ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಹಾನ್ ಆರಾ ಕೋಳೂರು ಹೊಸ ಕವಿತೆ: ಬೆಳಕು ಸುರಿಸುವ ನಿಲುವು

ಬೆಳಕು ಸುರಿಸುವ ನಿಲುವು

-ಜಹಾನ್ ಆರಾ ಕೋಳೂರು

*

ಬೆಳಗಿನ ಮೃದು ಕಿರಣದಂತೆ 

ಅತಿಯಾದ ತೀವ್ರತೆಯಿಲ್ಲದ ಗುರಿ

ದಿನವನ್ನೇ ಪೂರ್ಣಗೊಳಿಸುವ ಸ್ಪರ್ಶ.

ಹೃದಯದ ಮನೆಯಲ್ಲಿ

ಪ್ರೇಮವೊಂದೆ ನಿಶ್ಶಬ್ದ ದೀಪ

ಕನಸು ಚಂದ್ರಬಿಂಬದ ನಡೆಯಲ್ಲಿ

ಕತ್ತಲಿನ ಮೇಲೆ ಮೃದುವಾಗಿ ಹೆಜ್ಜೆ ಇಡುತ್ತಿವೆ

ಈ ಪ್ರೇಮದ ಬಯಕೆ

ಪಾರಿಜಾತದ ಪರಿಮಳದಂತೆ —

ಕಾಣಿಸದೆ ಇದ್ದರೂ 

ಅಂಗಳವನ್ನೇ ತುಂಬುವ ಸಾನ್ನಿಧ್ಯ.

ಪ್ರೇಮ ಆಕರ್ಷಣೆ ಎಂದವರಿಗೆ

ಅರಿವಿನಿಂದ ಬೆಳೆದ ಆತ್ಮೀಯತೆಯ ಪರಿಚಯವಿಲ್ಲ

ಒಬ್ಬರೊಳಗೆ ಒಬ್ಬರು ಕರಗದೆ,

ಪಲ್ಲವಿ ಚರಣ,

ಒಂದೇ ತಾಳದಲ್ಲಿ ಉಸಿರಾಡುವ ನಿಶ್ಚಲ ಲಯ.

ಪ್ರತಿರೋಧ ಸೌಮ್ಯವಾಗಿ .

ಮೌನದಲ್ಲೂ ಸ್ಪಷ್ಟವಾಗಿ ಕಾಣಿಸುವ

ಸ್ವಾಭಿಮಾನಿ ನಿಲುವು.

ಭಾವ ಸರೋವರಕ್ಕೆ ಆಳ, ಅಲೆಗಳು ಯಾಕೆ

ಪ್ರೀತಿ ತೂಕ ತುಂಬಿದೆ ಸಾಕು

ನ್ಯಾಯಪರನಾಗಿ ನಿಲ್ಲುವ ಸೂರ್ಯ 

ಒಲವಿಗೂ ದೂರಕ್ಕೂ ನಿಷ್ಠೆಯಿಂದ

ಒಂದೇ ರೀತಿ ಬೆಳಕು ಸುರಿಸುವ 

ಪ್ರೇಮವೇ ನನ್ನ ದಿಕ್ಕು ಅದುವೇ ಮಿತಿ.

ಸ್ವತಂತ್ರತೆಯೊಳಗೆ ಬಂಧವಾಗಿ,

ಬಂಧದೊಳಗೆ ಸ್ವಾತಂತ್ರ್ಯವಾಗಿ

ನಾನು ನಡೆಯುತ್ತೇನೆ 

ಹಕ್ಕು ಕೇಳದೆ,

ಭಾರವಾಗದೆ,

ಬೆಳಕಿನಂತೆ.

‍ಲೇಖಕರು avadhi

17 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading