ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜವ್ವಾರಿ ಝಲಕ್ – ಉಗಾದಿ ಬ್ಯಾಟಿ ಊಟದ ಜತಿಗ್ಯ ಮುಗಿತೈತಿ

ಹನ್ಮಪ್ಪನ ಗೋಪುರದ ಕಳಸ ಮಿರಿ ಮಿರಿ ಮಿಂಚಾಕತೈತಿ ಅಂದ್ರ..

– ಶಿವು ಮೊರಿಗೇರಿ

ಬ್ಯಾರೆ ದಾರಿನಾ ಇಲ್ಲ. ಈ ಸರತಿ ನಾನು ನಮ್ಮೂರ ಉಗಾದಿ ಬಗ್ಗೆನಾ ಬರಿಬೇಕು ಅಂತ ಯೋಚನಿ ಮಾಡಿಕಂತ ಕುಂತ್ರ, ಈ ಉಗಾದಿ ಆಚರಣಿಯ ಅರ್ಧ ನೆನಪಾತು, ಇನ್ನರ್ಧ ಕೈ ಕೊಡ್ತು. ಥೂ ನೌನು ಏನಪ್ಪಾ ಮಾಡಾದು ಅಂತ ಯೋಚ್ನಿ ಮಾಡತಿದ್ದಂಗನಾ ನನಿಗ್ಯ ನಮ್ಮ ಅಕ್ಕಿ ನಾಗನ ನೆನಪಾತು. ಈ ಅಕ್ಕಿ ನಾಗರಾಜ ನನ್ನ ತಮ್ಮನ ಗೆಣೆಕಾರ. ತನ್ನ ಇಪ್ಪತ್ತನೇ ವಯಸ್ಸಿಗೇ ತಂದೆ ತಾಯಿಗಳನ್ನ ಕಳಕಂಡ್ರೂ ದುಡುದು ಬದುಕೋದು ನನಿಗ್ಯ ಗೊತ್ತೈತಿ ಅಂತ ನಾಕು ಜನಕ್ಕ ತೋರಿಸಿ ಕೋಟ್ಟೋನು. ಎಲ್ಲಾ ಬುಟ್ಟು ನಾನ್ಯಾಕ ಉಗಾದಿ ಬಗ್ಗೆ ತಿಳಕಣಾಕ ಇವನಿಗೇ ಪೋನ್ ಮಾಡಿದೆ ಅಂದ್ರ ಇವನು ಹನ್ಮಪ್ಪನ ಹೊತ್ತಂತ ದಾಸಪ್ಪ.

ಈ ದಾಸಪ್ಪಗಳು ಅಂದ್ರ ಉಗಾದಿ ಪಾಡ್ಯದ ದಿನಾ ಹನ್ಮಪ್ಪನ ಗುಡಿಯಾಗ ‘ಹನ್ಮಪ್ಪನ ಮುದ್ರಿ’ ಹಾಕಿಸ್ಕಂಬೇಕು. ಅದು ವಾಲ್ಮೀಕಿ ಮತ್ತು ಬಾರಿಕ ಜನಾಂಗಕ್ಕ ಬಿಟ್ರ, ಬ್ಯಾರೆ ಯಾವ ಜನಾಂಗದೋರು ದಾಸಪ್ಪಗಳಾಗಿಲ್ಲ. ಆಗೋಕ್ಕೂ ಬರಲ್ಲಂತೆ. ಈ ಎರೆಡೂ ಜನಾಂಗದ ಮನಿಗಳಾಗ ಹರೇದ ಗಂಡು ಮಕ್ಳಿಗೆ ಮುದ್ರಿ ಹಾಕ್ಸಿದ್ರ ಅರ್ಧ ಮದ್ವಿ ಆದಂಗ ಅನ್ನೋದು ಅವರ ನಂಬಿಕಿ ಐತಿ. ಇನ್ನು ‘ಮುದ್ರಿ’ ಹಾಕಸದಿದ್ರ ಮದ್ವಿಯಾಗಾಕ ಬರಲ್ಲ ಅನ್ನೋ ನಡಿನಾ ನಡೆಸಿಗೊಂಡು ಬಂದಿರಾ ಮನ್ತೆನಗಳೂ ನಮ್ಮೂರಗದಾವು. ಮುದ್ರಿ ಹಾಕಿಕ್ಸಣಾ ವ್ಯಕ್ತಿಗೆ ಬೀಗ್ರು ಆಗೋರು ಬಟ್ಟಿ, ಗೋಪಾಳ, ಜಾಗಟಿ, ಶಂಖ ತರತಾರ. ಪಾಡ್ಯದ ದಿನ ಮನ್ಯಾಗ ಮೈ ತೊಕ್ಕೊಂಡು ಹೊಸ ಬಟ್ಟಿ ಉಟ್ಕೊಂಡು ಗುಡಿಯೊಳಗ ಹೋಗಿಂದಾಗ, ಪೂಜಾರ್ರು ‘ ನೋಡಪಾ ನೀನು ಹನ್ಮಪ್ಪನ್ನ ಹೊತ್ಗಂತಿ, ಧರ್ಮಕ್ಕ ನಡಕಾಬೇಕು, ವಾರಾ ಶನಿವಾರ ಒಪ್ಪತ್ತಿರಬೇಕು. ಹನ್ಮಪ್ಪನ ಸೇವಾ ಮಾಡಬೇಕು ಅಂತ ಬುದ್ಧಿಮಾತು’ ಹೇಳಿ ಆ ವ್ಯಕ್ತಿಯ ಅಂಗಿ ಬಿಚ್ಚಿ ಎರೆಡೂ ಬುಜಕ್ಕ ಎಣ್ಣಿ ಸವರಿ ಎರಡೂ ಕಡೆ ವೀಳ್ಯದೆಲಿ ಇಟ್ಟು ಎಲಿಮ್ಯಾಗ ಸುಣ್ಣಾ ಸವರಿ, ಕೆಂಡದಾಗ ಕೆಂಪಗೆ ಕಾದಿರೋ ‘ಶಂಖ, ಚಕ್ರ ಗುರುತಿನ’ ಮುದ್ರಿಕೆಗಳನ್ನ ಎರೆಡೂ ಬುಜಕ್ಕೆ ಒತ್ತಿಬುಡ್ತಾರ. ಅವತ್ತಿನಿಂದ ಆ ವ್ಯಕ್ತಿ ‘ದಾಸಪ್ಪ’ ಅನ್ನಿಸ್ಕೋತಾನ.

ಮುದ್ರಿ ಹಾಕಿಸ್ಕೊಂಡ ದಿನಾ ಅಥವಾ ಮಾರನೇ ದಿನಾ ಹೊಸಾ ಗೋಪಾಳ ತಗೊಂಡು ನೇಮಕ್ಕ ಅಂತ ಐದು ಮನಿಗಳ ಮುಂದೋಗಿ ‘ಲಕ್ಷ್ಮೀ ರಮಣ ಗೋವಿಂದಾ ಗೋವಿಂದ’ ಅಂತೇಳಿ ಕಾಣಿಕಾ ಪಡಿತಾರ. ಓದು ಕಲ್ತ ಚಾಲಾಕಿ ಹುಡ್ರು ಈ ವಿಚಾರದಾಗ ನಾಚಿಗಣಾದನ್ನೂ ನಾನು ನೋಡೀನಿ. ನಮ್ಮೂರಾಗ ಜಗ್ಗೂ ಜನ ದಾಸಪ್ಪಗಳು ಅದಾರ ಆದ್ರ ಓಕ್ಳಿಗುಂಡಿನಾ ಬಾಳ ಸಣ್ಣದೈತಿ. ವಯಸ್ಸಾದ ದಾಸಪ್ಪಗಳು ಓಕ್ಳಿ ಕಟ್ಟಿ ಮುಟ್ಟಿ ಕೈ ಮುಗಿತಾರ. ಹರೇದ ದಾಸಪ್ಪಗಳು ಊರ ಜನರೆದುರು ಕಾಯಿ ಹಿಡಿಯಾಕ ಟ್ರೈ ಮಾಡತಾರ.

ಹೌದ್ರೀ, ನಮ್ಮೂರಾಗ ಉಗಾದಿಗೆ ರಂಗು ಬರಾದಾ ಈ ದಾಸಪ್ಪಗಳ ಕಾರ್ಯದಿಂದ. ಉಗಾದಿ ಹಬ್ಬ ಇನ್ನೂ ನಾಕುದಿನ ಮುಂದೈತಿ ಅಂದಾಗ್ಲೇನಾ ನಮ್ಮೂರಿನ ವಡ್ರ ಶಿವ್ವಾ, ಕುಡುಕಿ, ಹೇಮ, ಇವರೆಲ್ಲಾ ಹನ್ಮಪ್ಪನ ಗುಡಿಯ ಕಾಂಪೌಂಡಿಗೆ ಸುಣ್ಣಾ ಬಳಿತಿದ್ರ, ಈ ‘ದಾಸಪ್ಪ’ಗಳು ಗುಡಿಯ ಧೂಳ ಕೊಡವಿ, ತ್ವಲಿ, ಜಂತಿನೆಲ್ಲಾ ತ್ಯಾವದ ಬಟ್ಟೀಲೆ ವಾಣಾ ಮಾಡಿ, ಒಳಗ್ವಾಡಿಗೆ ಬಣ್ಣಾ ಬಳದು, ಬಣ್ಣದಾಳಿನ ಕಟ್ ಮಾಡಿ ಗುಡ್ಯಾಗಿರಾ ಎಲ್ಲಾ ಜಂತಿಗಳಿಗ್ಯ ಹಚ್ಚಿ, ಹನ್ಮಪ್ಪನ ಗುಡಿಗೆ ಕಳಿ ತರ್ತಾರ. ಗುಡಿಯ ಗೋಪುರನಾ ಕ್ಲೀನ್ ಮಾಡಿ ಗೋಪುರದ ಕಳಸಾನ ಹುಂಚೆಣ್ಣು ಸಬ್ಬಿನ ಪುಡಿನೂ ಹಾಕಿ ತಿಕ್ಕಿ ತೊಳದು ಬಂಗಾರದ ಬಣ್ಣಕ್ಕ ತರ್ತಾರ. ಹನ್ಮಪ್ಪನ ಗೋಪುರದ ಕಳಸ ಮಿರಿ ಮಿರಿ ಮಿಂಚಾಕತೈತಿ ಅಂದ್ರ ಉಗಾದಿ ಇನ್ನು ಎಲ್ಡು ಮೂರುದಿನ ಉಳದೈತಿ ಅಂತಾನಾ ತಿಳ್ಕಬೇಕು ನಾವೆಲ್ಲ.

ಹಿಂಗಾ ಗುಡಿನಾ ವಾಣಾ ಮಾಡದೆಲ್ಲಾ ಮುಗಿತಿದ್ದಂಗನಾ, ಹನ್ಮಪ್ಪನ ಗುಡಿ ಪೂಜಾರ್ರು ರಂಗಪ್ಪ ಇಲ್ಲಾಂದ್ರ ಸತ್ಯೆಪ್ಪ ಇವರಿಬ್ರು, ಒಂದು ದೊಡ್ಡ ತಟ್ಟ್ಯಾಗ ಸಣ್ಣ ಬೆಳ್ಳಿ ಹನ್ಮಪ್ಪನ ಮೂರ್ತಿ ಇಟ್ಕಂಡು ಸೆನೆದಾರು ಅಂದ್ರ ವಾಲಗಾದೋರ ಜತಿಗ್ಯ ನಮ್ಮೂರಿನ ಪ್ರತಿ ಮನಿಗೂ ಹೋಗಿ ‘ಲಕ್ಷ್ಮೀ ರಮಣ ಗೋವಿಂದಾ ಗೋವಿಂದಾ…” ಅಂತ ನಿಂದ್ರತಿದ್ದಾಂಗನ, ಮನ್ಯಾಗಿಂದ ಮುತೈದಾರೋ, ಅಸುಮಕ್ಳೋ, ಯಾರಾದ್ರೂ ಬಂದು ಆ ದೇವರ ಮೂರ್ತಿ ಹಿಡಕಂಡಿರಾರ ಕಾಲಿಗೆ ತುಂಬಿದ ಕೊಡದಾಗಿನ ಒಂದು ಚಂಬು ನೀರು ಹಾಕಿ ದೇವರಿಗೆ ತಾಂಬೂಲ,ಕಾಣಿಕೆ, ಮನ್ಯಾಗಿನ ಕಾಳು ಕಡಿ ಕೊಡ್ತಾರ. ಈ ದೇವರ ಹಿಂದೆ ಹನ್ಮಪ್ಪನ ಹೊತ್ತಂತ ‘ದಾಸಪ್ಪಗಳು’ ಶಂಖ, ಜಾಗಟಿ, ಹಿಡಕಂಡು ಮೆರವಣಿಗಿಗ್ಯ ರಂಗು ತರ್ತಾರ.

ಇದು ಉಗಾದಿ ಅಮಾಸಿದಿನ ಜಾಸ್ತಿ ಹುರುಪಿಲೆ ನಡಿತೈತಿ. ಪಾಡ್ಯದ ದಿನ ಬೇಗ್ನತ್ತಿನ ತನಕ ಹನ್ಮಪ್ಪ ಊರೆಲ್ಲಾ ಅಡ್ಡಾಡಿ ಎಲ್ಲಾ ಮನಿಲಿಂದನೂ ಒಂದು ರುಪಾಯಿನಿಂದ ಅವರವರ ಯೋಗ್ತಿ ಅನುಸಾರ ಕೊಟ್ಟಷ್ಟು ಕಾಣಿಕ ಪಡದು ಗುಡಿಯೊಳಗೋಗಿ ಕುಂದ್ರತಾನ. ಉಗಾದಿ ಅಮಾಸಿ ದಿನ ಎಲ್ಲರ ಮನಿಯಾಗೂ ಬೆಳಗಾಮುಂಜಲೆ ನಾಕುವರಿ, ಐದು ಘಂಟೀಗೆ ಎದ್ದು ಮನ್ಯಾಗಿನ್ನ ಎಲ್ಲರೂ ಮೈ ತ್ವಕ್ಕಂಡು, ಮಾವಿನ ತ್ವಳಿನಾ ಮನಿಯ ಎಲ್ಲಾ ಬಾಗಿಲುಗಳಿಗೂ ಕಟ್ಟಿ, ದೇವರ ಪೂಜೆ ಮಾಡಿ ಮನಿ ಹೊಸಲಿಗೆ ಕಾಯಿ ಹೊಡಿತಾರ. ಇದು ವರ್ಷಕ್ಕ ಒಂದಾ ಸರಿ ನಡಸಾ ಕ್ರಮ. ಹಿಂಗ ಪೂಜೆ ಮುಗಿತಿದ್ದಂಗನಾ ಎಲ್ಲರ ಮನಿಗಳ ಒಲಿಮ್ಯಾಗ ದ್ವಾಸಿ ಹಂಚು ರೆಡಿಯಾಕ್ಕಾವು.

ಮೊದ್ಲೆಲ್ಲಾ ಗೋದಿ ದ್ವಾಸಿ ಹೊಯ್ತಿದ್ದರಂತೆ, ಇತ್ತಿತ್ಲಾಗ ಕಾಲ ಬಾಳಾ ನಾಜೂಕಾಗಿ ಗೋದಿ ದ್ವಾಸಿ ಬದ್ಲು ಅಕ್ಕಿ ದ್ವಾಸಿ ಹೊಯ್ತಾರ. ಅದನ್ನಾ ದೇವರಿಗೆ ಹೆಡಿ ಹಿಡಿತಾರ. ಅವತ್ತು ಇಡೀ ದಿನ ಹನ್ಮಪ್ಪನ ಸೇವಾಕ್ಕ ರೆಡಿಯಾಕ್ಕಾರ. ಅಮಾಸಿ ಮುಗದ ತಿರುಗ ದಿನ, ಪಾಡ್ಯ ಇರ್ತೈತಿ. ಅವತ್ತು ಮುಂಜಾನೆ ನಮ್ಮೂರಿನ ಬಾಳ ಜನ ಎದ್ದು ರತ್ನಪಕ್ಷಿ (ಕೆಂಬೂತ) ಹುಡಿಕ್ಕಂಡು ಹೊಕ್ಕಾರ. ಅವತ್ತು ಈ ರತ್ನಪಕ್ಷಿನ ನೋಡಿದೋರಿಗೆ ಇಡೀ ವರ್ಸಾ ಲಕ್ಕು ಕುದ್ರತೈತನ್ನೋ ನಂಬಿಕೆ ಐತಿ. ನಾನೂ ಒಂದೆಲ್ಡು ವರ್ಸಾ ಟ್ರೈ ಮಾಡಿನಿ. ಬಿಡಿದಿನದಾಗ ತಂಬಿಗಿ ತಗಂಡು ಬೈಲಿಗೋದ್ರ ಬೇಲಿಸಾಲಾಗ ನಾಕಾರು ರತ್ನಪಕ್ಷಿಗಳು ಇದ್ರೂ ಈ ಪಾಡ್ಯದ ದಿನ ಮಾತ್ರ ಅವನ್ನ ಹುಡಿಕ್ಕಂಡು ಕಾಡೆಲ್ಲಾ ಸುತ್ತಿದ್ರೂ ಕಾಣ್ಸದಾ ಇಲ್ಲ.

ಹಂಗೇನರಾ ಹುಡುಕಾಕೋದಾರಿಗೆ ರತ್ನಪಕ್ಷಿ ಕಂಡ್ರ ಕೈ ಮುಗಿದು ಹಿಗ್ಗಿಲೆ ಮನಿಗ್ಯ ಬಂದು ದೇವರಿಗೆ ಕೈ ಮುಗುದು, ಓಣಿತುಂಬಾ ‘ನನಿಗ್ಯ ರತ್ನಪಕ್ಷಿ ಕಂಡೈತ್ರಲೇ’ ಅಂತ ಹೇಳ್ಕೋತಾರೆ.ಎಲ್ಲರೂ ಅವರವರ ಮನ್ಯಾಗಿರಾ ಶಾವಿಗಿ, ಸವತಿಬೀಜ, ಮಾಡಿಕಂಡು ಬೆಲ್ಲದಾಲು ಮಾಡಿಕಂಡು ದೇವರಿಗೆ ಹೆಡಿ ಹಿಡಿಯಾತ್ಗೆ, ಮನ್ಯಾನಾರೆಲ್ಲಾ ಬೇವಿನ ಎಲಿ, ಹೂಗಳನ್ನ ನೀರಿಗಾಕ್ಕಿ ತೆಲಿಸ್ನಾನ ಮಾಡ್ತಾರ. ಅದನ್ನ ಬೇವು ಹೆರಕಣಾದು ಅಂತ ಕರಿತಾರ. ಹಿಂಗಾ ಬೇವು ಹೆರಕಂಡ ಮ್ಯಾಗ ಬೇವುಬೆಲ್ಲದ ಸೂಸ್ಲಪುಡಿನಾ ಊಟದ ಜತಿಗ್ಯ ತಗಂಡು ಉಗಾದಿ ಹಬ್ಬ ಚಾಲೂ ಮಾಡ್ತಾರ.

ಪಾಡ್ಯದ ಮಾರನೇ ದಿನಾ ನಮ್ಮೂರಾಗ ಹಬ್ಬ ಗಾವ್ ಸಡ್ಲಂಗಾಕೈತಿ. ಅಂದ್ರ, ಪಾಡ್ಯದ ತಿರುಗುದಿನ ನಮ್ಮೂರಾಗ ‘ಓಕ್ಳಿ’ ಇರ್ತೈತಿ. ಅವತ್ತು ನಮ್ಮೋಣ್ಯಾಗಲ ಎಲ್ಲಾ ರೈತಾಪಿ ಮನೆಯಾರು, ಅವರವರ ಮನಿ ಹೋರಿಗಳನ್ನ ಸಿಂಗಾರ ಮಾಡಿ ಹನ್ಮಪ್ಪಗ ಹೂವಿನಾರ ಒಪ್ಪಿಸಾಕ ಡ್ರಮ್ಸ್ ಬಡಕೋತ ಊರತುಂಬಾ ಮೆರವಣಿಗಿ ಹೊಕ್ಕಾರ. ಊರೆಲ್ಲಾ ಮೆರವಣಿಗಿ ಹೊಂಡಾಕರ ಓಣ್ಯಾಗಲ ಎಲ್ಲಾ ಎತ್ತುಗಳ ಸಾಲಿನ ಹಿಂದೆ ಒಂದು ಬಂಡಿ ಇರ್ತೈತಿ. ಅದ್ರಾಗ ಒಂದು ಹಂಡೆವು ಇಟ್ಟಗಂಡು ಅದ್ರಾಗ ನೀರು ತುಂಬಿಕಂಡು ಹನ್ಮಪ್ಪನ ಗುಡಿತಾಗ ಮೆರವಣಿಗಿ ಬಂದಾಗ, ಆ ಹಂಡೇದಾಗಿನ ನೀರನ್ನ ಹನ್ಮಪ್ಪನ ಗುಡಿ ಮುಂದಿರಾ ಗರುಡಗಂಬದ ಹಿಂದಿನ ‘ಓಕ್ಳಿ ಗುಂಡಿ’ಗೆ ಸುರುವುತಾರ.

ಅವತ್ತಿಡೀ ದಿನ ನಮ್ಮೂರಿನ ಎಲ್ಲಾ ಬ್ಯಾಸಾಯಸ್ತ್ರು, ಬಂಡಿ ಕಟ್ಟಿಗಂಡು ಕೆರೆನೀರು, ಬೀದಿ ನಲ್ಲಿನೀರು, ತುಂಬಿಕಂಡು ‘ಓಕ್ಳಿ ಗುಂಡಿ’ಗ್ಯ ಮೂರು ಸರತಿ ನೀರು ಹಾಕ್ತಾರ. ಹಂಗ ಸೇವಾ ಮಾಡಿದ್ರ ಅವ್ರು ಅಂದ್ಕಂಡಿದ್ದು ನೆರವೇರತೈತಂತೆ. ಗಡಾನ ಮದ್ವಿಯಾಗ್ಲಪ್ಪಾ ಅಂತ ಬೇಡಿಕಣೋ ಹರೇದ ಹೆಣ್ಣಮಕ್ಳು, ಮಕ್ಳಾಗಪ್ಪಾ ಅಂತ ಮುತ್ತೈದೇರು, ಕಷ್ಟ ಪರಿಹಾರ ಆಗ್ಲಿ ಅಂತ ಯಜಮಾನ್ರು. ಹಿಂಗಾ ಇಡೀ ಊರಾ ಅವತ್ತು ‘ಓಕ್ಳಿ ಗುಂಡಿ’ಗೆ ನೀರು ಹಾಕಿ ಅದನ್ನ ತುಂಬಿಸ್ತಾರ. ಕೆಲ ಹೆಣ್ಮಕ್ಳು ನಡಕೋತ ಕೊಡಪಾನ ಹೊತ್ತಕಂಡು ಮೂರು ಸರತಿ ನೀರು ಹಾಕತಾರ. ಹಂಗಾರ ಈ ‘ದಾಸಪ್ಪ’ನೋರು ? ಉಗಾದಿಯೊಳಗ ‘ಓಕ್ಳಿ’ ದಿನಾನ ಅವರಿಗೆ ಹೀರೋ ಪಟ್ಟ ಸಿಗೋದು.

ಅವತ್ತು ಈ ‘ದಾಸಪ್ಪ’ನೋರು ಮುಂಜಾನಿಲಿಂದ ಉಪವಾಸ ಇರ್ತಾರ. ಮುಂಜಾಲೆ ಕಟ್ಟನ್ಮಂತಪ್ಪಾರ ಹಾಲೇಶ, ಒಡ್ನಳ್ಳಿ ಗಿಡ್ಡ ದುರ್ಗಪ್ಪ, ಡುಬ್ಬದ ಮಹೇಶಪ್ಪ ಈ ನಾಕೂ ಜನ ದಾಸಪ್ಪಗಳು ಪೂಜಾ ಸಾಮಾನನೆಲ್ಲಾ ತಗಂಡು, ‘ಬ್ಯಾಟಿ ಗಿಡ’ ತರಾಕ ಹೊಕ್ಕಾರ. ‘ಬ್ಯಾಟಿ ಗಿಡ’ ಅಂದ್ರ, ನಮ್ಮೂರ ಅಡವಿಯಾಗ ಬೆಳದ ಕಾರೀಕಂಟಿ. ಕಾರಿಮುಳ್ಳಿನ ಗಿಡ ಅದು. ಉಗಾದಿ ಒಂದು ವಾರದ ಮುಂದಾ ಈ ನಾಕೂ ಜನ ಅಡವ್ಯಾಗ ಒಂದು ಗಿಡಾ ಗುರುತು ಮಾಡಿರ್ತಾರ, ಓಕ್ಳಿದಿನ ಆ ಗಿಡಾನ ಪೂಜೆ ಮಾಡಿ ತೆಂಗಿನ ಕಾಯಿಯ ಹಾಲನ್ನ ಗಿಡದ ಸುತ್ತ ಹಾಕಿ ಭರ್ಜರಿ ದೊಡ್ಡ ಮರಾನ ಸುತ್ತು ಬಗದು, ಆ ಗಿಡದ ಒಂದು ಬೇರಿಗೂ ಮುಕ್ಕಾಗದಂಗೆ ತಾಯಿಬೇರು ಸಮೇತ ಕೀಳೊಷ್ಟತ್ಗೆ ಅಲ್ಲಿಗೆ ಇನ್ನೂ ಸ್ವಲ್ಪ ದಾಸಪ್ಪನೋರು ಹೋಗಿರ್ತಾರ, ಎಲ್ಲರೂ ಸೇರಿ ಆ ಬ್ಯಾಟಿ ಗಿಡಾನ ನಮ್ಮೂರ ಬಸಂದೇರ ಗುಡಿತಾಕ ಬರೋತ್ಗೆ ಊರಾಗಿರಾ ದಾಸಪ್ಪಗಳು ಹಿರೇಗೌಡ್ರ ಗುರುವಣ್ಣಾರ ಮನಿಗೋಗಿ ಪೂಜೆ ಮಾಡಿಕಂಡು ಬಂದಿರ್ತಾರ.

ಅದನ್ನ ‘ಗೌಡ್ರಮನಿ ಪೂಜೆ’ ಅಂತ ಕರಿತಾರ. ಅಲ್ಲಿಂದ ಹನ್ಮಪ್ಪನ ಪಲ್ಲಕ್ಕಿನೂ, ನಮ್ಮೂರಿನ ಎಲ್ಲಾ ದಾಸಪ್ಪಗಳು ಅಲ್ಲಿಗೆ ಹೋಗಿರ್ತಾರ. ಆ ಬಾವಿ ಬಸಂದೇರ ಗುಡಿ ಹತ್ರ ಒಂದು ಹನ್ಮಪ್ಪನ ಗುಡಿ ಐತಿ. ಅಲ್ಲಿ ಮತ್ತೊಮ್ಮಿ ‘ಸಂಜೀವ ಮೂರ್ತಿ ಪೂಜಿ’ ಮಾಡಿ ದಾಸಪ್ಪಗಳಿಗೆ ಬಣ್ಣ, ಕೆಮ್ಮಣ್ಣಿನ ಓಕಳಿ ಆಡ್ತಾ ನಮ್ಮೂರ ಬಾಗ್ಲಿಗೆ ಬಂದು ಅಲ್ಲಿಂದ ಡೊಳ್ಳಿನ ಮೆರವಣಿಗಿ ಮಾಡಿಕಾಂತ ಹನ್ಮಪ್ಪನ ಗುಡಿ ಹತ್ರ ಬ್ಯಾಟಿ ಗಿಡ ಬರೋತ್ಗೆ ಊರಿನ ಎಲ್ಲಾರು ಓಕ್ಳಿಗುಂಡಿ ನೋಡಾಕ ಅಲ್ಲಿಗೆ ಸೇರಿರ್ತಾರ. ಬ್ಯಾಟಿಗಿಡ ಗುಡಿ ಹತ್ರ ಬರ್ತಿದ್ದಂಗನಾ ಗುಡಿ ಪೂಜಾರಿ ರಂಗಪ್ಪ ಮುಳ್ಳು ಪವಾಡ ಮಾಡ್ತಾನ ಆದ್ರ ಯಾವ ಹೇಳಕೀನೂ ಹೇಳಲ್ಲ. ಪವಾಡ ಮುಗಿದ ಮ್ಯಾಗ ಬ್ಯಾಟಿ ಗಿಡ ಹನ್ಮಪ್ಪನ ಗುಡಿನಾ ಮೂರು ಸುತ್ತು ಸುತ್ತಿಸಿ ಒಂದು ಕಡಿಗ್ಯ ತೆಗದಿಟ್ಟು ಎಲ್ಲಾ ದಾಸಪ್ಪಗಳು ಗುಡಿ ಪೂಜಾರಿ ಮನಿಗೋಗಿ ಅಂಬ್ಲಿ, ಬೆಲ್ಲದಾಲು ತಿಂದು ಓಕ್ಳಿ ಆಡಾಕ ಬರ್ತಾರ.

ಅಷ್ಟೊತ್ತಿಗೆಲ್ಲಾ ಓಕ್ಳಿಗುಂಡ್ಯಾಗ ಒಂದು ಕಾಯಿನ ತೆಳ್ಳನ ಹಗ್ಗದಿಲೆ ಕಟ್ಟಿ ಓಕ್ಳಿಗುಂಡಿ ಮಗ್ಗಲಾಗಿನ ಮನಿ ಮಾಳಿಗಿ ಮ್ಯಾಗ ಕೊಟ್ರೇಶಣ್ಣ ಹಿಡಕಂಡು ಆಟ ಆಡಿಸಾಕ ರೆಡಿಯಾಗೇ ಇರ್ತಾನ. ಅವಾಗ ಹನ್ಮಪ್ಪನ ಪಲ್ಲಕ್ಕಿ ಓಕ್ಳಿಗುಂಡಿನಾ ಮೂರು ಸುತ್ತು ಪ್ರದಕ್ಷಿಣಿ ಹಾಕಿ ಪಲ್ಲಕ್ಕಿ ಒಳಗಿನ ಹನ್ಮಪ್ಪನ ಮೂರ್ತಿನ ಓಕ್ಳಿಗುಂಡಿ ಹತ್ರ ತಂದು ಪೂಜಾರ್ರು ಓಕ್ಳಿಗುಂಡ್ಯಾಕ ಇಳಿದು ಪೂಜಾ ಮಾಡಿ. ಬರ್ತಾ ಇದ್ದಂಗನಾ ಸುಮಾರು 70 ರಿಂದ 80 ದಾಸಪ್ಪಗಳು ಆ ಓಕ್ಳಿ ಗುಂಡಿ ಕಟ್ಟಿ ಹತ್ತಿ ನಿಂದ್ರತಾರ. ಅವಾಗ ಕೊಟ್ರೇಶಣ್ಣ ದಾಸಪ್ಪಗಳು ಕಟ್ಟಿ ಹತ್ತತಿದ್ದಂಗನಾ, ಕಾಯಿನ ಮೂರು ಸರತಿ ಓಕ್ಳಿಗುಂಡ್ಯಾಗ ಮುಳಗೇಳಸಿ ಅವರ್ಯಾರಿಗೂ ಸಿಗದಷ್ಟು ಮ್ಯಾಲೆತ್ತಿಗಂತಾನ.

ಆ ಕಾಯಿ ಹಿಡಿಯಾಕ ಎಲ್ಲಾ ದಾಸಪ್ಪಗಳೂ ಟ್ರೈ ಮಾಡ್ತಾರ ಕೊಟ್ರೇಶಣ್ಣ ಕಾಯಿನ ತೆಳಕ ಬುಡಾದು ಮ್ಯಾಕ ಎಳಕಣಾದು ಮಾಡಿದ್ರಾ, ದಾಸಪ್ಪಗಳು ಕಾಯಿ ತೆಳಾಕ ಬರಾದು ನೋಡಿ ಹಿಡಿಯಾಕ ಜಂಪ್ ಮಾಡಿ ಓಕ್ಳಿಗುಂಡ್ಯಾಕ ಬೀಳ್ತಾರ. ಹೊತ್ತು ಮುಣಗಿ ನಸುಗತ್ತಲು ಬರೋವರಿಗೂ ಆಡ್ಸಿದ ಮ್ಯಾಗ ಕೊಟ್ರೇಶಣ್ಣ ಕಾಯಿನ ತೀರಾ ತೆಳಕ ಬುಡಾಕ ಚಾಲೂ ಮಾಡಿದ ಮ್ಯಾಗ ಯಾದಾರ ಒಬ್ಬ ದಾಸಪ್ಪ ಅದನ್ನ ಜಂಪ್ ಮಾಡಿ ಹಿಡಕೋತಾನ. ಎಲ್ಲರೂ ಕೇಕಿ ಹೊಡದು ಆ ಕಾಯಿ ಹಿಡದ ದಾಸಪ್ಪನ ಹೊತ್ಗಂಡು ಅವರ ಮನಿಗ್ಯ ಮೆರವಣಿಗಿ ಮಾಡ್ಕೋತ ಕರ್ಕೋಂಡು ಹೊಕ್ಕಾರ. ಯಾವ ಓಣಿಯ ದಾಸಪ್ಪಗ ಕಾಯಿ ಸಿಗತೈತೋ ಆ ವರ್ಸ ಅದಾ ಓಣಿಗ್ಯ ಬಲತ್ಕಾರ ಜಾಸ್ತಿ ಸಿಗತೈತಿ ಅಂತ ಮುಪ್ಪಾನ ಮುದುಕ್ರೂ ಕೂಡಾ ಹೇಳ್ತಾರ. ಒಂದು ವರ್ಸ ಕಾಯಿ ಬುಡಾಕ ಹುಗಿದಿದ್ದ ಗೂಟ ಮುರುದು, ಕಾಯಿ ಯಾರಿಗೂ ಸಿಗದಿದ್ದಕ, ಅದನ್ನ ಜನಾ ಗದ್ಲಾ ಮಾಡಿ ಹನ್ಮಪ್ಪನ ಗುಡಿಗ್ಯ ಕಟ್ಟಿದ್ರು, ಆ ವರ್ಸ  ‘ಹನ್ಮಪ್ಪ  ಬಲತ್ಕಾರನಾ ಯಾರಿಗೂ ಕೊಡ್ಲಿಲ್ಲಲೇ ತಾನಾ ಉಳಿಸ್ಕಂಡುಬುಟ್ಟ’ ಹುಡ್ರು ನಕಲಿ ಮಾಡತಿದ್ರು. ದಾಸಪ್ಪಗಳು ಆಕಡೆ ಹೋದ ಕೂಡ್ಲೆ ,ಇತ್ಲಾಗ ಮಂದಿ ಮುಗಲಾಗ ತೆಳ್ಳನ ಗೆರಿ ಮೂಡಿದಂತಾ ಚಂದಪ್ಪನ ನೋಡಿ ಒಬ್ಬರಿಗೊಬ್ರು ಕಾಲಿಗೆ ಬೀಳ್ತಾರ.

ಈ ಓಕ್ಳಿಗುಂಡಿ ಮುಗದ ಮಾರನೇ ದಿನ ಎಲ್ಲಾ ದಾಸಪ್ಪಗಳು, ಯುವಕರೂ ಸೇರಿ ನಮ್ಮೂರ ಅಡವಿಯೊಳಗ ಬ್ಯಾಟಿ ಆಡಾಕ ಹೊಕ್ಕಾರ ಇಡೀದಿನ ಅಡವಿನೆಲ್ಲಾ ಶೋಧ ಮಾಡಿ ಮೊಲಗಳನ್ನ ಬ್ಯಾಟಿ ಆಡಿಕಂಡು ರಾತ್ರಿಗೆ ಊರತುಂಬಾ ಮೆರವಣಿಗಿ ಮಾಡಿ ತಳವಾರೋಣ್ಯಾಕೊಯ್ದು, ಬ್ಯಾಟಿಗೆ ಸಿಕ್ಕ ಮೊಲಗಳನ್ನ ಬ್ಯಾಟಿಗೆ ಭಾಗವಹಿಸದೊರಿಗೆಲ್ಲಾ ಪಾಲು ಹಂಚಿ, ಒಂದು ಪಾಲನ್ನ ಅಡುಗಿ ಮಾಡಿ ಹನ್ಮಪ್ಪಗ ನೈವೇಧ್ಯ ಮಾಡ್ಕಂಡು ಬರ್ತಾರ !

ಪೋನಿನೊಳಗ ಅಕ್ಕಿ ನಾಗ ಈ ಮಾತನ್ನ ಹೇಳತಿದ್ದಂಗನಾ ನನಿಗೆ ಷಾಕಾತು. ನಾನುಟ್ಟಿ ಬೆಳದ ನಮ್ಮೂರ ಹನ್ಮಪ್ಪಗ ಬ್ಯಾಟಿ ನೈವೇದ್ಯ ಅಕೈತಿ ಅನ್ನಾ ಇಚಾರಾನಾ ನನಿಗ್ಯ ಗೊತ್ತಿದ್ದಿಲ್ಲ. ಬ್ಯಾಟಿ ಗಿಡದಿಂದ ಚಾಲೂ ಆದ ಉಗಾದಿ ಬ್ಯಾಟಿ ಊಟದ ಜತಿಗ್ಯ ಮುಗಿತೈತಿ. ಹಬ್ಬೆಲ್ಲಾ ಮುಗದ ಮ್ಯಾಗ ಹನ್ಮಪ್ಪನ ಗುಡಿಯಾಗ ಬಣಕಾರ್ರು. ಹನ್ಮಪ್ಪಗ ಊರಿನ ಜನ ಕೊಟ್ಟಿದ್ದ ಕಾಳು ಕಡಿನೆಲ್ಲಾ ಹರಾಜು ಹಾಕಿ ಬಂದ ರ್ವಕ್ಕಾನ ಗುಡಿ ಜೀರ್ಣೋದ್ಧಾರಕ್ಕ ಬಳಸ್ಗೋತಾರ. ಇಂಥಾ ಉಗಾದಿ ನೋಡಾಕ ಹೊಟ್ಟಿಪಾಡಿಗೆ ಊರುಬುಟ್ಟೋದ ನಮ್ಮೂರ ಜನರೆಲ್ಲಾ ಹಿಗ್ಗಿಲೆ ಹಿಂತಿರುಗಿ ಹಬ್ಬ ಮಾಡ್ತಾರ.

‍ಲೇಖಕರು avadhi

6 April, 2013

4 Comments

  1. Ambresh nayak

    Mana mutti deerga kala, alla! konivargi nenapu uliva ugadi lekhana chalo aithiri guru…

  2. savitri

    Nice narration sir:-)

  3. karunkumar pujar

    lekhana chennagide..

  4. Shashidhar KM

    ಭಾರಿ ಬರ್ದೀರಿ…
    ಭಯಂಕರ ಇಷ್ಟ ಆತು…
    🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading