2005 ರ ಇಂಥದ್ದಾ ಒಂದು ಬ್ಯಾಸಿಗಿ ಮದ್ಯಾಹ್ನ
– ಶಿವು ಮೊರಿಗೇರಿ
ನಂಗೆ ತೀರಾ ತಲಿಕೆಟ್ಟ ಬ್ಯಾಸರ ಆದ್ರ, ನನ್ನ ಮೊಬೈಲ್ದಾಗಿರಾ ನಮ್ಮೂರಿನ ಎಲ್ಲರ ನಂಬರ್ ಗಳಿಗ್ಯ ಪೋನ್ ಹಚ್ಚಿ, ಸುಳ್ಳಾ ಏನಾ ಒಂದು ಹಾಳು ಮೂಳು ಮಾತಾಡ್ತಿನಿ. ಈ ಬಾರಿ ನನ್ನ ಗೆಣೆಕಾರಗ ಪೋನ್ ಮಾಡಿದ್ಯ. ಅವನು ಪೋನ್ ಎತ್ತಿಗಂತಾನಾ ‘ಯಾರಪಾ ?’ ಅಂತ ಕೇಳಿದ. ಹೇ ನಾನಲೇ.. ಅಂದ ಕೂಡಲೇ ನನ್ನ ಧ್ವನಿ ಕಂಡಿಡಿದು, ‘ಹೇ ಏನಾ? ಅರಾಮದಿಯಾ?’ ಅಂತ ಕೇಳಿದ. ‘ಹ್ಞೂಂನಲೇ, ಅರಾಮದಿನಿ. ಏನ್ಮಾಡಕತ್ತೀ ?’ ಅಂತ ಕೇಳತಿದ್ದಂಗನಾ, ‘ಟಿವ್ಯಾಗ ಅಡವಿಟೇಜ್ ನೋಡಕತ್ತೀನಿ ಬಾರಾ ನೋಡಾನು’ ಅಂದ. ಕಾಂಕ್ರೀಟ್ ಕಾಡಿನಾಗ ಕಳದೋದ ನಗು ಅನ್ನೋ ಕುರಿಮರಿ, ನನ್ನ ಮಾರಿ ಅನ್ನೋ ಮನಿನಾ ಹುಡಿಕ್ಕಂಡು ಹ್ವಳ್ಳಿ ಬಂದಂಗಾತು ನನಿಗ್ಯ. ‘ ಅಡವಿಟೇಜ್ ಯಾಕ ನೋಡಕತ್ತೀಲೆ ? ತಲಿ ಸುದ್ದಿಲ್ಲೇನು ನಿನಿಗ್ಯ ? ಚಾನಲ್ ಛೇಂಜ್ ಮಾಡಲೇ’ ಅಂದ್ಯ, ಅದಕ್ಕವನು ಒಂದು ರೌಂಡ್ ಎಲ್ಲಾ ಚಾನಲ್ಲೂ ಮುಗಿಸಿಕಂಡು ಬಂದೀನಿ ಬಾರಾ ನಿನ್ನಾ, ಎಲ್ಲದ್ರಾಗೂ ಒಂದೇಟಿಗೆ ಬುಟ್ಟಾರ ಅಡವಿಟೇಜು’ ಅಂದ. ಅವನ ಹೆಸರು ಬಡಿಗೇರ ಮೇಘರಾಜ ಅಂತ. ಇವನು ನನ್ನ ಚಡ್ಡಿ ದೋಸ್ತೋ ? ಉಡದಾರದ ದೋಸ್ತೋ ? ಇನ್ನೂ ಕನ್ ಪ್ಯೂಜನ್ ಬಗೆಹರಿದಿಲ್ಲ.
ಇನ್ನು ತೀರಾ ಹಿಂಗಾ ಬುಟ್ರಾ ಇದ್ದೊಬ್ಬ ಮಗ, ಹಾಳಾಗೊಕ್ಕಾನಬೇ, ಅಂತೇಳಿ ಅವರವ್ವ ಮದ್ವಿ ಮಾಡಿಬುಟ್ಲು, ಈಗವನು ಒಂದು ಕೂಸಿನ ತಂದಿ ಅನ್ನೋ ಗ್ರೇಡ್ ತಗಂಡಾನ. ‘ಲೇ ಮೇಘಾ ಇನ್ನೂ ಹಳೇ ಚಾಳಿ ಬಿಟ್ಟಿಲ್ಯಾಕ ?’ ಅಂತ ಕೇಳಿಕೋತ, ಯಾವ ಅಡವಿಟೇಜ್ ನೋಡಕತ್ತಿಲೇ ? ಅಂತ ಕೇಳಿದ್ಕ ‘ಹೇ ಕರ್ರಗಿದ್ದಾರು ಬೆಳ್ಳಗಾದು ತೋರಿಸ್ತಾರಲ್ಲೋ, ಅದನ್ನ ನೋಡಕತ್ತಿನಿ ನೋಡು, ಇಲ್ಲಿ ಉಣ್ಣಾಕ ಜ್ವಾಳಿಲ್ಲ, ಸೊಸೈಟಿ ಕಾರ್ಡಿಲ್ಲ ಅಂತ ನಾವು ಸಾಯಕತ್ತೀವಿ, ಅಂತಾದ್ರಾಗ ಇದ್ರದ್ದೊಂದು ಕಾಟ. ಅದೇನಾ ಅಂತಾರಲ್ಲಾ ‘ಹಳ್ಳ ಹಗಸಿ ಬಗಸಾಕರಾ, ದಂಡಿ ಸೀ ನೀರು ಬಗಿಸಿತ್ತಂತ್ಯಲ್ಲ’, ಹಂಗಾಗೈತಿ ನೋಡು ನಮ್ಮ ಪರಿಸ್ಥಿತಿ’ ಅಂತ ಒಂದು ಗಾದಿನ ನೆನಪು ಮಾಡಿಕೋತ ಒಂದಾ ಉಸಿರಿಗ್ಯ ಗ್ಯಾಪಿಲ್ಲದಂಗ ಮಾತು ಮುಗಿಸಿದ.
ನಿಮಿಗಿನ್ನೂ ಗೊತ್ತಿಲ್ರೀ, ಇವನ ಮಾತೇ ಅಂಥಾವು. ಒಮ್ಮೇಟು ನಾವು ಡಿಗ್ರಿ ಓದಾ ಟೈಮಿನಾಗ ಏನಾಗಿತ್ತಂದ್ರ, ನಮ್ಮನ್ಯಾಗ ನಮ್ಮ ಹುರ್ಡೆಲ್ಲಾ ಟಿವಿ ನೋಡಾಕತ್ತಿದ್ವಿ. ಒಳ್ಳೇ ಟೈಂಗೆ ಕರೆಂಟು ಹೋಗಿಬುಡ್ತು. ಅದಕ್ಕ ಮೇಘ, ‘ಥೂ ಇವರೋಳು, ಏಟು ಹೊಟ್ಟಿಕಿಚ್ಚಿನ ಜನ ಐತಿ ನೋಡು, ತಣ್ಣಗ ನಮ್ಮನ್ನ ಟಿ ವಿ ನೋಡಾಕೂ ಬುಡಲ್ಲಂತಾರ. ಆರು ತಾಸು ಆಗಾದಾ ಕಾಯಿತಿರ್ತಾರ.’ ಅಂತ ಮಾರಿನ ನನ್ನ ಕಡಿ ತಿರುಗಿಸಿ ‘ಅಲ್ಲಾ ಶಿವ್ವ ? ಈ ಕೆಬಿಯಾರು ಸುಚ್ಚಿನ ಮ್ಯಾಗ ಕೈ ಇಟ್ಟಕಂಡಾ ಕುಂತಿರ್ತರ ಅಂತಿಯೇನು ಟೈಂ ಆದ ಕೂಡ್ಲೆ ತೆಗಿತಾರಲ್ಲ ? ಹಳ್ಳಿಗುಳಾಗ ತೆಗದಂಗಾ ಸಿಟಿಗುಳಾಗ ಕರೆಂಟು ತೆಗಿಲಿ ನೋಡು, ಹಿಂಬಲತ್ತತ್ತಾರಲ್ಲಾ. ಅವರಾದ್ರ ತಿಂಗಳಿಗೊಮ್ಮಿ ರ್ವಕ್ಕ ಕೊಡ್ತಾರ, ನಾವಂದ್ರ ಕಲ್ಲಳ್ಳು ಕೊಡ್ತಿವಲ್ಲ ಅದ್ಕಾ, ಅವರು ಕೊಟ್ಟೋಟು ನಾವು ಕರೆಂಟು ತಗಣಾಕು. ಅಲ್ಲೋ ನಮ್ಮ ಕರ್ನಾಟಕದಾಗ ಹಳ್ಳಿಗುಳು ಜಾಸ್ತಿ ಅದಾವಾ ? ಪ್ಯಾಟಿಗುಳು ಜಾಸ್ತಿ ಅದಾವಾ ? ಅದನ್ನರಾ ಕೇಳಬೇಕಾ ಒಂದಿನ. ಇವನೌನು ಕರೆಂಟು ಹೋದ್ರ ಹೋತು, ಲಾಟೀಣನರ ಹಚ್ಚಿಗಂಡು ನೋಡಂತ ಟಿವಿನರಾ ಕಂಡಿಡಿವಲ್ಲರಪ್ಪಾ ನಮ್ಮ ಬುದ್ದಿವಂತ್ರು. ಅಂತ ನನ್ನ ಕಡೆ ತಿರುಗಿ ನಕ್ಕ.
ಅದಕ್ಕ ನಾನು ದೊಡ್ಡ ಯಜಮಾನನಂಗ, ‘ ಹೇ ಹೋದ್ರ ಹೋಗ್ಲಿ ಬುಡಲೇ ಕೋಡಿ ಅದಕ್ಯಾಕ ತಲಿ ಕೆಡಿಸ್ಕಂತಿಯಲೇ ? ಮ್ಯಾಗ ಆಡ್ರು ಹೆಂಗಿರತೈತೋ ಹಂಗ ಮಾಡ್ತಾರಪಾ ಇದ್ರಾಗ ಯಾರಿಗಂದ್ರ ಏನೂ ಬರಲ್ಲ ನೋಡಲೇ ತಮ್ಮಾ ಬಾ, ಚಾ ಮಾಡಿಕಂಡು ಕುಡುದು ತಿರಗಾಕ ಹೋದ್ರಾತು ನೆಡಿ’ ಅಂತ ನಾನು ಪಡಸಾಲ್ಯಗಿಂದ ಎದ್ದು ಅಡುಗಿ ಮನಿ ಕಡಿಗ್ಯ ಹೊಂಟಿದ್ಯ, ‘ಸ್ಟೌವಿಲಿಂದ ಚಾಲೂ ಆಗ ಟಿವಿ ಯಾವರಾ ಅದಾವೇನಾ ?’ ಅಂತ ಮತ್ತೊಮ್ಮಿ ನನ್ನಾ ಕೇಳಿದ್ದ. ಅವನ ಈ ಮಾತು ಕೇಳತಿದ್ದಂಗನಾ ಹೊಟ್ಟಿ ಹುಬ್ಬವರಿಗೂ ನಕ್ಕು ‘ಯಾಕಲೇ ಲೋಪರಾ ,ಬರ್ಜರಿ ರಾಪು ಆಗಿಬುಟ್ಟಿದಿ ?’ ಅಂದದ್ಕ, ‘ಏನ್ ಮಾಡ್ತಿಯಾ ಇವನೌನು, ನಮ್ಮ ಗುರುಂದು ಪಿಚ್ಚರ್ರು ಹಾಳಾಗಿ ಹತ್ತಿ ಬಿತ್ತಿಗಂಡು ಹೋತು’ ಅಂತ ಬ್ಯಾಸರಾ ಮಾಡಿಕಂಡು, ಚಾ ಮಾಡಾಕ ನನ್ನ ಜತಿಗ್ಯ ಅವನೂ ಬರಾಕತ್ತಿದ್ದ, ಅದಾ ಟೈಮಿಗ್ಯ ನಮ್ಮ ಮುತ್ತಿಗಿ ಮಲ್ಲಿ, ‘ಅಟಕಂದು ಯಾಕ ಸಿಟ್ಟು ಅಕ್ಕೀಲೆ ಮೇಘ, ಓಣಿ ಓಣಿಗೂ 24 ತಾಸೂ ಕರೆಂಟು ಕೊಡಾ ಕಾಲ ಬರತೈತಿ, ಗೊತ್ತಿಲ್ಲೇನು ನಿನಿಗ್ಯ ? ನಮ್ಮಿಂಡಿಯಾ ಮುಂದುವರಿಯಾಕತೈತಿ’ ಅಂದುಬುಟ್ಟ. ಇವನು ಮುತ್ತಿಗಿ ಮಲ್ಲಿಕಾರ್ಜುನ. ನನ್ನ ಇನ್ನೊಬ್ಬ ಹಿತೈಷಿ, ಆದ್ರ ಇವನು ತಮಾಷೆಗೆ ಯಾವಾಗ್ಲೂ ನಮ್ಮ ಆಪೋಜಿಟ್ ಏನರಾ ಒಂದು ರೊಳ್ಳಿ ತೆಗಿತಾನ, ಸೋಲ್ತಾನ. ಇನ್ನೂ ಬುದ್ದಿ ಬಂದಿಲ್ಲಂತ ಪೋನ್ ಮಾಡಿದಾಗ ಒಮ್ಮಿ ಕೇಳಿದ್ಯ.
ಮಲ್ಲಿಕಾರ್ಜುನನ ಈ ಮಾತನ್ನ ಕೇಳತಿದ್ದಂಗನಾ ಅದೆಷ್ಟು ಸಿಟ್ಟು ಬಂತೋ ಏನೋ ನಮ್ಮ ಮೇಘಗಾ, ‘ಯವನಲೇ ಹೇಳಿದ್ದು ಇಂಡಿಯಾ ಮುಂದುವರಿದೈತಿ ಅಂತ ? ಕರ್ಕಂಬಾಯಿಲ್ಲಿ ನನ್ನತ್ಯಾಕ. ಏನು ಹುಡಗಾಟ ಮಾಡಿಯೇನು ? ಮುಂದುವರಿಯಾಕು ಮುಂದುವರಿಯಾಕು ಅಂತೇಳಿ ನಾವಿನ್ನೂ ಎಷ್ಟು ಹಿಂದಕ್ಕ ಹೋಗೀವಿ ಅನ್ನಾದು ಗೊತೈತೇನಲೇ ನಿನಿಗ್ಯ ?’ ಅಂತ ಮಾತು ಚಾಲೂ ಮಾಡತಿದ್ದಂಗನಾ ನಾನು ‘ ಲೇ ಮೇಘಾ ಹೋದ್ರ ಹೋಗ್ಲಿ ಬುಡಲೇ ಪಾಪ ಅವನ್ಯಾಕ ಜೀವ ತಿಂತೀ? ಚಾ ಮಾಡಂಬಾ ಅಂತ ಕರದ್ರಾ, ‘ ಹೇ ಸುಮ್ನಿರಾ ನಿನ್ನಾ, ಅಂತೇಳಿ ಆ ಹುಡುಗನ್ನ ಎದ್ರಿಗ್ಯ ಬಂದು ಕುಂತಗಂಡು, ‘ಅಲ್ಲಪಾ ಕಿಸಿಬೆಳೆ ದಾಸ, ಹಂಗ ದೊಡ್ಡದಾಗಿ ಹೇಳಿಬುಟ್ಯಲ್ಲ ನಮ್ಮಿಂಡಿಯಾ ಮುಂದುವರಿದೈತಿ ಅಂತಾ ? ಎಷ್ಟು ಮುಂದುವರದೈತಿ ತೋರ್ಸಪಾ ನೋಡಾನು ? ಲೇ ಮುತ್ತಿಗೀ , ಹಿಂದಕ್ಕ, ಗುಡ್ಡ ಮುಣಗಂತಾ ಮಳಿ ಬರ್ತಿತ್ತಂತ, ಈಗ ಮೋಡ ಬಿತ್ತಿನಿ ಮಾಡಾ ಮಟ್ಟಕ್ಕ ಮುಂದುವರಿದೀವಿ ಅಲ್ಲಾ ?, ಅಲ್ಲಪಾ, ಅವಾಗೆಲ್ಲಾ ಸಜ್ಜಿ, ನವಣಿ, ಮಡಕಿ ಕಾಳು, ಕುಸುಬಿ, ಬೆಳಿಯಾರು, ಈಗೆಲ್ಲದವಪಾ ಅವು ? ಬರೇ ಮ್ಯಾರಿಗುಳಾಗ, ಬೇಲಿಸಾಲಾಗ ಬೆಳಿಯಾ ಅಕ್ಕಕ್ರಿ, ಅಗಸಿ, ಕುಸುಬಿ, ಪುಂಡಿ,ಸೀಗಿ ಸೊಪ್ಪುಗಳ ಸಾರು ಮಾಡಿಕಂಡು ಉಂಡಿದ್ರ ಸಾಕಿತ್ತಂತ್ಯ, ಈಗ್ಯಾವ ಸೊಪ್ಪು ತಿಂತಿಯಪ್ಪಾ ಅಣಿಮಿಣಿಯಾ? ಅಂತ ಎಡ ಅಂಗೈ ಮ್ಯಾಗ, ಬಲ ಮುಂಗೈ ಕುಟ್ಟಿ ಕೇಳತಿದ್ದಂಗನಾ ಮಲ್ಲಿಗೂ ಸಿಟ್ಟು ಬಂದು, ‘ ಲೇ ಹೊಗಲೇ ಯಾಕ ಸುಮ್ನ ಹೊಟ್ಟಿಕಿಚ್ಚಿಗ್ಯ ಮಾತಾಡ್ತೀ, ದಿನಾ ಮುಂಜಾಲೆ ಪುಟ್ಟಿ ಹೊತ್ಕಂಡು ಸೌರ ಜನಾ ಸೊಪ್ಪು ಮಾರಾರು ಬರ್ತಾರ. ತಗಣಾ ಯೋಗ್ತಿ ಇಲ್ಲಂತ ಬೊಗಳಲೇ ನಾಯಿಯಂತಾನಾ’ ಅಂತ ಮಖಾ ಕೆಂಪುಗು ಮಾಡಿಕಂಡು ಅಂದುಬುಟ್ಟ.
ಮೇಘಗ ಮತ್ತೋಟು ಬೆಂಕಿ ಹತ್ಯಾಬುಡ್ತು. ನಡುಕ ಏನಾ ಬಾಯಿ ಹಾಕಾಕ ಹೋದ ಮಲ್ಲಿ ಮತ್ಯ ಮಾತು ಮುಂದುವರಿಸಿಬುಟ್ಟ. ಲೇ ಕೊಳತ ಬಾಳೆಣ್ಣು (ಮೇಘ ಬಾಳೆಹಣ್ಣಿನ ವ್ಯಾಪಾರ ಮಾಡ್ತಾನ) ಮುಳ್ಳು ಕಂಟ್ಯಾಗಲ ಸೊಪ್ಪುಸೆದಿ ತಿನ್ನಾಕ ನಾವೇನು ದೊಣೆಕಟ (ಓತಿಕ್ಯಾತ)ದ ವಂಶದಾರ ಅಲ್ಲಲೇ, ನವಣಕ್ಕಿ ಹೋದ್ರೇನಾತಲೇ ಬೆಳ್ಳಿಯಂತಾ ಬೆಳ್ಳಕ್ಕಿ ಬಂದಾವು ಸೊಸೈಟಿಗೋದ್ರ ಇಪ್ಪತ್ತು ರುಪಾಯಿಗ್ಯ ಇಪ್ಪತ್ತು ಕೆ ಜಿ ಬಿಸಾಕ್ತಾರೊಗಲೇ, ಮಗಗಾ ಕಾರ್ಡ್ ಇಲ್ಲೇನಾ, ಅದಕ್ಕಾ ಹೊಟ್ಟಿ ಉರಿಸಿಕಂಡು ಹಿಂಗೆಲ್ಲಾ ಮಾತಾಡ್ತಾನ, ಇವತ್ತಿನ ದನಗುಳರಾ ಮೂಸಿ ನೋಡ್ತಾವೇನಲೇ ಸಜ್ಜಿನಾ ? ಎಲ್ಲಿ ಇವರಪ್ಪಂದು ಹೊಲದಾಗ, ಇವನು ಬಾಳ್ವಿ ಮಾಡಿ ದಬ್ಬಾಕ್ಯಾನ ಅನ್ನಂಗ ಮಡಕಿಕಾಳಿಂದು ಸುಡಗಾಡ ಸೊಪ್ಪಿಂದು ಮಾತಾಡ್ತಾನ ಅಂತ ಅಂದುಕೋತ ತಾನಾ ಎದ್ದು ಅಡುಗಿ ಮನಿಗೋಗಿ ಒಂದು ಚಂಬು ನೀರು ತಗಂಡು ಬಂದು ಕುಡುದು ಮತ್ಯ ಅದಾ ಜಾಗಕ್ಕಾ ಕುಂತ್ಕಂಡ.
ಇಷ್ಟೊತ್ತೂ ಮಲ್ಲಿ ಮಾತುಗಳನ್ನ ಕೇಳಿಸ್ಕಂಡಿದ್ದ ಮೇಘನ ಮಖಾ ಅಂತೂ ಒಲಿಯೊಳಗಿನ ಕೆಂಡದಂಗಾಗಿತ್ತು. ನಾನಿದ್ದು ಯಾವನಿಗೂ ಏನೂ ಹೇಳಾದಾ ಬ್ಯಾಡಲೇ ಅದ್ಯಾವನು ಗೆಲ್ತಾರ ನೋಡ್ಯಾಬುಡಾನು ಅಂತ ಕೈ ಕಟ್ಟಿಗಂಡು ಕುಕ್ಕರಗಾಲಿಲ್ಯ ಪಡಸಾಲ್ಯಕ ವಳ್ಳಿ ಬಂದು ಕುಂತುಬುಟ್ಯ. ಯಾವಾಗ ನಾನು ಬಂದು ಕುಂದ್ರಾದನ್ನ ಮೇಘ ನೋಡಿಬುಟ್ಟನೋ ಹೇ ಶಿವ್ವಾ ನೀನಾ ಹೇಳು ಈ ಬೋಸುಡಿಕ್ಯ ಈಟಕಂದು ಮಾತಾಡ್ತಾನಲ್ಲಪ್ಪಾ, ಮತ್ಯಾಕ ಈಗ ಅರವತ್ತೆಪ್ಪಕ್ಕಾ ನೆಗದು ಬೀಳ್ತಾರಂತ್ಯಪಾ? ಈಗ ಬದ್ಕಿರಾ ಹಳೇ ಕಾಲ್ದಾರನ್ನ ಬುಡು ಅವ್ರೆಲ್ಲಾ ಗಟ್ಟಿ ಪುಡ್ ಮೇದಿರಾರು. ಎಲ್ಡನೇ ಜನರೇಷನ್ನು ಟೊಳ್ಳು ಯಾಕಾತಪಾ ? ಫಿಟ್ ನೆಸ್ ಪುಡ್ ಸಿಕ್ಕಾ ಇಲ್ಲ. ಅದನ್ನ ಒಪ್ಪಿಗಣಾಕ ಈ ಮಗಾ ತಯಾರಿಲ್ಲ. ಅಂತ ಜೋರು ದನಿಲೆ ನನ್ನ ಪ್ರಶ್ನಿ ಕೇಳಿಕ್ಯಂತ, ಮಲ್ಲಿ ಕಡಿಗ್ಯ ತಿರುಗಿ ಹ್ಞೂಂ, ಆತಲೇ ಹಂಗಾರ ನಿಂದು ದೇಶ ಮುಂದೋಗಕತ್ತೈತಲ್ಲಪಾ ಹಂಗಾರ ಒಟ್ಟು ಎಲ್ಲಾ ಹಳ್ಳಿಗುಳಾಗೂ ರೈತಾಪಿ ಜನಗಳು ಪಸ್ಟು ಚೊಲೋ ಇದ್ರೋ ? ಈಗ ಬೇಸದರೋ ? ಅದನ್ನೇಳು. ಹಿಂದಕ್ಕ ಹೊಲದ ತುಂಬಾ ತಿಪ್ಪಿ ಗೊಬ್ಬರನಾ ಕಾಲಾಡಿ ಬೆಳಿತಿದ್ರಲ್ಲಾ ಅವಾಗ ಬೆಳಿ ಹೆಂಗ ಬರಾದು ? ನೀನು ಮುಂದುವರಿಯಾಕು ಅಂತ ಕಂಪನಿ ಇಸಗೊಬ್ಬರಾ ತಂದು ಹಾಕಿದ್ರ್ಯಲ್ಲ, ಅವಾಗ ಬೆಳಿ ಹೆಂಗ ಬರಾಕತ್ತೀದ್ವು ? ಬೇಕಾರ ಸಾಕ್ಷೀನ ಶಿವ್ವಾರ ಅಮ್ಮನ್ನಾ ಕರದುಬುಡಾನು ಅಂತೇಳಿ ಅಂಗಳದಾಗ ಬೇವಿನ ಮರದ ನೆಳ್ಳಿಗ್ಯ ಕುಂತಿದ್ದ ನಮ್ಮಮ್ಮನಕಡಿಗ್ಯ ಕೈ ಮಾಡಿ ಮೇಘ ಪ್ರಶ್ನಿಗಳನ್ನ ಕೇಳಾಕ ಚಾಲೂ ಮಾಡೇಬುಟ್ಟ.
2005 ರ ಇಂಥದ್ದಾ ಒಂದು ಬ್ಯಾಸಿಗಿ ಮದ್ಯಾಹ್ನ ನಡದ ಒಂದುವರೆ ತಾಸಿನ ಜಗಳದಾಗ ಎಂತೆಂಥಾ ವಿಚಾರಗಳು ಬಂದು ಹೋಗಿಬುಟ್ವು ರೀ… ಅವತ್ತು ಇವರಿಬ್ರ ಬಾಯಿಗದ್ಲ ಜೋರಾಗಿ ಮನಿ ಹೊರಾಗಿಂದ ನಮ್ಮಮ್ಮ ಎದ್ದು ಬಂದು ಅಕಿಗ್ಯ ತಿಳಿದಿದ್ದು ಆಕಿ ಹೇಳಿ, ಮೇಘನ್ನೂ ಮಲ್ಲಿನೂ ನಾನು ತಣ್ಣಗ ಮಾಡಿ ಹೆಂಗ ಮತ್ಯ ನಾವು ಗೆಣಕಾರ್ರೇ ಆಗಿ ಉಳಕಂಡ್ವಿ ಅನ್ನದನ್ನ ಮುಂದಿನ ವಾರದಾಗ ಮುಗಿಸ್ತೀನಿ ಬುಡ್ರೀ…






ಏನ ಚಂದ ಬರೀತಿಯೋ ಶಿವೂ… ! ಖರೇವಂದ್ರೂ ಇದು ಜವಾರಿ ಜವಾರಿ ಝಲಕ… ! ಮೆಲ್ಲಕ ಮೆಲ್ಲಕ ಮೈತುಂಬ ಜಳಕ…!
ಶಿವೂ ಚೆನ್ನಾಗಿದೆ