ಜಲಜಾ ಕುಂದಾಪುರ ಅವರ ಕನಸು ನನಸಾಯಿತು..

ಜಲಜಾ ಕುಂದಾಪುರ

ಬಾಲ್ಯದ ನನಸಾಗದು ಎಂದುಕೊಂಡ ಕನಸೊಂದಿತ್ತು. ಚಿಕ್ಕಂದಿನಲ್ಲಿ ‘ಮರೆಯದಿರಿ ಮರೆತು ನಿರಾಶರಾಗದಿರಿ ಒಂದೇ ಒಂದಾಟ ಯಕ್ಷಗಾನ ಬಯಲಾಟ’ ಎಂಬ ಸದ್ದು ನಮ್ಮ ಕಿವಿಗೆ ಬಿತ್ತೆಂದರೆ ಅರೆಬರೆ ಗೀಚಿ ಮನೆಗೆಲಸ ಬೇಗ ಮುಗಿಸಿ ಖಡಕ್ ಕಣ್ಣು ಚಾ ಕುಡಿದು ಹೊದಿಕೆ ಬಗಲಲ್ಲಿ ಹಾಕಿ ಅಕ್ಕಪಕ್ಕದ ಗೆಳತಿಯರ ಜೊತೆಗೆ ಅಮ್ಮನ ಸೆರಗು ಹಿಡಿದು ಬಯಲಾಟಕ್ಕೆ ಹೋಗಿ ಬೆಳಗ್ಗಿನವರಗೆ ಕುಳಿತುಬಿಡುತ್ತಿದ್ದೆವು.

ಆಟದ ಮಧ್ಯೆ ಆಗಾಗ ತೂಕಡಿಸಿದಾಗ ತಲೆಗೊಂದು ಪೆಟ್ಟು ಬಿದ್ದು ‘ಇನ್ನೊಂದ್ಸಲ ಬತ್ತೆ ಅಂಬುಕಿಲ್ಲ ಈಗ್ ಮನಿಕಂಡ್ರೆ’ ಅಂದಾಗ ದಡಬಡ ಎದ್ದು 1 ರೂಪಾಯಿ ನೆಲಗಡಲೆ ತೆಗೆದುಕೊಂಡು ಬೆಳಗ್ಗೆ ತನಕ ಅದನ್ನ ಸ್ವಲ್ಪವೇ ತಿಂದು ಉಳಿಸಿಕೊಂಡು ಮಂಗಳ ಹಾಡುವ ಹೊತ್ತಿಗೆ ಅಯ್ಯೋ ಮುಗಿದೇ ಹೋಯ್ತಾ ಅಂತಾ ಮನೆಕಡೆ ನಡೆಯುತ್ತಿದ್ದೆವು.

ರಾತ್ರಿ ನೋಡಿದ ವೇಷಗಳೆಲ್ಲ ಕಣ್ಣ ಮುಂದೆ ಬಂದು ಒಂದಿನ ಅಮ್ಮನಲ್ಲಿ ಒಂದು ಪ್ರಶ್ನೆ ಕೇಳಿದೆ ‘ಅಮ್ಮ ಇವರೆಲ್ಲ ಎಷ್ಟು ಚಂದ, ಉಡುಗೆಯು ಚಂದ, ಒಡವೆಯು ಚಂದ ಇವರೆಲ್ಲ ಎಲ್ಲಿಂದ ಬರ್ತಾರೆ. ನಮ್ಮನ್ನು ಸೇರಿಸ್ಕೊಳ್ತಾರಾ ಅವರ ಜೊತೆ’ ಅಂತಂದೆ ಅದಕ್ಕೆ ಅಮ್ಮ ‘ಅವರು ನಮ್ಮ ಹಾಗೆ ಬಡವರಲ್ಲ ಯಕ್ಷಲೋಕದವರು ನಿಂಗೆ ಅಲ್ಲೆಲ್ಲ ಹೋಗಿ ಇರೋಕಾಗಲ್ಲ’ ಅಂತ ತಮಾಷೆಗೆ ಹೇಳಿದ್ದುಂಟು ಆದರೆ ನಾನು ಅದನ್ನೇ ನಂಬಿ ಹೇಗಾದರೂ ಮಾಡಿ ಆ ಜಗಕ್ಕೊಮ್ಮೆ ಹೋಗಿ ನೋಡಿ ಬರಬೇಕು ಅಂದ್ಕೊಂಡಿದ್ರು, ಅಲ್ಲೇ ಹಿಂದೆ ಇದ್ದ ಚೌಕಿಯ‌ ವಿಷಯ ಗೊತ್ತಿರಲಿಲ್ಲ.

ಕಾಲ ಕಳೆದಂತೆ ನಿಜವನರಿತು ಒಮ್ಮೆಯಾದರೂ ಜೀವನದಲ್ಲಿ ಒಂದು ಹೆಜ್ಜೆಯಾದರು ಕಲಿತು ಚೌಕಿಯ‌ ಹೊಕ್ಕು ಯಕ್ಷ ವೇಷಧಾರಿಯಾಗಬೇಕು ಎಂಬ ಕನಸ್ಸಿನೊಂದಿಗೆ ಸಮಯಕ್ಕಾಗಿ ಕಾದು ಕುಳಿತಿದ್ದೆ ನಂತರದಲ್ಲಿ ರಂಗಭೂಮಿಗೆ ಕಾಲಿಟ್ಟು ಅಲ್ಲಿಯ ಕೆಲ್ಸದಲ್ಲಿ ನಿರತಳಾಗಿದ್ದೆ ಆದರೆ ಯಕ್ಷಗಾನದ ಒಲವು ಮಾತ್ರ ಹಾಗೆಯೇ ಮುಂದುವರಿದಿತ್ತು. ಹಾಗಿದ್ದಾಗ ಪರಿಚಯವಾದದ್ದು ಯಕ್ಷಗುರು ಶೈಲೇಶ್ ನಾಯಕ್ ತೀರ್ಥಹಳ್ಳಿ. ಅವರೊಂದಿಗೆ ಹಲವು ಬಾರಿ ಅವಕಾಶಕ್ಕೆ ಮನವಿ ಮಾಡಿದ್ದೆ. ಅವರ ಮಾರ್ಗದರ್ಶನದಲ್ಲಿ ಗುರು ಪ್ರಸಾದ್ ಚೇರ್ಕಾಡಿಯವರಲ್ಲಿ ಆನ್ಲೈನ್ ಅಲ್ಲಿ ಕೆಲವು ದಿನ ತರಬೇತಿ ಪಡೆದೆ. ಆಗ ಒಂದು ಶುಭಸುದ್ದಿ ಮಾಸ್ಟರ್ ಶೈಲೇಶ್ ಅವರು ನೀಡಿದ್ದರು.

ಇಷ್ಟು ದೊಡ್ಡ ಪೀಠಿಕೆ ಯಾಕೆಂದ್ರೆ ನನ್ನ ದೊಡ್ಡ ಕನಸು ನನಸಾಗಿದ್ದು ಈಗ ಮತ್ತು ಇಲ್ಲಿ. ಯಕ್ಷಭೀಷ್ಮ ಗುರುಜಿ ಬನ್ನಂಜೆ ಸಂಜೀವ ಸುವರ್ಣ ಹಾಗು ತಂಡ ಹಮ್ಮಿಕೊಂಡ ಯಕ್ಷಗಾನ ಕೇಂದ್ರದ ಸುವರ್ಣ ಮಹೋತ್ಸವದ ಅರ್ಥಪೂರ್ಣ ಆಚರಣೆ. ಇದೆ ಈ ರಾಷ್ಟ್ರಮಟ್ಟದ ಯಕ್ಷಗಾನ ಶಿಬಿರ. ಹಳೆಯ ಹೆಜ್ಜೆಯೊಂದಿಗೆ ಹೊಸ ಹಾದಿಯತ್ತ ಪಯಣ. ಯಕ್ಷಗಾನದ ಕ್ರಿಯೆಗಳನ್ನು ರಂಗದಲ್ಲಿ ಬಳಕೆ, ಅದನ್ನು ರಾಜ್ಯಕ್ಕಷ್ಟೇ ಸೀಮಿತವಾಗಿಡದೆ ದೇಶದೆಲ್ಲೆಡೆ ರಂಗದ ಮೂಲಕ ವಿಸ್ತರಿಸುವ ಹೆಬ್ಬಯಕೆಯಿಂದ ದೇಶದ ರಂಗಕರ್ಮಿಗಳಿಗಾಗಿ ಉಚಿತ ಶಿಬಿರ. ನಿಜಕ್ಕೂ ಇದೊಂದು ಸುವರ್ಣ ಅವಕಾಶವೇ ಸರಿ.

ಅದೊಂದು ಜೀವನದಲ್ಲೇ ಅಧ್ಭುತ ಅನುಭವ, ಮರೆಯದ ದಿನಗಳು, ಶಿಸ್ತಿನ ಪಾಠ, ಆತ್ಮೀಯ ಜನರು ಒಟ್ಟು ೨೦ ದಿನಗಳು ೨ ಸುಂದರ ಕ್ಷಣಗಳಂತೆ ಕಳೆದು ಹೋದ ಮೇಲೆ ಗೊತ್ತಾಗಿದ್ದು ನಾವು ಕೊನೆಯ ಹಂತದಲ್ಲಿದ್ದೆವೆ ಎಂದು. ಬೆಳಗ್ಗಿನ ಶುಭಮುಹರ್ತದಲ್ಲಿ ನಮ್ಮ ಹೆಮ್ಮೆಯ ಗಂಡು ಕಲೆ ಯಕ್ಷಗಾನ ಮೊದಲ ಹೆಜ್ಜೆಯನ್ನು ಇಡುತ್ತ ಹಲವರಿಗೆ ಯಕ್ಷಗುರುವಾಗಿದ್ದ ಸಂಜೀವ ಸುವರ್ಣ ಗುರು ಅವರನ್ನು ನನ್ನ ಗುರುಗಳಾಗಿ ಪಡೆದುಕೊಂಡೆ, ಜೊತೆಗೆ ಗುರು ಕೃಷ್ಣಮೂರ್ತಿ ಭಟ್, ಗುರು ಶ್ರೀಧರ್, ಶೈಲೇಶ್ ಮಾಸ್ಟರ್, ನಿಶ್ವಲ್ ಮಾಸ್ಟರ್, ರೋಹಿತ್ ಮಾಸ್ಟರ್ ಅವರನ್ನು ನನ್ನ ಯಕ್ಷಗುರುಗಳ ಸಾಲಿಗೆ ಸೇರಿಸಿಕೊಂಡೆ.

ನಮ್ಮನ್ನು ಅಷ್ಟು ದಿನಗಳವರೆಗೆ ಸೈರಿಸಿಕೊಂಡು ಅಷ್ಟು ತಾಳ್ಮೆಯಿಂದ ನಗುಮೊಗದಿ ಹೆಜ್ಜೆ ಕಲಿಸುತ್ತ ತಾಳ ಸ್ವರ ಅಭ್ಯಾಸ ಮಾಡಿಸುತ್ತ, ಅಷ್ಟು ಉತ್ಸಾಹಕರಾಗಿ ನಮ್ಮಲ್ಲೂ ಉತ್ಸಾಹ ತುಂಬುತ್ತಿದ್ದ ಎಲ್ಲ ದಿನಗಳು ಅವಿಸ್ಮರಣಿಯವಾದದ್ದು. ಜೊತೆ ಜೊತೆಗೆ ಯಕ್ಷಗಾನ ಉಗಮ, ಸಾಗಿ ಬಂದ ದಾರಿ, ಯಕ್ಷಗಾನದ ಸಂಭಾಷಣೆ ಮತ್ತು ಪದ್ಯ ರಚನೆ, ಭಗವದ್ಗೀತೆ ಸಂವಾದ, ಭೂತ ಆರಾಧನೆ ವಿವರಣೆ ಮತ್ತು ಚಿತ್ರಿಕೆ, ಕರಾವಳಿ ಮತ್ತು ತುಳುನಾಡಿನ ಜಾನಪದ ಕಲೆಗಳು, ಜೀವನ ಮತ್ತು ಕಲೆ, ತೆಂಕುತಿಟ್ಟು ಯಕ್ಷಗಾನದ ವೇಷ, ಮುಖವರ್ಣಿಕೆ ಆಂಗಿಕ ಮತ್ತು ವಾಚಿಕ ಅಭಿನಯದ ಪ್ರಾತ್ಯಕ್ಷಿತೆ ಅಬ್ಬಬ್ಬ ಇನ್ನು ಅದೆಷ್ಟು ವಿಚಾರಗಳ ಬಗ್ಗೆ ದೇಶದ ರಂಗಕರ್ಮಿಗಳಿಗೆ ಜಾನಪದ ಕಲೆಗಳ ತರಭೇತಿ ನೀಡಿ ಹರಡುವಂತೆ ಮಾಡಿದ್ದೂ ಈ ಶಿಬಿರದ ಮುಖ್ಯ ಅಂಗ.

ಹಾಗೆಯೆ RRC ರೀಜನಲ್ ರಿಸರ್ಚ್ ಸೆಂಟರ್ ಎಂಜಿಮ್ ಕಾಲೇಜಿನಲ್ಲಿ ಅಲ್ಲಿದ್ದ ಅಷ್ಟು ದಿನಗಳು ದಿಕ್ಕೊಂದರಂತೆ ತುಳುನಾಡಿನ ಜಾನಪದ ನ್ರತ್ಯ, ಭೂತಕೋಲ, ಕೊರಗಜ್ಜ, ಕೋಟಿಚೆನ್ನಯ, ಸಿರಿಯ ಆಚರಣೆ ಮೂಲ ಕತೆಗಳು, ತುಳುನಾಡ ಹಬ್ಬಗಳು, ಯಕ್ಷಗಾನದ ಅಂದಿನ ಹೆಜ್ಜೆಗಳೊಂದಿಗೆ ಬೆಳೆದು ಬಂದ ಹಾದಿ ಹಾಗೂ ವಿಶೇಷ ವಸ್ತು ವಿಷಯಗಳ ಪರಿಚಯ ಮತ್ತದರ ಡಾಕ್ಯುಮೆಂಟರಿಗಳನ್ನು ದ್ರಶ್ಯದ ಮೂಲಕ ತೋರಿಸಿ ಮತ್ತದರ ವಿವರಣೆಗಳನ್ನು ಅಚ್ಚುಕಟ್ಟಾಗಿ ನೀಡಿದ್ದ ಲಚೇಂದ್ರ ಸರ್ ಮತ್ತವರ ತಂಡಕ್ಕೆ ಕೃತಜ್ಞರು ನಾವು. ಹಾಗೆ ಈ ಅಮೋಘ ತರಗತಿಗಳನ್ನು ನಮಗೆ ನೀಡಿದ್ದಕ್ಕೆ ಮತ್ತೆ ಗುರೂಜಿ ಮತ್ತವರ ತಂಡಕ್ಕೆ ಅಭಾರಿಗಳು.

ಗುರುಕುಲದಲ್ಲಿಯ ಮುಗ್ಧ ಮನಸ್ಸುಗಳ ಪ್ರೇಮದ ಅಪ್ಪುಗೆ, ಸ್ಪೂರ್ತಿ ಮತ್ತು ಪ್ರೀತಿಯೆರೆದ ಗುರೂಜಿ, ನಮ್ಮ ರಾಗಗಳನ್ನು ಕೇಳಿಸಿಕೊಂಡು ನಗುಮೊಗದಿ ಸ್ವರಾಭ್ಯಾಸ ಮಾಡಿಸುದರೊಂದಿಗೆ ಮನೆ ಮಂದಿಯಂತೆ ಕಾಳಜಿ ತೋರುವ ಗುರೂಜಿ ಕೃಷ್ಣಮೂರ್ತಿ ಭಟ್ ಮತ್ತು ಗುರೂಜಿ ಶ್ರೀಧರ್, ಮತ್ತದೇ ತಪ್ಪು ಹೆಜ್ಜೆಗಳ ಹತ್ತು ಸಲ ಹಾಕಿದಾಗೆಲ್ಲ ಸಹಿಸಿಕೊಂಡು ಸಹನೆಯಿಂದ ಹೆಜ್ಜೆ ಕಲಿಸಿದ ಅಷ್ಟು ದಿನವೂ ೨೪/೭ ಏನೇ ಕೇಳಿದರೂ ಎಲ್ಲದಕ್ಕೂ ಸಹಕರಿಸಿದ ಮಾಸ್ಟರ್ ಶೈಲೇಶ್, ಮಾಸ್ಟರ್ ನಿಶ್ವಲ್, ಮಾಸ್ಟರ್ ರೋಹಿತ್, ಹೊಟ್ಟೆ ತುಂಬ ರುಚಿಯೂಟ ನೀಡಿದ ಬಡಿಸುವಾಗಲೂ ಪ್ರೀತಿಯ ಮೊಗೆದು ನೀಡುವ ರಾಮಕೀರ್ತನ ಮತ್ತವರ ತಂಡ, ವಾತ್ಸಲ್ಯ ತುಂಬಿದ ತುಂಬು ನಗುವಿನ ವೇದಕ್ಕ, ಅಕ್ಕರೆಯ ಮಾತಿನ ನಗು ಬೀರುವ ಶಿಶಿರ ಸರ್ ಮತ್ತು ಶಾಂತನು ಸರ್, ಕನಸು ನನಸಾಗುವಲ್ಲಿ ಸಹಕರಿಸಿ ಗೆಜ್ಜೆ ಕಟ್ಟಿದ ಹಾಗು ನಮಗೆಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದ ಅಲ್ಲಿಯವರಾದ ಪರಿಚಯವಿಲ್ಲದೆಯೂ ನಗುವನ್ನು ಧಾರೆಯೆರೆದ, ಹಾರೈಸಿದ ಆಶೀರ್ವದಿಸಿದ ಪ್ರೀತಿ ತುಂಬಿದ ಆತ್ಮೀಯರು, ಮತ್ತು ಸೂರು ನೀಡಿದ ಭವ್ಯ ಕಟ್ಟಡ ಯಕ್ಷಗಾನ ಕೇಂದ್ರ ಮತ್ತು ಅಲ್ಲಿಯ ಪ್ರತಿಯೊಂದು ವಸ್ತು, ಜಾಗ ಮತ್ತು ಸೋನು, ಶಿಬಿರ ಎಲ್ಲವೂ ಎಲ್ಲರೂ ಕೊಟ್ಟ ನೆನಪಿನ ಉಡುಗೊರೆಯೊಂದಿಗೆ ಇಲ್ಲಿಂದ ಮುಂದೆ ಸಾಗುತ್ತ ಈ ಹೆಜ್ಜೆಗಳನ್ನು ಹೊಸ ಹಾದಿಯಲ್ಲಿ ಬಳಸಿಕೊಳ್ಳುವ ಭರವಸೆ ನೀಡುತ್ತಾ ಪ್ರತ್ಯಕ್ಷವಾಗಿ ಪರೋಕ್ಷವಾಗಿಯೂ ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದ ತಿಳಿಸುತ್ತ ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ಮತ್ತು ಮಣಿಪಾಲ ಅಕಾಡೆಮಿ ಒಫ್ ಹೈಯೆರ್ ಎಜುಕೇಶನ್ ( ಮಾಹೆ )ಗೆ ಮತ್ತೊಮ್ಮೆ ಧನ್ಯವಾದ ಸಮರ್ಪಿಸುತ್ತಾ ಹೊರಡುತ್ತಿದ್ದೇನೆ ಮತ್ತೆ ನವ ಕನಸನ್ನು ಹೊತ್ತು ಬರುವೆನೆಂದು ಹೇಳುತ್ತಾ…

‍ಲೇಖಕರು Avadhi

March 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: