ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಗುರೊಡೆಯುವ ಕಲ್ಯಾಣದ ಕನಸು..

ವಿಕ್ರಮ ವಿಸಾಜಿ ಅವರ ಹೊಸ ನಾಟಕ ‘ಕಲ್ಯಾಣಪುರ’

‘ನೆಲದಡಿ ಪ್ರಕಾಶನ’ ಈ ನಾಟಕ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಡಾ ಕಿರಣ ವಲ್ಲೇಪುರೆ ಅನಿಸಿಕೆ ಇಲ್ಲಿದೆ.

‘ಕಲ್ಯಾಣಪುರ’ ನಾಟಕವು ವಿಕ್ರಮ ವಿಸಾಜಿ ಅವರ ಮೂರನೆಯ ನಾಟಕ. ಇದಕ್ಕು ಮೊದಲು ‘ರಸಗಂಗಾಧರ’ ಮತ್ತು ‘ರಕ್ತವಿಲಾಪ’ ನಾಟಕಗಳನ್ನು ರಚಿಸಿದ್ದಾರೆ. ಪ್ರಸ್ತುತ ‘ಕಲ್ಯಾಣಪುರ’ ನಾಟಕವು ಬಸವಣ್ಣನ ಕುರಿತದ್ದಾಗಿದೆ. ಬಸವಣ್ಣನ ಕುರಿತು ಕನ್ನಡದಲ್ಲಿ ಈಗಾಗಲೇ ಗಿರೀಶ ಕಾರ್ನಾಡ ಅವರ ‘ತಲೆದಂಡ’, ಪಿ. ಲಂಕೇಶ ಅವರ ‘ಸಂಕ್ರಾಂತಿ’, ಎಂ. ಎಂ. ಕಲಬುರ್ಗಿ ಅವರ ‘ಕೆಟ್ಟಿತ್ತು ಕಲ್ಯಾಣ’, ಎಚ್. ಎಸ್. ಶಿವಪ್ರಕಾಶ ಅವರ ‘ಮಹಾಚೈತ್ರ’ ನಾಟಕಗಳು ರಚನೆಯಾಗಿವೆ. ‘ಕಲ್ಯಾಣಪುರ’ ನಾಟಕದಲ್ಲಿ ಕಲ್ಯಾಣಕ್ರಾಂತಿ ಸಂದರ್ಭದಲ್ಲಿ ಬಸವಣ್ಣನ ಮನದಲ್ಲಾಗುವ ಆತಂಕ, ಅನುಭವಿಸಿದ ಸಂಕಟ, ತಳಮಳ, ಎದುರಿಸದ ತೊಂದರೆಗಳು ಹಾಗೂ ಮಗ ಬಾಲಸಂಗಯ್ಯನ ಸಾವು ಮತ್ತು ತನ್ನ ಮನೆಯ ಸದಸ್ಯರಾದ ಮಡದಿ ನಿಲಾಂಬಿಕೆ, ಗಂಗಾಬಿಕೆ ಮತ್ತು ಸಹೋದರಿ ಅಕ್ಕನಾಗಮ್ಮ ಅವರೊಂದಿಗೆ ನಡೆಸಿದ ಮಾತುಕತೆಯ ಚಿತ್ರಣ ಇದೆ. ಒಟ್ಟು ಒಂಭತ್ತು ದೃಶ್ಯಗಳು ನಾಟಕದಲ್ಲಿವೆ. ಪ್ರತಿ ದೃಶ್ಯಗಳನ್ನು ಶರಣರ ವಚನವೊಂದರ ಸಾಲುಗಳ ಮೂಲಕವೇ ಆರಂಭಮಾಡಿದ್ದು ವಿಶೇಷ. ಕಲ್ಯಾಣದಲ್ಲಿನ ಬಸವಣ್ಣನ ಕೊನೆಯ ದಿನಗಳನ್ನು ನಾಟಕ ಚಿತ್ರಿಸುತ್ತದೆ.

‘ಬಸವಣ್ಣ’ ನಾಟಕದ ಕೇಂದ್ರಪ್ರಜ್ಞೆ. ಕಲ್ಯಾಣಕ್ರಾಂತಿ ಸಂದರ್ಭದಲ್ಲಿ ಅವನು ತನ್ನ ಮಂತ್ರಿ ಪದವಿಯನ್ನು ತೊರೆದು ಬಿಜ್ಜಳನ ಆಸ್ಥಾನದಿಂದ ಹೊರಬಂದು ತನ್ನ ಮನೆ ಸೇರಿದ ನಂತರದಲ್ಲಿ ಈ ನಾಟಕದ ಕಥೆ ಆರಂಭವಾಗುತ್ತದೆ. ಅವನ ಮಹಾಮನೆ ನಾಟಕದ ಕೇಂದ್ರಸ್ಥಳ. ಕಲ್ಯಾಣದಲ್ಲಿ ಸಂಭವಿಸುತ್ತಿರುವ ತಲ್ಲಣಗಳ ಬಗೆಗೆ ಬಸವಣ್ಣ-ಗಂಗಾಂಬಿಕೆ-ನಿಲಾಂಬಿಕೆ-ಅಕ್ಕನಾಗಮ್ಮಳ ನಡುವೆ ನಡೆಯುವ ಸಂಭಾಷಣೆಯೇ ಈ ನಾಟಕ.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನು ಶರಣರ ಜೊತೆಗೂಡಿ ವಚನಗಳ ಮೂಲಕ ಜನರಿಗೆ ಸಮಸಮಾಜದ ಅರಿವು, ಸಾಮರಸ್ಯದ ಅರಿವು, ಆತ್ಮಗೌರವದ ಅರಿವು ನೀಡಿ ಕಲ್ಯಾಣದ ಕನಸನ್ನು ಕಟ್ಟಿದ್ದನು. ಒಂದು ಹಂತದಲ್ಲಿ ಆ ಕನಸನ್ನು ಸಾಧಿಸಿದ್ದನು ಕೂಡ. ಅನುಭವ ಮಂಟಪ ಆ ಕನಸಿನ ಕೇಂದ್ರಸ್ಥಳವಾಗಿತ್ತು. ಆದರೆ ಬಸವಾದಿ ಶರಣರ ಚಿಂತನೆಗಳಿಂದ ತಮ್ಮ ಹುಸಿಮೌಲ್ಯವನ್ನು ಕಳೆದುಕೊಂಡ ಜನ, ರಾಜಾಸ್ಥಾನದಲ್ಲಿನ ಅಧಿಕಾರದ ದಾಹದ ಜನ, ಬಸವಣ್ಣನ ಕೀರ್ತಿಯನ್ನು ಸಹಿಸದ ಜನ ಅರಸನ ಕಿವಿತುಂಬಿ ಹುಟ್ಟುಹಾಕಿದ ಅಶಾಂತಿಯ ವಾತಾವರಣ ಈಡೀ ಕಲ್ಯಾಣದ ಪರಿಕಲ್ಪಣೆಯನ್ನು ನುಂಗಲು ಹತ್ತಿತ್ತು. ಆ ಸಂದರ್ಭದಲ್ಲಿ ಶರಣರು ತಮ್ಮ ಜೀವ ರಕ್ಷಣೆಯ ಜೊತೆಗೆ ಬೌದ್ಧಿಕ ಸಂಪತ್ತುಗಳಾದ ವಚನಗಳ ಕಟ್ಟುಗಳನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿಯೊಂದಿಗೆ ಕಲ್ಯಾಣತೊರೆಯುತ್ತಾರೆ. ಕಲ್ಯಾಣದಲ್ಲಿನ ಬಸವಣ್ಣನ ಕೊನೆಯ ದಿನಗಳು, ಎದುರಿಸದ ಆತಂಕಗಳು ನಾಟಕದಲ್ಲಿ ಚಿತ್ರಿತಗೊಂಡಿವೆ.

ಬದುಕಿ ಬಾಳಬೇಕಿದ್ದ ಮಗ ಬಾಲಸಂಗಯ್ಯನ ಸಾವು, ಮದುಮಕ್ಕಳ ಕೊಲೆ, ಮಧುವರಸ, ಹರಳಯ್ಯರಿಗೆ ಚಿತ್ರಹಿಂಸೆ, ಬಿಜ್ಜಳನ ಸೈನಿಕರ ಉಪಟಳ, ಕಲ್ಯಾಣದಲ್ಲಿ ಶರಣರ ಸರಣಿ ಕೊಲೆಗಳು, ಅತ್ಯಾಚಾರ, ಬಂಧನ, ಆತ್ಮಹತ್ಯೆ, ಪ್ರಭುದೇವರಾದಿಯಾಗಿ ಒಬ್ಬಬ್ಬರೆ ಇಲ್ಲವೆ ಗುಂಪುಗಳಾಗಿ ಶರಣರು ಕಲ್ಯಾಣ ತೊರೆಯುವುದು, ಒಂದಾದನಂತರ ಒಂದಂತೆ ಕಿವಿಗೆ ಬಂದು ಅಪ್ಪಳಿಸುವ ಕಲ್ಯಾಣದಲ್ಲಿನ ಘೋರ ಕೃತ್ಯಗಳು ಬಸವಣ್ಣನನ್ನು ಕುಗ್ಗಿಸುತ್ತವೆ. ಆದರೆ ಅವನ ಆಂತರ್ಯದಲ್ಲಿ ಮತ್ತೆ ಕಲ್ಯಾಣದ ಕನಸು ಚಿಗುರುತ್ತಿರುತ್ತದೆ. ಅವನೆ ಹೇಳುವಂತೆ ಕನಸುಗಳಿಗೆ ಅಂತ್ಯವಿರುವುದಿಲ್ಲ. ಕಾಲದಲ್ಲಿ ಇಲ್ಲವೇ ಕಾಲವನ್ನು ಮೀರಿ ಕನಸು ಮತ್ತೆ ಎದ್ದು ನಿಲ್ಲುತ್ತದೆ ಎಂಬ ಭರವಸೆ ಆತನಿಗೆ. ಪ್ರತಿಕೂಲದ ಸನ್ನಿವೇಶಗಳಲ್ಲಿಯೂ, ಎದುರಿಸಿದ ಎಲ್ಲಾ ಸಂಕಟಗಳಲ್ಲಿಯೂ ಬಸವಣ್ಣನ ಆಂತರ್ಯದಲ್ಲಿ ಗಟ್ಟಿಯಾದ ಕಲ್ಯಾಣದ ಕನಸು ಮತ್ತೆ ಚಿಗುರೊಡೆಯುತ್ತಿರುತ್ತದೆ.

ನಾಟಕದಲ್ಲಿ ಸಂದರ್ಭಕ್ಕನುಗುಣವಾಗಿ ಸಂಭಾಷಣೆಗೆ ದುಡಿಸಿಕೊಂಡ ವಚನಗಳ ಸಾಲುಗಳು ನಾಟಕದ ಸಂಭಾಷಣೆಯ ಮೌಲ್ಯವನ್ನು ಹೆಚ್ಚಿಸಿವೆ. ಬಸವಣ್ಣನ ಕುರಿತು ಈಗಾಗಲೆ ರಚನೆಯಾದ ನಾಟಕಗಳು ಕಲ್ಯಾಣಕ್ರಾಂತಿ, ಬಸವಣ್ಣ-ಬಿಜ್ಜಳ ಸಂಘರ್ಷ, ಅಂತರ್ಜಾತಿ ವಿವಾಹವನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾದರೆ ‘ಕಲ್ಯಾಣಪುರ’ ನಾಟಕ ಬಸವಣ್ಣನ ವಾಸಮನೆಯಾದಂತಹ ‘ಮಹಾಮನೆ’ಯನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾಗಿದೆ. ಚರಿತ್ರೆ, ವಿದ್ವತ್ತು ಮತ್ತು ಕಲ್ಪನೆಯ ಸಂಗಮ ಈ ನಾಟಕ.

‍ಲೇಖಕರು Admin

26 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading