ದೇವೂ ಮಾಕೊಂಡ ಅವರ ಅನುವಾದದ ಕವನ ಸಂಕಲನದ ‘ಯುದ್ಧ ಮೃದಂಗ’
ಈ ಕೃತಿಯನ್ನು ‘ಬೆರಗು ಪ್ರಕಾಶನ’ ಪ್ರಕಟಿಸಿದೆ.
ಈ ಕವನ ಸಂಕಲನಕ್ಕೆ ಕೇಶವ ಮಳಗಿ ಅವರು ಬರೆದ ಮುನ್ನುಡಿ ಇಲ್ಲಿದೆ.
–ಕೇಶವ ಮಳಗಿ
ಹೊಸ ತಲೆಮಾರಿನ ಲೇಖಕರು, ವಿಶೇಷವಾಗಿ ಕಾವ್ಯ ಕಟ್ಟೋಣದಲ್ಲಿ ತೊಡಗಿಸಿಕೊಂಡವರು ಅನುವಾದದಲ್ಲಿಯೂ ತಮ್ಮನ್ನು ತಾವು ಕಂಡುಕೊಳ್ಳಲು ಯತ್ನಿಸುತ್ತಿರುವುದು ಇತ್ತೀಚಿನ ದಶಕಗಳ ಬೆಳವಣಿಗೆಯಾಗಿದೆ. ಇದು ಅವರ ಆಸಕ್ತಿಯನ್ನು ಎತ್ತಿ ತೋರಿಸಿದರೆ, ಆ ಆಸಕ್ತಿಯನ್ನು ಪೋಷಿಸುವ ವಿದ್ಯನ್ಮಾನ ವ್ಯವಸ್ಥೆ, ತಂತ್ರಜ್ಞಾನ, ಲಭ್ಯತೆ ಮತ್ತು ಬದಲಾದ ಸಾಮಾಜಿಕ ಸನ್ನಿವೇಶಗಳಲ್ಲಿ ಕವಿ ತಾನು ತೊಡಗಿಕೊಳ್ಳಲು ಬಯಸುವ ಕ್ಷೇತ್ರಗಳನ್ನೂ ಸೂಚಿಸುತ್ತದೆ. ಅಂದರೆ, ಮೂರು ದಶಕಗಳ ಹಿಂದೆ ಸಣ್ಣಪುಟ್ಟ ಪಟ್ಟಣ, ಹೋಬಳಿಗಳಲ್ಲಿ ವಾಸಿಸುವ ಲೇಖಕನೊಬ್ಬ ತಾನು ಅನುವಾದದಲ್ಲಿ ತೊಡಗಿಕೊಳ್ಳುವ ಮನಸ್ಸಿದ್ದರೂ ಅದು ಸುಲಭವಿರಲಿಲ್ಲ. ಪ್ರಕಟಿತ ಪುಸ್ತಕಗಳೇ ಮುಖ್ಯ ಆಕರವಾಗಿದ್ದ ಕಾಲದಲ್ಲಿ ದೊಡ್ಡ ನಗರಗಳ ಕೆಲವೇ ಗ್ರಂಥಾಲಯ, ಕೆಲವೇ ಪುಸ್ತಕದ ಅಂಗಡಿಗಳನ್ನು ಹೊರತುಪಡಿಸಿದರೆ ಈ ಬಗೆಯ ಸಂಗ್ರಹ ಮತ್ತು ಸಂಕಲನಗಳು ಲಭ್ಯವಿರಲಿಲ್ಲ. ಇದೀಗ, ಬದಲಾದ ಜಾಗತಿಕ ಸನ್ನಿವೇಶದಲ್ಲಿ ನಾವಿರುವಲ್ಲಿಯೇ ಇಂಟರ್‌ನೆಟ್ ಸೌಲಭ್ಯ ನಮಗೆ ಅಂಥ ಅವಕಾಶಗಳನ್ನು ಒದಗಿಸಬಲ್ಲುದು. ಆ ಅರ್ಥದಲ್ಲಿ, ಕೃತಿ ಲಭ್ಯತೆ ತನ್ನದೇ ಅರ್ಥದಲ್ಲಿ ಹೆಚ್ಚು ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಒಳಪಟ್ಟಿದೆ. ಇಂತಹ ಲಭ್ಯತೆಯಲ್ಲಿ ಪ್ರಕಟಿತ ಸಂಗ್ರಹಗಳಿರುವಂತೆಯೇ ತನ್ನದೇ ಇತಿಮಿತಿಗಳಿರಬಹುದು. ಇದ್ದಾಗ್ಯೂ, ತಂತ್ರಜ್ಞಾನದ ದೆಸೆಯಿಂದ ಆ ಬಗೆಯ ಇತಿಮಿತಿಗಳು ಬೇಗ ಪರಿಷ್ಕರಣೆಗೊಳ್ಳಬಲ್ಲವು. ಇರಲಿ.
ಉಪನ್ಯಾಸಕ, ಕವಿ ಹಾಗೂ ಸಾಹಿತ್ಯ ಸಂಘಟನೆಯಲ್ಲಿ ಆಸಕ್ತಿಯನ್ನು ತಳೆದ ದೇವೂ ಮಾಕೊಂಡ ತಮ್ಮ ಕ್ರಿಯಾಶೀಲ ಬರವಣಿಗೆಯೊಂದಿಗೆ ಅನುವಾದಕ್ಕೆ ತೊಡಗಿಕೊಂಡಿರುವುದರಲ್ಲಿ ಇಂಥದ್ದೇ ಕಾರಣವಿದೆಯೆಂದು ಭಾವಿಸುವೆ. ಬೇರೆ ಭಾಷೆ, ವಿಭಿನ್ನ ಅನುಭವ, ಅಭಿವ್ಯಕ್ತಿಗಳ ಕುರಿತು ಅವರಿಗಿರುವ ಕುತೂಹಲ ಸದ್ಯದ ಅನುವಾದಿತ ಸಂಗ್ರಹವನ್ನು ಪ್ರಕಟಿಸುವಂತೆ ಮಾಡುತ್ತಿದೆ. ಒಂದು ವಿಷಯದ ಸುತ್ತ ವಿವಿಧ ಭಾಷೆ, ದೇಶದ ಕವಿಗಳು ತಮ್ಮ ಕವಿತೆಗಳನ್ನು ಕಟ್ಟಿರುವುದು ಈ ಸಂಕಲನದ ವಿಶೇಷವಾಗಿದೆ. ಸಮಕಾಲೀನ ಸಮಾಜದ ಮಾನಸವನ್ನು ಕದಡುವ ವಸ್ತುಗಳ ಸಂಕಲನಗಳು ಕನ್ನಡದಲ್ಲಿಯೂ ಬಂದಿವೆ. ಬೆಂಜಮಿನ್ ಮೊಲಾಯಿಸ, ನೆಲ್ಸನ್ ಮಂಡೇಲ, ಹೋರಾಟದ ಹಾಡುಗಳು ಇಂಥ ಸಂಗ್ರಹಗಳು ಸಾಮಾಜಿಕ ತುರ್ತಿನಿಂದ ಪ್ರಕಟಗೊಂಡಂಥವು. ಪ್ರತಿ ವಿಷಯಾಧಾರಿತ ಸಂಕಲನಕ್ಕೂ ತನ್ನದೇ ತುರ್ತು ಮತ್ತು ಸಮರ್ಥನೆಗಳು ಇದ್ದೇ ಇರುತ್ತವೆ.

ಮೇಲೆ ಹೇಳಿದಂತೆ ಈ ಸಂಕಲನ ಮುಖ್ಯ ಕವಿ ಕಾಳಜಿ ಅಥವ ವಿಷಯ ಯುದ್ಧ ಮತ್ತು ಅವು ಸೃಷ್ಟಿಸುವ ಮಾನವ ಯಾತನೆ. ಅಸಮಾನತೆ, ತಾರತಮ್ಯ, ಶೋಷಣೆ, ಹಿಂಸೆಗಳನ್ನು ಕೊನೆಗಾಣಿಸಲೆಂದೇ ಈ ನಿರ್ದಿಷ್ಟ ಯುದ್ಧವನ್ನು ಮಾಡಲಾಗುತ್ತಿದೆಯೆಂದು ಪ್ರತಿ ಯುದ್ಧ ಸಂಘಟಕರು ಯಾವತ್ತೂ ಹೇಳುತ್ತ ಬಂದಿದ್ದಾರೆ. ಆದರೆ, ಘೋಷಣೆಯ ಮರೆಯಲ್ಲಿ ಮನುಷ್ಯ, ಜನಾಂಗಗಳ ಹಿರಿಮೆ, ತಮ್ಮ ಸಾಮರ್ಥ್ಯದ ಬಗೆಗಿರುವ ದುರಹಂಕಾರ, ಮನುಷ್ಯರು ಮತ್ತು ಸಂಪನನ್ಮೂಲಗಳನ್ನು ನಿಯಂತ್ರಿಸುವ ದುಷ್ಟ ಹುನ್ನಾರಗಳು ಅಡಗಿರುವುದನ್ನು ಸಂವೇದನಾಶೀಲ ಸಮಾಜ ಬಲ್ಲದು. ಬಲಶಾಲಿಗಳಾದವರು ಯುದ್ಧದಲ್ಲಿ ಗೆದ್ದು ಹೂಂಕರಿಸುತ್ತಾರೆ. ಸೋತವರು ತಮ್ಮ ಅವಮಾನದ ಬೇಗೆಯಲ್ಲಿ ಕಳೆದ ಕಸುವನ್ನು ಮತ್ತೆ ಪಡೆದು ಗೆಲ್ಲುವುದು ಹೇಗೆಂದು ಕಿಚ್ಚಿನಿಂದ ಕುದಿಯುತ್ತಾರೆ. ಹೊಟ್ಟೆಪಾಡಿಗಾಗಿ ದಂಡಿಯಲ್ಲಿ ಸೇರಿ ಸೋತವರು ಮತ್ತು ಗೆದ್ದವರ ಪರ ಮುಂಚೂಣಿಯಲ್ಲಿ ನಿಂತು ಕಾದಾಡಿದವರು ದೇಹ ಮತ್ತು ಮನಸ್ಸುಗಳಿಂದ ಘಾಸಿಗೊಳ್ಳುತ್ತಾರೆ.
ಸೋತವರ ನಾಗರಿಕತೆ, ಸಂಸ್ಕೃತಿ, ನಂಬಿಕೆ, ಬದುಕು ನುಚ್ಚುನೂರಾಗುತ್ತವೆ. ಸಾವಿನ ಹಿಡಿತದಿಂದ ಪಾರಾದ ಅಸಹಾಯಕರು, ವೃದ್ಧರು, ಮಕ್ಕಳು, ಹೆಂಗಳೆಯರು ಇದ್ದ ಬದುಕನ್ನು ಕಳೆದುಕೊಂಡು ನೋವು, ಹತಾಶೆ, ಭಯಾನಕ ನೆನಪುಗಳಲ್ಲಿ ತಮ್ಮ ದುರ್ಭರ ಬದುಕನ್ನು ದೂಡುತ್ತಾರೆ. ಯುದ್ಧ ಎರಡೂ ಕಡೆಯ ಅಸಹಾಯಕರನ್ನು ನಿರ್ಗತಿಕರನ್ನಾಗಿಸುತ್ತದೆ. ಯುದ್ಧದ ಮೊದಲಿನ ನರಕ, ಆನಂತರದ ನರಕಗಳ ನಡುವಿನ ಹಳವಂಡಗಳ ನಡುವೆ ಅವರ ಬದುಕು ಸಾಗುತ್ತದೆ. ಈ ನೋವಿನ ನಿಟ್ಟುಸಿರು ಎಲ್ಲಕ್ಕಿಂತ ಮೊದಲು ಬಡಿಯುವುದು ಸಂವೇದನಾಶೀಲ ಕವಿಯ ಎದೆಗೆ. ಆತ ತನ್ನ ಜನಗಳ ಯಾತನೆಗೆ ಕನಲುತ್ತಾನೆ. ಹತಾಶೆಯಲ್ಲಿ ನಿಟ್ಟುಸಿರಿಡುತ್ತಾನೆ. ಉದ್ವಿಗ್ನಗೊಳ್ಳುತ್ತಾನೆ. ಪದಗಳಲ್ಲಿ ಕರಗಿ ಹೋಗುತ್ತಾನೆ.
ಈ ಸಂಕಲನದಲ್ಲಿ ಅನುವಾದಿಸಿದ ಕವಿತೆಗಳ ಪದಗಳಲ್ಲಿ ಅವಿತ ವಾಗರ್ಥವೂ ಇದೇ ಆಗಿದೆ. ಅವು ಅಸಹಾಯಕತೆಯ ನಿಟ್ಟುಸಿರಲ್ಲಿ ಬೆಂದ ಪದಗಳು. ಈ ಪದಗಳಿಗೆ ಅನುಭವವಿದೆಯೇ ಹೊರತು ನಿರ್ದಿಷ್ಟ ಭಾಷೆಯಿಲ್ಲ. ಹಾಗೆಂದೇ, ಅವು ದೇಶ, ಭಾಷೆ, ಊರುಕೇರಿಗಳನ್ನು ದಾಟಿ ಮನುಷ್ಯ ಸೃಷ್ಟಿಸಿದ ಭಯಾನಕತೆಯನ್ನು ಅರಹುವಾಗ ಈ ಕವಿ ಯಾರು, ಯಾವ ದೇಶದವನು, ಯಾವ ಭಾಷೆಯಲ್ಲಿ ಬರೆದ ಎಂಬುದು ಮುಖ್ಯವಾಗುವುದೇ ಇಲ್ಲ. ಆ ಹಾಡುತ್ತಿರುವ ನೋವು-ಯಾತನೆಗಳು ನಮ್ಮವೇ ಅಲ್ಲವೆ? ಅನ್ನಿಸುತ್ತದಷ್ಟೇ. ಕವಿಯ ಹೆಸರಿನಿಂದ ಕವಿತೆಯ ವಾಚನ ಆರಂಭಿಸಿದರೂ ಕೊನೆಯಲ್ಲಿ ಭಾವವಷ್ಟೇ ಮುಖ್ಯವಾಗಿ ಕವಿಯ ಹೆಸರು ನೇಪಥ್ಯಕ್ಕೆ ಸರಿಯುತ್ತದೆ.
ಇಲ್ಲಿನ ಸುಮಾರು ಐವತ್ತು ಕವಿತೆಗಳು, ಅಷ್ಟೇ ಪ್ರಮಾಣದ ಕವಿಗಳು ಹೇಳುತ್ತಿರುವುದು ಮನುಷ್ಯನ ದುರಾಸೆ ಮತ್ತು ಕ್ರೌರ್ಯ ಸೃಷ್ಟಿಸುವ ಹಿಂಸೆಯನ್ನು. ಉಳ್ಳವರ ದುರಾಸೆ ಕೊನೆಗೊಳ್ಳದೆ ಬಂದೂಕಿನ ನಳಿಕೆಯಲ್ಲಿ ಪಾರಿವಾಳ ಎಂದೂ ಗೂಡು ಕಟ್ಟುವುದಿಲ್ಲ.
ದೇವೂ ಮಾಕೊಂಡ ಅವರು ಅನುವಾದಿಸಿರುವ ಕವಿತೆಗಳಲ್ಲಿ ಮೊಹಮ್ಮದ್ ದರ್ವೇಶ್, ಫೈಜ್, ಲಾರೆನ್ಸ್, ದೇವರಕೊಂಡ ಬಾಲಗಂಗಾಧರ ತಿಲಕ್, ರವೀಂದ್ರನಾಥ ಠಾಕೂರ, ಬ್ರೆಕ್ಟ್‌ರಂಥ ಪರಿಚಿತ ಕವಿಗಳು, ಅಪರಿಚಿತ ಕವಿಗಳು ಇದ್ದಾರೆ. ಕವಿಯೋ, ಸಂವೇದನಾಶೀಲ ಸಾಮಾನ್ಯ ಮನುಷ್ಯನೋ, ಅಂತೂ ಬಯಸುವುದು ನೆಮ್ಮದಿಯ ಬದುಕು. ತನ್ನದಲ್ಲದ ತಪ್ಪಿಗಾಗಿ ತನ್ನನ್ನು ವಿಧಿ ಶಿಕ್ಷಿಸದಿರಲಿ ಎಂಬ ಪ್ರಾರ್ಥನೆ ಆತನನ್ನು ಇತಿಹಾಸವು ಕಾದಿಲ್ಲ, ಭವಿಷ್ಯವೂ ಕಾಯಲಾರದೇನೊ ಎಂದು ಆತನಿಗೆ ದಿಗಿಲು. ಹಾಗಾಗುವುದು ಬೇಡ, ನಿಮ್ಮ ದುರಾಸೆಯಿಂದ ಇಷ್ಟೆಲ್ಲ ನಾಗರಿಕತೆಗಳು ನಾಶವಾಗಿವೆ, ನಮಗೆ ಯುದ್ಧ ಬೇಡ, ಶಾಂತಿ ಬೇಕು ಎನ್ನುವುದು ಆತನ ಬೇಡಿಕೆ, ಒತ್ತಾಸೆ. ಅದನ್ನು ಆ ಜಾಣ ಕುರುಡು, ಕಿವುಡು ತೋರಿಸುವ ಯುದ್ಧ ಸೃಷ್ಟಿಸುವವರಿಗೆ ಹೇಳು ಎಂದು ಕವಿಗೆ ಅಲವತ್ತುಕೊಳ್ಳುತ್ತಾನೆ.
ದೇವೂ ಮಾಕೊಂಡರ ಅನುವಾದದ ಪರಿಶ್ರಮಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರಕಲಿ ಎಂದು ಹಾರೈಸುವೆ.






0 Comments