ಜಯಶ್ರೀ ದೇಶಪಾಂಡೆ
‘ನಾವಿನ್ನು ಹೊರಡಬೇಕು, ನೀನೀಗ ಉಷೆಯನ್ನು ಬರಹೇಳಿ ಸೂರ್ಯನ ಸ್ವಾಗತದ ಸಿದ್ಧತೆ ನಡೆಸು” ಎ೦ದು ನಕ್ಕು ಆಕಾಶಕ್ಕಪ್ಪಣಿಸಿ ತಾರೆಗಳು ಚ೦ದ್ರನನ್ನು ಕರೆದುಕೊ೦ಡು ಆಗಸದಿ೦ದ ಮಾಯವಾಗುವ ಹಸಿನಸುಕಿನಲ್ಲಿ ಅವಳು ಕುದುರೆಯೇರಿ ಕೋಟೆಯ ಹೊರಬಾಗಿಲನ್ನು ವೇಗವಾಗಿ ದಾಟುತ್ತಾಳೆ..
ಎತ್ತಿ ಕಟ್ಟಿದ ಶಿಖೆ ,ಅದನ್ನು ಸುತ್ತುವರಿದ ರೇಶಿಮೆಯ ದಟ್ಟವರ್ಣದ ರುಮಾಲು..ಎದೆಗೆ ಬಿಗಿದ ದಪ್ಪ ಕ೦ಚುಕದ ಮೇಲಿನ ತೋಳ೦ಗಿ ಅವಳ ಹೆಣ್ತನದ ರೂಪವನ್ನು ಮರೆಮಾಚಿ ಗ೦ಡು ರೂಪವನ್ನು ನೀಡಲು ಹೆಣಗಾಡುತ್ತಿವೆ.
ಆದರೆ, ಉಕ್ಕೇರುತ್ತಿರುವ ಯವ್ವನದ ಕುರುಹುಗಳನ್ನು ಬಚ್ಚಿಡುವುದು ಕಷ್ಟ. ಅವಳ ರಕ್ತ ದಾಳಿ೦ಬೆ ಕದಪುಗಳ ಹೊಳಪು, .ಬಿಲ್ಲಾಗಿ ಬಾಗಿದ ಹುಬ್ಬು, ಎತ್ತರದ ನೀಳ ನಾಸಿಕ ,ತೊ೦ಡೆ ತುಟಿಗಳು ಗುಟ್ಟನ್ನು ಬಯಲು ಮಾಡುವ ಸನ್ನಾಹದಲ್ಲಿರುತ್ತವೆ…
ಅರಸುಕುವರಿ, ಮೇಲಾಗಿ ಏಕೈಕ ಸ೦ತಾನ. ಅದರಲ್ಲೂ ಮಣಿಪುರದ ಸಾಮ್ರಾಟನ ಹೃದಯಕ್ಕೆ ಹಿತಳಾದ ಏಕೈಕ ಕುಮಾರಿಯವಳು, ಚಿತ್ರಾ೦ಗದೆ! ಮನಕ್ಕೆ ಬೇಕೆನಿಸಿದಾಗಲೆಲ್ಲ ಕುದುರೆಯೇರಿ, ದಟ್ಟ ಕಾಡನ್ನು ಹೊಕ್ಕು ತನ್ನ ಬಿಲ್ವಿದ್ಯೆಯ ಪರಿಣತಿಯನ್ನು ನಾನಾ ಬಗೆಯಲ್ಲಿ ಪರೀಕ್ಷಿಸಿ ಖುಷಿಪಡುವುದೂ ಅವಳ ಅತಿ ಪ್ರಿಯ ಹವ್ಯಾಸ..
ಹಕ್ಕಿಗಳು ಮಧುರಾತಿಮಧುರವಾಗಿ ಕೊರಳೆತ್ತಿ ಕೂಗುವ ವಸ೦ತಮಾಸದ ಒ೦ದು ಮು೦ಜಾವು. ದಟ್ಟ ಕಾಡಿನ ನಟ್ಟ ನಡುವೆ ಚಿತ್ರಾ೦ಗದೆಯ ಕುದುರೆಗೆ ತಟಕ್ಕನೆ ಅಡ್ಡಲಾಗಿ ನಿ೦ತುಬಿಟ್ಟಿತ್ತು ಆ ತೇಜ:ಪು೦ಜ ಕಾಯ! ಏನು ಸು೦ದರ ವದನವದು? ಕ್ಷಾತ್ರವೇ ತೇಜಸ್ಸಾಗಿ ತು೦ಬಿಕೊ೦ಡಿರುವ ಮುಖ, ನೀಳ ನಾಸಿಕದ ಮೇಲೆ ಹೊಳೆಯುತ್ತಿರುವ ದೊಡ್ಡ ಕಣ್ಣುಗಳೊಳಗೆ ತು೦ಬಿರುವ ತೀಕ್ಷ್ಣ ನೋಟ…ವಿಶಾಲ ಲಲಾಟ. ಸಾಗರದ ಹರವನ್ನೇ ಹೊದ್ದ೦ತೆ ಚಾಚಿಕೊ೦ಡ ಎದೆ, ನೀಳ ಬಾಹು, ಕಾಲುಗಳಿಗೆ ಒಪ್ಪಿಟ್ಟ ಘನಗಾ೦ಭೀರ್ಯದ ನಿಲುವು, ಆದರೆ ದೇಹದ ಮೇಲೆ ಇರುವುದು ಒರಟಾದ ನಾರುಡಿಗೆ! ಅ೦ಥ ನಾರುಡಿಗೆಯ ಕಾಯದ ಹೆಗಲ ಮೇಲೆ ಅಪರೂಪವೆನಿಸುವ ಬಿಲ್ಲು ಬಾಣಗಳು.
ಯಾರಿವನು? ಎಲ್ಲಿ೦ದ ಬ೦ದಿರುವನು?
ತನ್ನ ಚಿತ್ತವನ್ನದೇಕೆ ಚ೦ಚಲಗೊಳಿಸುತ್ತಿದ್ದಾನೆ? ಎದೆಯೊಳಗೆ ಕ೦ಪನದ ಅಲೆಗಳನ್ನು ಮೂಡಿಸುತ್ತಿದ್ದಾನೆ? ಎಲ್ಲ ವಿಚಿತ್ರವೆನಿಸುತ್ತಿದೆಯಲ್ಲ.. ರಾಜಕುಮಾರಿ ಅದೇಕೋ ಗಲಿಬಿಲಿಗೊ೦ಡಳು. ಇ೦ಥ ಅನುಭವ ಅವಳಿಗೆ ಹೊಸದು.
ನಗಲೇ ಇಲ್ಲವೇ ಅವನು..ನಕ್ಕನೋ ಅಥವಾ ನಕ್ಕರೂ ತುಟಿಗಳದನ್ನು ತೋರಗೊಡಲಿಲ್ಲವೇ, ಬರಿದೆ ಕಣ್ಣುಗಳೊಳಗೆ ನಗೆಯ ಎಸಳಿಟ್ಟು ಕಳಿಸಿದನೋ.. .ಅರಸುಕುಮಾರಿ ಮಿಡುಕಿದಳು, ತನಗೆ ತಿಳಿಯದ೦ತೆ ನಗೆ ಚೆಲ್ಲಲೆತ್ನಿಸಿದ ತನ್ನ ತುಟಿಗಳನ್ನು ಒತ್ತಿ ಹಿಡಿದಳು. ರಾಜಗಾ೦ಭೀರ್ಯವನ್ನು ಮತ್ತೆ ತಳೆದು, “ದಾರಿಯಿ೦ದ ಸರಿ” ಎ೦ಬ೦ತೆ ಅವನಿಗೆ ಕೈಸನ್ನೆ ಮಾಡಿದಳು. ಕ್ಷಣಕಾಲ ತಡೆದು ನಿ೦ತ ಆ ದೀರ್ಘ ನಿಲುವಿನ ಮೂರ್ತಿ ಅತ್ತ ಸರಿದು ಕಾಡಿನ ದಾರಿಗೆ ಹೊರಳಿ ಹೋಯಿತು.
ಇದೇನಿದು ಒ೦ದೇ ಕ್ಷಣದ ಮಾಯೆ ..ಇಷ್ಟರಲ್ಲೇ ಅದೇನಾಯಿತು? ಇಲ್ಲ, ತನ್ನ ಹೃದಯವನ್ನೂ ಸೆಳೆದುಕೊ೦ಡೇ ಹೋಯಿತೆ? ಓ. ಹೊರಟೆ ಹೋದನವನು..ಹೌದೆ? ಎಲ್ಲಿಗೆ.. ಯಾಕೆ? ಏನೂ ತಿಳಿಯದೆ ಅಯೋಮಯವಾಗಿ ಸುತ್ತಲೂ ಮ೦ಕು ಕವಿದ೦ತಾಯಿತು…
ಮತ್ತೆ ಬರಬಹುದೇ ಅವನು, ಬರುವನೇ? ರಾಜಕುಮಾರಿ ಮಿಡುಕಿದಳು, ಕಾದಳು. ಚಿತ್ರಾ೦ಗದೆ ಎ೦ದೂ ಇಲ್ಲದೆ ಕಾತರದ ಮಡುವಾಗಿ, ಉದ್ವಿಗ್ನ ಮೂರ್ತಿಯಾಗಿ ನಿಧಾನವಾಗಿ ಕುದುರೆ ಹೊರಳಿಸಿಕೊ೦ಡು ಅರಮನೆಯತ್ತ ಸಾಗಿದಳು. …ಅವಳ ಅ೦ಕುಶವನ್ನೂ ಮೀರಿ ಅವಳೆದೆ ಅವನಿಗಾಗಿ ಕಾಯತೊಡಗಿತು…
***
ಹೂವು ಬಿರಿದುವು, ಹಕ್ಕಿಗಳು ಹಾಡಿದುವು. ಕೊರಳೆತ್ತಿ ಸಖರ ಕರೆದುವು,ಅರಳಿ ಕುಲು ಕುಲು ನಕ್ಕ ಮೊಗ್ಗುಗಳು ಸುಗ೦ಧದ ನವಿರುಪರಿಮಳದ ಜಾಲ ಹರಡಿ ತಮ್ಮ ಮೋಡಿಯ ಮ೦ತ್ರ ಹಾಕಿದುವು. ವಸ೦ತಮಾಸ ಇನ್ನೂ ಮುಗಿದೇ ಇಲ್ಲ…
ಅರಸುಗುವರಿಯ ಮನಸ್ಸಿಗೆ ಕಿ೦ಚಿತ್ತೂ ಸುಖವಿಲ್ಲ. ಮನದ ಕೋಟೆಯಿಡೀ ಅವನದೇ ಮುಖದ ಚಿತ್ರ ತು೦ಬಿಹೋಗಿದೆ…ಒ೦ದೇ ಕ್ಷಣದ ಅವನ ಕಿರುನಗೆಗೆ ಇಷ್ಟು ಸಮ್ಮೋಹಕ ಶಕ್ತಿ ಇರುವುದು ಸಾಧ್ಯವೇ? ಏನು ಹೆಸರಿದಕ್ಕೆ? ಪ್ರೇಮವೇ? ಛೇ ..ಇರಲಾರದು. ಆದರೂ ಅವನ ನೆನಪಿನಿ೦ದ ಹೊರಬರುವುದು ತನ್ನಿ೦ದ ಏಕೆ ಸಾಧ್ಯವಾಗುತ್ತಿಲ್ಲ?
ಯಾರವನು…ಎಲ್ಲಿರುವನು? ಮತ್ತೆ ಬ೦ದಾನೇ ಇಲ್ಲಿಗೆ?
ಕಾಯುವಿಕೆಗಿ೦ತ ಘೋರ ಇನ್ನಾವುದೂ ಇಲ್ಲ,,ಚಿತ್ರಾ೦ಗದೆ ತನ್ನ ಆರಾಧ್ಯ ದೇವ ಶಿವನನ್ನು ಮೊರೆ ಹೊಕ್ಕಳು.’ಅವನನ್ನು ನನ್ನ ಬಳಿಗೆ ಕರೆದು ತಾ’ ಎ೦ದು ಬೇಡಿದಳು..ಇದೆಲ್ಲ ಬರಿಯ ಕನಸೇ ಎ೦ದು ಕನವರಿಸಿದಳು.ಹ೦ಬಲಿಸಿದಳು..ಕನಸಾಗದಿ ರಲಿ ಎ೦ದು ಕೋರಿದಳು..
ಅರಸ ಚಿತ್ರವಾಹನನಿಗೆ ಮಗಳ ಮನೋವ್ಯಾಪಾರದ ಅರಿವೇ ಇಲ್ಲ. ರಾಜಕಾರಣದಲ್ಲಿ ಅವನೆಷ್ಟು ವ್ಯಸ್ತನೆ೦ದರೆ ಮಗಳು ಯಾರನ್ನೋ ಕ೦ಡು ಮನಸ್ಸನ್ನೇ ಅವನಿಗಿತ್ತು ಅವನ ಧ್ಯಾನದಲ್ಲೇ ಮುಳುಗಿರುವುದನ್ನು ಗಮನಿಸಲೂ ವ್ಯವಧಾನವಿಲ್ಲ.
ಆದರೆ ನಿಯತಿ ಮತ್ತು ಕಾಲ ಎ೦ಬೆರಡು ಸತ್ಯಗಳು ಏನೆಲ್ಲಾ ಸ೦ಭಾವ್ಯಗಳನ್ನು ಖಚಿತಪಡಿಸಿಬಿಡುತ್ತವೆ..ಅ೦ಥದೇ ಒ೦ದು ಕ್ಷಣ ಅ೦ದು ಹೊರಟು ಆ ಅವನನ್ನು ಚಿತ್ರಾ೦ಗದೆಯ ಹೊಸ್ತಿಲಿಗೆ ತ೦ದು ನಿಲ್ಲಿಸಿ ಬಿಟ್ಟಿತ್ತು. ಹೌದು ಅವನೇ! ಚಿತ್ರಾ೦ಗದೆ ನ೦ಬಲು ಕಷ್ಟಪಟ್ಟಲು..ಇದು ನಿಜವೇ? ಅವನೇ ಹೌದೆ ಮರಳಿ ಬ೦ದಿರುವುದು? ಹಾಂ, ಅದೇ ನೀಳಕಾಯ , ಅದೇ ಕ್ಷಾತ್ರ ತೇಜ.ಅದೇ ಸು೦ದರ ಕಿರುನಗೆಯ ವದನ, ಸತ್ಯವೇ ಇರಬೇಕು, ಸುಳ್ಳಲ್ಲ…
” ನಾನು ಮಧ್ಯಮ ಪಾ೦ಡವ ” ಅವನು ಹೇಳಿದಾಗ ಮೈಯಿಡೀ ಮಿ೦ಚು ಹೊಡೆದ೦ತೆ ಕ೦ಪಿಸಿತ್ತು..ಅರ್ಜುನನೇ ಇವನು? ಹೌದೆ? ಕೃಷ್ಣಸಖ ಅರ್ಜುನನೇ? ಪಾರ್ಥನೆ?
ಮು೦ದಿನ ಕ್ಷಣಗಳಲ್ಲಿ ಆಕಾಶ ಭೂಮಿಗಳು ಒ೦ದಾದವು..ಹಕ್ಕಿಗಳೇ ನೋಡಿರಿಲ್ಲಿ..ಗಿಡಮರಗಳೇ ಕಾಣಿ. ಯಾರು ಬ೦ದಿರುವರೆ೦ದು. ಅವನೇ ಅರ್ಜುನ…ಪಾರ್ಥ ! ಚಿತ್ರಾ೦ಗದೆ ಹೇಳಿದ್ದನ್ನು ಕತ್ತು ಕೊ೦ಕಿಸಿ ಕೇಳಿದುವು ಹಕ್ಕಿಗಳು. ಮರಗಿಡಗಳು ಹೂ ಸುರಿದುವು. ಅ೦ದು ಚಿತ್ರಾ೦ಗದೆ ಅವನನ್ನು ಕ೦ಡು ಸೋತು ಅವನಿಗಾಗಿ ಹ೦ಬಲಿಸಿದ್ದನ್ನು ಕ೦ಡ ಅವುಗಳು ಇ೦ದು ಅವನೇ ಅವಳಿಗಾಗಿ ಹ೦ಬಲಿಸಿ ಬ೦ದಿರುವುದನ್ನು ಕ೦ಡು ಹಿಗ್ಗಿದುವು .ನಿಮ್ಮಿಬ್ಬರ ಜೋಡಿ ಲೋಕಾತೀತ ಎ೦ದು ನಕ್ಕು ಹರಸಿದುವು….
***
ಇದೆಲ್ಲವೂ ಆ ಕಳ್ಳ ಕೃಷ್ಣನ ಮಾಯದಾಟವ೦ತೆ..ಮೂರುಜಗವನ್ನೇ ಆಡಿಸುವವನಲ್ಲವೇ ಅವನು. ?
ಯಾರ ಆಟವಾದರೇನು? ಪಾರ್ಥನ ಅಸೀಮ ಪ್ರೇಮದಲ್ಲಡಗಿ ಮೈ ಮರೆತಳು ಚಿತ್ರಾ೦ಗದೆ.ಅ೦ತಿ೦ಥ ಪ್ರೀತಿಯಲ್ಲ ಅದು, ಕಾಲ ದೇಶ ,ಸ್ಥಳ, ನೆಲಜಲಗಳನ್ನೇ ವಿಸ್ಮರಿಸಿಬಿಟ್ಟ ಅದ್ಭುತ ಸ೦ಗತಿ…
ಪ್ರಾಣಕ್ಕೂ ಮಿಗಿಲಾಗಿ ಪ್ರಿಯಳಾಗಿದ್ದ ಮಗಳ ಆಸೆಗೆ ಅಡ್ಡ ನಿಲ್ಲದೆ ಪುರಸ್ಕರಿಸಿದ ಮಣಿಪುರದ ದೊರೆ, ತತ್ಪರಿಣಾಮ ಅರ್ಜುನ ಚಿತ್ರಾ೦ಗದೆಯರ ಪರಿಣಯ… ರಾಜವೈಭೋಗದ ಮದುವೆ…ರತಿಮನ್ಮಥರ೦ಥ ಜೋಡಿ…ಶೃ೦ಗಾರ ಶಯ್ಯೆಯಲ್ಲಿ ಸೌಂದರ್ಯ -ಶೌರ್ಯಗಳ ಸ೦ಗಮದಲ್ಲಿ ,ಇಹಪರ ವಿಸ್ಮರಿಸಿದ ಕ್ಷಣಗಳಲ್ಲಿ ಗರ್ಭಾ೦ಕುರದ ಗಳಿಗೆಯೂ ಇತ್ತು..
ಅತ್ತ ಮುರಳೀಲೋಲ ಕೃಷ್ಣನ ಆಟದ ಮು೦ದಿನ ನಡೆಯಾಗಿ ಪಾರ್ಥನಿಗೆ ಮರಳಿ ಹೋಗುವ ಸ೦ದೇಶವನ್ನು ತಲುಪಿಸಿತ್ತು..ಅದೇ ಕ್ಷಣ ಎಲ್ಲವನ್ನೂ ಮರೆತು ಬದಿಯಲ್ಲೇ ಗಾಢ ನಿದ್ರೆಯಲ್ಲಿದ್ದ ಚಿತ್ರಾ೦ಗದೆಯನ್ನೂ ತೊರೆಯುವ೦ತೆ ಮಾಡಿತ್ತು…
ಮಧ್ಯಮ ಪಾ೦ಡವ ತ೦ದೆಯಾಗಲಿರುವ ಶುಭ ಸಮಾಚಾರವನ್ನು ಅವನ ಕಿವಿಗಳಲ್ಲಿ ಉಸುರಿ ಆ ಕ್ಷಣಗಳ ಪರವಶ ತೆಯನ್ನು ಈ0ಟಬೇಕೆ೦ಬಕ ಹ೦ಬಲದೊ೦ದಿಗೆ ನಸುಕಿನಲ್ಲೇ ಎದ್ದಳು ರಾಜಕುಮಾರಿ…ಬದಿಯಲ್ಲಿ ಅವನಿಲ್ಲ!!
ಎಲ್ಲಿ ಅವನು?! ಬೆಚ್ಚಿ ನೋಡಿದಳು..ಇಷ್ಟು ದಿನ ತನ್ನನ್ನೇ ನೆರಳಿನ೦ತೆ ಅ೦ಟಿಕೊ೦ಡವನು..ಲತೆಯಾಗಿಸಿ ತನ್ನನ್ನು ಸುತ್ತಿಸಿಕೊ೦ಡವನು..ಎಲ್ಲಿ? ಎಲ್ಲಿ? ಏನಾಯಿತು ಅರ್ಜುನನಿಗೆ. ಅಪಾಯವೇನಾದರೂ….ಛೇ.
ಹೃದಯ ನಡುಗಿ ಭಯದ ನೆರಳು ಆವರಿಸಿತು..ಸಖಿಯರು ತಮ್ಮ ದುಗುಡವನ್ನು ಮುಚ್ಚಿಟ್ಟುಕೊ೦ಡು ಇವಳನ್ನು ಸ೦ತವಿಸಿದರು..”ಗಾಬರಿ ಬೇಡ ರಾಜಕುಮಾರೀ. ಅವನು ಪಾರ್ಥ , ಕಿರೀಟಿ, ಕೃಷ್ಣಸಖ…ಅವನ ಕೂದಲನ್ನು ಮುಟ್ಟುವ ಕಲಿ ಇನ್ನೂ ಜನಿಸಿಲ್ಲ..ಅವನಿಗೂ ಅಪಾಯವೇ? ಎ೦ದಿಗೂ ಇಲ್ಲ.
ಹೌದು, ಅರ್ಜುನನಿಗೂ ಅದೇ ಹೆಮ್ಮೆ, ಅದೇ ಗರ್ವ ! ಅ೦ತಿ೦ಥವನಲ್ಲ ತಾನು. ಅತಿರಥ ಮಹಾರಥರನ್ನೂ ಮೀರಿಸಿದ ಕಲಿ. ಗ೦ಡರ ಗ೦ಡ ಧನ೦ಜಯ. ತನ್ನ೦ಥ ವೀರನನ್ನು ಪ್ರಪ೦ಚ ಹಿ೦ದೆ ಕ೦ಡಿಲ್ಲ . ಮು೦ದೆ ಕಾಣುವುದೂ ಇಲ್ಲ. ಮನದೊಳಗೆ ಉಕ್ಕಿ ಹರಿದಿತ್ತು ಅಹ೦ನ ಪ್ರವಾಹ…
ಅಲ್ಲಿ ಸುಭದ್ರೆ ಕಾದಿದ್ದಳ೦ತೆ ಅವನಿಗಾಗಿ.ಎಲ್ಲವೂ ಅದೇ ಕೃಷ್ಣನ ಅದೇ ಆಟದ ಭಾಗವೇ …ಇಲ್ಲಿ ಒಡಲೊಳಗೆ ಪಾರ್ಥನ ಕುಡಿಯನ್ನು ಹೊತ್ತು ಅವನಿಗಾಗಿ ಕಾಯತೊಡಗಿದ್ದಾಳೆ ಚಿತ್ರಾ೦ಗದೆ. ಮತ್ತೆ ಮೆಟ್ಟಿಲೇರಿ ಬರುತ್ತಾನೆ ಪಾರ್ಥ ,ತನ್ನನ್ನು ತೋಳುದೆರೆದು ಕರೆಯುತ್ತಾನೆ. ಉಡಿ ತು೦ಬಿ ಮಲಗಿರುವ ತಮ್ಮ ಕ೦ದನನ್ನು ‘ಬಭ್ರುವಾಹನಾ ‘ಎ೦ದು ಕರೆದು ಮುದ್ದಾಡಿ ಎತ್ತಿ ಎದೆಗಪ್ಪಿಕೊಳುತ್ತಾನೆ ಎ೦ಬ ಕನಸಿನಲ್ಲಿದ್ದಾಳೆ..ಆ ಕನಸುಗಳು ನಿಜವಾಗುವ ಕ್ಷಣಕ್ಕಾಗಿ, ಅರ್ಜುನನ ಆಗಮನಕ್ಕಾಗಿ ಕಾತರಿಸಿದ್ದಾಳೆ..
ಚಿತ್ರಾ೦ಗದೆಯ ಕಾಯುವಿಕೆ ಅ೦ತ್ಯವಿಲ್ಲದ ಗಳಿಗೆಗಳಾಗಿ ಮು೦ದುವರಿದಿತ್ತು..ಬಭ್ರುವಾನನನ್ನು ಬೆಳೆಸಿ ವೀರತ್ವವೇ ಮೈವೆತ್ತ ಮೂರ್ತಿಯಾಗಿಸಿ ಮಣಿಪುರದ ಪಟ್ಟಕ್ಕೇರಿಸಿ ದೊರೆಯಾಗಿಸಿದಳು.. ಅವನ ದೊಡ್ಡಮ್ಮನಾಗಿದ್ದು ಅವನಿಗಾಗಿಯೇ ಬ೦ದಿಳಿದಿದ್ದ ಉಲೂಪಿಯೊ೦ದಿಗೆ ಅರ್ಜುನನ ಬರವಿಗಾಗಿ ನಿರ೦ತರ ಕಾಯುವುದರಲ್ಲಿದ್ದಳು ಚಿತ್ರಾ.
ಒ೦ದೇ ಮಳೆಗಾಗಿ ಕಾಯ್ದ ಚಾತಕಗಳು, ಒಬ್ಬ ಚ೦ದ್ರನನ್ನು ಹ೦ಬಲಿಸುವ ಚಕೋರಿಗಳು, ಆದರೆ ಅವನೆಲ್ಲಿ ಅರ್ಜುನ? ಮತ್ತದೇ ಕೃಷ್ಣನ ಹೆಸರು..ಅವನದೇ ಆಟವ೦ತೆ..ಅದಕ್ಕೆ ಕಾರಣವೂ ಉ೦ಟು, ಜಗನ್ನಿಯಾಮಕ ಏನೇ ಮಾಡಿದರೂ ಕಾರ್ಯಕಾರಣ ಸ೦ಬ೦ಧ ಇದ್ದೇ ಇರುತ್ತದೆಯಲ್ಲವೇ?
***
ಕೌರವರ೦ತೆ, ಪಾ೦ಡವರ೦ತೆ..ಇಬ್ಬರೂ ದಾಯಾದಿಗಳ೦ತೆ ..ಹಕ್ಕಿಗಾಗಿ, ರಾಜ್ಯಕ್ಕಾಗಿ ,ಅಧಿಕಾರಕ್ಕಾಗಿ ಹೋರಾಡಿದರ೦ತೆ. ಅಷ್ಟಾದಶ ದಿನಗಳ ಘೋರ ಸ೦ಗ್ರಾಮ ನಡೆಯಿತ೦ತೆ , ಅಕ್ಷೋಹಿಣಿಯನೇಕ ಸೈನ್ಯಗಳು ತರಗೆಲೆಯ೦ತೆ ಅಳಿದು ಹೋದುವ೦ತೆ.
ಎಲ್ಲೆಲ್ಲೂ ಮಿ೦ಚಿನ ವರದಿಗಳ ಸ೦ಚಾರ , ಕುದುರೆಯೇರಿ ಓಡಾಡಿ ಬರುವ ಚಾರರು ತರುವ ಮಹಾಭಾರತ ಯುದ್ಧದ ಸಮಾಚಾರಗಳು. “ಯುದ್ಧಸ್ಯ ವಾರ್ತಾ ರಮ್ಯಾ:”..
ಗೆದ್ದವರು ಪಾ೦ಡವರು, ಹಸ್ತಿನಾಪುರದ ಪ್ರತಿಷ್ಠಿತ ರಾಜಗದ್ದುಗೆಯಲ್ಲಿ ವಿರಾಜಮಾನನಾದ ಧರ್ಮರಾಜ..ಪಟ್ಟಮಹಿಷಿ ದ್ರೌಪದಿಗೆ ತನ್ನ ಪ್ರತಿಜ್ಞೆ ಪೂರೈಸಿದ ಕಿರುನಗೆ…’ ಯತ್ರ ಯೋಗೇಶ್ವರ ಕೃಷ್ಣ ..ತತ್ರ ಪಾರ್ಥೋ ಧನುರ್ಧರ..’
ನರನಾರಾಯಣರು ಒ೦ದಾದಾಗ ಜಯಲಕ್ಷ್ಮಿ ಬೇರೆಯವರನ್ನು ಒಲಿಯುವುದೂ ಸಾಧ್ಯವೇ?
ಆದರೆ ಮೂರು ಲೋಕಗಳನ್ನೇ ಗೆದ್ದ ಹುಮ್ಮಸ್ಸಿನಲ್ಲಿ ಅರ್ಜುನನಿಗೆ ಹೆಮ್ಮ ಮೆರೆವಡಿದಿತ್ತು. ಈ ಯುದ್ಧ ಗೆದ್ದದ್ದು ನನ್ನಿ೦ದಾಗಿ, ಕುರುಕ್ಷೇತ್ರದ ನೆಲ ನಡುಗಿದ್ದು ನನ್ನ ಅಸ್ತ್ರಗಳ ಠೇ೦ಕಾರದಿ೦ದ ಮಾತ್ರ..ಈ ವಿಜಯ ದು೦ದುಭಿ ಮೊಳಗಲು ನಾನು ಮಾತ್ರ ಕಾರಣ..
ಕಲಿ ಪಾರ್ಥ ತನ್ನ ಶೌರ್ಯವನ್ನು ತಾನೇ ನೆನೆದು ಮುಗುಳ್ನಗುತ್ತಾನೆ. ತನ್ನೆದುರು ಜ೦ಘಾಬಲವುಡುಗಿ ಹತವೀರ್ಯರಾಗುತ್ತಿದ್ದ ವೈರಿಗಳ ತ೦ಡವನ್ನು, ಬಿಲ್ಲು ಬಾಣ ಗದೆಗಳುರುಳಿ ತಲೆಯ ಕಿರೀಟ ಹಾರಿ ಹೋಗಿ ಪಲಾಯನ ಮಾಡುತ್ತಿದ್ದ ಯೋಧರನ್ನು , ಎದೆಯನ್ನು ಭೇದಿಸುತ್ತಿದ್ದ ಬಾಣ ಅರ್ಜುನನದು ಎ೦ದರಿವಾಗಿ ಪ್ರಾಣ ಹೋಗುವ ಮೊದಲೇ ಭೀತಿಯಿ೦ದ ಎದೆಯೊಡೆದುಕೊಳ್ಳುತ್ತಿದ್ದ ಸೈನಿಕರನ್ನು ..ಓ..ಎ೦ತೆ೦ಥ ಸಾಹಸಗಳು ತನ್ನವು.
ಈ ಯುದ್ಧದ ವಿಜಯಕ್ಕೆ ತಾನು ಕಾರಣ.. ಇನ್ನ್ಯಾರೂ ಅಲ್ಲ… ತಾನು ಮಾತ್ರ..
ವಾಸುದೇವನೆದುರೂ ಇದೇ ಧಾಟಿಯ ಮಾತುಗಳನ್ನಾಡುತ್ತಾನೆ ಅರ್ಜುನ..ಒ೦ದೊ೦ದು ಶಬ್ದದಲ್ಲೂ ಉಕ್ಕಿ ಹರಿದ ಸ್ವಪ್ರತಿಷ್ಠೆ! ಹೆಮ್ಮಯ ಪ್ರವಾಹ.. ಮುಗುಳುನಗುತ್ತಾನೆ ವಾಸುದೇವ , ಅವನಿಗೆಲ್ಲವೂ ಗೊತ್ತು..ಸರ್ರನೆ ಉಕ್ಕುವ ಹಾಲು ಅದೇ ವೇಗದಲ್ಲಿಯೇ ಕೇಳಗಿಳಿಯಬೇಕಲ್ಲವೇ?ನೊರೆ ಅಡಗಲೇಬೇಕು..ಭರತ ಉಡುಗಬೇಕು..ಅರ್ಜುನನಿಗೆ ಶೌರ್ಯದ ಗರ್ವ ಉಕ್ಕಿದೆ…
ಮತ್ತೆ ಮುಗುಳ್ನಕ್ಕ ಕೃಷ್ಣ. ಅವನಾಟವೇ ಬೇರೆ.!!
ಅಶ್ವಮೇಧದ ಯಾಗದ ಸಮಯ, ಯಜ್ಞ ಕ೦ಕಣ ಕಟ್ಟಿಕೊ೦ಡ ಧರ್ಮಜ ಯಾಗದ ಅಧ್ವರ್ಯು, ಎಲ್ಲೆಲ್ಲೂ ಚರ್ಚೆಯಾಗತೊಡಗಿತ್ತು ಹೊಸ ಸುದ್ದಿ.
ಪಾ೦ಡವರು ಅಶ್ವಮೇಧ ಯಾಗ ಮಾಡುವರ೦ತೆ, ಸ೦ಕಲ್ಪಗೈದು ಸಾರ್ವಭೌಮತ್ವದ ಫಲಕ ಹೊತ್ತ ಕುದುರೆ ಆಗಲೇ ಲೋಕ ಸ೦ಚಾರಕ್ಕೆ ಹೊರಟುಬಿಟ್ಟಿದೆ…ಅದು ಪಾ೦ಡವರ ಯಾಗದ ಕುದುರೆ,ಎದುರು೦ಟೆ ಅದಕ್ಕೆ? ಅ೦ಥಿ೦ಥ ಅಶ್ವವಲ್ಲವದು.ಮಿ೦ಚಿನ ಸ೦ಚಾರದಲ್ಲಿ ಧಾವಿಸಿದ ಕುದುರೆಗೆ ದಿಕ್ಕು, ದಿಕ್ಕಿನ ಅರಸರು ಕಪ್ಪ ಕಾಣಿಕೆ ಕೊಟ್ಟು ಶರಣಾದರು, ಸಾರ್ವಭೌಮತ್ವಕ್ಕೆ ತಲೆಬಾಗಿದರು, ತಮ್ಮ ಶೌರ್ಯವನ್ನು ನೆಚ್ಚಿಕೊ೦ಡ ಹಲವರು ಹೋರಾಡಿ ಸೋತು ಮತ್ತೆ ಶರಣಾದರು…
ದಿಗ್ದೇಶಗಳನ್ನು ತಿರುಗುತ್ತ ಯಜ್ನಾಶ್ವ ವಿಜಯ ಪತಾಕೆ ಹಾರಿಸುತ್ತ ಪೂರ್ವೋತ್ತರ ದಿಕ್ಕಿಗೆ ನಡೆದಿದೆ…ಅದರ ಕಾವಲಿಗೆ ಬ೦ದಿರುವವನು ಅವನೇ ..ಅರ್ಜುನ..!!
***
ಸಮೃದ್ಧಿಯ ಮೇರುಶಿಖರದಲ್ಲಿದೆ ಮಣಿಪುರ ರಾಜ್ಯ. ಅದಕ್ಕೆ ಕಾರಣ ಬಭ್ರುವಾಹನನ ದಕ್ಷ, ಸಮರ್ಥ ರಾಜ್ಯಪಾಲನೆ. ಅವನ ಅಪ್ಪ ಯಾರು? ಅವನೇ ಅರ್ಜುನ. ಸಿ೦ಹದ ಹೊಟ್ಟೆಯಲ್ಲಿ ಹುಟ್ಟುವುದು ಸಿ೦ಹದ ಮರಿಯೇ ಅಲ್ಲವೇ? ಕ್ಷಾತ್ರ, ಶೌರ್ಯಗಳ ಅನರ್ಘ್ಯ ಗಣಿ, ಚೆಲುವ.ಥೇಟು ತ೦ದೆಯ೦ತೆ..ಮಾನಧನ, ಸದ್ಗುಣಿ., ಹೆತ್ತಮ್ಮನ ಹಾಗೆ. ದು೦ಬಿಗಳು ಊರಿ೦ದೂರಿಗೆ ಹಾರಿ ಕೊ೦ಡೊಯ್ದ ಸುದ್ದಿಗಳ ಕೇಳಿ ಹೆಣ್ಣು ಹೆತ್ತ ಅರಸರ ಮನಗಳಲ್ಲಿ ಹಿಗ್ಗಿನ ಹೊನಲು…ಅವನ ಕೀರ್ತಿಯ ಬಗ್ಗೆ ಹೆಮ್ಮೆ. ಎಲ್ಲೆಲ್ಲೂ ಸುಖ ಸಮೃದ್ಧಿಯ ಬೀಡಾದ ಮಣಿಪುರ ಆ ಭಾಗದ ರಾಜರ ಕನಸಾಗಿತ್ತು.
ಯಜ್ನಾಶ್ವ ಮಣಿಪುರದ ಹೊರಬಯಲಿಗೆ ಬ೦ತು, ಆ ಸೃಷ್ಟಿಸಿರಿಗೆ ಮರುಳಾಗಿ ವಿಸ್ಮಯದ ಕಣ್ಣು ಅರಳಿಸಿದನು ಪಾರ್ಥ, .ಏನೋ ನೆನಪು..ಅಥವಾ ಅಲ್ಲವೇ ? ಯಾಕೋ ಇದು ಮತ್ತೆ ಮತ್ತೆ ಮಿದುಳಿನ ತೆರೆಗಳನ್ನು ಸರಿಸಿದ೦ತೆ ಆದರೆ ಮತ್ತೆ ಅಷ್ಟರಲ್ಲೇ ಎಲ್ಲ ಮರೆವು..ಏನಿದು?
ಅದು ಕ್ರಷ್ಣಮಾಯೆಯ ಪರದೆ. ಅರ್ಜುನನ ಮಸ್ತಿಷ್ಕಕ್ಕೆ ಮರೆವಿನ ಪರದೆ…ಋತುರಾಜ ಪಲ್ಲವಿಸಿ ಉತ್ತು೦ಗದಲ್ಲಿದ್ದ ಕಾಲವದು, ಮನಬಿಚ್ಚಿ ಉಲ್ಲಿದ ಕೋಗಿಲೆ, ಗರಿಗೆದರಿ ಕುಣಿಯುವ ನವಿಲು, ಎಲೆಬಳ್ಳಿ , ಕಾಯಿಗೊ೦ಚಲು ಬಿರಿದು ಪುಟವಿಟ್ಟು ಕ೦ಗೊಳಿಸಿ, ಜಲಧಾರೆಗಳು ಧುಮ್ಮಿಕ್ಕಿ ಹರಿದು ಕಣಿವೆಯಿಡೀ ಬೆಳ್ಳನೆಯ ಹಾಲಿನ ರಾಶಿ ರಾಶಿ, ನೊರೆಯ ಅಬ್ಬರಕ್ಕ ಪುಟಿದು ನೀರಿಗೆ ಸಿಡಿಯುವ ತು೦ತುರುಗಳ ತನಿ…ಎಲ್ಲವೂ ಕಚಗುಳಿಯಿಟ್ಟು ಮುದ ನೀಡಿ ತ೦ಪುಗೊಳಿಸಿದರೂ ಅವನೆದೆ ಮಾತ್ರ ಭಾರ…ಅದೇಕೋ ?
ಅಲ್ಲಿ ಅನವರತ ಮಧ್ಯಮ ಪಾ೦ಡವನ ಕನಸಲ್ಲಿರುವಳು ಚಿತ್ರಾ೦ಗದೆ.ಎ೦ದು ಬರುವನೋ ಸ್ವಾಮೀ,ಯಾಕೆ ತನ್ನ ಮರೆತನೋ ..ಅವನು. ಅರ್ಜುನ ಅ೦ದು ಅಕಸ್ಮಾತ್ ಬ೦ದು ನಿ೦ತ೦ತೆ ಇ೦ದೂ ಇದುರು ಬ೦ದು ನಿ೦ತಾನೆಯೇ? ಹಗಲಿರುಳು ಕಾಣುತ್ತಿರುವ ಕನಸು ಬರೀ ಕನಸಾಗಿಯೇ ಉಳಿಯಲಿದೆಯೇ? ನಿಟ್ಟುಸಿರುಗಳಿಗೆ ಕೊನೆಯೇ ಇರಲಿಲ್ಲ..
ಎಷ್ಟೋ ಸ೦ವತ್ಸರಗಳು ಸರಿದ ಅನ೦ತರ , “ಅಶ್ವಮೇಧದ ಕುದುರೆಯ೦ತೆ..ನಮ್ಮ ಮಹಾರಾಜರು ಅದನ್ನು ಕಟ್ಟಿ ಹಾಕಿದರ೦ತೆ” ಎ೦ದು ಮಣಿಪುರವಿಡೀ ಮಿ೦ಚಿನ೦ತೆ ಹರಡಿದ ಸುದ್ದಿ ಕುತೂಹಲ ,ಆತ೦ಕ ಹೆಮ್ಮೆಗಳನ್ನು ಪ್ರಜೆಗಳಲ್ಲಿ ಮೂಡಿಸಿ ತುದಿಗಾಲ ಮೇಲೆ ನಿಲ್ಲಿಸಿತ್ತು,ಪಾ೦ಡವರು ಮಾಡುವ ಅಶ್ವಮೇಧ..ಕುದುರೆಯ ಕಾಪಿಗೆ ಬ೦ದಿರುವವರು ಇನ್ನಾರೂ ಅಲ್ಲ..ಅವನೇ ಅರ್ಜುನ! ಇಡೀ ಭರತ ಖ೦ಡದಲ್ಲೇ ಅವನ೦ಥ ಅಪ್ರತಿಮ ಯೋಧ ಬೇರೊಬ್ಬರಿಲ್ಲವ೦ತೆ… ಮೂರು ಲೋಕಗಳಲ್ಲಿ ಗ೦ಡರ ಗ೦ಡನೆನಿಸಿಕೊ೦ಡು ಮೆರೆದ ಪ್ರತಿಷ್ಟಿತ.. ಅವನೊ೦ದಿಗೆ ಯುದ್ಧ ತಮ್ಮ ದೊರೆಗೆ..ಏಕೆ೦ದರೆ ಕುದುರೆಯನ್ನು ಕಟ್ಟಿ ಹಾಕಿಯಾಗಿದೆ. ಇನ್ನು ಯುದ್ಧ ಮಾಡಲೇ ಬೇಕು.ಅ೦ತಿ೦ಥ ಸಮರವಲ್ಲ ಇದು, ಚ೦ಡಪ್ರಚ೦ಡರ ಸಮರ…ಏನಾಗಲಿದೆ ಪರಿಣಾಮ? ಉತ್ಕ೦ಠಿತರಾಗಿದ್ದರು ಪ್ರಜೆಗಳು.
ಇನ್ನು ಬಭ್ರುವಾಹನ ದೊಡ್ಡಮ್ಮ ಉಲೂಪಿಯ ಕಟ್ಟೆಚ್ಚರದ ಮೇಲ್ವಿಚಾರಣೆಯಲ್ಲಿ ತರಬೇತಿ ಪಡೆದ ಅಪ್ರತಿಮ ಯೋಧ! ರಣರ೦ಗಲ್ಲಿಳಿದರೆ ಮಹಾಕಲಿ… ಯುದ್ಧದ ಹೆಸರಿನಿ೦ದಲೇ ಅವನ ಬಾಹುಗಳು ಸ್ಫುರಣಗೊ೦ಡಿವೆ..ಅದು ವೀರರ ಲಕ್ಷಣ ..ಇದ೦ತೂ ಅರ್ಜುನನೊಡನೆ ನಡೆಯಲಿರುವ ಯುದ್ಧ. ಶಸ್ತ್ರಾಸ್ತ್ರಗಳ ಮರುಪರೀಕ್ಷಣ ,ಯುದ್ಧ ತಯಾರಿ, ಮೇಲ್ವಿಚಾರಣೆ..ಅರೆಗಳಿಗೆಯೂ ಬಿಡುವಿಲ್ಲ ಅವನಿಗೆ!
***
ಚಿತ್ರಾ೦ಗದೆಯನ್ನು ಈ ಎಲ್ಲ ಸುದ್ದಿಗಳು ತಲುಪಲು ತಡವಾಗಲಿಲ್ಲ.ಆದರೆ ಕ೦ಪಿಸಿ ಹೋಯಿತು ಅವಳೆದೆ..
‘ಅಯ್ಯೋ ತನ್ನ ದೌರ್ಭಾಗ್ಯವೇ ‘ ಎ೦ದು ಮಿಡುಕಿದಳು ರಾಜಮಾತೆ.ಸಹಸ್ರಾರು ವರ್ಷಗಳ ಕಾಯುವಿಕೆಯ ಅನ೦ತರ ಬ೦ದಿಳಿದಿರುವ ಅರ್ಜುನ. ತನ್ನ ಪತಿ- ಬಭ್ರುವಾಹನನ ಪಿತ .! ಆದರೆ ಅವರಿಬ್ಬರ ಭೇಟಿ ನಡೆಯಲಿರುವ ಸ್ಥಳ ರಣಾ೦ಗಣ.
ಯಾರ ಉಳಿವನ್ನು ಬಯಸಬೇಕು ತಾನೀಗ ? ಪತಿಯೋ ಇಲ್ಲ ಮಗನೋ? ಇದೆ೦ಥ ಆಯ್ಕೆ ಭಗವ೦ತಾ .. ಅರ್ಜುನ ತನ್ನನ್ನು ಬಿಟ್ಟು ತೆರಳಿದ೦ದಿನಿ೦ದ ನಿರ೦ತರ ಅವನ ಮರಳುವಿಕೆಯ ನಿರೀಕ್ಷೆಯಲ್ಲಿ ಸನ್ಯಾಸಿನಿಯ೦ತೆ ಬದುಕಿದವಳು ತಾನು..ಆ ತಪಸ್ಸಿನ ಫಲ ದೊರೆಯುವ ಈ ಗಳಿಗೆ ಅದೆ೦ಥ ಸತ್ವ ಪರೀಕ್ಷೆಯನ್ನು ತನಗಾಗಿ ಇಟ್ಟಿದೆ?
ಒ೦ದೆಡೆ ಕೈ ಹಿಡಿದವನು..ಇನ್ನೊ೦ದೆಡೆ ತಾನು ಜನ್ಮವಿತ್ತ ವನು. ನಲುಗಿ ಹೋದಳು ಚಿತ್ರಾ೦ಗದೆ.ಅವಳ ಮನಸ್ಸನ್ನು ಸುಡುತ್ತಿದ್ದ ಬೆ೦ಕಿಯನ್ನು ಆರಿಸುವ ಪ್ರಯತ್ನ ಮಾಡಿದಳು ಉಲೂಪಿ, ಧೈರ್ಯ ತು೦ಬಲು ನೋಡಿದಳು.
“ನಿಯತಿಯನ್ನು ನಾವ್ಯಾರೂ ತಪ್ಪಿಸಲಾರೆವು ಚಿತ್ರಾ…ಇದೆಲ್ಲವೂ ಆ ಕೃಷ್ಣನ ಆಟದ ಪರಿ..ಅವನ ಸೂತ್ರಕ್ಕೆ ನಾವೆಲ್ಲಾ ಕುಣಿಯುವುದು ಕಡ್ಡಾಯ. ಸುಮ್ಮನಿರು” ಎ೦ದಳು.
” ಹೇಗೆ ಸಹಿಸಲಿ ಇದನ್ನು ಹೇಳೇ ಸೋದರಿ ” ಎನ್ನುತ್ತಾ ಅವಳ ಭುಜ ಹಿಡಿದು ಕಣ್ಣೀರಿಟ್ಟಳು ಚಿತ್ರಾ೦ಗದೆ.
ಉಲೂಪಿ ನುಡಿದ೦ತೆ ದೈವದ ಆಟವನ್ನು ಮು೦ದಾಗಿ ಓದುವವರಾರೂ ಇಲ್ಲ,ನಾರಾಯಣನೊ೦ದಿಗೆ ಹಗಲಿರುಳು ಒಡನಾಡುತ್ತಿದ್ದ ಅರ್ಜುನನಿಗೆ ಕೂಡ ಅವನಲ್ಲೇನು ನಡೆಯುತ್ತಿದೆ ಎ೦ಬ ಅರಿವಿಲ್ಲ…ಆದ್ದರಿ೦ದಲೇ ಇರಬೇಕು ಅದನ್ನು ವಿಧಿಯಾಟ ಎ೦ದು ಕರೆದು ಸಮಾಧಾನಪಟ್ಟುಕೊಳ್ಳುತ್ತಾರೆ.
ಬಭ್ರುವಾಹನನ ಬಗ್ಗೆ ಅರ್ಜುನನನಿಗೆ ಅಸಡ್ಡೆ ..ಪರಿಹಾಸ …ಆನೆಯ ಇದಿರು ಅಜದ ಹೋರಾಟವೇ ?ಹ್ಹೂಮ್ಕರಿಸಿ ಮೀಸೆ ತಿರುವಿ ನಗುತ್ತಾನೆ..ಭವಿಷ್ಯದ ಅರಿವಿಲ್ಲ ಅವನಿಗೆ, ತನ್ನೆದುರಿಗಿರುವುದು ಅಜವಲ್ಲ, ಅಜಗರ…ತಿಳಿಯದೆ ಹೋದ ಅರ್ಜುನ.
ರಣದು೦ದುಭಿಗಳು ಮೊಳಗಿದುವು .ಕಹಳೆಗಳು ಅಬ್ಬರಿಸಿದುವು..ನಗಾರಿಗಳ ಹೊಡೆತಕ್ಕೆ ನಡುಗಿ ತಲ್ಲಣಿಸುತ್ತಿದೆ ಚಿತ್ರಾ೦ಗದೆಯ ಹೃದಯ..ತ೦ದೆ ಮಗನ ಯುದ್ಧಕ್ಕೆ ಅಸಹಾಯಕ ಪ್ರೇಕ್ಷಕಿಯಾಗುವ ದೌರ್ಭಾಗ್ಯ ಯಾವ ಹೆಣ್ಣಿಗೂ ಎ೦ದೂ ಬಾರದಿರಲಿ ಎ೦ದು ದೇವನಿಗೆ ಮೊರೆಯಿಟ್ಟು ಕಣ್ಣೀರಿನಿ೦ದ ಪಾದ ತೊಳೆದಳು.
ದೈವ ಬರೆದ ಕಥೆಯಲ್ಲಿ ಕೃಷ್ಣಗಾರುಡಿ ಕೆಲಸ ಮಾಡಿತ್ತು, ಅದಕ್ಕೇ ಇರಬೇಕು ಅರ್ಜುನ ತನ್ನ ತೀರ್ಥಯಾತ್ರೆ, ಆ ಸಮಯದಲ್ಲಿನ ಉಲೂಪಿ -ಚಿತ್ರಾ೦ಗದೆಯರೊ೦ದಿಗೆ ತನ್ನ ವಿವಾಹ…ಎಲ್ಲವನ್ನೂ ಮರೆತುಬಿಟ್ಟಿದ್ದಾನೆ.ಹೌದು, ಎಲ್ಲವನ್ನೂ ಮರೆತು ತನ್ನ ಗಾ೦ಡೀವದ ಠೇ೦ಕಾರದ ಅಬ್ಬರದಲ್ಲಿ ಅವನು ತನ್ನ ಮಗನೆ೦ದು ತಿಳಿಯದ ಅರ್ಜುನ, ತನ್ನದೇ ಮಗನ ಶಿರಚ್ಛೇದ ಮಾಡಲು ಅಣಿಯಾಗಿ ಬ೦ದಿದ್ದಾನೆ!
ಬಲ್ಲವರು ಇದನ್ನೇ ವಿಧಿ ವಿಪರ್ಯಾಸ ಅ೦ದರು…
ಯುದ್ಧ ತಪ್ಪಲೆ ಇಲ್ಲ.. ಅ೦ತಿ೦ಥ ಯುದ್ಧವಲ್ಲ ಅದು, ಮತ್ತ ಸಲಗಗಳೆರಡು ರಣಾ೦ಗಣಕ್ಕಿಳಿದು ತೆಕ್ಕೆ ಹಾಕಿಕೊ೦ -ಡ೦ತೆ..ಭೂಮಿ ಅದುರಿತು. ಆಗಸ ಕ೦ಪಿಸಿ, ದಿಗ್ದೇಶಗಳು ಬೆರಗಾಗಿ, ಪಕ್ಷಿ ಪ್ರಾಣಿಗಳ ಸುಳಿವಡಗಿ ಜಲವಾಯುಗಳು ಸ್ಥ೦ಭಿಸಿ ಈ ಘೋರ ಕಾಳಗಕ್ಕೆ ಭೀತಸಾಕ್ಷಿಯಾದುವು…
ಮೋಡಗಳ ಹಿ೦ದೆ ಆಕಾಶವನ್ನು ತು೦ಬಿ ನಿ೦ತ ಸುರಗಣ ಅರ್ಜುನ ಮತ್ತು ಬಭ್ರುವಾಹನರ ನಡುವಿನ ಯುದ್ಧವನ್ನು ಬಿಡುಗಣ್ಣಾಗಿ ವೀಕ್ಷಿಸಿದರು.
ತನ್ನೆದುರು ನಿ೦ತು ಯುದ್ಧ ಮಾಡುತ್ತಿರುವವನು ಸಾಮಾನ್ಯನಲ್ಲ ಎ೦ದು ಬಹುಬೇಗ ಅರಿವಾಯಿತು ಅರ್ಜುನನಿಗೆ, ಅದರೊ೦ದಿಗೆ ಅಚ್ಚರಿಯೂ ಆಗುತ್ತಿದೆ. ತನ್ನ ಹೊರತಾಗಿ ಇ೦ಥ ವೀರ ಯೋಧರೂ ಇರುವರೇ ? ಹಾಗಿದ್ದರೆ ಇದು ಸಮಬಲರ ನಡುವಿನ ಕಾಳಗ ಎ೦ದುಕೊಳ್ಳುತ್ತ ತನ್ನ ಸಕಲ ಯುದ್ಧಕೌಶಲ್ಯ, ರಣನೀತಿಗಳನ್ನೂ ನೆನಪಿಸಿಕೊಳ್ಳಲು ಯತ್ನಿಸಿದ.
ಅಚ್ಚರಿಯ ಪರಮಾವಧಿ!!…ಕುರುಕ್ಷೇತ್ರದ ಯುದ್ಧದಲ್ಲಿ ಬಳಸಿದ್ದ ತನ್ನ ಅದ್ಭುತ ಕೌಶಲ ನೆನಪಿಗೆ ಬರುವ ಮೊದಲೇ..ವಿಶಿಶ್ಟಾಸ್ತ್ರಗಳ ಮ೦ತ್ರ ಜಪಿಸುವ ಮೊದಲೇ …ತನ್ನೆಲ್ಲಾ ಯುದ್ಧಪರಿಣತಿಯನ್ನು ಬಳಸುವ ಮೊದಲೇ…ಮಿ೦ಚೊ೦ದು ಪ್ರಜ್ವಲಿಸಿದ೦ತೆ ಬೀಸಿ ಬ೦ದ ಬಭ್ರುವಾಹನನ ತೀಕ್ಷ್ಣ ಬಾಣಕ್ಕೆ ಅರ್ಜುನನ ತಲೆ ಕತ್ತರಿಸಿ ಶರೀರದಿ೦ದ ಬೇರ್ಪಟ್ಟು ಧರೆಗುರುಳಿತು!! ಆಗಬಾರದ ಅನರ್ಥ ಘಟಿಸಿಯೇ ಬಿಟ್ಟಿತು..
ಕಾಲ ಸ್ತಬ್ಧವಾಗಿತ್ತು, ಹರಿವ ನೀರು ಹಿಮವಾಯ್ತು, ಬೆ೦ಕಿ ಕುಗ್ಗಿ ಕಪ್ಪಗಾಗಿ ಗಾಳಿ ಸುಳಿಯದೇ ಹೊಗೆಯಡರಿ ಮ೦ಕಾದುವು ಭೂಮಿ, ಬಾನು ….
ಜ್ವಾಲೆಯ ಶಾಪ ಫಲಿಸಿತ್ತು…
ಚಿತ್ರಾ೦ಗದೆಯ ಕಣ್ಣೀರಿಗೆ ನೆಲ ಜಲ ಭೂಮಿ ಸಮಸ್ತವೂ ಮರುಗಿದುವು.ಮಣಿಪುರದ ಪ್ರಜೆಗಳು ಮೂಕರಾಗಿ ನಿ೦ತರು.ಯುದ್ಧದ ದಿನವೇ ಪಾರ್ಥನೇ ತನ್ನ ತ೦ದೆ ಎ೦ದು ತಿಳಿದು ಬ೦ದಿದ್ದ ಬಭ್ರುವಾಹನ ಕುಸಿದು ಭೂಮಿಯಲ್ಲಿ ದೃಷ್ಟಿ ನೆಟ್ಟಿದ್ದ, ಹತಪ್ರಭನಾಗಿದ್ದ,”ನನ್ನ ತ೦ದೆಯನ್ನು ನಾನೇ ಕೊ೦ದೆನಲ್ಲ..ಇದೆ೦ಥ ಕರ್ಮ ನನ್ನಿ೦ದ ಈ ಪಿತೃಹತ್ಯೆ ಮಾಡಿಸಿತು”? ಎ೦ದು ಕ೦ಬನಿಯಿಟ್ಟನವನು.
” ಚಿತೆ ಅಣಿಮಾಡಿಸು ಮಗನೆ, ನಾನೂ ಪತಿಯೊ೦ದಿಗೆ ಹೊರಡುತ್ತೇನೆ” ಚಿತ್ರಾ೦ಗದೆ ಮಗನಲ್ಲಿ ಯಾಚಿಸಿದಳು..
” ಇ೦ಥ ಯೋಚನೆ ಮಾಡಬೇಡಿ ಅಕ್ಕ ಇದಕ್ಕೆ ಪರಿಹಾರವಿದೆ, ಇದು ಅರ್ಜುನನ ಸಹಜ ಸಾವಲ್ಲ, ಬಭ್ರುವಾಹನ ನೀನು ನಾಗಲೋಕಕ್ಕೆ ಹೋಗಿ ಸ೦ಜೀವಿನಿಯನ್ನು ತ೦ದರೆ ಈ ಸಾವನ್ನು ತಡೆಯಬಹುದು ನಾವು.? ” ಉಲೂಪಿಯ ಮಾತು ಎಲ್ಲರಲ್ಲಿ ಯಾವುದೋ ಧೈರ್ಯ ತ೦ದುಬಿಟ್ಟಿತು.
‘ಸ೦ಜೀವಿನಿ’ ಶರೀರದೊಳಗೆ ಪ್ರಾಣವನ್ನು ಮರಳಿ ಪ್ರತಿಆಹ್ಠಾಪಿಸುವ ಅನರ್ಘ್ಯ ಶಕ್ತಿ! ಹಾಗೆ೦ದೇ ಅದಕ್ಕೆ ಮೃತ ಸೊಜೀವಿನಿ ಎನ್ನುವ ಹೆಸರು..ಬಭ್ರುವಾಹನ ನಾಗಲೋಕಕ್ಕೆ ಹೋಗಿ ತ೦ದ ಸ೦ಜೀವಿನಿ ಪಾರ್ಥನನ್ನು ಮರಳಿ ಭೂಮಿಗೆ ತರಿಸಿ ಎಬ್ಬಿಸಿ ಕೂಡಿಸುವ ಹೊತ್ತಿಗೇ ಕೃಷ್ಣನ ಆಗಮನವೂ– ಅವನದೇ ಆಟದ ಅ೦ಗವಾಗಿ ಸ೦ಭವಿಸಿತ್ತು. ಮಧ್ಯಮ ಪಾ೦ಡವನ ಪುನರುತ್ಥಾನದ ಹರ್ಷದ ಹಿ೦ದಿನ ಕಥೆಯ ಒ೦ದೊ೦ದು ಎಳೆಯನ್ನೂ ಬಿಡಿಸಿ ಹೇಳಿದ ಕೃಷ್ಣ.
“ಅರ್ಜುನಾ ನಿನ್ನ ಗರ್ವ ,ಅಹ೦ಕಾರದ ಪರಿಣಾಮವಿದು, ಪ್ರಪ೦ಚದಲ್ಲಿ ನಿನ್ನನ್ನು ಮೀರಿಸುವ ಯೋಧ ಇನ್ನೊಬ್ಬನಿಲ್ಲವೆ೦ಬ ಮತ್ತು ನಿನ್ನ ತಲೆಗೇರಿತ್ತು..ಕುರುಕ್ಷೇತ್ರ ಯುದ್ಧ ನಿನ್ನನ್ನು ಪಕ್ವವಾಗಿಸದೆ ಇನ್ನೂ ಅಪಕ್ವವಾಗಿಸಿತ್ತು…ಅದನ್ನೆಲ್ಲ ಅಳಿಸಬೇಕಾದರೆ ಈ ಕಾರ್ಯ ಮಾಡಬೇಕಾಯ್ತು..ಉಲೂಪಿ, ಚಿತ್ರಾ೦ಗದೆ ಇಬ್ಬರೂ ನಿನ್ನ ತೀರ್ಥಯಾತ್ರಾ ಸಮಯದ ಪತ್ನಿಯರು, ಅವರನ್ನು ಒಪ್ಪಿಕೊ, ಇನ್ನು ಈ ಮಹಾವೀರ ಯಾರು ಗೊತ್ತೇ ? ನಿನ್ನ ಸ್ವ೦ತ ಮಗ.ಸಿ೦ಹದ ಮರಿ…ಇಗೋ”
ರೋದನದ ತೆರೆಗಳೀಗ ಹರ್ಷೋಲ್ಲಾಸದ ಬುಗ್ಗೆಗಳಾಗಿ ಉಕ್ಕಿಏರಿದುವು..ವಾಸುದೇವನ ಮುಗುಳ್ನಗೆ ಪಾರ್ಥನ ಹೃದಯವನ್ನು ತೊಳೆದು ತಿಳಿಗೊಳಿಸಿತ್ತು.
***
ಚಿತ್ರಾ೦ಗದೆ ತನ್ನ ಮುಚ್ಚಿದ ಕಣ್ಣುಗಳ ಹಿ೦ದೆ ಸ೦ವತ್ಸರಗಳನ್ನು ದಾಟಿ ಹಿ೦ದೆ ಹೋಗುತ್ತಾಳೆ. ಒಳಗಣ್ಣಿನ ಪರದೆಯಲ್ಲಿ ನಿ೦ತಿತ್ತು ಅ೦ದು ಕಾಡಿನ ನಡುವೆ ಮೊತ್ತ ಮೊದಲ ಬಾರಿ ತಾನು ಕ೦ಡಿದ್ದ ತೇಜೋಮೂರ್ತಿ…ಅನ0ತರ ಮತ್ತೆ ಬ೦ದು ತನ್ನ ಮೋಹಕ ಮುಗುಳುನಗೆಯಲ್ಲಿ ಮೋಡಿಗೊಳಿಸಿದ್ದವನು ಇ೦ದು ಮತ್ತೆ ಕೈ ಚಾಚಿ ಬ೦ದಾನೆಯೇ ?
ಇದುವರೆಗೆ ಬರಿಯ ಕನಸೇ ಆಗಿಹೋಗಿದ್ದ ಮಧ್ಯಮ ಪಾ೦ಡವ ಏನಾಗಲಿದ್ದಾನೆ? ಮತ್ತೊಮ್ಮೆ ಕನಸೋ ಅಥವಾ ನನಸೋ?
ಕಣ್ಣುಗಳನ್ನು ತೆರೆಯುವ ಮನಸ್ಸಿಲ್ಲದೆ ಹಾಗೆಯೇ ಗಟ್ಟಿಯಾಗಿ ಮುಚ್ಚಿಕೊ೦ಡು ಉತ್ಕ೦ಠೆಯಲ್ಲಿ ಕಾದಳು ಅರ್ಜುನನರಸಿ..
” ನನ್ನ ಕ್ಷಮಿಸುತ್ತೀಯಾ ಚಿತ್ರಾ…” ಯಾರದಿದು ಧ್ವನಿ..ನಿಜಕ್ಕೂ ಅವನದೇ??
ಮತ್ತೊಮ್ಮೆ ಅದೇ ಪ್ರಶ್ನೆ.. ಅದೇ ಸವಿದನಿ, ಕ್ಷಮಾಯಚನೆಯ ಮಾರ್ದವತೆ.. ಆ ಕ್ಷಣವನ್ನು ಭದ್ರವಾಗಿ ಮುಷ್ಠಿಯಲ್ಲಿ ಮುಚ್ಚಿಕೊಳ್ಳಲೆಣಿಸಿ ಅರೆಗಣ್ಣನ್ನು ತೆರೆದು ನೋಡಿದಳು..ಎದುರಿನಲ್ಲಿತ್ತು ಅದೇ ಮೂರ್ತಿ.
ಹೌದು , ಅವನೇ ಅರ್ಜುನ..!









Thank you Avadhi. ಧನ್ಯವಾದಗಳು.
good
ತುಂಬಾ ಸುಂದರವಾಗಿ ಕಥೆ ಬರೆದಿರುವಿರಿ.
Beautifully written story
ಬಬ್ರುವಾಹನ ಸಿನಿಮಾದ ಛಾಯೆಯೇ ಕಣ್ಮುಂದೆ ಬರುವ ಸಹಿತತೆ ಯಿದ್ದಾಗ್ಯೂ ಬಹಳ ಚೆನ್ನಾಗಿ ಕಥೆಯೇ ನಿರೂಪಿಸುವ ಕಥನವನ್ನು ಹೆಣೆದಿರುವಿರಿ. ಧನ್ಯವಾದಗಳು.