ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿನ್ನೆಕೋಲು, ದಸ್ಯ ಒಂದಾಗಿ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಆಡುವ ಮನಸ್ಸಿದ್ದರೆ ಕಾಡಲು ಏನೂ ಇರುವುದಿಲ್ಲ, ಇದ್ದರೂ ಎಲ್ಲಾ ಮರೆತು ನಿರಾತಂಕವಾಗಿ ಗುಂಪಲ್ಲಿ ಮಕ್ಕಳು ಮರಿ ಒಂದಾಗಿ ಆಡಬೇಕು ಅಂತಾ ಅನೇಕ ಹಿರಿಯರು ಹೇಳಿದ ಮಾತುಗಳು ಹೊಸ ತರದ ಕುತೂಹಲಗಳಾಗಿ ವ್ಯಾಪಾರಿ ಆಟಗಳ ಹಿಂದೆ ಬಿದ್ದಿರುವ ಮಕ್ಕಳು ಪೋಷಕರಿಗೆ ಅರಿವಾಗಬೇಕಿದೆ.

ನನ್ನ ಊರಿನ ನೆಲ ಈಗಲೂ ಸ್ಥಳೀಯವಾದ ಪ್ರಸಿದ್ದ ಜನಪದ ಆಟಗಳನ್ನು ತನ್ನ ತೆಕ್ಕೆಯೊಳಗೆ ಸದಾ ಉಳಿಸಿಕೊಂಡಿದೆ. ಹತ್ತಾರು ಬಗೆಯ ಆಟಗಳು ಕಾಲದ ಹೃದಯದಲ್ಲಿ ಪಿಸುದನಿಗಳಂತೆ ಉಳಿದು ಮಕ್ಕಳ ಚಿತ್ತಲೋಕಕ್ಕೆ ತುಂಬಿಕೊಂಡಿವೆ.

ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ವಿರಾಮದ ಘಂಟೆ ಹೊಡೆದ ಚಣ ಮಾತ್ರದಲ್ಲಿ ಮೂಲೆ ಮುಡುಕಿನಲ್ಲಿ ಇದ್ದ ಉದ್ದನೆಯ ಕೋಲುಗಳು ನಮ್ಮ ಕೈಗೆ ಬಂದು ಸುತ್ತಲೂ ಹೊರಗೆ ನಿಂತು ಸರದಿಯಲ್ಲಿ ಒಬ್ಬರ ಕೈಯಲ್ಲಿ ಕೋಲು ಅಡ್ಡ ಹಿಡಿದು ಉಗ್ಗುವುದು ಉಳಿದ ಹದಿನೈದು ಇಪ್ಪತ್ತು ಮಂದಿ ಕೋಲನ್ನು ಹಿಡಿದು ಉಗ್ಗಿಕೊಂಡು ಓಡುವುದು. 

ಕಲ್ಲಿನ ಮೇಲೆ ಕೋಲಿಟ್ಟವರು ಔಟಾಗದೆ ಮಣ್ಣಿನ ಮೇಲೆ ಇಟ್ಟವರು ಸೋಲುವ ಸ್ಥಿತಿ ಇರ್ತಾಯಿತ್ತು. ಅಜ್ಜಿಯಂತೆ ಪ್ರೀತಿಯಿಂದ ಜೊತೆಯಾಗುತ್ತಿದ್ದ ಕಟ್ಟೆ ದಂಡೆಯು ನನ್ನ ಊರಿಗೆ ಹೃದಯವಿದ್ದಂತೆ. ಸತ್ತವರು, ಬದುಕಿದವರು, ಆಡು ಕುರಿ ದನಗಳು ದಂಡೆಯ ಸುತ್ತ ಬೆಳೆದ ಜಾಲಿಮರಗಳಲ್ಲಿ ಒಂದಷ್ಟು ಪ್ರಭೇದದ ಹಕ್ಕಿಗಳು ಎಲ್ಲರನ್ನೂ ಪೊರೆಯುವ ಈ ಕಟ್ಟೆ ದಂಡೆಗೆ ನಾವೆಲ್ಲಾ ಹಿರೆಹಕ್ಕಿಗಳಂತೆ ನೇತು ಬೀಳುತ್ತಿದ್ದೆವು. 

ಊರಿನ ಎಲ್ಲಾ ಮಕ್ಕಳು ಬೆಳಗು ಬೈಗುಗಳನ್ನು ನಮ್ಮೊಳಗೆ ಊರಿಕೊಂಡು ನೈಜವಾಗಿ ಆಡಿ-ಕುಣಿಯಲು ಆಸರೆಯಾದದ್ದು ಈ ದಂಡೆ. ದಂಡೆ ಪಕ್ಕದಲ್ಲೇ ಇದ್ದ ದನದ ಮಂದೆ ಊರ ದನ ಕಾಯುವ ಕಂಠಣ್ಣ ಈ ಹುಡುಗ್ರುಗೆ ಅಡ್ಡಿ ಆಜ್ಞೆ ಏನೂ ಇಲ್ಲ, ಬೈಗಾದರೆ ಕಟ್ಟೆ ದಂಡೆಗೆ ಕುಣ್ಯಕೋಗ್ತವೆ. ಹುಳ ಉಪ್ಡೆ ಕಡುದ್ರು ಆತೆ ಅಂತ ದಿನ ಗೊಣಗಿದರು ನಾವೇನೂ ಅವನ ಮಾತಿಗೆ ಉಪ್ಪಾಕೋರೇ ಅಲ್ಲ. ಗಂಟೆಗಟ್ಟಲೆ ಚಿನ್ನೆಕೋಲು ಆಡುತ್ತಾ ಆನಂದಿಸಿದ್ದೇವೆ. 

ಸೋತವರು ಆಟ ಶುರುವಾದ ಜಾಗಕ್ಕೆ ಹೋಗುವಾಗ
ಜಿಕ್ಕಮ ಜಿಗರಿನ
ಕಾಲಿನ ಬಿದರಿನ
ಎತ್ತಿನ ಗಿಡ್ಡ
ಮುತ್ತಿನ ಚೆಂಡು
ರತ್ನಗಿರಿ ಬಾಳೆಪಟ್ಟೆ ಬರ್ಗೂರಯ್ಯ
ಜೀsssssಹೀಗೆ ಹೇಳ್ಕೊಂಡು ಸೋತವರನ್ನು ಕುಂಟಿಕೊಂಡು ನಡೆಸುತ್ತಾ ಉಸಿರುಕಟ್ಟಿ ಜೀsss ಇಡುಸ್ತಾ ಇದ್ವಿ. 

ಹೀಗೆ ಬರುವಾಗ ದಾರಿಯ ಬಡ್ಡೆಗೆ ಸಿಗುವ ಹುಲಿಯಣ್ಣು, ಬೇಲಿಹಣ್ಣು, ತೋಬ್ರೆಹಣ್ಣು ತರಾವರಿಯವು ಬಾಯಿಗೆ ಬಣ್ಣ ಬಳಿಯುತ್ತಿದ್ದವು. ಗುಂಪು ತಂಪು ಅನ್ನೊ ನಾಣ್ಣುಡಿ ನಮ್ಮ ಭಾಗದಲ್ಲಿ ಎಲ್ಲರೂ ಬಳಸುವ ಮಾತು. ಯಾವ ಕಲಹಗಳೂ ಇಲ್ಲದೆ ಸೋಲನ್ನು ಅವಮಾನಿಸದೆ ಗೆಲುವನ್ನು ಮೆರೆಸದೆ ಸಮತೋಲನದಲ್ಲಿ ನಾವೆಲ್ಲಾ ಕೂಡಿಕೊಂಡು ಗುಂಪಲ್ಲಿ ಆಡಿದ ಈ ಚಿನ್ನೆಕೋಲು ಕನಕದ ಗಣಿಯಂತೆ ನಮ್ಮೊಳಗೆ ಸ್ಥಿರ ನೆನಪಿನ ಮುದಗಳನ್ನು ಉಳಿಸಿದೆ.

‘ದಸ್ಯ’ ಬೇಸಿಗೆಯಲ್ಲಿ ‘ದಸ್ಯ’ ಎನ್ನುವ ವಿಶೇಷ ಆಟ ಆಡುತ್ತೇವೆ. ಹಜಾರದಲ್ಲಿ ಮನೆಮಂದಿಯೆಲ್ಲ ಕುಳಿತು ಆಡುವ ಈ ‘ದಸ್ಯ’ ಕೌರವರು ಪಾಂಡವರು ಆಡಿದ ಪಗಡೆಯಂತೆ. ಅಲ್ಲಿ ಎಲ್ಲವೂ ಸೇಡಿನ ಅವಾಂತರದಲ್ಲಿತ್ತು. ನಾವು ಆಡುವ ಈ ‘ದಸ್ಯ’ ಒಂದಷ್ಟು ಕಾಲ ಅಕ್ಕಪಕ್ಕದವರನ್ನೆಲ್ಲಾ ಸೇರಿಸಿಕೊಂಡು ಫಲಿತಾಂಶ ಬರುವವರೆಗೆ ಕುತೂಹಲ ಉಳಿಸಿಕೊಂಡಿರುತ್ತದೆ. ಕೆಲವೊಮ್ಮೆ ಹಣ ಕಟ್ಟಿಯೂ ಆಡುತ್ತೇವೆ. ಅಂಗಡಿಯಲ್ಲಿ ಸಿಗುವ ಬಾಯಿ ಬಣ್ಣವಾಗುವ ಪೆಪ್ಪರ್ಮೆಂಟಿಗೆ ಬಂಡವಾಳ ಈ ಹಣ. ‘ದಸ್ಯ’ ನಮ್ಮೊಳಗೆ ಎಂಥದ್ದೇ ಮುನಿಸು ಕೇಡುಗಳನ್ನು ತಂದಿಲ್ಲ. 

‘ಅಟ್ಟುಗುಣಿ ಮಣೆ’ ಉಗಾದಿಯ ಹಿಂದೆ ಮುಂದೆ ಇಡೀ ಊರು ಹಲವು ಬಗೆಯ ವಿಸ್ಮಯಗಳಿಗೆ ಒಡ್ಡಿ ಕೊಳ್ಳುತ್ತದೆ. ಪ್ರತಿ ಮನೆಯ ಪಡಸಾಲೆಗಳಲ್ಲೂ ಜೀವಂತಿಕೆಗೆ ಮೆರಗು ತರುವ ಚೌಕಾಭಾರ, ಅಟ್ಟಗುಣಿ ಮಣೆ ಆಡುತ್ತೇವೆ. ನಡುವಲ್ಲಿ ಜಂತೆಗೆ ಕಟ್ಟಿದ ಸಿಬ್ಬಲಿನಲ್ಲಿರುವ ಹೋಳಿಗೆಗಳು ಆಗಾಗ ಬಾಯಿಗೆ ಇಳಿಯುತ್ತಾ ಸಿಹಿಯಾಗಿ ಬಿಡುತ್ತೇವೆ. 
ರಜೆಯ ದಿನಗಳೆಂದರೆ ಒಡೆದು ಹೋದ ಬಣ್ಣದ ಬಳೆಗಳ ಗಾಜಿನ ಚೂರುಗಳು ನಮ್ಮ ಕೈಗೆ ಬಂದು ಸೀದಾ ಬೀದಿಗೆ ಹೋಗ್ತಾಯಿದ್ವಿ. ಹದವಾದ ಮೆದು ನೆಲವಿರುವ ಜಾಗದಲ್ಲಿ ಮೂರು ಸಣ್ಣ ಗುಂಡಿ ತೆಗೆದು ಮುಚ್ಚುತ್ತಿದ್ದೆವು. ಎದುರಾಳಿ ತಂಡದವರು ಯಾವ ಗುಂಡಿಯಲ್ಲಿ ಬಳೆಯ ಚೂರುಗಳಿವೆ ಎಂಬುದನ್ನು ಹುಡುಕಬೆಕಿತ್ತು. 

ಮಣ್ಣಿನ ಮಡಿಲಿಗೆ ಬಿದ್ದು ಕಣ್ಮರೆಯಾದ ಬಳೆಗೊರಿಗಳನ್ನು ಹುಡುಕುವ ಈ ಆಟ ಮುಗಿದ ಮೇಲೆ ಗೆದ್ದ ಗೋರಿಗಳನ್ನೆಲ್ಲಾ ಊದು ಬತ್ತಿಯ ಪೊಟ್ಟಣದಲ್ಲಿ ಹಾಕಿ ಹಿಂದಕ್ಕೆ ಅಗಲ ಗಾಜನ್ನು ಅಂಟಿಸಿ ಬಣ್ಣದ ಲೋಕವೇ ನಮ್ಮದಾಯಿತೆಂಬಂತೆ ಆನಂದಿಸುತ್ತಿದ್ದುದು ಅನನ್ಯ ಅನುಭವ.

ಊರ ಮುಂದಲ ಬಿಕ್ಕೇ ಗಿಡದಲ್ಲಿ ಅದೆಷ್ಟು ಸಲ ನಾವು ಕೋತಿಗಳಾಗಿ ಒದೆ ತಿಂದೆವೊ ಲೆಕ್ಕವಿಲ್ಲ. ಕಾಯಿ ಬಿಕ್ಕೆಯನ್ನೇ ತಿಂದು ಗಂಟಲು ಹಿಡಿದು ಕೆಮ್ಮಿದರೆ ನಾವೆಂದೂ ಮದ್ದು ಕುಡಿದವರಲ್ಲ. ಉಪ್ಪು ಹಾಕಿ ಸುಟ್ಟು ಕೊಡುತ್ತಿದ್ದ ಗೂಸೇ ಹಕ್ಕಿಯ ಬಾಡು ನಮ್ಮ ಕೆಮ್ಮನ್ನು ಇಳಿಸಿದ್ದು ಸತ್ಯ. ಈಗಲೂ ನಮ್ಮ ಊರಿನಲ್ಲಿ ಅಸ್ತಮಕ್ಕೆ ಶಿಫಾರಸ್ಸು ಮಾಡಿದ ಆಹಾರವೆಂದು ಅಡವಿಯ ಪಿಲ್ಲಿಯನ್ನು ಬೇಯಿಸಿ ತಿನ್ನುತ್ತಾರೆ. ಈ ಪುನುಗು ಪಿಲ್ಲಿಯ ಸಾರಿನ ಹುಳಿ ಕುಡಿದು ಕುಡಿದು ನಗರದ ಎಂಥದ್ದೇ ಮಾಲಿನ್ಯಕ್ಕೆ ಎದುರಾದರೂ ನಮಗೆ ಕೆಮ್ಮು ಬರುವುದು ವಿರಳವೆ.

ಮರಕ್ಕೆ ಕೋತಿಗಳಾಗಿ ನೆಗೆದು ಇಳಿದು ತಿಂದು ಎಷ್ಟೆಲ್ಲಾ ಲವಲವಿಕೆ ಹೊದಿಸಿದ ಈ ಕೋತಿಯಾಟ ತಂದ ಸಂತಸಕ್ಕೆ ಪಾರವೇ ಇಲ್ಲ.

ಭತ್ತದ ಗದ್ದೆಗೆ ಗಿಣಿ ಕಾಯಲು ಹೋಗುತ್ತಿದ್ದ ನಾವೆಲ್ಲಾ ಅಸಾಧ್ಯವೆನ್ನುವ ಆಟಗಳಲ್ಲಿ ಮುಳುಗೆದ್ದಿದ್ದೇವೆ. ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುವವರ ಕಿವಿಗಳೇ ಹರಿದು ಹೋಗುವಂತೆ ಕೂಗಿ ಕವಣೆ ಬೀಸಿದ ಕೈಗಳು ಈಗಲೂ ಹಸಿರಿಗೆ, ಹಕ್ಕಿಗಳ ಸದ್ದಿಗೆ ಮೌನದಲ್ಲಿ ಶರಣಾಗುತ್ತವೆ. 

ಅನೇಕ ಸಲ ಊರಿನವರು ಒಟ್ಟಿಗೆ ಕೂಗುವ ನಮ್ಮನ್ನೆಲ್ಲಾ ತೊಗ್ಲಿಂದಾಗವತ್ಗೆ ತಡ್ಕಂಡೈತೆ ಇನ್ಯಾತ್ರು ದನ ಆಗಿದ್ರೆ ಈಟತ್ಗೆ ಒಡ್ಡೋಗದು ಅಂತಾ ಬೈದದ್ದು ಇದೆ. ಬಿಸಿಲೇರಿದ ಮೇಲೆ ಹಕ್ಕಿಗಳು ಬರ್ತಾಯಿರ್ಲಿಲ್ಲ. ಆಗೆಲ್ಲಾ ಅಡುಗೆ ಆಟ ಇರ್ತಾಯಿತ್ತು. ಜೋಳ ಬೇಯಿಸುವುದು, ಕುರಿ ಮೇಕೆ ಹಾಲು ತಂದು ಟೀ ಕಾಯಿಸುವ ಈ ಕ್ರಿಯೆಗಳಲ್ಲಿ ಟೀ ಪುಡಿ ಬೆಲ್ಲ ಕದ್ದು ಮನೆಗಳಲ್ಲಿಯೇ ಶತ್ರುಗಳಾಗಿದ್ದೇವೆ. 

ಚಿಪ್ಪು ಗುಂಡು ಕುರಿ ಮೇಕೆ ಹಕ್ಕಿ ಕವಣೆಗಳೆಲ್ಲಾ ನಮ್ಮ ಆಟಗಳಿಗೆ ಜೊತೆಯಾಗಿ ನೆನಪಿನ ಮಳೆಯಲ್ಲಿ ಈಗಲೂ ತೋಯುವ ಸಿರಿ ಉಳಿಸಿವೆ. ಹಣ್ಣು ಕದಿಯುವುದನ್ನೇ ಒಂದು ಆಟ ಮಾಡ್ಕೊಂಡು ಊರ ಸುತ್ತ ಬೆಳೆದ ಎಲ್ಲಾ ಬಗೆಯ ತರಾವರಿ ಹಣ್ಣುಗಳನ್ನು ಕದ್ದು ಶಿಕ್ಷೆಗೆ ಒಳಗಾದರೂ ನೈಜ ನಗುವನ್ನು ನಾವೆಂದೂ ಕಳೆದುಕೊಂಡಿಲ್ಲ.

ವರ್ಷಕ್ಕೆ ಒಮ್ಮೆ ಕಡ್ಲೆ ಗಿಡ ಕಿತ್ತ ಮೇಲೆ ಊರಿನಲ್ಲಿ ಶೇಂಗಾ ಬೆಳೆದ ಎಲ್ಲರ ಮನೆಗಳ ಮುಂದೆಯೂ ಕಡ್ಲೆ ಬಳ್ಳಿ ಬಣವೇ ಒಟ್ಟಿರೊರು. ರಾತ್ರಿ ಹನ್ನೊಂದಕ್ಕೆ ಒಂದೇ ಬಸ್ಸು ಶಿರಾ ಪೇಟೆಯಿಂದ ನಮ್ಮ ಊರಿಗೆ ಬರುವುದು. ಬಸ್ಸು ಬರುವವರೆಗೂ ಕಡ್ಲೆ ಕಾಯಿ ಬಿಡಿಸಲು ಜನ ಬರುತ್ತಿದ್ದರು. ಈ ಕೆಲಸ ನಡೆಯುವಾಗ ನಾವೆಲ್ಲಾ ಸೇರಿ ಒಡ್ಡುವ ಒಡಾಕುವ ಆಟ ಆಡ್ತಾಯಿದ್ವಿ. 

ನಮ್ಮೂರಿನ ಸಿದ್ದಕ್ಕನ ಮಗ ಸಣ್ಣಶಿವ ಹೇಳಿದ ಒಗಟುಗಳು ಈಗಲೂ ನಮ್ಮ ಮಕ್ಕಳಿಗೆ ಹೇಳಲು ನೆರವಾಗಿದೆ. ಒಡ್ಡಿ ಒಡಾಕುವ ಆಟವೆಂದರೆ ಒಂದು ಒಗಟು ಹೇಳುವುದು ಮತ್ತು ಉತ್ತರಿಸುವುದು.

ನೆಟ್ಟನ್ ಮರ್ಕೆ ನೆಳ್ಕೇ ಇಲ್ಲ (ದಾರಿ)
ಅಂಬಾರ್ದಾನೆ ಹಾರೋಗಿಣಿ
ಉಂಬಕೋಗನ ಬಾರ್‍ಗಿಣಿ (ಬಾಳೆ ಎಲೆ)
ಈಟೆ ಉಡ್ಗ ಪೇಟ
ಸುತ್ತೆವ್ನೆ (ಬೆಂಕಿಕಡ್ಡಿ)

ಇಂತಹ ಸಾವಿರಾರು ಒಗಟುಗಳನ್ನು ಒಡ್ಡಿ ಒಡಾಕುವ ಆಟವಂತೂ ಅರಿವಿಗೆ ಅಕ್ಷಿಯಿದ್ದಂತೆ. ಈಗಲೂ ಪ್ರತಿ ವರ್ಷ ಶೇಂಗಾ ಬಿಡಿಸುವಾಗ ಅನೂಚಾನುವಾಗಿ ಇದು ನಡೆಯುತ್ತಿರುತ್ತದೆ. ನನ್ನ ಊರಿನಲ್ಲಿ ಎಲ್ಲಾ ಕಾಲಕ್ಕೂ ಆಡುವ ಈ ಆಟಗಳು ತನ್ಮಯತೆಯ ಗೂಡಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಮುದಗೊಳಿಸಿವೆ. 

‘ದಸ್ಯ’ ಆಡುವಾಗಲಂತೂ ನಿದ್ರೆಗೆ ವಿದಾಯ ಹೇಳಿದ ದಿನಗಳೆಷ್ಟೋ. ಗುಂಪುಗೂಡಿ ಆಡುವ ಆಟಗಳಲ್ಲಿ ಜಗಳ ಜೂಟಿ ಬಂದಾಗಲೂ ಊರಿನ ಹಿರಿಯರು ತಣ್ಣಗೆ ಬಗೆಹರಿಸಿದ ನಿದರ್ಶನಗಳಿವೆ. ಎಲ್ಲಾ ಆಟಗಳಲ್ಲೂ ಸೋಲು ಗೆಲುವೆರಡನ್ನೂ ಮಕ್ಕಳಂತೆ ಪ್ರೀತಿಸುವ ವ್ಯವಧಾನವನ್ನೇ ಕಲಿತಿದ್ದೇವೆ.

ಮಳೆಗಾಲದ ದಿನಗಳಲ್ಲಿ ಬೀದಿಯಲ್ಲಿ ಆಡಲು ಸಾಧ್ಯವಾಗದೇ ಹೋದಾಗ ನುಗ್ಗೇ ಮತ್ತು ಬೇವಿನ ಮೇಣವನ್ನು ತಂದು ಒಡೆದ ಮಡಕೆಯ ಬಿಲ್ಲೆಗಳನ್ನು ಅಂಗೈಯಲ್ಲಿ ಅರ್ಧ ಅಗಲ ಬೋಕಿ ಪಿಂಚೆ ಮಾಡಿ ಮೇಣ ಮೆತ್ತಿ ಎರಡೂ ಕೈಗಳಿಗೆ ಅಂಟಿಸಿಕೊಂಡು ತಾಳ ರಾಗಗಳೇ ಇಲ್ಲದೆ ಗೋಷ್ಠಿ ಮಾಡಿದ ಗಳಿಗೆಗಳಂತೂ ಅಪೂರ್ವ. ಆ ಟಕ್ ಟಕ್ ಸದ್ದುಗಳು ಲಯಬದ್ದವಾಗಿ ಮನಸ್ಸುನ್ನು ಆಳುತ್ತಿವೆ.

ಮನೆ ಮನಸ್ಸುಗಳಲ್ಲಿ ಗೋಡೆಗಳಿಲ್ಲದೆ ಒಂದಾಗಿ ಆಡುವ ಎಲ್ಲಾ ಆಟಗಳು ಊರಿನ ಘನತೆಯನ್ನು ಹೆಚ್ಚಿಸಿವೆ ಎಂದರೆ ಅತಿಶಯೋಕ್ತಿಯಲ್ಲ. 
ಇಷ್ಟೆಲ್ಲಾ ನೈಜವಾಗಿ ಬೆಳೆದ ನಾವು ಹೈಜಿನಿಕ್ ಪ್ರಜ್ಞೆಗೆ ಜೋತು ಬಿದ್ದು ನಗರದಲ್ಲಿ ನಮ್ಮ ಮಕ್ಕಳನ್ನು ಮನೆಯ ಮುಂದಿನ ಅಂಗಳಕ್ಕೆ ಬರಿಗಾಲಲ್ಲಿ ನಡೆಯಲು ಬಿಡದಷ್ಟು ಕೃತಕವಾಗುತ್ತಿರುವ ಕುರಿತು ವ್ಯಥೆಯಾಗುತ್ತದೆ.

2 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading