ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಹೀರೋಗಳಿಗೆ ಹಾಕಿ ಸಾರ್, ಹೇಳ್ತೀನಿ..

ಕನ್ನಡ ಚಿತ್ರರಂಗದ ಮೇಲೆ ಬುದ್ಧಿವಂತ ಪ್ರೇಕ್ಷಕರಿಗೆ ಎಂಥ ಅಸಹನೆ ಇದೆ ಎನ್ನುವುದು ಗೊತ್ತಾಗಬೇಕಿದ್ದರೆ ನೀವು ಅವರ ಜೊತೆ ವಾದಕ್ಕಿಳಿಯಬೇಕು. ಬಹುಶಃ ಎಲ್ಲಾ ನಿರ್ಮಾಪಕರೂ ನಿರ್ದೇಶಕರೂ ನಟರೂ ಪ್ರೇಕ್ಷಕನಿಗೆ ತನ್ನದೇ ಆದ ಸಂವೇದನೆ ಇದೆ ಅನ್ನುವುದನ್ನು ಮರೆತುಬಿಟ್ಟಂತಿದೆ. ಅಥವಾ ತಾವು ಮಾಡಿದ್ದನ್ನು ಪ್ರೇಕ್ಷಕ ನೋಡಬೇಕು, ನೋಡುತ್ತಾನೆ ಎಂದು ಭಾವಿಸಿದಂತಿದೆ. ಹೀಗಾಗಿ ಇಡೀ ಚಿತ್ರರಂಗ ತನಗೆ ಅನ್ಯಾಯ ಆಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಾ, ಸರ್ಕಾರದ ಮುಂದೆ ಕೈ ಚಾಚುತ್ತಾ, ಸಬ್ಸಿಡಿ ಕೊಡಿ, ತೆರಿಗೆ ವಿನಾಯಿತಿ ಕೊಡಿ ಎಂದು ಕೇಳಿಕೊಳ್ಳುತ್ತಾ, ನಿರ್ದೇಶನವಾಗಲೀ, ಕತೆಹೇಳುವ ಕಲೆಯಾಗಲಿ ಗೊತ್ತಿಲ್ಲದ ನಿರ್ದೇಶಕರ ಕೈಲಿ ಸಿನಿಮಾ ಮಾಡಿಸುತ್ತಾ, ಸದಾ ಗೊಣಗಾಡುತ್ತಾ, ಪತ್ರಿಕಾಗೋಷ್ಠಿಗಳಲ್ಲಿ ಅದದೇ ಮಾತಾಡುತ್ತಾ ದಿನೇ ದಿನೇ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ.

ಇದೀಗ ಶುರುವಾಗಿರುವುದು ಡಬ್ಬಿಂಗ್ ಬೇಕೋ ಬೇಡವೋ ಎಂಬ ವಾದ. ಇತ್ತೀಚೆಗೆ ಸಿಕ್ಕ ನಿರ್ಮಾಪಕರೊಬ್ಬರು ನಮ್ಮಲ್ಲಿರುವ ಹೀರೋಗಳನ್ನು ಮಟ್ಟ ಹಾಕಲು ಡಬ್ಬಿಂಗ್ ಬರಬೇಕು. ಈಗ ನಮ್ಮ ಸೂಪರ್ ಸ್ಟಾರುಗಳು ಎರಡು ಕೋಟಿ, ಸ್ಟಾರುಗಳು ಒಂದು ಕೋಟಿ, ಮಿನಿಸ್ಟಾರುಗಳು ಐವತ್ತು ಲಕ್ಷ ಸಂಭಾವನೆ ಕೀಳುತ್ತಾರೆ. ನಮ್ಮ ಬಜೆಟ್ಟಿನ ಶೇಕಡಾ ಎಂಬತ್ತರಷ್ಟು ಪಾಲು ಕಲಾವಿದವರ ಸಂಭಾವನೆಗೇ ಹೋಗುತ್ತದೆ. ಮೂರು ಕೋಟಿ ಇಟ್ಟುಕೊಂಡು ದೊಡ್ಡ ಹೀರೋ ಹಾಕಿಕೊಂಡು ಸಿನಿಮಾ ಮಾಡುವವನು ಎರಡೂವರೆ ಕೋಟಿಯನ್ನು ಸಂಭಾವನೆಯಾಗಿ ಕೊಟ್ಟು ಐವತ್ತು ಲಕ್ಷದಲ್ಲಿ ಉಳಿದ ಖರ್ಚು ತೂಗಿಸಬೇಕು. ನಮ್ಮ ಚಿತ್ರರಂಗವನ್ನು ಸಾಯಿಸುತ್ತಿರುವವರು ಹೀರೋಗಳೇ ಎಂದು ಥೇಟ್ ಗಾಂಧೀನಗರದ ಮಾತೃಭಾಷೆಯಲ್ಲಿ ರೇಗಾಡಿದರು. ಈ ವಿಚಾರವಾಗಿ ಅವರೊಂದಿಗೆ ಕೊಂಚ ವಿಸ್ತಾರವಾಗಿ ಮಾತಾಡಬೇಕು ಅನ್ನಿಸಿತು.

`ಡಬ್ಬಿಂಗ್ ಬಂದರೆ ಹೀರೋಗಳನ್ನು ಹೇಗೆ ಮಟ್ಟ ಹಾಕುತ್ತೀರಿ?’

ತಾನಾಗೇ ದಾರಿಗೆ ಬರ್ತಾರೆ. ನಾವು ಆಮೇಲೆ ಇವರನ್ನು ನೆಚ್ಚಿಕೊಳ್ಳಬೇಕಾಗಿಲ್ಲ. ರಜನೀಕಾಂತ್, ಕಮಲ್ ಹಾಸನ್, ಚಿರಂಜೀವಿ, ಧನುಷ್, ಮೋಹನ್ ಲಾಲ್, ಮಮ್ಮುಟಿ ನಟಿಸಿರೋ ಸೂಪರ್ ಹಿಟ್ ಸಿನಿಮಾಗಳನ್ನು ತಗೊಂಡು ಬರ್ತೀವಿ. ಡಬ್ ಮಾಡ್ತೀವಿ. ಕರ್ನಾಟಕದಲ್ಲಿ ರಿಲೀಸ್ ಮಾಡ್ತೀವಿ. ಯಾವುದೇ ರಿಸ್ಕ್ ಇರೋಲ್ಲ.

`ಅಂದ್ರೆ ನಿಮಗೆ ಸಿನಿಮಾ ಅಂದ್ರೆ ವ್ಯಾಪಾರ ಅಷ್ಟೇ?’

ಇನ್ನೇನಿದೆ ಸಾರ್.. ಇದು ಬರೀ ವ್ಯಾಪಾರ. ಸಂಸ್ಕೃತಿ, ಕಲೆಗೆ ಅಂತ ಯಾವೋನಾದ್ರೂ ಕೋಟಿ ಕೋಟಿ ಖರ್ಚು ಮಾಡ್ತಾನಾ.. ಆಗೋ ಹೋಗೋ ಮಾತಾ ಅದು. ನಿಮ್ಮ ಥರ ಪೆನ್ನು ಪೇಪರು ಇಟ್ಕೊಂಡು ಕತೆ ಬರೆದ ಹಾಗಲ್ಲ ಸಾರ್ ಇದು.. ಲೈಫೇ ರಿಸ್ಕ್ ಮಾಡ್ತೀವಿ..

`ನಿಮಗೆ ಅಷ್ಟೆಲ್ಲ ಖರ್ಚು ಮಾಡಿ ಅಂತ ಹೇಳ್ದೋರು ಯಾರು.. ವ್ಯಾಪಾರ ಅಂದ ಮೇಲೆ ರಿಸ್ಕ್ ಇದ್ದೇ ಇರುತ್ತೆ..ಬಂದಾಗ ಕೋಟಿ ಕೋಟಿ ಬರೋದಿಲ್ವಾ. ಆಗ ಇದೇ ಹೀರೋಗಳನ್ನು ಹೊಗಳ್ತೀರಲ್ಲ ನೀವು?’

ಹೋಗಿ ಸಾರ್, ಈ ಹೀರೋಗಳನ್ನು ನಂಬಿ ಯಾವೋನು ಉದ್ದಾರ ಆಗಿದ್ದಾನೆ ಹೇಳಿ ಸಾರ್.. ಹತ್ತು ವರ್ಷದ ಲೆಕ್ಕ ತಗೊಳ್ಳಿ. ಎಲ್ಲಾ ಹೀರೋಗಳೂ ದೊಡ್ಡ ದೊಡ್ಡ ಕಾರಿಟ್ಕೊಂಡಿದ್ದಾರೆ. ದೊಡ್ಡ ದೊಡ್ಡ ಮನೆ ಕಟ್ಟಿದ್ದಾರೆ. ಹತ್ತುರುಪಾಯಿ ಇಲ್ದೇ ಓಡಾಡ್ತಿದ್ದೋರು ಹತ್ತು ಕೋಟಿ ಸಂಪಾದಿಸಿದ್ದಾರೆ. ಯಾವ ನಿರ್ಮಾಪಕ ಆದ್ರೂ ಇವರಿಂದಾಗಿ ಆ ಸ್ಟೇಜಿಗೆ ಹೋಗಿದ್ದಾನಾ. ದುಡ್ಡು ಹಾಕೋನಿಗೇ ಇಲ್ಲಿ ಕಿಮ್ಮತ್ತಿಲ್ಲ..

`ಅದನ್ನೆಲ್ಲ ನೀವೇ ಮಾಡ್ಕೊಂಡಿದ್ದಲ್ವಾ… ಹೀರೋಗಳಿಗೆ ಜಾಸ್ತಿ ಕೊಟ್ಟು ಅಭ್ಯಾಸ ಮಾಡಿಸಿದೋರು ಯಾರು ಹೇಳಿ?’

ಇರಬಹುದು ಸಾರ್.. ನಮ್ಮಲ್ಲೇ ಕೆಲವರು ಅಂಥೋರಿದ್ದಾರೆ.. ಏನು ಮಾಡ್ತೀರಾ.. ಆದ್ರೆ ಹೀರೋಗಳಿಗೂ ಮರ್ಯಾದೆ ಬೇಕಲ್ವಾ ಸಾರ್.. ನನ್ನ ಹಾಕ್ಕೊಂಡು ಸಿನಿಮಾ ಮಾಡಿ ಸೋತಿದ್ದಾನೆ. ನೆಕ್ಸ್ಟ್ ಸಿನಿಮಾ ಅರ್ಧ ರೇಟಿಗೆ ಮಾಡಿಕೊಡೋಣ ಅಂತ ಒಬ್ಬನಾದ್ರೂ ಮುಂದೆ ಬರ್ತಾನಾ… ಮನೆ ಹತ್ರ ಹೋದ್ರೆ ಗೇಟಿಂದಾನೇ ಆಚೆ ಕಳಿಸಿದ್ದಾರೆ ನಂಗೆ… ಇಂಥವರನ್ನು ನಂಬ್ಕೊಂಡು ಹಾಳಾಗಿ ಹೋಗಿದ್ದೀವಿ. ಡಬ್ಬಿಂಗ್ ಬೇಕೇ ಬೇಕು ಸಾರ್.. ಆಗ್ಲೇ ಇವರಿಗೆ ಬುದ್ಧಿ ಬರೋದು. ಕೋಟಿ ತಗೊಳ್ಳೋನು, ಡಬ್ಬಿಂಗ್ ಬಂದ್ರೆ ಮೂವತ್ತು ಲಕ್ಷಕ್ಕೆ ಬರ್ತಾನೆ ನೋಡ್ತಿರಿ..

`ಹೀರೋಯಿಸಮ್ಮು, ಸ್ಟಾರ್-ಗಿರಿ ಬೇರೆ ಭಾಷೇಲೂ ಇದ್ಯಲ್ಲ. ಅಲ್ಲೂ ಹೀರೋಗಳು ಎಂಟ್ಹತ್ತು ಕೋಟಿ ಸಂಭಾವನೆ ತಗೋತಾರೆ. ಅವರು ಹೇಗೆ ಬದುಕ್ತಾರೆ.?’

ಅಲ್ಲಿ ಒಳ್ಳೊಳ್ಳೇ ಸಿನಿಮಾ ಮಾಡ್ತಾರೆ ಸಾರ್.. ನಮ್ಮಲ್ಲಿ ರೈಟರ್ರೇ ಇಲ್ಲ. ಬರೀ ಮಾತಾಡ್ತಾರೆ. ಭೈರಪ್ಪನೋರ ಕಾದಂಬರಿ ಇಟ್ಕೊಂಡು ಸಿನಿಮಾ ಮಾಡಕ್ಕಾಗತ್ತಾ ಸಾರ್.. ಆರ್ಟ್ ಸಿನಿಮಾ ಮಾಡಬೇಕು. ಕಾರಂತರ ಸ್ಟೋರಿ ಇಟ್ಕೊಂಡು ಪಿಚ್ಚರ್ ಮಾಡಿದ್ರು, ಚಿಗುರಿದ ಕನಸು ಅಂತ ಏನಾಯ್ತು ಹೇಳಿ ಸಾರ್. ಫೈರ್ ಆಗ್ಲೇ ಇಲ್ಲವಲ್ಲ.

`ನೀವು ಸಿನಿಮಾ ಚೆನ್ನಾಗಿ ಮಾಡಲ್ಲ. ಕತೆಗಾರರನ್ನು ಯಾಕೆ ಬೈತೀರಿ. ಚಿತ್ರಕತೆ ಸಂಭಾಷಣೆ ಒಂದೇ ವಾರದಲ್ಲಿ ಬರೆಸಬೇಕು. ರೀಮೇಕ್ ತಂದು ಸುರೀಬೇಕು. ಒಂದಷ್ಟು ಕತೆಗಾರರನ್ನು ಕರೆದು ಚರ್ಚೆ ಮಾಡೋ ಅಭ್ಯಾಸವೇ ಇಲ್ಲ ನಿಮಗೆ. ನಿಮ್ಮ ನಿರ್ದೇಶಕರಂತೂ ಹೀರೋಗಳ ಕೈಗೊಂಬೆಗಳು. ಅವರ ಸೇವೆ ಮಾಡ್ತಾ ಸದಾ ಅವರ ಮನೇಲೇ ಬಿದ್ದಿರ್ತಾರೆ. ನೀವೂ ಅಷ್ಟೇ, ಅವರ ಮನೆ ಕೆಲಸ ಮಾಡ್ಕೊಂಡು ಕಾಲ ಕಳೀತೀರಿ’.

ಅದಕ್ಕೇ ಡಬ್ಬಿಂಗ್ ಬರಬೇಕು ಅಂತಿರೋದು.. ಈಗ ನಮಗೆ ಇಲ್ಲಿ ಮರ್ಯಾದೇನೇ ಇಲ್ಲ. ನಾವು ಇಷ್ಟೇ ಕೊಡೋದು ಅನ್ನೋ ಹೊತ್ತಿಗೆ ಮತ್ತೊಬ್ಬ ಬಂದು ಐವತ್ತು ಲಕ್ಷ ಜಾಸ್ತಿ ಕೊಡ್ತೀನಿ ಅಂತಾನೆ. ಹೀಗೇ ಮಾಡೀನೇ ಮಾರ್ಕೆಟ್ ಹಾಳು ಮಾಡಿರೋದು. ಇದಕ್ಕೆಲ್ಲ ಒಂದೇ ಪರಿಹಾರ ಡಬ್ಬಿಂಗು.

`ಕನ್ನಡದ ಸಂಸ್ಕೃತಿ ಹಾಳಾಗುತ್ತೆ ಅಂತಾರಲ್ಲ?’

ಹಾಳು ಮಾಡೋದಕ್ಕೆ ನಾವೇನು ಸಾರ್ ಉಳಿಸಿದ್ದೀವಿ. ರೀಮೇಕ್ ಮಾಡ್ತಿಲ್ವಾ. ಸಂಸ್ಕೃತಿ ಹಾಳಾಗುತ್ತೆ ಅಂತಾರಲ್ಲ, ಅವರು ಯಾರು. ಐದೋ ಆರೋ ಜನ ಇದ್ದಾರೆ. ವರ್ಷಕ್ಕೆ ಏಳೋ ಎಂಟೋ ಸಿನಿಮಾ ಮಾಡಿ ಅವಾರ್ಡ್ ತಗೋತಾರೆ. ಅವರಿಂದ ಇಂಡಸ್ಟ್ರಿ ಉಳಿಯುತ್ತಾ ಸಾರ್.. ವರ್ಷಕ್ಕೆ ನೂರು ಸಿನಿಮಾ ಬಂದ್ರೇನೇ ಕರ್ನಾಟಕದಲ್ಲಿ ಥೇಟರುಗಳಿಗೆ ಸಿನಿಮಾ ಸಿಗೋದು. ಅಷ್ಟು ಸಿನಿಮಾ ಕೊಡ್ತಾರಂತಾ ಸಂಸ್ಕೃತಿ ಉಳಿಸೋರು. ಆ ಥೇಟರುಗಳನ್ನೆಲ್ಲ ಮುಚ್ಚಿಬಿಟ್ರೆ ಅಲ್ಲಿಗೆ ಇಂಡಸ್ಟ್ರೀನೇ ಬಂದ್ ಆದ ಹಾಗೆ ಅಲ್ವಾ. ಬರೀ ಮಾತಾಡ್ತಾರೆ ಸಾರ್.. ಇವರಿಗೆ ಲಾಜಿಕ್ಕು ಎಕನಾಮಿಕ್ಸು ಗೊತ್ತಿಲ್ಲ.

`ನೀವು ಬರೀ ಲೆಕ್ಕಾಚಾರದ ಮಾತಾಡ್ತಿದ್ದೀರಿ. ದುಡ್ಡು ಮಾಡ್ಕೊಳ್ಳೋದು ಬಿಟ್ಟು ಬೇರೆ ಯಾವ ಉದ್ದೇಶವೂ ನಿಮಗೆ ಇರೋ ಥರ ಕಾಣಿಸ್ತಿಲ್ಲ’

ನಮ್ಮಪ್ಪನಾಣೆಗೂ ಇಲ್ಲ ಸಾರ್. ಹಾಕಿದ ಕಾಸು ವಾಪಸ್ ಬರಬೇಕು. ನಾಲ್ಕು ಕಾಸು ಸಂಪಾದನೆ ಮಾಡಬೇಕು. ಯಾವೋನು ಸಾರ್ ದುಡ್ಡು ಬೇಡ ಅಂತಾನೆ. ನೀವು ಪೇಪರಿನೋರು ಲಾಸ್ ಮಾಡ್ಕೊಂಡು ಪೇಪರ್ ಮಾರ್ತೀರಾ.. ಸಂಸ್ಕೃತಿ ಕಲೆ ಕಾಪಾಡೋದಕ್ಕೆ ಸರ್ಕಾರ ಇದೆ ಸಾರ್.. ಅವರು ಮಾಡ್ಕೊಳ್ಳಿ ಬಿಡಿ.

`ಅಂದ್ರೆ ನಿಮ್ಮ ಸಿಟ್ಟಿರೋದು ಹೀರೋಗಳ ಮೇಲೆ?’

ಅವರು ನೆಟ್ಟಗಿದ್ರೆ ಎಲ್ಲರೂ ನೆಟ್ಟಗಿರ್ತಾರೆ ಸರ್. ನಾನು ಕಷ್ಟಪಟ್ಟು ಕೋಟಿ ಕೋಟಿ ಖರ್ಚು ಮಾಡಿ ಒಳ್ಳೇ ಸಿನಿಮಾ ಮಾಡ್ತೀನಿ ಅಂತಿಟ್ಕೊಳ್ಳಿ. ಯಾರು ನನ್ನ ನೆನಪಿಟ್ಕೋತಾರೆ. ಎಲ್ಲರಿಗೂ ಹೀರೋ ತಾನೇ ಬೇಕು. ನೀವೂ ಅವರದ್ದೇ ಇಂಟರ್ ವ್ಯೂ ಮಾಡ್ತೀರಿ.. ನನ್ನನ್ನು ಕೇಳೋರಿರಲ್ಲ. ದುಡ್ಡಾದ್ರೂ ಮಾಡ್ಕೋತೀನಿ ನಾನು.. ಈ ವಯಸ್ಸಲ್ಲಿ ನಾನು ಇಟ್ಟಿಗೆ ವ್ಯಾಪಾರ ಮಾಡಕ್ಕಾಗುತ್ತಾ ಸಾರ್.. ಸಿನಿಮಾನೇ ಮಾಡಬೇಕು.. ನಮಗೆ ಅವಾರ್ಡಂತೂ ಬರಲ್ಲ. ರಿವಾರ್ಡಾದ್ರೂ ಬರ್ಲಿ ಸಾರ್..

`ಜನಾನೂ ನಿಮ್ಮ ಕೈಬಿಟ್ಟಿದ್ದಾರಲ್ಲ. ಕನ್ನಡ ಸಿನಿಮಾ ಅಂದ್ರೆ ತಿರುಗಿಯೂ ನೋಡಲ್ಲ. ನಿಮಗೆ ಭವಿಷ್ಯ ಇದ್ಯಾ?

ಅದಕ್ಕೇ ನನ್ನ ಮಗನನ್ನು ಜಿಮ್ಮಿಗೆ ಕಳಿಸ್ತಿದ್ದೀನಿ ಸಾರ್. ಅವನನ್ನು ಹಾಕ್ಕೊಂಡು ಒಂದು ಸಿನಿಮಾ ಮಾಡ್ತೀನಿ. ಅವನು ಹೀರೋ ಆದ ಮೇಲೆ ನಾನೂ ತೋರಿಸ್ತೀನಿ ಸಾರ್. ಒಂದು ಸಿನಿಮಾಕ್ಕೆ ಎರಡು ಕೋಟಿ ದುಡೀಬೇಕು ಅವನು.. ಹೇಳಿದ್ದೀನಿ ಸಾರ್ ಅವನಿಗೆ.. ಯಾವುದಕ್ಕೂ ಅವನ ಫಸ್ಟ್ ಪಿಲ್ಮ್ ಬರ್ಲಿ ಸಾರ್.

`ಡಬ್ಬಿಂಗು ಬಂದ್ರೆ ನಿಮ್ಮ ಮಗನಿಗೆ ಚಾನ್ಸ್ ಇಲ್ಲದ ಹಾಗಾಗೋಲ್ವಾ’

ಡಬ್ಬಿಂಗು ಜಾಸ್ತಿ ದಿನ ನಡ್ಯಲ್ಲ ಸಾರ್.. ಈ ಹೀರೋಗಳ ಕೊಬ್ಬಿಳಿಸೋದಕ್ಕೆ ಅಷ್ಟೇ ಅದು.. ರಜನೀಕಾಂತ್, ಚಿರಂಜೀವಿ ಕನ್ನಡ ಮಾತಾಡಿದ್ರೆ ಯಾರು ಸಾರ್ ಕೇಳ್ತಾರೆ. ಟೈಟಾನಿಕ್ ಹಿಂದಿ ವರ್ಷನ್ ಬಂತು, ಎಷ್ಟು ಜನ ನೋಡಿದ್ರು ಸಾರ್.. ತಮಿಳು ಸಿನಿಮಾದ ಹಾಡುಗಳನ್ನೆಲ್ಲ ಕನ್ನಡದಲ್ಲಿ ಕೊಡೋಕ್ಕಾಗುತ್ತಾ ಸಾರ್..

ಇನ್ನು ಪ್ರಶ್ನಿಸುವುದು ಅನಗತ್ಯ ಎಂದುಕೊಂಡು ಎದ್ದು ಬಂದೆ. ನಿರ್ಮಾಪಕರು ಗಡ್ಡ ತುರಿಸಿಕೊಳ್ಳುತ್ತಾ ಕಾರು ಹತ್ತಿ ಹೊರಟುಹೋದರು. ನಮ್ಮ ಮಾತುಕತೆಯನ್ನು ಕೇಳುತ್ತಾ ಕೂತಿದ್ದ ಹಿರಿಯರೊಬ್ಬರು ಡಬ್ಬಿಂಗ್ ಅಂದ್ರೇನು ಎಂದು ಕುತೂಹಲದಿಂದ ಕೇಳಿದರು.

ನಾನು ಡಬ್ಬಿಂಗ್ ಅಂದರೇನು, ರೀಮೇಕು ಅಂದರೇನು, ರೀಮಿಕ್ಸ್ ಎಂದರೇನು ಎಂದು ಅವರಿಗೆ ತಿಳಿಸಿಹೇಳುವುದು ಹೇಗೆಂದು ಯೋಚಿಸುತ್ತಾ ಕೂತೆ.

‍ಲೇಖಕರು G

3 June, 2011

8 Comments

  1. Harsha

    ಡಬ್ಬಿಂಗ್ ಬಂಡವಾಳ ಏನು ಅಂತ ತುಂಬಾ ಚೆನ್ನಾಗಿ ಹೇಳಿದಾರೆ ಬಂಡವಾಳಿಗ ನಿರ್ಮಾಪಕರು… ಇಲ್ಲಿ ಹೆಗಾಗಿದೆ ಅಂದರೆ ಡಬ್ಬಿಂಗ್ ಬೇಡ ಅನ್ನೋ ಒಂದು ಬಂಡವಾಳಿಗರ ಲಾಭಿ, ಬೇಕು ಅನ್ನೋ ಬಂಡವಾಳಿಗರ ಮತ್ತೊಂದು ಲಾಭಿ.. ಇವರ ನಡುವೆ ಬೇಕು..ಬೇಡ.. ಬೇಕು… ಬೇಡ.. ಎನ್ನುತ್ತಿರುವ ನಾವುಗಳು…ಯಾರ ವಾದ ಗೆದ್ದರೂ ಲಾಭವಾಗೋದು ಮಾತ್ರ ಅವರಿಗೇ…

  2. sandhya

    eloo vaachyavaagade vidambaneyannu torisutte! ‘Like’!

  3. vijaykumar. A. G.

    ಕನ್ನಡ ಕುರಿತು ಅಭಿಮಾನ ತೋರಿಸೊಕ್ಕೆ ಇರುವ ದಾರಿ ಸಿನಿಮಾ ಒಂದೇ ನಾ ಸಾರ್. ಕನ್ನಡ ಭಾಷೆ ಸಿನಿಮಾ ಮೂಲಕ ತುಂಬಾ ಜನಾನಾ ಮುಟ್ಟತ್ತೆ ಇದು ಒಪ್ಪೋಣ. ಹಾಗಂತಾ ಬೇರೆ ಭಾಷೆಗಳಿಗೆ ಅವಕಾಶ ಕೊಡದು ತಪ್ಪಾ ಸಾರ್. ಅಷ್ಟಕ್ಕೂ ಕನ್ನಡದಲ್ಲಿ ಬರುತ್ತಿರುವ ಚಿತ್ರಗಳು 2 ಅಥವಾ 3 ಹಿಂದಿ ಇಂಗ್ಲೀಷ ಚಿತ್ರಗಳ ಮಿಶ್ರಣವೇ ಅಲ್ಲವೆ.

  4. H ShivaRam

    “ಕನ್ನಡ ಚಿತ್ರರಂಗದ ಮೇಲೆ ಬುದ್ಧಿವಂತ ಪ್ರೇಕ್ಷಕರಿಗೆ ಎಂಥ ಅಸಹನೆ ಇದೆ ಎನ್ನುವುದು ಗೊತ್ತಾಗಬೇಕಿದ್ದರೆ ನೀವು ಅವರ ಜೊತೆ ವಾದಕ್ಕಿಳಿಯಬೇಕು. ಬಹುಶಃ ಎಲ್ಲಾ ನಿರ್ಮಾಪಕರೂ ನಿರ್ದೇಶಕರೂ ನಟರೂ ಪ್ರೇಕ್ಷಕನಿಗೆ ತನ್ನದೇ ಆದ ಸಂವೇದನೆ ಇದೆ ಅನ್ನುವುದನ್ನು ಮರೆತುಬಿಟ್ಟಂತಿದೆ. ಅಥವಾ ತಾವು ಮಾಡಿದ್ದನ್ನು ಪ್ರೇಕ್ಷಕ ನೋಡಬೇಕು, ನೋಡುತ್ತಾನೆ ಎಂದು ಭಾವಿಸಿದಂತಿದೆ……ಕತೆಹೇಳುವ ಕಲೆಯಾಗಲಿ ಗೊತ್ತಿಲ್ಲದ ನಿರ್ದೇಶಕರ ಕೈಲಿ ಸಿನಿಮಾ ಮಾಡಿಸುತ್ತಾ, ಸದಾ ಗೊಣಗಾಡುತ್ತಾ, ಪತ್ರಿಕಾಗೋಷ್ಠಿಗಳಲ್ಲಿ ಅದದೇ ಮಾತಾಡುತ್ತಾ ದಿನೇ ದಿನೇ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ….”

    ಜೋಗಿಯವರೇ, ನಿಮ್ಮ ಮಾತು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಕನ್ನಡದಲ್ಲಿ ಟಿ.ವಿ.ಧಾರಾವಾಹಿಗಳಿಗೂ ಅನ್ವಯಿಸುತ್ತದೆ. ಕೆಲವು ಧಾರಾವಾಹಿಗಳು ಅದೆಷ್ಟು ಅಸಹನೀಯವಾಗಿರುತ್ತವೆಯೆಂದರೆ, ಇವರೇನು ಕಥೆ, ಚಿತ್ರ ಕಥೆ ಬರೆಯದೇನೆ ಸ್ಟಾಟ್ ನಲ್ಲಿ ಅವರ ಮನಸೋ ಇಚ್ಛೆ ಸೀನ್ ಕ್ರಿಯೇಟ್ ಮಾಡಿ ಷೂಟಿಂಗ್ ಮಾಡ್ತಾರೆ ಅನ್ನಿಸದೇ ಇರೋದಿಲ್ಲ. ನಿರ್ಮಾಪಕ ಮತ್ತು ನಿರ್ದೇಶಕ ರಿಗೆ ತಾವು ಮಾಡಿದ್ದೇ ಸರಿ ಪ್ರೇಕ್ಷಕ ನೋಡ್ತಾನೆ;ನೋಡಲೇ ಬೇಕು (ಹಾಗೇ ನೋಡ್ತಾ ಕುಳಿತಲ್ಲೇ ಗೊಣಗುತ್ತಾನೆ; ಅಯ್ಯೋ ಕನ್ನಡಕ್ಕೆ ಎಂಥ ಗತಿ ಬಂತೂ ಅಂತ).
    ಮೊನ್ನೆ ಇಲ್ಲೇ ಪ್ರಾಕಾಶ್ ನಗರಕ್ಕೆ ಹೋದಾಗ ರಸ್ತೆ ಮಧ್ಯೆ ಡಾ|| ರಾಜ್ ಕುಮಾರ್ ಅವರ ದೊಡ್ಡ ಕಟ್ ಔಟ್ ನೋಡಿದೆ. ಅದರ ಅಡಿ ಬರಹ- “ಡಾ|| ರಾಜ್ ಮತ್ತೆ ಹುಟ್ಟಿ ಬಾ”
    ಆಗ ಅನ್ನಿಸಿದ್ದು- “ಡಾ|| ರಾಜ್ ಹುಟ್ಟಿ ಬಾ; ಬರುವುದೇ ಆದರೆ
    ಅಂದಿನ ಭಾವನೆಗಳನ್ನೇ ಕಟ್ಟಿ ತಾ”

  5. nagaraj

    *ವಿಜಯಕುಮಾರ ಸರ್, ಎನ ಸಾರ್ ಕನ್ನಡಿಗರಾಗಿ ನಾವೇ ನಮ್ಮ ಭಾಷೇಯ ಬಗ್ಗೆ ಈ ರೀತಿಯ ತಾತ್ಸಾರ ಬಾವ ತಳಿದರೆ ಹೇಗೆ ಸಾರ್, ನಿವು ಉದಾಹರಣೆಗೆ ಮಲಯಾಳಿ ಚಿತ್ರೋದ್ಯಮವನ್ನೆ ತೆಗೆದುಕೊಳ್ಳಿ, ಅಲ್ಲಿ ನಮಗಿಂತಾ ತಮಿಳು, ತೆಲಗು ಚಿತ್ರಗಳೆ ಹೆಚ್ಚು ನೊಡಿದರು ಮಲಯಾಳಿ ಚಿತ್ರಗಳು ಯಾಕೆ ಓಡುತ್ತವೆಗೊರತ್ತಾ, ಆ ಜನರಿಗೆ ತಮ್ಮ ಭಾಷೇಯ ಬಗ್ಗೆ ಇರುವ ಅಭಿಮಾನ. ನನ್ನಗೆ ಅನಿಸುತ್ತೆ ಈ ವಿಷಯದಲ್ಲಿ ಕನ್ನಡಿಗರು ಸಲ್ಪ ಹಿಂದೆ ಅನಿಸುತ್ತೆ, ಇಲ್ಲವಾದರೆ ಕನ್ನಡ ಚಿತ್ರರಂಗಕ್ಕೆ ಈ ದಿನಗಳು ಬರತಿರಲಿಲ್ಲ.
    ಸಿರಿಕನ್ನಡಂ ಗೆಲ್ಗೆ.

  6. ಅಜಯ

    ಡಬ್ಬಿಂಗ್ ಬೇಕು ಕನ್ನಡಕ್ಕೆ. ತಾವು ಮಾಡಿದ್ದಷ್ಟನ್ನೇ ನೋಡಬೇಕು ಜನ ಅನ್ನಲು ಈ ಸಿನೆಮಾ ಮಂದಿಗೆ ಏನು ಅಧಿಕಾರವಿದೆ? ಎಲ್ಲವೂ ಕನ್ನಡದಲ್ಲಿ ಸಿಗುವಂತಾಗಬೇಕು. ಕನ್ನಡದಲ್ಲಿ ಸೆವೆನ್ ಸಮುರಾಯ್ಸ್ ತರದ ಚಿತ್ರ ಮಾಡಕ್ಕಾಗತ್ತ ನಿಮ್ ಕೈಲಿ? ಆಗಲ್ಲ ಅಲ್ವ? ಆದರೆ ನಮಗೆ ಅದನ್ನ ನೋಡಬೇಕು, ಅದಕ್ಕೆ ಜಪಾನಿ ಭಾಷೆ ಕಲಿಯಕ್ಕಾಗಲ್ಲ. ಈಗ ಎರಡೇ ಆಯ್ಕೆ ಇರುವುದು ಸದ್ಯಕ್ಕೆ- ನಮ್ಮ ಪ್ರೇಕ್ಷಕರು ಪೈರೇಟ್ಸ್ ಆಪ್ಹ್ ದಿ ಕೆರಿಬಿಯನ್ ಚಿತ್ರವನ್ನು ಇಂಗ್ಲೀಷಲ್ಲಿ ನೋಡಬೇಕು , ಇಲ್ಲ ನೋಡಲೇ ಬಾರದು! ಅದನ್ನ ಕನ್ನಡಕ್ಕೆ ಡಬ್ ಮಾಡ್ಬೇಕು. ಇಷ್ಟ ಇದ್ದೋರು ನೋಡ್ತಾರೆ. ಹಂಗೆ ಎಲ್ಲ ಭಾಷೆಗಳದ್ದೂ ಕನ್ನಡಕ್ಕೆ ಡಬ್ ಆಗ್ಬೇಕು. ಏನು ಬೇಕು ಅಂತ ನಿರ್ಧರಿಸೋದು ಕನ್ನಡ ಪ್ರೇಕ್ಷಕನಿಂದ ಆಗಬೇಕು. ಅದು ಅವನ ಹಕ್ಕು. ಅದನ್ನ ಬೇಡ ಅನ್ನಲು ಈ ಸಿನೆಮಾ ಸೋಗಿನ ಸಂಸ್ಕೃತಿ ರಕ್ಷಕರು ಯಾರು? ಡಬ್ಬಿಂಗ್ ಬಂದರೆ ಮೂಲ ಕನ್ನಡ ಚಿತ್ರಗಳ ತಯಾರಿಕೆ ಏನೂ ನಿಲ್ಲುವುದಿಲ್ಲ, ಡಬ್ಬಿಂಗ್ ಪರ್ಯಾಯ ಉದ್ಯಮವಾಗಿ ಬೆಳೆಯುತ್ತದೆ, ಇನ್ನೂ ಬಹಳ ಜನಕ್ಕೆ ಕೆಲಸ ಸಿಗುತ್ತದೆ. ಈಗ ಕರ್ನಾಟಕದಲ್ಲಿ ಪ್ರದರ್ಶನ ಆಗ್ತಾ ಇರುವ ಬೇರೆ ಭಾಷೆ ಸಿನೆಮಾಗಳನ್ನು ನೋಡಿ ನೋಡಿ ಜನ ಆ ಭಾಷೆಗಳನ್ನೇ ಕಲಿಯುತ್ತಿದ್ದಾರೆ. ಅವೆಲ್ಲ ಡಬ್ ಆಗಿ ಬಂದ್ರೆ ಎಲ್ಲಾ ಟಾಕೀಸುಗಳೂ ಕನ್ನಡ ಚಿತ್ರಕ್ಕೆ (ಕನ್ನಡ ಮತ್ತು ಡಬ್ ಕನ್ನಡ) ದೊರೆಯುತ್ತವೆ. ಕನ್ನಡಿಗರು ಕನ್ನಡದಲ್ಲೇ ಎಲ್ಲ ನೋಡಬಹುದು. ಕನ್ನಡಿಗರಿಗೆ ಸಿನೆಮಾ ಚೆನ್ನಾಗಿ ಅನ್ನಿಸಿದರೆ ಗೆಲ್ಲುತ್ತದೆ, ಇಲ್ಲಾಂದ್ರೆ ಹೋಗುತ್ತದೆ. ಕನ್ನಡ ಮಾತ್ರ ಉಳಿಯುತ್ತದೆ. ಬೆಳೆಯುತ್ತದೆ.

  7. Arvind Subbanna

    I lEKanakkAgi shrI jOgiyavarige DhanyavAdhagaLu.

    dabbimg chithragaLu bEku maththu bEda annuththiruvavara maDhye kannada prEkShaka bEre bhASheya oLLE chithragaLannu thanna bhASheyalli nOduvudharimdha vamchithanaaguththidhdhaane. I jagaLa kannada chithra ramgakke kuTAra prAya.

  8. ಸುರೇಶ್ ಕೆ.

    ಹ ಹ ಹ!!! ಸೂರಪ್ಪಬಾಬು ಎಂಬ ಮಹಾನ್ ನಿರ್ಮಾಪಕನ ಜೊತೆಗಿನ ಅಣಕು ಸಂದರ್ಶನದಂತಿದೆ ಸರ್ ಬರಹ! ಸೂಪರ್!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading