ಚೇರ್ಕಾಡಿ ರಾಮಚಂದ್ರ ರಾಯರು ಇನ್ನಿಲ್ಲ
ಸಂಡೇ ಇಂಡಿಯನ್ ಲೇಖನದಿಂದ ಆಯ್ದ ಭಾಗ ಇಲ್ಲಿದೆ–
‘ಈ ಭೂಮಿ ನಮ್ಮ ತಾತ ಮುತ್ತಾತರಿಂದ ಬಂದ ಬಳುವಳಿಯಲ್ಲ. ಮಕ್ಕಳು ಮೊಮ್ಮಕ್ಕಳಿಂದ ಎರವಲಾಗಿ ಪಡೆದದ್ದು’ ಎಂಬುದನ್ನು ಅಕ್ಷರಶಃ ನಂಬಿ ಬದುಕುತ್ತಿರುವ ಬೆರಳೆಣಿಕೆಯಷ್ಟು ಮನುಷ್ಯ ಜೀವಿಗಳ ಪೈಕಿ ಚೇರ್ಕಾಡಿ ರಾಮಚಂದ್ರ ರಾಯರು ಕೂಡ ಒಬ್ಬರು.
ಸುಮಾರು ೪೦ ವರ್ಷಗಳ ಹಿಂದಿನ ಮಾತು. ಕಳೆ ಸಸ್ಯಗಳ ನಡುವೆ ಭತ್ತದ ಸಸಿಗಳು ಹುಟ್ಟಿಕೊಂಡದ್ದನ್ನು ಕಂಡ ಫುಕುವೋಕಾ ಅವರಿಗೆ ಏನೋ ಹೊಳೆದಿತ್ತು. ಇತಿಹಾಸದ ಪುಟಗಳಲ್ಲಿ ಆ ಘಟನೆ ಒಂದು ಹೊಸ ಮೈಲಿಗಲ್ಲಾಯಿತು. ಅದೇ ಜಪಾನ್‌ನ ‘ಒನ್ ಸ್ಟ್ರಾ ರೆವೆಲ್ಯೂಷನ್’. ರಾಸಾಯನಿಕ ಬಳಸದೆ, ಭೂಮಿಯನ್ನು ಉಳದೆ ನೂತನವಾದ ಕೃಷಿ ಪದ್ಧತಿಯೊಂದು ಅಂದು ಆರಂಭಗೊಂಡಿತು.
ಸರಿಸುಮಾರು ಅದೇ ಸಂದರ್ಭದಲ್ಲಿ ಉಡುಪಿಯ ಚೇರ್ಕಾಡಿಯಲ್ಲಿ ಗಾಂಧಿಯ ಸ್ವಾವಲಂಬನಾ ಪದ್ಧತಿ ನಂಬಿ ನಡೆಯುತ್ತಿದ್ದವರು ರಾಮಚಂದ್ರ ರಾಯರು. ಮಾವಿನ ಮರದ ಬುಡದಲ್ಲಿ ಬೆಳೆದಿದ್ದ ಭತ್ತದ ಸಸಿ ಕಂಡು ಫುಕುವೋಕಾರಂತೆ ಅವರ ಮನದಲ್ಲಿಯೂ ಮಿಂಚಿನ ಸಂಚಾರವಾಗಿತ್ತು. ೧೬ ಕವಲೊಡೆದಿದ್ದ ಆ ಭತ್ತದ ಸಸಿಯಿಂದ ಅರ್ಧ ಕಿ.ಗ್ರಾಂ. ಭತ್ತ ಸಂಗ್ರಹಿಸಿದ್ದರು. ಇದೇ ‘ಚೇರ್ಕಾಡಿ ಪದ್ಧತಿ’ ಸೃಷ್ಟಿಗೆ
ನಾಂದಿ ಹಾಡಿತು. ಚೇರ್ಕಾಡಿಯವರು ತಮ್ಮ ಒಂದು ಹೆಕ್ಟೇರ್ ಒಣ ಭೂಮಿಯಲ್ಲಿ ಮಾವು, ತೆಂಗು, ಕಾಳು ಮೆಣಸು, ಶುಂಠಿ, ಗೇರು ಬೀಜ, ಹತ್ತಿ, ತರಕಾರಿ ಎಲ್ಲವನ್ನೂ ಬೆಳೆಸುತ್ತಾರೆ. ಅವರಿರುವ ಪುಟ್ಟ ಗುಡಿಸಲಿನಲ್ಲಿ ಬೆಳಕಿಗಿರುವುದು ಸೀಮೆಎಣ್ಣೆ ಬುಡ್ಡಿ. ಪಂಪ್ ಸೆಟ್ ಬಳಕೆ ಇಲ್ಲದ ಹಳೆಯ ಕೊಳವಿದೆ. ೮೫ರ ಅಂಚಿನಲ್ಲಿರುವ ಚೇರ್ಕಾಡಿಯವರು ೪೦ ಅಡಿ ಆಳದ ಬಾವಿಯಿಂದ ತಾವೇ ಸ್ವತಃ ನೀರೆಳೆದು ಮರಗಳಿಗೆ ನೀರುಣಿಸುತ್ತಾರೆ. ನೀರು ಮೇಲೆತ್ತಲು ‘ಸರ್ವೋದಯ ಎಳೆತ’ ಎಂಬ ಹೊಸ ಪದ್ಧತಿ ಅನ್ವೇಷಿಸಿದ್ದಾರೆ. ಇದರಿಂದ ೧೦ ನಿಮಿಷಗಳೊಳಗೆ ೧೦೦ ಬಕೆಟ್ ನೀರೆತ್ತಲು ಸಾಧ್ಯ.
ಮನುಷ್ಯ ತ್ಯಾಜ್ಯವನ್ನೂ ರಾವ್ ತಮ್ಮ ಕೃಷಿ ಭೂಮಿಗೆ ಸ್ವಾಭಾವಿಕ ಗೊಬ್ಬರವಾಗಿ ಬಳಸಿಕೊಂಡಿದ್ದಾರೆ. ಸರ್ಕಾರದಿಂದ ‘ಕೃಷಿ ಪಂಡಿತ’ ಎಂಬ ಬಿರುದು ಬಿಟ್ಟರೆ ಇವರ ಸಾಧನೆಯನ್ನು ಯಾರೂ ಗುರುತಿಸಿಲ್ಲ. ಆದರೆ ಭೂತಾಯಿ ಗಮನಿಸಿದ್ದಾಳೆ. ಫುಕುವೋಕಾ ಪರಿಸರದೊಂದಿಗೆ ಸಂವಹಿಸುತ್ತಾ ಬದುಕಿನ ಅರ್ಥ ಕಂಡುಕೊಂಡರೆ, ಚೇರ್ಕಾಡಿ ಗಾಂಧಿ ತತ್ವ ಅನುಸರಿಸುತ್ತಾ ಪರಿಸರಕ್ಕೆ ಹತ್ತಿರಾದರು. ಇಬ್ಬರೂ ಸ್ವಾವಲಂಬನಾ ಕೃಷಿ ಪದ್ಧತಿಗೆ ಪ್ರಾಮುಖ್ಯ ನೀಡಿದರು. ಆದರೆ ಫುಕುವೋಕಾ ಜಾಗತಿಕ ವ್ಯಕ್ತಿಯಾದರು. ನಮ್ಮ ಅನರ್ಘ್ಯ ಮುತ್ತು ಚಿಪ್ಪಿನಲ್ಲೇ ಉಳಿಯಿತು







0 Comments