ಚಿತ್ರ ಕಲೆಯ ಕಲಿಕೆ : ಒಂದು ಮಾದರಿ

ವನಿತಾ ಯಾಜಿ ಹೆಸರಾಂತ ಕಲಾವಿದೆ. ಮಕ್ಕಳೊಳಗಿನ ಕಲ್ಪನಾ ಶಕ್ತಿಯನ್ನು ಗುರುತಿಸುವಲ್ಲಿ ಸದಾ ಮುಂದು.
ಇವರು ತಮ್ಮ ಮಗಳು ಸುರಗಿಯ ಐದನೆಯ ಹುಟ್ಟುಹಬ್ಬಕ್ಕಾಗಿ ಅವಳ ಸುಮಾರು 150 ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ, ಅವರು ತಾವು ಕಂಡುಕೊಂಡ ಕಲಾ ಶಿಕ್ಷಣದ ಮಾದರಿಯನ್ನು ‘ಅವಧಿ’ಯ ಓದುಗರಿಗಾಗಿ ಟಿಪ್ಪಣಿ ಮಾಡಿದ್ದಾರೆ.
ವನಿತಾ ಯಾಜಿ
ನನ್ನ ಕಾಲೇಜು ದಿನಗಳಲ್ಲಿ, ಮಕ್ಕಳ ವಾರಾಂತ್ಯ ತರಗತಿಗಳಿಗೆ ಚಿತ್ರಕಲೆಯನ್ನು ಕಲಿಸಲು ಹೋಗುತ್ತಿದ್ದೆ. ಅಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿಸಲು ಅವರದೇ ಆದ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು. ನನ್ನ ಯೋಚನೆಗಾಗಲಿ, ಮಕ್ಕಳ ಯೋಚನೆಗಾಗಲಿ ಅವಕಾಶವಿರಲಿಲ್ಲ. ಆ ಕೆಲಸದಿಂದ ಸ್ವಲ್ಪ ಹಣ ಬರುತ್ತದೆ ಎನ್ನುವ ಕಾರಣಕ್ಕೆ ನಾನು ಸುಮ್ಮನೆ ಅವರ ರೀತಿ ನೀತಿಗಳಿಗೆ ಹೂಂಗುಡುವುದು ಅನಿವಾರ್ಯವಾಗಿತ್ತು. ಅಲ್ಲಿ ಮಗುವಿಗೆ ನಾವು ಬಿಡಿಸಿದ ಚಿತ್ರಗಳನ್ನು ಯಥಾವತ್ತಾಗಿ ಬಿಡಿಸಲು ಕಲಿಸುವುದಷ್ಟೇ ನನ್ನ ಕೆಲಸವಾಗಿತ್ತು.
ಅಲ್ಲಿ ಮಕ್ಕಳು ಕಷ್ಟಪಡುವುದನ್ನು ತುಂಬಾ ಹತ್ತಿರದಿಂದ ನೋಡಿದ ನನಗೆ ಚಿತ್ರ ಕಲೆಯನ್ನು ಹೀಗೆ ‘ಹೇಳಿಕೊಡಬಾರದು’ ಎನ್ನುವುದು ಅರಿವಾಯಿತು. ಅಲ್ಲಿ ಮೂರು ವರ್ಷ ಕೆಲಸ ಮಾಡಿದ ನಂತರ ಮತ್ತೆ ಯಾವತ್ತೂ ಆ ತರದ ತರಗತಿಗಳನ್ನು ನಾನು ನಡೆಸಿಲ್ಲ. ಅದಾದ ನಂತರ, ಸುಮಾರು ಎಂಟು ವರ್ಷಗಳ ಕಾಲ ಮಕ್ಕಳ ಜೊತೆ ಕೆಲಸ ಮಾಡಿದೆ, ಈಗಲೂ ಮಾಡುತ್ತಿದ್ದೇನೆ. ಮಕ್ಕಳಿಗೆ ಒಂದು ರೇಖೆಯನ್ನು ಕೂಡಾ ಹೀಗೇ ಬರೆಯಬೇಕು ಎಂದು ತೋರಿಸದೆ, ಮಕ್ಕಳ ಕಲ್ಪನೆಗೆ, ಗ್ರಹಿಕೆಗೆ ಒತ್ತು ಕೊಟ್ಟು ನನ್ನ ಚಿತ್ರಕಲಾ ಪ್ಲಾನ್ ಸಿದ್ದಗೊಂಡಿತು.
ಈ ಮಾರ್ಗವು ಅಷ್ಟೇನೂ ಸುಲಭವಾಗಿರಲಿಲ್ಲ, ಯಾಕೆಂದರೆ ಮಕ್ಕಳು ಶಾಲೆಗೆ ಬರುವ ಮೊದಲೇ ಒಂದಿಷ್ಟು ಕಲಿತು ಬಂದಿರುವ ಮತ್ತು ಬೇರೆ ಕಡೆ ಚಿತ್ರಕಲೆಯನ್ನು ಕಲಿಯುತ್ತಿರುವ ಮಕ್ಕಳಿಗೆ ನಾನು ಏನನ್ನೂ ‘ಕಲಿಸುತ್ತಿಲ್ಲ’ ಅನಿಸುತ್ತಿತ್ತು. ನನಗೆ ಅವರ ತಲೆಯಲ್ಲಿ ಬರೆದಿರುವ ಅದೇ ಮನೆ, ಮರ, ಗುಡ್ಡ, ಸೂರ್ಯ ನನ್ನು ಅಳಸಿ ಅದು ನಿಮ್ಮದಲ್ಲ ಎನ್ನುವುದನ್ನು ಅರ್ಥ ಮಾಡಿಸಬೇಕಿತ್ತು. ಕೆಲವೊಂದು ಸಲ ಸಹೋದ್ಯೋಗಿಗಳು ಸಹ ‘ನೀವು ಸ್ವಲ್ಪವಾದರೂ ಹೇಳಿಕೊಡಬೇಕು’ ಎಂದು ನನ್ನೊಂದಿಗೆ ಚರ್ಚೆಗೆ ಇಳಿದುದು ಇದೆ. ಆದರೆ ನಾನು ನನ್ನ ಅಭಿಪ್ರಾಯವನ್ನು ಬಲವಾಗಿ ನಂಬಿದ್ದರಿಂದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸದೆ, ನನ್ನ ಕೆಲಸ ಮುಂದುವರಿಸುತ್ತಿದ್ದೇನೆ.

ಕಲಾ ತರಗತಿಗಳು ಬರೀ ಸುಂದರವಾದದ್ದದ್ದನ್ನು ತಯಾರಿಸುವ ಜಾಗವಾಗಬಾರದು. ಬದಲಾಗಿ ಮಕ್ಕಳು ಅವರ ಅನುಭವವನ್ನು, ಅನಿಸಿಕೆಗಳನ್ನು ಚಿತ್ರಿಸುವ ಮತ್ತು ಅದನ್ನು ನಿತ್ಯ ಜೀವನದ ಜೊತೆ ಸಂಬಂಧ ಕಲ್ಪಿಸುವ ಶಾಲೆಯಾಗಬೇಕು. ಮಕ್ಕಳಿಗೆ ಅವರವರ ಕೌಶಲ್ಯದ ಅರಿವು ಆಗಲು ಸಮಯ ಮತ್ತು ಅವಕಾಶ ಕೊಡುವುದು ಕಲಿಕೆಯ ಭಾಗ. ಇಲ್ಲಿ ಶಿಕ್ಷಕರರು ನಮ್ಮ ಯೋಜನೆ ಮತ್ತು ಕೌಶಲ್ಯವನ್ನು ನೇರವಾಗಿ ಮಕ್ಕಳ ಮೇಲೆ ಹೇರದೆ, ಮಕ್ಕಳ ಆದ್ಯತೆಗೆ ಪ್ರಾಮುಖ್ಯತೆ ನೀಡಬೇಕು. ಹಾಗೆಯೇ ಶಿಕ್ಷಕರು ರಚಿಸುವ ಚಟುವಟಿಕೆಗಳು ಮಕ್ಕಳಿಗೆ ಆಪ್ತವಾಗಿರಬೇಕು ಮತ್ತು ನಂಬುವಂತಿರಬೇಕು.
ಉದಾಹರಣೆ ೧: ಮರದ ಕುರಿತು ಕವಿತೆ ಓದಿ, ಎಲ್ಲರಿಗೂ ಒಂದೇ ತರಹದ ಮರದ ಪ್ರಿಂಟ್ ಔಟ್ ಕೊಟ್ಟು ಬಣ್ಣ ತುಂಬಲು ಹೇಳಿದರೆ ಅದು ಶಿಕ್ಷಕನ ಸೋಲು. ಇಲ್ಲಿ ಮರದ ಕುರಿತು ಮಕ್ಕಳ ಜೊತೆ ಚರ್ಚಿಸಿ, ಅವರಿಗೆ ತಿಳಿದಿರುವ ಮರಗಳನ್ನುಚಿತ್ರಿಸಲು ಹೇಳಬಹುದು. ಆಗ ಮಕ್ಕಳು ಕಲೆ ಮತ್ತು ಕವಿತೆ ಎರಡರಲ್ಲೂ ಪ್ರವೇಶ ಪಡೆಯುವಂತಾಗುತ್ತದೆ.
ಉದಾಹರಣೆ ೨: ಹಬ್ಬಗಳ ಆಚರಣೆಯನ್ನ ಮಕ್ಕಳು ಹೇಗೆ ಸಂಭ್ರಮಿಸಿದರು, ಮತ್ತು ಅದರ ಪರಿಣಾಮ,ಅನಿಸಿಕೆಗಳನ್ನು ಮತ್ತೆ ಮೆಲುಕು ಹಾಕಿ ಅದನ್ನು ಅವರದೇ ರೀತಿಯಲ್ಲಿ ಚಿತ್ರ ಬಿಡಿಸಲು ಹೇಳುವುದು. ಇದರಿಂದ ಗ್ರಹಿಸುವ ಸಾಮರ್ಥ್ಯ ಮತ್ತು ಅನುಭವದ ಕಲಿಕೆ ಎರಡೂ ಸಾಧ್ಯವಾಗುತ್ತದೆ.
ಉದಾಹರಣೆ ೩: ಸಾಮಾನ್ಯವಾಗಿ ಮನೆ ಬರೆಯಿರಿ ಎಂದರೆ ಮಕ್ಕಳು ತ್ರಿಕೋನಾಕಾರದ ಅದೇ ಮನೆಯನ್ನು ಚಿತ್ರಿಸಿ ಕಿಟಕಿ-ಬಾಗಿಲುಗಳನ್ನು ಬರೆಯುತ್ತಾರೆ. ನಮ್ಮ ತರಗತಿಯಲ್ಲಿ ಪ್ರತಿಯೊಬ್ಬರೂ ಅವರವರ ಮನೆಯನ್ನು ಚಿತ್ರಿಸಲು ಹೇಳುತ್ತೇವೆ ಒಂದು ವೇಳೆ ಯಾರಾದರೂ ನಿಮ್ಮ ಮನೆಯನ್ನು ಹುಡುಕಿ ಬಂದರೆ ಹೇಗೆ ಅದನ್ನು ಗುರುತಿಸಬಹುದು ಎಂಬ ವಿವರಣೆಯೊಂದಿಗೆ ಚಿತ್ರಿಸಲು ಹೇಳುತ್ತೇವೆ. ಈ ಪ್ರಯೋಗದಿಂದ ಮಕ್ಕಳು ಬಹಳ ಕಡಿಮೆ ಸಮಯದಲ್ಲಿ ತಮ್ಮತನವನ್ನು ಕೊಂಡುಕೊಳ್ಳುತ್ತಾರೆ.

ನನ್ನ ಮಗಳು ಸುರಗಿಯ ಕಲಾಭ್ಯಾಸ ನನ್ನ ನಂಬಿಕೆಯನ್ನು ಇಮ್ಮಡಿ ಮಾಡಿದೆ, ಬಲಗೊಳಿಸಿದೆ. ಮಗುವಿಗೆ ನಮ್ಮ ತಲೆಯಲ್ಲಿ ಇರುವುದನ್ನು ಎರೆಯದೇ, ಸ್ವಂತವಾಗಿ ಯೋಚಿಸಲು ಅವಕಾಶ ಕೊಟ್ಟರೆ ಸ್ವಂತಿಕೆಯನ್ನು ಕಾಣಲು ಸಾಧ್ಯ. ಸುರಗಿಯ ಮರದ ಚಿತ್ರಗಳನ್ನು ನೋಡಿದರೆ ಅವಳ ಮರದ ಗ್ರಹಿಕೆ ಕಾಣುತ್ತದೆ. ಅವಳ ಎಲ್ಲಾ ಚಿತ್ರಗಳಲ್ಲೂ ಅವಳ ಗ್ರಹಿಕೆಯ ಮತ್ತು ಅವಳ ಕೌಶಲ್ಯಕ್ಕೆ ದಕ್ಕಿದ್ದನ್ನ ಮಾತ್ರ ಕಾಣಬಹುದು.
ಸುರಗಿ ಒಂದೂವರೆ ವರ್ಷದವಳಿರುವಾಗ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದ್ದು, ಅವಳಿಗೆ ನಾನು ಯಾವುದೇ ತರದ ಸಲಹೆ ನೀಡದೆ, ಅವಳಿಗೆ ಅನಿಸಿದ ಹಾಗೆ ಬರೆಯಲು ಬಿಟ್ಟು ನಂತರ ಅದರ ಕುರಿತು ಪ್ರಶ್ನಿಸಿದಾಗ ಅವಳು ಚಿತ್ರಗಳನ್ನೂ ವಿವರಿಸುತ್ತಿದ್ದಳು. ಕೆಲವು ಸಲ ಏನು ಚಿತ್ರ ಬಿಡಿಸಲಿ ಎಂದಾಗ ಮನೆಯಲ್ಲಿ ಇರುವ ಗಿಡ ಅಥವಾ ಹೊರಗಡೆ ಇರುವ ಮರ ತೋರಿಸುತ್ತಿದೆ. ಅದೇ ಅವಳಿಗೆ ಅಭ್ಯಾಸವಾಯಿತು.
ಈ ಒಂದು ವರ್ಷದಿಂದ ನಾನು ಆನ್ಲೈನ್ ಕ್ಲಾಸ್ ಮಾಡುತ್ತಿದ್ದುದರಿಂದ ಅವಳಿಗೆ ವಸ್ತು, ವಿಷಯಗಳು ಹೆಚ್ಚು ಸಿಕ್ಕವು. ನನ್ನ ತರಗತಿಯ ತಯಾರಿ, ಮತ್ತು ತರಗತಿಯಲ್ಲಿ ಸದಾ ಭಾಗವಹಿಸುತ್ತಾ ಹೆಚ್ಚೆಚ್ಚು ಚಿತ್ರ ಬಿಡಿಸಿ ನನಗೆ ಆಶ್ವರ್ಯವುಂಟುಮಾಡಿದಳು. ಆಗಾಗ, ನಮ್ಮ ನಡುವಿನ ಮಾತುಕತೆಯಲ್ಲಿ ‘ನಾನು ನಂಬಿದ್ದು ನಿನ್ನಂದ ಇನ್ನೂ ಇಮ್ಮಡಿ ಆಗಿದೆ’ ಎಂದರೆ ಸುರಗಿ: ‘ಯಾಕೆ! ನಾನು ಹುಟ್ಟೊಕ್ಕಿಂತ ಮುಂಚೆ ಬರೀ copy work ಮಾಡ್ಸತ್ತಿದ್ದಯಾ’?? ಎಂದಳು.









ವನಿತಾ ಯಾಜಿಯವರ ನಿಲುವು ಚೆನ್ನಾಗಿದೆ ಮತ್ತು ಸರಿಯಾಗಿಯೇ ಇದೆ.
ಕಲಾವಿದ ಮೋಹನ ಸೋನ ಮತ್ತು ಸುರೇಶ ಹಂದಾಡಿಯವರು ಮಕ್ಕಳು ಹೈಸ್ಕೂಲಿಗೆ ಬರುವ ತನಕ ಏನೂ ಹೇಳಿಕೊಡುತ್ತಿರಲಿಲ್ಲ. ಇಷ್ಟವಾದಾಗಲೆಲ್ಲಾ ಸುಮ್ಮನೆ ದೊಡ್ಡದು ಚಿಕ್ಕದು ಸೊನ್ನೆ ಸುತ್ತಲು ಹೇಳುತ್ತಿದ್ದರು. ಖುಶಿ ಬಂದಂತೆ ಗೆರೆಗಳನ್ನು ಎಳೆಯಲು ಹೇಳುತ್ತಿದ್ದರು ಅಷ್ಟೆ. ಮನೆಯಲ್ಲಿರುವ ವಸ್ತುಗಳನ್ನು ಬಿಡಿಸಿ ತೋರಿಸಿ ಎನ್ನುತ್ತಿದ್ದರು, ನೀವು ನೋಡಿದ್ದನ್ನು, ಕೇಳಿದ್ದನ್ನು – ಏನು ಬರೆಯಬೇಕು ಅಂತ ಕಾಣ್ತದೋ ಅದನ್ನು ಚಿತ್ರ ಬರೆಯಿರಿ ಎನ್ನುತ್ತಿದ್ದರು. ಸುತ್ತ ಮುತ್ತ ಸಿಗುವ ಮಣ್ಣಿನಿಂದ,ಹೂವಿನಿಂದ,ಎಲೆಗಳಿಂದ ಬಣ್ಣ ತಯಾರಿಸಿ, ಚಿತ್ರಕ್ಕೆ ಬಣ್ಣ ಹಚ್ಚಿ, ಪೇಟೆಯಿಂದ ಬಣ್ಣ ತೆಕ್ಕೊಳ್ಳಬೇಡಿ ಎನ್ನುತ್ತಿದ್ದರು. ನಾಟಕದ ಮೂಲಕ, ಪರಿಸರದಲ್ಲೆಲ್ಲಾ ಓಡಾಡಿಸುವ ಮೂಲಕ ಮಕ್ಕಳ ಕಲ್ಪನೆ ಬೇರೆ ಬೇರೆ ರೀತಿಯಲ್ಲಿ ಹುಟ್ಟಿಕೊಳ್ಳುತ್ತಿತ್ತು.
ನಾಟಕ ನಿರ್ದೇಶಕ ಇಕ್ಬಾಲ್ ಅಹ್ಮದ್ ಅವರ ಒಂದು ಅನುಭವ ಹೀಗಿದೆ.—–
ಒಮ್ಮೆ ಒಂದು ರಂಗ ಶಿಬಿರದಲ್ಲಿ ಮಕ್ಕಳಿಗೆ ತಮಗಿಷ್ಟವಾದ ಚಿತ್ರ ಬರೆಯಲು ಹೇಳಿದರಂತೆ. ಒಂದು ಪುಟ್ಟ ಮಗುವಿನ ಬಳಿ ಹೋಗಿ “ಏನು ಚಿತ್ರ ಬರೀತಾ ಇದ್ದಿ ಪುಟ್ಟಾ…?” ಅಂತ ಕೇಳಿದರಂತೆ
” ಆನೆ ಚಿತ್ರ ಅಂಕಲ್” ಅಂತ ಮಗು ಹೇಳಿತು. ಆ ಚಿತ್ರ ಯಾವ ರೀತಿಯಲ್ಲೂ ಆನೆಯಂತಿರಲಿಲ್ಲ. ಇವರ ’ಕಲಿಸುವ ಬುದ್ಧಿ’ ಜಾಗೃತವಾಗಿ … “ಆನೆ ಅಂದ್ರೆ ಹೀಗೊಂದು ಸೊಂಡಿಲು,ದಪ್ಪ ದಪ್ಪ ಕಾಲು, ದೊಡ್ಡ ಹೊಟ್ಟೆ, ಅಗಲ ಕಿವಿ,ಚಿಕ್ಕ ಬಾಲ…ಎಲಾ ಇರ್ಬೇಕಲ್ವಾ … ” ಅಂತ ಹೇಳಿ ಸರಳ ಗೆರೆ ಎಳೆದು ತೋರಿಸಿದರಂತೆ. ಆ ಮಗು… ಸ್ವಲ್ಪ ಹೊತ್ತು ಆ ಚಿತ್ರವನ್ನೇ ನೋಡಿ …. ” ಅಂಕಲ್ ಅದು ನಿಮ್ಮ ಆನೆ … ಇದು ನನ್ನ ಆನೆ…” ಎಂದು ಹೇಳಿ ತನ್ನ ಕೆಲಸ ಮುಂದುವರಿಸಿತಂತೆ. …..
ಮಕ್ಕಳ ಕಲ್ಪನೆ ”ಫ್ರೆಶ್” ಆದದ್ದು…. ಯಾವತ್ತೂ “ಡ್ರೈ’”ಅಲ್ಲ. ನಮಗೆ ಹಿರಿಯರಿಗೊಂದು ಭ್ರಮೆ ಅಷ್ಟೆ … ಆ “ಭ್ರಮ ನಿರಸನ” ಆಗದೇ ಉಳಿಗಾಲವಿಲ್ಲ.
ಚೆನ್ನಾಗಿ ಹೇಳಿದಿರಿ. ಮೌಲ್ಯಯುತ ಮಾತು…