
ಡಾ. ಯು ಆರ್ ಅನಂತಮೂರ್ತಿ ಅವರ ಜರ್ಮನ್ ಕತೆಗಳ ಅನುವಾದ ಗ್ರಂಥ ಇವತ್ತು ( ೨೩ ಮಾರ್ಚ್ ೨೦೧೭ ) ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ಸಂಸ್ಥೆಯಲ್ಲಿ ಸರಳ ಸಮಾರಂಭವೊಂದರಲ್ಲಿ ಬಿಡುಗಡೆಯಾಗುತ್ತಿದೆ .
-ಪ್ರೊ ಬಿ ಎ ವಿವೇಕ ರೈ
ಡಾ. ಯು . ಆರ್ ಅನಂತಮೂರ್ತಿ ಅವರ ನಾಲ್ಕು ಕತೆಗಳು , ‘Being a writer in India ‘ ಎನ್ನುವ ಅನಂತಮೂರ್ತಿ ಅವರ ಲೇಖನದ ಜರ್ಮನ್ ಅನುವಾದಗಳ ಜೊತೆಗೆ , ಅನಂತಮೂರ್ತಿ ಅವರ ಬದುಕು ಮತ್ತು ಸಾಹಿತ್ಯವನ್ನು ಕುರಿತು ಪ್ರೊ . ಹೈದ್ರೂನ್ ಬ್ರೂಕ್ನರ್ ಅವರು ಜರ್ಮನ್ ಭಾಷೆಯಲ್ಲಿ ಬರೆದ ಲೇಖನ – ಇವು ಈ ಗ್ರಂಥದಲ್ಲಿ ಸಂಕಲನಗೊಂಡಿವೆ.
ಯೂರೋಪಿನ ಅತ್ಯಂತ ಹಿರಿಯ ಇಂಡಾಲಜಿ ಪ್ರಾಧ್ಯಾಪಕಿ ಹಾಗೂ ಕನ್ನಡ ಮತ್ತು ತುಳು ಭಾಷೆ ಸಾಹಿತ್ಯಗಳಲ್ಲಿ ವಿಶೇಷ ಆಸಕ್ತಿ ಅಭಿಮಾನ ಹೊಂದಿರುವ ವ್ಯೂರ್ತ್ಸ್ ಬುರ್ಗ್ ವಿವಿಯ ಪ್ರೊ.ಹೈದ್ರೂನ್ ಬ್ರೂಕ್ನರ್ ಮತ್ತು ಕನ್ನಡ ಹಾಗೂ ಯಕ್ಷಗಾನಗಳಲ್ಲಿ ಸಮಾನ ಪ್ರಭುತ್ವ ಹೊಂದಿರುವ ಜರ್ಮನ್ ಸಂಶೋಧಕಿ ಡಾ .ಕತ್ರಿನ್ ಬಿಂದರ್ ಅವರು ಅನಂತಮೂರ್ತಿ ಕತೆಗಳನ್ನು ಕನ್ನಡದಿಂದ ನೇರವಾಗಿ ಜರ್ಮನ್ ಭಾಷೆಗೆ ಅನುವಾದ ಮಾಡಿದ್ದಾರೆ .
ಪ್ರೊ. ಬ್ರೂಕ್ನರ್ ಅವರು ‘ಘಟಶ್ರಾದ್ಧ’ ಮತ್ತು ‘ಸೂರ್ಯನ ಕುದುರೆ’ ಕತೆಗಳನ್ನು ಮತ್ತು ಡಾ. ಕತ್ರಿನ್ ಬಿಂದರ್ ಅವರು ‘ಆಕಾಶ ಮತ್ತು ಬೆಕ್ಕು’ ಹಾಗೂ ‘ಮೌನಿ’ ಕತೆಗಳನ್ನು ಜರ್ಮನ್ ಗೆ ಅನುವಾದ ಮಾಡಿದ್ದಾರೆ .
ಅನಂತಮೂರ್ತಿ ಅವರ ಲೇಖನವನ್ನು ಬಿಂದರ್ ಅನುವಾದ ಮಾಡಿದ್ದಾರೆ . ಗ್ರಂಥದ ಕೊನೆಯಯಲ್ಲಿ ಕತೆಯಲ್ಲಿ ಬರುವ ಸಾಂಸ್ಕೃತಿಕ ಪದಗಳಿಗೆ ಜರ್ಮನ್ ಭಾಷೆಯಲ್ಲಿ ಟಿಪ್ಪಣಿಗಳನ್ನು ಕೊಡಲಾಗಿದೆ .
ಅನಂತಮೂರ್ತಿ ಅವರು ಜೀವಂತವಾಗಿ ಇದ್ದಗಲೇ ಪ್ರೊ. ಬ್ರೂಕ್ನರ್ ಅವರು ಘಟಶ್ರಾದ್ಧ ಮತ್ತು ಸೂರ್ಯನ ಕುದುರೆ ಕತೆಗಳ ಜರ್ಮನ್ ಅನುವಾದ ಕರಡು ಸಿದ್ಧಪಡಿಸಿ , ಅವರ ಜೊತೆಗೆ ಮಾತನಾಡಿ ಅವರ ಅನುಮತಿಯನ್ನು ಪಡೆದಿದ್ದರು . ಮತ್ತೆ ಎಸ್ತರ್ ಅನಂತಮೂರ್ತಿ ಅವರಿಗೂ ತಿಳಿಸಿದ್ದಾರೆ .
ಈ ಜರ್ಮನ್ ಅನುವಾದದ ಗ್ರಂಥದ ಪ್ರಕಾಶಕರು ಬರ್ಲಿನ್ ನ ಲೊಟೊಸ್ ವೆರ್ಕ್ ಸ್ಟಾಟ್ . ಇದರ ಮಾಲೀಕರಾಗಿದ್ದ ಬೇಯರ್ ಅವರು ಅನಂತಮೂರ್ತಿಯವರಿಗೆ ಪರಿಚಿತರು ಮತ್ತು ಅವರ ಅಭಿಮಾನಿಯಾಗಿದ್ದರು. ಹಾಗಾಗಿ ಈ ಗ್ರಂಥವನ್ನು ತಾನೇ ಪ್ರಕಾಶನ ಮಾಡುತ್ತೇನೆ ಎಂದು ಪ್ರೀತಿಯಿಂದ ಒಪ್ಪಿಕೊಂಡಿದ್ದರು .
ಆದರೆ ಬೇಯರ್ ಅವರ ಅಕಾಲಿಕ ನಿಧನದ ಬಳಿಕ ಅವರ ಪತ್ನಿ ಮೇರಿ ಬೇಯರ್ ಮತ್ತು ಮಗ ಮಥಿಯಾಸ್ ಬೇಯರ್ ಅವರು ಪ್ರಕಾಶನದ ಋಣವನ್ನು ಪ್ರೀತಿಯಿಂದ ತೀರಿಸಿದ್ದಾರೆ





0 Comments