
ಅಹಲ್ಯಾ ಬಲ್ಲಾಳ್
ಶೀರ್ಷಿಕೆ ಮತ್ತು ಒಂದೆರಡು ಫೋಟೋಗಳನ್ನು ನೋಡಿದೊಡನೆ ಮೊದಲು ಮೂಡಿ ಬಂದದ್ದು ಈ ನಾಟಕ ಕಟ್ಟಿಕೊಡುವ ಅನುಭವ ಹೀಗಿರಬಹುದೇ ಹಾಗಿರಬಹುದೇ ಎಂಬ ಕಲ್ಪನೆಯ ಗರಿಗಳು. ಅದರ ಜೊತೆ ಟ್ಯಾಗೋರರ ಸಾಲು ನೆನಪಾಗಿ, ಅಂತೂ ಮುಂಬಯಿಯ ಮೈಸೂರು ಅಸೋಸಿಯೇಷನ್ನಿನಲ್ಲಿ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ- 2022ರ ಬಹುಮಾನ ವಿತರಣೆ ಕಾರ್ಯಕ್ರಮದ ಅಂಗವಾಗಿ ಪ್ರಯೋಗ ನೋಡುವ ವೇಳೆ ಬಂದೇಬಿಟ್ಟಿತು.
ಡಾ. ಬೇಲೂರು ರಘುನಂದನ್ ಬರೆದು, ಕೃಷ್ಣಮೂರ್ತಿ ಕವತ್ತಾರರು ನಿರ್ದೇಶಿಸಿ, ಗೋಕುಲ ಸಹೃದಯ ಎಂಬ ಬಾಲಕ ಒಬ್ಬನೇ 1 ಗಂಟೆ 10 ನಿಮಿಷಗಳ ಕಾಲ ಅಭಿನಯಿಸಿದ ‘ಚಿಟ್ಟೆ’ ನಾಟಕ ಮುಂಬಯಿ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸದೆ ತಣಿಸಿದ್ದು ವಿಶೇಷ. ಮಕ್ಕಳಲ್ವೇ, ಹೇಗೆ ಮಾಡಿದರೂ ಚೆನ್ನ ಎಂಬ ರಿಯಾಯಿತಿಯ ಪ್ರಶ್ನೆಯೇ ಏಳದಂತೆ ಪ್ರಸ್ತುತಿಯು ನೋಡುಗರ ಗಮನವನ್ನು ಸೆಳೆದದ್ದು ಮಾತ್ರವಲ್ಲ, ಅವೆರಡೂ ಬಹುಪಾಲು ಜೊತೆಜೊತೆಯಾಗಿಯೇ ಸಾಗಿದ ಪರಿ ಖುಷಿಕೊಟ್ಟಿತು.

ಬಾಲ್ಯಕ್ಕೂ ಚಿಟ್ಟೆಗಳಿಗೂ ಅದೇನೋ ನಂಟು. ಬದುಕನ್ನು ಎದುರಿಸುತ್ತಾ ಸ್ಪಂದಿಸುತ್ತಾ ಕುತೂಹಲ, ಚೂಟಿತನ, ಮುಗ್ಧತೆ, ಚಪಲ, ಹಾಸ್ಯ, ಕನಸುಗಾರಿಕೆ ಮೊದಲಾದವುಗಳೊಡನೆ, ದೊಡ್ಡವರಿಗೆ ಸಾಮಾನ್ಯ ಎನಿಸಬಹುದಾದ ಆಗುಹೋಗುಗಳ ಸಿಹಿ ಕಹಿಯನ್ನು ಸಹಜವಾಗಿ ಸ್ವೀಕರಿಸುತ್ತಾ ರಂಜಿಸುವ ‘ಚಿಟ್ಟೆ’ ಪರಿವರ್ತನೆಗೆ ರೂಪಕವೂ ಹೌದು. ದೊಡ್ಡವರು, ಪ್ರೌಢರು ಆಗುವುದೆಂದರೆ ಬದುಕಿನ ಸವಾಲುಗಳಿಗೆ ಒಡ್ಡಿಕೊಳ್ಳುತ್ತಾ ದಪ್ಪ ಚರ್ಮ ಬೆಳೆಸಿಕೊಂಡೋ, ರಾಜಗಾಂಭೀರ್ಯ ಅಥವಾ ಸಲ್ಲದ ತೂಕವನ್ನು ಆವಾಹಿಸಿಕೊಂಡೋ ‘ಚಿಟ್ಟೆತನವನ್ನು’ ಕಳೆದುಕೊಂಡುಬಿಡುವುದು ಎನ್ನುವುದಾದರೆ ಅದು ಯಾಕೆ ಬೇಕು!
ಒಂದು ನಾಟಕದ ಪ್ರಯೋಗಗಳ ಸಂಖ್ಯೆ ಹೆಚ್ಚಾದಂತೆ ರಂಗರೂಪ ವಿಕಸನಗೊಳ್ಳುತ್ತಲೇ ಹೋಗುವ ಪ್ರಯೋಜನ ಸಿಗುತ್ತದೆ. ಅದೇ ವೇಳೆಯಲ್ಲಿ, ಹಲವಾರು ಪ್ರಯೋಗಗಳ ನಂತರ ತಾಜಾತನವನ್ನು ಉಳಿಸಿಕೊಳ್ಳುವುದೂ ಸವಾಲೆನಿಸಬಹುದು. ಈ 84 ನೆಯ ಪ್ರಯೋಗದಲ್ಲಿ ನಟ ಗೋಕುಲ ಸಹೃದಯನ ಅಭಿನಯದಲ್ಲಿ ಯಾಂತ್ರಿಕತೆಯಂತೂ ಕಾಣಲಿಲ್ಲ. ಹಿತಮಿತವೆನಿಸುವ ರಂಗಪರಿಕರಗಳು, ಚಲನವಲನಗಳು, ಬೆಳಕನ್ನೂ ಸ್ಥಳಾವಕಾಶವನ್ನೂ ಲೆವೆಲ್ ಗಳನ್ನೂ ಬಳಸಿಕೊಂಡ ಪರಿ ಬಾಲಕನೊಬ್ಬನೇ ಪ್ರಸ್ತುತಪಡಿಸುವ ನಾಟಕಕ್ಕೆ ಸೂಕ್ತವೆನಿಸಿತು. ಎಳೆಯರ ಜಗತ್ತಿನ ಹಾಸ್ಯ, ಜನಪ್ರಿಯ ಹಾಡು- ಕುಣಿತದ ಕಸುವು, ಶಾಲೆಯ ಅನುಭವ ಇತ್ಯಾದಿ ಆ ಲೋಕದ ಚುರುಕುತನಕ್ಕೆ ಪೂರಕವಾಗಿದ್ದವು.

ಮಕ್ಕಳ ನಾಟಕವೆಂದರೆ ಮುಖಕ್ಕೆ ರಾಚಿದಂತಿರುವ ಅನುಗ್ರಹರೂಪದ ‘ಸಂದೇಶ’ ಅಥವಾ ‘ನೀತಿ ಪಾಠ’ ಇಲ್ಲದೇ ಇದ್ದದ್ದು ದೊಡ್ಡ ಸಮಾಧಾನ. ಬಡತನ ಮತ್ತು ಹಸಿವೆಯ ಆಯಾಮಗಳನ್ನು ಪುಟ್ಟ ಹುಡುಗನ ದೃಷ್ಟಿಕೋನದಲ್ಲಿ ಕಾಣಿಸುವ ಮೂಲಕ ಸ್ಕ್ರಿಪ್ಟ್- ಪಾತ್ರ ವಹಿಸುವ ನಟನಿಗೂ ನೋಡುವ ಎಳೆಯರಿಗೂ – ಪ್ರಪಂಚದಲ್ಲಿ ಹೀಗೂ ವಾಸ್ತವ ಇದೆ, ಎಂದು ತೋರಿಸುತ್ತದೆ. ನೋಡುಗ ಪುಟಾಣಿಗಳು ಉಳ್ಳವರೇ ಆಗಿದ್ದರೂ ಇಂತದ್ದೊಂದು ಕೊರತೆಯ ಲೋಕ ನಮ್ಮ ಸುತ್ತಮುತ್ತಲೇ ಇದೆ, ಅದಕ್ಕೆ ನಾನು, ನಾವು ಏನು ಮಾಡಬಹುದು ಎಂದು ಯೋಚಿಸುವಂತೆ, ಕನಿಷ್ಠ ಸಹೃದಯತೆಯಿಂದ ಜೀವಿಸಬಹುದಲ್ವೆ ಎಂದು ಮಿಡಿಯುವಂತೆ ಮಾಡುತ್ತದೆ.
ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಹಾರುತ್ತಾ ಅಲ್ಲಲ್ಲಿ ತನ್ನ ಗರಿಗಳ ಬಣ್ಣವನ್ನು ಉದುರಿಸಿ ಮುದ ನೀಡುವ ಹಗುರ ಪಾತರಗಿತ್ತಿಯಂತೆ ಗೋಕುಲ ಸಹೃದಯ ಮುಂಬಯಿ ಕನ್ನಡಿಗ ಪ್ರೇಕ್ಷಕರನ್ನು ಸೆರೆಹಿಡಿದ ಪರಿ ಭಾನುವಾರ ಸಂಜೆಯನ್ನು ಚಂದಗೊಳಿಸಿತ್ತು. “ಚಿಟ್ಟೆ ಎಣಿಸುವುದು ಕ್ಷಣಗಳನ್ನು, ತಿಂಗಳುಗಳನ್ನಲ್ಲ ಮತ್ತು ಅದರ ಬಳಿ ಸಾಕಷ್ಟು ಸಮಯ ಇರುತ್ತದೆ”. ಹೀಗೆಂದವರು ರವೀಂದ್ರನಾಥ ಟ್ಯಾಗೋರರು. ಇಂತಹ ಕ್ಷಣಗಳನ್ನು ಒದಗಿಸಿಕೊಟ್ಟ ನಾಟಕ ಇನ್ನಷ್ಟು ಮಕ್ಕಳನ್ನು ತಲುಪಲಿ, ಅವರು ಬೆಳೆಯುತ್ತಾ ಹೋದಂತೆ ಮುಗ್ಧತೆ ಮತ್ತು ಸಂವೇದನೆಯ ರೆಕ್ಕೆಗಳು ಜೀವನವನ್ನು ಹಗುರಾಗಿಸಲಿ ಎಂಬ ಹಾರೈಕೆ.








0 Comments