ಮಗುವಿಗೊಂದು ಪತ್ರ
–ಚೇತನಾ ತೀರ್ಥಹಳ್ಳಿ

ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ.
ಮುಳ್ಳು ಕಿತ್ತ ನೋವು,
ಮುಳ್ಳು ಕಿತ್ತ ನಿರುಮ್ಮಳ,
ಹಾಗೇ ಇದೆ.
ಕಿವುಡಾಗಲೇಬೇಕಿತ್ತು ನಾನು,
ಕುರುಡಾಗಲೇಬೇಕಿತ್ತು.
ಮೂಕತನವನೆಲ್ಲ ಹುಗಿದು
ಮಾತಾಡಲೇಬೇಕಿತ್ತು.
ಅಬ್ಬರದ ಸಂತೆಯಲಿ ನೀನು
ಅಮ್ಮಾ ಅಂದಿದ್ದು-
ಎದೆಯ ಆಚೆಗೇ ನಿಂತು ಹೋಗಿತ್ತು…
ನಿನ್ನ ಪುಟ್ಟ ಕೈಗಳು ನನ್ನ
ತಡೆಯಲಾಗಲಿಲ್ಲ.
ಪ್ರಶ್ನೆಗಳ ಕಂಬನಿ ಕರೆಗಟ್ಟಿದ್ದ
ಕಣ್ಣುಗಳನ್ನ
ತಪ್ಪಿಸಿಬರಬೇಕಿತ್ತು…
ನಾ ಕಳೆದ ನಿನ್ನ ಬದುಕಿನ ಮೊತ್ತ
ಲೆಕ್ಕವಿಟ್ಟಿದೇನೆ ಮಗೂ,
ನಿನ್ನ ನೋವಿನ ಋಣ
ನನ್ನ ಹೆಗಲ ಮೇಲಿದೆ.
ನೆನಪಿಗೊಂದು ಕಂಬನಿ ಸುರಿದು
ಸಾಗರವಾಯ್ತೆಂದು ಸುಳ್ಳಾಡಲಾರೆ,
ನಿನ್ನ ನೆನೆಯುವ ಧೈರ್ಯ ನನಗಿಲ್ಲವಾಗಿದೆ.
ಮಗೂ,
ಸೋಗು ನಗುವಿನ ನನ್ನ
ಕಣ್ಣುಗಳನೊರೆಸಿ,
ಉತ್ತರ ಗೊತ್ತೆಂದು ಹೇಳುವ ದಿನಕಾಗಿ
ಕಾದಿದ್ದೇನೆ.
ಅದಕೆಂದೇ ಅಕ್ಷರಗಳ ಸಾಲು ಹಾಸಿ,
ಸೇತುವೆ ಕಟ್ಟಿದೇನೆ.
ನಿನ್ನ ಹೆಮ್ಮೆಗೆ ಉಬ್ಬಿ,
ಹಗುರಾಗುವ ದಿನಕಾಗಿ
ಕಾದಿದ್ದೇನೆ ಮಗೂ,
ಮುಳ್ಳು ಕಿತ್ತ ಗಾಯ
ಮಾಯುವುದನ್ನೆ ಕಾಯುತ್ತಿದ್ದೇನೆ…
(ನಾಳೆ, ಅಂದರೆ ೧೯ಕ್ಕೆ ಮಗು ಪ್ರಣವನಿಗೆ ೧೦ ವರ್ಷ ತುಂಬಿಹೋಗತ್ತೆ!
ಅದಕ್ಕೇ, ಈ ಹೊತ್ತಲ್ಲಿ, ಪ್ರೀತಿ ಮತ್ತು ನೋವಿನಿಂದ ಈ ಕವಿತೆ, ನನ್ನ ಮಗನಿಗಾಗಿ….)
ಚೇತನಾ ಹೊಸ ಕವಿತೆ: ಹೆಜ್ಜೆ ಕಿತ್ತು ಬಂದ ದಿನ..
ನಿಮಗೆ ಇವೂ ಇಷ್ಟವಾಗಬಹುದು…





nice gift for ur son mam…, after some years make him read this,he will like