ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಂತ್ ಕಾಯ್ಕಿಣಿ ಬರೆದ ‘ಪಾರ್ಲರ್ ಕಿಟಕಿಯಿಂದ’

ಜಯಂತ್ ಕಾಯ್ಕಿಣಿ

ಕೃಪೆ: ವಾರ್ತಾ ಭಾರತಿ ವಿಶೇಷಾಂಕ

 

ಬಹು ಅಂತಸ್ತಿನ ಕಟ್ಟಡ ಅದು

ಅದರ ನಾಲ್ಕನೆ ಅಂತಸ್ತಿನಲ್ಲಿದೆ ಈ ಬ್ಯೂಟಿಪಾರ್ಲರು.

ಇದಕ್ಕೊಂದೇ ದೊಡ್ಡ ಕಿಟಕಿ.

ಕೆಳಗೆ ರಸ್ತೆಯಲ್ಲಿ ನಡೆವ ಜನ ಹೆಮ್ಮೆಯಿಂದ ಈ ಕಟ್ಟಡದ ಎತ್ತರ ನೋಡುತ್ತ ತಮ್ಮ ವೇಗವನ್ನು ಕಳೆದುಕೊಳ್ಳುತ್ತಿರುವಾಗಲೇ ಇಲ್ಲಿ ಉತ್ಕಂಠಿತ ಪೋರಿಯೊಬ್ಬಳ ಆರ್ತಮುಖಕ್ಕೆ ಬ್ರೈಡಲ್ ಮೇಕಪ್ ನಡೀತಿದೆ.

ಇಲ್ಲಿಂದ ನೇರ ಮದುವೆ ರಿಜಿಸ್ಟ್ರೇಶನ್ ಆಫೀಸಿಗೆ ಓಡಲಿದ್ದಾಳೆ ಅವಳು… ಕೆಳಗೆ ಬೈಕಿನ ಮೇಲೆ ಕೂತೇ ಕಾಯುತ್ತಿರುವ ಹೊಸ ಶರ್ಟಿನ ಉದ್ವಿಗ್ನ ಮದುಮಗನೊಂದಿಗೆ.

ತನ್ನ ಧೈರ್ಯಕ್ಕೆ ತಾನೇ ಹೆದರಿದಂತಿದ್ದಾನೆ ಅವನು. ಅವನನ್ನು ಸಂತೈಸುವ ಶಕ್ತಿ ಗೋಡೆಯ ಯಾವ ಬೃಹತ್ ಪೋಸ್ಟರುಗಳಿಗೂ ಈಗ ಇಲ್ಲ!

ಇದ್ದಲ್ಲೆ ಮತ್ತೆ ಮತ್ತೆ ಹಿಂದಿರುಗಿ ನೋಡುತ್ತಿದ್ದಾರೆ ಇಬ್ಬರೂ, ಅಗೋಚರ ಸೈನ್ಯವೊಂದು ಬೆನ್ನಟ್ಟಿ ಬರುತ್ತಿರುವಂತೆ.

ಅಲ್ಲಾಡಬೇಡಾ ಹಾಳಾಗುತ್ತದೆ!

ನಿನ್ನ ಈ ಹುಬ್ಬಿನ ಇರಾದೆಗೆ ಕುಣಿಯಬೇಕು ನಿನ್ನ ಹೀರೋ ನಾಳೆಯಿಂದ.. ಹಾಗೆ ಚೂಪಾಗಿಸುತ್ತೇನೆ. ಅದನ್ನು.. ಅಲ್ಲಾಡಬೇಡಾ-ಬೆದರಿಸುತ್ತಿದ್ದಾಳೆ ಬ್ಯೂಟಿಶಿಯನ್-ಅಶೋಕ ವನದಲ್ಲಿ ಸೀತೆಯ ಪಕ್ಕ ಕೂತ ತಾಟಕಿಯಂತೆ…

ಹೆರಿಗೆ ಕೋಣೆಯಲ್ಲಿ ಹೆರಿಗೆಗೆ ತಳ್ಳುವ ಆಯಾಳಂತೆ ‘ಹೆದರಬೇಡ… ನೋಡು… ನೋಡು ಈ ಕಿಟಕಿಯಿಂದ ದೂರದ ಸಿಟಿ ಮಾರ್ಕೆಟ್ ಕಾಣುತ್ತದೆ. ರಿಲ್ಯಾಕ್ಸ್.. ರಿಲ್ಯಾಕ್ಸ್ …’ ಅನ್ನುತ್ತಾಳೆ.

 

ಇಂಥದೇ ಒಂದು ಬಿಸಿಲಿನ ಅಪವೇಳೆಯಲ್ಲಿ ಕದ್ದು ಪಿಕ್ಚರಿಗೆ ಹೋದಂತೆ, ಇಂದು ಇನ್ನೇನು ಹದಿನೈದು ನಿಮಿಷದಲ್ಲಿ ತನ್ನ ಹೊಸದೊಂದು ದೈನಿಕ ಧಾರಾವಾಹಿಯಲ್ಲಿ ಕಾಲಿಡಲಿದ್ದಾಳೆ ಇವಳು. ಇಲ್ಲ ಈ ಪಾರ್ಲರಿನ ಈ ಯಾವ ಸಾಲುಗನ್ನಡಿಗಳಿಗೂ ಅವಳನ್ನು ಸಂತೈಸುವ ಶಕ್ತಿ ಇಲ್ಲ. ಅವು ಗ್ಯಾಸ್ಸ್ಟವ್, ಹ್ಯಾಂಗರು, ಬಕೆಟ್, ಹಿಂಡಿಟ್ಟ ಬಟ್ಟೆಗಳನ್ನು ಅಡಗಿಸಿಡುವಲ್ಲೇ ನಿರತವಾಗಿವೆ. ಒಂದೊಂದು ಕನ್ನಡಿಯಲ್ಲೂ ಒಂದೊಂದು ನಸುಗತ್ತಲ ಬಿಡಾರ. ಅಗುಳಿ ನಿಲ್ಲದ ಬಾಗಿಲು. ಪುಟ್ಟ ಪ್ಲಾಸ್ಟಿಕ್ ಕರಂಡಕದಲ್ಲಿ ಸುರುಳಿ ಸುತ್ತಿ ಕೂತಿರುವ ಮಂಗಳಸೂತ್ರದ ತುಂಬ ಸವೆದ ಸೇಫ್ಟಿ ಪಿನ್ನುಗಳು. ಈ ಪಾರ್ಲರ್ನ ಈ ದೊಡ್ಡ ಒಂಟಿ ಕಿಟಕಿಯಿದೆಯಲ್ಲ, ಅಲ್ಲಿಂದ ಬಗ್ಗಿ ನೋಡಿದರೆ, ಬಲ್ಲವರು ‘ಸಮಾಜ’ ಅಂತ ಕರೀತಾರಲ್ಲ, ಅದು ಬೀದಿಯಲ್ಲಿ ಕೆಳಗೆ ಓಡಾಡುವುದನ್ನು ನೋಡಬಹುದು. ಬಲ್ಲವರ ಪ್ರಕಾರ ಇದು ಹೊರಗೇ ಇರುತ್ತದೆ. ಬಾಗಿಲು ಹಾಕಿಕೊಂಡರೆ ನಿಂತೇ ಹೋಗುವ ಟ್ರಾಫಿಕ್ ಸದ್ದಿನಂತೆ.. ಅಥವಾ

‘ಪುಕ್ಕಟೆ ಫೇಶಿಯಲ್ ಮಾಡ್ತೇವೆ ಬಾರೋ…’ ಎಂದರೂ ಎಂದೂ ಒಳಗೆ ಬರದೆ ಬೀದಿಯಲ್ಲೆ ಆಡಿಕೊಂಡಿರುವ ಚಂದ್ರನಂತೆ…

ಅರೇ! ಮನೇನೂ ಅಲ್ಲೆಲ್ಲೋ ದೂರದಲ್ಲಿದೆ. ಕನ್ನಡಿಯಾಚೆಯ ಕನ್ನಡಿಯ ಬೆನ್ನಲ್ಲಿ…ಸಮಾಜವೂ ಹೊರಗಿದೆ ಅಲ್ಲೆಲ್ಲೊ… ಜಿನಸಿ ತರಕಾರಿ ಚೌಕಾಶಿ ಮಾಡುತ್ತ, ವಾರ್ಡುಗಳ ಹೊರಗೆ, ಆಪರೇಶನ್ ಥಿಯೇಟರಿನ ಹೊರಗೆ, ರೇಷನ್ ಅಂಗಡಿಯ ಹೊರಗೆ… ಕಾಯುತ್ತ… ಹಾಗಾದರೆ ಇಲ್ಲೇನಿದೆ? ಕೇವಲ ಪ್ರಸಾದನ ಸಾಮಗ್ರಿ! ಬಣ್ಣದ ಹೇರ್ ಡೈ, ಕರ್ಲಿಂಗ್ ಬ್ರಶ್ಶು, ರೋಮಗಳ ಹೆರೆದು ನಾಜೂಕುಗೊಳಿಸುವ ನಯದ ತಂತ್ರ. ಒಂದು ನಿರಂತರ ಶಾಶ್ವತ ಮಹಾ ದೈನಿಕ ಧಾರಾವಾಹಿಯ ಪಾತ್ರಗಳ ಸಜ್ಜು ಕೋಣೆ ಇದು… ಡೈಲಾಗೇ ಸಿಕ್ಕಿಲ್ಲವಲ್ಲ ಇನ್ನೂ….

‘ಸೊಪ್ಪು, ಸೊಪ್ಪು, ಹರಿವೇ ಸೊಪ್ಪು’-ಯಾರ ಡೈಲಾಗನ್ನು ಯಾರೋ ಕೂಗುತ್ತಿದ್ದಾರೆ ದೂರದಲ್ಲಿ…

‘‘ನಮ್ಮ ಯಜಮಾನ್ರಿಗೆ ಬೆಳಗ್ಗೆ ಮಾಡಿದ ಪಲ್ಯ.. ರಾತ್ರಿ ಆಗೋದೇ ಇಲ್ಲ’’ ಯಾರು ಬರೆದರು ಈ ದಡ್ಡ ಡೈಲಾಗನ್ನು! ತಮ್ಮ ತಮ್ಮ ಮಡದಿಯರಿಂದ ಯಜಮಾನ್ರು ಅಂತ ಕರೆಸಿಕೊಂಡು ಹೆಮ್ಮೆಪಡುವ ಮೂರ್ಖ ಪುರುಷರು. ಅವರನ್ನು ಹಾಗೆ ಕರೆದೇ ತಮ್ಮನ್ನು ಒಡೆತನದ ವಸ್ತುಗಳನ್ನಾಗಿಸಿ ಗಿರವಿಗಿಟ್ಟುಕೊಂಡ ಮೂಕ ಮಹಿಳೆಯರು -ಇರೋತನಕ- ಈ ‘ಪವರ್ ಕಟ್’ ತಪ್ಪಿದ್ದಲ್ಲ ಬಿಡಿ. ಹೀಗಾಗಿ ಲಿಫ್ಟ್ ನಡೀತಿಲ್ಲ ಈಗ.

ನಾಲ್ಕು ಮಹಡಿ ಹತ್ತಿ ಬಂದಾಗ, ಬಂದವರ ಕತ್ತಿನ ಮೇಲೆ ಮುಖವೇ ಇರುವುದಿಲ್ಲ. ಇನ್ನು ಬ್ಲೀಚಿಂಗ್ ಎಲ್ಲಿಂದ ಮಾಡೋದು.

ನೋಡಿ, ಈ ನಿತ್ಯ ಕೆಲಸದ ಪುಟ್ಟ ಪೋರ, ಬಾಲ ಕಾರ್ಮಿಕ ಈ ವಿಶಾಲ ಕಿಟಕಿಯ ಗಾಜುಗಳನ್ನು ಹೇಗೆ ಎಚ್ಚರದಿಂದ ಹೊರಗೆ ಬಾಗಿ ಒರೆಸುತ್ತಿದ್ದಾನೆ…

ಈ ರೆಡೀ ಮದುಮಗಳು ‘ಏಯ್ ಬಗ್ಗಬೇಡಾ ಹುಷಾರು’ ಎಂದು ಎಚ್ಚರಿಕೆ ನೀಡುತ್ತಿದ್ದಾಗಲೇ ಒಂದೇ ಕೈಯಿಂದ ಬಿಲ್ಲಿನಂತೆ ಬಾಗಿ ಬಾಗಿ ಬಳುಕಿ ಆತ ಉಜ್ಜುತ್ತಿದ್ದಾಗಲೇ… ‘ಯಪಾ’್ಪ ಅಂಥ ಅವನ ಆರ್ತ ಉದ್ಗಾರಕ್ಕಿಂತ ಹಗುರಾಗಿ ಅವನಿಗರಿವಾಗುವ ಮುನ್ನವೇ… ಅವನ ಜೇಬಿನಿಂದ ಒಂದು ರೂಪಾಯಿಯ ನಾಣ್ಯವು ಜಾರಿ ಸ್ಲೊ ಮೋಶನ್ನಲ್ಲಿ ಕೆಳಗೆ… ಒಂದೊಂದೇ ಅಂತಸ್ತು ದಾಟುತ್ತ… ಕೆಳಗಿನ ಬೀದಿಯಲ್ಲಿ ಚಲಿಸುತ್ತಿರುವ ಸಮಾಜದ ಮೇಲೆ… ಇನ್ನೇನು… ಬೀಳುತ್ತಿದೆ… ಅಷ್ಟರಲ್ಲಿ ಅದನ್ನೇ ದಿಟ್ಟಿಸಿದ ಪೋರ ದಿಗ್ಗೆಂದು ಈ ಕಡೆ ಚಿಮ್ಮಿ, ಒಂದೇ ಉಸುರಿನಲ್ಲಿ ಬಿಟ್ಟ ಬಾಣದಂತೆ.. ನಾಲ್ಕು ಅಂತಸ್ತಿನ ಮೆಟ್ಟಿಲುಗಳನ್ನು ಸೂಪರ್ಮ್ಯಾನ್ನಂತೆ.. ಓಡುತ್ತ ದಾಟಿ ಕಣ್ಣಾಚೆಯ ಆ ಸಮಾಜವೆಂಬ ಸಮುದ್ರದ ಅಲೆಗಳಲ್ಲಿ ಈಜಿ ಆಳದಿಂದ, ಅಪಾರ ಕೌಶಲ್ಯದಿಂದ ಆ ನಾಣ್ಯವನ್ನು ಮುತ್ತಿನಂತೆ ಹೆಕ್ಕಿ ಮತ್ತೆ ನಾಲ್ಕೂ ಅಂತಸ್ತನ್ನು… ಬೆಳಕಿನ ವೇಗದಲ್ಲಿ ಏರಿ ಎದುರು ನಿಂತು ಪುಟ್ಟ ದೇವ ರಂತೆ ಅಂಗೈ ಚಾಚಿ ನೋಡಿ- ಎಂದು ತೋರಿಸಿ ಏದುಸಿರಲ್ಲಿ ನಗುತ್ತಿ ದ್ದಾನೆ. ಎಲ್ಲವನ್ನು, ಬಲ್ಲವರೇ, ಅಂದಾಜಿದ್ದರೆ, ಧೈರ್ಯವಿದ್ದರೆ ಹೇಳಿ ನೋಡುವಾ-ಈ ನಾಣ್ಯದ ಬೆಲೆಯೆಷ್ಟು?

‍ಲೇಖಕರು G

16 October, 2012

8 Comments

  1. Vijaykumar Hugar

    “……ಕೆಳಗೆ ರಸ್ತೆಯಲ್ಲಿ ನಡೆವ ಜನ ಹೆಮ್ಮೆಯಿಂದ ಈ ಕಟ್ಟಡದ ಎತ್ತರ ನೋಡುತ್ತ ತಮ್ಮ ವೇಗವನ್ನು ಕಳೆದುಕೊಳ್ಳುತ್ತಿರುವಾಗಲೇ………

    ….ತನ್ನ ಧೈರ್ಯಕ್ಕೆ ತಾನೇ ಹೆದರಿದಂತಿದ್ದಾನೆ ಅವನು…..

    ….ಇದ್ದಲ್ಲೆ ಮತ್ತೆ ಮತ್ತೆ ಹಿಂದಿರುಗಿ ನೋಡುತ್ತಿದ್ದಾರೆ ಇಬ್ಬರೂ, ಅಗೋಚರ ಸೈನ್ಯವೊಂದು ಬೆನ್ನಟ್ಟಿ ಬರುತ್ತಿರುವಂತೆ…..”

    ಓದಿನಲ್ಲೂ ಮಜವಿದೆ ಎಂದು ತೋರಿಸಿದ,ನನ್ನ ಬರವಣಿಗೆಯ ಮೂಲ ಸ್ಪೂರ್ತಿ ಭಾವಾರ್ಥಿ ಜಯಂತ್ ಕಾಯ್ಕಿಣಿ.

    ಕಾಯ್ಕಿಣಿಯವರ ಬರಹ ಪ್ರಕಟಿಸಿದ ಅವಧಿಗೆ ಕೋಟಿನಮನಗಳು.

  2. ಹರಿ

    ಓದುತ್ತಾ ಇದ್ದಷ್ಟು ಹೊತ್ತು ನಾನು ಕಳೆದೇ ಹೋಗಿದ್ದೆ. ಸಮಾಜದಲ್ಲಿದ್ದೆನೊ…ಹೊರಗಿದ್ದೆನೋ ಅರಿವಾಗಲೇ ಇಲ್ಲ. ಪುಟ್ಟ ಹುಡುಗನೊಂದಿಗೆ ನಾನು ನಾಲ್ಕು ಮಹಡಿ ಇಳಿದು ಹತ್ತಿದೆ. ಕಳೆದ ದುಡ್ಡನ್ನು ಮರಳಿ ಪಡೆದ ಆ ಪೋರನ ಮುಖದಲ್ಲಿನ ಸಂತಸ ಕಣ್ಣ ಮುಂದಿದೆ.

    ಜಯಂತ್ ಸಾರ್… ಓದುಗರನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುವ ನಿಮ್ಮ ರಚನಾ ಶಕ್ತಿಗೆ ನಮೋ ನಮಃ.

  3. D.RAVI VARMA

    ಅದು ಯಾರು ಬರೆಯೋದು ಕಲೆಸಿದರೋ ನಿಮಗೆ …. ಅಕ್ಷರಗಳ ಮೂಲಕ ಮೋಡಿ ಮಾಡುವ ನಿಮ್ಮ ವಿದ್ಯೆ, ಜಾಣತನ, ಅದಕ್ಕೂ ಮಿಗಿಲಾಗಿ ಆ ನಿಮ್ಮ ಒಳನೋಟ ,ತಳಲಾಟ,ಸ್ಪಂದನಕ್ಕೆ ಒಂದು ಪ್ರೀತಿಯ ಶರಣು…..
    ಓದುತ್ತ ಓದುತ್ತ ನಾನು ಆ ಬೃಹತ್ ಮಹಡಿಯಲ್ಲಿ ಕಳೆದು ಹೋಗಿದ್ದೆ…..
    ರವಿ ವರ್ಮ ಹೊಸಪೇಟೆ.

  4. samyuktha

    There goes the Kaikini way!!! fantastic!

  5. Jayalaxmi Patil

    ಅವಧಿಗೊಂದು ಥ್ಯಾಂಕ್ಸು. ಇದನ್ನು ಶೇರ್ ಮಾಡದೇ ಹೋಗಿದ್ದಲ್ಲಿ ಓದಿನ ಚೆಂದದ ಅನುಭೂತಿಯೊಂದು ಮಿಸ್ ಆಗಿಬಿಡುತ್ತಿತ್ತು. ಅದು ಹೇಗಾದ್ರೂ ಇಷ್ಟು ಚೆಂದ ಬರೀತೀರಿ ಜಯಂತ್ ಸರ್ ನೀವು!!!!!!! 🙂

  6. Mnauprasad k j

    aa putta balakana hottaa aa building ge aa nanya aa putta hudugana tutiya chilumeya mtuuina bele… enantira sir ???????

  7. shantha kumari

    ಎಲ್ಲಿಂದ ಎಲ್ಲಿಗೆ ಹೋಗಿಬಿಟ್ಟಿರಿ ನೀವು ಜಯಂತ್ ಸರ್ ಒಂದೊಂದು ವಾಕ್ಯವೂ ಒಂದೊಂದು ಕತೆ, ಲೇಖನವನ್ನು ಹುಟ್ಟಿಹಾಕುವಂತಿದೆ. ಆಕ್ಷೇಪಣೆಯೂ ಅದೆಷ್ಟು ಆಪ್ತವಾಗಿದೆ…..

  8. Vithal Katti

    ನಿಮ್ಮನ್ನು ನಾವು ಗೌರವಿಸೋದು, ಇಷ್ಟಪಡೋದು ಸುಮ್ಮನೇ ಅಲ್ಲ. ನಮ್ಮನ್ನು ನೋಯಿಸದೇ ನಮ್ಮ ಮನಸ್ಸಿನ ಮಲಿನತೆಯನ್ನು ಎತ್ತಿ ತೋರುವ, ಆ ಮೂಲಕ ನಮ್ಮನ್ನು ಎಚ್ಚರಿಸುವ ನಿಮ್ಮ ಮಾನವೀಯತೆಗೆ ವಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading