ಜಯಶ್ರೀನಿವಾಸ ರಾವ್ ಅನುವಾದಿಸಿದ ಕ್ರಿಸ್ಟಿನ್ ಡಿಮಿಟ್ರೋವಾ ಕವಿತೆಗಳು..

ಮೂಲ: ಕ್ರಿಸ್ಟಿನ್ ಡಿಮಿಟ್ರೋವಾ

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ, ಪದ್ಯಗಳನ್ನು ಅನುವಾದ ಮಾಡುತ್ತಾರೆ.  ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ʻಚಂದ್ರಮುಖಿಯ ಘಾತವುʼ (1900) ಕಾದಂಬರಿಯನ್ನು, ʻಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯʼ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ʻವಿಸ್ಮಯಜನಕವಾದ ಹಿಂಸೆಯ ಕ್ರಮವುʼ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ.ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ʻಸೆಷುರೆʼ, ʻಮ್ಯೂಜ಼್ ಇಂಡಿಯʼ, ಹಾಗೂ ʻಮೈದಾನಂʼನಲ್ಲಿ ಪ್ರಕಟವಾಗಿವೆ. 

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ʻಭಾಷಾ ಭಾರತಿʼ, ʻಅವಧಿʼ,ʻಕೆಂಡಸಂಪಿಗೆʼಹಾಗೂ ʻಋತುಮಾನ’ʼದಲ್ಲಿ ಪ್ರಕಟವಾಗಿವೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” ಎಂಬ ಹೆಸರಿನಡಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022ರಲ್ಲಿ ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಿಷ್ ಕವನಗಳ ಸಂಕಲನವನ್ನು ಪ್ರಕಟಿಸಿತು.ʻದ ಹಿಂದುʼ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ-ಡಿಸೆಂಬರ್ 2020ರ ಅವಧಿಯಲ್ಲಿ ಪ್ರಕಟಿಸಿತ್ತು.

ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಲ್ಲಿ (ಈಗ The EFL University), ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ Ph.D ಪದವಿ ಪಡೆದ ಇವರು ಪ್ರಸ್ತುತ ಹೈದರಾಬಾದಿನ ʻಅರೋರಾಸ ಟೆಕ್ನೋಲಾಜಿಕಲ್ ಅಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್ʼನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.

 

ಬಲ್ಗೇರಿಯಾ ದೇಶದ ಕವಿ ಕ್ರಿಸ್ಟಿನ್ ಡಿಮಿಟ್ರೋವಾ

ಕ್ರಿಸ್ಟಿನ್ ಡಿಮಿಟ್ರೋವಾ ಅವರು ಒಂದು ವಿಶಿಷ್ಟ ಶೈಲಿ ಮತ್ತು ಸಾಹಿತ್ಯಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡ ನಿಪುಣ ಕವಿ. ದೈನಂದಿನ ಜೀವನದ ಪರಿಚಿತ ಪರಿಸರದಲ್ಲಿ ಹೊಸ ಮತ್ತು ಅನಿರೀಕ್ಷಿತ ದೃಷ್ಟಿಕೋನಗಳನ್ನು ಅನ್ವೇಷಿಸುವುದು ಅವರ ಕಾವ್ಯ ಬರವಣಿಗೆಯ ಮೊದಲ ಹಂತ. ಈ ಪರಿಸರದಲ್ಲೇ ಅವರು ವಾಸ್ತವವನ್ನು ಹೊಸತಾಗಿ ನೊಡುತ್ತಾರೆ. ಡಿಮಿಟ್ರೋವಾ ಅವರ ಆರಂಭಿಕ ಕಾವ್ಯವು ರಸ್ತೆಯಿಂದ ತನ್ನ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆಯುತ್ತದೆ. ಕಮ್ಯುನಿಸಂನಿಂದ ಪ್ರಜಾಪ್ರಭುತ್ವದ ಸಮಾಜದತ್ತ ಸಾಗುವ ರಾಜಕೀಯ ರೂಪಾಂತರದ ಪಯಣದಲ್ಲಿ ಭರವಸೆ, ಉತ್ಸಾಹ ಮತ್ತು ಪ್ರತಿಭಟನೆಗಳ ಮುಖ್ಯ ವೇದಿಕೆಯಾಗಿತ್ತು ಈ ರಸ್ತೆ.  ಬಲ್ಗೇರಿಯನ್ ಕಾವ್ಯದ ಹೊಸ ಅಲೆಯನ್ನು ಬದಲಾಗುತ್ತಿರುವ ವಾಸ್ತವತೆಯು ಹಿಂದಿನ ಸಾಹಿತ್ಯದಲ್ಲಿದ್ದ ಕ್ಲೀಷೆಗಳು, ವಾಕ್ಚಾತುರ್ಯ ಮತ್ತು ಮರುಕಧ್ವನಿಗಳನ್ನು ತ್ಯಜಿಸಲು ಪ್ರಚೋದಿಸುತ್ತದೆ; ಹಾಗೆಯೇ ನಿಜವಾದ ಮೌಲ್ಯಗಳಿಗಾಗಿ ನಿರಂತರ ಅನ್ವೇಷಣೆಯ ಆರಂಭಿಕ ಹಂತವಾಗಿ ನಮ್ಮ ಸುತ್ತಲಿನ ವಸ್ತುಗಳ ಮೂಲಭೂತ ಕ್ರಮಗಳು ಮತ್ತು ಸ್ವರೂಪಗಳಿಗೆ ಮರಳಲು ಸಹ ಪ್ರಚೋದಿಸುತ್ತದೆ. ಇದು ಸಾಂಪ್ರದಾಯಿಕ ವಾಸ್ತವಿಕತೆಯೆಡೆಗೆ ಯಾವುದೇ ರೀತಿಯಲ್ಲಿ ಮತ್ತೆ ಹಿಂತಿರುಗುವ ಪಯಣವಲ್ಲ, ಇದು ಕಾವ್ಯಾತ್ಮಕ ಸ್ಫೂರ್ತಿ ಮತ್ತು ಅದೇ ಸಮಯದಲ್ಲಿ ಸಾಂಪ್ರದಾಯಿಕ ರೂಪಗಳು ಮತ್ತು ಭಾಷೆಯ ಡಿರೊಮ್ಯಾಂಟಿಸೈಸೇಶನ್ ಎರಡಕ್ಕೂ ಮೂಲವಾಗಿದೆ. ಪದರುಗಳ ಕಲಾತ್ಮಕ ಮಿಶ್ರಣ, ಲಘುಗೀತೆಯಂತಹ ಲಯಗಳು ಮತ್ತು ಬಾಲೋಚಿತ ಪುನರಾವರ್ತನೆಗಳ ಸಂಯೋಜನೆ, ವಿಭಿನ್ನ ದೃಷ್ಟಿಕೋನಗಳ ಘರ್ಷಣೆ – ಸಾಮಾನ್ಯ ಮತ್ತು ಅಸಾಮಾನ್ಯ, ಕನಸುಗಳು ಮತ್ತು ವಾಸ್ತವ – ಇವೆಲ್ಲವೂ ಡಿಮಿಟ್ರೋವಾ ಅವರ ಕಾವ್ಯಾತ್ಮಕ ಶೈಲಿಯ ಶ್ರೀಮಂತ ಸಂಯೋಜನೆಯನ್ನು ನಿರ್ಮಿಸುತ್ತವೆ.

ಡಿಮಿಟ್ರೋವಾ ಅವರು ತಮ್ಮ ಕವನಗಳಲ್ಲಿ ವಿಷಯಗಳ ಪೂರ್ಣವ್ಯಾಪ್ತಿಯನ್ನು ಹಂತಹಂತವಾಗಿ ವಾಕ್ಚತುರ್ಯ ಮತ್ತು ವ್ಯಂಗ್ಯವನ್ನು ಸೇರಿಸುತ್ತಾ, ವಿಸ್ತರಿಸುತ್ತಾ ಹೋಗುತ್ತಾರೆ. “ಉತ್ತರಕ್ಕಾಗಿ ಹುಡುಕಾಟ” ಕವನದಲ್ಲಿ ನಾಯಕನು ನಿಸರ್ಗಶಕ್ತಿಗಳನ್ನು (ಗಾಳಿ, ಭೂಮಿ, ಬೆಂಕಿ ಮತ್ತು ನೀರು) ಕೇಳುತ್ತಾನೆ, “ನಾನು ಯಾಕೆ ಇಲ್ಲಿದ್ದೇನೆ?” ಎಲ್ಲೂ ಉತ್ತರ ಸಿಗುವುದಿಲ್ಲ.  ಬಾವಿಯಲ್ಲಿರುವ ನೀರು ಮಾತ್ರ ಉತ್ತರಿಸುತ್ತೆ, “ಕೆಳಗಿಳಿದು ಬಾ ನನ್ನತ್ತ, ಹೇಳುವೆ”, ಅಂತ. “ಸುಮ್ಮನೆ ತಮಾಷೆಗೆ ಕೇಳಿದೆ” ಎಂದು ಹೇಳಿ ನಾಜೂಕಾಗಿ ಹಿಮ್ಮೆಟ್ಟುತ್ತಾನೆ. “ಮಿರರ್ಸ್” ಎಂಬ ಕವನದಲ್ಲಿ ಬರುವ ಕನ್ನಡಿಯು ಹೊರಗೆ ನೋಡಲು ಇರುವ ಕಿಟಕಿಯಂತೆಯೂ ಹೌದು, ನಮ್ಮ ಒಳಗೆ ನಾವು ನೋಡಿಕೊಳ್ಳುವುದಕ್ಕೆ ಇರುವ ಕಟಕಿಯೂ ಹೌದು, ಒಂದನ್ನೊಂದು ಗುರುತಿಸಿದ ನೆರಳುಗಳ ಹಾಗೂ ಸ್ವಬಿಂಬಗಳ ಜಾಲದೆಡೆಗಿನ ಕಿಟಕಿಯೂ ಹೌದು.

ಕವಿತಾ ರಚನೆಯ ಜತೆ ಕ್ರಿಸ್ಟಿನ್ ಡಿಮಿಟ್ರೋವಾ ಅವರ ಮೊದಲ ಮುಖಾಮುಖಿ, ಅವರ ಪ್ರಕಾರ, ತುಂಬಾ ಹೆಮ್ಮೆಪಡುವಂತಹದ್ದಾಗಿರಿಲಿಲ್ಲ. “ನನ್ನ ಮೊದಲ ಆರು ಕವನಗಳನ್ನು ಬಲ್ಗೇರಿಯನ್ ಭಾಷೆಯಲ್ಲೇ ಬರೆದೆ; ಈಗಲೂ ಈ ಕವನಗಳಲ್ಲಿ ನನಗೆ ಯಾವುದೂ ಇಷ್ಟವಿಲ್ಲ. ಬರೆಯಲು ಪ್ರಾರಂಭಿಸುವುದು ನನಗೆ ಕಷ್ಟವಾಯಿತು. ನಾನು ಯಾವಾಗಲೂ ಆಶ್ಚರ್ಯಪಡುತ್ತಿದ್ದೆ, ಜನರು ಕವಿತೆಯ ಬಗ್ಗೆ ಹೇಗೆ ಯೋಚಿಸುತ್ತಾರೆ? ಕವಿತೆ ಎಲ್ಲಿ ಕಾಣಿಸಿಕೊಳ್ಳುತ್ತದೆ? ಅದು ಈಗಾಗಲೇ ಅವರ ಮನಸ್ಸಿನಲ್ಲಿದೆಯೇ ಅಥವಾ ಅದು ಯಾವುದೋ ಒಂದು ನೆನಪಿನಿಂದ ಹುಟ್ಟುತ್ತದೆಯೆ?”

ಕಾವ್ಯದ ಜತೆಗಿನ ಈ ಅಸ್ಥಿರ ಆರಂಭವನ್ನು ಬದಿಗಿಟ್ಟು, ಡಿಮಿಟ್ರೋವಾ ಗದ್ಯ ಪ್ರಕಾರವನ್ನು ಅನ್ವೇಷಿಸಲು, ಗದ್ಯ ಬರೆಯಲು ತೊಡಗಿದರು. “ನನಗೆ ಗದ್ಯದ ಅವಶ್ಯಕತೆ ಇದೆ ಎಂದು ಅನಿಸಿತು. ಕಾವ್ಯ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಬಹುದು. ಮೊದಲಿಗೆ, ನಿಮಗೆ ಕಾವ್ಯವೇ ಬೇಕು ಅಂತನಿಸುತ್ತದೆ, ಆದರೆ ಕ್ರಮೇಣ ಅದು ನಿಮ್ಮನ್ನು ಖಿನ್ನತೆಯೆಡೆಗೆ ಎಳೆಯುತ್ತದೆ. ಗದ್ಯದ ಜತೆ ಹೀಗಾಗುವುದಿಲ್ಲ, ಬಹುಶಃ ಅದಕ್ಕಾಗಿಯೇ ನನ್ನ ಕಲ್ಪನೆಯು ಗದ್ಯದಿಂದ ಪ್ರಾರಂಭವಾಗುತ್ತದೆ”.

ಅವರು ತನ್ನನ್ನು ಹೇಗೆ ನೋಡುತ್ತಾರೆ? “ನನ್ನನ್ನು ಪೋಸ್ಟ್-ಮಾಡರ್ನಿಸ್ಟ್ ಎಂದು ನೋಡಲಾಗಿದೆ, ಆದರೆ ನಾನು ʻಪೋಸ್ಟ್-ಮಾಡರ್ನಿಸ್ಟ್ʼ ಎಂಬುದು ನನಗೆ ಖಚಿತವಿಲ್ಲ. ನಾನು ಬರೆಯುವಾಗ ಯಾವುದೋ ಪರಿಕಲ್ಪನೆಯನ್ನಿಟ್ಟುಕೊಂಡು ಎಂದಿಗೂ ಪ್ರಾರಂಭಿಸುವುದಿಲ್ಲ. ನನ್ನ ಮನಸ್ಸಿನಲ್ಲಿ ಉಳಿದುಹೋದ ಯಾವುದೋ ಸಣ್ಣ ವಿಷಯದೊಂದಿಗೆ ನಾನು ಪ್ರಾರಂಭಿಸುತ್ತೇನೆ. ಈ ವಿರೋಧಾಭಾಸ ನನಗೆ ಆಕರ್ಷಕವೆಂದನಿಸುತ್ತದೆ”.

1963ರಲ್ಲಿ ಜನಿಸಿದ ಕ್ರಿಸ್ಟಿನ್ ಡಿಮಿಟ್ರೋವಾ, ಬಲ್ಗೇರಿಯಾದ ಸೋಫಿಯಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಮತ್ತು ಅಮೆರಿಕನ್ ಅಧ್ಯಯನಗಳಲ್ಲಿ ಪದವಿ ಪಡೆದು, ಅದೇ ಯೂನಿವರ್ಸಿಟಿಯ ವಿದೇಶಿ ಭಾಷೆಗಳ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 2004ರಿಂದ 2006ರವರೆಗೆ, ಅವರು ಕಲೆ ಮತ್ತು ಸಂಸ್ಕೃತಿಯ “ಟ್ರುಡ್ ಡೈಲಿ”ಯ ಸಾಪ್ತಾಹಿಕ ಪುರವಣಿ, “ಆರ್ಟ್ ಟ್ರಡ್‌”ನ ಸಂಪಾದಕರಾಗಿದ್ದರು ಮತ್ತು 2007-2008ರಲ್ಲಿ “ಕ್ಲಾಸಾ ಡೈಲಿ”ಯಲ್ಲಿ ಅಂಕಣಕಾರರಾಗಿದ್ದರು.

ಅವರ ಕವನಸಂಕಲನಗಳಲ್ಲಿ ಮುಖ್ಯವಾದವು ʻಜಾಕೋಬ್ಸ್ ಥರ್ಟೀನ್ತ್ ಚೈಲ್ಡ್ʼ (Jacob’s Thirteenth Child 1992), ʻಎ ಫೇಸ್ ಅಂಡರ್ ದಿ ಐಸ್ʼ (A Face Under the Ice 1997), ʻಕ್ಲೋಸ್ಡ್ ಫಿಗರ್ಸ್ʼ (Closed Figures 1998), ʻಫೇಸಸ್ ವಿತ್ ಟ್ವಿಸ್ಟೆಡ್ ಟಂಗ್ಸ್ʼ (Faces with Twisted Tongues 1998), ʻತಾಲಿಸ್ಮನ್ ರಿಪೇರ್ಸ್ʼ (Talisman Repairs 2001), ʻದಿ ಪೀಪಲ್ ವಿಥ್ ದಿ ಲ್ಯಾಂಟರ್ನ್ಸ್ʼ (The People with the Lanterns 2003), ʻಕಾರ್ಡ್‌ಪ್ಲೇಯರ್ಸ್ ಮಾರ್ನಿಂಗ್ʼ (The Cardplayer’s Morning  2008), ಮತ್ತು ʻದಿ ಗಾರ್ಡನ್ ಆಫ್ ಎಕ್ಸ್‌ಪೆಕ್ಟೇಷನ್ಸ್ ಅಂಡ್ ದಿ ಆಪೋಸಿಟ್ ಡೋರ್ʼ (The Garden of Expectations and the Opposite Door 2012). ಅವರ ಆಯ್ದ ಕವನಗಳ ಎರಡು ಸಂಕಲನಗಳು ಇಂಗ್ಲಿಷ್‌ ಅನುವಾದದಲ್ಲಿ ಪ್ರಕಟವಾಗಿವೆ: ʻಎ ವಿಸಿಟ್ ಟು ದಿ ಕ್ಲಾಕ್‌ಮೇಕರ್ʼ (A Visit to the Clockmaker 2005) ಮತ್ತು ʻಮೈ ಲೈಫ್ ಇನ್ ಸ್ಕ್ವೇರ್ಸ್ʼ (My Life in Squares 2010). ಅವರ ಕಾದಂಬರಿ, ʻಸಬಾಜಿಯಸ್ʼಗೆ (Sabazius 2007), ರಾಷ್ಟ್ರೀಯ ಹ್ರಿಸ್ಟೊ ಜಿ. ಡಾನೋವ್ ಪ್ರಶಸ್ತಿ ನೀಡಲಾಯಿತು, ಕ್ಯಾನೆಟ್ಟಿ ಪ್ರಶಸ್ತಿಗೆ ಆಯ್ಕೆಯಾಯಿತು, ಮತ್ತು ಸ್ಪ್ಯಾನಿಷ್, ಜರ್ಮನ್, ರಷ್ಯನ್ ಮತ್ತು ರೊಮೇನಿಯನ್ ಭಾಷೆಗಳಿಗೆ ಅನುವಾದಗೊಂಡಿತು.  ಡಿಮಿಟ್ರೋವಾ ಅವರು ಎರಡು ಸಣ್ಣ ಕಥೆಗಳ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ: ʻಲವ್ ಅಂಡ್ ಡೆತ್ ಅಂಡರ್ ದಿ ಕ್ರೂಕ್ಡ್ ಪಿಯರ್ ಟ್ರೀಸ್ʼ (Love and Death under the Crooked Pear Trees 2004) ಮತ್ತು ʻದಿ ಸೀಕ್ರೆಟ್ ವೇ ಆಫ್ ದಿ ಇಂಕ್ʼ (The Secret Way of the Ink 2010).

ಕ್ರಿಸ್ಟಿನ್ ಡಿಮಿಟ್ರೋವಾ ಅವರ ಕವನಸಂಕಲನಗಳಿಗಾಗಿ ಐದು, ಕಾದಂಬರಿಗಳಿಗಾಗಿ ಮೂರು ಮತ್ತು ಜಾನ್ ಡನ್ ಮತ್ತು ಲೂವಿಸ್ ಕ್ಯಾರಲ್ ಅವರ ಕವನಗಳ ಬಲ್ಗೇರಿಯನ್ ಭಾಷೆಯ ಅನುವಾದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಡಿಮಿಟ್ರೋವಾ ಅವರ ಕವನಗಳು, ಸಣ್ಣ ಕಥೆಗಳು ಮತ್ತು ಪ್ರಬಂಧಗಳನ್ನು ಒಟ್ಟು 27 ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು 35 ದೇಶಗಳಲ್ಲಿ ಪ್ರಕಟಿಸಲಾಗಿದೆ.

ಕ್ರಿಸ್ಟಿನ್ ಡಿಮಿಟ್ರೋವಾ ಅವರು ತಮ್ಮ ಕಾವ್ಯದಲ್ಲಿ ವಿಲಕ್ಷಣ ಹಾಸ್ಯ, ಜಾಣ್ಮೆ, ವ್ಯಂಗ್ಯ, ವಾಕ್ಚಾತುರ್ಯ, ಸಂಭಾಷಣೆಯಂತಹ ಅಂಶಗಳನ್ನು ತೆರೆದ ಶೈಲಿಯಲ್ಲಿ ಬಳಸಿಕೊಳ್ಳುತ್ತಾರೆ. ನಿರಂತರವಾಗಿ ನಿರೀಕ್ಷೆಗಳನ್ನು ಹಿಮ್ಮೆಟ್ಟಿಸುವ, ತೀಕ್ಷ್ಣವಾದ ಪ್ರತ್ಯೇಕತೆಯ ಚೇತೋಹಾರಿ ಕಾವ್ಯ ಇವರದ್ದು. 1990ರ ದಶಕದ ಆರಂಭದಲ್ಲಿ ಹೊರಹೊಮ್ಮಲು ಪ್ರಾರಂಭಿಸಿದ ಹೊಸ ಬಲ್ಗೇರಿಯನ್ ಕಾವ್ಯದ ಪ್ರಮುಖ ಧ್ವನಿ ಇವರು; ನಿಸ್ಸಂದೇಹವಾಗಿಯೂ, ಇವರು ಮೊದಲ ಶ್ರೇಣಿಯ ಕವಿ.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿನ ಏಳು ಕವನಗಳಲ್ಲಿ ಮೊದಲ ನಾಲ್ಕು ಕವನಗಳನ್ನು ಗ್ರೆಗರಿ ಒʻಡೊನಹ್ಯೂ (Gregory O’Donoghue), ಹಾಗೂ ಉಳಿದ ಮೂರು ಕವನಗಳನ್ನು ಟಾಮ್ ಫಿಲಿಪ್ಸ್ ಅವರು (Tom Phillips) ಬಲ್ಗೇರಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

೧.ಉತ್ತರಕ್ಕಾಗಿ ಹುಡುಕಾಟ
ಮೂಲ: Searching for the Answer

ಆಕಾಶವ ಕೇಳಿದೆ ನಾನು,
ʻನಾನ್ಯಾಕೆ ಇಲ್ಲಿರುವೆ?ʼ
ಆಕಾಶ ನನ್ನ ಪದಗಳ ನುಂಗಿ,
ಇನ್ನೂ ಹೆಚ್ಚಿನ ಪದಗಳಿಗಾಗಿ
ಎದುರು ನೋಡಿತು.
ಹೆಚ್ಚೇನು ಹೇಳುವುದು ನನಗೆ ತೋಚಲಿಲ್ಲ.
ಭೂಮಿಯ ಕೇಳಿದೆ ನಾನು,
ʻನಾನ್ಯಾಕೆ ಇಲ್ಲಿರುವೆ?ʼ
ಭೂಮಿ ಉದಾಸೀನದಿಂದ ತನ್ನ
ಮಲೆಗಳ ಕೊಡವಿಕೊಂಡಿತು.
ಬೆಂಕಿಯ ಕೇಳಿದೆ ನಾನು,
ʻನಾನ್ಯಾಕೆ ಇಲ್ಲಿರುವೆ?ʼ

ತನ್ನ ಚಿಟಿಚಿಟಿಲಿನಲ್ಲೇ ತಲ್ಲೀನ ಅದು,
ಯಾವ ಮಾತೂ ಕೇಳಿಬರಲಿಲ್ಲ ಅದಕೆ.
ನಾನು ಬಾವಿಯ ಬಳಿ ಹೋಗಿ
ನೀರ ಕೇಳಿದೆ,
ʻನಾನ್ಯಾಕೆ ಇಲ್ಲಿರುವೆ?ʼ
ʻಕೆಳಗಿಳಿದು ಬಾ ನನ್ನತ್ತ, ಹೇಳುವೆʼ.
ʻಸುಮ್ಮನೆ ತಮಾಷೆಗೆ ಕೇಳಿದೆ!ʼ ನಾನಂದೆ.

೨.“ತನ್ನ ಕೈಗಡಿಯಾರಗಳನ್ನು ತಿನ್ನುವ ಒಬ್ಬ ತಂದೆಯ ಬಗ್ಗೆ ಒಂದು ಕವನ”
ಮೂಲ: A Poem  about the Father who ate his Watches

ಅವನ ಎಡಗೈಯಲ್ಲಿ ಅವನು ಮೂರು
ಕೈಗಡಿಯಾರಗಳನ್ನು ಧರಿಸುತ್ತಿದ್ದ.
ʻಯಾಕೆ ಬೇಕು ಮೂರೂ ನಿನಗೆ?ʼ
ʻಈ ಗಡಿಯಾರʼ ಮೊದಲನೆಯ
ಕೈಗಡಿಯಾರವನ್ನು ತೋರುತ್ತಾ ಹೇಳಿದ
ʻಅರ್ಧ ಗಂಟೆಯ ನಂತರ ಎಷ್ಟು
ಹೊತ್ತಾಗಿರುತ್ತೇಂತ ತೋರಿಸುತ್ತೆʼ.  
ʻಇದು ಇದೆಯಲ್ಲʼ ಎರಡನೆಯ
ಕೈಗಡಿಯಾರವನ್ನು ತೋರಿಸುತ್ತಾ ಹೇಳಿದ
ʻಅರ್ಧ ಗಂಟೆಯ ಹಿಂದೆ ಎಷ್ಟು
ಹೊತ್ತಾಗಿತ್ತು ಅತ ತೋರಿಸುತ್ತೆʼ.

ʻಮತ್ತೆ ಇದು ನೋಡುʼ ಮೂರನೆಯ
ಕೈಗಡಿಯಾರವನ್ನು ತೋರಿಸುತ್ತಾ ಹೇಳಿದ
ʻಈಗ ಎಷ್ಟು ಹೊತ್ತಾಗಿದೇಂತ ತೋರಿಸುತ್ತೆʼ.

ʻಸರಿ ಹಾಗಾದರೆ, ಸರಿಯಾದ ಸಮಯವನ್ನು
ಹೇಳುವೆಯಾ?ʼ
ʻಹ ಹ ಹ, ಚಿಂತೆ ಮಾಡಬೇಡ,
ಆ ಸಮಯ ಬರುತ್ತೆʼ.

೩.ಟ್ರೈನಿನ ಒಳಗೆ
ಮೂಲ: In the Train

ಟ್ರೈನಿನ ಒಳಗೆ,
ಎದುರು – ಹಲ್ಲುಗಳಿಲ್ಲದ
ವಯಸ್ಸಾದ
ಹಂಗೇರಿಯನ್ ಹೆಂಗಸೊಬ್ಬಳು
ಹೇಳಿದಳು ನನಗೆ,
ಅವಳ ಎರಡು ಮಕ್ಕಳು
ತೀರಿ ಹೋದವಂತೆ,
ಮತ್ತೆ ಅವಳ ಹಿರಿಮಗ,
ಈಗ ಅಮೆರಿಕಾದಲ್ಲಿದ್ದಾನಂತೆ –
ಇಲ್ಲಿ ನೋಡು ಫೋಟೋಗಳು,
ಅಲ್ಲಿದ್ದಾನೆ ನೋಡು, ಅವನೇ,
ಇದೇ ನೋಡು ಅವನ ಸಂಸಾರ.

ಅವಳು ಬಲ್ಗೇರಿಯನ್ ಸಿಗರೇಟುಗಳನ್ನು
ಸೇದುತ್ತಿದ್ದಳು, ಇಲ್ಲ, ನಿಜ ಹೇಳಬೇಕೆಂದರೆ
ಬುಡಾಪೆಸ್ಟಿನಿಂದ ಬುಕಾರೆಸ್ಟ್‌ವರೆಗೆ
ಒಂದು ಅತಿ ಉದ್ದನೆಯ
ಸಿಗರೇಟನ್ನು ಸೇದಿದಳು.
ಅವಳಂದಳು,
“ನನಗೀಗ ಬದುಕಿರುವುದಕ್ಕೆ ಯಾವ
ಕಾರಣವೂ ಇಲ್ಲ”. 
ಸಹಜವಾಗಿ, ಸರಳವಾಗಿ,
ಏಕತಾನದಲ್ಲಿ ಹೇಳಿದಳು,
ಹಲ್ಲಿಲ್ಲದವರ ಘನತೆಯನ್ನು ಬಿಡದೆ.

೪.ಗಡಿ
ಮೂಲ: The Border

ನನ್ನ ಮಗಳು ಕೇಳಿದಳು, ಅವಳಿಗಾಗಿ
ನಾನು ಬಬಲ್‌ಗಮ್ ತಂದೆನಾ ಅಂತ.
ನಾ ಹೇಳಿದೆ, ನಾನು ತರಲಿಲ್ಲ,
ಆದರೆ ನಾನಿದ್ದೇನಲ್ಲ, ಸಾಕಲ್ಲ.
ಅವಳು ಆಕ್ಷೇಪಿಸಿ ಹೇಳಿದಳು, ನಿನ್ನ ಮಾತು ಹಾಗಿರಲಿ,
ಆದರೆ ಬಬಲ್‌ಗಮ್‌ನ ಮಾತೇ ಬೇರೆ.
ನಾನವಳಿಗೆ ತಿಳಿಹೇಳಿದೆ, ಚೆನ್ನಾಗಿರುವ ವಸ್ತುವನ್ನೇ
ಯಾವಾಗಲೂ ಅಪೇಕ್ಷಿಸುವುದು ತರವಲ್ಲ.
ನನ್ನನ್ನು ತಿದ್ದಿದಳು ಅವಳು:

“ಚೆನ್ನಾಗಿರುವ ವಸ್ತುವಲ್ಲ, ಇದು ಬಬಲ್‌ಗಮ್”.
ಸೂರ್ಯ ತನ್ನ ಕೆಲಸವನ್ನು ಜೋರಾಗೇ ಮಾಡುತ್ತಿದ್ದ,
ಹಕ್ಕಿಗಳು ತಮ್ಮ-ತಮ್ಮೊಳಗೆ ಜಗಳವಾಡುತ್ತಿದ್ದವು,
ಪಾರ್ಕಿನ ಹುಲ್ಲು ಹಸಿದ-ಹಸಿರಾಗಿತ್ತು,
ನನ್ನ ಮಗಳು ತನ್ನ ಹೃದಯವನ್ನೇ ಸುರಿದಳು ಮಳೆಯಾಗಿ.
ಒಂದು ಖುಷಿಯ ಲೋಕವಿದೆ, ಒಂದು ದುಃಖದ ಲೋಕ,
ಇವುಗಳ ನಡುವೆ ಇದೆ ಬಬಲ್‌ಗಮ್.

೫.ಜೀವನವೆಂದರೆ
ಮೂಲ: Life is

ತಪ್ಪಿದ ಟ್ರೈನುಗಳು,
ಮೊದಲ ನೋಟದ ಪ್ರೇಮ,
ಗಳಿಸಿದ್ದನ್ನು ಕಕ್ಕುವುದು,
ಕಕ್ಕಿದ್ದನ್ನು ಗಳಿಸಿಕೊಳ್ಳುವುದು,
ತಿಳಿದ ಹಾಡುಗಳ ಹಾಡುವುದು,

ಹೊಸ ಹಾಡುಗಳಿಗೆ ನಾದ ಸೇರಿಸುವುದು,
ಭವಿಷ್ಯದಲ್ಲಿ ಗುಪ್ತ ಲಂಕೆಗಳ ಕಟ್ಟುವುದು,
ವರ್ತಮಾನದಲ್ಲಿ ದುಡಿಯುವುದು,
ಕಳೆದದ್ದನ್ನು ಕಳಕೊಳ್ಳುವುದು.

೬.ಎಲ್ಲಾ ಚೆನ್ನಾಗಿತ್ತು ನನಗೆ ಒಂದಾನೊಂದು ಬೆಳಗ್ಗೆ
ಮೂಲ: One morning when for me everything was fine

ನಮ್ಮ ಸುತ್ತಲೂ ಇರುವ ಕಂದರಗಳನ್ನು
ನಾನೇಕೆ ಗಮನಿಸಲಿಲ್ಲ?
ಇಲ್ಲಿ ನೋಡು, ಇವನೊಬ್ಬ ಕಂದರದ ಮೇಲೆಯೇ ತನ್ನ
ಹಾಸಿಗೆ ಹರಡಿದ್ದಾನೆ, ಸಂತೋಷವಾಗಿದ್ದಾನೆ.
ಇವಳೊಬ್ಬಳು ತನ್ನ ಮನೆಯ ಬೀಗವನ್ನು
ಎರಡು ಕೀಲಿಕೈಗಳಿಂದ ತೆರೆಯುತ್ತಾಳೆ,
ಇನ್ನೊಂದು ಕೀಲಿಕೈಯಿಂದ ಕಂದರದೊಳಗೆ ಹೋಗುತ್ತಾಳೆ.

ಕೆಲವರು ಕಂದರಗಳ ಮೇಲಿಂದಲೇ
ಓಡಾಡಲು ಇಚ್ಚಿಸುತ್ತಾರೆ,
ಮತ್ತೆ ಕೆಲವರಿಗೆ, ಎಲ್ಲರಿಗೂ ಕಾಣುವಂತಿರಬೇಕೆಂಬುದು
ಮುಖ್ಯ,
ಪೋಟಿಗಾರರಿಗೆ ಸಹಾಯ ಮಾಡುವುದು,
ಸಲಹೆ ನೀಡುವುದು.
ನನಗಂತೂ ಮತ್ತೂ ಅಸ್ಪಷ್ಟವಾದ ಸಂದಿಗ್ಧತೆ ಎದುರಾಗಿದೆ,
ಮತ್ತೂ ಕೆಲವು ವಿಷಯಗಳನ್ನು ಮರೆಯಬೇಕಾಗಿದೆ.
ಗಡಿಯಾರವೇನೋ ಸಹನೆ ತೋರಲು ಸಿದ್ಧವಾಗಿದೆ,
ಆದರೆ ದಾರಿ ತೋರಿಸುವುದಿಲ್ಲ ಅದು.
ನನ್ನ ದಿಗಿಲನ್ನೂ ಅಳೆಯುವುದಿಲ್ಲ ಅದು.
ಯಾಕಿದ್ದೇನೆ ನಾನಿಲ್ಲಿ?
ಯಾತಕ್ಕಾದರೂ ಜೀವದ ಇರುವಿಕೆ?
ಯಾಕೆ ಈ ಜಗ ಚೂರುಚೂರಾಗಿ ಒಡೆಯಬಾರದು
ನಾವು ಮನಸ್ಸಾರೆ ಪ್ರೀತಿಸುವ ಎಲ್ಲದರಂತೆ?
ಕಾಗದಕ್ಕೆ ಗೊತ್ತಿರುವುದಿಲ್ಲ ಅದರ
ಮೇಲೆ ಏನು ಬರೆದಿರುವುದೆಂದು.
ಕಾಗದ ಒಂದು ದೋಣಿಯಾಗಬಹುದಷ್ಟೇ
ಮತ್ತೆ ಒಂದಷ್ಟು ಹೊತ್ತು ತೇಲುವುದು.

೭.ಹಾಡೊಂದರ ಕಿಟಕಿಯಿಂದ
ಮೂಲ: Through the Window of a Song

ಇದು ಬರೀ ಹಾಡಲ್ಲ, ಬರೀ ಬಾಯಿಯಲ್ಲ.
ಇದು ಈ ಅನಂತ ಬ್ರಹ್ಮಾಂಡ
ಸಿಡಿದೊಡೆದು ಹೊರಬರುವ ರಂಧ್ರ,
ಇದು ಇಂಗಿತಗಳು ಆದಿಕಾಲದ
ಅಗ್ನಿಕಣಗಳಾಗಿರುವ ಅಸಲಿ ಗೊಂದಲದ ಉಸಿರು.

ಒಂದೊಂದು ಇಂದ್ರಿಯವೂ ಸಮನಾಗಿ ಎಚ್ಚೆತ್ತಿದೆ,
ಅಸಮಾಧಾನಿತ, ಅವಿರೂಪಿತ,
ತನಗಾಗಿಯೇ ಇರುವುದು ಬಿಂದು,
ಹುಟ್ಟಿಲ್ಲ ಸಮಯವಿನ್ನೂ.

ತಮ್ಮ ಚರ್ಮದ ರೆಕ್ಕೆಗಳ ಬಡಿಯುತ್ತ
ತಿಪುರಾತನ ಹಾಡುಗಳು
ಸಿಡಿದೊಡೆದು ಹೊರಬರುವ ಸಂದು ಅದು,
ಒಂದು ಕಿರಿದಾದ ಕಿಟಕಿ ಆ ಸಂದಿಗೆ,
ಅಲ್ಲಿ ನಾವಿದ್ದೆವೋ,
ಅಲ್ಲಿ ನಾವಿದ್ದಿರಬಹುದು.

ಕಿಟಕಿಗಳು. ಅವು ತೆರೆಯುತ್ತವೆ, ಅವು ಮುಚ್ಚುತ್ತವೆ.
ಶೀತಗಾಳಿಯ ಭಯ ನಮ್ಮನ್ನು ಅತಿಎಚ್ಚರವಾಗಿಸುತ್ತೆ.
ನಿನಗೆ ಕತ್ತಲೆಂದರೆ ಭಯವೆ?
ನೀನು ಜತೆಯಲ್ಲಿರುವೆಯಾದರೆ, ಇಲ್ಲ.

‍ಲೇಖಕರು admin j

June 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kristin Dimitrova

    I’d like to express my warmest gratitude to Mr. Jayasrinivasa Rao for translating my poems into Kannada! What a beautiful surprise!
    I am most honored.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: