ಹಗೇದಾಗ ಜ್ವಾಳ ಅದಾವಂದ್ರ ಅಂಥಾ ಕುಟುಂಬಕ್ಕ ಏಪಿಎಲ್ ಕಾರ್ಡೂ ಬ್ಯಾಡ, ಬಿಪಿಎಲ್ ಕಾರ್ಡೂ ಬ್ಯಾಡೋಗು…
ಮನ್ಯ ನಾನು ಬರದಿದ್ದ ಕತಿ ಓದಿ ಗೋಪಾಲ ವಾಜಪೇಯಿ ಸಾರಿದ್ದು, ಜ್ವಾಳದ ಅಂಬ್ಲಿನ ನೆಪ್ಪು ಮಾಡಿಕಂಡಿದ್ರು. ಅದಕ್ಕ ನಾನು ‘ಅವಸ್ರಕ್ಕ ಬಿದ್ದು ಹಗೇದಾಗಳ ಮುಗ್ಗಾ ಕೊಟ್ಟೀನೇನಾ ಅನ್ನಾ ಅಳುಕಿತ್ರಿ ಸರಾ’ ಅಂತ ರಿಪ್ಲೈ ಮಾಡಿದ್ಯ. ಹಂಗ ರಿಪ್ಲೈ ಮಾಡತಿದ್ದಂಗನಾ ನನಿಗ್ಯ ನಮ್ಮ ಮನಿ ಮಗ್ಲಾಗ ಇದ್ದ ಹಗೇವುಗಳ ಕಥಿ ಒಮ್ಮೆಟ್ಗೆ ಒದ್ಕಂಡು ಬಂದ್ವು. ಖರೇ ಹೇಳಬೇಕಂದ್ರ, ಇಡೀ ನಮ್ಮ ಮೋರಿಗೇರಿಯೊಳಗ ಒಂದಾ ಜಗದಾಗ ಕುಪ್ಪಿಗಟ್ಲಿ ಹಗೇವುಗಳು ಸಿಗಾದಾ ನಮ್ಮೋಣ್ಯಾಗ. ಅದಕ್ಕಾ ಇಡೀ ಮೋರಿಗೇರಿನಾ ನಮ್ಮೋಣಿನಾ ‘ಹಗೇದಗಡ್ಡಿ’ ಅಂತನಾ ಕರಿತಾರ.
ಮಣ್ಣಮ್ಮನಾರು ಚಂದ್ರಪ್ಪ, ಕ್ಯಾದ್ಗಿಹಳ್ಳಿ ಪಕ್ಕೀರಪ್ಪ, ಗಡದೆಪ್ಪಾರ ಗುಡ್ಡಪ್ಪ, ಬನ್ನಿಗೋಳದ ಮಲ್ಲಪ್ಪ, ಬನ್ನಿಗೋಳದ ವಿಠೋಬಪ್ಪ, ಜುಮ್ಮಣ್ಣರ ದೇವಪ್ಪ, ಕಡ್ಲಬಾಳ ಸಾಂತಮ್ಮ, ಬಂಡಿ ಬಿಷ್ಟಜ್ಜ, ಕುರಿ ಇಂದ್ರಪ್ಪ, ಉತ್ತಂಗಿ ಗೋಣೆಜ್ಜ, ಗಡದೆಪ್ಪರ ಜುಂಜಪ್ಪ ಹಿಂಗಾ ನಮ್ಮೋಣ್ಯಾಗಿರಾ ಎಲ್ಲಾ ಕಮ್ತದ ಮನಿಗೊಂದು ಹಗೇವುಗಳು ಒಂದಾ ಅಂಗಳಾಗ ಇದ್ವು. ಇಡೀ ವರ್ಸಾ ಬೆವರು ಸುರಿಸಿ ಬೆಳದ ಜ್ವಾಳಾನ, ಬಂಡಿಗ್ಯ ಜಮಖಾನ ಹಾಸಿ ದೋಣಿ ಮಾಡಿದಂಗ ಮಾಡಿಕಂಡು ಹಗೆದೊಳಗ ತಂದು ಸುರುವಿದ್ರಂದ್ರ, ಮೂರು ವರ್ಸ ಬರ ಬಿದ್ರು ಹೆದ್ರದಂಗ ಜೀವನಾ ಮಾಡತಿದ್ರು.
ಇನ್ನ, ಹಗೇವಿಲ್ಲದ ಸಣ್ಣ ಪುಟ್ಟ ಹಿಡುವಳಿದಾರರು ಹಗೇವು ಇದ್ದಾರತ್ರ ಮಾತಾಡಿ ಚೀಲದಾಗ ಅಳತಿ ಮಾಡಿ ಏಕು ಒಂದಾ ಹಗೇದಾಗ ಜ್ವಾಳ ತುಂಬಾರು ಅಂದ್ರ, ಒಬ್ರಗೊಬ್ರು ಯ್ಹಾಂಗ ಆಸ್ರ ಅಕ್ಕಿದ್ರು ಅಂತ ಗೊತ್ತಾಕೈತಿ. ನನಿಗ್ಯ ನೆನಪು ಇದ್ದ ಮಟ್ಟಿಗ್ಯ ಪ್ರತೀ ವರ್ಸಾ ಯಾರೇನಾ ಬಿತ್ತಿದ್ರು, ಅವರವರ ಹೊಲದಾಗ ಉಣ್ಣಾ ಜ್ವಾಳಕ್ಕಿಷ್ಟು ಜಾಗ ಬಿಟ್ಕಣಾರು. ಕಡ್ಲಿ, ಜ್ವಾಳ, ಸಜ್ಜಿ, ನವಣಿ, ಮೆಕ್ಕಿಜ್ವಾಳ, ಸೂರ್ಯಕಾಂತಿ, ಬಿಟ್ರ, ಅಕ್ಕಡಿ ಕಾಳೂ ಬೆಳಕಣಾರು. ಆದ್ರ ಹಗೇದ ಹೊಟ್ಟಿಗ್ಯ ತುಂಬಿಸ್ತಿದ್ದುದ್ದು ಮಾತ್ರ ಜ್ವಾಳ ಒಂದನ್ನ ಮಾತ್ರ. ಇಷ್ಟೆಲ್ಲಾ ಏನಾ ಬಿತ್ತಿ ಬೆಳದ್ರೂ ಉಣ್ಣಾ ಕಾಳನ್ನ ಮಾತ್ರ ರ್ವಕ್ಕಾ ಕೊಟ್ಟು ಖರೀದಿ ಮಾಡ್ತಿದುದ್ದು ಎಲ್ಲೋ ಒಬ್ಬೊಬ್ರು. ಅವರವರ ಸಂಸಾರ ಸಾಗಾಕ ಬೇಕಾದ ಕಾಳು ಕಡಿನ ಅವರಾ ಬೆಳಕಣಾಕತ್ತಿದ್ಕ, ಬ್ಯಾಸಾಯ ನೆಚ್ಚಿಗಂಡ ಯಾರ ಮನ್ತೆನಾನೂ ಸೌಕಾರ್ಕಿ ಗಳಿಸ್ಲಿಲ್ಲಾಂದ್ರೂ ಚಿಂತಿ ಇಲ್ಲ, ಆದ್ರ ಬಡತನಾನಂತೂ ಅನುಭವಿಸಿದ್ದಿಲ್ಲ.
ಅಷ್ಟಕ್ಕೂ ಈ ಹಗೇವು ಅನ್ನಾದು ನಮ್ಮ ಕಡಿ ಮಂದಿಗ್ಯ ಲಗೂನ ತಿಳಿತೈತಿ. ಆದ್ರ ಈಕಡೆಗ್ಲ ಬಾಳ ಜನಕ್ಕ ಹಗೇವು ಅಂದ್ರ ಏನಂತಾನೂ ಸುದ್ದಿ ತ್ಯಗಿಬ್ಯಾಡ್ರಿ. ಹಗೇವು ಅಂತಂದ್ರ, ಬಟಾ ಬೈಲಾಗ ತೆಗ್ಗು ತೆಗ್ದು ಕುಣಿ ಮಾಡಿ ಅದ್ರಾಕ ಕಾಳು ಸುರುವಾದಲ್ಲ. ಅದು ಎಂಥಾ ದೊಡ್ಡ ಮಳಿ ಬಂದ್ರೂ ನೀರು ತ್ಯಾವ್ಸ ಬರದಂತಾ ಗರಸು ಮಣ್ಣು ಅಂದ್ರ ಹಿಟ್ಟುಗಲ್ಲು ಇರಾ ಜಾಗ ನೋಡಿ ಮೊಳಕಾಲ ಮಟ ನಾಕಡಿ ದುಂಡಗ ತೆಗ್ಗು ಬಗಿತಾರ. ಆಮ್ಯಾಲ ಆ ನಾಕಡಿ ತೆಗ್ಗಿನ ನಡುಕ ಎಲ್ಡುವರಿ ಅಡಿ ಅಗಲಾ ಇರಾ ಒಂದು ಕುಣಿನಾ, ಒಂದುವರಿ ಅಡಿ ತೆಗ್ದು, ಮತ್ಯ ನಾಕಡಿ ಅಗಲ, ಆರಡಿ ಆಳಕ್ಕ ತೆಗ್ಗು ತೆಗದು ಹಗೇವ್ನ ರೆಡಿ ಮಾಡ್ತಾರ.
ಅವಾಗ ಅದು ನೋಡಾಕ ಯ್ಹಂಗ ಕಾಣತೈತಪ್ಪಾ ಅಂದ್ರ, ಹಿಂದಿನ ಕಾಲದಾಗ ಇದ್ದ ನಮ್ಮನ್ಯಾಗಿನ ಬಿಸಿನೀರು ಕಾಯ್ಸಾ ದೊಡ್ಡ ಹಂಡೇವನ್ನ ನೆಲದಾಗ ಹುಗುದಾರೇನಾ ಅನ್ನಾಂಗ ಕಾಣತೈತಿ. ಆಮ್ಯಾಲ ಈ ಹಗೇದ ಬಾಯಿ ಮುಚ್ಚಾಕ ದಪ್ಪಂದೊಂದು ನಾಕಡಿದೊಂದು ಹರಿ ಜೋಡಿಸ್ತಾರ,. ಅದ್ರ ಮ್ಯಾಗ ನೆಲ್ದ ಮ್ಯಾಗಿದ್ದ ಮೊಳಕಾಲ ಮಟ ನಾಕಡಿ ತೆಗ್ಗು ತೆಗಿದಿರ್ತಾರಲ್ಲ ಅದಕ್ಕ ಸಣ್ಣದೊಂದು ಕಲ್ಲೂ ಸಿಗದಂತಾ ಗಿಣ್ಣನ ಮಣ್ಣು ತುಂಬುತಾರ. ಅದರ ಮ್ಯಾಗ ನೀರು ಚುಮುಕ್ಸಿ ಹಗೇವನ್ನ ಭದ್ರ ಮಾಡ್ತಾರ.
ಹಿಂಗೆಲ್ಲಾ ಕಷ್ಟಪಟ್ಟು ನಮ್ಮೋಣ್ಯಾಗ ಹಗೆವು ತೋಡಿ ನೂರಾರು ವರ್ಷಗಳಾ ಕಳದಾವಂತ್ಯ. ಈ ಹಗೇವದಾಕ ಜ್ವಾಳ ತುಂಬಾಕರ ಮದ್ಲು ಮುಂಜಾಲೆ ಹಗೇವ್ದ ಕುಣಿ ತೆಗದು ಅದ್ರ ಬಾಯಿಗ್ಯ ಮುಚ್ಚಿದ ಹರಿ ತೆಗದು ಹಂಗ ಓಣ್ಯಾಗ ಆಡಾ ಹುಡ್ರು, ದನ ಕರುಗಳು, ಮುದುಕ್ರು, ಮುದ್ಕ್ಯಾರು, ಆಡು, ಕುರಿ, ನಾಯಿಗಳು ಬಿದ್ದುಗಿದ್ದಾವು ಅಂತೇಳಿ ಹೊಲ ಹರಗಾ ಕುಂಟಿನಾ ಅಡ್ಡ ಇಟ್ಟಿರ್ತಾರ. ಬಾಳ ದಿಸಾ ಈ ಹಗೇದಾಗ ಗಾಳಿ ಹೋಗಿರಲ್ಲ ನೋಡ್ರಿ, ಅದ್ಕ ಮುಂಜಲೆ ಹಗೇ ತೆಗದ್ರ ಬೇಗ್ನತ್ತಿನಮಟ ಅದ್ರಾಗ ಇಸಗಾಳಿ ಇರ್ತೈತಿ ಅಂತ ಯಾರೂ ಅದ್ರ ಒಳಾಗಿಳಿಯಲ್ಲ.
ಹಂಗ ಹಗೇದಾಕ ಇಳಿಯಾಕೂ ಮುಂಚೆ ಚಿಮ್ನೆಣ್ಣಿ ಬುಡ್ಡಿದೀಪ ಹಚ್ಚಿ ಹಗೇದೊಳಗ ಗಾಳಿ ಐತೋ ಇಲ್ಲೋ ಅಂತ ಚೆಕ್ ಮಾಡಿ ಆಮ್ಯಾಲ ಇಳಿದು ಅದರ ಒಳಮೈಮ್ಯಾಗಿನ ಮಣ್ಣು ಕಾಳಿನ ಮ್ಯಾಕ ಸುರದೀತು ಅಂತ ಸೊಪ್ಪಿ ಸಿವುಡಿನ ರಿಂಗ್ ಜೋಡಿಸಿರ್ತಾರ ಆ ಹಳೇ ಸೊಪ್ಪಿ ಸಿವುಡು ತೆಗದು ಹೊಸ ಸೊಪ್ಪಿನ ಮತ್ಯ ಜೋಡ್ಸಿ, ತಳದಾಗ ಬಿದ್ದಿರಾ ಕಸಾನೆಲ್ಲಾ ಮ್ಯಾಕ ಎತ್ತಿಕೊಟ್ಟು, ಹಗೇದಾಗ ಇಳದಾತ ಮ್ಯಾಕ ಬಂದ ಕೂಡ್ಲೆ ಕೈ ಕಾಲು ಮಖಾನರ ತ್ವಕ್ಕಂಡು ಉಳ್ಳಾಗಡ್ಡಿ ಬೆಲ್ಲಾ ತಿಂತಿದ್ರು. ಅದು ಯದಕಾ ಅಂತ ನನಿಗಂಕರೂ ಗೊತ್ತಿಲ್ಲ. ಹೊಸದಾಗಿ ಕಾಳು ತುಂಬಿದ್ವಿ ಅಂದ್ರ ಮೂರು ವರ್ಷಾದ್ರೂ ಉಣ್ಣಾ ಜ್ವಾಳ ಒಂದೀಟೂ ಕೆಡಲ್ಲ.
ಈ ಹಗೇವು ಒಂದು ನಮೂನಿ ನಮ್ಮ ಹಳ್ಳಿಮಂದಿಗ್ಯ ರೈತಾನೇ ಮಾಡಿಕಂಡ ಬಡವರ ಫ್ರಿಜ್ ಇದ್ದಾಂಗದು.ಇಂಥಾ ಹಗೇದಾಗ ಜ್ವಾಳ ಅದಾವಂದ್ರ ಅಂಥಾ ಕುಟುಂಬಕ್ಕ ಏಪಿಎಲ್ ಕಾರ್ಡೂ ಬ್ಯಾಡ, ಬಿಪಿಎಲ್ ಕಾರ್ಡೂ ಬ್ಯಾಡೋಗು. ಒಕ್ಕಲಿ ಸುಗ್ಗಿ ಬಂತಂದ್ರ ನಮ್ಮೋಣ್ಯಾಗ್ಲ ಹಗೇವುಗಳು ಬಾಯಿ ತೆಕ್ಕಂಡು ಕುಂದ್ರತಿದ್ವು. ಒಂದ ವಾರದಾಗ ಎಲ್ಲಾ ಹಗೇವುಗಳೂ ಹೊಟ್ಟಿತುಂಬಾ ಜ್ವಾಳ ತಿಂದು ಮಕ್ಕೋತಿದ್ವು.
ಹವಾಮಾನ ಬದ್ಲಿ ಆತೋ, ಕಾಲ ಬದ್ಲಿ ಆತೋ, ಬ್ಯಾಸಾಯ ಮಾಡಾ ರೀತಿ ನೀತಿನೇ ಬದ್ಲಿ ಆತೋ, ಕ್ರಮೇಣ ನಮ್ಮೂರಿನ ರೈತ್ರೂ, ಟಮ್ಯಾಟ ಸೀಡ್ಸು, ಹಾಲಗುಂಬಳ ಸೀಡ್ಸು, ಸೌತಿ ಸೀಡ್ಸು, ಕಲ್ಲಂಗಡಿ ಸೀಡ್ಸು, ಜಾಸ್ತಿ ಆಗಿ ನವಣಿ ಸಜ್ಜಿ ಬೆಳಿ ಮಾಯಾಗೋದ್ವು. ಇನ್ನು ನಮ್ಮ ಕಡಿಗ್ಯ ಮಳೀನೂ ಅಟ್ಕಾಟ. ಆ ಮಳಿ ನೆಚ್ಚಿಗಂಡು ಯಾವ ಜ್ವಾಳದ ತೆನಿನೂ ಕಾಳು ತುಂಬಿಕ್ಯಲಿಲ್ಲ. ಅದಕ್ಕ ತೆಲಿ ಕೆಟ್ಟು ನಮ್ಮಕಡೆರೆಲ್ಲಾ, ಸೂರ್ಯಕಾಂತಿ, ಮೆಕ್ಕಿಜ್ವಾಳ ಬೆಳಿಯಾಕ ಚಾಲೂ ಮಾಡಿದ್ಕ ಹಗೇದಾಕ ಜ್ವಾಳ ಹಾಕದು ಬಾಳ ಕಮ್ಮಿಯಾಗಿತ್ತು.
ಇಡೀ ವರ್ಸಾ ಕಷ್ಟಾಬಿದ್ದು ಬಾಳೆವು ಮಾಡಿದ್ರು ಒಂದು ತಿಂಗಳಿಗಾಗೊವಷ್ಟು ಜ್ವಾಳ ಬೆಳಿದಂಗಾಗೋತು ಬ್ಯಾಸಾಯದ ಪರಿಸ್ಥಿತಿ. ಇನ್ನು ಹದಿನೈದು ಇಪ್ಪತ್ತು ಚೀಲ ಜ್ವಾಳ ಕೇಳಾ ಹಗೇಕ್ಕ ಯಾರು ಜ್ವಾಳ ತುಂಬಬೇಕು ಹೊಗ್ಗಾ ನಿನ್ನಾ ಅನ್ನಂಗಾಗೋತು. ಅದಾ ಟೈಮಿಗ್ಯ ಸರಿಯಾಗಿ ಲ್ಯಾಂಡ್ ಆರ್ಮಿಯಾರದು, ನಮ್ಮೋಣ್ಯಾಗ ಡಂಬಾರು ರೋಡ್ ಸ್ಯಾಂಕ್ಷನ್ ಆಗಿಬಿಡ್ತು. ನಿಮಿಗ್ಯ ರೋಡು ಬೇಕಂದ್ರ ಹಗೇವುಗಳನ್ನ ಮುಚ್ಚೇತಿರಾಕು ಅಂತ ಗೌರ್ಮೆಂಟಿನಾರು ಹೇಳಾತ್ಗೆ ನಮ್ಮೋಣಿಯಾಗಿನ ತೊಂಬತ್ತು ಪರ್ಸೆಂಟ್ ಹಗೇವುಗಳನ್ನ ಡಂಬಾರ್ ರೋಡು ನುಂಗಿಬಿಡ್ತು, ಹೀಗ್ಗೆ ಮೂರು ವರ್ಸದ ತೆಳಗ ನೂರು ವರ್ಸದಿಂದ ಬಂದಿದ್ದ ಒಂದು ರೈತರ ಸಂಸ್ಕೃತಿ ಸರ್ವ ನಾಸಾಗೋಯ್ತು…
ನಮ್ಮೋಣಿ ರೋಡಿನಾಗ ನಾನು ನಡದಾಡಕರೆಲ್ಲಾ ನನಿಗ್ಯ ಕಾಡದಂದ್ರ ಅಭಿವೃದ್ಧಿ ಹೆಸರಿನಾಗ ಹಾಳಾಗಿ ಹೋತೋ ಹಗೇದಗಡ್ಡೆಲ್ಲಾ… ಅನ್ನಾ ಲೈನು ನನ್ನ ನೆರಳಿನಂಗ ನನ್ನ ಕಾಡತೈತಿ.







ಶಿವು… ನೀವು ಜ್ವಾಳದ ಹಗೇವುಗಳ ಕತೀ ಹೇಳಿ, ನಾನು ನನ್ನ ನೆನಪಿನ ಹಗೇವದಾಗ ಇಳ್ಯೂವಂಗ ಮಾಡೀದ್ರಿ…
ನಮ್ಮ ಕಡೆ ಹಗೇವು ಒಮ್ಮೊಮ್ಮಿ ‘ಹಗೆ’ ಸಾಧಿಸಾಕ ಉಪಯೋಗ ಆಕ್ಕಿದ್ದ್ವು… ”ನನ ಸಿಟ್ಟ ನಿನಗ ಗೊತ್ತಿಲ್ಲ ತಮ್ಮಾ… ಹಗೇವಿನ್ಯಾಗ ದೂಡಿ ಪಾಟಿಗ್ಗಲ್ಲು ಮುಚ್ಹೇನು…” ಅಂತ ಕೆಲವರು ಬಯ್ಯೂದನ್ನ ಕೇಳಿದ್ದೆ. ಕೆಲವರು ಇದ್ದಕಿದ್ದಂಗ ನಾಪತ್ತೆ ಆಗೂದನ್ನೂ ಕೇಳಿದ್ದೆ…
ಶಿವು ಬಹಳ ಚೆನ್ನಾಗಿದೆ ನಿಮ್ಮ ಭಾಷೆ- ಬರಹ… ಹೆಚ್ಚಿನ ಬರವಣಿಯ ನಿರೀಕ್ಷೆಯಲ್ಲಿ..ನಿಮ್ಮ ಅಭಿಮಾನಿ
ಶಿವು ಬಹಳ ಚೆನ್ನಾಗಿದೆ
ಹಗೇವು ಎನ್ನುವುದು ನಮ್ಮೂರಿನ ಮಟ್ಟಿಗೆ ಹಳೇ ನೆನಪುಗಳಾಗಿವೆ. ಆಧುನಿಕತೆ ಬೆಳೆದಂತ್ತೆಲ್ಲಾ ಹಳೆಯ ಜೀವನೋಪಾಯ ಮಾರ್ಗಗಳೆಲ್ಲಾ ತಳ ಸೇರುತ್ತದೆ. ನಮ್ಮೂರು ಆಧುನಿಕತೆಗೆ ಹೊಡ್ಡುಕೊಂಡತ್ತೆಲ್ಲಾ ಮಣ್ಣಿನ ಮೇಲೆ ಸಿಮೆಂಟಿನ ತೇಪೆ ಬೀಳುತ್ತಿದೆ. ಕೃಷಿನೇ ಇಲ್ಲದ ಮೇಲೆ ಇನ್ನೆಲ್ಲಿ ಹಗೇವು. ಹಳೇ ನೆನಪುಗಳನ್ನು ನಿಮ್ಮ ಚೆಂದ ಬರವಣಿಗೆಯ ಮೂಲಕ ನಮಗೆ ಗೋಚರಿಸಿದಕ್ಕೆ ಧನ್ಯವಾದಗಳು ಶಿವು. ಇನ್ನೂ ಹಳೇ ನೆನಪುಗಳಿದ್ದರೆ ಅಕ್ಷರಕ್ಕೆ ಇಳಿಸಿ……