
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’
| ಕಳೆದ ಸಂಚಿಕೆಯಿಂದ |
ಟಿಕ್ರಿ ಸರಹದ್ದಿನ ಬಳಿ ಅಂದು ಜನವೋ ಜನ.
ಅದು ಮಾರ್ಚ್-ಎಪ್ರಿಲ್ ೨೦೨೧ ರ ಆಸುಪಾಸು. ಪ್ರಭುತ್ವದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ರೈತರ ದೊಡ್ಡ ಗುಂಪುಗಳು ಟಿಕ್ರಿ ಬಾರ್ಡರಿನಲ್ಲಿ ಸೇರಿದ್ದವು. ಭಾರತವು ಹಿಂದೆಂದೂ ಕಂಡಿರದಿದ್ದ ರಾಷ್ಟ್ರವ್ಯಾಪಿ ರೈತಚಳುವಳಿಯಾಗಿತ್ತದು.
ದಿಲ್ಲಿ, ಹರಿಯಾಣಾ, ಪಂಜಾಬ್ ಮೂಲದ ಸಾವಿರಾರು ರೈತಬಂಧುಗಳು, ಉತ್ತರಭಾರತದ ಹಲವು ಮೂಲೆಗಳಿಂದ ಹೊರಟು ಮಹಾನಗರಿಯಲ್ಲಿ ಚಿಕ್ಕಪುಟ್ಟ ಉದ್ಯೋಗಗಳನ್ನು ಹೊಟ್ಟೆಪಾಡಿಗಾಗಿ ಹಿಡಿದಿದ್ದ ಜನಸಾಮಾನ್ಯರು, ರೈತರ ಪರವಾಗಿ ದನಿಯೆತ್ತಿದ್ದ ಹಲವು ಕ್ಷೇತ್ರಗಳ ಆಸಕ್ತರು… ಹೀಗೆ ರೈತರ ಪರವಾಗಿ ಸಂಘಟಿತರಾಗಿ ದನಿಯೆತ್ತಿದ್ದ ಮಂದಿಗಳು ಹಲವಾರು. ಆದರೆ ಪ್ರಭುತ್ವ ಮತ್ತು ಪ್ರಭುತ್ವದ ಹಂಗಿನಲ್ಲಿದ್ದ ಬಹುತೇಕ ಮಾಧ್ಯಮಗಳು ಮಾತ್ರ ಜಾಣಕುರುಡಿನ ಕಳ್ಳಹಾದಿ ಹಿಡಿದು ಬೆಚ್ಚಗಿದ್ದವು. ಈ ದೇಶದ ಪಾಲಿಗೆ ಇದೊಂದು ಸದಾ ನೆನಪಿನಲ್ಲುಳಿಯಲಿರುವ ವಿಚಿತ್ರ ಘಟ್ಟ.
ಟಿಕ್ರಿಯಲ್ಲಿದ್ದ ರೈತರ ಆ ಗುಂಪಿನಲ್ಲೇ ಸಾಂಸ್ಕೃತಿಕ ತಂಡವೊಂದು ‘ಇಂಕಿಲಾಬಿ ಗಿದ್ದಾ’ ಎಂದು ಕ್ರಾಂತಿಯ ಗೀತೆಗಳನ್ನು ಹಾಡುತ್ತಿತ್ತು. ಅದು ನೂರು ಪ್ರತಿಶತ ಯುವಜನರನ್ನೇ ಹೊಂದಿದ್ದ ಭಾಂಗ್ರಾ ಅರೀನಾ ತಂಡ. ಹಾಗೆ ನೋಡಿದರೆ ಭಾಂಗ್ರಾ ಅರೀನಾ ತಂಡದಲ್ಲಿರುವ ಅನೇಕ ಮಂದಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿ, ಸಿರಿವಂತರಿಗೆ ಮಹಾನಗರಿಯು ನೀಡುವ ವಿಲಾಸಗಳನ್ನು ಸವಿಯುತ್ತಾ, ತಮ್ಮದೇ ಆದ ಖಾಸಗಿ ಉದ್ಯಮಗಳನ್ನು ನಿಭಾಯಿಸುತ್ತಾ ಹಾಯಾಗಿರುವವರು. ತಮಗೂ, ರೈತಚಳುವಳಿಗೂ ಸಂಬಂಧವೇ ಇಲ್ಲವೆಂಬಂತೆ ಸಮಾಜದ ದೊಡ್ಡ ಪ್ರಮಾಣದ ವರ್ಗದಂತೆ ಇವರೂ ಹಾಯಾಗಿರಬಹುದಿತ್ತು. ಆದರೆ ಹಾಗಾಗಲಿಲ್ಲ. ಭಾಂಗ್ರಾ ಅರೀನಾದ ಪಾಲಿಗೆ ಅದು ರೈತರಿಂದ ದಕ್ಕಿದ್ದ ಅನ್ನದ ಋಣವನ್ನು ತೀರಿಸುವ ಕ್ಷಣ. ಅರೀನಾ ಸಾಂಸ್ಕೃತಿಕ ತಂಡವು ಇದನ್ನು ಯಶಸ್ವಿಯಾಗಿ ನಿಭಾಯಿಸಿತು ಕೂಡ.

ಈ ದೇಶದ ರೈತರು ಮತ್ತು ಗ್ರಾಮೀಣ ಭಾರತದ ಬದುಕಿನ ಬಗ್ಗೆ ಅರಿವೇ ಇಲ್ಲದ, ಲೈಕ್-ಕಾಮೆಂಟ್ಸ್-ಫಾಲೋವಿಂಗ್-ಫಿಲ್ಟರ್ ಹೆಸರಿನಲ್ಲಿ ಡಿಜಿಟಲ್ ದುನಿಯಾದಲ್ಲೇ ಮೈಮರೆತಿರುವ, ಮಿಲೇನಿಯಲ್ ನಶೆಗಳು ಮತ್ತು ತಾಪತ್ರಯಗಳಲ್ಲಿ ಕಳೆದುಹೋಗಿರುವ ‘ಯಂಗೆಸ್ಟ್ ನೇಶನ್’ ಭಾರತದ ದೊಡ್ಡ ಪ್ರಮಾಣದ ಯುವಶಕ್ತಿಗೆ ರೈತ ಚಳುವಳಿಯು ಒಂದು ಟ್ರೆಂಡಿಂಗ್ ಟಾಪಿಕ್ ಆಗಿ ಕಂಡಿತ್ತೇ ಹೊರತು, ಸರಕಾರವನ್ನೇ ನಡುಗಿಸಬಲ್ಲ ಕ್ರಾಂತಿಯಂತಲ್ಲ. ಪರಿಸ್ಥಿತಿಯು ಹೀಗಿದ್ದಾಗ ಭಾಂಗ್ರಾ ಅರೀನಾ ತಂಡವು ಖುದ್ದಾಗಿ ಯುವಜನರನ್ನು ಸಂಘಟಿಸಿ, ಟಿಕ್ರಿ ಸರಹದ್ದಿನವರೆಗೆ ಕರೆದೊಯ್ದು, ತನ್ನದೇ ಮಾಧ್ಯಮವಾದ ಹಾಡು-ನೃತ್ಯಗಳ ಮೂಲಕ ರೈತರ ಅಹವಾಲನ್ನು ಗಟ್ಟಿದನಿಯಲ್ಲಿ ಎತ್ತಿದ್ದು ಚಿಕ್ಕ ಸಂಗತಿಯೇನಲ್ಲ.
ಆಳುತ್ತಿರುವ ಸರಕಾರಕ್ಕೆ ಅರೀನಾ ತಂಡದ ಸದಸ್ಯರೇ ಬರೆದಿದ್ದ ಆ ಪಂಜಾಬಿ ಹಾಡು ಯಾವ ಮುಲಾಜೂ ಇಲ್ಲದೆ ಚಾಟಿಯೇಟನ್ನು ಬೀಸುತ್ತಿತ್ತು. ಜೊತೆಗೆ ಪ್ರಭುತ್ವದ ಬೂಟು ನೆಕ್ಕುತ್ತಿರುವ ಹಲವು ಮಾಧ್ಯಮಗಳಿಗೂ ಕೂಡ. ಆ ಹಾಡು ಪಂಜಾಬ್-ಹರಿಯಾಣಾದ ಬಾಂಧವ್ಯವನ್ನು ಸಾರುತ್ತಿತ್ತು. ರೈತರ ಏಕತೆಯನ್ನು ಪ್ರತಿಧ್ವನಿಸುತ್ತಿತ್ತು. ವಿಶೇಷವೆಂದರೆ ಆ ಹಾಡು ಪಂಜಾಬ್ ಮತ್ತು ಹರಿಯಾಣಾದ ರೈತರ ಹಿತಾಸಕ್ತಿಗಷ್ಟೇ ಸೀಮಿತವಾಗಿರಲಿಲ್ಲ. ಬದಲಾಗಿ ಅದು ದೇಶದೆಲ್ಲೆಡೆ ಹರಡಿಕೊಂಡಿದ್ದ ರೈತರ ಒಟ್ಟಾರೆ ಆಕ್ರೋಶದ ದನಿಯಾಗಿ ಹೊರಹೊಮ್ಮಿತ್ತು.
ಸಾಲದ್ದೆಂಬಂತೆ ಇಂಕಿಲಾಬಿ ಗಿದ್ದಾ ಹಾಡಿನ ಸಾಹಿತ್ಯವು ರೈತಚಳುವಳಿಯು ಆಸುಪಾಸಿನವರ ಜನಜೀವನಕ್ಕೆ ತಂದೊಡ್ಡಿದ್ದ ಚಿಕ್ಕಪುಟ್ಟ ಅಡಚಣೆಗಳ ಬಗ್ಗೆ ದೇಶದ ಜನತೆಯ ಬಳಿ ಕ್ಷಮೆಯನ್ನೂ ಕೋರುತ್ತಿತ್ತು. ದಿಲ್ಲಿಯ ಅಮಾನುಷ ಚಳಿಯನ್ನು ಲೆಕ್ಕಿಸದೆ, ನಗರದ ಬೀದಿಯಲ್ಲಿ ತಿಂಗಳಾನುಗಟ್ಟಲೆ ಕೂತು ತಮ್ಮ ಆಗ್ರಹವನ್ನು ಸರಕಾರದ ಮುಂದಿರಿಸುತ್ತಿದ್ದ ರೈತರ ಸಾಮಾಜಿಕ ಕಳಕಳಿಯನ್ನು ಇದಕ್ಕಿಂತ ಚೆನ್ನಾಗಿ ಕಟ್ಟಿಕೊಡುವುದು ಸಾಧ್ಯವಿಲ್ಲವೇನೋ!
ದಿಲ್ಲಿಯ ಚಿಕ್ಕ ಸಾಂಸ್ಕೃತಿಕ ತಂಡವೊಂದು ತನ್ನ ಪಾಡಿಗೆ ತಾನು ಬೆಚ್ಚಗಿರದೆ, ಪ್ರಸಕ್ತ ವಿದ್ಯಮಾನಗಳನ್ನು ಅರಿತು, ಆಳುವವರ ಮುಂದೆ ಎದೆಯೊಡ್ಡಿ ನಿಲ್ಲುವುದು ಇಂದಿನ ಕಾಲಘಟ್ಟದಲ್ಲಿ ಹುಡುಗಾಟವೇನಲ್ಲ. ಅಂದು ಟಿಕ್ರಿ ಸರಹದ್ದಿನಲ್ಲೇ ವೇದಿಕೆಯೊಂದನ್ನು ಹಾಕಿ ಭಾಂಗ್ರಾ ಅರೀನಾ ತಂಡದವರು ಹಾಡಿದರು, ಕುಣಿದರು. ಇಂಕಿಲಾಬಿ ಗಿದ್ದಾ ಎಂದು ಕ್ರಾಂತಿಗೀತೆಯನ್ನು ಹಾಡಿದರು.

ರೈತಚಳುವಳಿಯ ಬಗ್ಗೆ ತಮ್ಮ ನಿಲುವನ್ನು ಮುಲಾಜಿಲ್ಲದೆ ಸಾರ್ವಜನಿಕವಾಗಿ ಬಹಿರಂಗಪಡಿಸಿದರು. ಕೊನೆಯಲ್ಲಿ ಇಂಕಿಲಾಬಿ ಗಿದ್ದಾ ರೈತರ ಹಾಡಾಗಿ ಉಳಿಯಿತೇ ಹೊರತು ಭಾಂಗ್ರಾ ಅರೀನಾ ಎಂಬ ತಂಡವೊಂದರ ವಿಶೇಷ ಪ್ರಸ್ತುತಿಯಾಗಿ ಅಲ್ಲ. ಅರೀನಾ ತಂಡದ ಸದಸ್ಯರು ನನ್ನಲ್ಲಿ ಖುದ್ದಾಗಿ ಹೇಳುವಂತೆ ಅವರಿಗೆ ಇದಕ್ಕಿಂತ ಧನ್ಯತೆಯ ಸಂಗತಿಯು ಬೇರೊಂದಿಲ್ಲ.
ಅಸಲಿಗೆ ಭಾಂಗ್ರಾ ಎಂಬುದು ಪಂಜಾಬ್ ಮೂಲದ ಜನಪದ ಹಿನ್ನೆಲೆಯುಳ್ಳ ನೃತ್ಯ. ‘ಬಂಗ್ಡಾ’ ಅಥವಾ ‘ಪಂಗ್ಡಾ’ ಎಂದು ಸಾಮಾನ್ಯವಾಗಿ ಆಡುಭಾಷೆಯಲ್ಲಿ ಕರೆಯಲ್ಪಡುವ ಪ್ರಕಾರ. ಸಂಕ್ರಾಂತಿ ಹಬ್ಬದ ನೆಪದಲ್ಲಿ ರೈತರು ಲವಲವಿಕೆಯಿಂದ ಹಾಡುತ್ತಾ, ಜೋಳದ ರೊಟ್ಟಿ-ಸಾಸಿವೆ ಸೊಪ್ಪಿನ ಸಾರು (ಮಕ್ಕೀ ದೀ ರೋಟಿ-ಸರ್ಸೋ ದಾ ಸಾಗ್) ಸವಿಯುತ್ತಾ ಭಾಂಗ್ರಾ ಕುಣಿಯುತ್ತಾರೆ. ತಮ್ಮದೇ ಕಷ್ಟಸುಖಗಳ ಬಗ್ಗೆ, ದೈನಂದಿನ ಚಟುವಟಿಕೆಗಳ ಬಗ್ಗೆ, ಭರವಸೆ-ನಿರೀಕ್ಷೆಗಳ ಬಗ್ಗೆ ಪದಕಟ್ಟಿ ಹಾಡುತ್ತಾರೆ. ಹೀಗೆ ಹಾಡಿನೊಂದಿಗೆ ಭುಜ ಕುಣಿಸುತ್ತಾ, ತೊಡೆ ತಟ್ಟುತ್ತಾ, ಕೈ-ಕಾಲು ಮೇಲಕ್ಕೆತ್ತುತ್ತಾ ಉತ್ಸಾಹದಿಂದ ಕುಣಿಯಲಾಗುವ ಭಾಂಗ್ರಾ ಮುಖ್ಯವಾಗಿ ಪುರುಷರನ್ನೇ ಕೇಂದ್ರವಾಗಿಟ್ಟುಕೊಂಡಿರುವ ನೃತ್ಯಪ್ರಕಾರ.
ಇನ್ನು ಭಾಂಗ್ರಾಕ್ಕೆ ಪೂರಕವಾಗಿರುವ ಮತ್ತೊಂದು ನೃತ್ಯಪ್ರಕಾರವೆಂದರೆ ಗಿದ್ದಾ. ಇದು ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲು. ಹೆಂಗಳೆಯರ ನಡುವಿನ ಹರಟೆ, ಕೊಂಚ ತಮಾಷೆ, ಛೇಡಿಸುವಿಕೆ, ಮನೆ-ಮಕ್ಕಳು ಕೌಟುಂಬಿಕ ಮಾತುಕತೆಗಳು… ಇತ್ಯಾದಿಗಳೆಲ್ಲಾ ಹೆಂಗಸರು ಕುಣಿಯುವ ಗಿದ್ದಾ ಹಾಡುಗಳ ಸಾಹಿತ್ಯದಲ್ಲಿ ಬರುತ್ತವೆ.
ಭಾಂಗ್ರಾ ಅರೀನಾ ತಂಡವು ಟಿಕ್ರಿ ಗಡಿಯಲ್ಲಿ ಪ್ರದರ್ಶಿಸಿದ್ದ ‘ಇಂಕಿಲಾಬಿ ಗಿದ್ದಾ’ ಪ್ರಸ್ತುತಿಯಲ್ಲಿ ಭಾಂಗ್ರಾ, ಗಿದ್ದಾಗಳೆರಡೂ ಇದ್ದವು. ಪುರುಷ-ಮಹಿಳೆಯರೆಂಬ ಭೇದವಿಲ್ಲದೆ ಕ್ರಾಂತಿಯ ‘ಬೋಲಿಯಾಂ’ (ಹಾಡಿನ ಸಾಲು) ಗಳನ್ನು ಹಾಡುತ್ತಾ, ಭರ್ಜರಿಯಾಗಿ ಕುಣಿಯುತ್ತಾ ಅಂದು ರೈತರ ಪರವಾಗಿ ಅರೀನಾ ತಂಡವು ದನಿಯೆತ್ತಿತ್ತು.
ಕಳೆದ ಒಂದೆರಡು ದಶಕಗಳಲ್ಲಿ ಮುಖ್ಯವಾಹಿನಿಗೆ ಬಂದಿರುವ ಭಾಂಗ್ರಾ ನೃತ್ಯವು ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾಗಿದೆ. ಬಾಲಿವುಡ್ ಸೇರಿದಂತೆ ಹಲವು ಭಾಷೆಗಳ ಮುಖ್ಯವಾಹಿನಿಯ ಚಲನಚಿತ್ರಗಳು ತಮ್ಮ ಹಾಡುಗಳಲ್ಲಿ ಯಥೇಚ್ಛವಾಗಿ ಭಾಂಗ್ರಾ ಶೈಲಿಯನ್ನು ಬಳಸಿವೆ. ‘ಆದರೆ ಇಂದು ನೀವು ಸಾಮಾನ್ಯವಾಗಿ ಕೇಳುವ, ಭಾಂಗ್ರಾ ಎಂಬ ಹೆಸರಿನಲ್ಲಿ ಹಾಡುಗಳಲ್ಲಿ ತುರುಕುವ ಕಸವನ್ನೆಲ್ಲಾ ಭಾಂಗ್ರಾ ಎನ್ನಲಾಗುವುದಿಲ್ಲ’, ಎಂದು ಆಸ್ಟ್ರೇಲಿಯಾದಲ್ಲಿ ಕೂತು ಹೇಳುತ್ತಿದ್ದರು ರವಿಂದರ್ ಸಿಂಗ್.

ಇಂದು ಮುಖ್ಯವಾಹಿನಿಯ ಪಂಜಾಬಿ ಹಾಡುಗಳಲ್ಲಿ ಕಾಣಸಿಗುವ ವಿಪರೀತವೆಂಬಷ್ಟಿನ ಗ್ಲಾಮರ್, ಮದ್ಯ-ಮಾನಿನಿಯರ ಸುತ್ತ ಗಿರಕಿ ಹೊಡೆಯುವ ಹಾಡಿನ ಸಾಹಿತ್ಯ, ಫ್ಯೂಷನ್ ಹೆಸರಿನಲ್ಲಿ ಪಾಶ್ಚಾತ್ಯ ಸಂಗೀತವನ್ನು ಭಾಂಗ್ರಾದೊಂದಿಗೆ ಸೇರಿಸಿ ಸಿದ್ಧಪಡಿಸಿರುವ ಕಲಬೆರಕೆ, ಹಳೆಯ ಮಧುರ ಹಾಡುಗಳನ್ನು ರಿಮಿಕ್ಸ್ ಎನ್ನುತ್ತಾ ಸಲ್ಲದ ತೇಪೆ ಹಾಕಿ ಕರ್ಣಕಠೋರವಾಗಿಸುವ ಪರಿ… ಹೀಗೆ ಹಲವು ಸಂಗತಿಗಳನ್ನು ಕೇಂದ್ರವಾಗಿಟ್ಟುಕೊಂಡೇ ಅಂದು ಸಿಂಗ್ ಸಾಬ್ ನನ್ನೊಂದಿಗೆ ಮಾತಾಡುತ್ತಿದ್ದಿದ್ದು.
ಈ ನಿಟ್ಟಿನಲ್ಲಿ ಭಾಂಗ್ರಾ ಅರೀನಾದ ಗಮನವಿರುವುದು ಶುದ್ಧ ಭಾಂಗ್ರಾದಲ್ಲಿ. ಸಾಂಪ್ರದಾಯಿಕ ವಾದ್ಯಗಳು, ಡೋಲುಗಳು, ಸ್ಥಳೀಯ ಬೋಲಿಯಾಂಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಈ ಮೂಲಕ ಪಂಜಾಬಿ ನೆಲದ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವ ಸದುದ್ದೇಶ ಈ ಮಂದಿಯದ್ದು.
ಭಾಂಗ್ರಾ ಪ್ರಕಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸುವ ಸಲುವಾಗಿ ಜಾಗತಿಕ ಮಟ್ಟದ ಸ್ಪರ್ಧೆಯೊಂದನ್ನು ಆಯೋಜಿಸುವ ಗುರಿಯಿಟ್ಟುಕೊಂಡಿದ್ದ ಅರೀನಾ ತಂಡವು ಅದರಲ್ಲಿ ಯಶಸ್ಸನ್ನು ಗಳಿಸಿತ್ತು. ದಿಲ್ಲಿ, ಗುಜರಾತಿನಿಂದ ಹಿಡಿದು ಕೆನಡಾ ಮತ್ತು ಹಾಂಗ್ ಕಾಂಗ್ ಗಳಿಂದಲೂ ತಂಡಗಳು ಈ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದವು. ಭಾಂಗ್ರಾ ಲೋಕದಲ್ಲಿ ಸಾಕಷ್ಟು ಹೆಸರು ಗಳಿಸಿದ ಸೆಲೆಬ್ರಿಟಿಗಳನ್ನು ತೀರ್ಪುಗಾರರಾಗಿ ಹೊಂದಿದ್ದ ಭಾಂಗ್ರಾ ಅರೀನಾದ ಈ ಆಯೋಜನೆಯು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಂತೂ ನಿಜ. ಹೀಗೆ ೨೦೧೮ ರಿಂದ ಆರಂಭವಾದ ಈ ಭಾಂಗ್ರಾ ಅಂತಾರಾಷ್ಟ್ರೀಯ ಉತ್ಸವದ ಸಂಪ್ರದಾಯವು ೨೦೨೦ ರವರೆಗೂ ಮುಂದುವರಿದಿದೆ.
ಪ್ರತೀವರ್ಷವೂ ಲೋಹ್ರಿ/ಲೋರಿ (ಮಕರ ಸಂಕ್ರಾಂತಿ) ಆಚರಣೆಯ ಜನವರಿಯಲ್ಲಿ ಆಯೋಜಿಸಲಾಗುವ ಭಾಂಗ್ರಾ ಅರೀನಾದ ಸ್ಪರ್ಧೆಯು ಎರಡು ಕೆಟಗರಿಗಳಲ್ಲಿ ನಡೆಯುತ್ತದೆ. ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗಗಳೆಂಬ ಈ ಕೆಟಗರಿಗಳು ಒಂದು ರೀತಿಯಲ್ಲಿ ಎರಡೂ ಬಗೆಯ ಪ್ರಕಾರಗಳನ್ನು ಆಸಕ್ತರಿಗೆ ಪರಿಚಯಿಸುತ್ತಿರುವುದು ವಿಶೇಷ.
ಸಾಂಪ್ರದಾಯಿಕ ವಿಭಾಗದಲ್ಲಿ ಸ್ಪರ್ಧಿಗಳು ತಮ್ಮ ಬೋಲಿಯಾಗಳನ್ನು ತಾವೇ ಹಾಡುತ್ತಾರೆ. ಡೋಲು-ವಾದ್ಯಗಳನ್ನು ಸ್ವತಃ ನುಡಿಸಿ ಕುಣಿಯುತ್ತಾರೆ. ಇಲ್ಲಿ ಧ್ವನಿಮುದ್ರಿತ ಹಿನ್ನೆಲೆ ಸಂಗೀತಗಳಿಗೆ ಅವಕಾಶವಿಲ್ಲ. ಆಧುನಿಕ ವಿಭಾಗದಲ್ಲಿ ರೆಕಾರ್ಡೆಡ್ ಸಂಗೀತದ ಬಳಕೆಗೆ ಅವಕಾಶವಿದೆ. ಜನವರಿ ೨೦೧೮ ರಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗದ ವಿಜೇತ ತಂಡಗಳಿಗೆ ಕ್ರಮವಾಗಿ ೬೦,೦೦೦ ಮತ್ತು ೩೫,೦೦೦ ರೂಪಾಯಿಗಳ ಮೊತ್ತವನ್ನು ಬಹುಮಾನವಾಗಿ ನೀಡಲಾಗಿತ್ತು.

ಹೀಗೆ ಸ್ಪರ್ಧೆಯ ಗುರಿಯನ್ನಷ್ಟೇ ಹೊಂದಿದ್ದ ಭಾಂಗ್ರಾ ಅರೀನಾ ತಂಡವು ನಂತರ ನಿಧಾನವಾಗಿ ರೂಪಾಂತರಗೊಳ್ಳುತ್ತಾ ದೈನಂದಿನ ಬದುಕಿನಲ್ಲಿ ಭಾಂಗ್ರಾ ಪ್ರಕಾರವನ್ನು ಜನಸಾಮಾನ್ಯರ ಮುಂದೆ ತರುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸತೊಡಗಿತ್ತು. ಈ ಪ್ರಯತ್ನದ ಭಾಗವಾಗಿಯೇ ವಿವಿಧ ಭಾಗಗಳಲ್ಲಿ, ಅತ್ಯಂತ ಕನಿಷ್ಠ ನೋಂದಣಿ ಶುಲ್ಕವನ್ನು ಹೊಂದಿದ್ದ ಕೆಲ ತರಗತಿಗಳು ಆರಂಭವಾದವು. ಇಂದಿಗೂ ಈ ಕನಿಷ್ಠ ಶುಲ್ಕದ ಮಾದರಿಯು ಹೆಚ್ಚೇನೂ ಬದಲಾಗಿಲ್ಲ. ಮುಂದೆ ಶಾಪಿಂಗ್ ಮಾಲ್ ಗಳಂತಹ ಜನನಿಬಿಡ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನೀಡುವ ಹೆಜ್ಜೆಗಳೂ ಶುರುವಾದವು. ದೇಶದಾದ್ಯಂತ ಹಲವು ಯಶಸ್ವಿ ಭಾಂಗ್ರಾ ಕಾರ್ಯಕ್ರಮಗಳನ್ನು ಆಯೋಜಿಸಿರುವ ಹೆಗ್ಗಳಿಕೆ ಭಾಂಗ್ರಾ ಅರೀನಾ ತಂಡದ್ದು.
ರವಿಂದರ್ ಸಿಂಗ್ ಹೇಳುವಂತೆ ಪಶ್ಚಿಮದ ದೇಶಗಳ ವಿಚಾರಕ್ಕೆ ಬಂದರೆ ಭಾಂಗ್ರಾ ಮೊಟ್ಟಮೊದಲ ಬಾರಿಗೆ ಅಪಾರ ಜನಪ್ರಿಯತೆಯನ್ನು ಗಳಿಸತೊಡಗಿದ್ದು ಅಮೆರಿಕಾದಲ್ಲಿ. ಭಾಂಗ್ರಾ ಅರೀನಾದ ಕಾರ್ಯಕಾರಿ ಸಮಿತಿಯಲ್ಲಿರುವ ಇಬ್ಬರು ಸದಸ್ಯರು ಪ್ರಸ್ತುತ ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಇರುವುದರಿಂದ ಈ ಪ್ರದೇಶಗಳಲ್ಲೂ ಭಾಂಗ್ರಾದ ಕಂಪು ಸೊಗಸಾಗಿ ಹಬ್ಬಿದೆ. ಅಮೆರಿಕಾ ಸೇರಿದಂತೆ ವಿವಿಧ ಪಾಶ್ಚಿಮಾತ್ಯ ದೇಶಗಳಲ್ಲಿರುವ ಭಾಂಗ್ರಾ ಉತ್ಸಾಹಿ ತಂಡಗಳು ಅರೀನಾ ತಂಡದ ಜೊತೆಗೂಡಿ ನಡೆಸುವ ಕಾರ್ಯಕ್ರಮಗಳು ಒಳ್ಳೆಯ ಜನಪ್ರಿಯತೆಯನ್ನೂ ಗಳಿಸಿಕೊಂಡಿವೆ.
ಎಲ್ಲದಕ್ಕಿಂತ ಮುಖ್ಯವಾಗಿ ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಭಾಂಗ್ರಾ ಅರೀನಾ ತಂಡದ ಸದಸ್ಯರು ಅಲ್ಲಿ ನೆಲೆಸಿರುವ ಭಾರತೀಯರಲ್ಲಿ ಭಾಂಗ್ರಾ ಒಲವನ್ನು ಬಿತ್ತುವುದರಲ್ಲಿ ಸಫಲರಾಗಿದ್ದಾರೆ. ಭಾರತೀಯ ಮತ್ತು ಪಂಜಾಬಿ ಸಂಸ್ಕೃತಿಯ ಬಗ್ಗೆ ಅಷ್ಟಾಗಿ ತಿಳಿದಿಲ್ಲದ ಅಥವಾ ಆಸಕ್ತಿಯಿಲ್ಲದ ಮಕ್ಕಳನ್ನು ಅರೀನಾ ತಂಡದ ಭಾಂಗ್ರಾ ತರಗತಿಗಳು ತೀವ್ರವಾಗಿ ಆಕರ್ಷಿಸಿವೆ.
ಇತ್ತ ವಿದೇಶದಲ್ಲಿ ಹುಟ್ಟಿ, ಬೆಳೆಯುತ್ತಿರುವ ತಮ್ಮ ಮಕ್ಕಳು ಭಾರತದ ಮೂಲಸಂಸ್ಕೃತಿಯ ಬಗ್ಗೆ ಒಲವನ್ನು ಬೆಳೆಸಿಕೊಳ್ಳುತ್ತಿರುವ ಸಂಗತಿಯು ಅಲ್ಲಿ ನೆಲೆಸುತ್ತಿರುವ ಭಾರತೀಯ ಮೂಲದ ಪೋಷಕರಿಗೂ ಸಂತಸವನ್ನು ತಂದಿದೆ. ಪ್ರಸ್ತುತ ರವಿಂದರ್ ಸಿಂಗ್ ಆಸ್ಟ್ರೇಲಿಯಾದಲ್ಲಿ ನಡೆಸುತ್ತಿರುವ ಭಾಂಗ್ರಾ ತರಗತಿಗಳು ಇಡೀ ಆಸ್ಟ್ರೇಲಿಯಾದಲ್ಲೇ ಮೊದಲ ಪ್ರಯತ್ನವಾಗಿ ಯಶಸ್ಸನ್ನು ಕಂಡಿದೆ.

ಸಂಸ್ಕೃತಿಯ ಸೊಗಡನ್ನು ಅರ್ಥಪೂರ್ಣವಾಗಿ ಹಬ್ಬಿಸುವುದರ ಜೊತೆಜೊತೆಗೆ ಸಾಮಾಜಿಕ ಕಳಕಳಿಯ ನೆಲೆಯಲ್ಲೂ ಭಾಂಗ್ರಾ ಅರೀನಾ ತಂಡವು ಸಕ್ರಿಯವಾಗಿದೆ. ೨೦೨೦ ರಲ್ಲಿ ವಿಶ್ವ ಪಂಜಾಬಿ ಸಂಸ್ಥೆಯು ಆಯೋಜಿಸಿದ್ದ ವಿಚಾರ ಸಂಕಿರಣವೊಂದರಲ್ಲಿ ಅರೀನಾ ತಂಡವು ಪಂಜಾಬಿನಲ್ಲಿ ವ್ಯಾಪಕವಾಗಿ ಹಬ್ಬಿರುವ ಮಾದಕದ್ರವ್ಯ ವ್ಯಸನಗಳ ಬಗ್ಗೆ ಉಪನ್ಯಾಸವೊಂದನ್ನು ಮಂಡಿಸಿತ್ತು.
ಭಾಂಗ್ರಾ ಗಂಡುಕಲೆಯೆಂದು ದಶಕಗಳಿಂದ ಚಾಲ್ತಿಯಲ್ಲಿರುವ ಹೊರತಾಗಿಯೂ, ತಮ್ಮ ತಂಡಗಳಲ್ಲಿ ಹೆಣ್ಣುಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ, ಅವರಿಗೆ ತರಬೇತಿ ನೀಡುವ ರೂಢಿಯು ಅರೀನಾದಲ್ಲಿ ಜಾರಿಯಲ್ಲಿದೆ. ೨೦೨೦ ರ ಜಾಗತಿಕ ಮಟ್ಟದ ಭಾಂಗ್ರಾ ಸ್ಪರ್ಧೆಯಲ್ಲಿ ಬಾಲಕಿಯರನ್ನೇ ಹೊಂದಿದ್ದ ಎರಡು ಮುಖ್ಯ ತಂಡಗಳನ್ನು ಸ್ವತಃ ಅರೀನಾ ತಂಡವು ಸಜ್ಜಾಗಿಸಿತ್ತು.
ಇತ್ತ ಕೊರೋನಾ ಕಾಲವು ಶುರುವಾದಾಗಿನಿಂದ ಭಾಂಗ್ರಾ ಅರೀನಾ ತಂಡವು ತನ್ನ ಆನ್ ಲೈನ್ ಚಟುವಟಿಕೆಗಳಲ್ಲಿ ವ್ಯಸ್ತವಾಗಿದೆ. ವಿವಿಧ ಸಾಂಸ್ಕೃತಿಕ ಸಂಘಟನೆಗಳೊಂದಿಗಿನ ಸಹಯೋಗದ ಪ್ರಸ್ತುತಿಗಳನ್ನು ಸೇರಿದಂತೆ ವಾರಾಂತ್ಯಗಳಲ್ಲಿ ನಡೆಸಲಾಗುವ ಆನ್ ಲೈನ್ ಭಾಂಗ್ರಾ ತರಗತಿಗಳೂ ಕೂಡ ಇದರಲ್ಲಿ ಸೇರಿವೆ. ಕೊರೋನಾ ಕಾಲವು ಕೃಪೆ ತೋರಿದಲ್ಲಿ ಅರೀನಾ ತಂಡವು ಪ್ರತೀವರ್ಷ ನಡೆಸಿಕೊಂಡು ಬರುವ ಜಾಗತಿಕ ಭಾಂಗ್ರಾ ಉತ್ಸವವು ೨೦೨೨ ರ ಜನವರಿಯಲ್ಲೂ ಕೂಡ ನಿರಾತಂಕವಾಗಿ ನೆರವೇರಲಿದೆ. ಈ ಬಾರಿ ದಿಲ್ಲಿಯನ್ನು ಒಳಗೊಂಡಂತೆ ಆಸ್ಟ್ರೇಲಿಯಾದ ಮೆಲ್ಬರ್ನ್ ನಗರವನ್ನು ಭಾಂಗ್ರಾ ಉತ್ಸವದ ಪ್ರಮುಖ ಕೇಂದ್ರವಾಗಿಸುವುದು ತಂಡದ ಸದ್ಯದ ಗುರಿಗಳಲ್ಲೊಂದಾಗಿದೆ.
‘ಢೋಲ್, ಅಲ್ಗೋಝ್, ಸಾರಂಗಿ, ಚಿಂಟಾ…’, ಹೀಗೆ ಪಂಜಾಬಿ ಸಾಂಪ್ರದಾಯಿಕ ವಾದ್ಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಲೇ ಇದ್ದರು ಜಸ್ಮೀತ್. ಇತ್ತ ಛಾಲ್, ಧಮಾಲ್, ಜುಗ್ನೀ, ಝೂಮರ್, ಖುಲ್ಲಾ ಭಾಂಗ್ರಾ, ಫುಮ್ನಿಯಾಂ, ಚುಟ್ಕೀ ಛಾಲ್ ಎಂಬಿತ್ಯಾದಿ ಪಂಜಾಬಿ ನೃತ್ಯ ಪ್ರಕಾರಗಳ ಬಗ್ಗೆ ಹೇಳುತ್ತಿದ್ದರು ರವಿಂದರ್ ಸಿಂಗ್. ‘ನಿಮ್ಮೆಲ್ಲರ ಉದ್ಯೋಗ, ಉದ್ಯಮ, ವೈಯಕ್ತಿಕ ಬದುಕು, ದೈನಂದಿನ ಚಟುವಟಿಕೆಗಳ ನಡುವೆ ಇಷ್ಟಕ್ಕೆಲ್ಲಾ ಸಮಯ ಹೇಗೆ ಹೊಂದಿಸುತ್ತೀರಿ? ನಿಮ್ಮ ಯಶಸ್ಸಿನ ರಹಸ್ಯವನ್ನು ನನಗೂ ಸ್ವಲ್ಪ ತಿಳಿಸಿ ಪ್ಲೀಸ್’, ಎಂದು ಪ್ರಿಯಾಂಕಾರವರ ಬಳಿ ಕೇಳಿಕೊಂಡೆ.

ಬದುಕಿನಲ್ಲಿ ಪ್ಯಾಷನ್ ಎಂಬುದೊಂದಿದ್ದರೆ ಯಾವುದೂ ಕೂಡ ಶ್ರಮವೆನಿಸುವುದಿಲ್ಲ ಅಲ್ವಾ ಎಂದರು ಪ್ರಿಯಾಂಕಾ ಅರೋರಾ. ಭಾಂಗ್ರಾ ಬಗೆಗಿನ ಅದಮ್ಯ ಪ್ರೀತಿಯೇ ಇವರೆಲ್ಲರನ್ನು ಇಪ್ಪತ್ತನಾಲ್ಕು ತಾಸುಗಳ ಗಡುವಿನೊಳಗೆ ನನ್ನೊಂದಿಗೆ ಬೆಸೆದಿತ್ತು. ಅದರಲ್ಲೂ ನನ್ನ ಪುಟ್ಟದೊಂದು ಟೆಲಿಫೋನ್ ಕರೆಯ ಕೋರಿಕೆಗೆ ಉತ್ತರವಾಗಿ. ಇದರೊಂದಿಗೆ ಥೇಟು ಸಂಗೀತ-ನೃತ್ಯಗಳಂತೆ ದೇಶ-ಭಾಷೆ-ಗಡಿ-ಸಮಯಗಳ ಸೋಕಾಲ್ಡ್ ಮಿತಿಗಳು ಛಿದ್ರವಾಗಿದ್ದವು. ಮತ್ತು ನಾನದಕ್ಕೆ ಆಭಾರಿಯಾಗಿದ್ದೆ.
‘ನೀವು ನರ್ತಕನಾಗುವುದು ಬೇರೆ. ಬದಲಾಗಿ ಸ್ವತಃ ನೃತ್ಯವೇ ಆಗಿಬಿಡಿ. ಹಾಡು, ನೃತ್ಯ ಮತ್ತು ಉತ್ಸವವೇ ನಿಜವಾದ ಸೂಫಿ ಜೀವನವಿಧಾನ’, ಎಂದಿದ್ದರು ಓಶೋ. ‘ಸ್ಥಿರತೆಯ ಗೂಡಾರ್ಥವನ್ನು ಕುಣಿತದಲ್ಲಿ ಕಾಣಬಹುದು. ಕುಣಿತದೊಳಗಿನ ಗೂಡಾರ್ಥವನ್ನು ಸ್ಥಿರತೆಯಲ್ಲಿ ಅರಿಯಬಹುದು’, ಎಂದಿದ್ದ ಜಲಾಲುದ್ದೀನ್ ರೂಮಿ. ಸೂಫಿ ಸಂತರು ಭಗವಂತನನ್ನು ಕಂಡಿದ್ದೇ ಸಂಗೀತ ಮತ್ತು ನೃತ್ಯಗಳಲ್ಲಿ. ಅದೇ ಅವರಿಗೆ ಮುಕ್ತಿಯ ಮಾರ್ಗವಾಗಿತ್ತು. ಇಂದು ದಿಲ್ಲಿ ಮೂಲದ ಭಾಂಗ್ರಾ ಅರೀನಾ ಯುವತಂಡವು ಆಧುನಿಕ ಯುಗದಲ್ಲಿ ಜನಪದವನ್ನು ಸಾರುವತ್ತ ವಿಶಿಷ್ಟ, ನಿರ್ಣಾಯಕ ಹೆಜ್ಜೆಯೊಂದನ್ನಿಟ್ಟಿದೆ.
ಕಲಾಪ್ರೇಮವೂ, ಕಲಾರಸಿಕರ ಹಾರೈಕೆಗಳೂ ಅವರನ್ನು ಪೊರೆಯಲಿ.






0 Comments