ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮಿ ಪಾಟೀಲ್ ಅಂಕಣ – ‘ನೀಲವ್ವವ್ವ ಎಂದರೆ ಬಲು ಅಚ್ಚುಮೆಚ್ಚು’

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

6

ಎಷ್ಟು ದೂರ ನಡೆದರೂ ಚಿರ್ಕಿಗಾಣ, ತೊಟ್ಟಿಲು ಕಾಣುತ್ತಲೇ ಇಲ್ಲ. ಅದು ಹೇಗೆ ಮಾಯವಾದವು ಅನ್ನುವುದು ತಿಳಿಯದೇ ಅಚ್ಚರಿ ನನಗೆ. ನಡೆಯುತ್ತಾ ನಡೆಯುತ್ತಾ ಜಾತ್ರೆಯ ಗದ್ದಲದಿಂದಾಚೆ ಬಂದುಬಿಟ್ಟಿದ್ದೆವು ನಾನು, ನನ್ನ ತಮ್ಮ ಜಗದೀಶ. ಆಗ ಅನಿಸಿದ್ದು, ಓಹೋ ನಾವೆಲ್ಲೋ ಬೇರೆ ದಾರಿಗೆ ಬಂದಿದ್ದೇವೆ ಎಂದು.

ವಾಪಸ್ ಹೋಗುವುದು ಹೇಗೆ? ನಿಮಿಷ ಕಾಲ ಗೊಂದಲಕ್ಕೊಳಗಾಗಿದ್ದೆ. ಅಷ್ಟರಲ್ಲಾಗಲೇ ತಮ್ಮನ ಅಂಗಲಾಚುವಿಕೆ ಅಳುವಿನ ರೂಪ ಪಡೆದಿತ್ತು. ಹೇಗೆ ಬಂದೆವೋ ಹಾಗೇ ಅದೇ ದಾರಿಯಲ್ಲಿ ಹೋಗುವುದು ಎಂದು ನಿರ್ಧರಿಸಿ, ‘ಅಳಬ್ಯಾಡ ಸುಮ್ನಿರು, ಹೋಗೂನು’ ಎಂದು ರಮಿಸುತ್ತಾ, ಬಂದ ದಾರಿ ಎಂದುಕೊಂಡಿದ್ದ, ಎದುರಿಗೆ ಕಾಣುವ ದಾರಿಯಲ್ಲಿ ತಮ್ಮನ ಕೈ ಹಿಡಿದುಕೊಂಡು ನಡೆಯತೊಡಗಿದೆ. 

‘ಅಕ್ಕಾ, ಕಾಲ್ ನೂಸಾಕತ್ತಾವ, ಎತ್ಕೊ’ 

ಅದಾಗಲೇ ನನ್ನ ಕಾಲೂ ನೋಯತೊಡಗಿದ್ದವು. ಐದು ವರ್ಷದ ತಮ್ಮನನ್ನು ಎಂಟು ವರ್ಷದ ನಾನು ಎತ್ತಿಕೊಳ್ಳುವುದಾದರೂ ಹೇಗೆ?! ಆದರೂ ತಿಣುಕಾಡಿ ಎತ್ತಿಕೊಂಡಷ್ಟೇ ವೇಗವಾಗಿ ಕೆಳಗಿಸಿಬಿಟ್ಟೆ.

‘ಸಾವ್ಕಾಸ್ ನಡ್ಕೊಂಡು ಹೋಗೂನಂತ, ಆತ? ಇಲ್ಲೇ ಸಮೀಪೈತಿ ಬಾ’ ಪುಸಲಾಯಿಸತೊಡಗಿದೆ.

‘ಇಲ್ಲಾ ಭಾಳಾ ದೂರೈತಿ ನನಗೊತ್ತೈತಿ, ನನ್ನ ಎತ್ಕೊ. ಕಾಲ ನೂಸಾಕತ್ತಾವು’ ಜಗೂನ ಹಠ.

ಅದು ಹೇಗೆ ಅವನನ್ನ ಸಂಭಾಳಿಸಿದೇನೋ ನೆನಪಿಲ್ಲ, ಒಟ್ಟಿನಲ್ಲಿ ಇಬ್ಬರೂ ನಡೆಯತೊಡಗಿದೆವು. ಜಗೂನ ಅಳು ನೋಡಿದ ಅಲ್ಲ್ಯಾರೋ ಒಬ್ಬರಿಗೆ ನಾವು ದಾರಿ ತಪ್ಪಿದ್ದರ ಅಂದಾಜು ಹತ್ತಿರಬೇಕು. ಹತ್ತಿರ ಬಂದು,

‘ಯಾ ಊರು ನಿಮ್ದು? ನಿಮ್ಮ ಅವ್ವಾ ಅಪ್ಪಾ ಎಲ್ಲಿ ಉಳ್ಕೊಂಡಾರ?’ ಕೇಳಿದರು. ನಾನು ಅವ್ವ ಅಪ್ಪನ ಜೊತೆಗೆ ನಾವು ಬಂದಿಲ್ಲವೆಂದೂ, ಊರ ಗೌಡರ ಜೊತೆಗೆ ಮೋರಟಗಿಯಿಂದ ಬಂದಿರುವುದಾಗಿಯೂ, ನಿಂಬಾಳದಿಂದ ಬಂದ ನಮ್ಮ ಆಯಿ ಮುತ್ತ್ಯಾ ಎಲ್ಲರೂ, ಅದೇ ಬಹಳಷ್ಟು ಬಂಡಿಗಳನ್ನು ನಿಲ್ಲಿಸಿದ ಜಾಗದಲ್ಲಿರುವುದಾಗಿಯೂ ತಿಳಿಸಿದೆ. ಅವರಿಗೆ ನಾವು ದಾರಿ ತಪ್ಪಿರುವುದು ಖಾತ್ರಿ ಆಗಿ,

‘ನೀವು ಈ ದಾರ್ಯಾಗಲ್ಲ, ಇಗಾ ಅಲ್ಲಿ ಬಲಕ್ಕ ಹೊಳ್ಳೇತಲ್ಲಾ, ಅದs ದಾರುಗುಂಟ ಸೀದಾ ಹೋಗ್ರಿ, ಎಲ್ಲ್ಯೂ ಹೊಳ್ಳಬ್ಯಾಡ್ರಿ.’ ಎಂದಿದ್ದಲ್ಲದೇ ಆ ದಾರಿಯವರೆಗೂ ನಮ್ಮನ್ನು ತಂದುಬಿಟ್ಟರು. ನಮ್ಮ ನಡಿಗೆ ಮುಂದುವರೆಯಿತು.

ಅತ್ತ ನಮ್ಮನೆಯ ಜನ, ಗೌಡರ ಜನ ಗಾಬರಿಯಿಂದ ನಮ್ಮನ್ನು ಹುಡುಕತೊಡಗಿದ್ದಾರೆ. ಜಾತ್ರೆಯಲ್ಲಿ ಮಕ್ಕಳ ಕಳ್ಳರ ಹಾವಳಿ ಹೆಚ್ಚು ಎನ್ನುವ ಹವಾ ಇತ್ತಾದ್ದ್ರಿಂದ ಎಲ್ಲರೂ ಹೆದರಿ ಕಂಗಾಲಾಗಿದ್ದಾರೆ. ಗೌಡರಿಗಂತೂ ಯಾಕಾದ್ರೂ ಈ ಮಕ್ಕಳನ್ನ ನಮ್ಮ ಜೊತೆ ಕರೆ ತಂದೆವೋ ಅನ್ನಿಸಿರಲೂ ಸಾಕು. ಅತ್ತ ಗಂಡಸರು ನಮ್ಮನ್ನು ಹುಡುಕುತ್ತಾ ಎಂಟೂ ದಿಕ್ಕಲ್ಲಿ ಅಲೆಯುತ್ತಿದ್ದರೆ, ನಾವಿಬ್ಬರೂ ಕಾಲೆಳೆದುಕೊಂಡು ಬಂಡಿಗಳು ನಿಂತ ಜಾಗವನ್ನು ಸಮೀಪಿಸಿದ್ದೆವು. ಅಷ್ಟು ದೂರದಲ್ಲಿ ಬಂಡಿಗಳು ಕಾಣುತ್ತಿದ್ದರೆ, ನಮ್ಮ ಬಲಗಡೆಗೆ ಅಷ್ಟೇ ದೂರದಲ್ಲಿ ಚಿರ್ಕಿಗಾಣ, ತೊಟ್ಟಿಲು ಕಾಣಿಸಿಬಿಟ್ಟವು! ಅಲ್ಲಿಯವರೆಗೂ ಇದ್ದ ಆಯಾಸವೆಲ್ಲ ಅದೆಲ್ಲೋ ಪುರ್ರ್ ಎಂದು ಹಾರಿಹೋಗಿ ಆ ಜಾಗದಲ್ಲಿ ಮತ್ತೆ ಚಿರ್ಕಿಗಾಣದ ಕಡೆಗೆ ಹೋಗುವ ಆಸೆ ಗರಿಗೆದರಿತು! 

ಇನ್ನೇನು, ನಾನು ತಮ್ಮನಿಗೆ ‘ಸೀದಾ ಹಿಂಗ ಹೋಗು, ಅಗಾ ಅಲ್ಲಿ ಕಾಣ್ತಾವ ನೋಡು ನಮ್ ಬಂಡಿಗೊಳು, ಮುತ್ತ್ಯಾ ನಿಂತಾನ ನೋಡಲ್ಲಿ’ ಅನ್ನಬೇಕು,

‘ಎಲ್ಲಿ ಹೋಗಿದ್ದ್ರೇ ಅವ್ವೀ ನೀವಿಬ್ಬ್ರೂ? ಎಲ್ಲೆಲ್ಲಿ ಹುಡಕಬೇಕು ನಿಮ್ಮನ್ನ!’ ಎನ್ನುತ್ತಾ ಹನುಮಂತರಾಯ ಮಾಮಾ ಹತ್ತಿರ ಬಂದ. ಅಕ್ಚುಅಲಿ ಹನುಮಂತರಾಯ ಮಾಮಾ ನನಗೆ ಸಂಬಂಧದಲ್ಲಿ ಮುತ್ತ್ಯಾ ಆಗಬೇಕು. ನಮ್ಮಾಯಿಯ ತಮ್ಮ. ನನ್ನ ದೊಡ್ಡ ಕಾಕಾನ ಓರಿಗೆಯವನು. ನಮ್ಮ ತಂದೆ, ಕಾಕಾ, ಅತ್ತೆ ಎಲ್ಲರೂ ಅವನನ್ನು ಮಾಮಾ ಅನ್ನುತ್ತಿದ್ದರಿಂದ ನಾವು ಮಕ್ಕಳೂ ಹಾಗೇ ಕರೆಯುತ್ತಿದ್ದೆವು. ಅವನೇನೋ ಮಕ್ಕಳು ಸಿಕ್ಕವು ಅನ್ನುವ ನೆಮ್ಮದಿಯಿಂದ, 

‘ನಡೀರಿ ನಡೀರಿ, ಎಲ್ಲಾರೂ ಗಾಬಾಗಿ ಕುಂತಾರಲ್ಲಿ, ನಿಮ್ಮನ್ನ ನೋಡಿ ಸಮಾಧಾನ್ ಆಕ್ಕಾರ’ ಎನ್ನುತ್ತಾ ನಮ್ಮಿಬ್ಬರ ಕೈಹಿಡಿದುಕೊಂಡು ನಡೆದ. 

ನನಗೋ ಚಿರಕಿಗಾಣದ ಆಕರ್ಷಣೆ. ಆದ್ರೆ ಅದ್ಯಾಕೋ ಕಾಣೆ ಬಾಯಿಬಿಟ್ಟು ಅದನ್ನು ಹೇಳಲಾಗಲಿಲ್ಲ. ಹತ್ತಿರ ಹೋಗುತ್ತಿದ್ದಂತೆ ಸಿಟ್ಟಿನಿಂದ ಬುಸುಗುಡುತ್ತ ನಿಂತ ಮುತ್ತ್ಯಾ ಕಂಡರು. ಅವರಿಗೆ ಅಸ್ತಮಾ ಇತ್ತಾದ್ದರಿಂದ ಉಸಿರಾಟ ಇನ್ನೂ ತೀವ್ರವಾಗಿತ್ತು. ಅಲ್ಲಿಯವರೆಗೆ ಹತ್ತಿರಕ್ಕೂ ಸುಳಿದಿರದ ಹೆದರಿಕೆ ಅದೆಲ್ಲಿತ್ತೋ ಬಂದು ಅಮರಿಕೊಂಡುಬಿಟ್ಟಿತು ನನ್ನನ್ನು.

ತೋಳು ಹಿಡಿದು ತಮ್ಮತ್ತ ಎಳೆದುಕೊಂಡವರೇ, ‘ದುಗ್ಗಾಣೆಕಿನ, ತಮ್ಮನ್ನ ಕರ್ಕೊಂಡು ಎಲ್ಲಿ ಹೋಗಿದ್ದಿ?, ಯಾರರ ಇಬ್ಬ್ರೂನ್ನೂ ಎತ್ಕೊಂಡು ಹೋಗಿದ್ದ್ರ ನಿಮ್ಮಪ್ಪಾ ಅವ್ವಗ ಏನ್ ಹೇಳ್ಬೇಕಿತ್ತು ನಾವು?’ ಎನ್ನುತ್ತಲೇ ರಪ್ಪಂತ ಬೆನ್ನಿಗೆರಡು ಏಟು ಕೊಟ್ಟರು. ಯಾರಾದರು ಬಂದು ಬಿಡಿಸಿಕೊಳ್ಳುತ್ತಾರಾ ಎಂದು ನೋಡಿದರೆ ಎಲ್ಲರೂ ಚಿತ್ರದಲ್ಲಿ ಬರೆದ ಗೊಂಬೆಗಳಂತೆ ನಿಂತು ನೋಡುತ್ತಿದ್ದಾರೆಯೇ ವಿನಃ… ಅವಮಾನವಾದಂತೆನಿಸಿ ಅಳು ಬಂತು.

ಪೆಟ್ಟುಬಿದ್ದ ಕೂಡಲೇ ವಂಯ್ ಎಂದು ಅಳೊ ಮಕ್ಕಳಂತಲ್ಲ ನಾನು. ಅದೇನು ಪೆಟ್ಟು ತಿಂದೆ ಅನ್ನುವ ಅವಮಾನವೋ, ಪೆಟ್ಟು ತಿಂದ ಅನಿರೀಕ್ಷಿತಕ್ಕೆ ಬುದ್ದಿ ಬ್ಲಾಂಕ್ ಆಗಿರುತ್ತೋ, ಒಟ್ಟಿನಲ್ಲಿ ತಕ್ಷಣ ಅಳು ಬರ್ತಿರ್ಲಿಲ್ಲ. ಮತ್ತೆರಡು ಏಟು ಬಿದ್ದವು ನೋಡಿ, ಗಂಗಾಭವಾನಿ ನನ್ನೆರಡೂ ಕಣ್ಣಲ್ಲಿ ಪ್ರತ್ಯಕ್ಷವಾಗಿ ಧುಮ್ಮಿಕ್ಕಿ ಜಲಪಾತವಾದಳು. ಆದರೆ ದನಿ ತೆಗೆದು ಅಳುವಂತಿಲ್ಲ. ಬಾಯಿಬಿಗಿ ಹಿಡಿದೇ ಬಿಕ್ಕುತ್ತಿದ್ದೆ. ಆಯಿಗೆ ಪಾಪ ಅನಿಸಿರಬೇಕು. 

‘ಸಾಕ್ ಬಿಡ್ರಿನ್ನ, ಹೆಣ್ಣುಹುಡ್ಗಿ. ಎಷ್ಟು ಹೊಡೀತೀರಿ? ಏ ನೀಲಕ್ಕಾ ಕರ್ಕೊ ಅಕಿನ್ನ ಈ ಕಡಿಗಿ’ ಅತ್ತೆಯ ಆಜ್ಞೆ ಹೊರಬೀಳುತ್ತಿದ್ದಂತೆ ನೀಲವ್ವವ್ವ ಓಡಿ ಬಂದು ನನ್ನ ಕೈಹಿಡಿದಳು. ಮುತ್ತ್ಯಾ ನನ್ನ ಕೈ ಬಿಟ್ಟರು. ಎರಡೂ ಕೈಗಳಿಂದ ಅವ್ವನ ಕಾಲುಗಳನ್ನು ಅಪ್ಪಿ ಹಿಡಿದು ಮುಖವೊತ್ತಿ ಬಿಕ್ಕತೊಡಗಿದೆ. ಮೃದುವಾಗಿ ತಲೆ ನೇವರಿಸಿ, ಕಣ್ಣೊರೆಸಿದಳು ನೀಲವ್ವವ್ವ. 

ನಮ್ಮನ್ನು ಹುಡುಕಲು ಹೋದವರೆಲ್ಲ ಮರಳಿ ಬಂದಿದ್ದರು ನಿರಾಸೆಯಿಂದ. ನಮ್ಮನ್ನಿಲ್ಲಿ ನೋಡಿದಾಗ ಅವರೆಲ್ಲರೊಳಗೆ ಸಿಟ್ಟು ಸಮಾಧಾನ ಒಟ್ಟೊಟ್ಟಿಗೇ ಹುಟ್ಟಿಕೊಂಡಿರಲೂ ಸಾಕು. ನನ್ನ ಬಾಲ್ಯದ ಸಹಜ ಆಸೆ, ಮುಗ್ಧತೆಯಿಂದಾಗಿ ಎಲ್ಲರ ಜಾತ್ರೆಯ ಹುರುಪನ್ನು ಕಸಿದುಕೊಂಡಿದ್ದೆ ನಾನು. ಆದರೂ ದಾವಲ್ ಮಲ್ಲಿಕ್ ಬಾಬಾಗೆ ಸಕ್ಕರೆ ಓದಿಸಿ, ನೈವೇದ್ಯ, ಹರಕೆ ಎಲ್ಲ ತೀರಿಸಿ ಮರಳಿ ಎತ್ತುಗಳನ್ನು ಬಂಡಿಗಳ ನೊಗಕ್ಕೆ ಕಟ್ಟಿ, ನಮ್ಮನ್ನು ಗೌಡರ ಬಂಡಿಯಲ್ಲಿ ಕೂರಿಸಿದರು. ಹೊರಟವು ಬಂಡಿಗಳ ಸವಾರಿ ಬಂದ ದಾರಿಯಲ್ಲೇ ಹಿಂದಿರುಗಿ. ಊರು ತಲುಪಿದರೂ, ಪೆಟ್ಟು ತಿಂದ ನನ್ನ ಬೆನ್ನು ಚುರುಗುಟ್ಟುತ್ತಲೇ ಇತ್ತು. 

ನೀಲವ್ವವ್ವನ ಹೆಸರು ಪ್ರಾಸ್ತಾಪಿಸಿದೆನಲ್ಲವೆ? ಅವರು ನನ್ನ ದೊಡ್ಡ ಕಾಕಾ (ಪಂಡಿತ ಕಾಕಾ)ನ ಹೆಂಡತಿ ನೀಲಮ್ಮ. ಅವರನ್ನು ನಾನು ಚಿಕ್ಕಮ್ಮ, ಸಣ್ಣವ್ವ ಎನ್ನದೇ ಅವ್ವಾ ಎಂದೇ ಕರೆಯುತ್ತಿದ್ದೆ. ಅದಕ್ಕೆ ಕಾರಣ ನಾನು ರಜೆಯಲ್ಲಿ ನಿಂಬಾಳಕ್ಕೆ ಹೋದಾಗೆಲ್ಲ ಅವರು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದುದಿರಬೇಕು. ಅವರು ಅಕ್ಕರೆ ತೋರುವಾಗಲೆಲ್ಲ, ನನ್ನ ಮೇಲೆ ಅವರಿಗೆ ಅದೇನೋ ವಿಶೇಷ ಪ್ರೀತಿ ಎಂದೆನಿಸುತ್ತಿತ್ತು. ಎತ್ತರದ ನಿಲುವಿನ, ಸದೃಢ ದೇಹದ, ದುಂಡು ಮುಖದ ಚಲುವೆ ಆಕೆ. ಮನೆಯ ಆಳುಕಾಳುಗಳಿಗೆ, ನಮ್ಮ ಹೊಲಕ್ಕೆ ಸದಿ ತೆಗೆಯಲು ಬರುವ ಹೆಣ್ಣುಮಕ್ಕಳಿಗೆ, ಗಂಡುಮಕ್ಕಳಿಗೆ, ಬಂಧುಬಳಗಕ್ಕೆಲ್ಲ ನೀಲವ್ವವ್ವ ಎಂದರೆ ಬಲು ಅಚ್ಚುಮೆಚ್ಚು.

ಒಂದು ನಸುಕಿನಿಂದ ರಾತ್ರಿ ಮಲಗುವವರೆಗೆ ಹೊಲಮನೆಗಳ ಬಿಡುವಿಲ್ಲದ ಸತತ ಕೆಲಸಗಳ ನಡುವೆಯೂ ಆಕೆ ಎಲ್ಲರೊಂದಿಗೆ ನಗುನಗುತ್ತಾ ಕಷ್ಟಸುಖ ವಿಚಾರಿಸಿಕೊಳ್ಳುತ್ತಾ ಬೆರೆಯುತ್ತಿದ್ದುದೇ ಅದಕ್ಕೆ ಕಾರಣವಾಗಿತ್ತು. ಮುಂದೆ ಅವರ ಆರನೇ ಹೆರಿಗೆಯಲ್ಲಿ ಅತೀವ ರಕ್ತಸ್ರಾವವಾಗಿ, ಅವರನ್ನು ನಿಂಬಾಳದಿಂದ ಬಿಜಾಪುರಕ್ಕೆ ಕರೆದುಕೊಂಡು ಹೋದರಾದರೂ ಬಿಜಾಪುರ ತಲುಪುವದರೊಳಗೆ ನೀಲವ್ವವ್ವ ತೀರಿಕೊಂಡರು.

ನಾಲ್ಕು ಜನ ಹೆಣ್ಣುಮಕ್ಕಳು, ಒಬ್ಬ ಮಗ ಅವರಿಗೆ. ಅವರು ತೀರಿಕೊಂಡ ಮೇಲೆ ನಮ್ಮ ಹೊಲಕ್ಕೆ ಸದಿ ತೆಗೆಯುತ್ತಾ ಹೆಣ್ಣುಮಕ್ಕಳು ಅವರ ಮೇಲೆ, ಸುಗಲ್ಲವ್ವತ್ತಿ (ನನ್ನ ತಂದೆಗೆ ಸಂಬಂಧದಲ್ಲಿ ಅತ್ತೆಯಾದರೂ ನನ್ನ ತಂದೆಗಿಂತ ಚಿಕ್ಕವರು) ಕಟ್ಟಿದ ಹಾಡನ್ನು ಹಾಡುತ್ತಾ, ಬಿಕ್ಕುತ್ತಾ ಕೆಲಸ ನಿಲ್ಲಿಸಿ ಅಳುತ್ತಾ ಕೂರುತ್ತಿದ್ದುದನ್ನು ನಾನೇ ಕಣ್ಣಾರೇ ಕಂಡಿದ್ದೇನೆ. ನೀಲವ್ವವ್ವನ ಸಾವಿಗೆ ಮರುಗುವ ಹಾಡದು.

ಮಲ್ಲಿಗೆ ಸಣ್ಣ ಮಲ್ಲಿಗೆ

ಗಂಗಾಳದಾಗಿನ ನೀರ ಅಂಗಳಕ ಚೆಲ್ಲುದಕ

ಹೋದ ನೀಲಕ್ಕನ ಹೊಸ ಸುದ್ದೇ ನೀಲಾ

ಮಲ್ಲಿಗೆ ಸಣ್ಣ ಮಲ್ಲಿಗೆ

ಆಕಳ ಬಿಟ್ಟೆ ವಾರೀಗಿ ಪುರುಷನ ಕೈ ಬಿಟ್ಟೆ ನೀಲಾ

ಮಲ್ಲಿಗೆ ಸಣ್ಣ ಮಲ್ಲಿಗೆ

ಹೀಗೆ ಸಾಗುವ ಈ ಹಾಡು ತುಂಬಾ ದೊಡ್ದದಿದೆ. ಮತ್ತು ಅನೇಕ ರೂಪಕಗಳಿಂದ ಕೂಡಿದೆ. ನೀಲವ್ವವ್ವ ತೀರಿಕೊಂಡ ಮೇಲೆ ರತ್ನವ್ವವ್ವನ ಜೊತೆಗೆ ಪಂಡಿತ ಕಾಕಾರ ಮದುವೆ ಮಾಡಿದರು. ರತ್ನವ್ವವ್ವ ನೀಲವ್ವವ್ವನಷ್ಟೆ ಅಂತಃಕರಣದ ಹೆಣ್ಣುಮಗಳು. ಅವರು ಈ ಹಾಡನ್ನು ಆಗಾಗ ಹಾಡುತ್ತಿರುತ್ತಾರೆ. ಸಂಪೂರ್ಣ ಹಾಡು ಗೊತ್ತು ಅವರಿಗೆ. ಹಾಡುತ್ತಾ ಹಾಡುತ್ತಾ ದುಃಖದಿಂದ ಅವರ ಗಂಟಲು ಕಟ್ಟುತ್ತದೆ. 

 ಇಂಥ ಗೌರವ ಪ್ರೀತಿ ಎಷ್ಟು ಜನ ಹೆಣ್ಣುಮಕ್ಕಳಿಗೆ ಸಿಕ್ಕಿರಲು ಸಾಧ್ಯ?

। ಇನ್ನೂ ಮುಂದಿನ ವಾರಕ್ಕೆ ।

‍ಲೇಖಕರು Admin

28 June, 2021

1 Comment

  1. Akshata Deshpande

    ಕಡೆಗೂ ಚರ್ಕಿಗಾಣದಾಗ ಕೂಡು ನಿಮ್ಮ ಆಸೆ ಪೂರೈಸಲಾಗಲಿಲ್ಲ
    ನಿಜಕ್ಕೂ ನೀಲವ್ವವ್ವ great personality. ಇಂತಹವರ ಪ್ರೀತಿ ನಿಮ್ಮ ಪಾಲಿಗೆ ಇತ್ತಲ್ಲ ನೀವು ಭಾಗ್ಯವಂತರು. ಬರಹ ಬಹಳ ಆಪ್ತವಾಗಿದೆ. ಜಾತ್ರೆ, ನೀವು ಮತ್ತು ಜಗ್ಗು ಕಳೆದುಹೋಗಿದ್ದು, ಮತ್ತೆ ನಿಮ್ಮವರನ್ನು ಸೇರಿಕೊಂಡಿದ್ದು, ಎಲ್ಲವೂ ಕಣ್ಣೆದುರು ಹಾದು ಹೋಯ್ತು. ನೀಲವ್ವವ್ವ ಅವರ ಪಾತ್ರ ಸ್ವಲ್ಪವೇ ಇದ್ದರೂ ಮನಸ್ಸಲ್ಲಿ ಮನೆ ಮಾಡಿದ್ದಾರೆ. ಅವರ ಬಗ್ಗೆ ಇನ್ನಷ್ಟು ಬರೆಯಿರಿ ಜಯಾ.
    ಮುಂದಿನ ಕಂತಿಗಾಗಿ ಕಾಯುತ್ತಿರುವೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading