– ಫಾಲ್ಗುಣ ಗೌಡ, ಅಚವೆ
ಕನ್ನಡದ ವಿಶಿಷ್ಠ ಬರಹಗಾರರಾದ ಡಾ. ಜಯಂತ ಕಾಯ್ಕಿಣಿ ಕವಿಯಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ಅಂಕಣಕಾರರಾಗಿ, ಟೆಲಿವಿಜನ್ ಸಂದರ್ಶಕರಾಗಿ ಸಾಹಿತ್ಯ ಮತ್ತು ಸಾಹಿತ್ಯ, ಕಿರುತೆರೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚುಕಡಿಮೆ ಯಾರಿಗೂ ಸಿಗದ ಜನಪ್ರಿಯತೆಯನ್ನು ಗಳಿಸಿಕೊಂಡವರು. ಸಿನಿಮಾ ಪ್ರಪಂಚದಲ್ಲಿಯಂತೂ ಚಿತ್ರಕಥೆ, ಸಂಭಾಷಣೆ, ಗೀತ ರಚನೆಕಾರರಾಗಿ ಮಾತಾದರು.
ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ, ಬಿ.ಎಚ್ ಶ್ರೀಧರ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯತ್ತಮ ಸಂಭಾಷಣಕಾರ ಪ್ರಶಸ್ತಿ ಫಿಲ್ಮ್ಫೆರ್ ಪ್ರಶಸ್ತಿಗಳೂ ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಂದ ಸನ್ಮಾನಿಸಲ್ಪಟ್ಟವರು. ಅವರು ಇದೇ ಜನವರಿ 24-25 ರಂದು ಅಂಕೋಲಾದಲ್ಲಿ ನಡೆಯುವ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡದ ತೇರನ್ನು ಎಳೆಯಲಿದ್ದು, ಯುವ ಬರಹಗಾರಿಗೆ, ಸಾಹಿತ್ಯಾಭಿಮಾನಿಗಳಿಗೆ ಸ್ಪೂರ್ತಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರ `ಬೊಗಸೆಯಲ್ಲಿ ಮಳೆ’ ಅಂಕಣ ಬರಹದ ಪುಸ್ತಕದ ಬಗ್ಗೆ ನನ್ನ ಒಂದು ಆಪ್ತ ಸ್ಪಂದನೆ…..’ನಾನು ತಿಳಿದಿದ್ದನ್ನು ಬರೆಯುವುದಕ್ಕೆ ಪ್ರಯತ್ನಿಸುವುದಿಲ್ಲ ಬರೆಯುವುದರ ಮೂಲಕ ತಿಳಿದುಕೊಳ್ಳುವುದಕ್ಕೆ ಬಯಸುತ್ತೇನೆ’ ಎಂಬ ನನ್ನ ಪ್ರೀತಿಯ ಚಿತ್ತಾಲರ ಮಾತು ನನ್ನನ್ನು ತೀವ್ರವಾಗಿ ಸೆರೆಹಿಡಿದಿದೆ. ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’ ಓದಿದ ಮೇಲಂತೂ ಈ ಮಾತನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಪೆಪ್ಪರಮೆಂಟಿನ ಸವಿಯನ್ನು ಆಸ್ವಾದಿಸಿದಂತೆ ಖುಷಿಯಾಗುತ್ತದೆ.
ವಿವರಣೆಯೇನೆಂದರೆ, ಬರೆಯುವುದರ ಮೂಲಕವೇ ನಮ್ಮ ಅಂತರಂಗದ ಕದಗಳು ತೆರೆಯುತ್ತವೆ. ಬರೆಯುತ್ತ ಹೋದಂತೆಯೇ ನಮ್ಮ ಮನಸ್ಸಿನಲ್ಲಿಯ ವೈಚಾರಿಕತೆ ಸಂಕೀರ್ಣಗೊಂಡು ತಕ್ಕಲಿಕೆಯಾದ ನೂಲಿನ ಗಂಟೊಂದು ಸಣ್ಣ ರಂದ್ರದ ಮೂಲಕ ಹೊರಬಿದ್ದುದ ಬಿಡಿಸುತ್ತ ಬಿಡಿಸುತ್ತ ದಾರದ ವಿಶಾಲ ವಲಯವೊಂದು ಸೃಷ್ಟಿಯಾದಂತೆ ತೆರೆದುಕೊಳ್ಳುತ್ತಲೇ ಹೋಗುತ್ತದೆ. ಗಿಜಿಬಿಜಿಗೊಂಡ ಮುಖ್ಯರಸ್ತೆಯ ಬೈಕ ಸವಾರನೊಬ್ಬನ ಅನುಭವದಂತೆ. ನನ್ನ ಪ್ರೀತಿಯ ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’ಯ ಶಬ್ದ ಚಿತ್ರಗಳಲ್ಲಿ ಬರುವ ದೈನಿಕ ವಿವರಗಳ ವಿಶ್ವರೂಪಕ ಅನುಭವವೂ ಕೂಡ ಇದೇ ಮಾದರಿಯದೆ! ‘ಹಾಯ್ ಬೆಂಗಳೂರು’ ಪತ್ರಿಕೆಯ ಪುಟಗಳಲ್ಲಿ ವಾರಕ್ಕೊಮ್ಮೆ ಬಂದು ‘ಹಲೋ’ ಎಂದವರು ಈ ಪುಸ್ತಕದ ಮೂಲಕ ದಿನಾ ಬರುತ್ತಿದ್ದಾರೆ! ಮೊಬೈಲಿನ ಸಂದೇಶದಂತೆ!! ಅವರ ‘ಬೊಗಸೆ’ಯ ವಿವರ ವೈಶಿಷ್ಟ್ಯತೆ ತೀರ ಭಿನ್ನ, ವಿಭಿನ್ನ. ನೂತನ, ವಿನೂತನ. ಸಾಮಾನ್ಯ ಸಂಗತಿಗಳ ಅಸಾಮಾನ್ಯ ಸೃಷ್ಟಿಯ ವೈಚಿತ್ರ್ಯ ಅದು. ಅವರ ಶೈಲಿಯ ವ್ಯಾಮೋಹಕ್ಕೆ ಒಳಗಾದವರಲ್ಲಿ ನನ್ನಂತಹ ಅದೆಷ್ಟೋ ಜನ ಅವರ ನಗೆವಿನೋದಕ್ಕೆ, ಭಾಷಣದ ಮೋಡಿಗೆ, ಬಲಿಯಾಗಿದ್ದಾರೆ! ಅಚ್ಚರಿಯೆಂದರೆ, ಇಲ್ಲಿನ ಶಬ್ದ ಚಿತ್ರಗಳು ಓದುಗ ಆಳಕ್ಕಿಳಿಯುವ ಮೊದಲೇ ಅವು ಓದುಗರ ಮನಸ್ಸಿಗಿಳಿಯುತ್ತವೆ. ಥೇಟ್ ಜಯಂತರ ಆಪ್ತ ವ್ಯಕ್ತಿತ್ವದಂತೆ. ಅವರ ವ್ಯಕ್ತಿತ್ವದ ಅನುವಂಶೀಯ ಗುಣ ಅವರ ಕಾವ್ಯ, ಕಥೆ, ಲೇಖನ, ವಿಮರ್ಶೆ, ಮಾತು, ಶಬ್ದ ಚಿತ್ರಗಳಿಗೂ ಕೂಡ ವ್ಯಾಪಿಸುತ್ತದೆ.
ಮಾತಾಗುವ ಮೊದಲು ಉಳಿಯುವ ಅಲೌಕಿಕ ಮೌನದ ನವಿರಾದ ಲೇಪನದಂತ ಮೆರಗಿನಲ್ಲಿ ಭಾಷೆ ಮೃದುತ್ವ ತಾಳುತ್ತದೆ. ಮೂರು ಬಾರಿ ಮುದ್ರಣ ಭಾಗ್ಯವನ್ನು ಪಡೆದಿರುವ ಈ ‘ಮಳೆ’ಯ ಪುಟಗಳನ್ನು ಸುಮ್ಮನೆ ಕುಳಿತು ಓದಿದರೆ ಅದರ ಸುರಿಯುವ ಸದ್ದಿನ ಹಿಂದಿರುವ ಅಲೌಕಿಕ ಸಂಗೀತ ಕೇಳಿಸುವುದು. ಪ್ರತಿದಿನಕಂಡ ಚಿತ್ರಗಳ ಸೊಗಸು, ಸಲ್ಲಾಪಗಳು ಎಂದೋ ಎಲ್ಲೋ ಕಂಡಕ್ಷಣಗಳನ್ನು ನೆನಪಿನ ಮಾಲೆಯಿಂದ ಬೇರ್ಪಡಿಸಿ ಮತ್ತೆ ಪೋಣಿಸುವ ಕುಶಲ ಕಲೆಗಾರಿಕೆ, ಭಾಷೆಯ, ಅದರಲ್ಲೂ ಉತ್ತರ ಕನ್ನಡದ ಆಡುಭಾಷೆಯ ಸೂಕ್ಷ್ಮ ವಿನೋದದಲ್ಲಿ ಸಾದರಪಡಿಸುವ ಸೃಜನಶೀಲ ಕುಶಲತೆ ಅಭಿವ್ಯಕ್ತಿಯ ಹೊಸ ಸಂಸ್ಕಾರದ ಮಾದರಿ ಎನ್ನಬಹುದು. ಹೀಗೂ ಹೇಳಬಹುದು; ಅವರ ಸೂಜಿಗಲ್ಲಿನ ವ್ಯಕ್ತಿತ್ವ ಅವರ ಕಥೆ, ಕವಿತೆ, ಸಿನೇಮಾ ಹಾಡುಗಳು ಇಂತಹ ಶಬ್ದ ಚಿತ್ರಗಳಿಗೂ ಇದೆ. ಅಪಾರ ಅನುಭವ ದ್ರವ್ಯ ಸೃಜಿಸುವ ಅಲೌಕಿಕ ಲೋಕ ತೆರೆದಿಡುವ ರೀತಿಯಲ್ಲೇ ಎಲ್ಲರದಾಗಿಬಿಡುತ್ತದೆ. ಅಂದರೆ, ಅವರ ಕವಿತೆಗಳಲ್ಲಿ ಸಿನೇಮಾ ಹಾಡುಗಳಲ್ಲಿ ಆಡುಮಾತಿನ ಲಯವಿದ್ದರೆ, ಕಥೆ, ಶಬ್ದ ಚಿತ್ರಗಳಲ್ಲಿ, ಭಾಷಣಗಳಲ್ಲಿ ಕವಿತೆಯ ಲಯವಿರುತ್ತದೆ. ಅದನ್ನು ಅವರು ಜತನದಿಂದ ಕಣ್ಣಪಾಪೆಯಂತೆ ಕಾಪಾಡಿಕೊಂಡು ಬಂದದ್ದಲ್ಲ. ಜತೆಗಿರುವ ಚಂದ್ರನ ಮೋರೆಯ ಮೇಲಿನ ಮೊಲದ ಚಿತ್ರದಂತೆ ಸಹಜವಾಗಿ ಇದ್ದದ್ದು! ನೀನು ಅದನ್ನು ಸೂಕ್ಷ್ಮವಾಗಿ ಓದು, ಒಂದೊಂದು ಚಿತ್ರದಲ್ಲೂ ಒಂದೊಂದು ಕವಿತೆಗಳು ಹುಟ್ಟಬಹುದೆಂದು ನನಗೆ ಮೊದಲ ಮುದ್ರಣ ಬಂದಾಗಲೇ ಹೇಳಿದ್ದರು.
ಈ ಚಿತ್ರಗಳನ್ನು ಮುಂಬೈ, ಹೈದರಾಬಾದ್, ಉಡುಪಿ ಮತ್ತು ಬೆಂಗಳೂರಿನ ನಿರ್ವಾತ ವಲಯದಲ್ಲಿ ನಿಂತು ಬರೆದಿದ್ದಾರೆ. ಆದ್ದರಿಂದಲೇ ಹಲವು ವರ್ಷಗಳ ಅಲೆಮಾರಿತನದ ಅನುಭವಗಳು ಸೃಜನಶೀಲ ಅಲೆಮಾರಿತನದ ಬಿಂದುಗಳಾಗಿ ಪ್ರತಿಫಲನಗೊಂಡಿವೆ. ಇಲ್ಲಿನ ಬಹುತೇಕ ಶಬ್ದಚಿತ್ರಗಳು ಉತ್ತರ ಕನ್ನಡದ ಅದರಲ್ಲೂ ಗೋಕರ್ಣದ ಜೊತೆಗಿನ ಆಪ್ತತೆ, ದರ್ಶನ, ತತ್ಪರತೆ ತುಡಿತಗಳ ರೂಪವಾಗಿ ರೂಪಗೊಂಡಿವೆ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ‘ಕೇಳುವವರಿಗೆ, ಬೇಸರತರಿಸುವಷ್ಟು ನಾನೊಬ್ಬ ಮುಂಬೈವಾದಿ. ಯಾಕೆಂದರೆ ಕಾಯಕದ ಕೈಲಾಸ ಅದು. ಗೋಕರ್ಣದಲ್ಲೋ ಕೈಲಾಸವೇ ಕಾಯಕ! ಕಾಯಕದ ಮೂಲಕವೇ ಕಲ್ಪಿತ ಪ್ರಬೇಧಗಳನ್ನು ಗೋಡೆಗಳನ್ನು ತಾರತಮ್ಯಗಳನ್ನು ದಾಟುವ ಪವಾಡ ‘ಮುಂಬೈ’. ಅದೊಂದು ಜೀವನ ದೃಷ್ಟಿ. ಪ್ರವಾಸಿಗಳಾಗಿ ಹೋದವರಿಗೆ ಕೊಳಕು ಸರಣಿಯ ಬೆವರ ಕೂಪದಂತೆ ಕಂಡರೂ, ಅಲ್ಲಿಯೇ ಇದ್ದು ಅದರ ಲಯದೊಂದಿಗೆ ಒಂದಾವರಿಗೆ ಒಂದು ಸಂಯುಕ್ತ ಮಹಾಮನಸ್ಸಿನ ಸ್ಪರ್ಶವನ್ನು ದಯಪಾಲಿಸುವ ಜೀವಸಖ ಆ ನಗರ ಎನ್ನುವಲ್ಲಿಯ ಅವರ ಆತ್ಮಸಾಕ್ಷಿಯ ಭಾಗವಾದ ಮುಂಬೈ ನಗರದ ಮೇಲಿನ ಅಪ್ಪಟ ಪ್ರೀತಿ ಮತ್ತು ಅಲ್ಲಿನ ಜೀವಯಾನದ ಯಥಾಸ್ಥಿತಿಯನ್ನು ಗತ್ಯಂತರವಿಲ್ಲದೇ ಒಪ್ಪಿಕೊಳ್ಳಬೇಕಾದ ಸಕಾರಾತ್ಮಕ ಅನಿವಾರ್ಯತೆ. ಸಾಮಾಜಿಕ, ನಗರಕೇಂದ್ರಿತ ಸೂಕ್ಷ್ಮಗಳು, ಕ್ರೂರ ಹೃದಯಹೀನ ಶಹರುಗಳ ತಲ್ಲಣಗಳು ಸೂಚ್ಯವಾಗಿ ಇಲ್ಲಿನ ಶಬ್ದಚಿತ್ರಗಳಲ್ಲಿ ಅನಾವರಣಗೊಂಡಿವೆ.
ಅದಕ್ಕೆ ಸೀಸನ್ ಪಾಸು, ಬಾಚಿಣಿಗೆ, ಬುತ್ತಿಯ ಪುಟ್ಟ ಚಪ್ಪಟೆ ಡಬ್ಬಿಯೊಂದಿಗೆ ಪ್ಲಾಟ್ಫಾರ್ಮ್ ನ ಮೇಲೆ ಓಡುತ್ತೋಡುತ್ತ ಇಕೋ ಇಂದಿನ ದೈನಿಕ ಲೋಕಲ್ ರೈಲೊಳಗೆ ಫಕ್ಕನೆ ಸೇರಿಕೊಂಡ ಮುಂಬಯಿಯ ಅನಾಮಿಕ ನಿತ್ಯಯಾತ್ರಿಗೆ ಈ ಪುಸ್ತಕ ಅರ್ಪಿಸಿದ್ದಾರೆ. ವ್ಯಾಸರಾಯ ಬಲ್ಲಾಳರಿಗೊಂದು ಮುಂಬಯಿ ಕಾಗದ ಎಂಬ ಮನಸ್ಸು ಮೀಟುವ ಶಬ್ದಚಿತ್ರವೂ ಸಾಕ್ಷಿ ಇದಕ್ಕೆ. ಜಯಂತ ಕಾಯ್ಕಣಿಯವರು ಎಂತಹ ಶಕ್ತಿಶಾಲಿ ಬರಹಗಾರರೆಂದರೆ ಭಾಷೆಯನ್ನು ತಮ್ಮ ಸೃಜನಶೀಲ ವ್ಯಕ್ತಿತ್ವದೊಂದಿಗೆ ಕಾವ್ಯಾತ್ಮಕಗೊಳಿಸಿ, ತಮ್ಮ ಅನುಭವಕ್ಕೆ ಬರುವ ಆವರಣವಾಗಿ ಇರುವ ಸಾಧ್ಯತೆಗಳನ್ನು ಸೆರೆಹಿಡಿದು ಅದರಲ್ಲಿ ಜೇನ ವರ್ಣದ ಜೀವಂತಿಕೆ ತುಂಬಿ ಓದುಗರನ್ನು ಸಂಸ್ಕಾರಗೊಳಿಸಿ, ಗುಂಗು ಹಿಡಿಸಬಲ್ಲ ಅನನ್ಯ ಅಪ್ಪಟ ಮಹೋದಕ ಪ್ರತಿಭೆ. ‘ಜಯಂತ ಭಾವಜೀವಿ. ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಹೇಳಬಲ್ಲ ಸೂಕ್ಷ್ಮ ಕಲೆಗಾರ’ ಎಂಬ ಹಾಯ್ ಬೆಂಗಳೂರಿನ ಸಂಪಾದಕರಾದ ರವಿ ಬೆಳಗೆರೆಯವರ ಮಾತು ಅವರ ಸೃಜನಶೀಲ ವ್ಯಕ್ತಿತ್ವಕ್ಕೆ ಕನ್ನಡಿ. ಮತ್ತೆ ಅವರು ಹಟಕ್ಕೆ ಬಿದ್ದು ಪೆನ್ನ ಶೂಲದ ಮೇಲೆ ಕೂರಿಸಿ, ಎರಡು ವರ್ಷಗಳ ಕಾಲ ಬರೆಸದೇ ಇದ್ದರೆ ಅವರ ಬರವಣಿಗೆಯ ಹಸಿಬಿಸಿ ರಭಸದ ರುಚಿ ನಮಗೆ ಸಿಗುವ ಸಾಧ್ಯತೆ ಕತೆಗಳಲ್ಲಷ್ಟೆ ಉಳಿದುಕೊಳ್ಳುತ್ತಿತ್ತು. ‘ಬೊಗಸೆಯಲ್ಲಿ ಮಳೆ’ಯ ಹಲವಾರು ವೈಶಿಷ್ಟ್ಯಗಳಲ್ಲಿ ನಿರೂಪಣೆಯದು ಪ್ರಮುಖ ಪಾತ್ರ. ನಿರೂಪಣೆ ಇಲ್ಲದೇ ಸಾಹಿತ್ಯವೇ ಇರಲ್ಲ.
ಎಂತಹ ಸಣ್ಣ ಸೂಕ್ಷ್ಮ ವಿಷಯಗಳನ್ನಿಟ್ಟುಕೊಂಡು ಅದಕ್ಕೊಂದು ವಿಶಾಲ ಸಾಧ್ಯತೆಯನ್ನು ಕಲ್ಪಿಸಿ ಹೊಸ ಆಶಯವನ್ನು, ಕಲ್ಪನೆಯನ್ನು, ವಿಸ್ತಾರವನ್ನು ಕೊಡುತ್ತ ಆಸಕ್ತಿದಾಯಕ ನಿಲುವಿನಲ್ಲಿ ಭಾಷೆಯನ್ನು ಮೃದುತ್ವಕೊಳಪಡಿಸಿ ದುಡಿಸಿಕೊಂಡು ವಿವರಣಾತ್ಮಕ ನೆಲೆಗೆ ಕೊಂಡೊಯ್ದು ಅದರಲ್ಲೊಂದು ಅನುಭವ ಪ್ರಜ್ಞೆಯನ್ನು ಜಾಗೃತಗೊಳಿಸುವ, ಆರವಣವನ್ನು ಕಟ್ಟುವ ಪ್ರಕ್ರಿಯೆ ಅನನ್ಯವಾದದ್ದು, ಮಹತ್ತರವಾದದ್ದು. ಅದು ಜಯಂತ ಅವರಿಗೆ ಮಾತ್ರ ಸಿದ್ಧಿಸಿದ ಸೃಜನವೈಶಾಲ್ಯ ಎನ್ನಬಹುದು. ಇಲ್ಲಾ ಅಂತಾದರೆ, ಜಾಗರದ ಜೀವಿಗಳಲ್ಲಿನ ರಾತ್ರಿಯಾಗದ ರಾತ್ರಿಯ ಕಾಯಕದ ಕ್ಷಣಗಳು ಇನ್ನೂ ಜೀವಂತವಾಗಿ ನಿದ್ದೆಯ ಝೋಂಪಿಗೆ ಒಳಗಾಗದೇ ಮೆಲ್ಲನೆ ಅಲೆವ ಎಲೆಗಳಂತಿಹ ಸನ್ನಿವೇಶಗಳು ನಮಗೆಲ್ಲಾ ಗೊತ್ತಿರುವ ಸಂದರ್ಭಗಳನ್ನು ಹೆಕ್ಕಿಕೊಂಡು ಮನಸ್ಸು ಅನುಭವಿಸುವ ಬದುಕಿನ ಎಲ್ಲಾ ಸನ್ನಿವೇಶಗಳನ್ನು ಒಳಗೊಂಡು ಅಭಿವ್ಯಕ್ತಿಸುವ ಪ್ರತಿಕ್ರಿಯೆ, ಪ್ರತಿಸ್ಪಂದನೆಯಾಗಿದೆ. ಅಷ್ಟೇ ಅಲ್ಲ ಇದೊಂದು ಹೊಸಬಗೆಯ ಮಾದರಿ ನಿರೂಪಣೆಯಾಗಿದೆ. ಈ ಶಬ್ದ ಚಿತ್ರದ ಕೊನೆಯ ಪ್ಯಾರಾಗಳನ್ನು ಗಮನಿಸಿ – ‘ಬಟವಡೆಯಾಗದೇ ಮರಳಿದ ಪತ್ರಗಳು ಮರಣದಂಡನೆಗೆ ಕಾದವರಂತೆ ಪ್ರಧಾನ ಅಂಚೆಕಛೇರಿಯಲ್ಲಿ ಕೂತಿವೆ. ಊರ ಚೌಕಗಳ ಪ್ರತಿಮೆ ಪುತ್ಥಳಿಗಳೆಲ್ಲ ನಿಂತಲ್ಲೇ ತಮ್ಮಷ್ಟಕ್ಕೇ ಏನೋ ಮಾತಾಡುತ್ತಿವೆ. ಕಾಮಾಟಿಪುರದ ಹತ್ತನೇ ಪಂಜರದಲ್ಲಿ ಹೆರಿಗೆ ಆಗಿದೆ. ಹೆಣ್ಣು ಹುಟ್ಟಿದೆ ಎಂದು ಎಲ್ಲಾ ಕುಣಿದಾಡುತ್ತಿದ್ದಾರೆ.
ಗಿರಾಕಿಗಳಿಗೂ ಪೇಡೆ ಹಂಚಿದ್ದಾರೆ. ಪಂಜರದ ಪರದೆಗಳು ಸಹಸ್ರ ವರ್ಷಗಳಿಂದ ಹಾಗೇ ತೂಗಿವೆ. ನಿರೋಧದ ಪೊಟ್ಟಣಗಳನ್ನು ಹೂವಿನಂತೆ ಕೈಲಿಹಿಡಿದು, ಪುಟ್ಟಮಕ್ಕಳು ಮಾರಲೆಂದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇಲ್ಲಿಯ ಮಕ್ಕಳಿಗೆಂದೇ ರಾತ್ರಿ ತೆರೆವ ಶಿಶುವಿಹಾರದಲ್ಲಿ ಗೊಂಬೆಗಳು ಕಣ್ತೆರೆದು ಮಲಗಿವೆ.’ ನಗರದ ಜೀವಿಗಳಿಗೆ ಇನ್ನೇನು ಕಣ್ಣು ಹಿಡಿಯುವ ಹೊತ್ತು, ಮೂಡಣದಲ್ಲಿ ಒಂದು ಬಾಂಬು ಸದ್ದಿಲ್ಲದೇ ಸ್ಟೋಟಗೊಂಡಿದೆ. ಇಲ್ಲಿ ಕಟ್ಟಿಕೊಡುವ ಮುಂಬೈಯ ರಾತ್ರಿ ಹಗಲಾಗಿ ಮಾರ್ಪಾಡಾಗುವ ಸಂದರ್ಭ. ಲಾಲಿತ್ಯಮಯ ಭಾಷೆಯಲ್ಲಿ ಕಟ್ಟಿಕೊಡುವ ವಿವರಗಳು. ಹೆಣ್ಣು ಹುಟ್ಟಿದ ಖುಷಿಯಿಂದ ಗಿರಾಕಿಗಳಿಗೆ ಪೇಡ ಹಚ್ಚುವ ಕಾಮಾಟಿಪುರದ ಘೋರ ದಾರುಣ ವೈರುಧ್ಯಗಳನ್ನು ನಿರೂಪಿಸುತ್ತ ಚಿಂತನೆಗೆ ಅಭಿಮುಖವಾಗುವತ್ತ ಓದುಗರನ್ನು ಬೆಸೆಯುತ್ತದೆ. ಹಾಗೇ ಬಾಗಿಲಲ್ಲಿ ಇಡೀ ಹಗಲು ರದ್ದಿಯಾಗಿ ಬಿದ್ದುಕೊಂಡಿದ್ದನ್ನು ಸೂಚಿಸುವ ಹೊಸ ಹಗಲಿನ ಪೇಪರ್ಕೂಡ ಅದನ್ನು ಅಣಕಿಸುತ್ತದೆ. ಹೀಗೆಯೇ ಎಲ್ಲ ಶಬ್ದಗಳಲ್ಲೂ ಲೇಖಕರ ಪ್ರಜ್ಞೆ ಹೆಚ್ಚು ಕೆಲಸಮಾಡಿದೆ. ಕುವೆಂಪು, ಕಾರಂತ, ಚಿತ್ತಾಲ, ತೇಜಸ್ವಿ, ದೇವನೂರು ಮುಂತಾದವರಿಗೆ ಕಥನಲೋಕವೊಂದಿರುವಂತೆ ಜಯಂತ ಕಾಯ್ಕಣಿಯವರಿಗೆ ವಿಭಿನ್ನವಾದ ಕಥನಲೋಕವೊಂದಿದೆ. ಆ ಕಥನದ ಕೇಂದ್ರ ಪ್ರಜ್ಞೆ ಮನುಷ್ಯನೇ ಆಗಿದ್ದಾನೆ. ಅವನ ಸುತ್ತಲ ಬದುಕಿನ ವ್ಯವಹಾರ ವ್ಯಾಪಕತೆಗಳ ಮೇಲಿನ ವಾಸ್ತವಿಕ ಕಲ್ಪನೆ ಅವರನ್ನು ತಟ್ಟಿದೆ.
ಇಲ್ಲದಿದ್ದರೆ ನಸುಕಿನ ಮೂರಕ್ಕೆದ್ದು, ಅಡಿಗೆ, ಪಾತ್ರೆ, ಬಟ್ಟೆ-ಬರೆ ಎಲ್ಲ ಮುಗಿಸಿ, ಸೂರ್ಯ ಏಳುವ ಮುನ್ನವೇ ಕತ್ತಲಲ್ಲೇ ಹೊರಬಿದ್ದು ದೈನಿಕದ ಲೋಕಲ್ ಹಿಡಿಯುವ ಹೆಜ್ಜೆಯ ಕೆಚ್ಚು, ಕಾಯಕದ ಕನಸು ಕೈಹಿಡಿದು ಮುಂಬೈ ನಗರ ಬಾಗಿಲು ಬಡಿವ ಪ್ರತಿ ತರುಣ ಜೀವಗಳ ತುಡಿತ. ಅಸ್ತದ ಸೂರ್ಯನ ಕಂಡು ಕೆಂಪಾದ ನಾರಿಮನ್ ಪಾಯಿಂಟ್ನ ಸಹಸ್ರಾರು ಕಿಟಕಿಗಳು, ಧಾರಾವಿಯ ಕಡುಗಪ್ಪು ತೀರದಲ್ಲಿ ರೈಲು ಹಳಿಗಳನ್ನು ತಲೆದಿಂಬಾಗಿಸಿಕೊಂಡಿರುವ ಜೋಪಡಿಗಳು, ಏಕಾಗ್ರಚಿತ್ತದ ಪುಟ್ಟಪುಟ್ಟ ಬೂಟ್ ಪಾಲಿಶ್ ಡಬ್ಬಿಗಳು, ಸಾರ್ವಜನಿಕವಾಗಿ ಜತೆಜತೆಗೇ ನೇಣುಬಿದ್ದವರಂತೆ ಲೋಕಲ್ಗಳಲ್ಲಿ ತೂಗಾಡುತ್ತ, ‘ಉತರ್ನೇಕಾ ಹೈಕ್ಯಾ?’ ಎಂದು ತಿವಿಯುತ್ತಲೇ ಇರುವ ನಿತ್ಯ ಪಯಣಿಗರ ಮುಂಬೈಯನ್ನು ದಾಟಿಹೋಗುವ ಸನ್ನಾಹದಲ್ಲಿದ್ದ ಇಂತಹ ಪುಟ್ಟ ಪುಟ್ಟ ಕ್ಷಣಗಳು ಬಿಡಿಸಲಾಗದ ಎಳೆಯಲ್ಲಿ ಬೆಸೆದು ಬರವಣಿಗೆಗೆ ಹಚ್ಚಿದೆ. ಆದ್ದರಿಂದಲೇ ಈ ‘ಬೊಗಸೆ’ ಓದುಗರನ್ನು ಅಪರಿಚಿತತೆಯಿಂದ ಪರಿಚಿತ ಭಾವಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿದೆ. ಇಲ್ಲಿನ ಅನುಕ್ರಮದ ಒಂದರಿಂದ ತೊಂಬತ್ತೊಂದರವರೆಗಿನ ಸಮ್ಮೋಹಿತ ತಲೆಬರಹಗಳ ಗಂಟನ್ನು ಬಿಚ್ಚಿ ಯಾವುದನ್ನು ಆಯ್ದುಕೊಳ್ಳಬೇಕೆಂಬ ಗೊಂದಲಕ್ಕೆ ಎಡೆಮಾಡಿಕೊಡುವಷ್ಟು ಇಲ್ಲಿನ ಶಬ್ದಚಿತ್ರಗಳು ಅಂತಹ ಸಂದರ್ಭವನ್ನು ಸೃಷ್ಟಿ ಮಾಡುತ್ತವೆ. ಗುಣ, ಚೆಂದ, ಪ್ರತಿಭೆಯಿರುವ ಹಲವಾರು ಹುಡುಗಿಯರಲ್ಲಿ ಯಾರನ್ನು ಆಯ್ದುಕೊಳ್ಳುವುದು ಎಂಬ ಪೇಚಿಗೆ ಬಿದ್ದಂತ ಭಾವ ಭಾಸವಾಗುತ್ತದೆ.
ಮುಂಬೈ ಬದುಕಿನ ಆಧುನಿಕ ತಲ್ಲಣಗಳ ವಿಶ್ವರೂಪವನ್ನು ಅನಾವರಣಗೊಳಿಸುತ್ತಲೇ, ಮತ್ತೊಂದರಲ್ಲಿ ಗೋಕರ್ಣದ ಹಾಲ್ಟಿಂಗ್ ಬಸ್ಸಿನ ದೀಪಾವಳಿಯ ವೈಭವವನ್ನು ದಾಖಲಿಸುತ್ತಾರೆ. ತಮ್ಮ ಮನೋಲೋಕವನ್ನು ಸಕಾರಾತ್ಮಕ ನೆಲೆಯಲ್ಲಿ ಕೇಂದ್ರೀಕರಿಸಿಕೊಂಡು ಓದುಗರ ಮನಸ್ಸುಗಳಿಗೆ ಮೆಲ್ಲಗೆ ಲೇಪಿಸಿ ತಮ್ಮ ಬರವಣಿಗೆಯ ಮಾಂತ್ರಿಕ ಶಕ್ತಿಯ ಬೆರಳ ನಿನಾದದಲ್ಲಿ ಒಂದು ಆರೋಗ್ಯಕರ ಉಲ್ಲಾಸಭರಿತ ನವೆಗೆ ಒಳಗುಮಾಡುವಂತೆ ಒಡ್ಡುವ ಪರಿ ಅದ್ಭುತವಾದದ್ದು. ಅದಕ್ಕೆ ಅಲ್ಲೊಂದು ಅನಿರ್ವಚನೀಯ ಸುಖ ನಮ್ಮನ್ನು ಕಾಯುತ್ತಿರುತ್ತದೆ. ಚಿಂತನೆಗೀಡುಮಾಡುತ್ತ ನಮ್ಮೊಳಗೆ ಹುದುಗುತ್ತದೆ. ಅವುಗಳಲ್ಲಿ ಕೆಲವನ್ನಷ್ಟೇ ಆಯ್ದು, ಅವುಗಳ ಅಂತರಂಗದ ಭಾವವನ್ನೋದಿದಾಗ ಅನುಭವಿಸಿದ ಸಂತಸವನ್ನು ಹಂಚಿಕೊಂಡಿದ್ದೇನೆ. ‘ಬಸ್ ನಂ. 302 ಒಂದು ಅಭಯ ರಾಗ’ ಎಂಬ ಶಬ್ದ ಚಿತ್ರ ಅಯೋಧ್ಯಾಕಾಂಡದ ನಂತರದ ದಿನಗಳಲ್ಲಿ ಮುಖಗಳಲ್ಲಿ ಕೋಪವನ್ನೇ ಓದುವ ಗಂಭೀರ ಗುಮಾನಿಯ ಸಂದರ್ಭದ ಯಥಾವತ್ ಚಿತ್ರಕೊಡುತ್ತ ಭಯಾವಹ ಮೌನದ ಕೂಪದ ಮಧ್ಯೆಯೂ ‘302’ ರ ಬಸ್ಸಿನಲ್ಲಿ ಹತ್ತಿದ ಹೆಂಗಸಿನ ಕೌಟುಂಬಿಕ ದನಿಗೆ, ಕಿಟಕಿ ಪಕ್ಕವೇ ಜಾಗಬೇಕೆಂದ ಅವಳ ಮಗಳ ಹಟಕ್ಕೆ ಕರಗುವ ಜನಸಂದಣಿ ಮಗುವಿಗೆ ಚಾಕಲೇಟ್ ಕೊಡಬೇಕೆಂಬ ಹಂಬಲದ ಪ್ರೀತಿಯಲ್ಲಿ ಚೀಲದಲ್ಲಿ ಕೈಹಾಕಿ ಗೋರುವಲ್ಲಿಯವರೆಗಿನ ಕ್ಷಣಗಳು ಇಂಪಾದ ಅಭಯರಾಗ ಕೇಳಿಬರುವ ನೆರೆಹೊರೆತನದ ಸ್ನೇಹಪರ ಚಲನಶೀಲದನಿ ನೆಲೆನಿಲ್ಲುವ ನೈಜಭಾವದಲ್ಲಿ ಮುಂಬೈ ಬದುಕಿನಲ್ಲಿ ಹುದುಗಿಕೊಂಡ ಸಂಕೀರ್ಣ ಭಯವೊಂದು ನಿರಾಳವಾಗುತ್ತದೆ.
ಅದು ವ್ಯಕ್ತವಾಗುವಲ್ಲಿಯ ಭಾಷೆಯ ಸ್ವಚ್ಛಂದತೆಯ ಚಂದಕ್ಕೆ ಮಾರುಹೋಗಲೇಬೇಕು. ‘ಬಾಲವನದ ಕೊಂಬೆಯಲ್ಲಿ ಒಂಟಿ ಜೋಕಾಲಿ’ಯಲ್ಲಿ ಎಂಥವರನ್ನೂ ಬೆರಗುಗೊಳಿಸುವ ಆರೋಗ್ಯದ ಹರಿಕಾರರಂತ ಕಾರಂತರು ಉಡುಪಿಯ ತಾಲೂಕು ಆಸ್ಪತ್ರೆಯಲ್ಲಿ ಎಡ್ಮಿಟಾದ ಹಳೆಯ ಗೆಳೆಯನನ್ನು ನೋಡಲು ಬಂದ ಸಂದರ್ಭವನ್ನು ಸ್ವತಃ ತಾವೇ ನೋಡಿದಂತಿದೆ. ನಂತರ ಮಣಿಪಾಲದ ಆಸ್ಪತ್ರೆಯಲ್ಲಿ ಜ್ವರದಿಂದ ಎಡ್ಮಿಟಾದರೂ ಡ್ರೈವರನನ್ನು ಕಳಿಸಿ ಗೆಳೆಯನ ಆರೋಗ್ಯ ವಿಚಾರಿಸಿದ ಅವರ ಎದೆಗೆ ಮೆತ್ತಿದ ಸ್ನೇಹದ ಬದ್ಧತೆಯನ್ನು ಹೇಳುತ್ತಲೇ ಕೊನೆಗೆ – ಬೆಳಕಿನ ಮೋಡವೊಂದು ಸ್ತಬ್ಧವಾಗಿ ಮಲಗಿದೆ. ಸಹಸ್ರ ರಾಗಗಳನ್ನು ಮೀಟಿ ಆಗಷ್ಟೇ ಮೌನ ತಳೆದ ವೀಣೆ, ಗಾಳಿಯೊಡನೆ ಮಾತು ಬಿಟ್ಟ ಚಿಗುರು ತುಂಬಿದ ಹೆಮ್ಮರ, ಬಾಲವನದ ಕೊಂಬೆಯಲ್ಲಿ ಒಂಟಿ ಜೋಕಾಲಿ’ ಎಂಬಂತಹ ಸಾಲುಗಳು ಕಾರಂತರ ನಿರ್ಗಮನದ ಸಂದರ್ಭವನ್ನು ಹೇಳುವ ನೋವು ವಿಶಾದಭರಿತ ಕವಿತೆಯಂತಿದೆ. ‘ಸ್ವಾಮಿದೇವನೆ ಲೋಕಪಾಲನೆ’ಯಲ್ಲಿನ ಶಿಕ್ಷಕನ ಶಿಕ್ಷೆಯ ಅಪರಾವತಾರದ ಪರಮಾವಧಿ ಎನ್ನುವಂತಹ ಮೂರು ಸಂದರ್ಭಗಳನ್ನಿಟ್ಟು ಶಿಕ್ಷಣ, ಶಿಕ್ಷೆ ಹೇಗಿರಬೇಕೆಂಬ ಚಿಂತನೆ ಪಾಲಕ, ಅದರಲ್ಲಿಯೂ ಶಿಕ್ಷಕವೃಂದ ಓದಲೇಬೇಕಾದದ್ದು. ಟಿಪ್ಪಣಿ ಪುಸ್ತಕ ತಂದಿಲ್ಲವೆಂದು ಕಕ್ಕಸುಕೋಣೆಯಲ್ಲಿ ಕೂಡಿ ಬೀಗಹಾಕಿದ್ದು, ಸರ್ವಸ್ವ ಕಳೆದುಕೊಂಡವನಂತೆ ಕ್ಲಾಸಿನಲ್ಲಿ ಅರ್ಧ ಬೆತ್ತಲೆಗೊಂಡು ಗೋಲ ತಿರುಗುತ್ತನಿಂತ ಹುಡುಗನ ಸ್ಥಿತಿ, ಹಠಾತ್ತನೇ ಅಪರಿಚಿತರ ಮಧ್ಯೆ ಕಡ್ಡಾಯದಿಂದ ಕೂರಿಸಲ್ಪಟ್ಟ ಐದನೇ ತರಗತಿಯ ಪೋರಿಯು ಅನುಭವಿಸುವ ಅವಮಾನದ, ಸಾಮಾಜಿಕ ಲಜ್ಜೆಯ ಘೋರ ನರಕವೊಂದು ಸೃಷ್ಟಿಯಾದರೆ ಅದು ಅಕ್ಷಮ್ಯ ಎನ್ನುವ ಲೇಖಕಕರು ಶಿಕ್ಷೆ ಅನ್ನವುದು ಶಿಕ್ಷಣದ ಅವಿಭಾಜ್ಯ ಅಂಗ.
ಆದರೆ, ಶಿಕ್ಷೆಯ ಸ್ವರೂಪ ಗುಣಾತ್ಮಕವಾಗಿರಬೇಕು. ಪ್ರತಿ ವರ್ಗಕೋಣೆಯೂ ಸಾಮಾಜಿಕ ಸಹಜೀವನದ ಪಟ್ಟರೂಪ, ಒಬ್ಬನ ಕುಂದನ್ನು ಇನ್ನೊಬ್ಬನ ನೆರವಿನಿಂದ ಕಲಿಕೆಗೆ ಪ್ರೇರೇಪಿಸುವುದು ಅತ್ಯಂತ ಪರಿಣಾಮಕಾರಿ ಎನ್ನುವುದು ಗಮನಸಿಬೇಕು. ಆಗಷ್ಟೇ ವೈಯಕ್ತಿಕ ನೆಲೆಯಿಂದ ಸಹಯೋಗದ ನೆಲೆಗೆ ತುಯ್ಯಲು ಆರಂಭಿಸುವ ಮಗುವಿನ ಪಾಲಿಗೆ ಶಿಕ್ಷಕರು ದೈವಿ ಕಾರುಣ್ಯ ಹೊಂದಿರಬೇಕು. ತನ್ನ ಮಗುವಿನಂತೆ ತರಗತಿಯ ಮಗುವನ್ನು ಪಾಲಿಸುವ ವಿಶಾಲ ಮನಸ್ಸು ಗುರುವಿಗಿರಬೇಕೆನ್ನುವಲ್ಲಿ ಮಕ್ಕಳ ಬಗೆಗಿನ ಕಾಳಜಿಯ ನೈಜತೆ ವ್ಯಕ್ತವಾಗಿದೆ. ‘ಸ್ವಾಮಿ ದೇವನೆ ಲೋಕಪಾಲನೆ’ ಹಾಡನ್ನು ಶಿಕ್ಷಕರು ಮೊದಲು ಅರ್ಥಮಾಡಿಕೊಳ್ಳಬೇಕಿದೆ ಎಂಬ ಸೂಕ್ಷ್ಮ ಕೂಡ ಇಲ್ಲಿದೆ. ಅವರು ಮಕ್ಕಳನ್ನು ಎಷ್ಟು ಪ್ರೇರೆಪಿಸುತ್ತಾರೆ ಎಂಬುದಕ್ಕೆ ‘ಎದೆ ತುಂಬಿ ಹಾಡಿದೆನು’ ರಿಯಾಲಿಟಿ ಶೋ ಸಾಕ್ಷಿ. ‘ನೋಡಲು ಕಣ್ಣಿದ್ದರೆ ಸಾಲದು…’ ಓದಿದ್ದರೆ ಅರೆ! ಹೀಗೂ ಯೋಚಿಸಬಹುದಲ್ಲ ಅಂತ ಅನಿಸಿಬಿಡುತ್ತದೆ. ನಮ್ಮೊಳಗೆ ಹುದುಗಿರುವ ನಮಗೆ ಗೊತ್ತಿರುವ ವಿಚಾರಗಳನ್ನೋ ಅಥವಾ ಸಾವು ಏಕಾಂಗಿಯಾಗಿರುವಾಗ ಮನಸ್ಸಿನ ಮಧ್ಯೆ ಎಳೆದು ಹೋದ ಗೆರೆಯೊಂದನ್ನು ಕೂಡಿಸಿ ಒಂದು ಚಿತ್ರವಾಗಿ ಮಾರ್ಪಡಿಸಿದಂತೆ ದೈನಿಕದ ಎಂತಹ ಸಂಗತಿಗಳನ್ನು ಕೂಡ ಕಲಾತ್ಮಕವಾಗಿ ಹೇಳುವ ಶೈಲಿ ವಿಶೇಷವಾದದ್ದು. ಮಾನವೀಯ ನೆಲೆಯಲ್ಲಿ ನಮ್ಮನ್ನು ಚಿಛಿಣತಚಿಣಜ ಮಾಡುವ ಸಾಮಾನ್ಯ ಸಂಗತಿಗಳೂ ಒಂದೊಂದು ದೃಶ್ಯಗಳನ್ನು ತಮ್ಮಲ್ಲಿ ಅಡಗಿಸಿಟ್ಟುಕೊಂಡು ಅದಕ್ಕೊಂದು ಸುಂದರ ಆವರಣ ಸೃಷ್ಟಿಸುವಲ್ಲಿ ಸದಾ ಅವರ ಮನಸ್ಸು ನಿರತವಾಗಿರುತ್ತದೆ.
ಅವುಗಳ ಮೇಲೆ ಇರುವ ನಿಷ್ಕಾರಣ ಮಮತೆ ಈ ಕಲಾತ್ಮಕೆತಯ ಹಿಂದಿರುವ ಬಿಂದುವೆನ್ನಬಹುದು. ಎಲ್ಲವನ್ನೂ ಸಾಮಾಜಿಕ ಪ್ರಜ್ಞೆಯ ಭಾಗವಾಗಿಸಿ ಬದುಕಿನ ಆಸಕ್ತಿದಾಯಕ ಮಗ್ಗುಲುಗಳಾಗಿಯೇ ಪರಿಭಾವಿಸುತ್ತಾರೆ. ‘ಬೊಗಸೆಯಲ್ಲಿ ಮಳೆ’ಯ ಅಂಕಣಗಳ ಎಲ್ಲ ತಲೆಬರಹಗಳು ಅಷ್ಟೇ ಚೇತೋಹಾರಿಯಾಗಿದೆ. ಅಲ್ಲಿ ಬರುವ ಸಾಲುಗಳು ಅವುಗಳು ಉದ್ದೀಪಿಸುವ ಭಾವಗಳು, ಮಂಜಿನ ನಿಷ್ಕಲ್ಮಶ ಹೊದಿಕೆಯಂತೆ, ಮುಂಜಾವಿನ ನಿರ್ಮಲ ಬೆಳಕಲ್ಲಿ ಗಾಳಿಯೊಂದಿಗೆ ಸೇರಿಕೊಂಡ ಪಾರಿಜಾತದ ಗಂಧದಂತೆ ಸಂಸ್ಕಾರ ಶುಭ್ರವಾಗುತ್ತದೆ. ಅದಕ್ಕೇ ಅವು ಅವರ ಜನಪ್ರಿಯತೆಯನ್ನು ಅಣಕಿಸುವಂತೆ ಮೀರಿನಿಂತಿವೆ ! ಅಷ್ಟೇ ಅಲ್ಲ, ಅಂಕಣ ಬರಹಕ್ಕೆ ಒಂದು ಫೊರ್ಮೆಟ್ ಹಾಕಿಕೊಟ್ಟ ಪ್ರತಿನಿಧಿಕ ಕೃತಿ ಎಂಬುದನ್ನೂ ಸಾರುತ್ತಿದೆ. ಆದ್ದರಿಂದ ‘ಅವರಂತೆ ಎಂಥ ಸಾಮಾನ್ಯ ಸಂಗತಿಯನ್ನೂ ಸೂಕ್ಷ್ಮವಾದ ವಿನೋದದಲ್ಲಿ, ವಿಶಿಷ್ಟವಾದ ವಿವರಗಳಲ್ಲಿ ಮಾಂತ್ರಿಕ ಸ್ಪರ್ಶಕೊಟ್ಟು ಹೇಳಬಲ್ಲ ಲೇಖಕರು ಕನ್ನಡದಲ್ಲಿಲ್ಲ’ ಎಂಬ ಕಥೆಗಾರ ವಿವೇಕ ಶಾನಭಾಗರ ಮಾತು ನಿಜಕ್ಕೂ ಸತ್ಯ. ‘ಮಳೆ’ಯ ಆನಂದವನ್ನು ಅನುಭವಿಸುವುದಕ್ಕೆ ಓದುತ್ತ ಹೋದಂತೆ ನಾವೆಲ್ಲರೂ ಹೊಸದೊಂದು ಲೋಕಕ್ಕೆ ಅಚ್ಚರಿ, ಕುತೂಹಲದಿಂದ ಎಂಟ್ರಿಕೊಟ್ಟಂತೆ ಅಲ್ಲಲ್ಲಿ ಕಣ್ಣು ಹನಿಗೊಳ್ಳುವಂತೆ ಎಂಥದೋ ನೋವನ್ನು ಅನುಭವಿಸಿ, ಪಾವ್ ಬಾಜಿಯ ರುಚಿಯ ಸುಖವನ್ನು ಗ್ರಹಿಸುತ್ತ, ಶಬ್ದ ಜೀವಗಳಿಗೆ ಕಣ್ಣು ಕೊಟ್ಟವರ ನೆನಪು ನೂರಾಗಿ ಝಡ್ ಬ್ರಿಜ್ ಎಂಬ ಮಾಯಾ ಸುರಂಗದ ಭ್ರಮೆಗಳನ್ನು ಮನಸ್ಸಿಗೆ ಲೇಪಿಸುತ್ತ ಪುಟ್ಟ ಕನ್ನಡಿಯಿಂದ ಎದ್ದು ಬಂದ ಯಕ್ಷರು ಕನ್ನಡಿಯಲ್ಲಿ ಕಣ್ಣುಗಳ ಹೊಳೆಸಿ, ಚಂದಗೊಳ್ಳುವ ಪರಿ ಅಚ್ಚರಿ.
ಮಾತಿರದ ನಲುಮೆಯಲ್ಲೇ ಹಾಲ್ಟಿಂಗ್ ಬಸ್ಸಿನ ದೀಪಾವಳಿ ತೋರಿಸುವ, ರಾತ್ರಿಯ ಹೆದ್ದಾರಿಗೂ ಒಂದು ಅಲ್ಪವಿರಾಮ ಘೋಷಿಸುವ, ಊರಿನ ಕಡೆಮನೆಯ ಶವಪೆಟ್ಟಿಗೆಯ ಹೊಳಪಿನಲ್ಲಿ ನಮ್ಮ ಮುಖಗಳಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಸಿಲ್ವರ್ಗಾಂಧಿಗೆ ಇಳಿಜಾರಿನಲ್ಲಿ ನಿಂತ ಯೋಧ ಸೆಲ್ಯೂಟ್ ಹೊಡೆದು, ದಿನದ ಮೊದಲ ಲೋಕಲ್ ರೈಲಿನಲ್ಲಿ ಪ್ರಯಾಣಿಸಿ, ತೋಟದ ಅಂಚಿನಲ್ಲೊಂದು ಮೂಕ ಮರದ ಚಿರಂತನೆಗೆ ಗೂಡಂಗಡಿಯ ಗಾಲಿಗಳು ಸಾಕ್ಷಿಯಾಗಿ, ನೀಲಿಯಿಂದ ತೇಲಿಬರುವ ಹಿತದ ಹಾಡು ಸುಮ್ಮನಿದ್ದರೆ ಮಾತ್ರ ಕೇಳುವುದು ಮತ್ತು ಕಾಣುವುದು. ಸಪ್ತಸಾಗರ ದಾಟುವ ಕಾಗದದ ದೋಣಿ ಇನ್ನೂ ಏನೆಲ್ಲಾ ಒಟ್ಟಿಗೆ ಕಣ್ಬಿಡುವ ಅನುಭವ ಜಗತ್ತಿನ ಪ್ರಸಂಗಗಳ ಕ್ಷಣಗಳ ನೋಡಲು, ಕಣ್ಣಿದ್ದರೆ ಸಾಲದು! ಅಸಾಧಾರಣ ಪ್ರತಿಭೆ ಬೇಕು!!







ನಮ್ಮ ನಡುವಿನ ಅತ್ಯಂತ ವಿಶಿಷ್ಟ ಬರಹಗಾರ ಜಯಂತರ ಬಗ್ಗೆ ಸುಂದರವಾದ ಬರಹಕ್ಕೆ ಧನ್ಯವಾದಗಳು.
-Anil
Ah……..bahala sundaravaagi Jayanth’rannu nimma padagalalalli hididukottiddiri. Thanks for the lovely article.
ಥ್ಯಾಂಕ್ ಯೂ….
Its just awesome Dear Phalguna Gouda…
ವಾವ್!
ತುಂಬಾ ಥ್ಯಾಂಕ್ಸ್ ಲೇಖಕರಿಗೆ.
ಬೊಗಸೆಯ ಮಳೆಯನ್ನು ತುಂತುರು ತುಂತುರಾಗಿ ಮತ್ತೊಮ್ಮೆ ಸಿಂಪಡಿಸಿದ ಅನುಭವ. ನಿಜಕ್ಕೂ ಅತ್ಯಂತ ಉತ್ಕ್ರಷ್ಟ ವ್ಯಾಖ್ಯಾನ. ಲೇಖಕರಿಗೆ ಧನ್ಯವಾದಗಳು.
Baraha thumba sogasagide.avara kathegalanna odidashte khushiyaythu..!
ಜಯಂತ ಕಾಯ್ಕಿಣಿ ಅವರ ಬೊಗಸೆಯಲ್ಲಿ ಮಳೆ ಮತ್ತೆ ಮತ್ತೆ ಓದಬೇಕಿನಿಸುತ್ತದೆ…ಏಕೆಂದರೆ ಅವರ ವಿಶಿಷ್ಟವಾದ ಅಂಕಣಗಳು ಮನಸೆಳೆಯುತ್ತವೆ…ಥ್ಯಾಂಕ್ಯೂ ಸರ್
‘Bhogaseyalli malhe’ ya lalitamaya, jeevana moulya saaruva prabandhagalhu muda needidante adara vimarsheyoo muda needitu.
ಎಲ್ಲರಿಗೂ ಧನ್ಯವಾದಗಳು.
‘ಬೊಗಸೆಯಲ್ಲಿ ಮಳೆ’ ನಮ್ಮನ್ನು ಪ್ರಭಾವಿಸಿದಷ್ಟು ಯಾವ ಪುಸ್ತಕವೂ ಪ್ರಭಾವಿಸಿಲ್ಲ..
ಜಯಂತ ಕಾಯ್ಕಿಣಿ ಅವರನ್ನು ಪಾಲ್ಗುಣ ಗೌಡರು ಓದಿಕೊಂಡಷ್ಟು, ಇತರ ಬರಹಗಾರರು ಓದಿದ ಬಗ್ಗೆ ನನಗೆ ಅನುಮಾನಗಳಿವೆ. ಅಷ್ಟೊಂದು ದೊಡ್ಡ ಫ್ಯಾನ್ ನಮ್ಮ ಪಾಲ್ಗುಣ. ಜಯಂತ ಕಾಯ್ಕಿಣಿ ಅವರ ಅಪ್ತ ಬಳಗದಲ್ಲಿ ಪಾಲ್ಗುಣ ಪ್ರಮುಖ. ಹಾಗಾಗಿ ಜಯಂತ ಅವರ ಸಾಹಿತ್ಯದ ಎಲ್ಲಾ ಪ್ರಕಾರಗಳು ಪಾಲ್ಗುಣ ಬಲ್ಲ. ಹಾಗಾಗಿ ಅವರ ಬಗ್ಗೆ ಅತ್ಯಂತ ಅಪ್ತ ಬರಹ ಸಾಧ್ಯವಾಗಿದೆ.