ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚುಮು ಚುಮು ಚಳಿಯಲಿ..

ಚುಮು ಚುಮು ಚಳಿಯಲಿ  come ಬಳಿ

ಸುನಿತಾ ಕುಶಾಲನಗರ

ಹೆಂಡತಿ ಊರಿಗೆ ಹೋದಾಗ

ಬೇಕು ಕಂಬಳಿ

ಹೆಂಡತಿ ಬಂದಾಗ ಕರೆದೆ

Come ಬಳಿ

‘ಡುಂಡಿರಾಜ’ರ ಚುಟುಕ ನೆನಪಿಸಿಕೊಳ್ಳುವ ಚುಮು ಚುಮು ಕಾಲವಿದು. ಅದರಲ್ಲೂ ಕರ್ನಾಟಕದ ಕಾಶ್ಮೀರವಾದ ಕೊಡಗಿನಲ್ಲೀಗ ಹಗಲಿನಲ್ಲೂ ಅಂದರೆ ನಡು ಮಧ್ಯಾಹ್ನವೂ ಕೂಡಾ ನಡುಗುವ ಚಳಿ. ಮಂಜಿನ ಬೆಳ್ಳಿ ಪರದೆಯ ಕೆಳಗಿನ ಮಂಜಿನ ನಗರಿ ಅಲಂಕಾರ ಮುಗಿಸಿ ಪರದೆ ಸರಿಸಲು ಏರು ಹೊತ್ತು ಅದೆಷ್ಟು ಕಳೆದರೂ ಸಾಲದು. ಮೆಲ್ಲ ಮೆಲ್ಲನೆ ಸೂರ್ಯನ ಬಿಸಿಲಿಗೆ ಸರಿಯುವ ಪರದೆಯಿಂದ ಕಂಗೊಳಿಸುವ ದೃಶ್ಯ ವರ್ಣನಾತೀತ !

ಬೆಟ್ಟ ಗುಡ್ಡ, ಇಳಿಜಾರುಗಳನ್ನು ಹಾಯುತ್ತಾ ಬಳಕುವ ರಸ್ತೆಗಳಲ್ಲಿ ಸಾಗುವಾಗ ರಸ್ತೆಯ ಇಕ್ಕೆಲಗಳನ್ನು ನೋಡುವುದೇ ಒಂದು ಹಬ್ಬ ! ಮರ ಗಿಡಗಳ ಎಲೆಗಳುದಿರಿ ಸೊರಗುವ ಈ ಚಳಿಗಾಲದಲ್ಲಿ ಕಾಡ ಮಲ್ಲಿಗೆಗಳ ದರ್ಬಾರು ನೋಡಲು ಕಣ್ಣಗಳೆರಡೂ ಸಾಲದು. ಕೊರೆಯುವ ಬಳಿಗೆ ಕ್ಯಾರೆ ಮಾಡದೆ ಮೈಯೊಡ್ಡಿ ಗೊಂಚಲು ಗೊಂಚಲಾಗಿ ತಲೆಯೆತ್ತಿ ಕಂಗೊಳಿಸುವ ಕಾಡುಮಲ್ಲಿಗೆಯ ರಾಶಿಗಳನ್ನೊಮ್ಮೆ ಕಣ್ಣಾರೆ ನೋಡಲೇಬೇಕು.

ಸದಾ ಮೌನ ಪ್ರಕೃತಿಯೊಳಗೆ ಮುಳುಗಿ ಧ್ಯಾನಸ್ಥ ಸ್ಥಿತಿಯಲ್ಲಿದ್ದ ಜೀವನದಿಯ ತವರಲ್ಲೀಗ ಅತಿಥಿಗಳ ಕಲರವ. ಚಳಿಯನ್ನು ಲೆಕ್ಕಿಸದೆ ಕೊಡಗನ್ನು ನೋಡುವ ಕಾತರದಿಂದ ದಂಡು ದಂಡಾಗಿ ಮುತ್ತುವ ಪ್ರವಾಸಿಗರನ್ನು ನೋಡುವುದು ಮತ್ತೊಂದು ಮಜಾ ! ಚಳಿಗೆಂದು ವಿಶೇಷ ಉಲ್ಲನ್ ಉಡುಗೆಯನ್ನೂ ಜೊತೆಗೆ ತಂದಿರುತ್ತಾರೆ. ಎಲ್ಲರೂ ಬದಿಗಿಟ್ಟ ಉಲ್ಲನ್ ಸ್ಪೆಟರ್, ಶಾಲು, ಟೋಪಿ, ಸಾಕ್ಸ್ ಎಲ್ಲವೂ ಈಗ ಹೊರಗೆ ಬರುತ್ತವೆ.

ಇನ್ನು ಈ ಕಾಲದಲ್ಲಿ ಮಲಗುವಾಗ ಇರುಸು ಮುರುಸಾಗಿ ದೂರ ದೂರ ಮಲಗುವ ದಂಪತಿಗಳು ಬೆಳಗಿನ ಚಳಿಯ ಚಿಲಿಪಿಲಿಗೆ ಒಂದಾಗಿರುತ್ತಾರೆ ಎಂದರೆ ಒಪ್ಪಿಕೊಳ್ಳತ್ತೀರಿ ತಾನೇ ? ಕೊರೆಯುವ ಚಳಿಗೆ ತಲೆ ಹುದುಗಿಸಿಕೊಂಡು ಮಲಗುವ ಸುಖ ಅಬ್ಬಾ ! ಅದು ಹೇಳತೀರದು. ಚಳಿಯಿಂದ ಆಲಸ್ಯ ಮೈಗೂಡಿ ಬೆಳಗ್ಗಿನ ನಡಿಗೆಯನ್ನು ಮೊಟಕುಗೊಳಿಸಿ ಕಂಬಳಿಯೊಳಗೆ ಬೆಚ್ಚಗೆ ಮಲಗಿ ಸುಖವಾಗಿರುತ್ತೇವೆ. ಆದರೆ ಬೆಳ್ಳಂ ಬೆಳಗಿನ ಶುಭ್ರ ತಂಪಿಗೆ ತಲೆಯನ್ನು ಒಡ್ಡಿಕೊಳ್ಳುವುದರಲ್ಲಿ ಮತ್ತಷ್ಟು ಸುಖವಿದೆ ಎಂಬುದು ಅನುಭವಿಗಳ ಮಾತು. ಹಾಗೆಯೇ ಶಬರಿಮಲೆ ಯಾತ್ರೆಗೆ ಹೊರಟವರ ವ್ರತಾಚಾರಣೆಯಲ್ಲಿ ಚಳಿ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂದು ನಿಮಗೆ ಗೊತ್ತು.

ಚಳಿಗಾಲವೆಂದರೆ ವಯೋವೃದ್ಧರು ಹಾಗೂ ಮಕ್ಕಳಿಗೆ ಆರೋಗ್ಯದ ಏರುಪೇರು ಸಾಮಾನ್ಯ. ಹುಡುಗಿಯರು ಕೂಡಾ ಈ ಕಾಲಕ್ಕೆ ಮೂಗು ಮುರಿಯುತ್ತಾರೆ. ಸೌಂದರ್ಯ ಪ್ರಜ್ಞೆ ಇರುವವರು ತುಸು ಹೆಚ್ಚೇ ಜಾಗರೂಕರಾಗಬೇಕಾಗುತ್ತದೆ. ಮುಖ, ಕೈ ಕಾಲು ಒಡೆದು, ಚರ್ಮ ಒಣಗಿ ತಾಜಾ ಸೌಂದರ್ಯವನ್ನೆಲ್ಲಾ ಮರೆ ಮಾಚಿರುತ್ತದೆ. ಎಷ್ಟು ಮುತುವರ್ಜಿ ವಹಿಸಿದರೂ ದೇಹದ ಸ್ವಾಭಾವಿಕತೆಯನು ಉಳಿಸಿಕೊಳ್ಳಲಾಗದೆ ಚರ್ಮ ತಜ್ಞರ ಬಳಿ ಓಡಬೇಕಾಗುತ್ತದೆ. ಅಲ್ಲದೆ ಮೋಯಿಶ್ಚರೈಸರ್ಸ್, ಗ್ಲಿಸರಿನ್, ವ್ಯಾಸಲೀನ್, ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್ ಮುಂತಾದವುಗಳ ಬಳಕೆಗೆ ಮೊರೆ ಹೋಗುತ್ತೇವೆ.

ಜನ ಜಂಗುಳಿ, ವಾಹನಗಳ ಅಬ್ಬರ, ಪ್ರವಾಸಿಗರ ದಂಡಿಗೆ ಸದಾ ಬ್ಯುಸಿಯಾಗುವ ಪಟ್ಟಣಗಳಿಗಿಂತ ಚಳಿಗಾಲದ ತ್ರಿಲ್ಲನ್ನು ಹಳ್ಳಿಗಳಲ್ಲಿ ಸವಿಯಬೇಕು. ಸೂರ್ಯ ವಿದಾಯ ಹೇಳುತ್ತಿದ್ದಂತೆಯೇ ಚಳಿ ಆಕ್ರಮಿಸಿ ಸೊಪ್ಪು, ಸದೆ ಮುಂತಾದವನ್ನು ಗುಡ್ಡೆ ಹಾಕಿ ಬೆಂಕಿಕೊಟ್ಟು ಅದರ ಸುತ್ತ ವೃತ್ತವಾಗಿ ಕುಳಿತು ಬೆಂಕಿ ಕಾವನ್ನು ಮೈಗೆ ಒಡ್ಡಿಕೊಳ್ಳುತ್ತಾ ಲೋಕರೂಢಿಯನ್ನು ಹಂಚಿಕೊಂಡು ಹಿರಿಯರ ಹಿಂದಿನ ಕಥೆಗಳನ್ನೆಲ್ಲಾ ಮೆಲುಕಿಸುತ್ತಾ ಸಿಗುವ ಸುಖವಿದೆಯಲ್ಲಾ …? ಅದನ್ನು ಅನುಭವಿಸಿಯೇ ತೀರಬೇಕು.

ಚಳಿಯಲ್ಲಿ ಬೆಂಕಿ ಕಾಯಿಸೋ ವಿಚಾರದಲ್ಲಿ ನನ್ನದೂ ಒಂದು ಅನುಭವ ಹಂಚಿಕೊಳ್ಳುವೆ. ಹಿಂದೆ ನಮ್ಮಜ್ಜ ದಪ್ಪ ದಪ್ಪ ಕಟ್ಟಿಗೆಗೆ ಬೆಂಕಿ ಕೊಟ್ಟು ಚರ್ಮ ಸುಡುವಷ್ಟು ಶಾಖ ಬರುವಂತೆ ಮಾಡಿ ತನ್ನರಡು ಕಾಲುಗಳನ್ನು ಉಜ್ಜುತ್ತಾ ಕುಳಿತ್ತಿರುತ್ತಿದ್ದರು. ನಾವು ಅವರನ್ನು ಅಂಟಿ ಕುಳಿತು ಅವರು ಹೇಳುವ ಕಥೆ ಹಾಗೂ ಅವರ ಅನುಭವದ ಘಟನೆಗಳಿಗೆ ಸೋಜಿಗದ ಕಿವಿ, ಕಣ್ಣುಗಳಾಗುತ್ತಿದ್ದವು. ಬೆಂಕಿ ಕಾಯಿಸುವ ಆ ಸುಂದರ ಸಂಜೆಗಳಲೆಲ್ಲಾ ಏನಾದರೊಂದು ಸುಟ್ಟು ತಿನ್ನುವ ಸುಂದರ ಕಾರ್ಯಕ್ರಮವೂ ನಮ್ಮೊಳಗೆ ಮುಖ್ಯ ಪಾತ್ರ ವಹಿಸುತ್ತಿತ್ತು. ಉದ್ದ ಮರಗೆಣಸನ್ನು ಸಿಪ್ಪೆ ಸಹಿತ ಕೆಂಡದೊಳಗೆ ತುರುಕಿ ಹದವಾಗಿ ಬೇಯುವ ಸಮಯಕ್ಕೆ ಸರಿಯಾಗಿ ಈಚೆ ಎಳೆದು ಉಫ್ ! ಉಫ್ ! ಎಂದು ಉರುವಿ ಅದರ ಸಿಪ್ಪೆ ಬಿಡುಸುವಾಗ ಬೆಂದ ಗೆಣಸಿನಿಂದ ಬರುತ್ತಿದ್ದ ಘಮದ ಹಬೆ ನೆನೆದರೆ ಈಗಲೂ ಬಾಯಲ್ಲಿ ನೀರೂರಿಸುತ್ತವೆ.

ಹಂಚಿ ತಿಂದ ಒಗ್ಗಟ್ಟಿನ ಒಲವು ಇಂದು ಇಲ್ಲವಾಗಿ ಮೆಲ್ಲಗೆ ನೋವಿನ ಸೆಲೆಯೊಂದು ಮೀಟಿ ತಿವಿಯುತ್ತದೆ. ಏನೇ ಇರಲಿ ಅಂದಿನ ಆ ಮಜಾ ಇಂದು ಮತ್ತು ಇಂದಿನವರಿಗೆಲ್ಲಿ ? ಎಂಬುದನ್ನು ಸ್ಪಲ್ಪ ಯೋಚನೆಗೆ ತಳ್ಳುತ್ತದೆ ಅಲ್ಲವೆ ? ಹಾಗೆಯೇ… ಅದೊಂದು ರಾತ್ರಿ ಅಮ್ಮ ನನ್ನ ತಲೆಗೆ ಕೊಬ್ಬರಿ ಎಣ್ಣೆ ಚೆನ್ನಾಗಿ ಹಚ್ಚಿ ರಾತ್ರಿ ಮಲಗಿ ಬೆಳಗ್ಗೆ ಏಳುವ ವೇಳೆಗೆ ಅದು ತಲೆಯಲ್ಲಿ ಮೇಣದಂತೆ ಗಟ್ಟಿಯಾಗಿ ತಲೆಯಿಂದ ಬಿಡಿಸಲಾಗಿದೆ, ಕೂದಲು ಬಾಚಿಕೊಳ್ಳಲೂ ಆಗದೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಆ ದಿನಗಳಲ್ಲಿ ಚಳಿಯಲಿ ಬೆಳಗ್ಗೆ ಅಮ್ಮ ಎಷ್ಟು ಬೊಬ್ಬೆ ಹಾಕಿದರೂ ಹಾಸಿಗೆ ಬಿಟ್ಟು ಏಳುತ್ತಿರಲಿಲ್ಲ. ಇನ್ನೂ ಬೆಳ್ಳಂ ಬೆಳಗ್ಗೆ ಚಳಿ ಕಾಯಿಸುತ್ತಾ ಕುಳಿತರಂತೂ ನಮ್ಮನ್ನು ಎಬ್ಬಿಸಿ ಶಾಲೆಗೆ ಹೊರಡಿಸುವಷ್ಟರಲ್ಲಿ ನಾಲ್ಕೈದು ಏಟು ಬೀಳುತ್ತಿತ್ತು.

ಅದೇನೆ ಇರಲಿ ಹೊಸ ಮಧುಮಕ್ಕಳಿಗೂ, ಯುವ ಪ್ರೇಮಿಗಳಿಗೂ ಚಳಿ ಎಂದರೆ ಬಹಳ ಇಷ್ಟ.

ಚಳಿ ಚಳಿ ತಾಳೆನು ಈ ಚಳಿಯಾ… ಎಂಬ

ಹಾಡಿನಂತೆ. ಹೌದು ತಾನೇ ?

 

‍ಲೇಖಕರು admin

29 March, 2017

3 Comments

  1. John suntikoppa

    ಇತ್ತೀಚೆಗೆ ಚಳಿಗಾಲದಲ್ಲಿ ಚಳಿ ಜಾಸ್ತಿ , ಬೇಸಿಗೆಯಲ್ಲಿ ಸೆಖೆಯೂ ಜಾಸ್ತಿಯಾಗಿ ಬಿಟ್ಟಿದೆ ಮೇಡಂ .
    ಅಭಿನಂದನೆಗಳು ನಿಮಗೆ .

  2. Anonymous

    ಯವ್ವಾ ದಳಾ ದಳಾ ಬೆವರ ಇಳಿಯಾಕುಂತೈತಿ, ಈಗ ಥಂಡಿ ಅಂತೀಯಲಬೇ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading