ನಾಟಕ ರದ್ದು: ಏನಾಗುತ್ತಿದೆ?

ನಾ ದಿವಾಕರ

ಶಿವಮೊಗ್ಗದ ಅನವಟ್ಟಿಯಲ್ಲಿ ಪ್ರದರ್ಶನವಾಗುತ್ತಿದ್ದ ಜಯಂತ್ ಕಾಯ್ಕಿಣಿ ಅವರಿಂದ ರೂಪಾಂತರಿಸಲ್ಪಟ್ಡ “ಜತೆಗಿರುವನು ಚಂದಿರ” ನಾಟಕ ಪ್ರದರ್ಶನ ಕೆಲವು ಬಲಪಂಥೀಯ ಸಂಘಟನೆಗಳ ವಿರೋಧದ ಕಾರಣ ರದ್ದಾಗಿದೆ. ಒಂದು ನಾಟಕವನ್ನೂ ಸಹಿಸಿಕೊಳ್ಳದ ಹಂತಕ್ಕೆ ನಮ್ಮ ಸಮಾಜ ತಲುಪಿದೆ. ಈ ನಾಟಕವನ್ನು ವಿರೋಧಿಸುವವರ ಕಾರಣಗಳೇನೇ ಇರಲಿ, ರಾಜ್ಯದಲ್ಲಿ ಒಂದು ಸಂಸ್ಕೃತಿ ಇಲಾಖೆ, ಪೊಲೀಸ್ ವ್ಯವಸ್ಥೆ, ಸಂಸ್ಕೃತಿ ಸಚಿವಾಲಯ, ಗೃಹ ಸಚಿವಾಲಯ ಇವೆಲ್ಲವೂ ಇರಬೇಕಲ್ಲವೇ ? ನಾಟಕದ ವಸ್ತು ಮತ್ತು ಕಥಾ ಹಂದರ ವಿರೋಧಕ್ಕೆ ಕಾರಣವಾದರೆ ಅಡ್ಡಿಯಿಲ್ಲ ಅದು ನೋಡುಗರ ಅಭಿಪ್ರಾಯ. ಆದರೆ ಪ್ರದರ್ಶನವಾಗುತ್ತಿರುವ ನಾಟಕವನ್ನು ನಿಲ್ಲಿಸುವುದು ಸೃಜನಶೀಲತೆಯ‌ಮೇಲಿನ ದಾಳಿ. ನಾಟಕಕಾರರು, ಕಲಾವಿದರು, ನಿರ್ದೇಶಕರು, ರಂಗಭೂಮಿಯ ನಿರ್ವಾಹಕರು ಮತ್ತು ಸಾಹಿತಿಗಳೂ ಯೋಚಿಸಬೇಕಾದ ವಿಚಾರ ಇದು.

ಒಂದು ನಾಟಕ ಪ್ರದರ್ಶನ, ಕಾವ್ಯ ಕಮ್ಮಟ, ಕವಿಗೋಷ್ಟಿ, ಸಾಹಿತ್ಯ ಸಂವಾದ ಇವೆಲ್ಲವೂ ಕೆಲವೇ ಸಂಘಟನೆಗಳ‌ ಮೂಲಕ ಸೆನ್ಸಾರ್ ಷಿಪ್ ಗೆ ಒಳಗಾಗುವಂತಹ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿದೆ. ನಾಟಕ ಮತ್ತು ಸೃಜನಶೀಲ ಕಲೆಯನ್ನೇ ಉಸಿರಾಡುವ ಪಂಥಾತೀತರೂ ಸಹ ಇಂತಹ ಬೆಳವಣಿಗೆಗಳನ್ನು ಗಮನಿಸಬೇಕು. ಇಂದು ಕಾಯ್ಕಿಣಿ, ನಾಳೆ ಕಾರ್ನಾಡ್ ಮತ್ತೊಂದು ದಿನ ಕಾರಂತರು. ನಾಟಕ ಅಥವಾ ಮತ್ತಾವುದೇ ಕಲಾ ಪ್ರಕಾರಗಳು ಬೆಳೆಯುವುದೇ ಸೃಜನಶೀಲ ಪ್ರಯೋಗಗಳ ಮೂಲಕ. ನಿನ್ನೆಯೇ ಇಹಲೋಕ ತ್ಯಜಿಸಿದ ವಿಶ್ವವಿಖ್ಯಾತ ರಂಗಭೂಮಿ ನಿರ್ದೇಶಕ ಪೀಟರ್ ಬ್ರೂಕ್ಸ್ ಮುಂತಾದ ಮಹನೀಯರು, ಭಾರತದ ನೆಲದಲ್ಲೇ, ಭಾರತೀಯ ಸಂಸ್ಕೃತಿಯ ಚೌಕಟ್ಟಿನಲ್ಲೇ ಇದನ್ನು ನಿರೂಪಿಸಿದ್ದಾರೆ. ನಾಟಕ ದೃಶ್ಯಕಲೆ, ಕಾದಂಬರಿ-ಕಾವ್ಯ ಅಕ್ಷರ ಕಲೆ, ಸಂಗೀತ ಶ್ರವ್ಯ ಕಲೆ ಈ ಕಲಾ ಪ್ರಕಾರಗಳ ವಿಭಿನ್ನ ಪ್ರಯೋಗಗಳ ಮೂಲಕವೇ ಮನುಜ ಸಮಾಜದ ಬೌದ್ಧಿಕ ವಿಕಾಸ ಸಾಧ್ಯ. ಈ ಕಲಾ ಪ್ರಕಾರಗಳನ್ನು ನಾವು ಬದುಕುವ ಸಮಾಜಕ್ಕೆ‌ ಮುಖಾಮುಖಿಯಾಗಿಸುತ್ತಾ, ಭಿನ್ನ ಭೇದಗಳೊಡನೆ ಅನುಸಂಧಾನ ಮಾಡುತ್ತಾ, ಭಿನ್ನಮತದ ಸೊಬಗನ್ನು ಸವಿಯುತ್ತಲೇ ಜನರ ಮುಂದಿಡುವುದು ಸೃಜನಾತ್ಮಕತೆಯ ಅಂತರಾತ್ಮ ಅಲ್ಲವೇ ?

ಈ ಸೂಕ್ಷ್ಮಗಳ ಅರಿವು ಸೃಜನಶೀಲ ಲೋಕದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಇರಬೇಕು. ಇಲ್ಲಿ ಕೊಂಚ ಎಡವಿದರೂ ಸಮಾಜ ದಿಕ್ಕು ತಪ್ಪುತ್ತದೆ. ಭವಿಷ್ಯದ ಪೀಳಿಗೆ ದಿಕ್ಕುಗೆಡುತ್ತದೆ. ಸಮಾಜದಲ್ಲಿ ನಮ್ಮದೇ ಸ್ವಾರ್ಥ ಬದುಕಿಗಾಗಿ ಕಟ್ಟಿಕೊಂಡ ತಡೆಗೋಡೆಗಳನ್ನು ಭಂಜಿಸುವುದೇ ಸೃಜನಶೀಲ ಸಾಹಿತ್ಯ ಕಲೆಯ ಆದ್ಯತೆ ಮತ್ತು ಅಭಿಲಾಷೆಯಾಗಿರುತ್ತದೆ. ಕನ್ನಡ ಸಾರಸ್ವತ-ಕಲಾ ಜಗತ್ತು ಈ ನಿಟ್ಟಿನಲ್ಲಿ ಮೇರು ಸಾಧನೆ‌ ಮಾಡಿದೆ ಎಂದು ಬೆನ್ನು ತಟ್ಟಿಕೊಳ್ಳಬಹುದು. ನಾವು ನಮ್ಮ ಸ್ವಾರ್ಥತೆಗಾಗಿ ಕಟ್ಟಿಕೊಂಡ ಗೋಡೆಗಳ ತುಣುಕುಗಳನ್ನು ಕಲಾ ಜಗತ್ತಿನ ವೇದಿಕೆಗಳಲ್ಲಿ, ರಂಗಪರದೆಯ ಹಿಂದೆ, ಸಾಹಿತ್ಯದ ಅಕ್ಷರ ಸಮೂಹದ ನಡುವೆ, ಗಾಯನದ ಧ್ವನಿಪೆಟ್ಟಿಗೆಯಲ್ಲಿ ಎಸೆಯುತ್ತಾ ಹೋದರೆ ನಮ್ಮ ಸಮಾಜ ಬಹುಬೇಗನೆ ಪ್ರಾಚೀನತೆಗೆ ಜಾರಿಬಿಡುವ ಸಾಧ್ಯತೆಗಳಿವೆ.

ಸಾಮಾಜಿಕ ಒಳದನಿ, ಸಾಮುದಾಯಿಕ ಅಂತರ್ದನಿ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ ಈ ಮೂರರ ಸಮನ್ವಯದ ಮೂಲಕವೇ ಮನುಜ ಸಮಾಜ ವಿಕಾಸ ಹೊಂದಲು ಸಾಧ್ಯ. ಯಾವುದೇ ಸೃಜನಶೀಲ ಕಲೆಯ ಕತ್ತು ಹಿಸುಕುವುದೆಂದರೆ ಅದು ಸಮಾಜದ ಅಂತರ್ ದೃಷ್ಟಿಯನ್ನು ಹೊಸಕಿಹಾಕಿದಂತೆಯೇ ಸರಿ.

ಶಿವಮೊಗ್ಗದ ಪ್ರಕರಣದಲ್ಲೇ ” ಜತೆಗಿರುವನು ಚಂದಿರ” ನಾಟಕ ನೋಡಲು ರಂಗಾಸಕ್ತರು ಸೇರಿದ್ದರು ಎಂದರೆ ಸಾಮಾನ್ಯ ಜನತೆ ಅದನ್ನು ಆಸ್ವಾದಿಸುತ್ತಾರೆ ಎಂದೇ ಅರ್ಥ ಅಲ್ಲವೇ ? ಜನಸಾಮಾನ್ಯರ ಈ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯದಷ್ಟೇ ಮೌಲಿಕವಾದುದು. ಇದನ್ನು ಕಸಿದುಕೊಳ್ಳುವ ಹಕ್ಕು ಸಾಂವಿಧಾನಿಕ ಪ್ರಜಾತಂತ್ರದಲ್ಲಿ ಸರ್ಕಾರಕ್ಕೂ ಇರುವುದಿಲ್ಲ. ತಮ್ಮ ಸೈದ್ಧಾಂತಿಕ ನಿಷ್ಠೆಯನ್ನು ಬದಿಗಿಟ್ಟು ಸರ್ಕಾರ, ಜನಪ್ರತಿನಿಧಿಗಳು ಯೋಚಿಸಬೇಕಾದ್ದು ಇದು. ಕರ್ನಾಟಕದ ಸಮಸ್ತ ರಂಗಾಸಕ್ತರು, ರಂಗಭೂಮಿಯ ಕಲಾವಿದರು, ಅಕ್ಷರ ಲೋಕದ ಪರಿಚಾರಕರು ಯೋಚಿಸಬೇಕಾದ ವಿಚಾರ ಇದು. ಇಲ್ಲೇನೂ ಎಡ-ಬಲದ ಜಿಜ್ಞಾಸೆ ಕಾಡಬೇಕಿಲ್ಲ.

‍ಲೇಖಕರು Admin

July 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: