ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮಿ ಕಂಡಂತೆ ಜರ್ಮನಿ ಮತ್ತು ಪ್ಯಾರೀಸ್

ಜಯಲಕ್ಷ್ಮಿ ಶೇಖರ್

ಪತಿ (ಜ್ಞಾನಶೇಖರ) ಜರ್ಮನಿಗೆ 6 ವಾರಗಳ ಆಫೀಸ್ ಕೆಲಸಕ್ಕೆಂದು ಹೋಗುವವರಿದ್ದರು. ಜರ್ಮನಿ ಅವರಿಗೆ ಹೊಸತಲ್ಲ, ಓಡಾಡಿ,ತಂಗಿ,ತಾನು ಬಹಳ ಮೆಚ್ಚಿದ ದೇಶವನ್ನು ಪತ್ನಿ,ಮಕ್ಕಳಿಗೂ ತೋರಿಸುವ ಉಮೇದು ಅವ್ರಿಗೆ. ನಮ್ಮ ದೇಶವನ್ನೇ ನೋಡದೆ ಸೀದಾ ಪರದೇಶವನ್ನು ನೋಡಿ ಹೆಮ್ಮೆ ಪಡುವುದು ಸರಿಯೆ ಎಂಬ ಭಾವ ನನ್ನದು. ಆದರೆ ಪತಿಯ ಉತ್ಸಾಹಕ್ಕೆ ತಲೆ ಬಾಗಿದೆ. ಅವರೇ ಪಾಸ್ ಪೋರ್ಟ್ , ವೀಸಾ ಅಂತ ಬಹಳ ಮುತುವರ್ಜಿಯಿಂದ ಓಡಾಡಿ, ಮೇ 11ರ ಬೆಳಿಗ್ಗೆ ಹೊರಡಲು ಟಿಕೆಟ್ ತೆಗೆದು ನಂತರ ತಮ್ಮ ಪ್ರವಾಸವನ್ನು ಕೈಗೊಂಡರು. 6 ವಾರಗಳ ಕೆಲಸ ಮುಗಿಸಿ ನಮ್ಮನ್ನು ಕರೆದೊಯ್ಯಲಿಕ್ಕಾಗಿಯೇ ಮೇ.9ರ ಬೆಳಗಿನ ಝಾವ ಬೆಂಗಳೂರಿಗೆ ಬಂದಿಳಿದರು. ನಾನೆಷ್ಟು ಸೋಮಾರಿ ಗೊತ್ತಲ್ಲ, ಅವರು ಬಂದ ನಂತರ ಅವರ ಮಾರ್ಗದರ್ಶನದಲ್ಲೇ ಬಟ್ಟೆ, ಬರೆಯ ತಯಾರಿ ನಡೆಯಿತು. ಈ ನಡುವೆ ಅಲ್ಲೆಲ್ಲೋ ಜ್ವಾಲಾಮುಖಿ ಎದ್ದು ವಿಮಾನಗಳು ಹಾರಾಡದೆ ನಮ್ಮ ಪ್ರವಾಸವು ರದ್ದಾಗುವ ಸಂಭವವೂ ಇತ್ತು,ಹೊರಡುವ ಮೊದಲು ಅದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡೇ ಪ್ರವಾಸವನ್ನು ಕೈಗೊಂಡೆವು.
ಹಾರೋಣ ಬಾ!
11ರ ಬೆಳಿಗ್ಗೆ 4 ಘಂಟೆಯ ವಿಮಾನದಲ್ಲಿ ಬೆಂಗಳೂರಿನಿಂದ ದುಬೈಗೆ ಹಾರಬೇಕಿತ್ತು. ರಾತ್ರಿ ಒಂದು ಘಂಟೆಯ ತನಕ ಮಲಗೋಣ ಅಂತ 8 ಘಂಟೆಗೆ ಮಲಗಿದರೂ ನಿದ್ದೆ ಹತ್ತಿರ ಸುಳಿಯಲಿಲ್ಲ.ಅಂಥಾ ಕಾತುರ. 1.15ಕ್ಕೆ ವಿಮಾನನಿಲ್ದಾಣಕ್ಕೆ ಹೊರಟೆವು. ಹೊರಟದ್ದು 10 ದಿನಗಳ ಪ್ರವಾಸಕ್ಕೆ ಆದರೂ ಬೆಂಗಳೂರಿನ ರಸ್ತೆಗಳಲ್ಲಿ ಆ ರಾತ್ರಿ ಹೋಗುವಾಗ ಇನ್ಯಾವಾಗ ಇಲ್ಲಿಗೆ ಬರುತ್ತೇನೋ, ಬರುತ್ತೇನೋ ಇಲ್ಲವೋ ಈ ರಸ್ತೆಗಳನ್ನೆಲ್ಲ ಬಿಟ್ಟುಹೋಗ್ತಿದ್ದೇನಾ ಎಂಬ ಎಂದೂ ಕಾಡದ ಆತಂಕ, ಈ ಊರಮೇಲಿನ ಮೋಹ ಇಷ್ಟು ಬಲವತ್ತಾದುದೆ ಎನಿಸುವಂತೆ ಮಾಡಿತು. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ಸೆಕ್ಯುರಿಟಿ ಚೆಕ್, ಇಮಿಗ್ರೇಶನ್ ಚೆಕಿಂಗ್ ಅಂತೆಲ್ಲಾ ಮುಗಿಸಿ ತೂಕಡಿಸುತ್ತಾ ವಿಮಾನ ಹತ್ತಲು ಕಾಯುತ್ತಿದ್ದೆವು. 3.15ಕ್ಕೆ ವಿಮಾನದ ದ್ವಾರ ತೆಗೆಯಿತು.ಮಕ್ಕಳ ಮುಖದಲ್ಲಿ ಖುಷಿಯೋ ಖುಷಿ. ನನಗೂ ಸಂಭ್ರಮ. ಇಷ್ಟು ದೂರದ ವಿಮಾನ ಪ್ರಯಾಣ ಹೊಸ ಅನುಭವ. ಆದಿತ್ಯನಿಗೆ ಅದರಲ್ಲಿ ತಿನ್ನಲು ಏನು ಕೊಡುತ್ತಾರೋ ಎಂಬ ಕುತೂಹಲ. ಅಷ್ಟು ಹೊತ್ತೂ ಕುಳಿತಲ್ಲೇ ಕುಳಿತಿರುವುದೆಂದರೆ ಬೋರಾಗುತ್ತೇನೋ ಎಂಬ ಆತಂಕ ನನ್ನದು.
ಆ ವಿಮಾನದ ಗಗನಸಖಿಯರ ದಿರಿಸು ನನಗೆ ಬಹಳ ಆಕರ್ಷಣೀಯವೆನಿಸಿತು. ಕೆನೆಬಣ್ಣದ ಶರ್ಟು, ಪ್ಯಾಂಟು ತೊಟ್ಟು ಕೆಂಪು ಟೊಪ್ಪಿಯನ್ನು ಹಾಕಿ ಆ ಟೋಪಿಯ ಬದಿಯಿಂದ ಕಿವಿಯ ಮೇಲೆ ಹಾದು ಭುಜವನ್ನು ಸುತ್ತುವರಿದಿದ್ದ ದುಪಟ್ಟಾದಿಂದ ಅವರು ಕಿನ್ನರಿಯರಂತೆ ಕಂಡರು. ಮತ್ತೆ ಮತ್ತೆ ಆ ವೇಷವನ್ನು ನೋಡುವುದೇ ನನ್ನ ಕೆಲಸವಾಯಿತು. ವಿಮಾನದೊಳಗಿದ್ದ ಟಿ.ವಿ.ಯಲ್ಲಿ ಅರಬ್ಬಿ ಭಾಷೆಯಲ್ಲಿ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸುರಕ್ಷರತೆಗೆ ಸಂಬಂಧಿಸಿದಂತೆ ವಿವರಣೆಗಳೂ ಬರುತ್ತಿದ್ದವು. ಅಲ್ಲಿಯೂ ಈ ದಿರಿಸು ತೊಟ್ಟ ಸಖಿಯರು, ಸೂಚನೆಗಳನ್ನು ಕೊಡುವಾಗ ಅವರ ಕಣ್ಣು,ಬಾಯಿ ತಿರುಗುತ್ತಿದ್ದ ರೀತಿ,ಮುಗುಳ್ನಗೆ ಇವೆಲ್ಲ ಅವರು ಈ ಮತ್ರ್ಯಲೋಕಕ್ಕೆ ಸೇರಿದವರಲ್ಲ ಎಂಬ ಬೆರಗನ್ನು ಮೂಡಿಸಿತು ನನ್ನಲ್ಲಿ. ಅವರನ್ನು ಗಮನಿಸುವುದು,ತೂಕಡಿಸಿ ಏನೋ ಕನಸು ಕಾಣುವುದು.
4 ಘಂಟೆಗೆ ಸರಿಯಾಗಿ ನಮ್ಮ ವಿಮಾನ ಹೊರಟಿತು. ಸ್ವಲ್ಪ ದೂರ ಕ್ರಮಿಸುವಾಗ ಕಿತ್ತಳೆ ರಸ ಕೊಟ್ಟರು. ತಿಂಡಿ ಕೊಟ್ಟರು, ರುಚಿಯಾಗಿತ್ತು. ತಿಂದು, ನಾನಂತೂ ನಿದ್ರಿಸಿದೆ. ನನ್ನ ನಿದ್ದೆ ಇವರಿಗೆಲ್ಲ ತಮಾಷೆಯೆನಿಸುತ್ತಿತ್ತು. ಹಾರಿ ಹಾರಿ ದುಬೈಗೆ ಭಾರತೀಯ ಸಮಯ ಬೆಳಗಿನ 7.45ಕ್ಕೆ (ದುಬೈ ಸಮಯ ಬೆಳಿಗ್ಗೆ 6.15) ತಲುಪಿದೆವು.
ಅ ಬ್ರೇಕ್
ದುಬೈ ವಿಮಾನ ನಿಲ್ದಾಣದ ಅಗಾಧತೆ, ವೈಭೋಗವನ್ನು ಅಚ್ಚರಿಯಿಂದ ದಿಟ್ಟಿಸುತ್ತಾ ನಡೆದೆ, ನಡೆದಷ್ಟೂ ಮುಗಿಯದ ಕಾರಿಡಾರುಗಳು, ನಡಿಗೆಯ ಶ್ರಮವನ್ನು ಕಡಿಮೆಮಾಡಲೆಂದು ಅಲ್ಲಲ್ಲಿ ಹಾಸಿದ್ದ ವಿದ್ಯುತ್ ಚಾಲಿತ ನಡೆಹಾಸುಗಳು, ಏರುವ ಶ್ರಮ ತಿಳಿಯದಿರಲಿ ಎಂದು ಅಳವಡಿಸಿದ್ದ ಎಸ್ಕಲೇಟರುಗಳು, ಎಲ್ಲೆಲ್ಲಿಯೂ ಶುಭ್ರತೆ, ಸ್ವಚ್ಛತೆ. ನಮ್ಮನ್ನು ತಲೆಯಿಂದ ಕಾಲತನಕ ಸ್ಥೂಲವಾಗಿ ಪರೀಕ್ಶಿಸಿ,ಸಾಕ್ಸನ್ನೂ ಬಿಚ್ಚಿಸಿ ಪರೀಕ್ಷಿಸಿದರು. ಎಲ್ಲಾ ತಪಾಸಣೆಗಳು ಮುಗಿದು ಹಾದಿ ಸುಗಮವಾದ ಮೇಲೆ ಫ್ರಾಂಕ್ ಫರ್ಟ್ಟ ಗೆ ನಮ್ಮನ್ನು ಹೊತ್ತು ಹಾರುವ ಇನ್ನೊಂದು ಎಮಿರೇಟ್ಸ್ ವಿಮಾನಕ್ಕಾಗಿ ಕಾಯುತ್ತಾ ಕುಳಿತೆವು. ನಾವು ಕುಳಿತಲ್ಲಿಗೆ ವಿಮಾನಗಳು ಮೇಲೇರುವುದು, ಕೆಳಗಿಳಿಯುವುದು ಕಾಣಿಸುತ್ತಿತ್ತು. ಓಡಿ ಮೇಲೇರಿದ ವಿಮಾನಗಳನ್ನು ನೋಡುವಾಗ ಆಕಾಶದಲ್ಲಿ ಮೀನುಗಳು ಹಾರುತ್ತಿವೆಯೇನೋ ಎನಿಸುತ್ತಿತ್ತು. ನಮ್ಮ ವಿಮಾನಕ್ಕೇರುವ ಸಮಯವಾಗುತ್ತಿದ್ದಂತೆ ನಮ್ಮನ್ನೆಲ್ಲ ಒಂದು ವ್ಯಾನಿನಲ್ಲಿ ತುಂಬಿ ಕರೆದೊಯ್ದರು. ಎಮಿರೆಟ್ಸ್ ವಿಮಾನಗಳ ಹೊರಭಾಗದಲ್ಲಿ ಅರಬಿ ಭಾಷೆಯಲ್ಲಿ ಬರೆದ ಬರಹ ಕನ್ನಡದಲ್ಲಿ ಶ್ರೀ ಬರೆದಂತೆ ತೋರುತ್ತಿತ್ತು, ಜ್ಯೋತ್ಸ್ನಳೂ ಅದನ್ನು ಅನುಮೋದಿಸಿದಳೂ.
ಈ ವಿಮಾನದಲ್ಲೂ ಅದೇ ದಿರಿಸಿನ ಸಖಿಯರಿದ್ದರು, ಖುಷಿಯೆನಿಸಿತು. ದುಬಾಯ್ ಸಮಯ 8.30ಕ್ಕೆ ಫ್ರಾಂಕ್ ಫರ್ಟ್ ನತ್ತ ಹಾರಿದೆವು. ಎದುರಿದ್ದ ಟಿವಿಯಲ್ಲಿ ನಾವು ಯಾವ ದೇಶದ ಮೇಲೆ ಹಾರುತ್ತಿದ್ದೇವೆಂಬ ವಿವರ ಬರ್ತಾ ಇತ್ತು. ವಿಮಾನದ ಅಡಿಯಲ್ಲಿ ಅಳವಡಿಸಿದ್ದ ಕ್ಯಾಮೆರಾದಿಂದ ಮೋಡಗಳ ಹಿಂಡೇ ಕಾಣುತ್ತಿತ್ತು. ಸ್ವಲ್ಪಹೊತ್ತು ಇವನ್ನೆಲ್ಲ ನೋಡಿ, ಕುತೂಹಲ ತಣಿದ ಮೇಲೆ ಸೀಟಿಗೆ ಅಳವಡಿಸಿದ್ದ ಪ್ರತ್ಯೇಕ ಟಿವಿಯಲ್ಲಿ ಎರಡು ಹಿಂದಿ ಸಿನೆಮಾಗಳನ್ನು ವೀಕ್ಷಿಸಿದೆ. ರುಚಿರುಚಿಯಾದ ಊಟ ಸಿಕ್ಕಿತು(ಏಷ್ಯನ್ ಸಸ್ಯಾಹಾರಿ ಊಟ). ದುಬಾಯ್  ಯಿಂದ ಫ್ರಾಂಕ್ ಫರ್ಟ್  ಗೆ 5,077 ಕಿಮಿ ಗಳಷ್ಟು ಹಾರಿದ್ದೆವು ಎಂದು ಟಿವಿ ತೋರಿಸಿತು.
ಸುಖಪ್ರಯಾಣವಾಯಿತು


ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣ ಯುರೋಪಿನ ಎರಡನೆ0ು ಅತಿ ದೊಡ್ಡ ವಿಮಾನ ನಿಲ್ದಾಣವಂತೆ. ಅಲ್ಲಿ ನಮ್ಮ ಸಾಮಾನುಗಳನ್ನು ಇಳಿಸಿಕೊಳ್ಳುವುದು, ವೀಸಾ, ಪಾಸ್ ಪೋರ್ಟ್ ತಪಾಸಣೆ ಎಲ್ಲ ಮುಗಿಸಿ ಹೊರಬಂದು ಸ್ವಯಂಚಾಲಿತ ಟಿಕೆಟ್ ಯತ್ರದಿಂದ  ಸ್ಟುಟ್ಗಾಟರ್ಿಗೆ ಟಿಕೆಟ್ ಗಳನ್ನು ಕೊಂಡು, ರೈಲಿಗಾಗಿ ಕಾಯುತ್ತಾ ನಿಂತೆವು, ನಿಗದಿತ ಸಮಯಕ್ಕೆ ಸೆಕೆಂಡೂ ವ್ಯತ್ಯಾಸವಾಗದಂತೆ ಬಂದೇ ಬಂದಿತು ಬಾತುಕೋಳಿ ಮೂತಿಯ, ಕೆಂಪುಮೈನ ರೈಲು. ಇಂತಹ ರೈಲನ್ನು ನೋಡುತ್ತಿರುವುದು ಇದೇ ಮೊದಲು,ಮಕ್ಕಳಿಗೂ ನನಗೂ ಅಚ್ಚರಿಯ ಮಟ್ಟದಲ್ಲಿ ವ್ಯತ್ಯಾಸವೇ ಇಲ್ಲ. ರೈಲನ್ನೇರಿ ಬೋಗಿಯ ಒಳಗೆ ಹೋಗಲು ಸ್ವಯಂಚಾಲಿತ ಬಾಗಿಲು ನಮ್ಮನ್ನು ಮುಗುಳ್ನಗುತ್ತಾ  ಸ್ವಾಗತಿಸುವಂತೆ ಮೃದುವಾಗಿ ತೆರೆದುಕೊಂಡಿತು. ಒಳಗೆಲ್ಲ ಶಿಸ್ತಿನಿಂದ ಮೌನದಿಂದ ಅಥವಾ ತಮ್ಮವರೊಂದಿಗೆ ಪಿಸುಮಾತನಾಡುತ್ತಾ ಕುಳಿತಿರುವ ಪ್ರಯಾಣಿಕರು, ನಮ್ಮ ಉಸಿರಿನ ಶಬ್ದ ಇಲ್ಲಿಯ ಮೌನಕ್ಕೆ ಭಂಗ ತಂದರೆ ಎಂದು ಆತಂಕವಾಯಿತು. ಆದಿತ್ಯ ಮಾತ್ರ ಏನೇನೋ ಹರಟುತ್ತಲೇ ಇದ್ದ. ನನ್ನ ಕಣ್ಸನ್ನೆ, ಮುಖಹಿಂಡುವಿಕೆ ಅವನ ಉತ್ಸಾಹವನ್ನಿನಿತೂ ಕಮರಿಸಲಿಲ್ಲ. ನಾವು ಮೂವರೂ ಆ ಮೌನದೊಳಗೆ ಸೇರಿಹೋದೆವು. ಹೊರಗಡೆ ವೀಕ್ಷಿಸುತ್ತಿದ್ದಾಗ ನಾವು ದೇಶಬಿಟ್ಟು ಬಂದಿದ್ದೇವೆನ್ನುವುದು ನಿಜವೋ, ಸುಳ್ಳೋ ಎಂಬ ಭಾವ ಹಾದುಹೋಯಿತು.
ದಾರಿಬದಿಯಲ್ಲಿ ಕಾಣಿಸುತ್ತಿದ್ದ ಮನೆಗಳು ನಮ್ಮ ಬೆಂಗಳೂರಿನದ್ದೇನೊ ಅನಿಸಿತು, ಏನೇನೋ ಭಾವಗಳ ಲಹರಿಯಲ್ಲಿ ಸೇರಿಹೋಗಿದ್ದೆ.11/4 ಘಂಟೆಯಲ್ಲಿ ಇನ್ನೂರು ಕಿ.ಮೀ.ಗಳನ್ನು ಕ್ರಮಿಸಿ ಸ್ಟುಟ್ ಗಾರ್ಟನ್ನು ತಲುಪಿದೆವು. ಆಗ ಸಂಜೆ 4 ಘಂಟೆ. ಸ್ಟೇಶನ್ನಿಂದ ಹೊರಬರುವಾಗ ಚಳಿಯು ಚರ್ಮಕ್ಕೆ ನಾಟತೊಡಗಿತ್ತು. ಬೆಂಜ್ ಟ್ಯಾಕ್ಸಿಯಲ್ಲಿ ನಮ್ಮ ಹೊಟೆಲ್ ಗೆ ತಲುಪಿದೆವು. ದಾರಿಯಲ್ಲೇ ನಮ್ಮ ಊರುಗಳಿಗೆ ಫೋನಾಯಿಸಿ ನಾವು ಸುಖವಾಗಿ ತಲುಪಿದ್ದುದರ ಬಗ್ಗೆ ತಿಳಿಸಿದೆವು. ಭಾರತದಲ್ಲಾಗ ರಾತ್ರಿ ಏಳೂವರೆ.
ಈ ಹೋಟೆಲ್ ಗಳಲ್ಲಿ ಕಳೆದ 6 ವಾರಗಳಿಂದ ಶೇಖರ್ ತಂಗಿದ್ದ ಕಾರಣ ಅವರಿಗೆ ಪರಿಚಯವಿದ್ದ ಸ್ವಾಗತಕಾರ್ತಿ ನಮ್ಮನ್ನು ವಿಶೇಷ ನಗುವಿನೊಂದಿಗೆ ಹಾರ್ದಿಕವಾಗಿ ಸ್ವಾಗತಿಸಿ ಇವರು ಇರಿಸಿಹೋಗಿದ್ದ ಲಗ್ಗೇಜನ್ನು ತಾನೇ ನಮ್ಮ ಕೋಣೆಗೆ ಸಾಗಿಸಿರುವುದಾಗಿ ಹೇಳಿ ಕೀ ಕೊಟ್ಟಳು. ಪ್ರತಿಯೊಂದೂ ಹೊಸತಲ್ಲವೆ ನಮಗೆ, ಇಲ್ಲಿಯ ಲಿಫ್ಟ್ ಒಂದು ಕಡೆ ಮುಚ್ಚಿ ಹೊರಬರಲು ಇನ್ನೊಂದು ಬಾಗಿಲನ್ನು ತೆರೆಯುವುದೂ ಹೊಸತು! ಕೋಣೆ ನಮಗೆಲ್ಲರಿಗೂ ಇಷ್ಟವಾಯಿತು, ಪುಟ್ಟದಾದ, ಸುಸಜ್ಜಿತ ಕೋಣೆ, ಪುಟ್ಟ ಅಡಿಗೆಮನೆಯೂ ಇತ್ತು. ಸ್ನಾನ,ಶೌಚದ ವ್ಯವಸ್ಥೆ ಒಟ್ಟಿಗೇಇತ್ತು, ಸ್ನಾನವನ್ನು ಟಬ್ ನಲ್ಲಿ ಮಾಡಬೇಕಿತ್ತು,ನೆಲಕ್ಕೆ ನೀರು ಬೀಳದಂತೆ ಜಾಗ್ರತೆ ವಹಿಸಬೇಕಿತ್ತು. ಬಕೆಟ್,ಮಗ್ ಇರಲಿಲ್ಲ. ಶವರ್ ನಲ್ಲೆ ಸ್ನಾನ ಅಭ್ಯಾಸವಾಯಿತು. ಆ ಕೋಣೆಗೆ ಹೊಂದಿಕೊಂಡು ಪುಟ್ಟ ಬಾಲ್ಕನಿಯಿತ್ತು. ಅದರ ಬಾಗಿಲನ್ನು ತೆರೆದೊಡನೆ ಮುಖಸವರಿದ ತಣ್ಣನೆ ಗಾಳಿಗೆ ಮುಖದ ಸ್ಪರ್ಶಜ್ಞಾನವೇ ಹೋಗಿಬಿಟ್ಟಿತೇನೋ ಅನಿಸಿತು.
ಸ್ವಲ್ಪ ಚೇತರಿಸಿಕೊಂಡು ಹೊರಬಂದು ನಿಂತರೆ ದೊಡ್ಡ,ಪುಟ್ಟ ಮನೆಗಳೂ, ಎಲ್ಲವೂ ಹಂಚಿನ ಮನೆಗಳು ಮತ್ತು ಪ್ರತೀ ಮನೆಯ ಮೇಲೂ ಚಿಮಣಿಗಳಿದ್ದುವು.ಚಳಿದೇಶವಲ್ಲವೆ,ನನ್ನ ಬಾಲ್ಯದ ಮಡಿಕೇರಿ ನೆನಪಾಗಿ ಮನಸ್ಸು ಭಾರವಾಗಿ ಹೋಂ ಸಿಕ್ ಅನಿಸಲಿಕ್ಕೆ ಸುರುವಾಯಿತು, ಏನೀ ವಿಚಿತ್ರ ಮನೋವ್ಯಾಪಾರ! ಸಂಜೆ ಆರು ಗಂಟೆಗೂ ನಿಚ್ಚಳ ಬೆಳಕು, ಮುಸ್ಸಂಜೆಯೆನಿಸುತ್ತಿರಲಿಲ್ಲ. ಸ್ನಾನ ಮುಗಿಸಿ ಹಗುರಾಗಿ ಪುಸ್ತಕವೊಂದನ್ನು ಹಿಡಿದು ಹಾಸಿಗೆಯಲ್ಲಿ ಅಡ್ಡಾದವಳಿಗೆ ಯಾವಾಗ ನಿದ್ದೆ ಆವರಿಸಿತೋ ತಿಳಿಯಲಿಲ್ಲ, ಮಕ್ಕಳು ಎಷ್ಟೋ ಮೊದಲೇ ನಿದ್ದೆಗೆ ಜಾರಿದ್ದರು. ಮರುದಿನದ ಪ್ಯಾರಿಸ್ ಪಯಣಕ್ಕೆ ಪತಿಯೇ ಬಟ್ಟೆಗಳನ್ನು ಜೋಡಿಸಿಕೊಟ್ಟರು ಮತ್ತು ನಮ್ಮ ಪ್ರವಾಸದುದ್ದಕ್ಕೂ ಅವುಗಳ ಜವಾಬ್ದಾರಿಯನ್ನು ಅವರೇ ಹೊತ್ತರು. ರಾತ್ರಿ ಎಷ್ಟು ಹೊತ್ತಿಗೋ ಬಂಧು ರಾಮಗೋಪಾಲ ಹೈಡಲ್ ಬರ್ಗ್  ನಿಂದ ಫೋನ್ ಮಾಡಿದ್ದ, ನಿದ್ದೆಯಲ್ಲಿಯೇ  ಅವನು ಮತ್ತು ಅವನ ಪತ್ನಿ ವಂದನಳೊಂದಿಗೆ ಮಾತನಾಡಿದ್ದೆ.
ಪ್ರೇಮನಗರಿಯ ದಾರಿಯಲ್ಲಿ
ಮರುದಿನ 5.45ಕ್ಕೆ ಸಿಧ್ಧರಾಗಿ ಹೊಟೆಲ್ ನಿಂದ ಹೊರಬಿದ್ದೆವು. ಆಗಲೇ ಬೆಳ್ಳಗೆ ಬೆಳಕಾಗಿತ್ತು. ಅಸಾಧ್ಯವಾದ ಚಳಿ, ನನ್ನಿಂದಂತೂ ವೇಗವಾಗಿ ನಡೆಯಲು ಸಾಧ್ಯವಿರಲಿಲ್ಲ. ಚಳಿ ಹಣ್ಣುಗಾಯಿ, ನೀರುಗಾಯಿ ಮಾಡುತ್ತಿತ್ತು. ಮೈ ಮುದುರಿಕೊಂಡು ಹೆಜ್ಜೆ ಎತ್ತಿಡುತ್ತಿದ್ದೆ, ಪತಿ, ಮಕ್ಕಳಿಗೆ ಇಷ್ಟು ಕಷ್ಟ ಎನಿಸಲಿಲ್ಲ, ಬಹುಷ: ನನ್ನ ಭೌತಿಕ ಸಂವೇದನೆಯೇ ಬಹಳ ಸೂಕ್ಷ್ಮಮಟ್ಟದ್ದಿರಬೇಕು. ಹೊಟೆಲ್ ನಿಂದ ಒಂದು ಫರ್ಲಾಂಗಿನಷ್ಟು ದೂರವಿದ್ದ ಫಯಬರ್ಕ್ ಕ್ರಾಂಕನ್ ಹೌಸ್ ರೈಲು ನಿಲುಗಡೆಗೆ ಹೋಗಿ, ಸ್ವಯಂಚಾಲಿತ ಯಂತ್ರದಿಂದ ಟಿಕೆಟ್ ಕೊಂಡು, ರೈಲಿಗೆ ಕಾದೆವು. 7 ನಿಮಿಷಗಳಲ್ಲಿ ರೈಲು ಬರಲಿದೆ ಎನ್ನುವುದು ಅಲ್ಲಿ ಫಲಕದಲ್ಲಿ ಕಾಣಿಸುತ್ತಿತ್ತು. ಕರಾರುವಾಕ್ಕು ಸಮಯಕ್ಕೆ ರೈಲು ಹಾಜರ್! ಸ್ವಯಂಚಾಲಿತ ಬಾಗಿಲುಗಳು ತೆರೆದುಕೊಂಡು ಸ್ವಾಗತ ಕೋರಿದವು. ಮುಖ್ಯನಿಲ್ದಾಣಕ್ಕೆ ಬಂದು ಪ್ಯಾರಿಸ್ ಗೆ ಹೊರಡುವ ರೈಲನ್ನೇರಿದೆವು. ಮೊದಲೇ ಸೀಟು ಕಾದಿರಿಸಲಾಗಿತ್ತು. 6.54ರ ರೈಲು ಸರಿಯಾದ ಸಮಯಕ್ಕೇ ಹೊರಟಿತು. ಎಲ್ಲಿಯಾದರೂ ಸಮಯ ಮೀರಿ ಹೊರಟು ನನಗೆ ಆಡಿಕೊಳ್ಳುವ ಅವಕಾಶ ಸಿಗಬಹುದೇ ಎಂದು ಕಾಯುತ್ತಿದ್ದೆ..
ಊಹುಂ! ನಿರಾಶೆಯಾಯಿತು. ಪ್ರಯಾಣಿಕರು ತುಂಬಿದ್ದರೂ ಗದ್ದಲ, ಗೌಜಿಯಿಲ್ಲ, ಚಿಕ್ಕಮಕ್ಕಳಿದ್ದರೂ ಅವರ ಅಳು, ಕಿಟಿಕಿಟಿ ನಗು, ಕೇಕೆ,ಚೀರಾಟವಿಲ್ಲ ತಾವರೆಯ ಎಲೆಯ ಮೇಲಿನ ನೀರಿನಂತಿರುವುದು ಎಂದರೆ ಇದೇ ಏನೋ, ಜನರಿದ್ದರು, ಆದರೆ ಇರದಂತಿದ್ದರು. ಬ್ರೆಡ್ದು,ಹಣ್ಣು ಕೊಂಡು ತಿಂದೆವು. ಕೈಯ್ಯಯುಲ್ಲಿದ್ದ ಕಾಗದದ ಚೀಲವನ್ನು ಎಸೆಯಬೇಕಿತ್ತು. ರೈಲಿನಲ್ಲಿ ಸುತ್ತಮುತ್ತ ಹುಡುಕಿದೆ,ಕಸದ ಡಬ್ಬಿ ಸಿಗಲಿಲ್ಲ..ಆಹಾ! ಖುಷಿಯಾಯಿತು,ವಿಜಯದ ನಗುವನ್ನು ಗಂಡನೆಡೆಗೆ ಬೀರಿದರೆ ಅವರು ಸೋಲೊಪ್ಪಲು ತಯಾರಿಲ್ಲ.ಜರ್ಮನರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು, ಸುತ್ತಲೂ ಇರದಿದ್ದರೇನಾಯಿತು, ಕೆಳಗೆ ನೋಡೆಂದರು,ಹೌದು! ಸೀಟಿಗೆ ಸೀಟಿನ ಬಣ್ಣಕ್ಕೆ ಹೊಂದುವಂತೆ ಕಸದ ಡಬ್ಬಿಯನ್ನಳವಡಿಸಿದ್ದರು, ಅವ್ಯವಸ್ಥೆಯೆಂಬುದು ನೀನೆಷ್ಟು ತಡಕಿದರೂ ಸಿಗದೆಂಬಂತೆ ವಿಜಯದ ನಗು ಬೀರುವ ಸರದಿ ಅವರದಾಗಿತ್ತು. ರೈಲಿನ ಶೌಚಾಲಯದಲ್ಲಿ ಪರಿಮಳಯುಕ್ತ ನೀರಿನ ವ್ಯವಸ್ಥೆ, ಕುಡಿಯಲಿಕ್ಕಲ್ಲ ಎಂಬರ್ಥದ ಜರ್ಮನ್ ಫಲಕವೂ ಇತ್ತು!!
ಸ್ಟುಟ್ ಗಾರ್ಟ ನಿಂದ ಪ್ಯಾರಿಸ್ ನ ದಾರಿಯಲ್ಲಿ ಉದ್ದಕ್ಕೂ ಸುಂದರವಾದ ಮನಸೂರೆಗೊಳ್ಳುತ್ತಿದ್ದ ಹಸಿರು, ದೂರದಿಂದ ನುಣ್ಣಗೆ, ಹಸಿರುಗಂಬಳಿಯಂತೆ ಕಾಣುತ್ತಿದ್ದ ಗುಡ್ಡಗಳೂ, ಅಲ್ಲಲ್ಲಿ ಮೇಯುತ್ತಿದ್ದ ತುರು-ಕುರಿ ಮಂದೆಗಳು, ಚರ್ಚೊಂದನ್ನು ಕೇಂದ್ರವಾಗಿಸಿ, ಅದರ ಸುತ್ತ ವ್ಯವಸ್ಥಿತವಾಗಿ ಕಟ್ಟಲಾದ ಹಳ್ಳಿ, ಅಲ್ಲಿನ ಮನೆಗಳು, ಆ ಮನೆಗಳ ಹಿತ್ತಿಲಿನಲ್ಲಿ ಒಟ್ಟಿಕೊಂಡಿರುತ್ತಿದ್ದ ಸೌದೆಗಳ ರಾಶಿಯಲ್ಲಿ ನಮ್ಮ ಹಳ್ಳಿಮನೆಗಳ ಛಾಯೆನ್ನು ಕಂಡೆ. ಅಲ್ಲಲ್ಲಿ ಕಾಣುತ್ತಿದ್ದ ನದೀಪಾತ್ರ, ಕಿರಿದಾದ ತೋಡುಗಳು, ಸ್ವಚ್ಛತೆ-ಗ್ಲೋಬಲ್ ವಾರ್ಮಿಂಗ್ ಎಂಬುದು ನಿಜವೆ?
(ಮುಂದುವರಿಯುವುದು…)
 

‍ಲೇಖಕರು G

10 October, 2013

12 Comments

  1. ಅಶೋಕವರ್ಧನ

    ಭಲೇ ಜಯ. ವಿವರಗಳನ್ನು ಬಿಡಿಸಿಡುವಲ್ಲಿ ಇನ್ನಷ್ಟು ಧಾರಾಳಿಯಾದರೆ ಓದುಗರ ಸಂತೋಷ ವರ್ಧಿಸುತ್ತಿತ್ತು 🙂

  2. ashoka bhagamandala

    Bahala kutoohaladinda odisikondu hoguttide. Vimaanada kelagade camera alavadisiruvudu nanage tilidiralilla. Vimaana nildaanada bagegina maahitigalu mundomme naanu vimaana hatta bekaadare madikeri bus standinalliddashte nischintanaagira balle emba atma vishwasa modisitu.mundina kantu yaavaaga barutte anta kayuva kelasa eega nannadu 🙂

  3. Anitha Naresh manchi

    ಸರಳ ಸುಂದರ ಬರವಣಿಗೆ.. ಇನ್ನಷ್ಟು ಬರಹಗಳ ನಿರೀಕ್ಷೆಯಲ್ಲಿ.. 🙂

  4. ಪ.ರಾಮಚಂದ್ರ , ದುಬೈ-ಸಂಯುಕ್ತ ಅರಬ್ ಸಂಸ್ಥಾನ

    ವಿಮಾನ ನಿಲ್ದಾಣದಲ್ಲಿ ಇರುವ ‘Automated People Mover’ನ ಸಮಾನ ಅರ್ಥ ಇರುವ ‘ವಿದ್ಯುತ್ ಚಾಲಿತ ನಡೆಹಾಸು’ ಕನ್ನಡ ಪದವನ್ನು ನಾಡಿನ ಜನತೆಗೆ ತಿಳಿಸಿದ ನಿಮಗೆ ವಂದನೆಗಳು.

  5. mamata deva

    Nimma videsha pravasada anubhava chennagide jayalaxmi.Bareyiri.. mundina bhaga odalu kayutta iddene.

  6. sugunamahesh

    ಮತ್ತಷ್ಟು ಲೇಖನಗಳು ಬರಲಿ… ತುಂಬಾ ಚೆನ್ನಾಗಿ ಬರೆದಿದ್ದೀರಿ

  7. ತಿರು ಶ್ರೀಧರ

    ತುಂಬಾ ಆತ್ಮೀಯಧಾಟಿಯಲ್ಲಿ ಮುದವಾಗಿ ಬರೆದಿದ್ದೀರಿ.

  8. bharathi b v

    Mundina kanthige kaaythiddene

  9. pejathaya S M

    ಬಹಳ ಚಂದದ ಬರವಣಿಗೆ. ಮುಂದುವರೆಯಲಿ! – ಪೆಜತ್ತಾಯ ಮಾಮ

  10. vijayashree

    ಜಯ ತುಂಬಾ ಸುಂದರವಾಗಿ, ಆಪ್ತವಾಗಿ ವಿವರಿಸಿದ್ದೀರಿ.. ಮತ್ತಷ್ಟು ವಿವರಗಳಿಗೆ ಕಾಯುತ್ತಿರುವೆ..:)

  11. ಮಾಲಾ

    ವಾವ್ ಜಯಲಕ್ಷ್ಮೀ. ಬರೆದೇ ಬಿಟ್ಟೆ. ಚೆನ್ನಾಗಿದೆ ನಿರೂಪಣೆ. ಮುಂದಿನ ಕಂತಿನ ನಿರೀಕ್ಷೆಯಲ್ಲಿರುವೆ
    ಮಾಲಾ

  12. Anonymous

    Lekhana bahaLa channgede. Mundena bhagakage kutheruve .Keep it up…..

Trackbacks/Pingbacks

  1. ಜಯಲಕ್ಷ್ಮಿ ಕಂಡಂತೆ ಜರ್ಮನಿ ಮತ್ತು ಪ್ಯಾರಿಸ್ « ಅವಧಿ / avadhi - [...] ಜಯಲಕ್ಷ್ಮಿ ಕಂಡಂತೆ ಜರ್ಮನಿ ಮತ್ತು ಪ್ಯಾರಿಸ್ October 11, 2013 by G (ಇಲ್ಲಿಯವರೆಗೆ) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading