
ಡಾ. ಸುಲೇಖಾ ವರದರಾಜ್
ಪಾರ್ಲರಿನ ಕಿಟಿಕಿಯಿಂದ ಇಣುಕಿದರು – ಲೇಖನಕ್ಕೊಂದು ಪ್ರತಿಕ್ರಿಯೆ
ಪಾರ್ಲರಿನ ಕಿಟಿಕಿಯಿಂದ ಜಯಂತ ಕಾಯ್ಕಿಣಿ ಇಣುಕಿದರು ಎಂಬ ಲೇಖನಕ್ಕೆ ಪ್ರತಿಕ್ರಿಯಿಸುವುದೊಂದೇ ಆ ಲೇಖನ ಓದಿ ನನ್ನೊಳಗೆ ಉಂಟಾದ ಭಾವಕ್ಷೋಭೆಗೆ ಮದ್ದು. ಈ ಸಾಲುಗಳು ಸ್ವ-ಚಿಕಿತ್ಸೆಗಾಗಿ ನಾನು ಕಂಡುಕೊಂಡ ದಾರಿ ಅಷ್ಟೆ.

ಫೋಟೋ : ದೀಪ್ತಿ ಭದ್ರಾವತಿ
ನವಜಾತ ಶಿಶುಗಳನ್ನು ನಾನು ಆಗಾಗ ನೋಡುತ್ತಿರುತ್ತೇನೆ. ಯಾರೂ ಕೂಡಾ ಅದರ ಬಣ್ಣ ಸರಿ ಇಲ್ಲ, ಚರ್ಮ ಸರಿ ಇಲ್ಲ, ಕೂದಲು ಸರಿ ಇಲ್ಲ, ಹುಬ್ಬು ಸರಿ ಇಲ್ಲ ಎಂದು ಹೇಳುವುದಿಲ್ಲ. ಹೇಳುವವರಿದ್ದರೂ ಮಗುವಿಗೆ ಅದು ಕೇಳುವುದಿಲ್ಲ. ಮಗು ಮಗುವಾಗಿ ಇದ್ದಾಗ ಎಷ್ಟು ಚಂದ, ಸಹಜ ಮತ್ತುಸರಳ! ಪರಿಸರದ ಯಾವುದೇ ಪಾತ್ರಗಳಿಗಾಗಿ ಅದು ಸಜ್ಜುಗೊಳ್ಳುವ ಅಗತ್ಯವಿರುವುದಿಲ್ಲ. ಚಂದಕ್ಕಿಂತ ಚಂದ ಚಂದ್ರನೂ ಬ್ಯೂಟಿಪಾರ್ಲರ್ ಗೆ ಬರಲ್ಲ. ನೀನು ಸರಿಯಿಲ್ಲ ಅಥವಾ ನಾನು ಸರಿಯಿಲ್ಲ ಎಂಬ ಕನ್ಸೆಪ್ಟ್ ಅನ್ನು ಉಂಟುಮಾಡುವ ಡಯಲಾಗುಗಳನ್ನು ಸೃಷ್ಟಿಸುವವರು ಯಾರು?
ಇಂದು ಹನ್ನೊಂದು ವರ್ಷದ ಹೆಣ್ಣುಮಗಳು ಕೂಡಾ ಚರ್ಮ `ಬಿಳಿ’ ಮಾಡಲು ಆನ್ಲೈನ್ ನಲ್ಲಿ ಏನೆಲ್ಲಾ ಕ್ರೀಮ್ ದೊರೆಯುತ್ತದೆ ಎಂದು ನೋಡಿ ಖರೀದಿಸುತ್ತಾಳೆ. ನಟನಟಿಯರು ಬಿಳಿಯಾಗುವ ಕ್ರೀಮ್ ಜಾಹೀರಾತು ಕೊಡುತ್ತಾರೆ. ನನ್ನ ಬಾಲ್ಯದಲ್ಲಿ ನನ್ನ ಅಜ್ಜಿ ಕಪ್ಪಾಗಿರುವವರನ್ನು ಸ್ವೀಕರಿಸುತ್ತಿದ್ದ ರೀತಿ ಇಂದಿಗೂ ಕೂಡಾ ಕಪ್ಪು ಬಣ್ಣದ ಬಗ್ಗೆ ನನ್ನಲ್ಲಿ ಗೌರವವನ್ನು ತಂದುಕೊಟ್ಟಿದೆ. ಕಪ್ಪು ಮತ್ತು ಲಕ್ಷಣ – ಈ ಎರಡು ಶಬ್ದಗಳು ಯಾವತ್ತೂ ಜತೆ ಜತೆಯಾಗಿಯೇ ನನಗೆ ಕೇಳಿಸುತ್ತವೆ.
ಕಪ್ಪಾಗಿ ಲಕ್ಷಣವಾಗಿ ಇದ್ದಾಳೆ ಹುಡುಗಿ – ಈ ಸಾಲು ತುಂಬ ಆಪ್ತವಾಗಿ ನನಗೆ ಇರಬೇಕಾದರೆ ನಾನು ಬಾಲ್ಯದಲ್ಲಿ ಕೇಳಿದ ನನ್ನ ಅಜ್ಜಿಯ ಮಾತಿನ ಪ್ರಭಾವ ತುಂಬಾ ಇದೆ.
ನನ್ನಲ್ಲಿಗೆ ಮೊಡವೆ ಚಿಕಿತ್ಸೆಗೆ ಬರುವ ಮಕ್ಕಳಲ್ಲಿ ಹೆಣ್ಣುಮಕ್ಕಳಿಗಿಂತಲೂ ಜಾಸ್ತಿ ಗಂಡುಮಕ್ಕಳೇ ಇದ್ದಾರೆ ಎಂದಾದರೆ ಈ ತಿಳುವಳಿಕೆಯನ್ನು ಮಕ್ಕಳಿಗೆ ಹೇಳಿಕೊಡುವವರು ಯಾರು? ನನ್ನ ಹದಿಹರೆಯದ ದಿನಗಳಲ್ಲಿ ಮೊಡವೆಗೆ ಹುಡುಗಿಯರೂ ಕೂಡಾ ಚಿಕಿತ್ಸೆ ಮಾಡುತ್ತಿರಲಿಲ್ಲ. ಸಹಜತೆಯನ್ನು ಸ್ವೀಕರಿಸದೆ ಇರುವ ಇಂದಿನ ಈ ಮನಸ್ಥಿತಿಗೆ ಯಾರು ಜವಾಬ್ದಾರರು?
ಬಿಲ್ಲಿನಂತಹ ಹುಬ್ಬಿನಿಂದ ಕುಣಿಸುವುದಕ್ಕಿಂತ, ಚರ್ಮದ ಬಣ್ಣದಿಂದ ಪ್ರಭಾವ ಬೀರುವುದಕ್ಕಿಂತ, ಬೌದ್ಧಿಕ ಹೂಬಾಣದಿಂದ ಬಾಳಸಖನಿಂದ ಗೌರವವನ್ನು ಪಡೆಯಬಹುದು ಎಂದು ಹದಿಹರೆಯದ ಮಕ್ಕಳಿಗೆ ಯಾರು ಹೇಳಿಕೊಡಬಹುದು?
ದೊಡ್ಡ ದೊಡ್ಡ ಸಮಾರಂಭಗಳಲ್ಲೋ ಫೈವ್ ಸ್ಟಾರ್ ಹೋಟೆಲ್ ಗಳಲ್ಲೋ ಅಡುಗೆ ಮಾಡುವವರು ಗಂಡಸರು, ಆದರೆ ಮನೆಯಲ್ಲಿ ಹೆಂಗಸರು! ಇದು ಯಾಕೆ ಹೀಗೆ? ನಾನು ಮದುವೆಯಾದ ಹೊಸತರಲ್ಲಿ ನನ್ನ ಜೀವನಸಂಗಾತಿಯು ಹೇಳಿದ ಮಾತುಗಳಿವು. ಈ ರೀತಿ ಹೇಳುವವರಿರುವಾಗ ನಮ್ಮ ಯಜಮಾನ್ರಿಗೆ ಬೆಳಗ್ಗೆ ಮಾಡಿದ ಪಲ್ಯ ರಾತ್ರಿ ಆಗೋದೇ ಇಲ್ಲ ಎಂಬ ಡೈಲಾಗು ಆಡಲು ಅವಕಾಶವನ್ನೇ ಕಲ್ಪಿಸಿಕೊಳ್ಳಲಾಗಲಿಲ್ಲ ನನಗೆ, ಛೆ…
ಮಕ್ಕಳ ವೈದ್ಯಕೀಯ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ದೂರದ ಊರಿಗೆ ಹೋಗಬೇಕಾಗಿ ಬಂದಾಗ ಎರಡೂವರೆ ವರ್ಷದ ಮಗಳನ್ನು ನಾನು ಕೊಟ್ಟದ್ದು ಅವಳ ಅಪ್ಪನ ತಾಯಿಯಂತಹ ಹೃದಯಕ್ಕೆ; ಅಮ್ಮನಷ್ಟೇ ಜತನದಿಂದ ನೋಡಿಕೊಳ್ಳಬಹುದಾದ ತೋಳುಗಳಿಗೆ. ಯಾರು ಕಲಿಸಿದರು ಇವರಂತಹವರಿಗೆ ಇದನ್ನೆಲ್ಲ? ಇಂತಹವರೂ ಇದ್ದಾರೆ ಈ ಸಮಾಜದಲ್ಲಿ. ಎಲ್ಲಿಂದ ಬರುತ್ತವೆ ಇವರಿಗೆ ಇಂತಹ ಚಿಂತನೆಗಳು?
ಇನ್ನು ಬಿದ್ದ ಒಂದು ರೂಪಾಯಿ ನಾಣ್ಯದ ಬಗ್ಗೆ…… ಹಣದ ಮೂಲಕ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂದು ಭಾವಿಸುವವರಿಗೆ, ಆ ನಾಣ್ಯ ನಗಣ್ಯ. ಆದರೆ, ತಮ್ಮ ಲೇಖನಗಳ ಮೂಲಕ ನಮ್ಮನ್ನೆಲ್ಲಾ ವಿನೀತಗೊಳಿಸುವವರ ಪ್ರಕಾರ ಪಾರ್ಲರ್ ಕಿಟಿಕಿಯಲ್ಲಿ ಹೊರಗಿನಿಂದ ಇಣುಕಿನೋಡಿಯೇ ಇಷ್ಟೆಲ್ಲ ಸಂವೇದನೆಗಳನ್ನು ಸೃಷ್ಟಿಸಿದ ನಾಣ್ಯ ಅದಾದುದರಿಂದ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾಕೆಂದರೆ, ಭಾವಪ್ರಬುದ್ಧತೆಗೆ ಯಾವುದೇ ಅಳತೆ ಮಾಪಕಗಳಿಲ್ಲ.
ಜಯಂತ ಕಾಯ್ಕಿಣಿಯವರಲ್ಲಿ ಒಂದು ಪ್ರಶ್ನೆ. ಹತ್ತೊಂಬತ್ತನೇ ವರ್ಷದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ತಾವು. ನಾನು ಮೊದಲು ಅಕಾಡೆಮಿ ಪ್ರಶಸ್ತಿಯಲ್ಲಿ ಹಿರಿಯ ಕಿರಿಯ ವಿಭಾಗ ಇರಬಹುದು; ತಮಗೆ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಬಂದಿರಬಹುದು ಎಂದು ಭಾವಿಸಿದ್ದೆ. ಆದರೆ ಆ ರೀತಿ ಅಲ್ಲ ಎಂದು ಗೊತ್ತಾದಾಗ ನಂಬಲು ಆಗಲಿಲ್ಲ.
ಸರ್, ದಯವಿಟ್ಟು ಹೇಳಿ, ಈ ರೀತಿಯ ಭಾವ ಪ್ರಬುದ್ಧತೆ, ಸಂವೇದನಾ ಶೀಲತೆ ಹಾಗೂ ಸೂಕ್ಷ್ಮಗ್ರಹಿಕೆ ಇವೆಲ್ಲದರ ಜತೆಗೆ ನಿಮ್ಮ ವ್ಯಕ್ತಿತ್ವದಲ್ಲಿ ಸಹಜತೆ ಇದೆಲ್ಲ ನಿಮಗೆ ಹೇಗೆ ಸಿದ್ಧಿಸಿತು? ವಯಸ್ಸಿಗೆ ಮೀರಿದ ಗಾಂಭೀರ್ಯ ಹಾಗೂ ತಿಳುವಳಿಕೆ ಹೇಗೆ ಬಂತು? ಹೊಗಳಿಕೆ ಎಂದು ತಿರಸ್ಕರಿಸಬೇಡಿ. ಗುಟ್ಟು ಮಾಡದೆ ಹೇಳಿಬಿಡಿ. ನನ್ನಂತಹ ಪೋಷಕರಿಗೆ ಅದರಿಂದ ತುಂಬ ಲಾಭವಿದೆ. ಪ್ಲೀಸ್ ಸರ್.
ಡಾ. ಸುಲೇಖಾ ವರದರಾಜ್, ಎಂ.ಬಿ.ಬಿ.ಎಸ್., ಡಿಸಿಎಚ್.,ಪಿಜಿಡಿಸಿಪಿ
ಮಕ್ಕಳ ತಜ್ಞರು ಮತ್ತು ಆಪ್ತಸಲಹೆಗಾರರು
ಪುತ್ತೂರು, ದ.ಕ.





ಡಾಕ್ಟರ್, ವಾಹ್… ನನ್ನ ಮನಸಿನ ಮಾತುಗಳನ್ನೇ ಬರೆದಿರಿ ಅನ್ನಿಸ್ತು ನೋಡಿ. ಬಹಳ ಸಲ ಹೀಗನ್ನಿಸಿದ್ದರೂ ನಿಮ್ಮ ಥರ ಅಭಿವ್ಯಕ್ತಿಸಲು ನಂಗೆ ಸಾಧ್ಯವಾಗಿರಲಿಲ್ಲ. Thank you
ಕಾಯ್ಕಿಣಿ ಸರ್ ನಾನೂ ಕೇಳುತ್ತಿದ್ದೇನೆ “ಗುಟ್ಟು ಮಾಡದೆ ಹೇಳಿಬಿಡಿ. ನನ್ನಂತಹ ಪೋಷಕರಿಗೆ ಅದರಿಂದ ತುಂಬ ಲಾಭವಿದೆ. ಪ್ಲೀಸ್ ಸರ್.”
Chandada barehakke andada pratikriye dr. Sulekha.
Kaykini Sir nimma barehagalu laajawaab.
Bareha odugana manassina pakkadalle nadeda ghataneyante…Terra aaptavaaguva park acchari huttisutte.
Manorama Hejmadi
ಡಾ.ಸುಲೇಖಅವರೇ…..
ನಿಮ್ಮ ಪ್ರಶ್ನೆಗೆ ಉತ್ತರ ವೂ ನಿಮ್ಮ ಲೇಖನದಲ್ಲೇಇದೆ.
ಹೋಟೆಲಿನಲ್ಲಿ ಗಂಡಸರು,ಮನೆಯಲ್ಲಿ ಹೆಂಗಸರುಅಡಿಗೆ ಮಾಡುವುದು ಯಾಕೆ ಹೀಗೆಎಂದು ಕೇಳುವ ಚಿಂತನೆಯ ಧಾಟಿ,ನಿಮ್ಮಅನುಪಸ್ತಿತಿಯಲ್ಲಿ ನಿಮ್ಮ ಮಗುವನ್ನು ಸಲಹೆುವ ತಾಯ್ತನ ಯಾರು ಕಲಿಸಿಕೊಟ್ಟರುಅಂತ ನಿಮ್ಮ ಸಂಗಾತಿಯನ್ನು ಕೇಳಿ..!! ಬಹುಶಃ ಜಯಂತ್ ಕೊಡಬಹುದಾದಉತ್ತರವೂ ಸಿಗಬಹುದು..!!!
Thanks for the comments of all…Giridhar sir,I am waiting for a reply from Jayanth sir..ha ha..