ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜವ್ವಾರಿ ಝಲಕ್ – ಕತಿ ಕಾದಂಬರಿ ಓದಿದ್ರ ಹೊಟ್ಟಿಗ್ಯ ಹಿಟ್ಟು ಎಲ್ಲಿಂದಲೇ ಬರ್ತೈತಿ ?

ನಾಳಿಲಿಂದ ಬರಬ್ಬರಿ ಒಂದು ವಾರ ವಿಶ್ವ ಲೈಬ್ರರಿ ವಾರ ಐತಿ.

– ಶಿವು ಮೊರಿಗೇರಿ

ಬ್ಯಾಸರಾ ಕಳಕಣಾನು ಅಂತ ಇಂಟ್ರನೆಟ್ಟಿನಾಗ ನಮ್ಮ ಗಂಗಾವತಿ ಪ್ರಾಣೇಶಿದು ನಕಲಿ ಭಾಷಣಾ ನೋಡಕತ್ತಿದ್ಯ. ಏನ ಮಾತಾಡಾನ್ರೀ…. ಅಬಾಬಬ. ಭಾಷಣದಾಗ ಮಾತಾಡ್ತಾ ಮಾತಾಡ್ತ ‘ಬೇಕಾರ ನೀವು ನಾಕು ರಸ್ತಿ ಸೇರಾ ಸರ್ಕಲ್ಲಿನಾಗ ಒಂದ್ನಾಕು ಪುಸ್ತಕ, ಒಂದು ಜತಿ ಚಪ್ಲಿ ಇಟ್ಟು ಬಂದು ಅರ್ಧ ಗಂಟಿ ಬುಟ್ಟು ಹೊಳ್ಳಿ ಹೋಗಿ ನೋಡ್ರಿ, ಮಕ್ಕಳು ಚಪ್ಲಿ ಹೊಯ್ದಿರ್ತಾರ ಪುಸ್ತಕ ಹಂಗಾ ಬಿದ್ದಿರ್ತಾವು’ ಅಂತ ಹೇಳತಿದ್ದಂಗನಾ, ನನಿಗ್ಯ ತಲಿ ತಿರುಗಿದಂಗಾತು. ಪುಸ್ತಕ ಅನ್ನೋ ಲೋಕದೊಳಗ ನಾನು ಸವದುಬಂದ ಹಾದಿನೆಲ್ಲಾ ಒಂದೇಟಿಗೆ ನೆನಪು ಮಾಡಿ ಕೊಡ್ತು. ಅದಾ ಪ್ರಾಣೇಶಿ ಡೈಲಾಗ್ ನ ಚೂರು ಪ್ರೆಷ್ ಮಾಡಿ ಹೇಳಕಂದ್ರ,’ಒಂದು ಕಡಿಗ್ಯ ಐಪಿಎಲ್ ಮ್ಯಾಚು, ಇನ್ನೊಂದು ಕಡಿಗ್ಯ ಸಾಹಿತ್ಯದ ಸಂವಾದ ಹಮ್ಮಿಕಂಡು ನಮ್ಮೆಲ್ಲಾ ಕಾಲೇಜಿನ ಹುಡುಗ್ರನ್ನ ಕರೀರಿ ಯಾವುದಕ್ಕ ಜಾಸ್ತಿ ಜನ ಹೊಕ್ಕಾರನ್ನಾದನ್ನ ಮತ್ಯ ನಾ ಬಿಡಿಸಿ ಹೇಳಬೇಕಾಗಿಲ್ಲ’ ಅಲ್ಲೇನ್ರಿ ?

ಇಡೀ ನಮ್ಮ ಕರ್ನಾಟಕದಾಗ ಒಂದು ತಿಂಗಳಿಗ್ಯ ಬೇಕಾದಷ್ಟು ಪುಸ್ತಕಗಳು ಬಿಡುಗಡಿ ಅಕ್ಕಾವು. ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷಿ, ನೆಲ, ಜಲ, ಅಂತಂದು ನಡಿಯಾ ಜಾಗೃತಿ ಶಿಬಿರಗಳನ್ನ ಲೆಕ್ಕ ಹಾಕಾಕ ಅಕೈತೇನ್ರಿ ? ಎಂಥೆಂತಾ ಸಮ್ಮೇಳನಗಳು ನಡಿಯಲ್ರೀ ನಮ್ಮ ಸುತ್ತ ಮುತ್ತ ? ನಮ್ಮ ರಾಜ್ಯದಾಗ ಎಷ್ಟು ಸ್ಟೇಟ್ ಲೆವೆಲ್ ಪೇಪರ್ ಗಳು ಅದಾವು. ಒಂದು ದಿನಕ್ಕ ಒಂದೊಂದು ಪೇಪರ್ ಅಬ್ಜ್ ಗಟ್ಟಲೆ ಅಂದ್ರ, ಲಕ್ಷಗಟ್ಟಲಿ ಸೇಲ್ ಅಕ್ಕಾವು. ಬಸ್ಸುಗಳೇ ಇಲ್ಲದ ಊರುಗಳಿಗ್ಯ ಇವತ್ತು ಪೇಪರ್ ಗಳು ಹೊಕ್ಕಾವು. ಹಳ್ಳಿಗುಳಾಗ, ಹೋಟ್ಲಗಳಾಗ ಒಂದು ಪೇಪರನ್ನ ಒಂದೆಂಬತ್ತು ಜನ ಓದುತ್ತಾರ.

ಬಾಳಾ ಅಂದ್ರ ಬಾಳಾ ಸರ್ಕಾರಿ ಸಾಲಿಗುಳಾಗ ಮುಂಜಾನಿ ಪ್ರೈಯರ್ನಾಗ ಅವತ್ತಿನ ಪೇಪರಿನಾಗಿನ ಸುಭಾಷಿತ ಓದಿಸ್ತಾರ. ಲಕ್ಷ ಲಕ್ಷ ಸಾಲಿ ಹುಡ್ರು ಸಾಲಿ ಬಾಗಲ ತೆಗದಾಗಿಂದ ಬ್ಯಾಸಿಗಿ ರಜಾ ಕೊಡಾವರಿಗೂ ಒಂದು ದಿನಾನು ಬಿಡದಂಗ ಪೇಪರ್ ಗಳ ಮಖಾ ನೋಡ್ತಾರ. ಎಲ್ಲಾ ಸರ್ಕಾರಿ ಸಾಲಿಗಳಾಗೂ ಮಕ್ಕಳು ಓದ್ಲಿ ಅಂತ ಸಣ್ಣ ಸಣ್ಣ ಪುಸ್ತಕಗಳ ಗುಡ್ಡಾನಾ ತಂದು ಕೆಡವಿ, ಸಾಲಿ ಒಳಗಾ ಒಂದೊಂದು ಲೈಬ್ರರಿ ಮಾಡಿಕಂಡಿರ್ತಾರ. ಐದನೇ ತರಗತಿಯಿಂದ ಎಸೆಲ್ಸಿ ಹುಡ್ರುವರಿಗೂ ವಾರಕ್ಕೊಂದು ಬುಕ್ಕಾ ಚೇಂಜ್ ಮಾಡಾಕು ಅಂತ ಹೇಳಿ, ವಾರಕ್ಕೊಂದು ಹೊಸಾ ಬುಕ್ಕಾ ಕೊಡ್ತಾರ.

ಇದ್ದಿದ್ರಾಗ ಚೂರು ಬಲಿತಂತ ಊರುಗಳಿಗ್ಯ ಇಡೀ ಊರಿನ ಜನಕ್ಕ ಇರ್ಲಿ ಅಂತಂದು, ಸರ್ಕಾರದೋರು ಸಾರ್ವಜನಿಕ ಗ್ರಂಥಾಲಯ ಕಟ್ಟಿಸ್ಯಾರ. (ಕೆಲವು ಹಳ್ಳಿಗಳಾಗ ಇವ್ಯಾವ ವ್ಯವಸ್ತೀನು ಸಿಕ್ಕಿಲ್ಲ ಬಿಡ್ರಿ ಅದು ಬ್ಯಾರೆ ಮಾತು) ಒಂದು ತಿಂಗಳಿಗ್ಯ ಒಂದೊಂದು ಲೈಬ್ರರಿಗ್ಯ ಎಷ್ಟೆಷ್ಟು ಪುಸ್ತಕಾಗಳು ಹೊಕ್ಕಾವು! ಇಷ್ಟೆಲ್ಲಾ ಇದ್ರೂ ಸೀರಿಯಸ್ಸಾಗಿ ಸಾಹಿತ್ಯಾನ ಓದ ಜನಾ ? ಇದು, ಪ್ರಶ್ನಿ ನನ್ನ ಕಾಡಕ್ಕತ್ತಿರಾದು.

1997-98ರಾಗ, ಮುಂಜಾಲೆಲ್ಲಾ ಹೊಲಮನಿ ಕೆಲ್ಸ ಮಾಡಿ ದಣಕಂದು ಬಂದ್ರು, ರಾತ್ರಿ ದೊಡ್ಡ ಲಾಟೀನದ ಬೆಳಕಿನಾಗ ಓಣಿ ಯಜಮಾನ್ರು, ಚಿಗದೊಡವನಾರು ಸರ್ಕಾರ ಕೊಡಿಸಿದ ಪಾಟಿ ಪೇಣಿಲೆ ತಮ್ಮ ಹೆಸ್ರು ಬರಿಯಾದು ಕಲಿಯಕರ ಇತ್ತಲ್ಲ ಹುಮ್ಮಸ್ಸು, ಅದು ನಾಕಕ್ಸಾರ ಕಲ್ತ ಮ್ಯಾಲ ಎಲ್ಲಿಗೋತು ? ಇದ್ದಕ್ಕಿದ್ದಂಗನಾ ಜನಕ್ಕ ಓದಿನ ಮ್ಯಾಗ ತೀರಾಬರಾ ಬ್ಯಾಸ್ರ ಯಾಕಾತು ? ಮತ್ಯ ನಾವು ಮಾತಿಗೊಮ್ಮಿ ‘ಕುಳಿತೋದುದೆಯುಂ ಕಾವ್ಯ ಪ್ರಯೋಗ ಮತಿಗಳ್’ ಅಂತ ಹೇಳ್ತಿವಲ್ಲಾ, ಹಂಗಂದ್ರೇನು ? ಸಾಹಿತ್ಯ ಸಮ್ಮೇಳನಕ್ಕ ಬರಾರೆಲ್ಲಾ ಬುಕ್ಕಾ ತಗಣಾಕ ಬರ್ತಾರ ಅಂದ್ಕಂಡೀವಾ ನಾವು ?

ಪರಿಸ್ಥಿತಿ ಹಿಂಗ ಯಾಕಾತಪಾ ಅಂದ್ರ, ಬುದ್ದಿವಂತಿಕೆನಾ ಮಾರ್ಕ್ಸ್ ಗಳ ಮ್ಯಾಗ ತೂಗಕತ್ತಿದ್ರು ನೋಡ್ರಿ, ಅಲ್ಲೆ ಅರ್ದಕರ್ದ ಇತರೇ ಓದು ಮೂಲಿ ಸೇರಿಕಂತು. ಟೆಕ್ನಾಲಜಿ ಕಲತರಾ ರ್ವಕ್ಕ ಸಿಗ್ತೈತಿ, ಲೈಪ್ ಸೆಟ್ಲ್ ಅಕೈತಿ. ಟೆಕ್ನಿಕಲ್ ಕಲತರಾ ಸ್ವಂತ ಉದ್ಯೋಗ ಮಾಡಬೋದು. ಕತಿ ಕಾದಂಬರಿ ಓದಿದ್ರ ಹೊಟ್ಟಿಗ್ಯ ಹಿಟ್ಟು ಎಲ್ಲಿಂದಲೇ ಬರ್ತೈತಿ ? ಅನ್ನಾ ಭಾವನಿ ಯಾವಾಗ ನಮ್ಮ ಯುವಕರ ತಲಿಯೊಳಗ ಹೊಕ್ಕಂತೋ, ಮೂಲಿ ಸೇರಿದ ಇತರೆ ಓದಿನ ಮ್ಯಾಗ ಕತ್ತಲು ಮುಚ್ಚಿಗಂತು.

ಬೇಕಾರ ಇವತ್ತು ನೀವು ರಾಜ್ಯದ ಯಾವದೇ ಹಳ್ಳಿ ಲೈಬ್ರರಿಗಳಿಗ್ಯ ಹೋಗಿ ನೋಡ್ರಿ, ಸೌರಾರಗಟ್ಲಿ ವಿದ್ಯಾವಂತ ಜನಸಂಖಿ ಇರಾ ಊರುಗಳಾಗ ಲೈಬ್ರರಿಗ್ಯ ಎಂಟತ್ತು ಮಂದಿ ಸಿಗಬೋದೇನೋ. ಅದು ಒಂದು ನಮೂನಿ ಲೈಬ್ರರಿಗಳಾಗ ನೊಣಾ ಹೊಡಿಯಾರು ದಿಕ್ಕಿಲ್ಲದಂಗಾಗೈತಿ ಅನ್ನಬಹುದೇನೋ. ಅದ್ರಾಗಾ ಇನ್ನೂ ಇಚಿತ್ರ ಅಂದ್ರ ಅಷ್ಟೂ ಜನ ಬರಿ ಗಂಡಸ್ರಾ ಆಗಿರ್ತಾರ. ಹಂಗಾರ ನಾವು ಅದೇನಾ ಸಮಾನತಿ ಅಂತೀವಲ್ಲ ಅದ್ನ ಎಲ್ಲಿಂದ ಕಟ್ಟಬೇಕಾ ಏನಾ ಗೊತ್ತಾ ಆಗವಲ್ದು.

ಇಷ್ಟೆಲ್ಲಾ ಕೆಟ್ಟ ಪರಿಸ್ಥಿತಿ ನಡುವೆನಾ ಹಳ್ಳಿಗಳಾಗಿರಾ ವಿದ್ಯಾವಂತ ಯುವಪಡೆ ಲೈಬ್ರರಿಕಡಿಗ್ಯ ಹೊಳ್ಳಿ ನೋಡಬೇಕಾದ್ರ ಯಾವ ಜಾದೂ ನಡಸಬೇಕು ಅನ್ನೋದು ವತ್ತಟ್ಟಿಗಾದ್ರ, ಇರಾ ಲೈಬ್ರರಿಗಳಾಗ ಮಾಳಿಗಿಲಿಂದ ಮಳಿನೀರು ಸುರಿಯೋವು ಎಷ್ಟದಾವೋ,ಕಿಡಿಕಿ ಬಾಗಲ ರಿಪೇರಿ ಎಷ್ಟು ಲೈಬ್ರಿರಿಗಳಿದಾವೋ, ಸುಣ್ಣ ಬಣ್ಣ ಕಾಣದ ಲೈಬ್ರಿಗಳೇ ಬಹುತೇಕ ತುಂಬಿಕಂಡಾವು ಬಿಡ್ರಿ ಅದ್ರಾಗ ಎಲ್ಡು ಮಾತಿಲ್ಲ. ಇನ್ನು, ಲೈಬ್ರಿರಿಗಳಿಗ್ಯ ರೂಮೇ ಸಿಗದಂತಾ ಹಳ್ಳಿಗಳು ಎಷ್ಟದಾವೋ, ಲೈಬ್ರರಿಮ್ಯಾನ್ ಗಳ ಸಂಬಳಾಗಿ ಏಸು ತಿಂಗಳಾಗ್ಯಾವೋ, ಸ್ವತಾ ಅವರಿಗಾದ್ರೂ ಸಾಹಿತ್ಯ ಹಸಿವು, ಲೈಬ್ರರಿಗಳ ಯೋಗಕ್ಷೇಮ ಬೇಕಾಗೈತೋ ಇಲ್ಲೋ, ಪಾಪ ಅವರ ಪರಿಸ್ಥಿತಿ ಹೆಂಗೈತೋ ಏನೋ ಅನ್ನೋದು ಇನ್ನೊಂದುಕಡಿಗ್ಯ.

ನೀವು ಹೇ ಹಂಗೇನಿಲ್ಲಾ ತಮ್ಮಾ ನೀನು ಬರೇ ಒಂದಾ ಮಗ್ಗಲು ಯೋಚಿನಿ ಮಾಡಕತ್ತೀ, ಇವತ್ತು ಸಾಹಿತ್ಯ ಓದೋರು ಜಾಸ್ತಿ ಆಗ್ಯಾರ. ಇವತ್ತಿನ ಕಾಲದಾಗ ಐಟಿಬಿಟಿಯೊಳಗ ನೌಕ್ರಿ ಮಾಡೋರೂ ಸಾಹಿತ್ಯದ ಪುಸ್ತಕಗಳನ್ನ ಓದಾಕ ಚಾಲೂ ಮಾಡ್ಯಾರ, ಪ್ರಜ್ಞಾವಂತರು ಅನ್ನಿಸಿಕೊಂಡಾರೆಲ್ಲಾ ಸಾಹಿತ್ಯದ ಹಸಿವು ಜಾಸ್ತಿ ಇರೋರಾ ಆಗ್ಯಾರ. ಹೊಸ ಹೊಸ ಕವಿ, ಸಾಹಿತಿಗಳ ಸಂಖಿ ಬೆಳಿಯಾಕತ್ತೈತಿ. ಹಾದಿ ತಪ್ಪಕತ್ತಿದ ಯುವ ಪಡೆಗೆ ಮತ್ತೆ ಸಾಹಿತ್ಯದ ರುಚಿ ತೋರಿಸಾ ಕೆಲಸಾ ನಡಿಯಾಕತ್ತೈತಿ. ಬಸ್ಸಿನ ಡ್ರೈವರ್ ಕಂಡಾಕ್ಟ್ರು, ಆಟೋದಾರಿಂದ, ರೈಲು ಪ್ರಯಾಣ ಮಾಡಾ ಬಾಳ ಜನ ಮತ್ಯ ಸಾಹಿತ್ಯಕ್ಕ ಜೋತು ಬಿಳಾಕತ್ಯಾರ. ಇವತ್ತಿನ ಪರಿಸ್ಥಿತಿಯೊಳಗ ಬರಿ ಕತಿ ಕವನ ಬರಕಂಡಾ ಜೀವನಾ ಸಾಗಿಸಬೋದು. ಕಾಲ ಮತ್ಯ ಹೊಳ್ಳಿ ಬದ್ಲಿ ಆಗಾಕತೈತಿ.

ಹಿಂಗಂತಾ ನ ಈ ಲೇಖನಾ ಓದ್ತಾ ಓದ್ತಾ ನೀವು ಅಂದ್ಕಬೋದು, ಆದ್ರ ಹಂಗ ಯೋಚಿನಿ ಮಾಡೋರಷ್ಟಾ ಇಡೀ ಕರ್ನಾಟಕ ಆಗಿಬುಡೋದಿಲ್ಲ. ಇವತ್ತು ಒಂದು ಕೈ ಬಳ್ಳಿನ ಲೆಕ್ಕ ದಾಟಿ ಹೋಗಿರಾ ಕನ್ನಡಿಗರಲ್ಲಿ ಹತ್ತು ಗ್ರಾಮಿನ ಬಗ್ಗೆ ನಾನು ಹೇಳಕತ್ತಿಲ್ಲ, ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಇವತ್ತು ಸಾಹಿತ್ಯ ಮತ್ತೆ ಮೊಳಕಿ ಹೊಡಿಬೇಕು. ಬೀದಿ ಬದಿ ಕಸಾ ಹೊಡಿಯೋರು, ಯಾಪಾರಾ ಮಾಡೋರು, ಗ್ಯಾರೇಜು, ಹೋಟ್ಲು, ಡಬ್ಬಿ ಅಂಗಡಿಯೋರು, ಇವರತ್ರ ಹೋಗಿ ಇತ್ತೀಚಿಗೆ ನೀನು ಯಾವ ಪುಸ್ತಕ ಓದಿಪಾ ? ಅಂತ ಕೇಳಿ ನೋಡ್ರಿ, ಪ್ರಜ್ಞಾವಂತರು ಅನ್ನಿಸಿಕೊಂಡಾರು ನಾವು ಎಲ್ಲಿ ಎಡವೀವಿ ಅನ್ನಾದು ಗೊತ್ತಾಕೈತಿ.

ನಮ್ಮ ಹಳ್ಳಿಗಳಾಗ ವಾರಕ್ಕೊಮ್ಮಿ ಸ್ತ್ರೀಶಕ್ತಿ ಸಂಘದೋರು. ಲೆಕ್ಕಾ ಮಾಡಿಕಣಾಕ ಒಂದು ಕಡೀಗ್ಯ ಸೇರಿಕಂತಾರಲ್ಲಾ, ಅಲ್ಲೊಂದು ಪುಸ್ತಕದ ಚರ್ಚೆ ನಡಿಸಾಕ ಏನು ತೊಡರೈತಿ ಅನ್ನಾದನ್ನ ತಿಳಕಬೇಕಾಗೈತಿ. ಪ್ರತೀ ಹಳ್ಳಿಗಳಾಗು ಯುವಕ ಸಂಘಗಳು ಬಾಳಾ ಅದಾವು. ಬರೆ ವರ್ಸದಾಗ ನಾಕೈದೇಟು ದ್ವಜಾ ಹಾರಿಸಿ, ಗಣಪನ ಹಬ್ಬ ಮಾಡಿಬುಟ್ರ ಅವರ ಜಬಾದ್ದಾರೀನಾ ಮುಗೀತು ಅನ್ನಾ ಅವರ ಮನಸ್ಥಿತಿಯೊಳಗೊಂದು ಕೃತಿ ವಿಮರ್ಷೆ ಯಾಕ ನಡಿಬಾರ್ದು ? ಪ್ರತೀ ಅಂಗನವಾಡಿ ಕೇಂದ್ರಗಳಾಗ ತಿಂಗಳಿಗೊಮ್ಮಿ ಗರ್ಬಿಣ್ಯಾರ ಸಭಿಗಳು ನಡಿತಾವು. ಅಲ್ಲಿ ತಾಯ್ತನದ ವಿಷಯದ ಜತಿಗ್ಯ ಮಹಿಳಾ ಸಾಹಿತಿಗಳ ಕೃತಿಗಳ ವಿಚಾರನ ಒಂದರ್ದಾಗಂಟಿ ಮಾತಾಡಬಾರದ್ಯಾಕ ? ಅವರವ ಪರಿಸರಕ್ಕ ಬುಕ್ಕಗಳನ್ನ ಜನಾ ಯಾವತ್ತೂ ವಲ್ಲೆ ಅನ್ನಲ್ಲ. ಅಷ್ಟಕ್ಕೂ ನಾನ್ಯಾಕ ಇವತ್ತು ಇದನ್ನೆಲ್ಲಾ ನೆನಪು ಮಾಡಿಕಂಡ್ಯ ಅಂದ್ರ ನಾಳಿಲಿಂದ ಬರಬ್ಬರಿ ಒಂದು ವಾರ ವಿಶ್ವ ಲೈಬ್ರರಿ ವಾರ ಐತಿ. ಪೂರ್ತಿ ಒಂದು ವಾರ ನಾವು ನಮ್ಮ ಹಳ್ಳಿಗಳಾಗಿರೋ ಗ್ರಂಥಾಳಯಗಳ ಬಗ್ಗೆ ಯೋಚಿನಿ ಮಾಡಿ ನಮ್ಮಿಂದ ಏನಾರು ಒಳ್ಳೇದು ಮಾಡಕ್ಕಕೈತಾ ಅಂತ ಯೋಚಿನಿ ಮಾಡಾ ಸರತಿ ಬಂದೈತಿ.

‍ಲೇಖಕರು avadhi

13 April, 2013

1 Comment

  1. ಉದಯಕುಮಾರ್ ಹಬ್ಬು

    ಬದುಕಿಗೆ ನೀವು ಹೇಳಿದಂತೆ ಪುಸ್ತಕದೋದು ಅನ್ನದಷ್ಟು ಮಹತ್ವದ್ದಲ್ಲ ಎಂದೆನಿಸಿದೆ. ಆದರೆ ಅವರ ಬದುಕಿಗೆ ಸಾಹಿತ್ಯವನ್ನು ಅನ್ನ ನೀರಿನಷ್ಟೆ ಅತ್ಯವಶ್ಯಕವನ್ನಾಗಿ ಮಾಡಲು ಪ್ರಯತ್ನಿಸಬೇಕಿದೆ. ವಿದೇಶದಲ್ಲಿ ಪುಸ್ತಕ ಬಿಡುಗಡೆ ಆಗುವ ಮೊದಲು ಪ್ರಚಾರ ಸಾಕಷ್ಟು ಬೇಕಷ್ಟು ಪ್ರಚಾರ ಮಾಡಲಾಗುತ್ತದೆ. ಒತ್ತಾಯದ ಎಣ್ಣೆ ಸ್ನಾನ ಮಾಡಬೇಕಾದರೂ ತಯಾರಾಗಿರೋನಂತೆ! ಹಲವರ ಪ್ರಯತ್ನದಿಂದಾಗಿ ಈ ಪುಸ್ತಕ ಪ್ರಿಯತೆಯನ್ನು ಪ್ರಚಾರ ಕಾರ್ಯಕ್ಕಾಗಿ ಕಾರ್ಯಕರ್ತರ ಅಗತ್ಯವಿದೆ. ಜನರು ತುಂಬಾ ಭೌತಿಕವಾದಿಗಳಾಗುತ್ತಿದ್ದಾರೆ. ಅವರಿಗೆ ಪುರುಸೊತ್ತು ಇಲ್ಲವಾಗಿದೆ.ಉದಯಕುಮಾರ ಹಬ್ಬು ಕಿನ್ನಿಗೋಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading