ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಚೌಕ’ ಪರವಾಗಿಲ್ಲ

ಜ್ಯೋತಿ ಅನಂತಸುಬ್ಬರಾವ್ 

“ಅಪ್ಪ… ಅಪ್ಪ..” ಹಾಡು ಕೇಳಿ ಮತ್ತು ಒಳ್ಳೆಯ ಸಿನಿಮಾ ಎಂಬ ವಿಮರ್ಶೆ ಕೇಳಿ ಬಹಳ ದಿನಗಳಿಂದ ನೋಡಬೇಕೆಂದಿದ್ದ “ಚೌಕ” ಸಿನಿಮಾ ನೋಡಲು ಇಂದು ಬಿಡುವು ಮಾಡಿಕೊಂಡೆ.

ಸಿನಿಮಾದ ಒಟ್ಟು ಆಶಯಗಳು‌ ಚೆನ್ನಾಗಿವೆಯಾದರೂ ವೀಕ್ಷಕರನ್ನು ನೈಜತೆಯಿಂದ ದೂರ ಒಯ್ದು ಕಲ್ಪನಾ  (ಭ್ರಮಾ)ಲೋಕದಲ್ಲಿ ಮುಳುಗಿಸುತ್ತದೆ. ಆದರೆ ಕೆಲವು ಪ್ರಸಂಗಗಳು ಮಾತ್ರ ನಿಜ ಘಟನೆಗಳನ್ನು ಬಿಂಬಿಸುತ್ತವೆ. ಚೌಕ ಕೆಲವೊಮ್ಮೆ ಭಾವನಾಲೋಕಕ್ಕೆ ಕರೆದೊಯ್ದು ನೋಡುಗರ ಕಣ್ಣುಗಳನ್ನು ತೇವಗೊಳಿಸುವುದು ಸುಳ್ಳಲ್ಲ. ಅದರಲ್ಲೂ ನಿರಪರಾಧಿ ತಂದೆ ಆರೋಪ ಹೊತ್ತು ಸೆರೆಮನೆ ವಾಸ ಅನುಭವಿಸುವ ಪಾತ್ರ ನಿರ್ವಹಿಸಿರುವ ಹಿರಿಯ ಕಲಾವಿದರ ಅಭಿನಯ ಅಮೋಘ. ಈ ಸಾಮಾಜಿಕ-ಆರ್ಥಿಕ-ರಾಜಕೀಯ ವ್ಯವಸ್ಥೆ ನಿರಪರಾಧಿಗಳನ್ನು ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಸಿ (case fit ಮಾಡಿ) ಮುಗ್ಧರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರ ಬದುಕನ್ನೇ ನಾಶಗೊಳಿಸುವುದನ್ನು ಬಿಂಬಿಸುವ ಚಲನಚಿತ್ರ ಚೌಕ.

ಚೌಕ ಸಿನಿಮಾದ ಮೂಲ ಪರಿಕಲ್ಪನೆಯಲ್ಲಿ ಭಾರತದ ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಭ್ರಾತೃತ್ವ ಹಾಗೂ ಮಾನವೀಯ ಮೌಲ್ಯಗಳು ಅಡಕವಾಗಿವೆ ಎಂದು ಸೂಕ್ಷ್ಮವಾಗಿ, ಆಳವಾಗಿ ಗಮನಿಸಿದಾಗ ಅನಿಸುತ್ತದೆ. ಸಮಾಜದ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಹಿಂದೂತ್ವವಾದಿ ಕೋಮುವಾದದ ಕ್ರೌರ್ಯವನ್ನು ಚಿತ್ರಿಸುತ್ತಲೇ ಅಮಾಯಕ ಮುಸ್ಲಿಮ್ ಯುವಕರನ್ನು ಸುಖಾಸುಮ್ಮನೆ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಕುತಂತ್ರವನ್ನು ಬಿಚ್ಚಿಡಲಾಗಿದೆ.

ಸಮಾಜ ಹೆಣ್ಣನ್ನು ನೋಡುವ ಮತ್ತು ನೋಡಬೇಕಾದ ಬಗೆ ಎರಡನ್ನೂ ಹೇಳಲಾಗಿದ್ದರೂ ಸಿನಿಮಾದ ಮಸಾಲಾ ಬಹಳ ಘಾಟು ಮತ್ತು ಖಾರ ಎನಿಸಿತು. ಕುಟುಂಬದವರೊಡನೆ ಕುಳಿತು ನೋಡಲು ಅಸಹ್ಯ ಮತ್ತು ಮುಜುಗರ ಉಂಟು ಮಾಡುವ ಕೆಲವು ಅನಗತ್ಯ ಸನ್ನಿವೇಶಗಳನ್ನು ಸೃಷ್ಟಿಸಿರುವುದನ್ನು ಗಮನಿಸಿದಾಗ ಚಲನಚಿತ್ರವನ್ನು ವ್ಯಾವಹಾರಿಕ ದೃಷ್ಟಿಯಿಂದ ತಯಾರಿಸಲಾಗಿದೆ ಎಂಬ ಭಾವನೆ ಬಾರದಿರದು.

ಜೈಲು ವಾತಾವರಣ ಚಿತ್ರೀಕರಿಸಿರುವುದು ಅಪ್ಪಟ ಸಿನಿಮೀಯ ಮಾದರಿಯಲ್ಲೇ ಇದೆ. ಅಂತಿಮ ಗುರಿ ಮತ್ತು ಹಾದಿ ಅಸ್ಪಷ್ಟವಾಗಿರುವುದರಿಂದ ಸಿನಿಮಾ ಅಲ್ಲಲ್ಲಿ ಕೆಲವು ಭಾವುಕ ಮತ್ತು ರೋಚಕ ಕ್ಷಣಗಳನ್ನು ನೀಡುವುದ ಬಿಟ್ಟರೆ ಒಟ್ಟಾರೆ ಉದ್ದೇಶ ಸಾರ್ಥಕವಾದಂತೆ ಎನಿಸಲಿಲ್ಲ. ಯುವಕರಲ್ಲಿ ಆಸಕ್ತಿ ಮೂಡಿಸಬಹುದೇನೋ..

“ಪಿತೃ” ಪ್ರಧಾನವಾದ ಸಿನಿಮಾ ಚೌಕ ಎಂಬುದು ವಿಶೇಷವಾಗಿತ್ತು. ಅಪ್ಪ.. ಐ ಲವ್ ಯು.. ಅಪ್ಪ.. ಹಾಡು ಮೆಚ್ಚುವಂತಹದ್ದೇ. ಅಪ್ರತಿಮವಾದ ಕಲಾವಿದರ ತಂಡ ಚೌಕಗೆ ಕಾರ್ಯ ನಿರ್ವಹಿಸಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನಾ ಕೇಳಿದ ವಿಮರ್ಶೆಯಷ್ಟಂತೂ ಚೌಕ ನನಗೆ ಇಷ್ಟವಾಗಲಿಲ್ಲ… ಆದರೂ ಪರವಾಗಿಲ್ಲ. ಅದರ ಅಂತರಂಗದ ಆಶಯಗಳಿಂದಾಗಿ… ಒಮ್ಮೆ ನೋಡಬಹುದು.

‍ಲೇಖಕರು avadhi

17 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading