ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜವಾರಿ ಊಟದ ಗಮ್ಮತ್ತಿನ ಹಿಂದೆ..

ಮಂಜುಳ ಸಿ ಎಸ್

ಧಾರವಾಡದಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿನ ಅಡ್ವೆಂಚರ್ ಕ್ಯಾಂಪ್‌ಗೆ ಭೇಟಿ ನೀಡಿ ಹಾಯಾಗಿ ಪಟ್ಟಣದ ಜಂಜಡದಿಂದ ಬಿಡುಗಡೆ ಬಯಸಿ ಸಾಹಸಮಯ ಕ್ರೀಡೆಗಳ ಕೃತಕ ಆಟೋಟ ಪೀಠೋಪಕರಣಗಳ ಎಣಿಸಿ ಬಂದವರಿಗೆ ಸುಂದರ ನಿಸರ್ಗ ಪ್ರಕೃತಿ ಕೈಬೀಸಿ ಕರೆಯಲು ಮನಸ್ಸು ಮುದಗೊಳ್ಳುವುದು ಸಹಜ.

ಹಲವಾರು ಆಟೋಟಗಳ ಆಡಿ ನಲಿದು ದಣಿವಾಗಲು ಮಧ್ಯಾಹ್ನ ಊಟದ ಹೊತ್ತಿಗೆ ಪಕ್ಕಾ ಉತ್ತರ ಕರ್ನಾಟಕದ ಅಡುಗೆಯ ಘಮಲು ನಮ್ಮನ್ನು ಕರೆಯತೊಡಗುತ್ತದೆ. ಇದು ಬೊಪೆ ಸಿಸ್ಟಮ್ ಅಂದುಕೊಂಡು ನಾವು ಊಟದ ಸರತಿಯಲ್ಲಿ ನಿಂತರೆ ಎದುರಿಗೆ ಸಾಲಾಗಿ ಮಣ್ಣಿನ ಮಡಕೆಗಳಲ್ಲಿ ತುಂಬಿಟ್ಟ ಆಗತಾನೆ ಒಲೆಯಿಂದ ಇಳಿಸಿ ಬಿಸಿಬಿಸಿ ಜವಾರಿ ಊಟ.

ಈ ಜವಾರಿ ಊಟ ಸವಿಯಲು ನೀವೊಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಲೇ ಬೇಕು. ಹಾ ಹಲವು ಬಾರಿ ನೀವು ಇತರ ಸಿಟಿಗಳಲ್ಲಿ ಉತ್ತರ ಕರ್ನಾಟಕದ ಊಟ ಸವಿದಿರ ಬಹುದು ಆದರೆ ಇಲ್ಲಿನ ಜವಾರಿ ಊಟದ ವಿಶೇಷತೆಯೆಂದರೆ ಇಲ್ಲಿನ ಸ್ಥಳೀಯ ಸುಮಾರು ಏಳೆಂಟು ಮಂದಿ ಹೆಣ್ಣು ಮಕ್ಕಳು ಸೇರಿ ಒಲೆಯಿಂದ ಅಪ್ಪಟ ಜವಾರಿ ಊಟವ ತಯಾರಿಸಿ ಉತ್ತರ ಕರ್ನಾಟಕದ ಸೊಗಡಿನ ಊಟ ನಿಮಗೆ ಉಣಬಡಿಸುವ ಪರಿ ನಿಜಕ್ಕೂ ಅಪ್ಪಟ ಉತ್ತರ ಕರ್ನಾಟಕದ ಊಟದ ಪರಿಚಯ ಮಾಡಿಸುವುದುದರಲ್ಲಿ ಅನುಮಾನವಿಲ್ಲ.

ಎರಡೆರಡು ಒಲೆಗಳಲ್ಲಿ ಬೆಳಗ್ಗೆಯಿಂದಲೇ ಸಿದ್ದಗೊಳ್ಳುವ ಹಲವು ಪದಾರ್ಥಗಳು ಒಂದೇ ಎರಡೇ, ಹತ್ತು ಹಲವು. ಖಾರ ಸಿರಿ ರೊಟ್ಟಿ ಪಲ್ಲೇ ಗೊಜ್ಜು ಚಟ್ನಿಪುಡಿ, ಕೆಂಪು ಖಾರ. ಕಣ್ಣರಳಿಸಿ ನೋಡಲು ಅಚ್ಚರಿಯ ಪದಾರ್ಥಗಳು ಸಾಲು ಸಾಲು ನಮ್ಮೆದುರು ಹುರಕ್ಕಿ ಹೋಳಿಗೆ, ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಜುಲ್ಕಾ, ಹಲವು ಚಟ್ನಿ ಪುಡಿ, ಶೇಂಗಾ ಪುಡಿ, ಖಾರವಾದ ಕೆಂಪು ಚಟ್ನಿ, ಪುಲಾವ್, ಅನ್ನ, ರಸಂ, ಮೊಸರನ್ನ, ಹೆಸರುಕಾಳಿನ ಗೊಜ್ಜು, ಹೆಸರುಬೇಳೆಯ ಉಸಲಿ, ಮಜ್ಜಿಗೆ ಸಿಹಿಗೆ ತಾಜಾ ಮಾವಿನ ಹಣ್ಣಿನ ಸೀಕರಣೆ ಒಂದೇ ಎರಡೆ ಸವಿದವನಿಗೆ ಗೊತ್ತು ಈ ಜವಾರಿ ಊಟದ ಗಮ್ಮತ್ತು.

ದೊಡ್ಡ ಅಡುಗೆ ಕೋಣೆಯಲ್ಲಿ ಆರೇಳು ನಾರಿಯರು ಸುಮಾರು ಹತ್ತೂವರೆ ಹೊತ್ತಿಗೆ ಈ ಜವಾರಿ ಊಟದ ತಯಾರಿಯಲ್ಲಿ ತೊಡಗುವುದು; ಮುಖ್ಯ ಅಡುಗೆಯಲ್ಲಿ ಇಬ್ಬರು ಉಳಿದವರು ಸಹಾಯಕ್ಕೆ. ನಿಂತರೆ ಮಸಾಲೆ ಅರೆಯುವ ತರಕಾರಿ ಹೆಚ್ಚಲು, ಖಾರ ರುಬ್ಬಲು, ಹಿಟ್ಟು ತಯಾರಿಸಲು, ಸಲಾಡ್‌ಗೆ ಬೇಕಾದ ಹಲವು ಪದಾರ್ಥಗಳ ಸೇರಿಸುಲು ಮಧ್ಯಾಹ್ನದ ಹೊತ್ತಿಗೆ ಈ ಜವಾರಿ ಊಟ ಸಜ್ಜು.

ಪ್ರವಾಸಿಗರು ಹೆಚ್ಚಾದ ದಿನಗಳಲ್ಲಿ ಹೆಚ್ಚು ತಯಾರಿ ನಡೆಯುತ್ತದೆ. ಆದರೆ ಊಟದ ಪದಾರ್ಥಗಳು ಮಾತ್ರ ಬದಲಾಗುವುದಿಲ್ಲ. ರುಚಿಯೂ ಅಧ್ಬುತ. ಒಮ್ಮೆ ಈ ಜವಾರಿ ಊಟ ಉಂಡವರು ಧಾರವಾಡದ ಪೇಡಾದ ಜೊತೆ ಉತ್ತರ ಕರ್ನಾಟಕದ ಜವಾರಿ ಊಟದ ಘಮಲನ್ನು ತಮ್ಮ ನೆನೆಪಿನ ಬುತ್ತಿಯೊಂದಿಗೆ ಹೊತ್ತೊಯ್ಯುವುದು ಖಚಿತ.

‍ಲೇಖಕರು Admin

9 July, 2021

2 Comments

  1. Jayasrinivasa Rao

    Feeling hungry already … it’s only 8 in the morning … thank you for an engaging article …

  2. Manjula C S

    Thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading