
ರಾಜಾರಾಂ ತಲ್ಲೂರು
ಗೊಂದಲದಲ್ಲಿ ಸಿಗುವ ಲಾಭ ಕೆಲವೊಮ್ಮೆ ಸ್ಪಷ್ಟತೆಯಲ್ಲಿ ಇರುವುದಿಲ್ಲ. ಪ್ರತಿಪಕ್ಷಗಳು ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಈವತ್ತಿನ ತನಕ ಹೊಂದಿದ್ದ ನಿಲುವು ಮತ್ತು ಅದು ಮಾಧ್ಯಮಗಳ ಹುಯಿಲಿನ ಕಾರಣದಿಂದಾಗಿ ಸಾರ್ವಜನಿಕರಲ್ಲಿ ಎಬ್ಬಿಸಿದ್ದ ಕನಿಕರದ ಅಲೆಯನ್ನು ಕಂಡರೆ, ಇಂತಹದೊಂದು ಗೊಂದಲ ಚುನಾವಣೆಯ ತನಕವೂ ಮುಂದುವರಿದು ಸರ್ಕಾರದ ವಿಶ್ವಾಸಾರ್ಹತೆ ತೀರಾ ಹಾನಿಗೀಡಾದೀತು ಎಂದು ನಿರೀಕ್ಷೆ ಇತ್ತು.
ಆದರೀಗ ಪ್ರತಿಪಕ್ಷಗಳು ಚೆಂಡನ್ನು ನೇರವಾಗಿ ಸರ್ಕಾರದ ಅಂಗಳಕ್ಕೆ ಎಸೆದುಕೊಟ್ಟಂತಾಗಿದೆ. ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಯೊಂದಿಗೆ, ಆಟದ ಕಣದ ಧೂಳು ತಿಳಿಯಾಗಿದೆ. ಕಾನೂನು ತನ್ನ ಹಾದಿಯಲ್ಲಿ ಸದ್ದಿಲ್ಲದೆ ಕೆಲಸ ಮಾಡಲಿದೆ. ಸರ್ಕಾರ ಮುಖ ಉಳಿಸಿಕೊಂಡಿದೆ. ಆದರೆ, ಪ್ರತಿಪಕ್ಷಗಳ ಕೈಯಲ್ಲಿದ್ದ ಬಲವಾದ ಹತ್ಯಾರೊಂದು ಇಲ್ಲವಾಗಿದೆ.
ಆತ್ಮಹತ್ಯೆಗೆ ಪ್ರೇರಣೆ (ಭಾರತೀಯ ದಂಡ ಸಂಹಿತೆಯ ಪ್ರಕಾರ 306) ಎಂದರೆ ಏನೆಂಬುದನ್ನು ಸುಪ್ರೀಂ ಕೋರ್ಟು ಹೀಗೆ ವ್ಯಾಖ್ಯೆ ಮಾಡಿದ್ದಿದೆ. “ಶಾಸನದ ಉದ್ದೇಶ ಮತ್ತು ಈ ನ್ಯಾಯಾಲಯ ತೀರ್ಮಾನಿಸಿದ ಪ್ರಕರಣಗಳ ಅನುಪಾತ ಗಮನಿಸಿದಾಗ ಸ್ಪಷ್ಟವಾಗುವ ಅಂಶವೇನೆಂದರೆ, ಒಬ್ಬ ವ್ಯಕ್ತಿಯನ್ನು ಐಪಿಸಿ 306 ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕಾದರೆ ಆ ಕೃತ್ಯವನ್ನು ಎಸಗುವಲ್ಲಿ ಆತನ ಅಪರಾಧ ಎಸಗುವ ಉದ್ದೇಶ ಸುಸ್ಪಷ್ಟವಾಗಿರಬೇಕು. ಜೊತೆಗೆ ಮೃತನು ತನಗೆ ಬೇರೆ ದಾರಿ ಇರದೆ ಆತ್ಮಹತ್ಯೆ ಮಾಡಿಕೊಳ್ಳಲು ಹಾದಿಮಾಡಿಕೊಡುವ ಸಕ್ರಿಯವಾದ ಅಥವಾ ನೇರವಾದ ಪಾಲ್ಗೊಳ್ಳುವಿಕೆ ಇರಬೇಕು ಮತ್ತು ಆ ಕ್ರಿಯೆ ಮೃತನನ್ನು ಅಂತಹ ಸ್ಥಿತಿಗೆ ದೂಡಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವ ಉದ್ದೇಶ ಹೊಂದಿರಲೇಬೇಕು.”
{The intention of the Legislature and the ratio of the cases decided by this court is clear that in order to convict a person under section 306 IPC there has to be a clear mens rea to commit the offence. It also requires an active act or direct act which led the deceased to commit suicide seeing no option and this act must have been intended to push the deceased into such a position that he committed suicide. CRIMINAL APPEAL NO. 1301 of 2002 Gangula Mohan Reddy Vs State of Andhra Pradesh ( Justice Dalveer Bhandari , Judge Supreme Court of India and Justice AK Patnaik Judge Supreme Court of India) }
ಸಹಜವಾಗಿಯೇ ಇಂತಹದೊಂದು ನೇರ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುವುದು ಸಚಿವರೊಬ್ಬರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಂದರ್ಭದಲ್ಲಿ ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲದಿದ್ದರೆ ಬಹಳ ಕಷ್ಟವಿದೆ. ಚುನಾವಣೆಗೆ ಇನ್ನೂ ಎರಡು ವರ್ಷಗಳ ಅಂತರ ಇರುವುದರಿಂದ, ಜಾರ್ಜ್ ಅವರಿಗೆ ಈ ಕಂಟಕದಿಂದ ಪಾರಾಗಿ ಬರಲು ಸಾಕಷ್ಟು ಸಮಯಾವಕಾಶವೂ ಇದರಿಂದಾಗಿ ದೊರೆತಂತಾಗಿದೆ.
ಮಾಧ್ಯಮಗಳು ಸರ್ಕಾರವನ್ನು ಶೂಲಕ್ಕೇರಿಸುವ ಮತ್ತು ಅದರ ತುರಾಯಿಯನ್ನು ತಾವೇ ಪಡೆದುಕೊಳ್ಳುವ ತರಾತುರಿಯಲ್ಲಿ ತಾವೇ ಚೂರಿಯಾಗಿ ಅತಿಯಾಸೆಯಿಂದ ವರ್ತಿಸಿವೆ ಮತ್ತು ಪ್ರತಿಪಕ್ಷಗಳಿಗೆ ಪ್ರತಿದಿನ ಚಿನ್ನದ ಮೊಟ್ಟೆ ಇಡಲಿದ್ದ ಕೋಳಿಯೊಂದನ್ನು ಕತ್ತರಿಸಿಹಾಕಿವೆ.
ಕೊನೆಗೂ ಈ ಪ್ರಕರಣದಲ್ಲಿ ಬಲಿಪಶು ಆಗಲಿರುವುದು ರಾಜ್ಯದ ಸಾಮಾಜಿಕ ಚಾರಿತ್ರ್ಯ ಮತ್ತು ಗಣಪತಿಯವರ ಕುಟುಂಬ.





0 Comments