ಛೂ ಮಂತ್ರ ಕಾಳಿ

ನಾವು ಐದು ವರ್ಷ ಬಿವಿಎಸ್‍ಸಿಯಲ್ಲಿ ಏನೆಲ್ಲಾ ರಾಶಿ ರಾಶಿ ಓದಿರುತ್ತೇವೆ! ಅನಾಟಮಿ, ಫಿಸಿಯಾಲಜಿ, ಜೆನೆಟಿಕ್ಸ್ ಅಂಡ್ ಬ್ರೀಡಿಂಗ್, ಬಯೋಕೆಮಿಸ್ಟ್ರಿ, ನ್ಯೂಟ್ರಿಷನ್, ಮೈಕ್ರೊ ಬಯಾಲಜಿ, ಪ್ಯಾರಾಸೈಟಾಲಜಿ, ಪೆಥಾಲಜಿ, ಫಾರ್ಮಕಾಲಜಿ, ಮೆಡಿಸಿನ್, ಸರ್ಜರಿ, ಗೈನೊಕಾಲಜಿ ಇತ್ಯಾದಿ.

ಈ ಒಂದೊಂದು ವಿಷಯವನ್ನೂ ಮತ್ತೆ ಹೋಳು ಮಾಡಿ ಓದುತ್ತೇವೆ. ಉದಾಹರಣೆಗೆ ಅನಾಟಮಿಯಲ್ಲಿ ಆಸ್ಟಿಯಾಲಜಿ, ಆಥ್ರಾಲಜಿ, ನ್ಯೂರಾಲಜಿ, ಹಿಸ್ಟಾಲಜಿ, ಏಂಜಿಯಾಲಜಿ, ಮಯಾಲಜಿ, ಎಂಬ್ರಿಯಾಲಜಿ, ಟೋಪೋಗ್ರಾಫಿಕ್ ಅನಾಟಮಿ, ಆಫ್ತಾಲ್ಮಾಲಜಿ, ಡರ್ಮಟಾಲಜಿ ಇತ್ಯಾದಿ ನಾವು ಎಷ್ಟು ಓದಿದ್ದೇವೆಂದರೆ ಅದನ್ನು ನೆನಪು ಮಾಡಿಕೊಳ್ಳುವುದೂ ಕಷ್ಟ. ಮತ್ತು ಭಯಾನಕ.

ಮತ್ತೊಂದು ಉದಾಹರಣೆ ಕೊಡುತ್ತೇನೆ. ಅನಾಟಮಿ ಎಂಬ ವಿಷಯವನ್ನೇ ತೆಗೆದುಕೊಂಡರೆ, ದನದ ಅನಾಟಮಿ ಒಂದು ರೀತಿ. ನಾಯಿಯದು ಮತ್ತೊಂದು ರೀತಿ. ಕುದುರೆಯದು ಮಗದೊಂದು ರೀತಿ. ಕುರಿ, ಮೇಕೆಯದು ಇನ್ನೊಂದು ರೀತಿ. ಕೋಳಿಯದು ಸಂಪೂರ್ಣ ಬೇರೆ. ಈ ಸ್ಪೀಸೀಸುಗಳನ್ನು ವಿವರವಾಗಿ ಓದಿದ ನಂತರ ಅವುಗಳ ಹೋಲಿಕೆ ಮಾಡಿ ನೋಡಬೇಕು (Comparative Anatomy). ಜೀರ್ಣಾಂಗವ್ಯೂಹದಲ್ಲಿ ಮೆಲುಕು ಹಾಕುವ ಪ್ರಾಣಿ (ಉದಾಹರಣೆ ಹಸು, ಎಮ್ಮೆ, ಕುರಿ, ಮೇಕೆ) ಒಂದು ರೀತಿಯಾದರೆ ಮೆಲುಕು ಹಾಕದ ಪ್ರಾಣಿ (ಉದಾಹರಣೆ ನಾಯಿ, ಹಂದಿ, ಕತ್ತೆ, ಕುದುರೆ) ಮತ್ತೊಂದು ರೀತಿ, ಕೋಳಿಯಲ್ಲಿ ಮಗದೊಂದು ರೀತಿ.

ಕಾಯಿಲೆಗಳ ವಿಷಯಕ್ಕೆ ಬಂದರೆ ಒಂದೊಂದು ಸ್ಪೀಸೀಸಿನಲ್ಲಿ ಒಂದೊಂದು ಥರದ ಕಾಯಿಲೆಗಳು. ಸ್ಪೀಸೀಸಿಗೆ ನಿರ್ದಿಷ್ಟವಾದ ಕಾಯಿಲೆಗಳು, ಒಂದೊಂದು ಸ್ಪೀಸೀಸಿನಲ್ಲಿ ಒಂದೊಂದು ರೀತಿ ವರ್ತಿಸುವ ಬ್ಯಾಕ್ಟೀರಿಯಾ, ವೈರಸ್, ಔಷಧಗಳು. ಬೇರೆ ಬೇರೆ ಸ್ಪೀಸೀಸಲ್ಲಿ ಬೇರೆ ಬೇರೆ ರೋಗಲಕ್ಷಣ ತೋರಿಸುವ ಒಂದೇ ಕಾಯಿಲೆಗಳು, ಬೇರೆ ಬೇರೆ ಜಾನುವಾರುಗಳಲ್ಲಿರುವ ಬೇರೆ ಬೇರೆ ರೀತಿಯ ಜಂತುಹುಳುಗಳು, ಬೇರೆ ಬೇರೆ ಔಷಧಗಳು, ಬೇರೆ ಬೇರೆ ಔಷಧ ಪ್ರಮಾಣಗಳು. ಪ್ರಾಣಿಗಳಿಂದ ಮನುಷ್ಯನಿಗೆ ಬರುವ ರೋಗಗಳ (Zoonotic diseases) ಬಗ್ಗೆ ಅಧ್ಯಯನ, ವನ್ಯಜೀವಿಗಳ ಅಧ್ಯಯನ, ಪರಮಾತ್ಮಾ..!

ದನೀನ ಆಸ್ಪತ್ರೆ ಬಿಟ್ಟು ಹುಚ್ಚಾಸ್ಪತ್ರೆ ಸೇರಲು ಎಷ್ಟೊಂದು ಕಾರಣಗಳು!

ಇದೆಲ್ಲದರ ಆಧಾರದ ಮೇಲೆಯೇ ನಾವು ದನ, ಕುದುರೆ, ನಾಯಿ, ಕೋಳಿ, ಕುರಿ, ವನ್ಯಜೀವಿಗಳು ಮುಂತಾದ ಎಲ್ಲ ಪ್ರಾಣಿಗಳ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು. ಎಷ್ಟು ಓದಿದರೂ ಸಾಲದು, ಎಷ್ಟು ತಿಳಿದುಕೊಂಡರೂ ಸಾಲದು ಎಂದು ಎಲ್ಲ ವೃತ್ತಿಯವರಿಗೂ ಅನ್ನಿಸಬಹುದು. ಆದರೆ ಅದು ಬಹಳ ತೀವ್ರವಾಗಿ ಮತ್ತು ಹೃದಯಾಘಾತವಾಗುವಷ್ಟರ ಮಟ್ಟಿಗೆ ಅನ್ನಿಸುವುದು ಪಶುವೈದ್ಯರಿಗೆ ಎಂಬುದು ನನ್ನ ದೃಢ ನಂಬಿಕೆ.

ಕಾಲೇಜಿನ ಪ್ರೊಫೆಸರುಗಳು ಪಶುವೈದ್ಯ ವಿಜ್ಞಾನದ ಯಾವುದೋ ಒಂದು ವಿಷಯವನ್ನು (ಉದಾ: ಫಿಸಿಯಾಲಜಿ) ಹಲವಾರು ಭಾಗ ಮಾಡಿ ಒಂದು ಅಧ್ಯಾಯದ ಬಗ್ಗೆ ಮಾತ್ರ ಈಗಾಗಲೇ ಪಿಯುಸಿ, ಸಿಇಟಿಯಂಥ ಪರೀಕ್ಷೆಗಳಲ್ಲಿ ಲೀಲಾಜಾಲವಾಗಿ ಪಾಸಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುತ್ತಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪಶುವೈದ್ಯನಾದರೋ ಚಿಕಿತ್ಸೆ ನೀಡುವಾಗ ತನ್ನೆದುರಿನ ಪಶುವೈದ್ಯ ವಿಜ್ಞಾನವೆಂಬ ಬ್ರಹ್ಮಾಂಡವನ್ನು ಮನೋಭಿತ್ತಿಯಲ್ಲಿ ಹರಡಿಕೊಂಡು ತನಗೆ ಬೇಕಾಗಿರುವ ಒಂದೇ ಒಂದು ಎಳೆಯನ್ನು ಆಯ್ದು, ಮಾತು ಬಾರದ ಪ್ರಾಣಿಗಳ ಮೇಲೆ ಪ್ರಯೋಗಿಸಬೇಕು.

ಪ್ರೊಫೆಸರ್ ಸಾಹೇಬರಾದರೋ ಅನುಮಾನ ಬಂದಾಗ ವಿದ್ಯಾರ್ಥಿಗಳಿಗೆ “ನಾಳೆ ಪುಸ್ತಕಗಳನ್ನು ರೆಫರ್ ಮಾಡಿಕೊಂಡು ಬಂದು ಉತ್ತರಿಸುತ್ತೇನೆ” ಎಂದು ಹೇಳುವ ಅವಕಾಶವಿದೆ. ಪಶುವೈದ್ಯನು ಹಾಗೆ ಮಾಡಲಾಗುತ್ತದೆಯೇ? “ಓದಿಕೊಂಡು ಬಂದು ನಾಳೆ ಚಿಕಿತ್ಸೆ ನೀಡುತ್ತೇನೆ” ಎಂದರೆ ಜಾನುವಾರು ಮಾಲೀಕ ಸುಮ್ಮನಿದ್ದಾನೆಯೇ? ರೋಗಿ ಸಾಯುವುದು ಗ್ಯಾರಂಟಿ ಆದರೆ ಅದಕ್ಕೂ ಮುಂಚೆಯೇ ಪಶುವೈದ್ಯ ಸಾವಿಗೀಡಾಗಬಹುದು!

ಆದರೆ ಕೆಲವು ಸಲ ಕಾಯಿಲೆಗಳು ಎಷ್ಟು ಚೆನ್ನಾಗಿ ನಮ್ಮ ಮಾತು ಕೇಳುತ್ತವೆ ಮತ್ತು ವಾಸಿಯಾಗುತ್ತವೆ ಎಂದರೆ ನಾವು ಮಾಡಿದ ಚಿಕಿತ್ಸೆಗೆ ಗುಣವಾಯಿತೋ ಅಥವಾ ಅಲ್ಲವೋ ಎಂದು ಅನುಮಾನ ಬರತೊಡಗುತ್ತದೆ. ಅಂಥ ವೇಳೆಯಲ್ಲಿ ನಮ್ಮ ‘ಹಸ್ತಗುಣ’ದ ಬಗ್ಗೆ ಲೋಡುಗಟ್ಟಲೆ ಪ್ರಶಂಸೆ ಬರುವುದು ಖಾತ್ರಿ. ಇಂಥ ಕೆಲವು ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಇಂಥ ಪ್ರಕರಣಗಳು ಪಶುವೈದ್ಯನನ್ನು ಇನ್ನೂ ಹೆಚ್ಚಿನ ಹುರುಪು ಉತ್ಸಾಹಗಳಿಂದ ವೃತ್ತಿಯಲ್ಲಿ ಮುಂದುವರಿಯಲು ಪ್ರೇರಣೆ ನೀಡುತ್ತವೆ. ಇವು ಸುಖದ ನೆನಪುಗಳು.

1. ಲಕ್ಷ್ಮಮ್ಮನ ಎಮ್ಮೆ

ಹಗರಿಬೊಮ್ಮನಹಳ್ಳಿಯಿಂದ ಹಂಪಸಾಗರಕ್ಕೆ ಬರುತ್ತ ಇನ್ನೇನು ಎರಡು ಕಿಮೀ ದೂರದಲ್ಲಿರುವಾಗ ಮೈನ್ ರೋಡಿನ ಪಕ್ಕದಲ್ಲಿ ಲಕ್ಷ್ಮಮ್ಮರ ಮನೆಯಿತ್ತು. ಲಕ್ಷ್ಮಮ್ಮ, ಗೋವಿಂದಪ್ಪರಿಗೆ ಗಂಡು ಮಕ್ಕಳಿರಲಿಲ್ಲ. ಮೂವರು ಹೆಣ್ಣುಮಕ್ಕಳು. ಒಬ್ಬಳು ಬೇರೆ ಊರಲ್ಲಿದ್ದು, ಇನ್ನಿಬ್ಬರು ಲಕ್ಷ್ಮಮ್ಮನ ಮನೆಯ ಬಳಿಯೇ ಮನೆ ಮಾಡಿಕೊಂಡಿದ್ದರು ಅಥವಾ ಲಕ್ಷ್ಮಮ್ಮನವರೇ ಕಟ್ಟಿಸಿಕೊಟ್ಟಿದ್ದರು. ಎಲ್ಲರದ್ದೂ ಮದುವೆಯಾಗಿ ನಾಲ್ಕಾರು ಮೊಮ್ಮಕ್ಕಳು ಸಹ ಇದ್ದರು.

ಅವರ ಮನೆ ಮುಂದೆ ಹಾದು ಹೋಗುವಾಗ, ಬರುವಾಗ ಲಕ್ಷ್ಮಮ್ಮನವರನ್ನು ಮಾತಾಡಿಸಿಯೇ ತೀರಬೇಕು. ಇಲ್ಲದಿದ್ದರೆ ಲಕ್ಷ್ಮಮ್ಮನವರು ಜಗಳಕ್ಕೆ ಬರುತ್ತಿದ್ದರು. ಲಕ್ಷ್ಮಮ್ಮರ ಗಂಡ, ಹೆಣ್ಣುಮಕ್ಕಳು, ಅಳಿಯಂದಿರೆಲ್ಲ ಪರಿಚಿತರಿದ್ದು ನಾನು ಕುಟುಂಬ ಸಮೇತ ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದೆ. ಲಕ್ಷ್ಮಮ್ಮನವರು ನಮ್ಮನೆಗೆ ಪ್ರತಿ ಸಂತೆಯ ದಿನ ಬಂದು ಹೋಗುವುದು ಮಾಮೂಲಾಗಿತ್ತು. ಗಂಡ ಗೋವಿಂದಪ್ಪ ಭಯಂಕರ ಮುಂಗೋಪಿ. ಸಿಟ್ಟು ಅವನ ಮೂಗಿನ ಮೇಲೆ ಕುಣಿಯುತ್ತಿತ್ತು. ಸಾಧಾರಣ ಹೊಟ್ಟೆ ಬಟ್ಟೆಗೆ ತೊಂದರೆಯಿಲ್ಲದಂತಿದ್ದರೇ ವಿನಹ ಅವರು ಸ್ಥಿತಿವಂತರೇನಲ್ಲ.

ಊರಲ್ಲಿದ್ದ ಇಬ್ಬರಲ್ಲಿ ಒಬ್ಬ ಮಗಳ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಅಳಿಯ ಮಗಳನ್ನು ಹೊಡೆಯುತ್ತಿದ್ದನೋ ಏನೋ? ಲಕ್ಷ್ಮಮ್ಮ ನಮ್ಮ ಮನೆಗೆ ಬಂದಾಗ “ಮದುವೆಯಾದ ಹೆಣ್ಣುಮಕ್ಕಳು ಬೇರೆ ಊರಿನಲ್ಲಿರಬೇಕೇ ವಿನಹ ತಂದೆ ತಾಯಿಯರ ಎದುರು ಕಣ್ಣೀರು ಹಾಕಕೂಡದು” ಎಂದು ಹೇಳುತ್ತಾ ಗದ್ಗದಿತರಾಗುತ್ತಿದ್ದರು.

ಲಕ್ಷ್ಮಮ್ಮರ ಕನ್ನಡ ಮಾತುಗಳು ತೆಲುಗು ಭಾಷೆಯಲ್ಲದ್ದಿದಂತಿದ್ದು ಕೇಳಲು ಬಲು ಮಜವಾಗಿರುತ್ತಿತ್ತು. “ಅಯ್ಯೋ ಡಾಕ್ಟ್ರೆ, ನನ್ನ ಗಂಡ ಬಲು ಜುಗ್ಗ! ಒಂದು ಪೈಸಾ ಬಿಚ್ಚಲ್ಲ. ಎಮ್ಮೆಯ ಹಾಲು ಮಾರಿದ್ದೆಲ್ಲ ಅವ್ನೇ ಇಟ್ಕಳ್ತಾನೆ. ನಾನು ಬುದ್ಧಿವಂತಿಕೆ ಉಪಯೋಗಿಸಿ ಒಂದಷ್ಟು ಕಾಸು ಮಾಡ್ಕಳ್ತೀನಿ” ಎಂದು ಗುಟ್ಟು ಮಾಡಿ ಹೇಳುತ್ತಿದ್ದರು. ಅವರ ಮನೆಯಲ್ಲಿಯೇ ನಾನು ಮೊದಲ ಬಾರಿಗೆ ‘ಚಿಕನ್ ಉಪ್ಪಿನಕಾಯಿ’ ರುಚಿ ನೋಡಿದ್ದು!

ಒಮ್ಮೆ ನಾನು ಮತ್ತು ಕಾಂಪೌಂಡರ್ ಲಕ್ಷ್ಮಣ ಹಗರಿಬೊಮ್ಮನಹಳ್ಳಿಯಿಂದ ಬೈಕಲ್ಲಿ ಬರುತ್ತಿದ್ದೆವು. ನನ್ನ ಔಷಧದ ಬ್ಯಾಗಲ್ಲಿದ್ದ ಔಷಧಗಳು ಮುಕ್ಕಾಲು ಪಾಲು ಖಾಲಿಯಾಗಿದ್ದವು. ಆಸ್ಪತ್ರೆಗೆ ಹೋದ ಕೂಡಲೇ ಒಂದಷ್ಟು ಔಷಧಗಳನ್ನು ನನ್ನ ಬ್ಯಾಗಿನಲ್ಲಿಟ್ಟುಕೊಳ್ಳಲು ಯೋಚಿಸುತ್ತಾ ಬರುತ್ತಿದ್ದೆ. ಲಕ್ಷ್ಮಮ್ಮರ ಮನೆ ಮುಂದೆ ಜನರ ಗುಂಪು ಒಂದು ಎಮ್ಮೆಯ ಸುತ್ತ ನಿಂತುಕೊಂಡಿದ್ದರು. ನನ್ನನ್ನು ದೂರದಿಂದಲೇ ನೋಡಿ ಎದೆ ಒಡೆಯುವಂತೆ ಕೂಗತೊಡಗಿದರು. ಬೈಕು ನಿಲ್ಲಿಸಿ ಹತ್ತಿರ ಬಂದರೆ, ಲಕ್ಷ್ಮಮ್ಮನವರ ಎಮ್ಮೆಯೊಂದು ಹೊಟ್ಟೆ ಉಬ್ಬರಿಸಿಕೊಂಡು ಏದುಸಿರು ಬಿಡುತ್ತಾ ನಿಂತಿತ್ತು.

ಎಮ್ಮೆ/ಹಸುಗಳಿಗೆ ಮೆಲುಕು ಚೀಲ (ರೂಮೆನ್ = ಹೊಟ್ಟೆಯ ಮೊದಲ ಕೋಣೆ) ಎಡಗಡೆಯಿರುವುದರಿಂದ ಹೊಟ್ಟೆ ಉಬ್ಬರವಾದರೆ, ಎಡಗಡೆ ಪಕ್ಕೆಯ ಭಾಗದಲ್ಲಿ ಉಬ್ಬರವಿರುತ್ತದೆ. ಆದರೆ ಲಕ್ಷ್ಮಮ್ಮನವರ ಎಮ್ಮೆಗೆ ಎಡಗಡೆ ಮತ್ತು ಬಲಗಡೆ ಏಕರೀತಿಯಲ್ಲಿ ಉಬ್ಬರ ಬಂದಿತ್ತು. ಎರಡೂ ಕಡೆ ಡೊಳ್ಳಿನಂತೆ ಊದಿಕೊಂಡಿತ್ತು. ಎರಡೂ ಕಡೆಯ ಪಕ್ಕೆಯ ತಗ್ಗುಗಳು ಮುಚ್ಚಿ ಹೋಗಿದ್ದವು. ಒಂದೇ ಒಂದು ಪಕ್ಕೆಲುಬು ಕಾಣಿಸುತ್ತಿರಲಿಲ್ಲ. ಹೊಟ್ಟೆಯಲ್ಲಿ ಎರ್ರಾಬಿರ್ರಿ ಗಾಳಿ ತುಂಬಿಕೊಳ್ಳುವುದರಿಂದ ವಪೆ ಮತ್ತು ಶ್ವಾಸಕೋಶದ ಮೇಲೆ (Diaphragm and Lungs) ಒತ್ತಡ ಬೀಳುತ್ತದೆ. ಆದ್ದರಿಂದ ಎಮ್ಮೆ ಕಷ್ಟಪಟ್ಟು ಉಸಿರಾಡುತ್ತಿತ್ತು.

ಎಮ್ಮೆ ಪೂರ್ತಿ ಗಾಬರಿಯಾಗಿತ್ತು. ಅತ್ತಿತ್ತ ನೋಡುವುದು, ಹತ್ತಿರ ಹೋದವರನ್ನು ಹಾಯುವುದು ಮಾಡುತ್ತಿತ್ತು. ಗೋವಿಂದಪ್ಪನನ್ನು ಮಾತಾಡಿಸಿದರೆ ಆತ ಸಿಟ್ಟಾಗಿ ಎಮ್ಮೆಯನ್ನು ಹಲ್ಕಾ ಮಾತುಗಳಲ್ಲಿ ಬೈಯ್ಯತೊಡಗಿದ. ಎಮ್ಮೆಗೆ ‘ಅಮ್ಮನ್, ಅಕ್ಕನ್, ಅಜ್ಜಿ, ದೊಡ್ಡಮ್ಮ ಇತ್ಯಾದಿ’ ಎಂದು ಎಮ್ಮೆಯ ವಂಶಾವಳಿಯಲ್ಲಿರಬಹುದಾದ ಎಲ್ಲ ಹೆಣ್ಣು ಎಮ್ಮೆಗಳನ್ನು ನಿಂತಲ್ಲೇ ಅತ್ಯಾಚಾರ ಮಾಡತೊಡಗಿದ. ನನಗೆ ಎಮ್ಮೆಯ ಚಿಂತೆಯಾಗತೊಡಗಿತು. ಉಸಿರಾಡಲು ಕಷ್ಟಪಡುತ್ತಿದ್ದ ಎಮ್ಮೆ ಮಲಗುವುದು, ದಢಕ್ಕನೆ ಏಳುವುದು ಮಾಡತೊಡಗಿತು. ಇನ್ನೊಂದು ಸ್ವಲ್ಪ ಹೊತ್ತಾದರೆ ಎಮ್ಮೆಗೆ ಉಸಿರಾಡಲು ಸಹ ಆಗದೆ ಸತ್ತು ಹೋಗಬಹುದೆಂದು ಅನಿಸಿತು. ಇದನ್ನು ಗೋವಿಂದಪ್ಪನಿಗೆ ಹೇಳಿದೆ. ಅವನಿಗೆ ಮತ್ತಷ್ಟು ರೇಗಿತು. ಇಷ್ಟು ಹೊತ್ತು ಕನ್ನಡದಲ್ಲಿ ತಡವರಿಸುತ್ತಾ ಬೈಯ್ಯುತ್ತಿದ್ದವನು ಈಗ ತೆಲುಗಿನಲ್ಲಿ ನಿರರ್ಗಳವಾಗಿ ಬೈಯ್ಯತೊಡಗಿದ.

ಕನ್ನಡದ ಬೈಗುಳಗಳು ನನಗೆ ಅರ್ಥವಾಗುತ್ತಿದ್ದವು. ತೆಲುಗು ನನಗೆ ಬರುವುದಿಲ್ಲವಾದರೂ ತೆಲುಗು ಬಲ್ಲ ನನ್ನ ಅನೇಕ ಪ್ರಾಣಮಿತ್ರರು ಆ ಭಾಷೆಯ ಹಲ್ಕ ಶಬ್ದಗಳನ್ನು ಬಾಯಿಪಾಠ ಮಾಡಿಸಿದ್ದರಿಂದ ಗೋವಿಂದಪ್ಪನ ಬೈಗುಳಗಳು ಸಾದ್ಯಂತ ಅರ್ಥವಾಗುತ್ತಿದ್ದವು. ಆ ಬೈಗುಳಗಳು ಮನುಷ್ಯ ಲೋಕದಲ್ಲಿ ಮಾತ್ರ ಬೈಗುಳಗಳಾಗಿದ್ದವು. ಎಮ್ಮೆ ಲೋಕದಲ್ಲಿ ಅವು ಅರ್ಥವಿಲ್ಲದ ಶಬ್ದಗಳಾಗಿದ್ದವಷ್ಟೆ. ಆದುದರಿಂದ ಎಮ್ಮೆ ಗೋವಿಂದಪ್ಪನ ಪೋಲಿ ಬೈಗುಗಳಿಗೆ ಕೇರು ಮಾಡದೆ ತನ್ನ ಪಾಡಿಗೆ ತಾನು ಕಟ್ಟುಸಿರು ಬಿಡುತ್ತ ಸಾಯುವ ಸಂಕಟದಲ್ಲಿತ್ತು ಅಥವಾ ಅನುಭವದ ಮೇಲೆ ಯಜಮಾನ ತನ್ನ ಬಗ್ಗೆ ಸಿಟ್ಟಾಗಿರುವುದು ಧ್ವನಿಯ ಏರಿಳಿತದಲ್ಲಿಯೇ ಎಮ್ಮೆ ಗುರುತಿಸಿತ್ತೆಂದು ಕಾಣುತ್ತದೆ.

ಅವನ ತೆಲುಗು ಬೈಗುಳಗಳು ಪ್ರಾರಂಭವಾದ ಮೇಲೆ ಲಕ್ಷ್ಮಮ್ಮನವರು ಮನೆಯೊಳಗಿನಿಂದ ಓಡಿ ಬಂದರು. ಅವರ ಕೈಯ್ಯಲ್ಲಿ ಒಂದು ಬಕೆಟ್ ನೀರಿದ್ದವು. ಸಿರಿಂಜ್, ಸೂಜಿಯನ್ನು ಸ್ಟೆರಿಲೈಸ್ ಮಾಡಲು ಲಕ್ಷ್ಮಮ್ಮನವರು ಒಂದು ಬಕೆಟ್ ತುಂಬ ಉಗುರು ಬೆಚ್ಚನೆ ನೀರು ತಂದಿದ್ದರು. ನನಗೆ ಬೇಕಾಗಿದ್ದು ಒಂದೆರಡು ಕಪ್ಪಿನಷ್ಟು ಕುದಿವ ನೀರು! ಲಕ್ಷ್ಮಮ್ಮನವರು ಮತ್ತೆ ಒಳಗೆ ಹೋಗಿ ಕುದಿವ ನೀರು ತರಲು ಇನ್ನೆಷ್ಟು ಹೊತ್ತು ಆಗುತ್ತದೆಯೋ ಎಂದು ಹೆದರಿಕೆಯಾಯಿತು. ಎಮ್ಮೆ ಆಗಲೇ ನೆಲದ ಮೇಲೆ ಉರುಳಾಡತೊಡಗಿತ್ತು. ಹೊಟ್ಟೆ ಇನ್ನೂ ಹೆಚ್ಚು ಉಬ್ಬಿಕೊಂಡಿತ್ತು. ಲೀಟರ್ ಗಟ್ಟಲೆ ಜೊಲ್ಲು ಸುರಿಯುತ್ತಿತ್ತು. ಕಣ್ಣುಗಳು ಊದಿಕೊಂಡಿದ್ದವು. ಕಿವಿಯ ಬುಡಗಳಲ್ಲಿಯೂ ಊತವಿತ್ತು. ಬಿಸಿ ನೀರು ಬರುವಷ್ಟರಲ್ಲಿ ಎಮ್ಮೆ ಸತ್ತು ಹೋಗುವುದು ಗ್ಯಾರಂಟಿ ಎನಿಸತೊಡಗಿತು. ಜನರಿಗೆ ಎಮ್ಮೆ ಹಿಡಿದುಕೊಳ್ಳಲು ತಿಳಿಸಿ ಬಿಸಿ ನೀರಿಗೆ ಕಾಯದೆ ಸ್ಟೆರಿಲೈಸ್ ಮಾಡದೆ ಬ್ಯಾಗಿನಲ್ಲಿದ್ದ ಅವಿಲ್ ಇಂಜೆಕ್ಷನ್ ಕೊಟ್ಟೆ.

ಕಾಂಪೌಂಡರ್ ಲಕ್ಷ್ಮಣನನ್ನು ಸ್ಟೊಮೆಕ್ ಟ್ಯೂಬ್ (Stomach tube), ಬೇಕಾಗಬಹುದಾದ ಇಂಜೆಕ್ಷನ್, ಹೊಟ್ಟೆಗೆ ಕುಡಿಸಲು ಪುಡಿ ತರಲು ಬೈಕಲ್ಲಿ ಆಸ್ಪತ್ರೆಗೆ ಕಳಿಸಿದೆ. ಆಸ್ಪತ್ರೆ ಎರಡು ಕಿಮೀ ದೂರವಿತ್ತು. ನಾನು ಎಮ್ಮೆಯ ಬಳಿಯೇ ಉಳಿದೆ.

ಕಾಂಪೌಂಡರ್ ಅತ್ತ ಹೋದ ಮೇಲೆ ಲಕ್ಷ್ಮಮ್ಮ ಕುದಿಯುವ ನೀರು ತಂದರು. ಅದರಲ್ಲಿ ಸೂಜಿ, ಸಿರಿಂಜ್‍ಗಳನ್ನು ಸ್ಟೆರಿಲೈಸ್ ಮಾಡಿಕೊಂಡು ಇನ್ನೊಂದು ಅವಿಲ್ ಇಂಜೆಕ್ಷನ್ ಕೊಡೋಣವೆಂದು ನನ್ನ ಬ್ಯಾಗನ್ನು ಹುಡುಕಾಡಿದೆ. ಊಹೂಂ. ಅದರಲ್ಲಿ ಅವಿಲ್ ಇಂಜೆಕ್ಷನ್ ಇರಲಿಲ್ಲ (ಅವಿಲ್ ಎನ್ನುವುದು Anti Histaminic injection). ಮಾತ್ರವಲ್ಲ ಅಲರ್ಜಿಗೆ ಕೊಡಬಹುದಾದ ಯಾವ ಇಂಜೆಕ್ಷನ್‍ಗಳೂ ಇರಲಿಲ್ಲ. ಕಾಂಪೌಂಡರ್ ಔಷಧ ತರುವ ತನಕ ಕಾಯಬೇಕಾಗಿತ್ತು.

ಲಕ್ಷ್ಮಮ್ಮರ ಮನೆಯ ಸುತ್ತಮುತ್ತ ಬೇಜಾನ್ ಜಾಗವಿತ್ತು. ಎಮ್ಮೆಯನ್ನು ಒಂದೆರಡು ಸುತ್ತು ಓಡಾಡಿಸಿದೆ. ಅದರ ಮೂರು ತಿಂಗಳ ಕರು ತಂದು ಮುಂದೆ ಕಟ್ಟಿಸಿದೆ. ಬಾಯಲ್ಲಿ ಒಂದು ಹಸಿರು ಕಡ್ಡಿಯನ್ನು ಇಟ್ಟು ಕಡಿಸತೊಡಗಿದೆ. ಇದರಿಂದ ಬಾಯಿಯ ಮುಖಾಂತರ ಒಂದಷ್ಟು ಗಾಳಿ ಹೊರ ಹೋಗುತ್ತದೆ. ಲಕ್ಷ್ಮಮ್ಮನವರ ಮನೆಯಲ್ಲಿ ಅಡಿಗೆ ಸೋಡ, ಶುಂಠಿ ಅಥವಾ ಇಂಗು ಯಾವುದೂ ಇರಲಿಲ್ಲ. ಇದ್ದಿದ್ದರೆ ತಿನ್ನಿಸಬಹುದಿತ್ತು. ಅಂಥ ಅಡಿಗೆ ಸಾಮಗ್ರಿಗಳು ದೊರಕಬಹುದಾದ ಮೂರ್ನಾಲ್ಕು ಮನೆಗಳಲ್ಲಿ ವಿಚಾರಿಸಿ ಲಕ್ಷ್ಮಮ್ಮ ಬರಿಗೈಯಲ್ಲಿ ಬಂದರು.

ಲಕ್ಷ್ಮಣ ಅತ್ತ ಹೋಗಿ ಹತ್ತು ನಿಮಿಷಗಳಾಗಿದ್ದವು. ಇತ್ತ ಈ ಕ್ಷಣ ಸಾಯುತ್ತದೆ, ಮುಂದಿನ ಕ್ಷಣ ಸಾಯುತ್ತದೆ ಎಂದು ಕ್ಷಣಗಣನೆ ಶುರುವಾಗಿದ್ದ ಎಮ್ಮೆ, ಯಾವ ಆತ್ಮಕ್ಕೆ ನಾನು ಆಗಲೇ ಶಾಂತಿ ಕೋರಿದ್ದೆನೋ ಆ ಆತ್ಮಕ್ಕೆ ತಾತ್ಕಾಲಿಕ ವಾಸ್ತವ್ಯ ಒದಗಿಸಿದ್ದ ಎಮ್ಮೆ ಎದುರು ನಿಂತಿತ್ತು. ಬೀಡಿ ಸೇದುವ ರೈತರು ಬೀಡಿ ಸೇದುತ್ತಿದ್ದರು, ಎಲೆ ಅಡಿಕೆ ಜಗಿಯುವವರು ಬಾಯಾಡಿಸುತ್ತಿದ್ದರು, ಕರುಗಳಿಗೆ ಜಂತು ಔಷಧ ಹಾಕುವ ಬಗ್ಗೆ, ಗರ್ಭ ನಿಲ್ಲದ ತಮ್ಮ ಎಮ್ಮೆ, ಆಕಳುಗಳ ಬಗ್ಗೆ ಮಾತಾಡುತ್ತಿದ್ದರು. ನಾನು ಕೈ ತೊಳೆದುಕೊಂಡು ಎಮ್ಮೆಯ ಗುದದ್ವಾರದಲ್ಲಿ ಕೈ ಹಾಕಿ ಪರೀಕ್ಷಿಸಿದೆ. ಇದರಿಂದಲೂ ಗಾಳಿ ಹೊರಹೋಗಲು ಸಹಾಯ ಆಗುತ್ತದೆ.

ಒಂದು ಹದಿನಾರು ನಂಬರಿನ ಸೂಜಿಯನ್ನು ಕೈಯಲ್ಲಿಡಿದು ಎಮ್ಮೆಯ ಹೊಟ್ಟೆಗೆ ಚುಚ್ಚಿ ಗಾಳಿಯನ್ನು ಹೊರಬಿಟ್ಟರೆ ಉಬ್ಬರ ಕಡಿಮೆಯಾಗಿ ಎಮ್ಮೆಗೆ ಹಳಾರ ಆಗುತ್ತದೆ ಎಂದು ಸೂಜಿ ಚುಚ್ಚಲು ಸಿದ್ಧನಾದೆ. ಏನಾಶ್ಚರ್ಯ? ಎಮ್ಮೆಯ ಕಣ್ಣು ಕಿವಿಯ ಊತಗಳು ಹೌದೋ ಅಲ್ಲವೋ ಎನ್ನುವಂತೆ ಕಡಿಮೆಯಾಗಿ ಚರ್ಮದಲ್ಲಿ ಸಣ್ಣ ಸುಕ್ಕುಗಳು ಕಾಣಿಸಿಕೊಂಡವು. ಆಹಾ! ಪಕ್ಕೆಲುಬುಗಳು ಮೆಲ್ಲನೆ ಕಾಣತೊಡಗಿದವು. ಎರಡೂ ಕಡೆ ಡೊಳ್ಳಿನಂತೆ ಊದಿಕೊಂಡಿದ್ದ ಹೊಟ್ಟೆಯ ಊತ ಕಡಿಮೆಯಾಗತೊಡಗಿತು. ಹೊಟ್ಟೆಯ ಮೇಲೆ ಬೆರಳಿನಿಂದ ಏಟಾಕಿದರೆ ‘ಠಣ್ ಠಣ್’ ಎನ್ನುತ್ತಿದ್ದ ಶಬ್ದ ಈಗ ‘ಡುಬ್ ಡುಬ್’ ಎನ್ನತೊಡಗಿತು.

ಎಮ್ಮೆ ಒಮ್ಮೆ ಉಸಿರನ್ನು ಜೋರಾಗಿ ಮೂಗಿನಿಂದ ಹೊರದಬ್ಬಿ ಕಟ್ಟುಸಿರು ಬಿಡುತ್ತಿದ್ದುದನ್ನು ನಿಲ್ಲಿಸಿ ಸರಾಗವಾಗಿ ಉಸಿರಾಡತೊಡಗಿತು. ಎಮ್ಮೆ ಸುತ್ತ ನಿಂತಿದ್ದ ಜನರು ನಿಟ್ಟು ಬೀಳುವಂತೆ ಸೀನಿತು. ಹತ್ತು ಅಡಿ ದೂರ ನಿಂತಿದ್ದವರಿಗೆಲ್ಲಾ ಎಮ್ಮೆ ಸಿಂಬಳದ ಪ್ರೋಕ್ಷಣೆಯಾಯಿತು. ಎರಡು ಕ್ಷಣದ ಕೆಳಗೆ ಎಮ್ಮೆಗಾಗಿ ಮರುಗುತ್ತಾ ನಿಂತಿದ್ದವರು “ಥೂ ಕೊಳಕು ಮುಂಡೆ” “ಓಸಡುಗ” ಎಂದು ಎಮ್ಮೆಯನ್ನು ಬೈಯುತ್ತಾ ಮುಖ ಮಾರೆ ಒರೆಸಿಕೊಳ್ಳತೊಡಗಿದರು.

ನಾವು ಎಮ್ಮೆ ಮುಂದೆ ನಿಂತಿದ್ದಾಗಲೇ ಲಕ್ಷ್ಮಣ ವಾಪಸು ಬಂದನು. ತಂದಿದ್ದ ಔಷಧಗಳಲ್ಲಿ ಪುಡಿಯನ್ನು ಗೋವಿಂದಪ್ಪನಿಗೆ ಕೊಟ್ಟು ಔಷಧ ಹೇಗೆ ಬಳಸಬೇಕೆಂದು ತಿಳಿಸಿದೆ. ಲಕ್ಷ್ಮಮ್ಮನವರಿಗೆ ಎಮ್ಮೆಯನ್ನು ನೋಡಿ ನಂಬಲಾಗಲಿಲ್ಲ. “ಏನ್ ಮ್ಯಾಜಿಕ್ ಮಾಡ್ದೆ ನೀನು?” ಎಂದು ನನ್ನನ್ನು ಪ್ರಶ್ನಿಸಿ ಎಮ್ಮೆಯನ್ನು ಮುಟ್ಟಿ ಮುಟ್ಟಿ ನೋಡಿದರು. ಗೋವಿಂದಪ್ಪನ ಸಿಟ್ಟು ಇಳಿದು ನಗತೊಡಗಿದ್ದ. ಎಲ್ಲರೂ ಮನೆ ಒಳ ಹೋಗಿ ಕುಳಿತುಕೊಂಡೆವು. ಲಕ್ಷ್ಮಮ್ಮ ಇದ್ದ ಹಾಲನ್ನೇ ಹೊಂದಿಸಿ ಹತ್ತು ಜನಕ್ಕೆ ಕರ್ರನೆಯ ಚಹಾ ಮಾಡಿದರು.

ಅಲ್ಲಿದ್ದ ಎಲ್ಲರಿಗೆ ನಾನು ಸಾಯುವಂತಿದ್ದ ಎಮ್ಮೆಯನ್ನು ಬದುಕಿಸಿದ ಜಾದೂಗಾರನಂತೆ ಕಾಣುತ್ತಿದ್ದೆ. ಆದರೆ ಆ ಎಮ್ಮೆ ನಾನು ಕೊಟ್ಟ ಒಂದೇ ಒಂದು ಅವಿಲ್ ಇಂಜೆಕ್ಷನ್‍ಗೆ ಇಷ್ಟೆಲ್ಲಾ ರಿಪೇರಿಯಾಯಿತೇ? ಅಥವಾ ತನ್ನಷ್ಟಕ್ಕೆ ತಾನೇ ಸರಿಯಾಯಿತೇ? ಎಂದು ಯೋಚಿಸುತ್ತಾ ಸುಮ್ಮನಿದ್ದೆ. ಈ ನನ್ನ ಮೌನ ಅಲ್ಲಿದ್ದ ಕೆಲವರಿಗೆ ನಿಗೂಢವಾಗಿ ಕಾಣಿಸಿತೋ ಏನೋ! “ಮಾಯ ಮಂತ್ರ ಮಾಡ್ದಂಗೆ ಹುಷಾರು ಮಾಡ್ಬಿಟ್ರಲ್ಲಾ ಸಾರ್! ದೇವ್ರು ಸಾರ್ ನೀವು!” ಎಂದ ರೈತನೊಬ್ಬನಿಗೆ “ಮಾರಾಯ, ಕೇವಲ ಎಮ್ಮೆಯ ಹೊಟ್ಟೆ ಉಬ್ಬರ ಅರ್ಥವಾಗದ ನಾನೆಂಥ ದೇವರು?” ಎಂದೆ.

ನಂತರದ ದಿನಗಳಲ್ಲಿ ಲಕ್ಷ್ಮಮ್ಮ ತನ್ನ ಉಳಿಕೆ ಬಳಿಕೆ ದುಡ್ಡನ್ನು ನನ್ನಲ್ಲಿ ಕೊಟ್ಟಿರುತ್ತಿದ್ದರು. ಬೇಕಾದಾಗ ಈಸಿಕೊಳ್ಳುತ್ತಿದ್ದರು. ಸಾವಿರಗಟ್ಟಲೆ ಎಂದು ಭಾವಿಸಬೇಡಿ. ನೂರಿನ್ನೂರು ರೂಪಾಯಿ ಅಷ್ಟೇ. ವರ್ಗವಾಗಿ ನಾನು ಹಂಪಸಾಗರ ಬಿಟ್ಟಾಗ ಎಣ್ಣೆಗೆಂಪು ಬಣ್ಣದ ದುಂಡು ಮುಖದ ಲಕ್ಷಣವಾಗಿದ್ದ ಲಕ್ಷ್ಮಮ್ಮ ಅಳುತ್ತಾ ಬೀಳ್ಕೊಟ್ಟದ್ದು ಇನ್ನೂ ನನ್ನ ಕಣ್ಮುಂದಿದೆ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು Avadhi

December 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Prabhakar Nimbargi

    ಡಾಕ್ಟ್ರೇ, ನಿಮ್ಮ ಕಥನ ಚೆನ್ನಾಗಿ ಮೂಡಿ ಬರುತ್ತಿದೆ. ನಿಮ್ಮ ಅನುಭವಗಳನ್ನು ಒಟ್ಟುಗೂಡಿಸಿ ವಿಂಗಡಿಸಿ ಹಲವಾರು ಪುಸ್ತಕಗಳನ್ನೇ ಪ್ರಕಟಿಸಬಹುದು. ಈ ಹೊತ್ತಿನಲ್ಲಿ ನನಗೆ ಹಿಂದೊಮ್ಮೆ ರೀಡರ್ಸ ಡೈಜೆಸ್ಟಿನಲ್ಲಿ ಓದಿದ್ದ ಪಾಶ್ಚಾತ್ಯ ಪಶುವೈದ್ಯನ ಪುಸ್ತಕದ ಸಂಕ್ಷಿಪ್ತ ಸಂಗ್ರಹ ನೆನಪಾಗುತ್ತಿದೆ. ಆದರೆ, ನಿಮ್ಮ ಕಥನಗಳಲ್ಲಿ ನಮ್ಮತನದ ವಾಸನೆ ಇದೆ. ಬರೆಯುತ್ತಾ ಇರಿ.

    ಪ್ರತಿಕ್ರಿಯೆ
  2. Dr.Devaraj MB.

    Revealed all Veterinary subjects in the episode with one example. Very nice Dr. Basheer.

    ಪ್ರತಿಕ್ರಿಯೆ
  3. T S SHRAVANA KUMARI

    ಮೂಕಪ್ರಾಣಿಯ ವೇದನೆ ಕಣ್ಣಿಗೆ ಕಟ್ಟಿದಂತಾಯಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: