ಡಾ. ಎನ್. ಜಗದೀಶ್ ಕೊಪ್ಪ
ಆಧುನಿಕ ಕನ್ನಡ ರಂಗಭೂಮಿಗೆ ಡಿ.ಎಸ್.ಚೌಗುಲೆ ಚಿರಪರಿತವಾದ ಹೆಸರು. ಕಳೆದ ಇಪ್ಪತ್ತೈದು ವರ್ಷಗಳಿಂದ ಸ್ವತಃ ನಾಟಕಕಾರರಾಗಿ, ಮರಾಠಿ ನಾಟಕಗಳ ಅನುವಾದಕರಾಗಿ ಕನ್ನಡ ರಂಗಭೂಮಿಗೆ ಹೊಸ ಹೊಳಹು ನೀಡಿದವರಲ್ಲಿ ಡಿ.ಎಸ್. ಚೌಗುಲೆ ಪ್ರಮುಖರಾದವರು. ಇದೀಗ ಅವರ ಪ್ರಮುಖ ಏಳು ನಾಟಕಗಳ ಸಂಕಲನ ನಾಡಿದ್ದು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗುವುದರ ಮೂಲಕ ಅವರ ಪ್ರಮುಖ ಅನುವಾದದ ನಾಟಕ ಕೃತಿಗಳು ಸೇರಿದಂತೆ ಗಾಂಧಿ ವಿರುದ್ಧ ಗಾಂಧಿ, ಗಾಂಧಿ-ಅಂಬೇಡ್ಕರ್, ಉಚಲ್ಯಾ, ಕಸ್ತೂರಬಾ, ದಿಶಾಂತರ, ಪೇಯಿಂಗ್ ಗೆಸ್ಟ್ ಮುಂತಾದ ನಾಟಕಗಳು ಓದುಗರಿಗೆ ಒಟ್ಟಿಗೆ ಲಭ್ಯವಾಗಲಿವೆ.
ನಾಟಕಗಳಲ್ಲಿ ಎರಡು ವಿದ. ಕೆಲವು ಪ್ರದರ್ಶನದ ಮೂಲಕ ಪ್ರೇಕ್ಷಕರ ಮನೆಗೆದ್ದರೆ, ಸಾಹಿತ್ಯ ಕೃತಿಯಾಗಿ ಓದುಗರ ಮನದಾಳಕ್ಕೆ ಇಳಿಯುವಲ್ಲಿ ಸೋಲುತ್ತವೆ. ಕನ್ನಡದ ಸಂದರ್ಭದಲ್ಲಿ ಇದಕ್ಕೆ ಅಪವಾದವೆಂಬಂತೆ, ಏಕಕಾಲದಲ್ಲಿ ಓದುಗ ಮತ್ತು ಪ್ರೇಕ್ಷಕನನ್ನು ತಲುಪುವ ಕೃತಿಗಳು ಸೃಷ್ಟಿಯಾಗಿವೆ. ಗಿರೀಶ್ ಕಾನರ್ಾಡರ ತೊಘಲಕ್ ಹಯವದನ ತಲೆದಂಡ ಹಾಗೂ ಪಿ. ಲಂಕೇಶರ ಸಂಕ್ರಾಂತಿ ಮತ್ತು ಗುಣಮುಖ ಇವುಗಳನ್ನು ಹೆಸರಿಸಬಹುದು. ಇಂತಹ ಸಾಲಿನಲ್ಲಿ ನಿಲ್ಲುವಂತಹ ನಾಟಕ ಕೃತಿಗಳನ್ನು ಕನ್ನಡಕ್ಕೆ ನೀಡಿದ ಅನನ್ಯ ಪ್ರತಿಭೆ ಚೌಗುಲೆಯದು.
ಚೌಗುಲೆಯೆಂಬ ಹಳ್ಳಿಗಾಡಿನ ಪ್ರತಿಭೆಯ ಹಿಂದೆ ಬೆಳಗಾವಿ ಮಣ್ಣಿನಲ್ಲಿ ಮಿಳಿತವಾಗಿರುವ ಬಹುಸಂಸ್ಕೃತಿ ಪರೋಕ್ಷವಾಗಿ ಪ್ರೇರಣೆಯಾಗಿದೆ. ಭೌಗೂಳಿಕವಾಗಿ ಬೆಳಗಾವಿ ಜಿಲ್ಲೆ ಕನರ್ಾಟಕದ ಭಾಗವಾಗಿದ್ದರೂ, ಅಲ್ಲಿನ ಜನ ವಿಶೇಷವಾಗಿ ಕನ್ನಡಿಗರು ಮತ್ತು ಮರಾಠಿಗರು ಎರಡೂ ಭಾಷೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆಯುವುದು ವಿಶೇಷ.
ಚಿಕ್ಕೋಡಿ ತಾಲೋಕಿನ ಗಡಿಗ್ರಾಮವಾದ ಬೆಡಕಿಹಾಳ್ ಎಂಬ ಗ್ರಾಮದಲ್ಲಿ ಜನಿಸಿದ ಚೌಗುಲೆ ಬಾಲ್ಯದಿಂದಲೂ, ಮಾತೃಭಾಷೆ ಕನ್ನಡದ ಜೊತೆಗೆ ಮರಾಠಿಯನ್ನು ಕಲಿತವರು. ಅಲ್ಲಿನ ಜಾತ್ರೆ ಮತ್ತು ಇತರೆ ಸಂದರ್ಭದಲ್ಲಿ ಜರುಗುತ್ತಿದ್ದ ಸಣ್ಣಾಟ( ಶ್ರೀ ಕೃಷ್ಣ ಪಾರಿಜಾತ) ತಮಾಷ ಎಂಬ ಮರಾಠಿ ನೃತ್ಯ ನಾಟಕ, ಮತ್ತು ನೊಂಗಿ ಭಜನ್ ಎಂಬ ಮರಾಠಿ ಜನಪದೀಯ ಭಜನೆಗಳನ್ನು ನೋಡುತ್ತಾ, ಕೇಳುತ್ತಾ ಬೆಳದವರು. ಇವು ಅಂತಿಮವಾಗಿ ಅವರೊಳಗೊಬ್ಬ ನಾಟಕಕಾರ ಜನ್ಮ ತಾಳಲು ಸಾಧ್ಯವಾಯಿತು.
ಭಾರತದ ರಂಗಭೂಮಿಯ ಜಗತ್ತಿನಲ್ಲಿ ಮರಾಠಿ ರಂಗಭೂಮಿಯ ಕೊಡುಗೆ ಅಪಾರವಾದುದು. ಸ್ವಾತಂತ್ರ್ಯ ಪೂರ್ವದಲ್ಲಿ ಕಂಪನಿ ನಾಟಕಗಳ ಮೂಲಕ ಭಾರತೀಯ ಸಂಗೀತ ಮತ್ತು ನೃತ್ಯ ಪರಂಪರೆಯನ್ನು ಪೋಷಿಸಿಕೊಂಡು ಬಂದ ಮರಾಠಿ ರಂಗಭೂಮಿ, 1970ರ ದಶಕದಲ್ಲಿ ಹೊಸ ಪ್ರಯೋಗಗಳ ಮೂಲಕ ಜಗತ್ತಿನ ರಂಗಭೂಮಿ ಭಾರತದತ್ತ ತಿರುಗಿ ನೋಡುವಂತೆ ಮಾಡಿತು. ಜೊತೆಗೆ ಕೇವಲ ನಾಟಕ ಕೃತಿಗಳಲ್ಲದೆ, ಅನೇಕ ಕಾದಂಬರಿ, ಕಥೆಗಳು, ಆತ್ಮಕಥನಗಳನ್ನು ನಾಟಕ ರೂಪಕ್ಕೆ ಅಳವಡಿಸಿ ಪ್ರಯೋಗಿಸಿದೆ. ಇಂತಹ ಅನೇಕ ಯಶಸ್ವಿ ಪ್ರಯೋಗಗಳನ್ನು ಕನ್ನಡಕ್ಕೆ ತರುವುದರ ಮೂಲಕ ಡಿ.ಎಸ್ ಚೌಗುಲೆ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ.
ಕಳೆದ 25 ವರ್ಷಗಳಿಂದ ಬೆಳಗಾವಿಯ ನಗರದಲ್ಲಿ ಖಾಸಾಗಿ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕರಾಗಿರುವ ಚೌಗುಲೆ ಇತ್ತೀಚೆಗೆ ಕನ್ನಡ ಮತ್ತು ಮರಾಠಿ ಆಧುನಿಕ ರಂಗಭೂಮಿ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬಹುಮುಖ ಪ್ರತಿಭೆಯ ಚೌಗುಲೆ ಕೇವಲ ನಾಟಕಕಾರರಷ್ಟೇ ಅಲ್ಲ, ಕಥೆಗಾರರಾಗಿ ಮೂರು ಕಥಾ ಸಂಕಲಗಳನ್ನು ಹೊರತಂದಿದ್ದಾರೆ. ಚಿತ್ರ ಕಲಾವಿದರಾಗಿ ಅವರು ಚಿತ್ರಿಸಿದ ಅನೇಕ ವರ್ಣ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರದರ್ಶನಗಳಲ್ಲಿ ಪ್ರದರ್ಶನಗೊಂಡಿವೆ. ಇತ್ತೀಚೆಗೆ ತಾನೆ ಮೂಲ ಮರಾಠಿ ಭಾಷೆಯಿಂದ ದಲಿತ ಲೇಖಕ ಲಕ್ಷಣ ಗಾಯಕವಾಡರ ಉಚಲ್ಯಾ ಆತ್ಮ ಕಥನವನ್ನು ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ನಾಟಕವಾಗಿ ರೂಪಾಂತರಿಸಿರುವ ಚೌಗುಲೆಯವರ ಎಲ್ಲಾ ನಾಟಕಗಳು ಈಗ ಒಟ್ಟಿಗೆ ಸಂಕಲನದ ರೂಪದಲ್ಲಿ ದೊರೆಯುತ್ತಿರುವುದು ಅಧ್ಯಯನ ದೃಷ್ಟಿಯಿಂದ ಕನ್ನಡ ರಂಗಭೂಮಿಯ ಆಸಕ್ತರಿಗೆ ವರವಾಗಲಿದೆ.










0 Comments