ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಂತ್ ಕಾಯ್ಕಿಣಿ ಕಥೆಗೆ ಕೂಡಗೆ ನೆನಪಿನ ಸಾಥ್

-ಜಿ ಎನ್ ಮೋಹನ್

Courtesy: ವಿಜಯ ಕರ್ನಾಟಕ

ಬಸವರಾಜ ಕೂಡಗೆ ನನ್ನ ಆತ್ಮೀಯ ಮಿತ್ರ . ಆತ ಇದ್ದಕ್ಕಿದ್ದಂತೆ ಲ್ಲವಾಗಿ ಒಂಬತ್ತು ವರ್ಷವಾಗಿ ಹೋಯಿತು ಎಂದು ಯಾರಾದರೂ ಹೇಳಿದರೆ ನಾನು ಖಂಡಿತಾ ನಂಬಲು ಸಿದ್ದನಿಲ್ಲ . ಏಕೆಂದರೆ ಬಸವರಾಜ ಕೂಡಗೆಯ ಸಂಗಾತಿ ಬಿ ಎನ್ ಶಶಿಕಲಾ ಆ ರೀತಿ ಕೂಡಗೆಯ ನೆನಪನ್ನು ಸದಾ ಹಸಿರಾಗಿಟ್ಟಿದ್ದಾರೆ. ಬಸವರಾಜ ಕೂಡಗೆ ಉಸಿರಾಡಿದ್ದು ರಂಗಭೂಮಿಯನ್ನು . ಬೀದರ್ ನಿಂದ ಎದ್ದು ಬಂದ ಕೂಡಗೆ ‘ರಂಗಾಯಣ’ದವರೆಗೂ ನಡೆಸಿದ ಪಯಣ ಬಹುಷಃ ಕನ್ನಡ ರಂಗಭೂಮಿಯ ಪಯಣವೂ ಹೌದು. ಅಂತಹ ಕೂಡಗೆಯನ್ನು ಶಶಿಕಲಾ ಸದಾ ಜತನದಿಂದ ಕಾಪಿಟ್ಟದ್ದು ರಂಗಪ್ರಯೋಗಗಳ ಮೂಲಕವೇ. ನಾದಿರಾ ಬಬ್ಬರ್- ಚಂದ್ರಕಾಂತ ಕುಸನೂರು ರಚನೆಯ ಸಕ್ಕೂಬಾಯಿ, ಲಿಂಗದೇವರು ಹಳೆಮನೆಯವರ ವಾನಪ್ರಸ್ಥ , ಪಿ ಲಂಕೇಶರ ‘ ಎ ಸೂಸೈಡ್ ನೋಟ್ ‘ ಬಿ ಜಯಶ್ರೀ ಅವರ ಒಂದು ಸೈನಿಕ ವೃತ್ತಾಂತ , ಗಿರೀಶ್ ಕಾರ್ನಾಡರ ಅಗ್ನಿ ಮತ್ತು ಮಳೆ, ರಾಜೇಂದ್ರ ಕಾರಂತರ ಮೈಸೂರು ಮಲ್ಲಿಗೆ ಹೀಗೆ ಕೂಡಗೆ ನೆನಪನ್ನು ಹೊತ್ತ ನಾಟಕಗಳ ದಿಬ್ಬಣವೇ ಜರುಗಿತು.

ಶಶಿಕಲಾ- ಕೂಡಗೆ ಜೋಡಿ ರಂಗಭೂಮಿಗೆ ಮಹತ್ವದ ಕಾಣಿಕೆ ಕೊಟ್ಟಿದೆ. ಇಬ್ಬರ ರಂಗ ಕಮಿಟ್ಮೆಂಟ್ ಅಗಾಧವಾದದ್ದು. ತನ್ನ ಏಕವ್ಯಕ್ತಿ ಪ್ರದರ್ಶನಗಳ ಮೂಲಕ ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಶಶಿಕಲಾ ‘ಫಾರ್ ಎ ಚೇಂಜ್’ ಎಂದು ಕೈ ಹಾಕಿದ್ದು ದೃಶ್ಯ ಮಾಧ್ಯಮಕ್ಕೆ. ಜಯಂತ ಕಾಯ್ಕಿಣಿ ಅವರ ಸಣ್ಣ ಕಥೆ ‘ ಗಾಳಿ ಮರದ ನೆರಳು ‘ ಓದಿದ ಶಶಿಕಲಾ ಇನ್ನಿಲ್ಲದಂತೆ ಮಾರು ಹೋಗಿದ್ದು ಅಲ್ಲಿನ ಆಶಾಭಾವಕ್ಕೆ. ಬದುಕು ಬೊಗಸೆಯಿಂದ ಸೋರಿ ಹೋಗುತ್ತಿದೆ ಎನ್ನುವುದು ಕ್ಷಣ ಕ್ಷಣವೂ ಅರಿವಾಗುತ್ತಿದ್ದರೂ ಆ ಭರವಸೆಯ ಬೆನ್ನತ್ತಿ ಹೋಗುವ ಕಾಯ್ಕಿಣಿ ಅವರ ಕಥೆಯ ಗುಣ ಶಶಿಕಲಾ ಈ ಕಥೆಯನ್ನು ಕಿರುಚಿತ್ರವಾಗಿಸಲು ಕೈ ಹಾಕುವಂತೆ ಮಾಡಿತು.

ಬಿ ಎನ್ ಶಶಿಕಲಾಗೆ ‘ಭರವಸೆಯ ವ್ಯವಸಾಯ’ ತುಂಬಾ ಇಷ್ಟ. ‘ಈ ಕಥೆಯಲ್ಲಿ ತಾಳುವಿಕೆ ಇದೆ, ಕ್ಷಮಿಸುವ, ಕಾಯುವ ಮನಸ್ಸಿದೆ. ಈ ಎಲ್ಲವೂ ನನಗೆ ಇಷ್ಟ’ ಎನ್ನುತ್ತಾರೆ.

‘ಗಾಳಿ ಮರದ ನೆರಳು’ ಕಥೆ ‘ಜಾಜಿ’ ಹೆಸರಲ್ಲಿ ಚಿತ್ರವಾಗಿದೆ. ಒಂದು ಪಯಣವನ್ನು, ಭರವಸೆಯ ಪಯಣವನ್ನು ಕಟ್ಟಿಕೊಡುವ ಚಿತ್ರ ಇದು. ಇದ್ದಕ್ಕಿದ್ದಂತೆ ಪೊಲೀಸರು ಲಾರಿ ಚಾಲಕ ಲೋಕಿಯನ್ನು ಬಂಧಿಸುವುದರೊಂದಿಗೆ ಚಿತ್ರ ಆರಂಭವಾಗುತ್ತದೆ . ಒಂದು ಸುಂದರ ಸಂಸಾರದ ಕೊಳದಲ್ಲಿ ಬಿದ್ದ ಕಲ್ಲು ಇದು. ಅಲ್ಲಿಂದ ಏಳುವ ತಳಮಳದ ಅಲೆಗಳೇ ಚಿತ್ರದ ವಸ್ತು . ಲೋಕಿಯ ಹೆಂಡತಿ ಜಾಜಿಗೆ ಪೊಲೀಸ್ ಜೀಪನ್ನಾದರೂ ಅಡ್ಡಗಟ್ಟಿ ಆತನೊಡನೆ ಮಾತನಾಡಬೇಕು ಎನ್ನುವ ಹಂಬಲ.ಹಾಗಾಗಿ ಪಯಣ ಆರಂಭಿಸುತ್ತಾಳೆ. ಇದು ಕೇವಲ ಅವಳೊಬ್ಬಳ ಪಯಣವಲ್ಲ. ಇನ್ನೂ ಮೂವರ ಪಯಣ. ಒಡಲಿನಲ್ಲಿ ಅರಳುತ್ತಿರುವ ಜೋಡಿ ಕಣ್ಣು, ನೆರಳಾಗಿ ಬರುತ್ತಿರುವ ಲೋಕಿಯ ಪ್ರಿಯತಮೆ, ಕೈ ಹಿಡಿದು ಬರುತ್ತಿರುವ ಲೋಕಿಯ ತಂಗಿ…ಹೀಗೆ ನಾಲ್ವರ ಪಯಣ ನಡೆಯುತ್ತಿರುವುದು ಒಂದು ಭರವಸೆಯ ತಂತಿಯ ಮೇಲೆ.

‘ಕಾಯ್ಕಿಣಿ ಅವರ ಕಥೆಗೆ ಎಷ್ಟೊಂದು ಪದರಗಳಿವೆ . ಓದಿದಷ್ಟೂ ಅದು ಬಿಚ್ಚಿಡುವ ಅರ್ಥವೇ ಬೇರೆ ‘ ಎನ್ನುವ ಶಶಿಕಲಾ ತಮಗೆ ಗೊತ್ತೇ ಆಗದ ರೀತಿ ಕಥೆಗೆ ನವಿರಾದ ದೃಶ್ಯ ಸ್ಪರ್ಶ ನೀಡಿದ್ದಾರೆ. ಇದು ಶಶಿಕಲಾ ಬಸವರಾಜ ಕೂಡಗೆಗೆ ಕೊಟ್ಟ ಕಾಣಿಕೆ ಮಾತ್ರವಲ್ಲ. ದೃಶ್ಯ ಮಾಧ್ಯಮ ಹಾಗೂ ಸಾಹಿತ್ಯ ಲೋಕವನ್ನು ಬೆಸುಗೆ ಹಾಕುವ ಪಯಣದಲ್ಲಿ ಒಂದು ಗುರುತಿಸಲಾಗುವ ಹೆಜ್ಜೆಯೂ ಹೌದು

ಈ ಚಿತ್ರದ ನಿರ್ದೇಶಕ ಆಸಿಫ್ ಕ್ಷತ್ರಿಯ ಅವರಿಗೆ ದೃಶ್ಯ ಮಾಧ್ಯಮವನ್ನು ದುಡಿಸಿಕೊಳ್ಳುವುದು ಗೊತ್ತು. ಹಾಗಾಗಿಯೇ ಈ ಚಿತ್ರಕ್ಕೆ ಮೋಹಕ ನೋಟದ ಸಿರಿಯೂ ಲಭ್ಯವಾಗಿದೆ. ಬಿ ಎನ್ ಶಶಿಕಲಾ, ಅಚ್ಯುತ ಕುಮಾರ್, ಗುರಿ, ಸುಷ್ಮಾ ನಾಣಯ್ಯ, ಶಕುಂತಲಾ ಹೆಗಡೆ ಅಭಿನಯ ಮನದಲ್ಲಿ ನಿಲ್ಲುತ್ತದೆ. ಚಂದ್ರು ಕ್ಯಾಮೆರ ಕೆಲಸವಂತೂ ವಾಹ್! ಅನಿಸುವಂತಿದೆ. ಪ್ರದೀಪ್ ಅವರ ಎಡಿಟಿಂಗ್ ಕೂಡಾ.

ಈ ಚಿತ್ರ ನೋಡಿ ಮುಗಿಸಿದ ನಂತರವೂ ಪಶ್ಹಿಮ ಘಟ್ಟದ ಪುಟ್ಟ ಹಳ್ಳಿಯ ಆ ಹಸಿರು, ಆ ಝುರಿಯ ಜುಳು ಜುಳು ನನ್ನಿಂದ ಮರೆಯಾಗುತ್ತಲೇ ಇಲ್ಲ. ಬಸವರಾಜ ಕೂಡಗೆಯ ನೆನಪಿನಂತೆ. ಇಂತಹ ನೆನಪನ್ನು ಜೀವಂತವಾಗಿಸಿದ ‘ಕಲಾಚಿತ್ರ ಫಿಲಂಸ್’ ಗೆ ಅಭಿನಂದನೆ.

ಸಂಪರ್ಕ: ಬಿ ಎನ್ ಶಶಿಕಲಾ 94482 53490

 

 

 

‍ಲೇಖಕರು G

3 June, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading