
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.
ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.
‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.
‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.
12
ಎಲ್ಲರಿಗೂ ಗೊತ್ತಿರುವಂತೆ ಸಮಾಜದಲ್ಲಿ ನಮಗೆ ಅಂದರೆ ಹೆಣ್ಣುಮಕ್ಕಳಿಗೆ ಅನೇಕ ಕಟ್ಟುಪಾಡುಗಳಿವೆ. ಬಾಲ್ಯದಿಂದಲೇ ಹೆಣ್ಣು, ‘ಶ್ಶ್… ಸುಮ್ನಿರು’, ‘ಹಾಗೆಲ್ಲ ಕೇಳಬಾರದು’, ‘ಹಾಗೆಲ್ಲ ಹೇಳಬಾರದು’, ‘ಹಾಗೆಲ್ಲ ನಿಲ್ಲಬಾರದು, ಕೂರಬಾರದು, ನಗಬಾರದು, ಉಡಬಾರದು, ತೊಡಬಾರದು’ ಇತ್ಯಾದಿ ಕೊರಳಲ್ಲಿ ಕಟ್ಟಿದ ಬಾರದುಗಳ ಗುಂಡುಗಳ ಹೊತ್ತುಕೊಂಡೇ ಬೆಳೆಯುತ್ತೇವೆ. ಅದರ ಭಾರಕ್ಕೆ ಅದೆಷ್ಟು ಕುಗ್ಗಿ ಹೋಗುತ್ತೇವೆಂದರೆ ಹಲವಾರು ಹೆಣ್ಣುಮಕ್ಕಳು ತಮಗೊಂದು ವ್ಯಕ್ತಿತ್ವವಿದೆ ಅನ್ನುವ ಅರಿವು ದೂರದ ಮಾತಾಯಿತು, ತಮ್ಮದೇ ಆದ ಅಭಿಪ್ರಾಯಗಳೂ ಇರುತ್ತವೆ/ಇವೆ ಅನ್ನುವುದನ್ನೇ ಮರೆತುಬಿಡುವಷ್ಟು! ಬಾರದ ಗುಂಡುಗಳು ಭಾರ ಅನ್ನುವುದೂ ಗೊತ್ತಾಗದಷ್ಟು. ಇದ್ಯಾವ ಕಾಲದ ಕತೆ ಹೇಳ್ತಿದೀನಿ ಅದೂ ಇಪ್ಪತ್ತೊಂದನೇ ಶತಮಾನದ ಈ ದಿನಗಳಲ್ಲಿ ಅಂತ ಕೆಲವರಿಗೆ ಅನ್ನಿಸಬಹುದು.
ಇಂದಿಗೂ ಇಂಥದ್ದೊಂದು ಪ್ರಪಂಚ ವಿಶಾಲವಾಗೇ ಇದೆ ಇನ್ನೂನೂ! ನಮ್ಮ ದೇಹದ ಕುರಿತೇ ನಮ್ಮಗಳಿಗೆ ಸರಿಯಾದ ಪರಿಚಯವಿರೋದಿಲ್ಲ. ಒಳ ಉಡುಪಗಳ ಹೆಸರು ಹೇಳಲೂ ನಮಗೆ ಸಂಕೋಚ. ಮುಟ್ಟಿನ ಬಗ್ಗೆ, ಲೈಂಗಿಕ ಬದುಕಿನ ಕುರಿತು ನಿರಾತಂಕವಾಗಿ ಮಾತನಾಡಲು ಹಿಂಜರಿತ. ಸಹಜ ಮಾತುಗಳಲ್ಲಿ ಅವುಗಳನ್ನು ಹೇಳುವ ಪ್ರಸಂಗ ಬಂದು, ಹೇಳಿಯಾದ ಮೇಲೆ ಅದೇನೋ ಮಾಡಬಾರದ ತಪ್ಪು ಮಾಡಿದಂಥ ಅಪರಾಧಿ ಭಾವ ಕಾಡುತ್ತದೆ. ಇದರಿಂದಾಗಿಯೇ ಅನೇಕ ಲೈಂಗಿಕ ಕಿರುಕುಳಗಳು, ಅತ್ಯಾಚಾರಗಳು ಬೆಳಕಿಗೆ ಬರುವುದೇ ಇಲ್ಲ.
ಹೆಣ್ಣಿನ ಮರ್ಯಾದೆ ಎಂಬ ಸೋಗಿನ ಸೆರಗಿನಡಿ ಸಮಾಧಿಯಾಗುತ್ತವೆ. ಹೆಣ್ಣು ಇದರಿಂದ ಉಸಿರುಗಟ್ಟಿ ನರಳುತ್ತಾಳೆ. ಹಾಗಂತ ಮನುಷ್ಯನಲ್ಲಿ ಮುಚ್ಚುಮರೆ, ಲಜ್ಜೆ, ಸಂಕೋಚಗಳು ಇರುವುದು ತಪ್ಪೇ, ನಿರ್ಲಜ್ಜರಾಗಿ ಬದುಕಬೇಕೆ? ಎಂದು ನೀವು ಕೇಳಿದರೆ, ನಾನು, ಇಲ್ಲ ಹೆಣ್ಣಾಗಲಿ, ಗಂಡಾಗಲಿ ಅವೆಲ್ಲವೂ ಇರಲೇಬೇಕು ಎಂದೇ ಹೇಳುತ್ತೇನೆ. ಆದರೆ ಹೆಣ್ಣು ತನಗೆ ತಾನೇ ಅಪರಿಚಿತಳಾಗುವಷ್ಟಲ್ಲ! ಹೆಣ್ಣೆಂದರೆ ಅವೆಲ್ಲವುಗಳ ಮೊತ್ತ ಎನ್ನುವಷ್ಟರ ಮಟ್ಟಿಗಂತೂ ಖಂಡಿತ ಇರಕೂಡದು! ಹೆಣ್ಣಿಗೆ ಇವೆಲ್ಲವನ್ನೂ ಹೇರಿದ ಸಮಾಜ ಗಂಡಿನ ವಿಷಯದಲ್ಲಿ ಇದಕ್ಕೆ ವಿರುದ್ಧವಾಗಿ ಅಂದರೆ ಇವುಗಳು ಇರಲೇಬೇಕೆಂದೇನಿಲ್ಲ ಎಂಬಂತೆ ಗಂಡನ್ನು ಬೆಳೆಸುತ್ತದೆ.

ಈಗ ಅಂದರೆ ಜೀವನ ಇಷ್ಟು ಮಾಗಿದ ಮೇಲೆ ಹೇಳುತ್ತಿರುವ ನಾನು ಒಂದೊಮ್ಮೆ ಸಂಕೋಚದ ಮುದ್ದೆಯಾಗಿದ್ದೆನಾದರೂ ನನ್ನ ತಾಯಿಯಷ್ಟಲ್ಲ ಎನ್ನುವುದನ್ನೂ ನಾನಿಲ್ಲಿ ಹೇಳಲೇಬೇಕು. ಇವತ್ತಿಗೂ ಅವರಲ್ಲಿ ಅನೇಕ ವಿಷಯಗಳಿಗೆ ಅನಗತ್ಯವಾದ ಸಂಕೋಚ, ಹಿಂಜರಿಕೆಗಳಿವೆ. ಅಂಥದ್ದೊಂದು ವಾತಾವರಣದಲ್ಲಿ ಅವರು ಬೆಳಿದಿದ್ದು ಮತ್ತು ಹಿರಿಯರು ಹೇಳುತ್ತಾರೆಂದರೆ ಅದು ನಮ್ಮ ಒಳ್ಳೆಯದಕ್ಕೇ ಎಂದು ನಂಬಿಕೊಂಡು ಬಂದಿರುವುದು ಅದಕ್ಕೆ ಕಾರಣ. ಹೀಗಾಗಿಯೇ ನಾನು ಯೋನಿ ಪದದ ಅರ್ಥವನ್ನು ಕೇಳಿದ್ದಾಗ ಅವರು ಗಾಬರಿ ಬಿದ್ದಿದ್ದು. ಅವ್ವ ಹೇಳಿದ್ದನ್ನು ಕೇಳಿದ ಮೇಲೆ, ಎಂಥಾ ಕೆಟ್ಟ ಪದವನ್ನು ಓದಿದ್ದಲ್ಲದೇ, ಅದರ ಅದರ್ಥ ಏನೆಂದು ಅಪ್ಪ ಅವ್ವನನ್ನೂ ಕೇಳಿಬಿಟ್ಟೆನಲ್ಲ ಎಂದು ನಾನು ಮುಜುಗರಪಟ್ಟುಕೊಂಡಿದ್ದು.
ಮಕ್ಕಳ ಇಂಥ ಅಮಾಯಕ ಪ್ರಶ್ನೆಗಳಿಗೆ ತಂದೆ ತಾಯಿಗಳು ಮಕ್ಕಳ ವಯಸ್ಸಿಗನುಗುಣವಾಗಿ ತುಂಬಾ ಸಹಜವಾಗಿ ಅಗತ್ಯವಿದ್ದಷ್ಟನ್ನು ಮಾತ್ರ ವಿವರಿಸಿದಲ್ಲಿ ಅವರಲ್ಲಿ ಅನಗತ್ಯ ಕುತೂಹಲ ಕೆರಳುವುದಿಲ್ಲ. ಏನೇ ಹೇಳಿದರೂ ಮಕ್ಕಳು ಕುತೂಹಲದಿಂದ ತಮ್ಮನ್ನು ತಾವು ಅಪಾಯಕ್ಕೆ ಒಡ್ಡಿಕೊಳ್ಳದಿರುವಷ್ಟನ್ನೇ ಹೇಳುವುದು ಒಳಿತು.
*
ನಾವು ಮೋರಟಗಿಯಲ್ಲಿದ್ದಾಗಲೇ ಅಲ್ಲಿನ ಗದುಗಿನ ತೋಂಟದಾರ್ಯ ಮಠದ ಶಾಖೆಯಾದ ವಿರಕ್ತ ಮಠದ ನೂರೊಂದೇಶ್ವರಸ್ವಾಮಿಗಳು ಐಕ್ಯರಾಗಿ ಅವರ ಜಾಗಕ್ಕೆ ಹದಿಹರೆಯವನ್ನೂ ದಾಟಿರದ ಸುರದ್ರೂಪಿ ಸಿದ್ಧಲಿಂಗೇಶ್ವರ ಸ್ವಾಮಿಗಳನ್ನು ಪಟ್ಟಗಟ್ಟಲಾಗಿತ್ತು. ಪಟ್ಟಗಟ್ಟಿದ ನಂತರವೂ ಗದುಗಿನಲ್ಲೋ ಧಾರವಾಡದಲ್ಲೋ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದ ಶ್ರೀ. ಸಿದ್ಧಲಿಂಗೇಶ್ವರ ಸ್ವಾಮಿಗಳು ಸಾಹಿತ್ಯದಲ್ಲಿ ಆಸಕ್ತಿ ಉಳ್ಳರಾಗಿದ್ದರಿಂದ ಅನೇಕ ಉತ್ತಮ ಕೃತಿಗಳು ಮಠದ ಗ್ರಂಥಾಲಯದಲ್ಲಿದ್ದವು. ಅದಕ್ಕೆ ಗದುಗಿನ ತೋಂಟದಾರ್ಯ ಮಠದ ಶ್ರೀಗಳಾಗಿದ್ದ ಡಾ. ಸಿದ್ಧಲಿಂಗ ಸ್ವಾಮಿಜೀಯವರ ಅಪಾರ ಬೆಂಬಲವಿದ್ದುದಾಗಿ ನನ್ನ ತಂದೆಯ ಬಳಿ ಮೋರಟಗಿಯ ಸ್ವಾಮಿಜಿ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೇನೆ. ಅವರಿಂದಾಗಿಯೇ ನಮ್ಮ ಮನೆಯಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಅನೇಕ ವ್ಯಕ್ತಿಚಿತ್ರಣ ಪುಸ್ತಗಳನ್ನು ನಮ್ಮ ತಂದೆ ತರಿಸಿ ನಮಗೆಲ್ಲ ಓದಲು ಕೊಡುತ್ತಿದ್ದರು. ಮಠದಿಂದ ಕಾದಂಬರಿಗಳನ್ನು ತಂದು ಅಪ್ಪ ಅವ್ವ ಇಬ್ಬರೂ ಓದಿ ಮರಳಿಸುತ್ತಿದ್ದರು.
ಹಾಗೆ ತಂದ ಕಾದಂಬರಿಗಳಲ್ಲಿ ನಾನೋದಿದ ಮೊದಲ ಕಾದಂಬರಿ ಕೆ. ವಿ ಅಯ್ಯರ್ ಅವರು ಬರೆದ ‘ರೂಪದರ್ಶಿ’. ಕಾದಂಬರಿಯಲ್ಲಿ ಜಗದ್ವಿಖ್ಯಾತ ಚಿತ್ರಕಾರ ಮೈಕಲ್ ಏಂಜಿಲೊ ಫ್ಲಾರೆನ್ಸ್ ನಗರದ ಚರ್ಚ್ ಒಂದರ ಛಾವಣಿಯಲ್ಲಿ ಏಸುವಿನ ಜೀವನವನ್ನು ಬಿಡಿಸುವ ಕೆಲಸ ಮಾಡುವಾಗ ಬಾಲ ಏಸುವಿನ ಚಿತ್ರಕ್ಕಾಗಿ ರೂಪದರ್ಶಿಯಾಗಿದ್ದ ತುಂಬು ಚಂದಿರನಂತೆ ತೇಜಸ್ಸುಳ್ಳ ಪುಟ್ಟ ಹುಡುಗ ಅರ್ನೆಸ್ಟೊನೇ ಮುಂದೆ ಏಸುವಿನ ಕೊನೆಗಾಲದಲ್ಲಿ ಅವನಿಗೆ ಮೋಸ ಮಾಡಿದ ಲಂಪಟ, ಮೋಸಗಾರ, ಕುಡುಕ, ಕುರುಪಿ ಜುದಾಸನ ಚಿತ್ರಣಕ್ಕೂ ರೂಪದರ್ಶಿಯಾಗುವ ವಿಪರ್ಯಾಸವೇ ಈ ಕಾದಂಬರಿಯ ಕಥಾವಸ್ತು. ಆಗ ಈ ಕಾದಂಬರಿಯನ್ನು ಅದೆಷ್ಟು ಸಲ ಓದಿದ್ದೆನೋ ಅಷ್ಟೂ ಸಲ ಒಳಗಿನಿಂದ ಸಂಕಟವೊಂದೆದ್ದು ತಾಳಲಾಗದೆ ಅತ್ತಿದ್ದೇನೆ. ೨೦೧೩ರ ಫೆಬ್ರವರಿ ೧೦ರಂದು ನಾನು ಬೆಂಗಳೂರಿನಲ್ಲಿ ‘ಈ ಹೊತ್ತಿಗೆ’ (ಓದುಗರ ಸಾಹಿತ್ಯ ವೇದಿಕೆ) ಅರಂಭಿಸಿದಾಗ ಮೊದಲು ಚರ್ಚೆಗೆ ತೆಗೆದುಕೊಂಡಿದ್ದೇ ‘ರೂಪದರ್ಶಿ’ ಕಾದಂಬರಿಯನ್ನು. ನನ್ನನ್ನು ತುಂಬಾ ಕಾಡಿದ ಕಾದಂಬರಿ ಇದು.

ರೂಪದರ್ಶಿ ಓದಿ ರುಚಿ ಹತ್ತಿಸಿತ್ತು. ಅದರ ನಂತರ ಮೋರಟಗಿಯಲ್ಲಿ ಓದಿದವುಗಳಲ್ಲಿ ನೆನಪಿರುವುದು ಎಚ್.ತಿಪ್ಪೇರುದ್ರಸ್ವಾಮಿ ಅವರು ಬರೆದ ‘ಕರ್ತಾರನ ಕಮ್ಮಟ’ ಮತ್ತು ‘ಕದಳಿಯ ಕರ್ಪೂರ’ ಕಾದಂಬರಿಗಳು.
ಕತೆ ಕಾದಂಬರಿಗಳ ಎದುರು ಪಠ್ಯ ಪುಸ್ತಕಗಳು ಸಪ್ಪೆ ಅನಿಸತೊಡಗಿದ್ದವು. ಅಪ್ಪಾರಿಗೆ ಆಗ ರಾಯಚೂರು ಜಿಲ್ಲೆ, ಕುಷ್ಟಗಿ ತಾಲ್ಲೂಕಿನಲ್ಲಿದ್ದ ದೋಟಿಹಾಳ ಎನ್ನುವ ಊರಿಗೆ ವರ್ಗಾವಣೆ ಆಯಿತು. ಆ ಊರಿನಲ್ಲಿ ಕಾದಂಬರಿಗಳು ಓದಲು ಸಿಗುತ್ತವೋ ಇಲ್ಲವೋ ಅನ್ನುವ ಆತಂಕ ನನ್ನದು. ಮಠದಲ್ಲಿ ಮಾತ್ರ ಸಾಹಿತ್ಯ ಕೃತಿಗಳು ಸಿಗುತ್ತವೆ ಎಂದುಕೊಂಡಿದ್ದ ನನಗೆ ದೋಟಿಹಾಳಕ್ಕೆ ಹೋದಾಗ ಅಲ್ಲಿ ಯಾವುದೇ ಮಠವಿಲ್ಲದಿರುವುದು ನಿರಾಸೆ ತಂದಿತ್ತಾದರೂ ಹೈಸ್ಕೂಲಿಗೆ ಬಂದಾಗ ಶಾಲೆಯ ಲೈಬ್ರರಿಯಲ್ಲಿ ಸಿಗಲಿವೆ ಎಂದು ಗೊತ್ತಾದಾಗ ಆದ ಖುಷಿ ಅಷ್ಟಿಷ್ಟಲ್ಲ. ಅಲ್ಲದೇ ಹೈಸ್ಕೂಲಿನಲ್ಲಿ ನಮಗೆ ಕನ್ನಡ ಪಾಠ ಮಾಡುತ್ತಿದ್ದ ಶ್ರೀಯುತ. ಬಿ. ಜಿ ಹುಲಿ ಸರ್ ಮನೆಯಲ್ಲಿ ಒಂದ್ರಾಶಿ ಪುಸ್ತಕಗಳಿದ್ದು, ಅವರೂ ಅವರ ಶ್ರೀಮತಿ ಸಾವಿತ್ರಿಯವರೂ ನನ್ನ ತಂದೆ ತಾಯಿಗೆ ಸ್ನೇಹಿತರಾಗಿದ್ದರಾದ್ದರಿಂದ ಅವರ ಮನೆಯಿಂದ ಪುಸ್ತಕಗಳನ್ನು ಓದಲೆಂದು ಅಪ್ಪ, ಅವ್ವ ತರುತ್ತಿದ್ದರು. ಅವ್ವನ ಇನ್ನೊಬ್ಬ ಸ್ನೇಹಿತೆ ಶ್ರೀಮತಿ.
ಲಕ್ಷ್ಮಿಬಾಯಿ ಮಕ್ತಾಪುರ್ ಅವರಿಗೂ ಓದಿನ ಚಟವಿತ್ತಾದ್ದರಿಂದ ಈ ಮೂರೂ ಜನ ಸ್ನೇಹಿತೆಯರಿಂದಾಗಿ ಅವರಿಗೂ ಗೊತ್ತಿಲ್ಲದಂತೆ ನನ್ನ ಪುಸ್ತಕದೊಲವಿಗೆ ಬಲ ಬಂದಿತು. ಅದೆಂಥಾ ಚಟವಾಗಿ ಬಿಟ್ಟಿತ್ತೆಂದರೆ ಸಮಾಜಶಾಸ್ತ್ರದ ತರಗತಿಯಲ್ಲಿ ಪಠ್ಯಪುಸ್ತಕದ ನಡುವೆ ಕಾದಂಬರಿಯನ್ನಿಟ್ಟುಕೊಂಡು, ಪಾಠವನ್ನು ಆಲಿಸುತ್ತಿದ್ದೇನೆ ಎಂಬಂತೆ ನಟಿಸುತ್ತಾ ಕಾದಂಬರಿಯನ್ನೋದುತ್ತಿದ್ದೆ.
ಆಗಾಗ ಮೇಷ್ಟ್ರು ಕೇಳುವ ಪ್ರಶ್ನೆಗಳಿಗೆ ಹೇಗೋ ಸಾವರಿಸಿಕೊಂಡು ಅಷ್ಟಿಷ್ಟು ಕಿವಿ ಮೇಲೆ ಬಿದ್ದ ಸಾಲುಗಳನ್ನು ಸರಸರನೇ ಪುಸ್ತಕದಲ್ಲಿ ಕಣ್ಣಾಡಿಸಿ ಹುಡುಕಿ ಉತ್ತರ ಹೇಳಿ ಅದು ಹೇಗೋ ಪಾರಾಗುತ್ತಿದ್ದೆ. ಈಗ ನೆನೆದರೆ ಅಷ್ಟೊಂದು ಚುರುಕುತನ ನನ್ನಲ್ಲಿತ್ತೇ ಆಗ ಎಂದು ನನಗೇ ಅಚ್ಚರಿಯಾಗುತ್ತದೆ. ಸಮಾಜಶಾಸ್ತ್ರ ಪಾಠ ಮಾಡುವ ಮೇಷ್ಟ್ರು ತುಂಬಾ ಸಂಭಾವಿತರೂ, ವಯಸ್ಸಾದವರೂ ಆಗಿದ್ದರಿಂದ ಕಾದಂಬರಿಗಳ ನನ್ನ ಓದಿಗೆ ಅದೊಂದೇ ಕ್ಲಾಸ್ ಪ್ರಶಸ್ಥವಾಗಿತ್ತು.

ಅದೊಮ್ಮೆ ನನ್ನ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಮೂವರು ಹುಡುಗರು ಒಕ್ಕೊರಲಿನಿಂದ, ‘ಸsssರ್, ಜಯಲಕ್ಷ್ಮಿ ಸಮಾಜ ಪುಸ್ತಕದಾಗ ಕಾದಂಬರಿ ಇಟ್ಕೊಂಡು ಓದಾಕತ್ತಾಳ್ರೀ’ ಎಂದು ಗಟ್ಟಿಯಾಗಿ ತುತ್ತೂರಿ ಊದಿಯೇ ಬಿಟ್ಟರು! ಉಷಾ ನವರತ್ನರಾಮ್ ಅವರ ಒಂದು ಕಾದಂಬರಿಯಾಗಿತ್ತದು. ಈಗ ಹೆಸರು ನೆನಪಿಲ್ಲ. ದೋಟಿಹಾಳದಲ್ಲಿ ನಾನು ತ್ರಿವೇಣಿ, ಅನಕೃ, ಉಷಾ ನವರತ್ನರಾಂ, ಸಾಯಿಸುತೆ, ಎಚ್. ಜಿ ರಾಧಾದೇವಿ ಅವರ ಕಾದಂಬರಿಗಳನ್ನೇ ಹೆಚ್ಚಾಗಿ ಓದಿದ್ದು. ನಂತರದ ಸಾಲಿನಲ್ಲಿ ಎಂ. ಕೆ ಇಂದಿರಾ ಮತ್ತಿತರರು ಬರುತ್ತಾರೆ.
ಸರ್ ಸಿಟ್ಟಿನಿಂದ ಹತ್ತಿರ ಬಂದು, ‘ಎಲ್ಲಿ ತೋರ್ಸು ಯಾವ ಪುಸ್ತಕ್ ಅದು ನೋಡೂನು?’ ಎಂದರು.
‘ಯಾವ್ದೂ ಇಲ್ರೀ ಸರ್. ಸುಳ್ಳೇ ಹೇಳಾಕತ್ತಾರ್ರೀ ಅವ್ರು’ ಎಂದೆ.
‘ಹೌದಾ? ಹಂಗಾರ ನಾ ಈಗ ಎಲ್ಲಿ ತನಕಾ ಪಾಠ ಹೇಳೀನಿ ಹೇಳು ನೋಡೂನು ಇವತ್ತಿನ ಕ್ಲಾಸಿನ್ಯಾಗ?’ ಎಂದರು.
ಮೇಷ್ಟ್ರು ಎದುರಿಗೇ ಬಂದು ನಿಂತು ಕೇಳುತ್ತಿದ್ದಾರಾದ್ದರಿಂದ ಮತ್ತು ಕಾದಂಬರಿಯಲ್ಲಿ ತುಂಬಾ ಮಗ್ನಳಾಗಿದ್ದೆನಾದ್ದರಿಂದ ಕೈ ಕಟ್ ಬಾಯ್ ಮುಚ್ಚ್ ಎಂಬಂತೆ ಗಪ್ಚುಪ್ ನಾನು! ಪರೆಡ್ ಹ್ಯಾಂಡ್ ಆಗಿ ಸಿಕ್ಕುಬಿದ್ದಿದ್ದೆ. ಹೆಡ್ ಮಾಷ್ಟರ್ ಅವರ ಬಳಿ ದೂರು ಹೋಯಿತು. ಶ್ರೀಯುತ. ಜಮಖಂಡಿ ಸರ್ ನಮ್ಮ ಹೆಡ್ ಮಾಷ್ಟರ್ ಆಗಿದ್ದರು. ಇನ್ನೊಮ್ಮೆ ಕ್ಲಾಸಲ್ಲಿ ಹೀಗೆ ಮಾಡಿದರೆ ಅಪ್ಪನಿಗೆ ಈ ಬಗ್ಗೆ ಹೇಳುವುದಾಗಿ ಹೆದರಿಸಿ, ಬುದ್ದಿವಾದ ಹೇಳಿ ಕ್ಲಾಸಿಗೆ ಕಳಿಸಿದರು. ಯಾಕಾದರೂ ನನ್ನ ಮೇಷ್ಟ್ರುಗಳೆಲ್ಲ ಅಪ್ಪನ ಸ್ನೇಹಿತರಾಗಿದ್ದಾರೋ ಎಂದು ಗೊಣಗಿಕೊಳ್ಳುತ್ತಾ ಕ್ಲಾಸಿಗೆ ಮರಳಿದರೆ, ಮೇಷ್ಟ್ರು ಮತ್ತು ಹೆಡ್ ಮಾಷ್ಟರಿಂದ ನನ್ನನ್ನು ಬೈಯಿಸಿದ ಖುಷಿಯಲ್ಲಿ ಹಲ್ಲು ಕಿಸಿಯುತ್ತಿದ್ದರು ನನ್ನ ಹಿಂದಿನ ಬೆಂಚಿನ ಹುಡುಗರು.
| ಇನ್ನು ಮುಂದಿನ ವಾರಕ್ಕೆ |






0 Comments