
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.
ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.
‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.
‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.
ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-
44
೧೭ ಜೂನ್ ೧೯೯೩ ನಾನು ತಾಯಾದ ದಿನ. ಅಂದಿನ ದಿನವೇ ಅದೇ ಆಸ್ಪತ್ರೆಯಲ್ಲಿ ಇನ್ನೂ ಇಬ್ಬರು ಅವಳಿ ಮಕ್ಕಳನ್ನು ಹೆತ್ತರೆ, ಅಂದೇ ಅಡ್ಮಿಟ್ ಆಗಿ ಮರುದಿನ ಒಬ್ಬರು ಅವಳಿ ಮಕ್ಕಳಿಗೆ ಜನ್ಮವಿತ್ತರೆ ಇನ್ನೊಬ್ಬರು ನಾಲ್ಕು ಮಕ್ಕಳಿಗೆ ಜನ್ಮವಿತ್ತಿದ್ದರು! ಆಸ್ಪತ್ರೆ ತುಂಬಾ ಚಿಲಿಪಿಲಿ ಜೊತೆಗೆ ಮಕ್ಕಳು ಬಾಣಂತಿಯರನ್ನು ನೋಡಲು ಬರುವ ಹಿಂಡು ಜನ. ತಾಳಲಾಗದೇ ಐದು ದಿನ ಆಸ್ಪತ್ರೆಯಲ್ಲಿರಬೇಕು ಅಂದಿದ್ದ ಜಿಗಜಿನ್ನಿ ಮೇಡಂ ಮೂರನೇ ದಿನಕ್ಕೇನೇ ಡಿಸ್ಚಾರ್ಜ್ ಮಾಡಿದ್ದರು. ನನ್ನದು ಸಹಜ ಹೆರಿಗೆಯಾಗಿತ್ತು. ಮಕ್ಕಳಿಬ್ಬರೂ ಆರೋಗ್ಯವಾಗಿದ್ದರು. ಆದರೆ ಅಮ್ಮನಿಗೆ ಹೆಚ್ಚಿನ ತೊಂದರೆ ಕೊಡಬಾರದು ಎಂದು ಮಕ್ಕಳು ತೂಕ ಹಂಚಿಕೊಂಡಿದ್ದರಾದ್ದರಿಂದ ಮಗಳು ೨.೨ ಕಿಲೊ ಮಗ ೨.೦೦ ಕಿಲೊ ಇದ್ದರು.
ನಮ್ಮೆಲ್ಲರಿಗೂ ಅಂದು ಸಖೇದ್ ಆಶ್ಚರ್ಯವಾಗಿದ್ದೇನೆಂದರೆ ನನ್ನ ಮಗ ನೋಡಲು ಹೂಬಹೂ ನನ್ನ ಮಾವನವರು ತೀರಿಕೊಳ್ಳುವಾಗ ಹೇಗೆ ಕೃಶವಾಗಿದ್ದರೋ ಹಾಗೇ ಇದ್ದ. ಬಣ್ಣವೂ ಅವರದೇ. ಕಣ್ಣುಗಳು ಮಾತ್ರ ನಕ್ಷತ್ರದಂತೆ ಹೊಳೆಯುತ್ತಿದ್ದವು. ಮಗಳು ಪುಟ್ಟ ಗೊಂಬೆಯಂತಿದ್ದಳು. ಗೋದಿ ಬಣ್ಣ, ಪುಟ್ಟ ಪುಟ್ಟ ಬಾಯಿ, ಮೂಗು, ಕಣ್ಣು ಥೇಟ್ ಅವಳ ಅಪ್ಪನಂಥ ಕಂದುಕಣ್ಣು. ಬಂದವರೆಲ್ಲಾ ಮೊದಲು ಎತ್ತಿಕೊಳ್ಳುತ್ತಿದ್ದುದು ಅವಳನ್ನೇ. ಜಿಗಜಿನ್ನಿ ಮೇಡಂ ನಾನಲ್ಲಿಂದ ಹೊರಡುವಾಗ ಒಂದು ಮಾತು ಹೇಳಿ ಕಳಿಸಿದ್ದರು.
“ಹಾಲು ಕಮ್ಮಿ ಬಿದ್ದ್ರ, ಮಗನಿಗೆ ನಿನ್ನ ಹಾಲ ಕುಡ್ಸು. ಮಗಳಿಗೆ ಮ್ಯಾಲಿನ ಹಾಲ್ ಹಾಕ್ರಿ. ಹುಡುಗ ಹುಡುಗಿ ಬೇಧಭಾವ ಅಂತಲ್ಲ, ಹುಡುಗೂರು ಹುಡಗ್ಯಾರಗಿಂತ ನಾಜೂಕಿರ್ತಾರ. ಹುಡಿಗ್ಯಾರು ಗಟ್ಟಿ ಇರ್ತಾರ, ಮರೀಬ್ಯಾಡ”
ಹುಟ್ಟುವಾಗಲೇ ಹೆಣ್ಣುಮಕ್ಕಳು ಸ್ಟ್ರಾಂಗು! ಅದಕ್ಕೇ ಅವರು ಅನೇಕ ಸವಲತ್ತುಗಳಿಂದ ವಂಚಿತರು! ಯಾಕೋ ಮೇಡಂ ಹೇಳಿದ್ದನ್ನ ಅರಗಿಸಿಕೊಳ್ಳಲು ಕಷ್ಟವಾಯಿತು ನನಗೆ. ಆದರೆ ವೈದ್ಯರು ಅವರು. ಮಕ್ಕಳ ಆರೋಗ್ಯದ ಕುರಿತು ನಮಗೆ ಗೊತ್ತಿರುವುದಕ್ಕಿಂತ ಅವರಿಗೆ ಗೊತ್ತಿರುತ್ತೆ ಎಂದು ಅವ್ವ ನನ್ನನ್ನು ಸಮಾಧಾನ ಮಾಡಿದಳು. ಆದರೆ ನನ್ನವ್ವ ನನ್ನನ್ನು ಹೂವಿನಂತೆ ನೋಡಿಕೊಂಡಿದ್ದರಿಂದ (ತಾಯಂಬೊ ದೇವರ ದಯದಿಂದ) ಮೇಲಿನ ಹಾಲು ಹಾಕುವ ಪ್ರಸಂಗ ಕೇವಲ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಎದುರಾಗುತ್ತಿತ್ತು. ಅದಕ್ಕೆ ಮುನ್ನುಡಿ ಎಂಬಂತೆ ಹುಟ್ಟಿದ ಐದನೇ ದಿನಕ್ಕೇನೇ ಮಗನಿಗೆ ಕಾಮಣಿ ಆಗಿ, ಅವನೊಬ್ಬನನ್ನೇ ಫೋಟೊಥೆರಪಿಗಾಗಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಅನಿವಾರ್ಯವಾಯಿತು. ಅಲ್ಲೋ ಪುಟ್ಟ ರೂಮಿನ ಸಿಂಗಲ್ ಮಂಚದ ಮೇಲೆ, ಕಾಮಣಿಯಿಂದ ನಮ್ಮಂತೆ ಅಡ್ಮಿಟ್ ಆದ ಇನ್ನೂ ಇಬ್ಬರು ಮಕ್ಕಳನ್ನು ಹಾಕಿದ್ದರು!

ಒಂದೇ ಮಂಚದ ಮೇಲೆ ಕಣ್ಣಿಗೆ ಕಪ್ಪುಬಟ್ಟೆಯ ಪಟ್ಟಿ ಹಾಕಿದ ಕಂದಮ್ಮಗಳು! ಅವರ ಮೇಲೆ ತೂಗುತ್ತಿದ್ದ ನಾಲ್ಕು ಸಣ್ಣ ಸೈಜಿನ ಟ್ಯೂಬ್ ಲೈಟ್ ಹೊಂದಿಸಿದ ಪ್ಲೇಟ್! ಮಕ್ಕಳ ಕಣ್ಣ ಮೇಲಿನ ಪಟ್ಟಿ ಸರಿಯಕೂಡದು ಎಂದು ವೈದ್ಯರು ತಾಕೀತು ಮಾಡಿದ್ದರಾದ್ದರಿಂದ ಅಂದಿನ ಅಲ್ಲಿದ್ದ ಮಕ್ಕಳಿಗೂ ತಾಯಂದಿರಿಗೂ ದೊಡ್ಡ ಪರೀಕ್ಷೆಯ ದಿನವಾಗಿತ್ತು. ನನ್ನ ಮಗ ಅಳುತ್ತಾ ಪದೇ ಪದೇ ಪಟ್ಟಿಯನ್ನು ತನ್ನ ಪುಟ್ಟ ಕೈಗಳಿಂದ ಹಿರಿದೆಳೆದುಬಿಡುತ್ತಿದ್ದ. ನಾನದನ್ನು ಪದೇ ಪದೇ ಸರಿಪಡಿಸುತ್ತಿದ್ದೆ. ಇಪ್ಪತ್ತನಾಲ್ಕು ಗಂಟೆ ಹಾಗೆ ಮಗುವನ್ನು ಆ ಬೇಳಕಿನ ಕೆಳಗೆ ಕಾಯಬೇಕಿತ್ತು. ಕಣ್ಣಪಟ್ಟಿ ಸರಿದರೆ ಮಗನ ಕಣ್ಣಿಗಾಗುವ ಹಾನಿಯ ಕುರಿತು ಹೆದರಿಕೆಯ ಜೊತೆಗೆ ಒಂದೆಡೆ ಕುಳಿತೇ ಇರಲಾಗದ ಅಸಹಾಯಕತೆ, ಇನ್ನೊಂದೆಡೆ ಮಗಳು ನನ್ನ ಹಾಲಿಲ್ಲದೆ ಮನೆಯಲ್ಲಿ ಅಳುತ್ತಿರಬಹುದಾದ ಅಂದಾಜಿಗೆ ಮನಸ ಪೂರ್ತಿ ಆತಂಕ! ಅತ್ತೂ ಅತ್ತೂ ಕೂಸು ನಿದ್ದೆ ಹೋದಾಗಲಷ್ಟೇ ಕಣ್ಣಪಟ್ಟಿ ಸರಿಯಿರುತ್ತಿತ್ತು.
ಮದ್ಯಾಹ್ನದೊಳಗೆ ಅವ್ವಾ ನನ್ನ ಮಗಳನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದಳು. ಮನೆಯಲ್ಲಿ ಮಗು ಬಾಟಲಿ ಹಾಲನ್ನು ಒಪ್ಪಿಕೊಳ್ಳದೇ ಹಸಿವಿನಿಂದ ಅಳುತ್ತಿತ್ತು. ಅದನ್ನು ಕಂಡು ನಮ್ಮವ್ವ ಸಂಕಟದಿಂದ ಅಳುತ್ತಾ ಆಸ್ಪತ್ರೆಗೆ ಧಾವಿಸಿ ಬಂದಿದ್ದಳು. ಮಗಳೂ ಇಲ್ಲಿಯೇ ಬಂದಿದ್ದು ನೆಮ್ಮದಿ ಅನಿಸಿತು. ಎದೆಗೊತ್ತಿಕೊಂಡೆ ಅವಳನ್ನು. ಅಂದು ಹಸಿವು ಇಂಗಿದ್ದೇ ಮಗಳ ಮುಖದಲ್ಲಿ ಕಂಡ ನಗು ಇದೆಯಲ್ಲ ಅದು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಆದರೆ ಮಗಳನ್ನು ಅಲ್ಲಿ ಹೆಚ್ಚುಹೊತ್ತು ಇರಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದ್ದರಿಂದ ಹೊತ್ತು ಮುಳುಗುವವರೆಗೆ ಆಸ್ಪತ್ರೆಯ ಹೊರ ಆವರಣದಲ್ಲಿ ಮಗುವಿನ ಜೊತೆಗಿದ್ದ ಅವ್ವ, ಅದಕ್ಕೆ ಹಸಿವಾದಾಗಲೆಲ್ಲ ನನ್ನನ್ನು ಆಚೆ ಕರೆದು ಮಗಳನ್ನು ನನಗೆ ಕೊಟ್ಟು, ತಾನು ನನ್ನ ಮಗನ ಹತ್ತಿರ ಕುಳಿತಿದ್ದಳು. ನಂತರ ಅಂದಿನ ರಾತ್ರಿಯೆಲ್ಲ ಮನೆಯಲ್ಲಿದ್ದ ಮಗಳು ಹಸಿವಿನಿಂದ ಹಲುಬಿ ಕೊನೆಗೆ ಬಾಟಲಿ ಹಾಲಿಗೆ ಶರಣಾಗಿತ್ತು… ಅವ್ವ ಅಂದು ನನ್ನ ಮಗಳು ಹಸಿವಿನಿಂದ ಅಳುತ್ತಿರುವುದನ್ನು ನೋಡಿ, ಸಂಕಟದಿಂದ ಮಗುವಿನೊಂದಿಗೆ ತಾನೂ ಅತ್ತಿದ್ದಳಂತೆ.
ಅಂತೂ ೨೪ ತಾಸಿನ ಯಾಗ ಮುಗಿದು ನಾನು ಮಗನೊಂದಿಗೆ ಮನೆಗೆ ಬಂದೆ. ಕಣ್ಣಪಟ್ಟಿ ಎಳೆದೆಳೆದು ಹಾಕಿದ್ದರಿಂದಲೋ ಏನೋ ಮಗನ ಕಣ್ಣ ಬಿಳುಪು ತುಸು ಮಸುಕಾಗಿಹೋಯಿತು.. ಇಡಗುಂಜಿ ಗಣಪನ ಆಶೀರ್ವಾದದಿಂದ ಮಕ್ಕಳು ಹುಟ್ಟಿದ್ದರಿಂದ ಮಗನಿಗೆ ಅವನದೇ ಹೆಸರಾದ ಅಮೋಲ್ ಎಂದಿಡಲಾಯಿತು. ಮಗಳಿಗೆ ಅದಿತಿ ಎಂದು. ಅದಿತಿ ಸುರರ ತಾಯಿ. ಪತ್ರಿಕೆಯಲ್ಲಿ ಹಿಂದೊಮ್ಮೆ ಅನಂತನಾಗ್ ಅವರ ಮಗಳ ಹೆಸರು ಅದಿತಿ ಎಂದಿರುವುದನ್ನು ಓದಿದ್ದೆ. ಆ ಹೆಸರು ಇಷ್ಟವಾಗಿ ಮನದಲ್ಲಿ ಅಚ್ಚೊತ್ತಿದಂತಾಗಿತ್ತು. ಅವರ ಮಗಳಿಗಾಗ ೮ ವರ್ಷ ಎಂದು ಬರೆದಿದ್ದು ಇಂದಿಗೂ ನೆನಪಿದೆ ನನಗೆ.
ಬೆಳ್ಬೆಳಿಗ್ಗೆ ಬಾಣಂತಿಗೆ ಕುಡಿಯಲು ಆಳ್ವಿ, ತಿನ್ನಲು ಸಜ್ಜಕ, ಸ್ನಾನ, ಅಗ್ಗಟಗಿ (ಅಗ್ಗಷ್ಟಿಕೆ), ಮಕ್ಕಳಿಬ್ಬರ ಸ್ನಾನ, ಮನೆ ಜನರಿಗಾಗಿ ಅಡುಗೆ, ಮಕ್ಕಳ ಹೇಲರಬಿ ತೊಳೆಯುವುದು, ಸಂಜೆ ಮತ್ತೆ ಬಾಣಂತಿಗೆ ನೀರು, ರಾತ್ರಿ ಊಟ ಇಷ್ಟೆಲ್ಲಾ ಸಾಲದು ಎಂದು, ರಾತ್ರಿ ಸರಿಯಾಗಿ ೧೨ ಗಂಟೆಗೆ ಎದ್ದು ಬೆಳಿಗಿನ ೬ಕ್ಕೆ ಮಲಗುತ್ತಿದ್ದ ಅದಿತಿಯನ್ನು ಸಂಭಾಳಿಸುವುದು ಹೀಗೆ ಅವ್ವ ಬಸವಳಿದು ಹೋದಳು… ಬಾಣಂತಿಗೆ ತೊಂದರೆಯಾಗದಿರಲೆಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದ ಅಮೋಲನನ್ನು ನನ್ನ ಬಳಿ ಮಲಗಿಸಿ, ರಾತ್ರಿಯೆಲ್ಲ ಜಾಗರಣೆ ಮಾಡಿಸುತ್ತಿದ್ದ ಅದಿತಿಯನ್ನು ಮನೆಯಲ್ಲಿ ಎಲ್ಲರೂ ಪಾಳೆಯದ ಮೇಲೆ ಎರಡೆರಡು ಗಂಟೆ ಎತ್ತಿಕೊಂಡು ಕುಳಿತು ಹಗಲು ಮಾಡುತ್ತಿದ್ದರು. ಏನೂ ಮಾಡಲಾಗದ ಅಸಹಾಯಕತೆ ನನ್ನದು.

ಸತತ ೨೪ ತಾಸು ಅವ್ವ ನನಗಾಗಿ ನನ್ನ ಮಕ್ಕಳಿಗಾಗಿ ದುಡಿಯುವುದು ನೋಡಲಾಗದೇ ನನ್ನ ಪತಿಗೆ ನಾನು ಎರಡು ತಿಂಗಳು ತುಂಬುತಿದ್ದಂತೆಯೇ ಬಂದುಬಿಡುವೆ ಎಂದೆ. ಕ್ಷಣವೂ ಯೋಚಿಸದೇ ತಕ್ಷಣ ಹೂಂ ಎಂದರು. ಅಷ್ಟೊತ್ತಿಗೆ ಅವರು ಪುಣೆಯಲ್ಲಿನ ಕೆಲಸ ಬಿಟ್ಟು ಅಹಮದನಗರ ಜಿಲ್ಲೆಯಲ್ಲಿರುವ ಲೋಣಿ ಎಂಬ ಪುಟ್ಟ ಊರಲ್ಲಿರುವ ದೊಡ್ಡ ಸಂಸ್ಥೆ ‘ಪ್ರವರಾ ಮೆಡಿಕಲ್ ಟ್ರಸ್ಟ್’ ಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಮೆಡಿಕಲ್ ಕಾಲೇಜಿನ ಕಟ್ಟಡ ನಿರ್ಮಾಣದ ಉಸ್ತುವಾರಿ ಇವರದಾಗಿತ್ತು. ಅಲ್ಲಿ ಇವರಿಗೆ ಕೆಲಸ ಸಿಕ್ಕಾಗ, ಬಿಜಾಪುರದಲ್ಲಿ ಬೆಳೆದ ಹೆಂಡತಿ ಅಂಥಾ ಸಣ್ಣ ಹಳ್ಳಿಯಲ್ಲಿ ಇರಲಾರಳು ಅನ್ನುವ ಅಳುಕಿನಿಂದ ಮೊದಲು ಅಲ್ಲಿಗೆ ಹೋಗಲು ಇವರು ತಯಾರಿರಲಿಲ್ಲ. ‘’ಎಲ್ಲಿದ್ದರೂ ನಾನು ಮನೆಯಲ್ಲಿರುವವಳು ತಾನೆ? ಹೊರಗಿನ ಊರು ಕಟ್ಟಿಕೊಂಡು ನನಗೇನಾಗಬೇಕಿದೆ? ಪುಣೆಯಲ್ಲಿನ ಸಂಬಳಕ್ಕಿಂತ ಅಲ್ಲಿನ ಸಂಬಳ ದುಪ್ಪಟ್ಟು. ಈಗ ನಾವಿಬ್ಬರೇ ಅಲ್ಲ, ಎರಡು ಮಕ್ಕಳ ಜೊತೆಗೆ ಅತ್ತೆ, ನಾದಿನಿಯರು, ಮೈದುನನ ಜವಾಬ್ದಾರಿಯೂ ನಮ್ಮದೇ. ಎಲ್ಲವನ್ನೂ ಸಂಭಾಳಿಸಲು ಆ ಸಂಬಳ ನಮಗೆ ತುಂಬಾ ಮುಖ್ಯ. ಸುಮ್ಮನೆ ಒಪ್ಪಿಕೊಳ್ಳಿ’’ ಎಂದು ಹೇಳಿ ನಾನಿವರನ್ನು ಒಪ್ಪಿಸಿದ್ದೆ. ಮಾವನವರು ಹೋದ ಮೇಲೆ ಇದ್ದಕ್ಕಿದ್ದಂತೆಯೇ ದೊಡ್ಡವರಾಗಿಬಿಟಿದ್ದೆವು ನಾವು. ಹುಡುಗುತನ ಕಳೆದುಹೋಗಿತ್ತು… ಸಮಸ್ತ ಜವಾಬ್ದಾರಿಯೂ ನಮ್ಮ ಮೇಲಿತ್ತು. ಇನ್ನೂ ಕೆಲಸದಲ್ಲಿದ್ದಾಗಲೇ ಮಾವ ಹೋಗಿಬಿಟ್ಟಿದ್ದರಿಂದ ಕಾಗದಪತ್ರಗಳ ಎಲ್ಲಾ ವಹಿವಾಟು ಮುಗಿದು ಅವರ ಪಿಂಚಣಿ ಬರಲು ತುಸು ತಡವಾಗಿತ್ತು.
ಮೈದುನನ ರಾಮನಗೌಡನನ್ನು ಬಿಜಾಪುರದಲ್ಲಿ ಓದಲು, ಕೊನೆಯ ನಾದಿನಿ ಭಾರತಿಯನ್ನು ಓದಲು ನನ್ನ ದೊಡ್ಡ ನಾದಿನಿ ಶಾಂತಾಬಾಯಿಯವರ ಬಳಿ ಬಿಟ್ಟು, ಅತ್ತೆ ಮತ್ತು ಮೂರನೇ ನಾದಿನಿ ಮಲ್ಲಮ್ಮನೊಂದಿಗೆ ನಾವಿಬ್ಬರೂ ಸವ್ವಾ ಎರಡು ತಿಂಗಳು ತುಂಬಿದ್ದ ಮಕ್ಕಳನ್ನು ಕರೆದುಕೊಂಡು, ಸಂಜೆ ೬ ಗಂಟೆಗೆ ಕೆಂಪು ಬಸ್ಸಲ್ಲಿ ಕುಳಿತು, ಬೆಳಗಿನ ಜಾವ ಐದು ಗಂಟೆಗೆ ಲೋಣಿಗೆ ಬಂದೆವು. ಪ್ರವರಾ ಮೆಡಿಕಲ್ ಟ್ರಸ್ಟಿನ ಕ್ಯಾಂಪಸ್ಸಿನಲ್ಲಿ ಅನೇಕ ಅಪಾರ್ಟ್ಮೆಂಟುಗಳಿದ್ದವು. ಅವೆಲ್ಲಾ ವೈದ್ಯರು ಮತ್ತು ನರ್ಸಿಂಗ್ ಡಿಪಾರ್ಟ್ಮೆಂಟಿನವರಿಗಾಗಿ ನಿರ್ಮಿಸಿದಂಥವು. ನಾವಿರಲೂ ಅಲ್ಲಿಯೇ ಫ್ಲ್ಯಾಟ್ ಕೊಟ್ಟಿದ್ದರು. ಲೋಣಿಗೆ ಹತ್ತಿರದಲ್ಲಿಯೇ ಪ್ರಸಿದ್ಧ ಸಾಯಿ ಬಾಬಾನ ಶಿರಡಿ ಇದೆ.
| ಇನ್ನು ಮುಂದಿನ ವಾರಕ್ಕೆ ।






0 Comments