿಕೆಯಿಂದ ಕೇವಲ ಸಂಸ್ಕೃತಾನುಕರಣದ ಮೂಲಕ ಸಮಾನಾಂತರ ಸಂಚಲನೆಯಲ್ಲಿ ಸಮಾಧಾನ ಪಡುವುದಷ್ಟೇ ವ್ಯಕ್ತಿಯ ಆಯ್ಕೆಗಿರುವ ಮಿತಿ. ಆಧುನಿಕ ಸಂದರ್ಭದಲ್ಲಿ ಜಾತಿಯಾಧಾರಿತ ಉದ್ಯೊಗವನ್ನೇ ಮಾಡಬೇಕೆಂಬ ನಿರ್ಬಂಧಗಳು ಶಾಸನೀಯವಾಗಿ ಇಲ್ಲವಾದರೂ ಸಾಂಪ್ರದಾಯಿಕವಾದ ಜಾತಿಪದ್ಧತಿ ವ್ಯಕ್ತಿಯ ಉದ್ಯೋಗದ ಆಯ್ಕೆಯನ್ನು ಈ ಕಾಲಘಟ್ಟದಲ್ಲಿಯೂ ನಿಯಂತ್ರಿಸುತ್ತದೆ ಎನ್ನುವುದು ಜಾತಿಯ ಜಡತ್ವದ ಪರಿಣಾಮ. ಈಚೆಗೆ ಗುಜರಾತನ ಭಾಯಲಾ ಎನ್ನುವಲ್ಲಿ ಒಂದು ಘಟನೆ ಜರುಗಿತು ಅವನೊಬ್ಬ ದಲಿತ ಯುವಕ. ಅವನ ತಂದೆಯ ಹೆಸರು ವಿನುಭಾಯಿ ಕಬಿರಾ ಆತ ತನ್ನ ಜಾತಿಯಾಧಾರಿತ ಉದ್ಯೋಗವಾದ ಊರ ಕಸಗೂಡಿಸುವಿಕೆಯನ್ನು ಮಾಡುವವನು. ಅವನ ತಾತ ಮುತ್ತಾತ ಕೂಡಾ ಅದೇ ಉದ್ಯೋಗವನ್ನು ಮಾಡುತ್ತ ಬಂದವರು. ಅದರಲ್ಲಿ ಬರುವ ಆದಾಯ ಜೀವನ ನಿರ್ವಹಣೆಗೆ ಸಾಲದೇ ಇದ್ದಾಗ ಅವನ ತಂದೆ ಮಗ ಮೆಹುಲ ಕಬಿರಾ ಈ ಕೆಲಸ ಮಾಡುವುದು ಬೇಡ ಎಂದು ಒಂದು ಬಾಡಿಗೆ ರಿಕ್ಷಾ ಪಡೆದು ಅದನ್ನು ಮಗನಿಗೆ ಓಡಿಸಲು ಒದಗಿಸಿದ.

ಮಗ ಅತ್ಯಂತ ಖುಷಿಯಿಂದ ತನ್ನ ಪಾರಂಪರಿಕ ಉದ್ಯೋಗದಿಂದ ತನಗೆ ಮುಕ್ತಿ ಸಿಕ್ಕಿತು ಎನ್ನುವ ಖುಷಿಯಲ್ಲಿ ಅದನ್ನು ಓಡಿಸುತ್ತಿದ್ದ. ಅಹಮದಾಬಾದನಿಂದ 40 ಕಿ.ಮಿ.ಅಂತರದಲ್ಲಿರುವ ಆ ಭಾಯಲಾ ಹಳ್ಳ್ಲ್ಲ್ಲಿಯಲ್ಲಿ ಆತ ವಾಸವಾಗಿದ್ದ. ಈ ಮೆಹುಲ್ ಕಬಿರಾ ವಾಲ್ಮಿಕಿ ಜನಾಂಗಕ್ಕೆ ಸಂಬಂಧಿಸಿದವನು. ಊರ ಕಸಗುಡಿಸುವ, ಮತ್ತು ಭಂಗಿ ಕೆಲಸ ಮಾಡುವ ಕಾರ್ಯವನ್ನೇ ಈ ಸಮುದಾಯದ ಜನ ಮಾಡಬೇಕೆಂಬ ನಿರ್ಬಂಧಗಳಿದ್ದವು. ಸಮಕಾಲಿನ ಸಂದರ್ಭದಲ್ಲಿಯ ಬದಲಾವಣೆಗಳ ಹಿನ್ನೆಲೆಯಲ್ಲಿ ಮೆಹುಲ್ ಕಬೀರಾ ತಾನು ಈ ಸಾಂಪ್ರದಾಯಿಕ ವೃತ್ತಿಯನ್ನು ಬಿಟ್ಟು ರಿಕ್ಷಾ ಓಡಿಸುವ ಮೂಲಕ ಒಂದು ಹೊಸ ಬದುಕನ್ನು ರೂಪಿಸಿಕೊಳ್ಳಬೇಕೆಂದು ಹೊರಟ ಆ ಯುವಕನ ಪಾಲಿಗೆ ಅಲ್ಲಿಯ ಮೇಲ್ಜಾತಿ ದಬರ್ಾರ ಯುವಕರು ಅಡ್ದಿಯಾದದ್ದು ಮಾತ್ರವಲ್ಲದೇ ಈ ಮೆಹುಲ್ ಮೆಲೆ ಹಲ್ಲೆ ಮಾಡಿದರು. ಅವನ ರಿಕ್ಷಾದಲ್ಲಿ ಹತ್ತಬಯಸುವವರಿಗೂ ವಾನರ್ಿಂಗ್ ಮಾಡತೊಡಗಿದರು. ಅದನ್ನು ನಿರ್ಲಕ್ಷಿಸಿಯೂ ಜನ ನನ್ನ ರಿಕ್ಷಾದಲ್ಲಿ ಹತ್ತಿದಾಗ ನನ್ನ ರಿಕ್ಷಾ ಜಖಂಗೊಳಿಸಿ ನನ್ನ ಮೇಲೆಯೂ ಹಲ್ಲೆ ಮಾಡಿದರು. ನನ್ನ ಕುಟುಂಬವನ್ನು ಅಲ್ಲಿಂದ ಓಡಿಸಿದರು. ಭಂಗದಾಸ ಜಾತಿಯವರು ಹೀಗೆ ರಿಕ್ಷಾ ಓಡಿಸುವಂತಿಲ್ಲ ಕುಲ ಕಸುಬನ್ನೇ ಮಾಡಬೇಕು ಎನ್ನುವುದು ಅವರ ತಕರಾರು. ನಾನು ಕೇಳದೇ ಇದ್ದಾಗ ಅವರು ಹಿಗ್ಗಾ ಮುಗ್ಗಾ ನನ್ನನ್ನು ಥಳಿಸಿದರು.ಎಂದು ಮೆಹುಲ್ ಪೊಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಮೆಹುಲ್ ತನ್ನ ಮೇಲೆ ಆಕ್ರಮಣ ಮಾಡಿದವರ ಮೇಲೆ ಪೋಲಿಸ್ ಠಾಣೆಯೊಂದರಲ್ಲಿ ದೂರು ನೀಡಿದ್ದೇ ತಡ ಅವನ ವಿರುದ್ಧವಾಗಿ ಅವನ ಮೇಲೆ ಹಲ್ಲೆ ಮಾಡಿದ ಯುವಕರ ತಂಡವೂ ಸುಳ್ಳು ಎಫ್.ಆಯ್.ಆರ್ ದಾಖಲು ಮಾಡಿರುವದಿದೆ. ಮೆಹುಲ್ ಗೆ ಪೋಲಿಸ್ ವ್ಯವಸ್ಥೆಯ ಮೇಲೆ ಅಷ್ಟಾಗಿ ನಂಬುಗೆ ಉಳಿದಿಲ್ಲ .ಬಾಡಿಗೆಗಾಗಿ ಪಡೆದ ರಿಕ್ಷಾ ಜಖಂ ಗೊಂಡು ಮೆಹುಲ್ ಮನೆ ಮುಂದೆ ನಿಂತಿದೆ. ಅದಕ್ಕೆ ಪ್ರತಿ ತಿಂಗಳು 4400 ರೂಪಾಯಿ ಹಣವನ್ನು ತುಂಬಬೇಕು. ಈಗಾಗಲೇ ಸುಮಾರು 45 ಸಾವಿರ ರೂಪಾಯಿ ಬಾಕಿ ತುಂಬಬೇಕಿದೆ. ಅದನ್ನು ಓಡಿಸುವಂತೆಯೂ ಇಲ್ಲ.. ಬಾಡಿಗೆ ತುಂಬದಿರುವಂತೆಯೂ ಇಲ್ಲ. ಇದು ಮೆಹುಲ್ ಕುಟುಂಬಕ್ಕೆ ದೊಡ್ಡ ತಲೆನೋವಾಗಿದೆ. 21 ನೇ ಶತಮಾನದಲ್ಲಿಯೂ ಜಾತಿ ಹೀಗೆ ವ್ಯಕ್ತಿಯೊಬ್ಬನ ಆಕಾಂಕ್ಷೆಗಳ ಮೇಲೆ ಈ ರೀತಿಯಾಗಿ ಕಲ್ಲುಚಪ್ಪಡಿ ಹೇರುವುದು ಎಷ್ಟು ಸರಿ..? ಜಾತಿಯ ಕಠೋರ ಆಚರಣೆ ಮತ್ತು ನಂಬುಗೆಗಳ ಎದುರಲ್ಲಿ ಈ ಸತ್ಯಾಸತ್ಯತೆಗಳು ನಡೆಯುವದಿಲ್ಲ. ಒಂದು ಅಮೂರ್ತವಾದ ಸಂಸ್ಥೆ ಇಂದಿಗೂ ವ್ಯಕ್ತಿಯ ಆಹಾರ, ವಿವಾಹ, ಉದ್ಯೋಗ, ಸಂಬಂಧಗಳನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಸಂಗತಿಯಾಗಿ ಕೆಲಸ ಮಾಡುತ್ತದೆ ಎನ್ನುವುದೇ ಒಂದು ದೊಡ್ಡ ವಿಪರ್ಯಾಸ. ಅಷ್ಟಕ್ಕೂ ಮೆಹುಲ್ ನಂಥಾ ಯುವಕರು ತಮ್ಮ ಸಾಮಾಜಿಕ ಸ್ಥಾನಮಾನಗಳಲ್ಲಿ ಪಲ್ಲಟಗಳನ್ನು ಅನುಭವಿಸಲು ಹಂಬಲಿಸುವುದು ಸಹಜವೇ ಆದರೂ ನಮ್ಮ ಸಾಂಪ್ರದಾಯಿಕ ಸಾಮಾಜಿಕ ರಚನೆ ಜಾತಿಯ ಸ್ಥಾನಮಾನಗಳಲ್ಲಿ ಸಮಾನಾಂತರ ಸಂಚಲನೆಯನ್ನು ಮಾತ್ರ ನಿರೀಕ್ಷಿಸುತ್ತದೆೆ. ಈ ಮೆಹುಲ್ ರಿಕ್ಷಾ ಓಡಿಸಾಬಾರದು ತನ್ನ ಸಾಂಪ್ರದಾಯಿಕ ಕುಲಕಸುಬನ್ನೇ ಮಾಡಬೇಕೆಂಬ ಒತ್ತಡ ಮತ್ತು ನಿರೀಕ್ಷೆಗಳು ಜಾತಿ ತನ್ನ ಪೂರ್ವ ನಿರ್ಧರಿತ ಸ್ಥಾನಮಾನಗಳಲ್ಲಿ ಸಮಾನಾಂತರ ಸಂಚಲನೆಯನ್ನೂ ಅದು ಬಯಸದೇ ಕೇವಲ ಯಥಾಸ್ಥಿತಿಯನ್ನು ಮಾತ್ರ ಬಯಸುತ್ತದೆ ಎನ್ನುವುದನ್ನು ಈ ಮೆಹುಲ್ ಮೇಲಿನ ಹಲ್ಲೆಯ ಘಟನೆ ಸಾಬೀತು ಮಾಡಿದೆ.
ಇಂದು ಯಾವುದೇ ಜಾತಿ ತನ್ನ ಪಾರಂಪರಿಕ ವೃತ್ತಿಯನ್ನು ಮಾಡುವದಿಲ್ಲ. ಕಂಬಾರನ ಮಗ ಕಂಬಾರಿಕೆ, ಕುಂಬಾರನ ಮಗ ಕುಂಬಾರಿಕೆ, ನೇಕಾರಿಕೆ, ಸಿಂಪಿಗತನ, ಗಾಣಿಗ ಇವೆಲ್ಲವೂ ಈಗ ಪಾರಂಪರಿಕ ಜಾತಿಯಾಧಾರಿತ ಉದ್ಯೋಗಗಳಾಗಿ ಉಳಿದಿಲ್ಲ. ಅಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಲಾಭ ಆಧಾರಿತ ವ್ರುತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಸಂವಿಧಾನವೇ ನಮಗೆ ದಯಪಾಲಿಸಿರುವದಿದೆ. ಹೀಗಿರುವಾಗ ಅಹಮದಾಬಾದನ ಭಾಯಿಲಾ ಎನ್ನುವ ಗ್ರಾಮದ ಈ ಮೆಹುಲ್ ಮಾತ್ರ ತನ್ನ ಜಾತಿಯಾಧಾರಿತ ಜಾಡಮಾಲಿ ಕೆಲಸವನ್ನೇ ಮಾಡಬೇಕೆಂಬ ಒತ್ತಾಸೆಯ ಹಿಂದೆ ಅನ್ಯ ಕಾರಣಗಳೂ ಇರಬಹುದು. ಏನೇ ಕಾರಣಗಳಿದ್ದರೂ ಅವನು ರಿಕ್ಷಾ ಓಡಿಸಬಾರದು ಎನ್ನುವ ಒತ್ತಾಸೆಯೇ ಸರಿಯಲ್ಲ.

‍ಲೇಖಕರು G

1 November, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading