ಜಯಲಕ್ಷ್ಮಿ ಪಾಟೀಲ್ ಅಂಕಣ – ಅವಳು ನಾನೇನಾ ಅಂತ ಅಚ್ಚರಿಯಾಗುತ್ತದೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

49

ಕಮಲಾ ರಾಠೋಡ್ ಆಯುರ್ವೇದ ವೈದ್ಯಕೀಯ ಓದಿದವರು. ಮಹಾರಾಷ್ಟದವರು. ಲೋಣಿಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಫಿಸಿಯೋ ಥೆರೆಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸುಶೀಲ್ ರಾಠೋಡರನ್ನು ಮದುವೆಯಾಗಿ ನಾವಿದ್ದ ಬಿಲ್ಡಿಂಗಿನ ಮೊದಲ ಫ಼ೋರಲ್ಲಿ ನೆಲೆದ್ದರು ದಂಪತಿ. ನಾವು ಲೋಣಿಗೆ ಹೋದ ಎರಡು ವರ್ಷ ಆದ ಮೇಲೆ ಕಮಲಾ ಮದುವೆಯಾಗಿ ಅಲ್ಲಿಗೆ ಬಂದಿದ್ದು. ಕಡಿಮೆ ಮಾತಿನ ಹೆಣ್ಣುಮಗಳು. ನನ್ನ ದೊಡ್ಡ ತಂಗಿಯ ಓರಿಗೆಯಾಕೆ.

ಆರಂಭದಲ್ಲಿ ನಮ್ಮ ನಡುವೆ ಅಷ್ಟೇನು ಒಡನಾಟವಿರಲಿಲ್ಲ. ಆರಾಮಾ? ಊಟ ಆಯ್ತಾ? ಈಗ ಬಂದ್ರಾ? ಊರಿಗೆ ಹೋಗ್ತಿದ್ದೀರಾ? ಇಂಥವೇ ನಾಲ್ಕಾರು ಔಪಚಾರಿಕ ಮಾತುಗಳು. ದಪ್ಪ ಅಲ್ಲದಿದ್ದರೂ ಆರೋಗ್ಯವಾಗಿ ಲಕ್ಷಣವಾಗಿದ್ದ ಚೆಲುವೆ ಇದ್ದ ಕಮಲಾ (ನಾವೆಲ್ಲಾ ಕಮಲ್ ಅನ್ನುತ್ತೇವೆ ಆಕೆಯನ್ನು) ಬರುಬರುತ್ತಾ ಸೊರಗಿ, ಮ್ಲಾನವದನಳಾಗಿರುತ್ತಿದ್ದುದು ಗಮನಕ್ಕೆ ಬಂದು ಏನಾಯ್ತು ಎಂದು ಕೇಳಿದರೂ, ‘ಕುಚ್ ನಹಿ ದೀದಿ’ ಎನ್ನುತ್ತಾ ನಮ್ಮೆದುರಿನಿಂದ ಸರಿಹೋಗುತ್ತಿದ್ದ ಆಕೆಯ ಮೈ ಮೇಲಿದ್ದ ಕಿವಿ ಓಲೆ, ಸರ, ಬಳೆ ಯಾವುದೂ ಕಾಣುತ್ತಿರಲಿಲ್ಲ. ಕಮಲ್ ಬಸುರಿಯಾದಾಗ ಊಟಕ್ಕೆ ಕರೆದು, ಆರತಿ ಮಾಡಿ (ಇದನ್ನು ನಮ್ಮ ಉತ್ತರ ಕರ್ನಾಟಕದ ಕಡೆ ಕುಬುಸ ಮಾಡೂದು ಅನ್ನುತ್ತಾರೆ) ಸುಖದ ಹೆರಿಗೆಯಾಗಲಿ ಎಂದು ಹರಸಿದ್ದೆ. ನಾಲ್ಕೈದು ತಿಂಗಳು ಆಕೆಯ ಜೊತೆಗೇ ಇದ್ದ ಅವಳ ಅತ್ತೆ ಮತ್ತು ನಾದಿನಿ ಹೆರಿಗೆ ಸಮಯ ತುಂಬಾ ಹತ್ತಿರವಿದ್ದಾಗ ಊರಿಗೆ ಹೊರಟುಹೋಗಿದ್ದರು.

ಆಸ್ಪತ್ರೆಯಲ್ಲಿ ಹೆರಿಗೆಯಾದ ಮೊದಲ ದಿನದಿಂದಲೇ ಮಗುವಿನ ಮತ್ತು ತನ್ನ ಆರೈಕೆ ಎಲ್ಲವನ್ನೂ ಸ್ವತಃ ಅವಳೇ ಮಾಡುತ್ತಿದ್ದುದನ್ನು ಕಂಡು ಗಾಬರಿಯಾಗಿದ್ದೆ ನಾನು. ಮುಂದೆ ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಒಮ್ಮೆ ಆಕೆಯ ಅಂಥಾ ಅವಸ್ಥೆಗೆ ಕಾರಣ ಅವಳ ಗಂಡನ ಸಂಶಯ ಸ್ವಭಾವ ಎಂದು ತಿಳಿಯಿತು. ನಾನು ಅವಳ ಗಂಡನ ಮನ ಬದಲಿಸಲು ಏನೆಲ್ಲಾ ಪ್ರಯತ್ನ ಮಾಡಿ ಕೆಲವಷ್ಟು ಯಶಸ್ವಿಯೂ ಆದವಾದರೂ, ವ್ಯಸನವಾಗಿ ಹೋಗಿದ್ದ ಅವನ ಆ ಸ್ವಭಾವ ಇಂದಿಗೂ ಹಾಗೆಯೇ ಇದೆ! ಚೊಚ್ಚಲ ಮಗನ ಹುಟ್ಟುಹಬ್ಬಕ್ಕೆ ತಾನು ಸೀರೆ ತೆಗೆದುಕೊಳ್ಳದೇ, ದೇವಿಗಾಗಿ (ಹಿಂದೆ ದೇವಸ್ಥಾನದ ಬಗ್ಗೆ ಹೇಳಿದ್ದೆನಲ್ಲ ಅದೇ ಆಅಂಬಾಭವಾನಿ ದೇವಿ) ತಂದ ಸೀರೆ ಚೆನ್ನಾಗಿದೆಯಾ ಎಂದು ನನ್ನಲ್ಲಿ ಕೇಳಿ, ತನ್ನ ಮಗನ ಹುಟ್ಟಿದಹಬ್ಬದಂದು ಬಂದು ನನ್ನ ಹಣೆಗೆ ಕುಂಕುಮವಿರಿಸಿ, ಆ ಸೀರೆಯನ್ನು ನನ್ನ ಮಡಿಲ್ಲಟ್ಟು ಕಾಲಿಗೆ ನಮಸ್ಕರಿಸಿದಾಗ ಮಾತು ಹೊರಡದೇ ದಿಗ್ಮೂಢಳಾಗಿ ನಿಂತಿದ್ದೆ! ಸ್ವಲ್ಪ ಮಟ್ಟಿಗಾದರೂ ಸಹಜವಾಗಿ ಉಸಿರಾಡಲು ಸಾಧ್ಯವಾಗಿಸಿದ ಮಾತ್ರಕ್ಕೆ ಆಕೆಯ ಕಣ್ಣಲ್ಲಿ ದೇವತೆಯಾಗಿಹೋಗಿದ್ದೆ ನಾನು! ಅಂಥಾ ದುರಂತದ ಬಾಳು ಬಾಳುತ್ತಲೇ ಎರಡು ಗಂಡು ಮಕ್ಕಳ ತಾಯಿಯಾದ ಕಮಲ್, ಎಂ.ಡಿ ಮಾಡಿಕೊಂಡು ಈಗ ಅಲ್ಲಿನ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ.

ಗಂಡನ ಸಂಶಯ ಅವ್ಯಾಹತವಾಗಿ ಈಗಲೂ ಮುಂದುವರೆದಿದೆ ಎಂದು ಭೇಟಿಯಾದಾಗಲೆಲ್ಲ ನಗುತ್ತಾ ಹೇಳುತ್ತಾಳೆ. ನಗುವಾಗ ಅವಳ ತುಂಬಾ ಸುಂದರವಾದ ಅಗಲ ಕಣ್ಣುಗಳಲ್ಲಿ ಕಾಣುವ ನಿರ್ಲಿಪ್ತತೆಯ ಹಿಂದೆ ಮಡುಗಟ್ಟಿರುವ ವಿಶಾದ ಭಾವ ಮಂಜುಗಡ್ಡೆಯಲ್ಲಿ ಹುದುಗಿದ ಹೆಣದಂತೆ ನಿಚ್ಚಳವಾಗಿ ಕಾಣಿಸುತ್ತದೆ.  ನನಗೆ ಕಳೆದ ವರ್ಷದ (೨೦೨೧) ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ನಾನು ಬರೆದ ‘ಪುಟಗಳಾಚೆ ತೇಲಿದ ಪದ’ ಕಥೆ ಅವಳದೇ. ಕಥೆ ಎಂದ ಮೇಲೆ ಕಲ್ಪನೆಯೂ ಬೆಸೆದಿರುತ್ತದಲ್ಲವೇ? ನಿಜ ಬದುಕಿನಲ್ಲಿ ಆಕೆಯಿಂದ ಸಾಧ್ಯವಾಗದ ನೋವಿನ ಬಿಡುಗಡೆಯನ್ನು ಕಥೆಯಲ್ಲಿ ಸಾಧ್ಯವಾಗಿಸಿದ ಸಮಾಧಾನದ ಭಾಂತಿ ನನ್ನದು…

ನನಗೆ ಅಮೋಲ್ ಮತ್ತು ಅದಿತಿ ಅವಳಿ ಮಕ್ಕಳಾದ್ದರಿಂದ ಅವರಿಬ್ಬರೂ ಜೊತೆಯಾಗಿ ಆಟವಾಡುತ್ತಾ ಬೆಳೆಯುತ್ತಿದ್ದರು. ಒಮ್ಮೆ ಅಮೋಲ್ ಬಹುಶಃ ಒಂದೂವರೆ ವರ್ಷದನಿದ್ದ ಅನಿಸುತ್ತೆ, ನಮ್ಮನೆ ಮೂಲೆಯಲ್ಲಿದ್ದ ಅಮೃತಶಿಲೆಯ ಮೇಜನ್ನು ಅಲ್ಲಾಡಿಸಿ ಅದನ್ನು ಮೈಮೇಲೆ ಕೆಡವಿಕೊಂಡು, ಅವನ ಒಂದು ಕೈಯ ಕಿರುಬೆರಳು ಮತ್ತು ಉಂಗುರದ ಬೆರಳಿನ ನಡುವೆ ಆಳ ಗಾಯವಾಗಿ ರಕ್ತ ಸುರಿಯತೊಡಗಿತು! ಇವರು ಮಗನನ್ನು ಎತ್ತಿಕೊಂಡವರೇ ಕಾಲಿಗೆ ಚಪ್ಪಲಿಯನ್ನೂ ಧರಿಸದೆ ಓಡುತ್ತಲೇ ಆಸ್ಪತ್ರೆ ತಲುಪಿ ಔಷಧಿ ಬ್ಯಾಂಡೇಜ್ ಹಾಕಿಸಿಕೊಂಡು ಬಂದಿದ್ದರು. ಬಂದ ಮೇಲೆ ಇವರ ಕಾಲಲ್ಲಿ ನೆಟ್ಟಿದ್ದ ಮೂರು ಮುಳ್ಳುಗಳನ್ನು ಹುಡುಕಿ, ಪಿನ್ನಿನಿಂದ ತೆಗೆದಿದ್ದೆ. ಮಗ ಹೀಗಾದರೆ ಮಗಳದು ಇನ್ನೊಂದು ಕತೆ. ಲೋಣಿಯಲ್ಲಿ ಬುಧವಾರಕ್ಕೊಮ್ಮೆ ಸಂತೆಯಾಗುತ್ತಿತ್ತು.

ಮಂಗಳವಾರ ಫ಼್ರಿಡ್ಜ್ ಖಾಲಿ ಮಾಡಿ ಒರೆಸಿ ಆಫ್ ಮಾಡಿಟ್ಟು ಬುಧವಾರ ಸಂತೆಯಲ್ಲಿ ತಂದ ಕಾಯಿಪಲ್ಲೆಯನ್ನು ತುಂಬಿ ಫ಼್ರಿಡ್ಜ್ ಆನ್ ಮಾಡುತ್ತಿದ್ದೆ. ಅದಿತಿ ಒಮ್ಮೆ ಅಂದು ಸಂತೆಯಿಂದ ತಂದಿಟ್ಟಿದ್ದ ಕಾಯಿಪಲ್ಲೆಯಲ್ಲಿಂದ ಅದ್ಯಾವ ಮಾಯದಲ್ಲಿ ಬೆಂಡೆಕಾಯಿಯನ್ನು ತೆಗೆದುಕೊಂಡಿದ್ದಳೋ ಗೊತ್ತಿಲ್ಲ. ಲಕ್ಷಣವಾಗಿ ಒಂದೆಡೆ ಕುಳಿತು ಬೆಂಡೆಕಾಯಿಯ ಹಿಂಭಾಗವನ್ನು ಮೂಗಿಗೇರಿಸಿಕೊಂಡಿದ್ದಾಳೆ. ಬಹುಶಃ ಉಸಿರಾಡಲು ಬರದಾದಾಗ ಗಾಬರಿಯಾಗಿ ಅದನ್ನು ಆಚೆ ತೆಗೆಯಲು ಹೋಗಿ ಎಳೆ ಬೆಂಡೆಕಾಯಿಯ ಹಿಂದಿನ ತೊಟ್ಟು ಮೂಗಿನೊಳಗೇ ಮುರಿದುಕೊಂಡಿದೆ. ಅದಿತಿ ಜೋರಾಗಿ ಅಳತೊಡಗಿದಾಗ ಅಡುಗೆಮನೆಯಿಂದ ಓಡಿ ಬಂದು ನೋಡಿದರೆ ಮೊದಲಿಗೆ ಏನೂ ತಿಳಿಯಲಿಲ್ಲ. ಹೇಳಲು ಮಗುವಿಗೆ ಇನ್ನೂ ಮಾತು ಬರುತ್ತಿರಲಿಲ್ಲ ಆಗ. ಅಲ್ಲಿ ಬಿದ್ದ ಬೆಂಡೆಕಾಯಿಯನ್ನು ನೋಡಿ ಸಂಶಯಗೊಂಡು ಅದನ್ನ ಅವಳ ಬಾಯಿ ಕಿವಿ ಮೂಗು ಎಲ್ಲಾ ಪರೀಕ್ಷಿಸಿದಾಗ ಮೂಗಿನ ಬಲ ಹೊಳ್ಳೆ ಒಳಗಡೆ ಬ್ಲಾಕ್ ಆಗಿರುವುದು ಕಾಣಿಸಿತು. ಅದನ್ನು ಕಂಡು ನನ್ನ ಕೈಕಾಲು ನಡುಗತೊಡಗಿದವು.. ಅಕಸ್ಮಾತ್ ಅದಿತಿ ಜೋರಾಗಿ ಉಸಿರೆಳೆದುಕೊಂಡು ಬೆಂಡೆಕಾಯಿಯ ತುಂಡು ಶ್ವಾಸನಾಳದಲ್ಲಿ ಹೋದರೇನು ಗತಿ ಎಂದೆನಿಸಿ ಹೆದರಿದ್ದೆ.

ತಕ್ಷಣ ಇವರಿಗೆ ಫೋನ್ ಮಾಡಿ ಮನೆಗೆ ಬರಲು ಹೇಳಿ ನಾನು ಅದಿತಿಯನ್ನು ಎತ್ತಿಕೊಂಡು ಅಳುತ್ತಾ ಹೊರಗೋಡಿದ್ದನ್ನು ಕಂಡು ಶಿಂಗಾರೆ, ಕುಬನಾನಿ (ಅದೇ ಮಕ್ಕಳಾಗದ ಸಿಂಧಿ ವೈದ್ಯ ದಂಪತಿ) ಅವರ ಮನೆಗಳಿಂದ ಹೊರಗೋಡಿ ಬಂದರು. ನನ್ನ ಕೈಯಲ್ಲಿದ್ದ ಅದಿತಿಯನ್ನು ದೀಪಕ್ ಶಿಂಗಾರೆ ಭಯ್ಯಾ ತಾವೆತ್ತಿಕೊಂಡರು. ನನ್ನ ಅಳು ಕಂಡು ಮಗು ಗಾಬರಿಯಲ್ಲಿ ಜೋರಾಗಿ ಉಸಿರಾಡತೊಡಗಿದರೆ ಅಪಾಯ ತಪ್ಪಿದ್ದಲ್ಲ ಎಂದು ನನ್ನನ್ನು ಎಚ್ಚರಿಸಿ, ಎದುರು ಬಿಲ್ಡಿಂಗಿನಲ್ಲಿದ್ದ ಡಾ. ಮೆಹತಾ ಅವರ ಮನೆಗೆ ಕರೆದೊಯ್ದರು. ಅಷ್ಟರಲ್ಲಿ ನಮ್ಮನೆಯವರು ಧಾವಿಸಿ ಬಂದರು ಮನೆಗೆ.

ಪುಣ್ಯಕ್ಕೆ ಹಿರಿಯರಾದ ಡಾ. ಮೆಹತಾ ಅಂಕಲ್ ಮನೆಯಲ್ಲಿದ್ದು ಅವರ ಬಳಿ ಸಣ್ಣದೊಂದು ಫ಼ೋರ್ಸೆಪ್ಸ್ ಇತ್ತು. ಅವಳು ಜೋರಾಗಿ ಉಸಿರಾಡದಂತೆ ಎಚ್ಚರವಹಿಸಿ ಒದ್ದಾಡುತ್ತಿದ್ದ ಅದಿತಿಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಮೂಗಲ್ಲಿನ ಬೆಂಡೆ ತುಂಡನ್ನು ಹೊರಗೆಳೆಯಲು ನೋಡಿದಷ್ಟೂ ಅದು ಜಾರುತ್ತಿದ್ದುದ್ದನ್ನು ಕಂಡು ನನ್ನ ಆತಂಕ ಇನ್ನೂ ಹೆಚ್ಚಾಯಿತು. ಅಕಸ್ಮಾತ ತೆಗೆಯಲು ಹೋಗಿ ಇನ್ನೂ ಒಳಗೆ ಒತ್ತಿ ಹೋದರೆ ಮಗುವಿನ ಗತಿ ಏನು ಎಂದು ಊಹಿಸಿಯೇ ಉಚ್ಚೆ ಬಂದಂಗಾಗಿತ್ತು ನನಗೆ. ಮೂಗಿನ ಮತ್ತು ಬೆಂಡೆಕಾಯಿಯ ಲೊಳೆ ಜೊತೆ ಸೇರಿ ಪದೇ ಪದೇ ಆ ಚಿಮುಟದಿಂದ ಬೆಂಡೆಕಾಯಿ ಜಾರುತ್ತಿತ್ತು. ದೀಪಕ್ ಭಯ್ಯಾ ನರ್ಸಿಂಗ್ ಟ್ರೇನಿಂಗ್ ಮಾಸ್ಟರ್. ಹೀಗಾಗಿ ತುಂಬಾ ನಾಜೂಕಿನಿಂದ ಅದಿತಿಗೆ ಕಷ್ಟವಾಗದ ಹಾಗೆ, ಅದನ್ನು ಹೊರಗೆ ತೆಗೆದರು. ಉಫ್.. ಹೋದ ಜೀವ ಬಂದಂತಾಗಿತ್ತಾಗ ನನಗೆ.

ಇಂಥ ಒಂದೆರೆಡು ಪ್ರಸಂಗಗಳನ್ನು ಬಿಟ್ಟರೆ ನನ್ನೆರಡೂ ಮಕ್ಕಳಿಂದಾಗಿ ನನ್ನ ಮನೆಗೆ ಸ್ವರ್ಗ ಇಳಿದುಬಂದಿತ್ತು! ಇತರ ಕಷ್ಟಗಳನ್ನೆಲ್ಲ ಎದುರಿಸಲು ಪಡುವ ನೋವುಗಳನ್ನು ಬೇಗ ಮರೆತು ಮತ್ತೆ ನಗಲು ಅವರಿಂದಾಗಿ ಸಾಧ್ಯವಾಗುತ್ತಿತ್ತು. ನನ್ನ ಮಕ್ಕಳು ನನಗೆ ಬೂಸ್ಟ್ ಆಗಿದ್ದರು! ನಮ್ಮನೆಯವರಿಗೆ ಹೆಚ್ಚಿಗಲ್ಲ, ರಜೆಗಳೇ ಇರುತ್ತಿರಲಿಲ್ಲ. ಭಾನುವಾರವೂ ಕೆಲಸವಿರುತ್ತಿತ್ತು! ಹೀಗಾಗಿ ನಾವಿದ್ದ ಲೋಣಿಯ ಮನೆ ಮತ್ತು ಬಿಜಾಪುರದಲ್ಲಿದ್ದ ಮನೆಯ ಸಂಪೂರ್ಣ ಜವಾಬ್ದಾರಿ ನನ್ನದಾಗಿತ್ತು. ಆದರೂ ಸಂಪಾದನೆ ಇವರದ್ದಾದ್ದರಿಂದ ಜವಾಬ್ದಾರಿಯ ಕ್ರೆಡಿಟ್ ಸದಾ ಇವರ ಹೆಸರಿಗೇ ಜಮಾ ಆಗುತ್ತಿತ್ತು. ಮೈದುನ ಮತ್ತು ಸಣ್ಣ ನಾದಿನಿಯ ಓದು (ನನ್ನಂತೆಯೇ ಕನ್ನಡ ಮಾಧ್ಯಮದಲ್ಲಿ ಓದಿದದವರು ಅವರೂ ಸಹ) ಮತ್ತು ಮೂರನೇ ನಾದಿನಿಗೆ ವರ ನೋಡಲು ಅನುಕೂಲವಾಗುತ್ತದೆಂದು ಬಿಜಾಪುರದಲ್ಲಿ ಮನೆ ಮಾಡಿದ್ದೆವು. ಅತ್ತೆಯವರೊಂದಿಗೆ ಅವರು ಅಲ್ಲಿ ವಾಸವಾಗಿದ್ದರು. ಈ ಪುಟ್ಟ ಮಕ್ಕಳನ್ನು ಕಟ್ಟಿಕೊಂಡೇ ಬಿಜಾಪುರಕ್ಕೆ ಅಲ್ಲಿನ ಮನೆವಾರ್ತೆ ನೋಡಿಕೊಳ್ಳಲು ೨ – ೩ ತಿಂಗಳಿಗೊಮ್ಮೆ ಹೋಗುತ್ತಿದ್ದೆ.

ನಾಲ್ಕಾರು ದಿನ ಅಲ್ಲಿದ್ದು ಅಲ್ಲಿನ ಎಲ್ಲ ಬೇಕು ಬೇಡಗಳನ್ನು ನೋಡಿ, ಅನುಕೂಲ ಮಾಡಿಕೊಟ್ಟು ಮರಳಿ ಲೋಣಿಗೆ ಬರುತ್ತಿದ್ದೆ. ಆಗೆಲ್ಲ ಈಗಿನಂತೆ ಖಾಸಗಿ ಬಸ್ಸುಗಳು, ಸ್ಲೀಪರ್ ಕೋಚ್ ಬಸ್ ಏನೂ ಇರಲಿಲ್ಲ. ಶಿರ್ಡಿಯಿಂದ ಬಿಜಾಪುರಕ್ಕೆ ಒಂದೇ ಒಂದು ಬಸ್ಸಿತ್ತು. ಲೋಣಿಯಿಂದ ಶಿರ್ಡಿಯವರೆಗೆ ಇವರು ನಮ್ಮೊಂದಿಗೆ ಬಂದು ಬಸ್ಸು ಹತ್ತಿಸುತ್ತಿದ್ದರು. ಆಗೆಲ್ಲ ಅಡ್ವಾನ್ಸ್ ಸೀಟ್ ರಿಸರ್ವೇಶನ್ ಸಿಗುವುದೇ ತುಂಬಾ ಅಪರೂಪವಾಗುತ್ತಿತ್ತು. ಕೂರಲು ಸೀಟ್ ಸಿಕ್ಕರೆ ಅದು ನಮ್ಮ ಪುಣ್ಯ. ಇಲ್ಲದಿದ್ದಲ್ಲಿ ಅಹಮದನಗರ್ ವರೆಗೆ ಮಕ್ಕಳಿಬ್ಬರನ್ನು ಅವರಿವರಲ್ಲಿ ಕೇಳಿ ಅವರ ಪಕ್ಕದಲ್ಲೋ ತೊಡೆಯ ಮೇಲೆ ಕೂರಿಸಿಯೋ, ನಗರ್ ಬರುತ್ತಲೇ ಖಾಲಿಯಾದ ಸೀಟುಗಳಲ್ಲಿ ಮಕ್ಕಳೊಂದಿಗೆ ಇತರರು ಬಸ್ ಹತ್ತುವ ಮೊದಲು ಜಾಗ ಮಾಡಿಕೊಂಡು ಕೂಡ್ರುತ್ತಿದ್ದೆ. ಶಿರ್ಢಿಯಿಂದ ಬಿಜಾಪುರ ೮ ಗಂಟೆಯ ಪ್ರಯಾಣ. ಈಗ ಆ ದಿನಗಳನ್ನು ನೆನೆದರೆ ಅಷ್ಟೆಲ್ಲಾ ಸರ್ಕಸ್ ಮಾಡುತ್ತಾ ಎಳೆ ಮಕ್ಕಳನ್ನು ಕರೆದುಕೊಂಡು ಓಡಾಡುತ್ತಿದ್ದವಳು ನಾನೇನಾ ಅಂತ ಅಚ್ಚರಿಯಾಗುತ್ತದೆ.

ಮಕ್ಕಳು ನಾಲ್ಕು ವರ್ಷದವರಾಗಿ ನರ್ಸರಿಗೆ ಹೋಗತೊಡಗಿದ ಮೇಲೆ ಹೊತ್ತು ಹೋಗುವುದೇ ಕಷ್ಟವಾಗತೊಡಗಿತು. ಈಗಿನಂತೆ ಆಗೆಲ್ಲ ಟಿವಿಯಲ್ಲಿ ದಿನವಿಡೀ ಕಾರ್ಯಕ್ರಮಗಳಿರುತ್ತಿರಲಿಲ್ಲ. ಊರಿಗೆ ಹೋದಾಗೊಮ್ಮೆ ತರುತ್ತಿದ್ದ ಸುಧಾ, ತರಂಗ, ಮಯೂರ, ತುಷಾರಗಳನ್ನು ತಂದಾಗಲೇ ಬಿಡದೇ ಓದಿ ಮುಗಿಸುತ್ತಿದ್ದೆನಾದ್ದರಿಂದ, ಮತ್ತೆ ಓದಲು  ಮಹಾರಾಷ್ಟ್ರದ ಆ ಊರಲ್ಲಿ ಕನ್ನಡ ಪತ್ರಿಕೆಯಾಗಲಿ ಪುಸ್ತಕವಾಗಲಿ ಕೊಂಡು ಓದಲು ಸಾಧ್ಯವೂ ಇರಲಿಲ್ಲ. ಅಕ್ಕಪಕ್ಕದ ಮನೆಗೆ ಹರಟೆ ಹೊಡೆಯಲು ಹೋಗುವ ಅಭ್ಯಾಸವೂ ನನಗಿರಲಿಲ್ಲವಾದ್ದರಿಂದ ಖಾಲಿ ಸಮಯ ತುಂಬಲು ಪುಣೆಯಲ್ಲಿ ಮಾಡಿದಂತೆ ಮನೆಯಲ್ಲಿಯೇ ಪಾರ್ಲರ್ ಆರಂಭಿಸಿದೆನಾದರೂ ಅಕ್ಕಪಕ್ಕದ ನಾಲ್ಕಾರು ಬಿಲ್ಡಿಂಗಿನವರನ್ನು ಬಿಟ್ಟರೆ ಹೆಚ್ಚಿಗೆ ಜನ ಬರುತ್ತಿರಲಿಲ್ಲ, ಕಾರಣ ಪ್ರಚಾರವಿರಲಿಲ್ಲ. ಆ ಹೊತ್ತಲ್ಲೇ ಲೋಣಿಯಲ್ಲಿ ಆಪ್ಟೆಕ್ ಆರಂಭವಾದ ಸುದ್ದಿ ತಿಳಿಯಿತು. ನಾವಿದ್ದ PMT ಕ್ಯಾಂಪಸ್ಸಿನಾಚೆ ಒಂದು ಕಿಲೊ ಮಿಟರ್ ದೂರದಲ್ಲಿತ್ತದು. ಕಂಪ್ಯೂಟರ್ ಕಲಿಯಬೇಕೆನಿಸಿತು. ಆರು ತಿಂಗಳ ಬೇಸಿಕ್ ಕೋರ್ಸ್ ಮಾಡಲು ಆಪ್ಟೆಕ್ ಸೇರಿಕೊಂಡೆ. ಮಕ್ಕಳು ಶಾಲೆಗೆ ಹೋದಾಗಿನ ಸಮಯದ ಬ್ಯಾಚ್ ಆರಿಸಿಕೊಂಡು ಹೋಗತೊಡಗಿದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: