ಚಿತ್ತಾಲರಿಗೆ ತಪ್ಪಿತಸ್ಥ ನಾಗಪ್ಪನೇ ಹೊರತು ಶ್ರೀನಿವಾಸನಲ್ಲ ಎಂದು ಹೊಳೆಯುವುದೇ ಇಲ್ಲ..

3

ಈ ವಿವರ ಕಾದಂಬರಿಯಲ್ಲಿ ಉಪಕತೆಯೊಂದರ ರೂಪದಲ್ಲಿ ಬರುತ್ತದೆ.

ಶ್ರೀನಿವಾಸ ಈ ಹಿಂದೆ ನೇತ್ರಾವತಿ ಎಂಬ ಹೆಣ್ಣುಮಗಳನ್ನು ನಂಬಿಸಿ ಮೋಸ ಮಾಡಿದ್ದರಿಂದಾಗಿ ಆ ಹೆಣ್ಣುಮಗಳು ನಾಗಪ್ಪನ ಕಣ್ಣ ಮುಂದೆಯೇ ಅವರದೇ ಚಾಳ್‍ನಲ್ಲಿ ಮಹಡಿ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

‘…ನೇತ್ರಾವತಿ ಕಿಡಕಿಯ ದಡಿಯನ್ನೇರಿ ಕೆಳಗೆ ಹಾರಿಕೊಂಡದ್ದನ್ನು ಇದಿರು ಚಾಳಿನ ಇಬ್ಬರು ಹೆಂಗಸರು ಕಣ್ಣಾರೆ ನೋಡಿದ್ದರು…. ತಾನು ಆತ್ಮಹತ್ಯೆಯ ನಿಶ್ಚಯ ಮಾಡಿಯೇ ಬಂದಿದ್ದೇನೆ ಎಂಬುದನ್ನು ನೇತ್ರಾವತಿ ಶ್ರೀನಿವಾಸನಿಗೆ ಹೇಳಿರಬೇಕು. ಅದನ್ನು ಆ ಕ್ಷಣದ ಮಟ್ಟಿಗಾದರೂ ತಪ್ಪಿಸುವದು ಶ್ರೀನಿವಾಸನಿಗೆ ಶಕ್ಯವಿತ್ತು. ಆದರೆ ಶ್ರೀನಿವಾಸನ ಆ ದಿನದ ಹಲವು ಕೃತ್ಯಗಳನ್ನು ನೆನೆದರೆ ಅವಳು ಆತ್ಮಹತ್ಯೆ ಮಾಡುವದೇ ಅವನಿಗೆ ಬೇಕಿತ್ತು ಎನ್ನುವುದು ಸ್ಪಷ್ಟವಾಗುತ್ತಿತ್ತು…’

ಆ ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದಾಗ ನಾಗಪ್ಪನೇ ಶ್ರೀನಿವಾಸನ ವಿರುದ್ಧ ಸಾಕ್ಷಿ ಹೇಳಿದ್ದಾನೆ: ‘ತನ್ನ ಸಂಭೋಗಶಕ್ತಿಯ ಬಗ್ಗೆ ಶ್ರೀನಿವಾಸನಿಗೆ ಮೊದಲಿನಿಂದಲೂ ಒಂದು ಬಗೆಯ ಅಧೈರ್ಯವಿತ್ತು…. ಶ್ರೀನಿವಾಸ ನೇತ್ರಾವತಿಯನ್ನು ಬರಿಯ ಈ ತನ್ನ ಭಯದ ನಿವಾರಣೆಗಾಗಿಯೇ ಉಪಯೋಗಿಸಿಕೊಂಡಿರಬೇಕು. ಮದುವೆಯ ಉದ್ದೇಶ ಅವನಿಗಿರಲಿಲ್ಲ’ ಎಂಬುದು ನಾಗಪ್ಪನ ವಿವರಣೆ. ಅದಕ್ಕಾಗಿಯೇ ‘ಇಂತಹ ಅಪರಾಧಕ್ಕೆ ತಕ್ಕ ಶಿಕ್ಷೆಯಾಗದೇ ಹೋಗಬಾರದು’ ಎಂದೇ ಸಾಕ್ಷಿ ನುಡಿದಿದ್ದಾನೆ.

ಅದೊಂದು ಕಾರಣಕ್ಕೇ ಶ್ರೀನಿವಾಸ ತನ್ನ ಮೇಲೆ ಹಗೆ ಸಾಧಿಸುತ್ತಿದ್ದಾನೆ ಎಂಬುದು ನಾಗಪ್ಪನ ಊಹೆ: ‘ಶ್ರೀನಿವಾಸನೂ ಈ ಪಿತೂರಿಯಲ್ಲಿ ಷಾಮೀಲಾದದ್ದರ ಕಾರಣಕ್ಕೆ ಅರ್ಥ ಹೊಳೆಯುತ್ತಿದೆ ಎನ್ನುವ ಅನ್ನಿಸಿಕೆ: ಕೊರೋನರನ ಕೋರ್ಟಿನಲ್ಲಿ ತಾನು ಆಡಿದ ಮಾತುಗಳಿಂದ ಅಭಿಮಾನಕ್ಕೆ ಬಿದ್ದ ಜಖಮ್ ಶಿಕಾರಿ ಮಾಡುವ ಶ್ವಾಪದ- ಪ್ರವೃತ್ತಿಯ ನೆಲೆಯಲ್ಲಿ ಸತ್ವ ಪಡೆಯುತ್ತ ಜೀವಂತವಾಗಿದ್ದಿರಬೇಕು… ಇಪ್ಪತ್ತು ವರ್ಷಗಳ ಹಿಂದೆ ನಾನು ಅವನ ಬಗ್ಗೆ ವ್ಯಕ್ತಪಡಿಸಿದ ಒಂದು ನಿಲುವಿನ ಕಾರಣದಿಂದ ನನ್ನನ್ನು ಮುಗಿಸಿಯೇಬಿಡುತ್ತೇನೆಂಬಂತಹ ಈ ಛಲಕ್ಕೆ ಸಮಾನವಾದ ಭಾವನೆ…’

ಈ ಪ್ರಕರಣದಲ್ಲಿ ಶ್ರೀನಿವಾಸನಿಗೆ ಶಿಕ್ಷೆಯೇನೂ ಆಗದೆ ಖುಲಾಸೆಯಾಗುತ್ತದೆ.

‘ಪೋಸ್ಟ್‍ಮಾರ್ಟೆಮ್ ರಿಪೋರ್ಟಿನಲ್ಲಿ ನೇತ್ರಾವತಿ ಮೂರು ತಿಂಗಳ ಗರ್ಭಿಣಿಯಿದ್ದುದರ ಉಲ್ಲೇಖವಿತ್ತು. ಶ್ರೀನಿವಾಸ ಅವಳೊಡನೆ ಸಂಭೋಗ ಮಾಡಿದ್ದ ಎಂಬುದಕ್ಕಿದ್ದ ಪುರಾವೆಯ ಮೇಲೆ ನಾಗಪ್ಪನ ಸಾಕ್ಷಿ ಹೊಸ ಬೆಳಕನ್ನು ಚೆಲ್ಲುವಂತಹದಾದರೂ ಕಾಯದೆ ಶ್ರೀನಿವಾಸನಿಗೆ ಶಿಕ್ಷೆ ವಿಧಿಸುವುದರಲ್ಲಿ ಷಂಢವಾಗಿದೆ.

ಕೋರ್ಟಿನ ಮುಂದಿದ್ದ ಪ್ರಶ್ನೆಯೊಂದೇ: ಇದು ಆತ್ಮಘಾತವೋ ಅಥವಾ ಕೊಲೆಯೋ? ಆತ್ಮಘಾತವೆಂಬುದಕ್ಕೆ ಕಣ್ಣಾರೆ ಕಂಡವರದೇ ನಿರ್ವಿವಾದ ಸಾಕ್ಷಿಯಿದೆ. ಈ ದುರಂತಕ್ಕೆ ಕಾರಣವಾದ ಸಂಗತಿಗಳಿಗೆ ಸಮಾಜವೇ ತಕ್ಕ ಉಪಾಯಗಳನ್ನು ಯೋಜಿಸಬೇಕೇ ಹೊರತು ಈ ಕೋರ್ಟು ಏನು ಮಾಡಲೂ ನಿರುಪಾಯವಾಗಿದೆಯೆಂಬ ಉದ್ಗಾರಗಳೊಂದಿಗೆ, ಈ ಸಾವು ಆತ್ಮಹತ್ಯೆಯದು; ಶ್ರೀನಿವಾಸ ನಿರ್ದೋಷಿ ಎಂಬ ನಿಲುಗಡೆಯ ರಿಪೋರ್ಟಿನ ಮೇಲೆ ಸಹಿ ಮಾಡಿ ಕೊರೋನರ್ ಮುಂದಿನ ಕೇಸಿಗೆ ತಯಾರಿಗೆ ತೊಡಗಿದಾಗ ಶ್ರೀನಿವಾಸ ಕೋರ್ಟಿನಿಂದ ಪಲಾಯನ ಹೇಳಿದ್ದ…’

(ಕಾನೂನಿನ ಪ್ರಕಾರ ‘ಆತ್ಮಹತ್ಯೆಗೆ ಪ್ರಚೋದನೆ’ಯೂ ಶಿಕ್ಷಾರ್ಹ ಅಪರಾಧವೇ; ಐಪಿಸಿ ಸೆಕ್ಷನ್ 306ರ ಪ್ರಕಾರ ಆತ್ಮಹತ್ಯೆಗೆ ಕುಮ್ಮಕ್ಕು ನೀಡುವುದು 10 ವರ್ಷಗಳವರೆಗೆ ಜೈಲುವಾಸ ಮತ್ತು ದಂಡ ವಿಧಿಸಬಹುದಾದ ಅಪರಾಧ. ಇದನ್ನು ಚಿತ್ತಾಲರು ಬಹುಶಃ ಗಮನಿಸಿಲ್ಲ.) ಇರಲಿ.

ಅಂತೂ ಶ್ರೀನಿವಾಸ ತನ್ನ ಬಗ್ಗೆ ಕೆಂಡ ಕಾರುವುದಕ್ಕೆ ಕೋರ್ಟಿನಲ್ಲಿ ಅವನ ವಿರುದ್ಧ ತಾನು ಹೇಳಿದ ಸಾಕ್ಷ್ಯವೇ ಕಾರಣ ಎಂಬುದು ನಾಗಪ್ಪನ ಊಹೆ. ನಿಜವಾಗಲೂ ವಿಷಯ ಅದಲ್ಲದಿರಬಹುದು, ತಾನು ಬರೆಯಬೇಕೆಂದಿರುವ ಕಾದಂಬರಿಗೂ ಶ್ರೀನಿವಾಸನ ಉಗ್ರ ಪ್ರತಿಕ್ರಿಯೆಗೂ ಸಂಬಂಧವಿರಬಹುದು- ಅನ್ನುವ ಅನುಮಾನ ಅಪ್ಪಿತಪ್ಪಿಯೂ ಅವನಲ್ಲಿ ಹುಟ್ಟುವುದಿಲ್ಲ!… ವಿಚಾರಣೆ ಎಲ್ಲ ಮುಗಿದು ನಾಗಪ್ಪ ರಾಜೀನಾಮೆ ಬಿಸಾಕಿ ಬಂದ ಮೇಲೂ ತನ್ನ ಗೆಳೆಯ ಟೈಮ್ಸ್ ಆಫ್ ಇಂಡಿಯಾ ಪತ್ರಕರ್ತ ಸೀತಾರಾಮನೊಂದಿಗೆ ಫೋನಿನಲ್ಲಿ ಮಾತನಾಡುವಾಗ ‘ಇದೆಲ್ಲ ಶ್ರೀನಿವಾಸನ ಕಿತಾಪತಿ. ಇವನಿಗೆ ನನ್ನ ಬಗ್ಗೆ ಇಷ್ಟೊಂದು ಹಗೆ ಯಾಕೊ?- ಇನ್ನೂ ಅರ್ಥವಾಗುವುದಿಲ್ಲ’ ಎಂಬ ಅಮಾಯಕ ಧಾಟಿಯೇ ಇದೆ.

ಹೋಗಲಿ, ಈ ಕಾದಂಬರಿಯ ಪೂರ್ವಾಪರಗಳನ್ನು ಗಮನಿಸೋಣ. ಅಷ್ಟಕ್ಕೂ ಇದೆಂಥ ಕಾದಂಬರಿ?

ನಾಗಪ್ಪ ತನ್ನ ಪಕ್ಕದ ಮನೆಯ ಅರ್ಜುನರಾವ್ ಮುಂದೆ ಕೊಚ್ಚಿಕೊಳ್ಳುವುದು ಹೀಗೆ- ‘…ಕಾದಂಬರಿಗೆ ಮೂಲ ಪ್ರಚೋದನೆಯಾದ ಘಟನೆ: ಇದೇ ಮನೆಯಲ್ಲಿ ನಡೆದ ನೇತ್ರಾವತಿಯ ಆತ್ಮಘಾತ! ಯಾವ ಒಂದು ಪಾತ್ರದ ಹೆಸರನ್ನೂ ಬದಲಿಸದೇ ಎಲ್ಲವನ್ನೂ ನಡೆದಂತೆಯೇ ಬರೆಯುತ್ತಿದ್ದದ್ದು ಕಾದಂಬರಿಯ ವೈಶಿಷ್ಟ್ಯ. ಶ್ರೀನಿವಾಸ ಶ್ರೀನಿವಾಸ ಎಂದೇ ಬಂದಿದ್ದಾನೆ…. ಯಥಾರ್ಥ ನಿರೂಪಣೆಯಲ್ಲಿ ಇದೊಂದು ಹೊಸ ಪ್ರಯೋಗ….’!

ಹಾಗೆ ನೋಡಿದರೆ ನಾಗಪ್ಪನ ‘ಯಥಾರ್ಥ ನಿರೂಪಣೆ’ ಅವನ ಪಾಲಿಗೆ ತೀರಾ ಹೊಸ ಪ್ರಯೋಗವೇನಲ್ಲ, ಯಾಕೆಂದರೆ ಶ್ರೀನಿವಾಸನ ಅಮ್ಮ ಪದ್ದಕ್ಕನ ಬಗೆಗೆ ಅವನು ಈಗಾಗಲೇ ‘ನಡೆದದ್ದನ್ನೆಲ್ಲ ಹೆಸರೂ ಬದಲಿಸದೆ’ ಕತೆ ಮಾಡಿ ಬರೆದು ಪ್ರಕಟಿಸಿದ್ದಾನೆ. ಈಗ ಅದೇ ತಂತ್ರದ ಈ ಕಾದಂಬರಿ ಬಗ್ಗೆ ಖುದ್ದು ಶ್ರೀನಿವಾಸನಿಗೇ ಸುಳಿವು ನೀಡಿರುವ ಪತ್ರಕರ್ತ ಸೀತಾರಾಮ ಅದನ್ನು ನಾಗಪ್ಪನ ಗಮನಕ್ಕೂ ತರುತ್ತಾನೆ-

‘It all started as a practical joke-  ಅಮ್ಮನ ಆಣೆಗೂ- ನೀನಿದನ್ನು ನಂಬಬೇಕು. ಹಿಂದೆ ಎಂದೋ ಒಮ್ಮೆ, ನೀನು ನೇತ್ರಾವತಿಯ ಬಗ್ಗೆ ಒಂದು ಕಾದಂಬರಿ ಬರೆಯಬೇಕು ಅಂದಿದ್ದೆ. ನಿನಗೆ ನೆನಪಿದೆಯೋ ಇಲ್ಲವೋ. ಇದನ್ನೇ ನಾನೊಮ್ಮೆ ಶ್ರೀನಿವಾಸನಿಗೆ ಹೇಳಿರಬೇಕು. ಯಾಕೆ ಹೇಳಿದೆನೋ ಅರಿಯೆ- may be just for the fun of scaring him… ಆದರೆ ಬೋಳೀಮಗ ನಿಜಕ್ಕೂ ಹೆದರಿಕೊಂಡಿದ್ದ… ಎಲ್ಲ ಸರಿಹೋದರೆ ಕೆಲವು ಭಾಗಗಳನ್ನಾದರೂ ಇಂಗ್ಲೀಷಿಗೆ ಭಾಷಾಂತರಿಸಿ ನಮ್ಮ ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಿಸುವ ಭರವಸೆಯನ್ನು ನಾನೇ ಕೊಟ್ಟಿದ್ದೇನೆ ಎಂದೆ. ನಂಬಿದನೇ ಬೋಳೀಮಗ! ಅಪ್ಪನಾಣೆ, ನಂಬಿದ’…

‘ಶಿಕಾರಿ’ ಕಾದಂಬರಿಯ ನೈತಿಕ ನಿಲುವುಗಳ ಬಗ್ಗೆ ಗಂಭೀರ ಪ್ರಶ್ನೆ ಏಳುವುದೇ ಈಗ.

ನಾಗಪ್ಪ ಹಾಗೂ ಚಿತ್ತಾಲರು ಬಾಯಿ ಬಿಟ್ಟು ಹೇಳುವ ಗುಣವಿಶೇಷಣಗಳನ್ನು ಕ್ಷಣ ಮರೆತು ನೋಡಿ: ಶ್ರೀನಿವಾಸ ತನ್ನ ಪಾಡಿಗೆ ತಾನು ತನ್ನದೇ ಪರಿಧಿಯಲ್ಲಿ ಬದುಕಿರುವ ಒಬ್ಬ ಖಾಸಗಿ ಮನುಷ್ಯ. ನಾಗಪ್ಪನೇ ಹೇಳುವ ಹಾಗೆ ‘ಶ್ರೀನಿವಾಸನ ಇಡೀ ಇತಿಹಾಸವನ್ನು ಸ್ವಲ್ಪದರಲ್ಲಿ ಹಿಡಿಯುವುದಾದರೆ ಚಿಕ್ಕಂದಿನಲ್ಲಿ ಬಡತನದಿಂದಾಗಿ ಪಟ್ಟ ಅಪಮಾನಗಳನ್ನೆಲ್ಲ ಮರೆಯಲು ಮಾಡಿದ ಪ್ರಚಂಡ ಹೋರಾಟ. ಅದೊಂದು ದೊಡ್ಡ ಸಾಹಸದ ಕತೆ’.

ತನ್ನದೇ ಮೆಹನತ್ತಿನಿಂದ ಬಡತನದ ಪಾತಾಳದಿಂದ ಪಾರಾಗಿ ಈಗ ಸಮುದಾಯದ ಗಣ್ಯ ವ್ಯಕ್ತಿಯಾಗಿ ಬೆಳೆದವನು. ಬೇರೆ ಎಲ್ಲರ ಹಾಗೆ ನೇರ ಮಾರ್ಗದಲ್ಲೋ, ಅಡ್ಡ ಮಾರ್ಗದಲ್ಲೋ, ಹೇಗೋ, ಅಂತೂ ಕಣ್ಣು ಕುಕ್ಕುವ ಏಳಿಗೆ ಸಾಧಿಸಿದವನು. ‘ಎಲ್ಲೋ ಒಂದು ಗೊತ್ತಾಗದ ಜಾಗದಲ್ಲಿ, ಗೊತ್ತಾಗದ ರೀತಿಯಲ್ಲಿ ಆತ ನನ್ನನ್ನು ಆಹ್ವಾನಿಸುತ್ತಾನೆ’ ಎಂದು ನಾಗಪ್ಪ ದಾಖಲಿಸಿದರೂ ಆತ ನಾಗಪ್ಪನ ಜೀವನದಲ್ಲಿ ತಾನಾಗಿ ಹಸ್ತಕ್ಷೇಪ ಮಾಡಿದನೆಂಬುದಕ್ಕೆ ಕಾದಂಬರಿಯಲ್ಲಂತೂ ಪುರಾವೆಯಿಲ್ಲ.

ನಾಗಪ್ಪನ ವೈಯಕ್ತಿಕ ಚರಿತ್ರೆಯ ಯಾವುದೇ ಹಂತದಲ್ಲೂ ಶ್ರೀನಿವಾಸ ಇವನಿಗೆ ಏನಾದರೂ ಕೇಡು ಬಗೆದನೇ ಎಂದು ನೋಡಿದರೆ, ಕಾದಂಬರಿಯಲ್ಲಿ ಅಂಥ ಒಂದೇ ಒಂದು ಪ್ರಸಂಗದ ಚಿತ್ರಣವೂ ಕಾಣುವುದಿಲ್ಲ. ಇನ್ನು ನಾಗಪ್ಪನ ವಿರುದ್ಧ ನಡೆಯುವ ಕಾರಸ್ಥಾನದಲ್ಲಿ ಶ್ರೀನಿವಾಸ ಭಾಗಿಯಾಗುವುದು,- ನಾಗಪ್ಪ ಶ್ರೀನಿವಾಸನ ಖಾಸಗಿ ಬದುಕಿಗೆ ಲಗ್ಗೆಯಿಟ್ಟು, ಮೊದಲಿಗೆ ಪದ್ದಕ್ಕನ ಮೇಲೆ ಕತೆ ಬರೆದು, ಮತ್ತೆ ಖುದ್ದು ಶ್ರೀನಿವಾಸನ ವಿರುದ್ಧವೇ ಕಾದಂಬರಿ ಬರೆಯಲು ಉದ್ಯುಕ್ತನಾದನೆಂಬ ಸುದ್ದಿ ಬಹಿರಂಗವಾದ ಮೇಲೆ.

ಅದನ್ನು ಅರ್ಜುನರಾವ್ ಊಹಿಸುತ್ತಾನೆ ಕೂಡ: ‘…ನೀವು ಕಾದಂಬರಿ ಬರೆಯುತ್ತೀರಿ ಎನ್ನುವುದರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವಂತೆ ತೋರುತ್ತದೆ. ಮುಖ್ಯವಾಗಿ ತನ್ನ ಸಮಾಜದವರ ಕಣ್ಣಲ್ಲಿ ನೀವು ಅವರ ಬದನಾಮಿ ಮಾಡುವ ಮೊದಲೇ ನಿಮ್ಮ ಬದನಾಮಿ ಮಾಡುವ ಹುನ್ನಾರು…’

ಹೀಗೆ, ತನಗೇನೂ ಕೇಡು ಮಾಡಿರದ ಯಾರದೋ ಬದುಕಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವರ ಖಾಸಗಿ ವಿವರಗಳನ್ನು ಹೆಕ್ಕಿ, ಕತೆ ಎಂಬ ಹೆಸರಿನಲ್ಲಿ ನೇರಾನೇರ ‘ಯಥಾರ್ಥ ನಿರೂಪಣೆ’ಯ ಹಮ್ಮಿನಲ್ಲಿ ಜಗಜ್ಜಾಹೀರು ಮಾಡುವುದಕ್ಕೆ ಏನೆಂದು ಹೆಸರು ಕೊಡಬೇಕು? ತೀರಾ ಮೃದುವಾಗಿ ಹೇಳುವುದಾದರೆ, ಇದು ಮಾನಹಾನಿ ಮೊಕದ್ದಮೆಗೆ ತಕ್ಕುದಾದ ಪ್ರಕರಣ. ಅಥವಾ ನಿರ್ದಾಕ್ಷಿಣ್ಯವಾಗಿ ಹೇಳಬೇಕೆಂದರೆ ಇದು ಪರಮ ನೀಚತನ.

ಆದರೆ ಇದು ನೀಚತನ ಎಂದು ನಾಗಪ್ಪನಿಗೂ ಅನಿಸುವುದಿಲ್ಲ; ಚಿತ್ತಾಲರಿಗೂ ಅನಿಸುವುದಿಲ್ಲ! ಅವರಿಬ್ಬರ ನೈತಿಕ ದಿಕ್ಸೂಚಿ- moral compass- ಅಷ್ಟರ ಮಟ್ಟಿಗೆ ತುಕ್ಕು ಹಿಡಿದಿದೆ!

ಕೆಲವು ದಶಕಗಳ ಹಿಂದೆ ಪತ್ರಿಕೆಗಳಲ್ಲಿ ಅತ್ಯಾಚಾರ ಪ್ರಕರಣಗಳ ವರದಿ ಬರುತ್ತಿದ್ದಾಗ ಮೊದಲಿಗೆ ಸಂತ್ರಸ್ತೆಯ ಹೆಸರು ಪ್ರಕಟಿಸಿ, ಆರೋಪಿಯ ಹೆಸರು ಗೋಪ್ಯವಾಗಿಡುವ ವಿಲಕ್ಷಣ ಪದ್ಧತಿ ಇತ್ತು! ಕ್ರಮೇಣ, ಮಾನವ ಹಕ್ಕುಗಳ ಕಲ್ಪನೆ ಸ್ಫುಟಗೊಳ್ಳುತ್ತ ಬಂದಂತೆ ಈಗ ಸಂತ್ರಸ್ತೆಯ ಹೆಸರು ಗೋಪ್ಯವಾಗಿಟ್ಟು ಆರೋಪಿಯ ಹೆಸರು ಪ್ರಕಟಿಸುವ ವಾಡಿಕೆ ರೂಢಿಗೊಂಡಿದೆ.

ಇಲ್ಲಿ ದೆಹಲಿಯ ‘ನಿರ್ಭಯಾ’ ಪ್ರಕರಣದ ಉದಾಹರಣೆ ನೆನೆಸಿಕೊಳ್ಳಬಹುದು. ಸಂತ್ರಸ್ತೆ ಹೆಸರಷ್ಟೇ ಅಲ್ಲ, ಅಪರಾಧದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ವಯಸ್ಕನ ಹೆಸರನ್ನೂ ಅಲ್ಲಿ ಗೋಪ್ಯವಾಗಿಡಲಾಗಿತ್ತು. ಈಗಲೂ ಸೂಕ್ಷ್ಮ ಪ್ರಕರಣಗಳ ವರದಿ ಮಾಡುವಾಗ ಪತ್ರಿಕೆಗಳಲ್ಲಿ ಸಂಬಂಧಪಟ್ಟವರ ಹೆಸರನ್ನು ಬದಲಿಸಿ- ಹೆಸರು ಬದಲಿಸಲಾಗಿದೆ ಎಂದು ಸೂಚಿಸಿಯೇ- ಮುಂದುವರೆಯುತ್ತಾರೆ. ಇದು ಕನಿಷ್ಠ ಸಭ್ಯತೆಯೂ ಹೌದು, ಗುರುತರ ಸಾಮಾಜಿಕ ಜವಾಬ್ದಾರಿಯೂ ಹೌದು. ಇಷ್ಟೂ ಸೂಕ್ಷ್ಮವಾಗಿರದವನ ಉದ್ದೇಶವೇ ಪ್ರಶ್ನಾರ್ಹವಾಗುತ್ತದೆ. ಸಹಜವಾಗಿಯೇ ಆತ ಬ್ಲಾಕ್‍ಮೇಲ್ ಪತ್ರಕರ್ತ ಅನಿಸಿಕೊಳ್ಳುತ್ತಾನೆ.

ಇಷ್ಟರ ಮೇಲೆ ನಾಗಪ್ಪ ಯಾರೋ ಅಮಾಯಕ ದಾರಿಹೋಕನಲ್ಲ; ಅತ್ಯಂತ ಸೂಕ್ಷ್ಮ ಸಂವೇದನೆಯ, ಬುದ್ಧಿವಂತ ಲೇಖಕನಾತ. ಅಂಥವನು ಯಾವುದೇ ಬಗೆಯ ಪ್ರಚೋದನೆಯೂ ಇಲ್ಲದೆ, ಯಾರೋ ಖಾಸಗಿ ವ್ಯಕ್ತಿಯ ಬದುಕಿನ ಗುಟ್ಟುಗಳನ್ನು ಬಹಿರಂಗಕ್ಕೆ ತಂದು ಜಗಜ್ಜಾಹೀರು ಮಾಡಿ, ಸರೀಕರ ಮುಂದೆ ಮಾನ ಹರಾಜು ಹಾಕುವುದಾದರೆ, ‘ಬದನಾಮಿ’ ಮಾಡುವುದಾದರೆ, ನೈತಿಕವಾಗಿ ಅದರ ನೆಲೆಯೇನು? ಚಿತ್ತಾಲರ ಪ್ರಕಾರ ನಾಗಪ್ಪ ಉದಾತ್ತ ವ್ಯಕ್ತಿ ಬೇರೆ. ‘ನಿಷ್ಕಾರಣವಾಗಿ ಯಾತನೆಗೆ ಗುರಿಯಾದ ಬಡಪಾಯಿ!’ ಹಾಗಾದರೂ, ತಾನು ನಡೆಸಲಿರುವ ಹೇಯ ಅಕ್ಷರ ದಾಳಿಗೆ ಶ್ರೀನಿವಾಸ ಮಾರುತ್ತರ ಕೊಡಲಾರನೆಂಬುದನ್ನು ಅರಿತೇ, ‘ನಿರಾಯುಧನ ಮೇಲೆ ಶಸ್ತ್ರಪ್ರಯೋಗಕ್ಕೆ’ ಹಿಂಜರಿಯದವನು ಅವನು!

ಹಾಗಾಗಿ ಇಡೀ ‘ಶಿಕಾರಿ’ ಕಾದಂಬರಿ, ನೈತಿಕ ಕುರುಡಿನ ನೆಲೆಗಟ್ಟಿನ ಮೇಲೆ ಕಟ್ಟಿದ ಸಾಹಿತ್ಯ ಸೌಧವಾಗಿ ಕಾಣುತ್ತದೆ.
ಹಾಗೆ ನೋಡಿದರೆ ನಾಗಪ್ಪನಿಗೆ ಹೋಲಿಸಿದರೆ ಶ್ರೀನಿವಾಸನೇ ಹೆಚ್ಚು ಘನತೆಯ ವ್ಯಕ್ತಿಯಾಗಿ ಗೋಚರಿಸುತ್ತಾನೆ. ನಾಗಪ್ಪ ತನ್ನ ಬಗ್ಗೆಯೇ ಅವಹೇಳನಕಾರಿ ಕಾದಂಬರಿ ಬರೆಯುತ್ತಾನೆಂದು ಗೊತ್ತಿದ್ದೂ ಶ್ರೀನಿವಾಸ ಅದೇ ಕಾದಂಬರಿಯನ್ನು ತನ್ನ ಮನೆಯಲ್ಲೇ ಕೂತು ಬರೆಯುವಂತೆ ಆಹ್ವಾನಿಸುತ್ತಾನೆ….

ಕಡೆಗೆ, ಬೇರೇನೂ ಗತಿಯಿಲ್ಲದೆ, ನೈತಿಕವಾಗಿ ಸಂಪೂರ್ಣ ಅಂಧನಾಗಿರುವ ಇಂಥ ನಾಗಪ್ಪನ ಮನವೊಲಿಸುವ ಕಟ್ಟಕಡೆಯ ಪ್ರಯತ್ನವಾಗಿ ಶ್ರೀನಿವಾಸ ಅಕ್ಷರಶಃ ನಾಗಪ್ಪನ ಕಾಲು ಕಟ್ಟುತ್ತಾನೆ. ಶ್ರೀನಿವಾಸನ ಎದೆಯೊಡೆಯುವ ಈ ಅಸಹಾಯಕತೆಯನ್ನು ಚಿತ್ತಾಲರು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ… ನಾಗಪ್ಪ ತನ್ನ ಪ್ರವರ ಜಗಜ್ಜಾಹೀರು ಮಾಡುವುದೇ ನಿಶ್ಚಿತ ಎಂದು ಬಗೆದ ಶ್ರೀನಿವಾಸ ಮೊದಲು ಧಮಕಿಯ ಧಾಟಿಯಲ್ಲಿ ಮಾತು ಆರಂಭಿಸುತ್ತಾನೆ:

“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ: ಹೀಗೆ ಹಿಂದಿನದೆಲ್ಲವನ್ನೂ ಅಗೆದು ತೆಗೆದು ನನ್ನನ್ನೇಕೆ ಸತಾಯಿಸುತ್ತೀಯೋ? ಹೇಳೋ, ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ- ಅವನೊಬ್ಬ ಹಜಾಮ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲಿಯೇ ಜನ್ಮ ಹೋಯಿತು. ಹಾಳಾದವನು ಎಲ್ಲ ಕಡೆ ಟಮಕೀ ಬಾರಿಸುತ್ತ ತಿರುಗುತ್ತಿದ್ದಾನೆ: ನೀನು ನನ್ನ ಮೇಲೆ ಕಾದಂಬರಿ ಬರೆಯುತ್ತಿದ್ದೀಯಂತೆ. ಈಗಾಗಲೇ ಅರ್ಧದ ಮೇಲೆ ಬರೆದು ಮುಗಿಸಿದ್ದೀಯಂತೆ. ಎಲ್ಲವನ್ನು ಉಘಡಾ- ಉಘಡೀ ಹೇಳಿದ್ದೀಯಂತೆ…. ಅಮ್ಮನ ಬಗ್ಗೆ ಬರೆದಾಗ ನಾನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ…. ಸ್ವಂತ ಮೆಹನತ್ತಿನಿಂದ ಈ ಎತ್ತರಕ್ಕೆ ಏರಿದವನನ್ನು ಕೆಳಗೆ ಎಳೆಯುವುದರಲ್ಲಿ ನಿನಗದೇನು ಸುಖವೋ? ನನ್ನ ಬದನಾಮಿ ಮಾಡ್ತೀಯೇನೋ?…. ನಿನ್ನ ಹಾಗೆ ಬರೆಯುವ ಕಲೆ ನನಗಿಲ್ಲವೋ… ಇಲ್ಲವಾದರೆ ನಿನ್ನ ಚಾರಿತ್ರ್ಯ ಏನೆಂಬುದನ್ನು ನಾನು ತೋರಿಸಿಕೊಡುತ್ತಿದ್ದೆ…” ಶ್ರೀನಿವಾಸನ ದನಿಯಲ್ಲಿ ಸಿಟ್ಟಿನ ಬದಲು ಒಂದು ರೀತಿಯ ದೈನ್ಯ, ಅಳುಬುರುಕುತನ ಸೇರುತ್ತಿರುವುದನ್ನು ಕಂಡು ಮುದುಕಿ ಒಮ್ಮೆಲೇ ಕೆರಳಿದಳು…

ಇಲ್ಲಿ ಮುದುಕಿ ಅಂದರೆ ಶ್ರೀನಿವಾಸನ ಅಮ್ಮ. ಇದೆಲ್ಲ ನಡೆಯುತ್ತಿರುವುದು ಶ್ರೀನಿವಾಸನ ಮನೆಯಲ್ಲೇ. ಮುಂದಕ್ಕೆ…
ಕೋಣೆಗೆ ಹೋಗಿ ಡ್ರೆಸ್ಸು ಬದಲಿಸಬೇಕೆಂದು ಪ್ಯಾಂಟು ಕೈಗೆ ತೆಗೆದುಕೊಳ್ಳುತ್ತಿರುವಾಗ ಶ್ರೀನಿವಾಸ ಒಳಗೆ ಬಂದು ತನ್ನ ಹಿಂದೆಯೇ ಕದ ಮುಚ್ಚಿಕೊಂಡು ಅಗಳಿ ಇಕ್ಕಿದ.

ಶ್ರೀನಿವಾಸನ ಬಣ್ಣಗೆಟ್ಟ ಮೋರೆ, ಗಾಬರಿ ಬಿದ್ದ ಕಣ್ಣುಗಳನ್ನು ನೋಡಿ ನಾಗಪ್ಪ ಥಕ್ಕಾದ… ಹೊತ್ತು ಹೋದ ಹಾಗೆ ಕೂತಕೂತಲ್ಲೇ ನಿರ್ವಿಣ್ಣನಾಗುತ್ತಿದ್ದಾನೆ, ಕುಸಿಯುತ್ತಿದ್ದಾನೆ…. ಕೂತಲ್ಲಿಂದ ಎದ್ದವನೇ ಇವನು ಏನು ಮಾಡುತ್ತಿದ್ದಾನೆ ಎನ್ನುವುದು ನಾಗಪ್ಪನ ಲಕ್ಷ್ಯಕ್ಕೆ ಬರುವ ಮೊದಲೇ ಶ್ರೀನಿವಾಸ ನೆಲದ ಮೇಲೆ ಮಂಡಿಯೂರಿ ಕುಳಿತು ನಾಗಪ್ಪನ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದ: “ದಮ್ಮಯ್ಯ ನಾಗಪ್ಪಾ, ಇಷ್ಟೊಂದು ನಿರ್ದಯನಾಗಬೇಡ. ಇಷ್ಟೆಲ್ಲ ಕಷ್ಟಪಟ್ಟು ಬೆಳೆಸಿಕೊಂಡುಬಂದದ್ದನ್ನು ಹೀಗೆ ಮಣ್ಣುಗೂಡಿಸಬೇಡ” ಎಂದ. ಇದು ಬರಿ ನಾಟಕವಲ್ಲ. ಶ್ರೀನಿವಾಸ ನಿಜಕ್ಕೂ ಯಾವುದಕ್ಕೋ ಹೆದರಿದ್ದಾನೆ! ವಿವೇಕಶೂನ್ಯವಾದ ರೀತಿಯಲ್ಲಿ ಬೆಚ್ಚಿಕೊಂಡಿದ್ದಾನೆ…

ಮಾತಿನಲ್ಲಿ ನಾಗಪ್ಪ ಮುಂಚೆ ಬರೆದಿದ್ದ ಕತೆಯ ಪ್ರಸ್ತಾಪ ಬರುತ್ತದೆ:

ಅಪ್ಪನ ಬಗ್ಗೆ ನಾನು ಆದರ ಇದ್ದವನಲ್ಲ. ಅವನು ಕೋಟಿತೀರ್ಥದಲ್ಲಿ ಮುಳುಗಿ ಜೀವ ಕಳೆದುಕೊಂಡಾಗ ಒಂದು ದರಿದ್ರ ಪೀಡೆ ತೊಲಗಿತು ಎಂದು ಸಂತೋಷಪಟ್ಟಿದ್ದನ್ನು ಯಾವ ಭಿಡೆ ಇಲ್ಲದೇ ಒಪ್ಪಿಕೊಳ್ಳುವ ಧೈರ್ಯವಿದೆ. ಆದರೆ ಅದೇ ದುರ್ಘಟನೆ ನಿನ್ನ ಕತೆಯಲ್ಲಿ ಮೂಡಿ ಬಂದು ಓದಲು ಸಿಕ್ಕಾಗ ಓದಿದ ಕೆಲವು ದಿನ ನಾನು ಅಂಜಿಕೊಂಡ ರೀತಿ ನನಗೊಬ್ಬನಿಗೇ ಗೊತ್ತು. ನೀನು ನನ್ನ ಅಪ್ಪನ ಹೆಸರನ್ನು ಕೂಡ ಬದಲಿಸದೇ ಎಲ್ಲ ವಿವರಗಳ ವಿಶ್ಲೇಷಣೆ ಮಾಡಿ ಕತೆ ಬರೆದಾಗ ಒಂದು ಹೇಳಹೆಸರಿಲ್ಲದ ಹಳ್ಳಿಯ ಕೊಂಪೆಯಲ್ಲಿ ನಡೆದ ಈ ದುರ್ಮರಣ ಜಗಜ್ಜಾಹೀರವಾಗುತ್ತದೆಯಲ್ಲ ಎಂಬ ಸತ್ಯಕ್ಕೆ ಭೀತನಾಗಿದ್ದೆ…

ಈಗ ಈಗಿನ ಕಾದಂಬರಿ ಬಗ್ಗೆ:

ನಿನಗೆ ಗೊತ್ತಿರಬಹುದಾಗಿದ್ದಕ್ಕೆ ಹೆದರಿಕೆಯಿಲ್ಲ; ಗೊತ್ತಿದ್ದನ್ನು ಬಿಚ್ಚುವ ನಿನ್ನ ದುರಭ್ಯಾಸಕ್ಕೆ. ಅಮ್ಮನ ಬಗ್ಗೆ ಕತೆ ಬರೆದಾಗಲೇ ಹೆದರಿಕೊಂಡಿದ್ದೆ. ಈಗ ನೇತ್ರಾವತಿಯ ಸಾವಿನ ಬಗ್ಗೆ ಕಾದಂಬರಿ ಬರೆಯುತ್ತೀಯಂತೆ, ಈಗಾಗಲೇ ಅರ್ಧದಷ್ಟು ಬರೆದು ಮುಗಿದಿದ್ದೀಯಂತೆ…. ಬಂದ ಜನರ ಇದಿರು ಉಪ್ಪು- ಖಾರ ಹಚ್ಚಿ ಬಾಯಿ ಚಪ್ಪರಿಸುತ್ತಿದ್ದ ಸೀತಾರಾಮ. ಹೆಸರುಗಳನ್ನು ಕೂಡ ಬದಲಿಸಿಲ್ಲವಂತೆ… ಹೌದೇನೋ ನಾಗಪ್ಪ? ಯಾಕೋ ನಿನಗೆ ನನ್ನ ಮೇಲೆ ಇಷ್ಟೊಂದು ಹಗೆ? ಈ ಕಾದಂಬರಿ ಈಗ ಯಾಕೆ? ಇಷ್ಟೆಲ್ಲ ವರ್ಷಗಳ ಮೇಲೆ? ನನ್ನ ಅಭ್ಯುದಯದ ಕಾಲದಲ್ಲಿ?…

ಶ್ರೀನಿವಾಸ ಮಾತಾಡುತ್ತ ಆಡುತ್ತ ಇನ್ನೂ ದೈನೇಸಿ ಸ್ಥಿತಿ ತಲುಪುತ್ತಾನೆ….

ಬೆನ್ನ ಹಿಂದಿನವನ (ಶ್ರೀನಿವಾಸನ) ನರಳಿಕೆಯ ಸದ್ದು ಹೆಚ್ಚುತ್ತ ಹೋದ ಹಾಗೆ, ಕಿಡಕಿಯ ಹತ್ತಿರ ನಿಲ್ಲುವುದು ನಾಗಪ್ಪನಿಗೆ ಅಸಾಧ್ಯವಾಗಹತ್ತಿತು… ಮಂಚದ ಅಂಚಿನಲ್ಲಿ ಕೂತ ಶ್ರೀನಿವಾಸ ಕೆಲವೇ ಕ್ಷಣಗಳಲ್ಲಿ ತಾರುಣ್ಯವನ್ನು ಕಳೆದುಕೊಂಡು ಹಣ್ಣುಹಣ್ಣು ಮುದುಕನಾದವನ ಹಾಗೆ ತೋರುತ್ತಿದ್ದ! ಎದ್ದು ನಿಲ್ಲುವ ತಾಕತ್ತೇ ಇಲ್ಲದವನ ಹಾಗೆ ತೂಗಾಡುತ್ತ ಮಂಚದಿಂದ ಎದ್ದ. ಮುದ್ದೆಯಾಗಿ ನಾಗಪ್ಪನ ಕಾಲ ಮೇಲೆ ಬಿದ್ದು: “ನನ್ನ ಬಗ್ಗೆ ಕಾದಂಬರಿ ಬರೀಬೇಡಾ” ಎಂದ. “ಬೇಕಾದರೆ ಬೇಕಾದರೆ..” ಮುಂದಿನ ಮಾತುಗಳು ಕುರಿಯ ಹಾಗೆ ಬೇ ಬೇ ಬೇ ಎಂದು ಅಸಂಬದ್ಧವಾದ ಧ್ವನಿ ಎಬ್ಬಿಸಿದವು…

ನಾಗಪ್ಪ ಆಗ ಕಾಲು ಬಿಡಿಸಿಕೊಂಡು ಓಟ ಕೀಳುತ್ತಾನೆ. ಶ್ರೀನಿವಾಸ ಬೇ ಬೇ ಬೇ ಅನ್ನುವ ಮೂಲಕ ಹೇಳಿದ್ದೇನು ಎನ್ನುವ ವಿವರಣೆ ಮುಂದೆ ಬರುತ್ತದೆ. ಆ ಮಾತಿಗೇ ವಾಕರಿಕೆ ಬಂದು ಮೇಲಿಂದ ಮೇಲೆ ವಾಂತಿ ಮಾಡಿಕೊಂಡು ಕಡೆಗೆ ಮನೆಗೆ ಬಂದು ಮಲಗಿದ ನಾಗಪ್ಪ ನೆನೆಸಿಕೊಳ್ಳುವುದು:

ತನ್ನ ಬಗ್ಗೆ ಕಾದಂಬರಿ ಬರೀಬೇಡಾ ಎಂದ ಶ್ರೀನಿವಾಸ- ಕಾಲು ಹಿಡಿದ ಶ್ರೀನಿವಾಸ- ಬೇಕಾದ್ದನ್ನು ಕೇಳು ಎಂದ ಶ್ರೀನಿವಾಸ- ಬೇಕಾದರೆ ಹಣ- ಬೇಕಾದರೆ ಶಾರದೆ…

ಅಂದರೆ ಶ್ರೀನಿವಾಸ ತನ್ನ ಮಾನಹಾನಿ ತಪ್ಪಿಸಿಕೊಳ್ಳಲು ನಾಗಪ್ಪನಿಗೆ ಸ್ವಂತ ಹೆಂಡತಿಯನ್ನೇ ಒಪ್ಪಿಸಲೂ ತಯಾರಿದ್ದಾನೆ!
ಪಾಪ, ಶ್ರೀನಿವಾಸ ಕೇಳುವುದೆಲ್ಲ ನ್ಯಾಯಬದ್ಧ ಸಾಚಾ ಪ್ರಶ್ನೆಗಳೇ. ನಿಜವಾಗಿ ಅವನೇ ನಿರ್ದೋಷಿ. ಆದರೆ ಅವನು ಇಷ್ಟೆಲ್ಲ ಗೋಗರೆದರೂ, ಅಂಗಲಾಚಿದರೂ, ನಾಗಪ್ಪನಿಗಾಗಲೀ, ಚಿತ್ತಾಲರಿಗಾಗಲೀ ಶ್ರೀನಿವಾಸನ ಬಗ್ಗೆ ಮನಸ್ಸು ಕರಗುವುದಿಲ್ಲ.

ನಾಗಪ್ಪನ ‘ಅಕ್ಷರ ಪರಾಕ್ರಮ’ ಸರಿಯೋ ತಪ್ಪೋ ಎಂಬ ಸಣ್ಣ ಸಂದೇಹವೂ ಮೂಡುವುದಿಲ್ಲ. ಅದರ ಬದಲು ಈ ಘಟನೆಯ ನಂತರ ನಾಗಪ್ಪನ ಮನದಲ್ಲಿ ಕಾದಂಬರಿ ಬರೆಯುವ ನಿಶ್ಚಯ ಇನ್ನೂ ಗಟ್ಟಿಯಾಗುತ್ತದೆ!… ಮನಸ್ಸು ಪುಲಕಿತವಾಗುತ್ತದೆ!…
‘ಶ್ರೀನಿವಾಸನ ಬಗ್ಗೆ ಬರೆಯಬೇಕೆಂದು ಯೋಚಿಸಿದ ಕಾದಂಬರಿಯನ್ನು ನಾಳೆಯಿಂದಲೇ ಆರಂಭಿಸಿದರಾಯಿತು ಎಂದುಕೊಂಡ:

ತಾನು ಈ ಕಾದಂಬರಿಯನ್ನು ಬರೆಯುವುದರ ಬಗ್ಗೆ ಶ್ರೀನಿವಾಸನಿಗಿದ್ದ ಭೀತಿ ಇಷ್ಟೊಂದು ವಿಕೋಪಕ್ಕೆ ಹೋದ ಕಾರಣವೇನು? ಈ ಅವಾಸ್ತವವಾದ ಭಯದ ಸ್ವರೂಪ ಅರಿಯುವ ಪ್ರಯತ್ನವೇ ಕಾದಂಬರಿಯ ವಸ್ತುವಾಗಬೇಕು. ಇಷ್ಟು ದಿನ ಬರಿಯ ಹುಡಿಹುಡಿಯಾಗಿ ಭಾವಗೋಚರವಾದದ್ದರ ಕೇಂದ್ರ ಈಗ ಅನಾಯಾಸವಾಗಿ ಹರಳುಗಟ್ಟುತ್ತಿದ್ದದ್ದು ಅರಿವಿಗೆ ಬಂದಾಗ ಮನಸ್ಸು ಪುಲಕಿತವಾಯಿತು. ಶ್ರೀನಿವಾಸ, ಒಂದೂ ಮಗ, ಬರೆಯದಿರಲು ಒಡ್ಡಿದ ಅಸಹ್ಯವಾದ ಆಮಿಷವೇ ಈಗ ಕಾದಂಬರಿಯ ಲೇಖನಕ್ಕೆ ಪ್ರಚೋದನೆಯಾಗುತ್ತಿದ್ದದ್ದು ನೋಡಿ ಮೋಜು ಎನಿಸಿತು…’

ಚಿತ್ತಾಲರು ಶ್ರೀನಿವಾಸನ ಭಯ, ವಿಹ್ವಲತೆಗಳನ್ನು ಕರಾರುವಾಕ್ಕಾಗಿಯೇ ಚಿತ್ರಿಸುತ್ತಾರೆ. ಆದರೆ ಈ ಮುಖಾಮುಖಿಯಲ್ಲಿ ತಪ್ಪಿತಸ್ಥ ನಾಗಪ್ಪನೇ ಹೊರತು ಶ್ರೀನಿವಾಸನಲ್ಲ ಎಂದು ಅವರಿಗೆ ಹೊಳೆಯುವುದೇ ಇಲ್ಲ. ನಾಗಪ್ಪನಿಗಂತೂ ಅದು ‘ಅವಾಸ್ತವ ಭಯ’ವಾಗಿ ಕಾಣುತ್ತದೆ. ಇದೀಗ ‘ಶಿಕಾರಿ’ ಕಾದಂಬರಿಯ ಬಹು ದೊಡ್ಡ ವಿಪರ್ಯಾಸ- ಇಲ್ಲಿ ನಿಜದಲ್ಲಿ ಶಿಕಾರಿ ಮಾಡುತ್ತಿರುವವನು ನಾಗಪ್ಪ, ಬಲಿಪಶು ಶ್ರೀನಿವಾಸ!

‘ಶ್ರೀನಿವಾಸನ ಹಾವಿನಂತೆ ಹಗೆ ಕಾಯುವ ಛಲದ ಗುಣ’ದ ಬಗ್ಗೆ ನಾಗಪ್ಪ ಎಷ್ಟೆಲ್ಲ ಹಳಹಳಿಸಿದರೂ, ನಿಜದಲ್ಲಿ ಹಗೆಸಾಧನೆ ಮಾಡುತ್ತಿರುವವನು ನಾಗಪ್ಪ, ಅದೂ ವಿನಾಕಾರಣ! ಅಷ್ಟಕ್ಕೂ ಶ್ರೀನಿವಾಸ ನಾಗಪ್ಪನ ಮೇಲಧಿಕಾರಿಗಳೊಂದಿಗೆ ಶಾಮೀಲಾಗಿ ಹೂಡುವ ಸಂಚೆಲ್ಲವೂ, ‘ಯಥಾರ್ಥ ಕಾದಂಬರಿ’ ಬರೆಯುವ ನಾಗಪ್ಪನ ದುರಾಕ್ರಮಣಕ್ಕೆ ಪ್ರತಿಕ್ರಿಯೆ ಅಷ್ಟೇ. ಅಂದರೆ ನಾಗಪ್ಪ ತನ್ನನ್ನು ತಾನು ಎಷ್ಟೇ ‘ನಿಷ್ಕಾರಣವಾಗಿ ಯಾತನೆಗೆ ಗುರಿಯಾದ ಬಡಪಾಯಿ’ ಎಂದು ಬಿಂಬಿಸಿಕೊಂಡರೂ, ಅವನ ಸಕಲ ಸಂಕಟದ ಮೂಲ ಈ ನಿಷ್ಕಾರಣ ಚಾರಿತ್ರ್ಯಹರಣದ ಚಟ- ಸ್ವಯಂಕೃತಾಪರಾಧ ಮಾತ್ರ.

ಇನ್ನೂ ಮುಂದಕ್ಕೆ ಗೆಳೆಯ ಸೀತಾರಾಮನೂ ಶ್ರೀನಿವಾಸನ ಮಾತಿನ ಮೋಡಿಗೆ ಬಲಿಯಾಗಿ ನಾಗಪ್ಪನ ವಿರುದ್ಧವೇ ತಿರುಗಿದಾಗ ನಾಗಪ್ಪ ಹೇಳುವುದು: ‘ನನ್ನ ಆಫೀಸಿನ ಜನ ನನ್ನ ಬಗ್ಗೆ ನಡೆಸಿದ ಪಿತೂರಿಯ ಅರ್ಥ ನಾನು ಮಾಡಿಕೊಳ್ಳಬಲ್ಲೆ. ಕೇವಲ ಆತ್ಮರಕ್ಷಣೆಯೇ- ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬರದ ಹಾಗೆ ನೋಡಿಕೊಳ್ಳುವದೇ- ಅದರ ಹಿಂದಿನ ಪ್ರೇರಣೆಯೆಂದು ತಿಳಿದಿದ್ದೇನೆ. ಶ್ರೀನಿವಾಸನಿಗೆ ನನ್ನ ಬಗ್ಗೆ ಇದ್ದ ದ್ವೇಷದ ಅರ್ಥವಾಗಿರದಿದ್ದರೂ ಕಾಲಕಾಲಕ್ಕೆ ಅದಕ್ಕೆ ಪ್ರೋತ್ಸಾಹವಿತ್ತ ಸಂಗತಿಗಳ ಅರ್ಥವಾದರೂ ಆಗುತ್ತದೆ…’ ಅಂದರೆ ಈಗಲೂ ಅವನಿಗೆ ಶ್ರೀನಿವಾಸ ತೋರ್ಪಡಿಸುವ ದ್ವೇಷದ ಅರ್ಥವೇ ಆಗಿಲ್ಲ! ನಾಗಪ್ಪನ ಸಂವೇದನೆ ಅಷ್ಟು ಮೊಂಡು…!

ಕಾದಂಬರಿಯ ಮುಕ್ತಾಯದ ಹಂತದಲ್ಲಿ ಎಲ್ಲದರಿಂದಲೂ ಬಿಡುಗಡೆ ಪಡೆದವನಂತಾದ ನಾಗಪ್ಪ ಹೊಸದೇ ನಿರ್ಧಾರಕ್ಕೆ ಬರುತ್ತಾನೆ:

‘ಈಗ ಸರಕ್ಕನೆಂಬಂತೆ ಮನಸ್ಸು ಗಟ್ಟಿಯಾಯಿತು: ಈ ಶ್ರೀನಿವಾಸರನ್ನು, ಸೀತಾರಾಮರನ್ನು, ಬಂದೂಕುವಾಲಾ- ದಸ್ತೂರರನ್ನು ನಾನು ವೈಯಕ್ತಿಕವಾಗಿ ದ್ವೇಷಿಸಿ ಉಪಯೋಗವಿಲ್ಲ. ಅವರು ವ್ಯವಹರಿಸುತ್ತ ಭದ್ರಗೊಳಿಸುತ್ತಿರುವ ನೆಲದಡಿಯ ಈ ಹೊಸ ಜಗತ್ತನ್ನೇ ನಾನು ಬಯಲಿಗೆಳೆಯಬೇಕಾಗಿದೆ….. ನನ್ನ ಉಳಿದ ಆಯುಷ್ಯವನ್ನೀಗ ಇದಕ್ಕೇ ಮೀಸಲಿರಿಸುತ್ತೇನೆ: ನೀನು ತಿಳಕೊಂಡ ಹಾಗೆ ಕತೆ- ಕಾದಂಬರಿಗಳನ್ನು ಬರೆಯುವುದಕ್ಕಲ್ಲ- ನಿಮ್ಮಂತಹವರ ನಿಜವಾದ ಬಣ್ಣ ತೋರಿಸಿಕೊಡಲು ಅನುವು ಮಾಡಿಕೊಡಬಹುದಾದಂತಹ ಜರ್ನಲಿಸಮ್‍ಗೆ…’

ಇದು ಅವನ ಭವಿಷ್ಯದ ಹೆಜ್ಜೆಯೇ ಆಗುವುದಾದರೆ, ನಾಗಪ್ಪ ಬ್ಲಾಕ್‍ಮೇಲ್‍ನಿರತ ‘ಪೀತ ಪತ್ರಕರ್ತ’ ಮಾತ್ರ ಆಗಲು ಸಾಧ್ಯ. ಇದು ‘ಶಿಕಾರಿ’ ಕಾದಂಬರಿಯ ನೈಜ ಒಳಧ್ವನಿ.

ಆದರೆ ಇಷ್ಟೂ ಕಾಲ ಚಿತ್ತಾಲರ ಕಥನ ಕೌಶಲದ ಮಾಯೆಗೆ ಸಿಲುಕಿ, ನಮಗೆ ಕವಿದ ಮಬ್ಬು ಹರಿದಿಲ್ಲ; ಉದ್ದಕ್ಕೂ ನಾಗಪ್ಪ ‘ನಿಷ್ಪಾಪ ಮುಗ್ಧ ಉದಾತ್ತ ಅಮಾಯಕ’ನೆಂದೇ ನಂಬಿಕೊಂಡು ಬಂದಿದ್ದೇವೆ!

#

‍ಲೇಖಕರು avadhi

April 4, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dr Sudha Shenoy

    Did not like the review on Shikari at all!! The reviewer has seriously misunderstood the protagonist Nagappa. But I am with Nagappa and the author Yashwant Chittal. This is not the first time that `Shikari’ is criticised this way. But the readers of Shikarí, like me, have experienced the sufferings of Nagappa and see it happening to us too!! I am glad I am not a student of literature and dont have to form opinions based on the opinions of the well-known critics. Shikari, Nagappa and Yashwant Chittal, in fact are part of my formative mind and still remain so.
    Last word: I think every novel can be dissected this way and can be argued against the author. Interesting project for the so-called critics!!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: