ದೇವ-ಶಿಲ್ಪಿ

ಸತ್ಯಕಾಮ ಶರ್ಮಾ ಕಾಸರಗೋಡು
ಇರಬಹುದು ಸುಂದರ ಕಂಗಳಿಗೆ ನೋಡುಗರ
ಮರೆಮಾಚಿದೆ ಹಿಂದಿರುವ ಬೆವರ ಹಾರ
ಕಂಬನಿಗಳಿಬ್ಬನಿ ಪುರುಷ ಮಣಿಗಳಾದ ಹರುಷ ಕ್ಷಣಗಳು
ಉಳಿಪೆಟ್ಟುಗಳಿಗೆ ಚಿಮ್ಮಿ ಚಿಮ್ಮಿ ಕಂಗಳಲಿ ಕಣ್ಮರೆಯಾದ
ಕಲ್ಲು ಚೂರು ಪಾರು ಒಂದಿಷ್ಟು ಧೂಳು
ಬರಿಕಲ್ಲು ಹಲವರಿಗೆ ಕರುಣಿಸಿದ ಕೂಳು
ಶಿಲ್ಪಿಯನು ಹೊರಗಿಟ್ಟೆ ಶಿಲ್ಪವನು ಒಳಗೆ ಬಿಟ್ಟೆ
ಇದು ಸರಿಯೆ ದೇವನೆ ಹೇಳು
ಯಾಕಿಲ್ಲ ಎಲ್ಲಾ ಶಿಲೆಗಳಿಗೂ ಹೀಗೆ ಶಿಲ್ಪವಾಗಿ
ನಿನ್ನ ಪ್ರಭಾವಲಯದಲಿ ಸ್ಥಾಯಿಯಾಗಿ
ಜೀವತಳೆದು ನಿಲ್ಲುವ ಬಾಗ್ಯ?
ಈ ಜಗದ ಶಿಲ್ಪಿ ನೀನು ಸೋಜಿಗದ ಮೂರುತಿ ನಾನು
ಕಡೆವವನು ನೀನೆ
ಕೆಡಿಸುವವನು ನೀನೆ
ಕೆಡವುವವನು ನೀನೆ
ನನ್ನದೇನಿದೆ ಹೇಳು
ಕೊನೆಗೆ ಮಣ್ಣು, ಬಾಳು
ಜಡೆ ನೋಡು, ನಡು ನೋಡು
ಪೃಷ್ಠಗಳಲೂ ಸ್ಪಷ್ಟವಾದ ಕಲೆಗಾರಿಕೆ
ಕಮ್ಮಿಯೇನು?
ಅವನಿವಳ ಶಿಲ್ಪಿಯಾದರೂ ನೀನವನ ಶಿಲ್ಪಿ
ಅಲ್ಲವೇನು?
ಮತ್ತಿನ್ನೇನು ಶಿಲ್ಪವಾಗಿಯಾದರೂ ಸರಿ
ಹಾಗೆ ಪ್ರತ್ಯಕ್ಷನಾಗು
ನೀನಿಲ್ಲವೆನ್ನುವವರನು ಇಲ್ಲವಾಗಿಸಲಾದರೂ
ನಿಲ್ಲು ನಮ್ಮೆದುರು
ಹೇಗಿದ್ದರೂ ನೀನು
ಕಲ್ಪತರು
ಶಿಲ್ಪಗಳಾದ ಸಂಕಲ್ಪಗಳಲಿ
ಸಂಚಲನವನು ತರು
ಅಲೆಮಾರಿ

ಶ್ರೀ ತಲಗೇರಿ
ಚಪ್ಪರದ ತೂತಿಂದ
ಸ್ಖಲಿತ ಭ್ರಮೆಯ ರಸಗವಳ
ತುಂಬಿಕೊಳಲೆಂದು ನಿಲ್ಲದಾ ಓಟ…
ಒಂದೇ ನೀಲಿ ಹಾಸಿನ ಅಡಿಗೆ
ವ್ಯಾಪ್ತಿಗಳ ಸಹಿಯಿಹುದೇ !
ದಿಕ್ಕು ಬದಲಿಸುವ ಹಣತೆಗಳಿಗೆ
ನಾ ಗೋಡೆ ಮೇಲಣ ನೆರಳೇ ?… !
ಅವಳ ದೇಹದ ಬೀದಿಯ
ಉಬ್ಬು ತಗ್ಗುಗಳಲ್ಲಿ ಇಣುಕಿದಾಗ
ಸ್ವೇದ ಟಿಸಿಲೊಡೆವ ಹಾದಿಯಲಿ
ಅದೆಂಥ ಕುಸುರಿಯೋ!
ಖಾಸಗಿ ಬಿಡಾರ ಹೂಡಲು
ತುಸು ತುಸುವೇ
ಋತುಗಳಿಗೆ ತುತ್ತ ನಿಡುತಿಹ
ಮೈಧೂಪ ಲಹರಿಯೋ…!
ನಿಯಮಿತವಲ್ಲ;
ಆಗಬಹುದು ನಾಳೆಯೇ ನಿರ್ವಾತ…
ಸುಟ್ಟಿರುವ ಹೂವ ಗಂಧ
ಸತ್ತಿದ್ದಾದರೂ ಹೇಗೆ ?
ಅಥವಾ ಇಲ್ಲೆಲ್ಲೋ ಗಾಳಿಯಲ್ಲಿ
ಅನಾಥವಾಗಿ ಅಲೆಯುತ್ತಿರಬಹುದೇ
ಮತ್ತೊಂದು ಹೂವರಳಲು ;
ಆತ್ಮದಂತೆ…!
ನಿಶೆಗೀಗ ಹಲವು ಬಣ್ಣ
ಬೆಳಕಿನಾ ಅಮಲು ನಡು ನೆತ್ತಿಗೇರಿ..
ನನ್ನೊಳಗೆ ನಾ ಇಳಿದಂತೆ
ಅರ್ಥವಾಗದ ಗದ್ದಲ ಪ್ರತಿ ಸಾರಿ..
ಈಗಲೂ
ಅಂತರ್ ಬಹಿರ್ ಮಧ್ಯಂತರದಿ
ನಾ ಅಲೆಮಾರಿ!…





ತುಂಬು ಮನದ ಧನ್ಯವಾದಗಳು ಅವಧಿ… 🙂 🙂 🙂