ಚಿಕ್ ಚಿಕ್ ಸಂಗತಿ: ಹಾಳಾದೊವೆರಡು ಮೊಲೆ ಬಂದು..

ಜಿ ಎನ್ ಮೋಹನ್ 

ನಾಲ್ಕು ಪುಟ ತಿರುಗಿಸಿರಬಹುದು ಅಷ್ಟೇ
ಕೈ ಗಕ್ಕನೆ ನಿಂತಿತು

ಒಂದಷ್ಟು ಹೊತ್ತು ಅಷ್ಟೇ,
ನನ್ನ ಬೆರಳುಗಳಿಗೆ ಪುಟ ತಿರುಗಿಸುವುದೇ ಮರೆತು ಹೋಯಿತು
ಕಣ್ಣುಗಳಿಗೆ ಎದುರಿಗಿದ್ದ ಅಕ್ಷರ ಕ್ರಮೇಣ ಕಾಣಿಸದಂತಾಗಿ ಹೋಯಿತು

sheನನ್ನ ಕಣ್ಣುಗಳು ಒದ್ದೆಯಾಗಿ ಹೋಗಿದ್ದವು
ಒಂದು ಹನಿ ಬೇಡ ಬೇಡವೆಂದರೂ ಅದೇ ಹಾಳೆಗಳ ಮೇಲೆ ಜಾರಿ ಬಿದ್ದೇ ಬಿಟ್ಟಿತು

‘ಮತ್ತದೇ ಸಂಜೆ.. ಅದೇ ಏಕಾಂತ..’ ಅನಿಸಿಬಿಟ್ಟಾಗಲೆಲ್ಲಾ ನನ್ನ ಮನಸ್ಸು ತಡಕುವುದು ಪುಸ್ತಕಗಳನ್ನೇ
ಹಾಗೆ ಅಂದೂ ಸಹಾ ಕಪಾಟಿನಲ್ಲಿದ್ದ ಒಂದು ಪುಸ್ತಕವನ್ನು ಎಳೆದುಕೊಂಡಿತ್ತು
ನಾಲಿಗೆ ಮತ್ತೆ ಮತ್ತೆ ಅದೇ ಹಲ್ಲಿಗೆ ಹೊರಳುವ ಹಾಗೆ ನಾನು ಕೈಗೆತ್ತಿಕೊಂಡಿದ್ದು
ಚಂದ್ರಶೇಖರ ಆಲೂರರ ‘ಆನು ಒಲಿದಂತೆ ಹಾಡುವೆ’

ನನ್ನ ಕಾಲಕ್ಕೆ ಜಾರಲು ಆ ಪುಸ್ತಕ ಒಂದು ನೆಪ ಅಷ್ಟೇ
ಹಾಗೆ ಜಾರುತ್ತಿರುವಾಗಲೇ ಅದು ಕಣ್ಣಿಗೆ ಬಿತ್ತು-
‘ಸುಮಕೆ ಸೌರಭ ಬಂದ ಗಳಿಗೆ’

ನನ್ನ ಮನಸ್ಸು ಓಡಿದ್ದು ಅಂಗೋಲಾದ ಕಡೆಗೆ
ದೂರದ ಆಫ್ರಿಕಾ ಖಂಡದ ಅಂಗೋಲಾ ದೇಶದ ಕಡೆಗೆ

ಒಂದಷ್ಟು ದಿನದ ಹಿಂದೆ ಗೆಳೆಯ ಪ್ರಸಾದ್ ನಾಯ್ಕ್ ಫೋನ್ ಮಾಡಿದ್ದ
ನಿಮ್ಮ ಮೇಲ್ ನೋಡಿ ಅಂತ
ನಾನು ಸುರತ್ಕಲ್ ನಿಂದ ಅಂಗೋಲಾಗೆ ಹಾರಿದ ಹುಡುಗ ಇನ್ನೇನು ಬರೆದಿರುತ್ತಾನೆ
ಎಂದುಕೊಂಡೇ ಕಂಪ್ಯೂಟರ್ ಆನ್ ಮಾಡಿದ್ದೆ

ಮೊದಲ ಬಾರಿಗೆ ವಿದೇಶಕ್ಕೆ ಹೋದವರು ಬೆರಗುಗಣ್ಣು ಬಿಟ್ಟುಕೊಂಡು ಅಲ್ಲಿನ ಭರ್ಜರಿ ಕಟ್ಟಡವನ್ನೋ, ಪುಷ್ಕಳ ಊಟವನ್ನೋ
ಇಲ್ಲವೇ ಪಬ್ ನಲ್ಲಿ ಬಿಯರ್ ಹೀರಿದ್ದನ್ನೋ ಬಣ್ಣಿಸಿರುತ್ತಾರೆ
ಹಾಗೆಂದು ಬಲವಾಗಿ ನಂಬಿಕೊಂಡೇ ಕ್ಲಿಕ್ ಮಾಡಿದ ನಾನು ಗರ ಹೊಡೆದು ಕುಳಿತುಬಿಟ್ಟೆ

ಪ್ರಸಾದ್ ಒಂದು ಕಗ್ಗತ್ತಲ ಕಾಲವನ್ನು ಹಿಡಿದು ನನ್ನೆದುರು ನಿಂತಿದ್ದ

ಇನ್ನೂ ನಿನ್ನೆ ಮೊನ್ನೆ ಅಂಗಳದಲ್ಲಿ ಕುಂಟಾಬಿಲ್ಲೆ ಆಡುತ್ತಿದ್ದ ಹುಡುಗಿಯನ್ನು ಹುಡುಕಿಕೊಂಡು ಯೌವ್ವನ ಹೆಜ್ಜೆಯಿಡುವಾಗ
ಅದನ್ನು ನಾನು ‘ಸುಮಕೆ ಸೌರಭ ಬರುವ ಗಳಿಗೆ’ ಎಂದೇ ತಿಳಿದಿದ್ದೆ
ನಾನೊಬ್ಬನೇ ಏಕೆ? ಆ ಪುಸ್ತಕವೂ ಹಾಗೇ ನಂಬಿತ್ತು.

ಆದರೆ ಅಲ್ಲೊಂದು ಲೋಕವಿತ್ತು.
ಯೌವನವೆನ್ನುವುದು ಸದ್ದು ಮಾಡದೆ, ಕಳ್ಳ ಹೆಜ್ಜೆ ಹಾಕುತ್ತ ಒಳಗೆ ಲಗ್ಗೆ ಹಾಕುತ್ತದೆ ಎನ್ನುವುದು ಒಂದು ಭಯಾನಕ ದುಸ್ವಪ್ನವಾಗಿದ್ದ ಲೋಕ

ಅಂಗಳದಲ್ಲಿ ಆಡುವ ಮಗು ನಾನು ದೊಡ್ಡವಳಾಗಿಬಿಟ್ಟರೆ ಎಂದೇ ಬೆಚ್ಚಿ ಬೀಳುವ ಲೋಕ
ನನಗೆ ಯೌವನ ಬೇಡ ಎಂದು ನಿದ್ರೆಯಲ್ಲಿ ದುಃಸ್ವಪ್ನ ಕಂಡು ಚೀರಿ ಎದ್ದು ಕುಳಿತುಕೊಳ್ಳುವವರ ಲೋಕ
ಯೌವನ ಇನ್ನೇನು ನನ್ನನ್ನು ತಾಕುತ್ತದೆ ಎನ್ನುವ ಕಾರಣಕ್ಕೆ
ಇದ್ದ ಧೈರ್ಯವೆಲ್ಲಾ ಕುಸಿದು ಮನಶ್ಶಾಸ್ತ್ರಜ್ಞರನ್ನು ಹುಡುಕಿ ಹೋಗುತ್ತಿರುವವರ ಲೋಕ
ಅಷ್ಟೇ ಅಲ್ಲ, ಯೌವನದ ಆಗಮನವನ್ನು ಧಿಕ್ಕರಿಸಿ ಸಾವಿಗೆ ಶರಣಾಗುತ್ತಿದ್ದವರ ಲೋಕ

ಎದೆ ಗುಬ್ಬಿ ಮೂಡುತ್ತಿದೆ ಎಂದರೆ ಸಾಕು ಎಷ್ಟೋ ಮನೆಗಳಲ್ಲಿ ಬೆಂಕಿ ಒಲೆ ಸಿದ್ಧವಾಗುತ್ತಿತ್ತು
ಕಲ್ಲು, ಬಟ್ಟಲು ಆ ಬೆಂಕಿಯಲ್ಲಿ ಕಾಯುತ್ತಿದ್ದವು
ತೆಂಗಿನ ಚಿಪ್ಪಿನೊಳಗೆ ಕೆಂಡ ಸೇರುತ್ತಿದ್ದವು

breasts1ಹಾಗೆ ತಯಾರಾದ ಬೆಂಕಿಯನ್ನು ಕೈನಲ್ಲಿಟ್ಟುಕೊಂಡ ಅಮ್ಮಂದಿರು
ಮಕ್ಕಳನ್ನು ಹಿಡಿದುಕೊಂಡು ಇನ್ನು ಮೊಲೆ ಮೂಡುವುದೇ ಇಲ್ಲ
ಎನ್ನುವಂತೆ ಅದನ್ನು ಸುಟ್ಟು ಹಾಕಿಬಿಡುತ್ತಿದ್ದರು

ಹಾಹಾಕಾರ, ನೋವು, ಅಳು ಯಾವುದೂ ಈ ಎದೆ ಸುಡುವಿಕೆಯನ್ನು ತಡೆಯುತ್ತಿರಲಿಲ್ಲ
ಮೊಲೆ ಇಲ್ಲವಾಗಿಬಿಡಬೇಕು ಎನ್ನುವುದಷ್ಟೆ ಅಲ್ಲಿದ್ದ ಆತಂಕ

ಅದನ್ನು ‘ಬ್ರೆಸ್ಟ್ ಐರನಿಂಗ್’ ಎನ್ನುತ್ತಾರೆ
‘ಎದೆ ಇಸ್ತ್ರಿ’

ಒಂದು ದಿನ ಹೀಗೆ ಮನಸ್ಸಿಗೆ ಏನು ಕವಿದುಕೊಂಡಿತ್ತೋ
ನಾನು ಹಾಗೂ ಎಸ್ ಕೆ ಕರೀಂ ಖಾನ್ ಕಡಲ ತಡಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು

ಕತ್ತಲ ರಾತ್ರಿ,
ಎಲ್ಲೂ ಕಾಣದ ಚಂದ್ರಮನ ಬೆಳಕು ಮನಸ್ಸಿಗೆ ಇನ್ನಷ್ಟು ಕಳವಳ ತುಂಬಿತ್ತು
ಅವರು ಹೇಳಿ ಕೇಳಿ ‘ಜಾನಪದ ಜಂಗಮ’
ನನ್ನ ಮನಸ್ಸಿಗೆ ಕಳವಳಕ್ಕೆ ಮಾತು ಕೊಟ್ಟರೋ ಎನ್ನುವಂತೆ ದನಿ ಎತ್ತಿದರು

‘ಎಮ್ಮೇಯ ಮೇಯ್ಸ್ಕೊಂಡು ಸುಮ್ಮಾನೆ ನಾನಿದ್ದೆ
ಹಾಳಾದೋವೆರಡು ಮೊಲೆ ಬಂದು। ನನ್ನಪ್ಪ
ಕಂಡೋರ್ಗೆ ನನ್ನ ಕೊಡುತಾನೆ’

ಅರೆ! ನಾನು ಎಂದೂ ಕೇಳದ ಸಾಲು ಅದು
ಆಗ ತಾನೇ ಯೌವನವನ್ನು ಕೈಗೆಟುಕಿಸಿಕೊಂಡಿದ್ದ,
‘ಕಾಮಾನ ಬಾಣ ಆತುರ ತರವೇನಾ’ ಎನ್ನುವ ಹುಮ್ಮಸ್ಸಿನಲ್ಲಿದ್ದವ
ನನಗೆ ಕಂಡಿದ್ದೆಲ್ಲವೂ ಕಾಮನ ಬಾಣವೇ ಆಗಿ ಕಾಣುತ್ತಿತ್ತು
ಪ್ರತೀ ಮರದ ಹಿಂದೆಯೂ ಹೂ ಬಿಲ್ಲ ಹಿಡಿದ ಮನ್ಮಥರೇ

ಯೌವನ ಎನ್ನುವುದು ನನಗೆ ಅಂತಹ ಕನಸು ಕೊಟ್ಟಿತ್ತು
ಆದರೆ.. ಆದರೆ ಇಲ್ಲಿ ಕಡಲ ಬೋರ್ಗರೆತವನ್ನೂ ಮೀರುವಂತೆ
ಈ ಅಜ್ಜ ಕರೀಂಖಾನ್ ಹಾಡುತ್ತಿರುವುದಾದರೂ ಏನು?

ತನ್ನ ಬಾಳಿ ಬದುಕಿದ ಮನೆಯನ್ನ, ತನ್ನ ತವರನ್ನ, ತನ್ನ ಖುಷಿಯನ್ನ ಆಗಲಿ ಹೋಗಬೇಕಲ್ಲಾ ಎನ್ನುವ ಕಾರಣಕ್ಕೆ
ಮುಂದೆಲ್ಲಿ ಹೋಗುತ್ತೇನೋ, ಏನು ಕಾಣಬೇಕಿದೆಯೋ ಎನ್ನುವ ಕಾರಣಕ್ಕೋ
ಆಕೆ ಈ ಅಗಲಿಕೆಗೆ ಕಾರಣವಾಗಿ ಮೂಡಿರುವ ತನ್ನ ಮೊಲೆಯನ್ನೇ ದ್ವೇಷಿಸುತ್ತಿದ್ದಾಳೆ
ಯಾವುದು ಸಂಭ್ರಮದ ಸೂಚಕ ಎಂದು ನಾನಂದುಕೊಂಡಿದ್ದೆನೋ ಅದನ್ನು ಆಕೆ
‘ಹಾಳಾದೋವೆರಡು’ ಎಂದು ಬಣ್ಣಿಸುತ್ತಿದ್ದಾಳೆ

ಅಲ್ಲಿ ಆ ಅಂಗೋಲಾದ ಹುಡುಗ ಹೇಳುತ್ತಿರುವ ಕ್ಯಾಮೆರೂನ್ ನ ಕಥೆಯಲ್ಲಿ
ಮೊಲೆಗಳನ್ನೇ ಸುಟ್ಟು ಹಾಕುತ್ತಿದ್ದಾರೆ
ತನ್ನ ಮನೆಯಲ್ಲಿರುವ ಹುಡುಗಿಗೆ ಮೊಲೆ ಬಂತು ಎಂದು ಗೊತ್ತಾದರೆ ಸಾಕು
ಎಲ್ಲಿ ಅವಳನ್ನು ಅತ್ಯಾಚಾರ ಮಾಡಿಬಿಡುತ್ತಾರೋ, ಎಲ್ಲಿ ಹೊತ್ತೊಯ್ದುಬಿಡುತ್ತಾರೋ
ಎಲ್ಲಿ ಅವಳನ್ನು ಕೊಂದುಬಿಡುತ್ತಾರೋ ಎನ್ನುವ ತಾಯಂದಿರ ಆತಂಕವೇ ಈ ಎಲ್ಲಕ್ಕೂ ಕಾರಣವಾಗಿ ಹೋಗಿತ್ತು

ಎದೆ ಎನ್ನುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು

ಚೀನಾದಲ್ಲಿ ಹೀಗೆ ಪಾದಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ಓದಿ ಗೊತ್ತಿತ್ತ್ತು
ಪಾದಗಳು ಬೆಳೆಯದಂತೆ ಹಸುಗೂಸುಗಳಿಗೆ ಇನ್ನೂ ತೊಟ್ಟಿಲಲ್ಲಿರುವಾಗಲೇ
ಗಟ್ಟಿ ಬಟ್ಟೆ ಕಟ್ಟಲು ಶುರು ಮಾಡುತ್ತಾರೆ
ಇದು ಇನ್ನೂ ಎಷ್ಟೋ ವರ್ಷಗಳ ಕಾಲ ಮುಂದುವರೆಯುತ್ತದೆ
ಇನ್ನು ಮುಂದಕ್ಕೆ ಪಾದ ಬೆಳೆಯುವುದಿಲ್ಲ ಎಂದು ಗೊತ್ತಾಗುವವರೆಗೆ

ಆದರೆ ಅಲ್ಲಿ ಅದು ಸೌಂದರ್ಯಕ್ಕಾಗಿ.
ಪುಟ್ಟ ಪಾದಗಳೇ ಸೌಂದರ್ಯ ಎಂದು ನಂಬಿರುವವರ ನಾಡು ಅದು
ಅಲ್ಲಿ ಅದು ಇನ್ನೂ ಚೆನ್ನಾಗಿ ಕಾಣಸಿಕೊಳ್ಳಲು ಮಾಡಿಕೊಂಡಿದ್ದ ದಾರಿ

ಆದರೆ ಇಲ್ಲಿ ಸೌಂದರ್ಯವನ್ನೇ ಸುಟ್ಟುಕೊಳ್ಳುತ್ತಿದ್ದರು
ಅದು ಅವರಿಗೆ ಆಯ್ಕೆಯಾಗಿರಲಿಲ್ಲ, ಆತಂಕದ ಕರಿಮೋಡವಾಗಿತ್ತು

butterfly3ಅಲ್ಲಿಗೊಬ್ಬ ಬಂದ. ಗಿಲ್ಡಾಸ್ ಪಾರ್ ಎಂಬಾತ.
‘ಪ್ಲಾಸ್ಟಿಕ್ ಡ್ರೀಮ್’ ಎನ್ನುವ ತನ್ನ ಯೋಜನೆಗೆ ಫೋಟೋಗಳನ್ನು ಕ್ಲಿಕ್ಕಿಸಲು
ಆಗಲೇ ಆತ ಬೆಚ್ಚಿ ಬಿದ್ದದ್ದು
ಕ್ಯಾಮೆರೂನ್ ನಲ್ಲಿದೆ ಎಂದುಕೊಂಡಿದ್ದ ಬ್ರೆಸ್ಟ್ ಐರನಿಂಗ್ ನೋಡಿದರೆ ಆಫ್ರಿಕಾದ ಬಹುತೇಕ ಎಲ್ಲಾ ದೇಶಗಳಲ್ಲೂ ಇತ್ತು
ಅಷ್ಟೇ ಅಲ್ಲ ನಿಧಾನವಾಗಿ ಇತರ ದೇಶಕ್ಕೂ ಹೆಜ್ಜೆ ಹಾಕಿತ್ತು

ಆಗ ಆತ ತನ್ನ ಯೋಜನೆಯನ್ನೇ ಬದಲಿಸಿದ
ತಾಯಂದಿರ ಮನ ಒಲಿಸಿ ಈ ಕರಾಳ ಆಚರಣೆಯನ್ನು ಸಮಾಜದ ಎದುರು ಫೋಟೋಗಳ ಮೂಲಕ ತೆರೆದಿಡುತ್ತಾ ಹೋದ
ಗೊತ್ತಿಲ್ಲ ಎಷ್ಟು ಮಕ್ಕಳು ಬಚಾವಾಗಿದ್ದಾರೆ ಎಂದು

ಇದೆಲ್ಲಾ ಓದುತ್ತಿರುವಾಗಲೇ ನನ್ನಒಳಗೆ ಏನೋ ಒಂದು ನೆನಪು ಕದಲಿದಂತಾಯ್ತು
ಮಸುಕು ಮಸುಕಾಗಿ ಮೂಡುತ್ತಿದ್ದ ಪದಗಳನ್ನು ಜೋಡಿಸುತ್ತಾ ಹೋದೆ

‘ಮೈ ನೆರೆದ ಮಗಳೊಬ್ಲು ಮನೆಯಲ್ಲಿದ್ದಾಳಂದ್ರೆ
ಊರ ಒಡೆಯ ಸೀರೆ ಕುಬುಸ ತರತೀನಂದ
ಕಲ್ಲು ಮುಳ್ಳಿಗೆ ಹೇಳಲಾ ನನ ಗೋಳ
ನಾನೇ ಕಲ್ಲಾಗೋಗಲಾ..’

ಹಳ್ಳಿ ಹಳ್ಳಿಗಳೊಳಗೆ ಅದೇ ಎದೆ ಗುಬ್ಬಿ ಮೂಡುತ್ತಿದ್ದ ತಕ್ಷಣ ಎರಗುತ್ತಿದ್ದ
ಹದ್ದುಗಳ ಬಗ್ಗೆ ಕೆ ರಾಮಯ್ಯ ಬರೆದ ಕವಿತೆಯಿದು
ಎಲ್ಲರ ಬಾಯಲ್ಲಿ ಹೋರಾಟದ ಹಾಡಾಗಿ ಚಿಮ್ಮಿತ್ತು

ಈಗ ಹೇಳಿ ‘ಸುಮಕೆ ಸೌರಭ ಬಂದ ಗಳಿಗೆ’ ಯಾವುದು??

‍ಲೇಖಕರು Admin

September 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. kvtirumalesh

    ಪ್ರಿಯ ಮೋಹನ್
    ಮನಕಲಕುವ ವಿಚಾರದ ಬಗ್ಗೆ ಬರೆದಿದ್ದೀರಿ. ನನಗಿರುವ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟ ನನಗೆ ಇದು ಚೆನ್ನಾಗಿ ಅರ್ಥವಾಗುತ್ತದೆ. ಈ ಹುಡುಗಿಯರು ಶಾಲೆ ಕಾಲೇಜುಗಳಿಗೆ ಹೋಗುತ್ತಿರುವಾಗ ಅಬರ ಸುರಕ್ಷೆ ಬಗ್ಗೆ ಆತಂಕಗೊಂಡಿದ್ದೆ; ಹಲವು ಕೆಟ್ಟ ಅನುಭವಗಳಾಗಿದ್ದವು.

    ಪ್ರತಿಯೊಬ್ಬ ಮಗಳಿಗೂ ಹೇಳಿದ್ದೇನೆ: ತಾಯಿ ಮನೆ, ಗಂಡನ ಮನೆ ಅಂತ ಇಲ್ಲ, ನೀವಿರುವುದೇ ನಿಮ್ಮ ಮನೆ, ಯಾವಾಗ ಬೇಕಾದರೂ ಬನ್ನಿ, ಎಷ್ಟು ದಿನ ಬೇಕಾದರೂ ಇರಿ, ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ, ನಿಮ್ಮಿಷ್ಟದಂತೆ ಇರಿ,
    ಎಂದು.
    ಒಂದು ಮಧ್ಯರಾತ್ರಿ ಮನೆಯವರೆಲ್ಲ ಮಲಗಿರುವಾಗ ನಾನೊಂದು ಕನ್ನಡ ಜನಪದ ಹಾಡನ್ನು ಇಂಗ್ಲಿಷ್-ಗೆ ಅನುವಾದಿಸಲು ಕೂತಿದ್ದೆ. ಒಬ್ಬಳು ಹೆಣ್ಣು ಮಗಳು ತನ್ನ ಅತ್ತಿಗೆಯಲ್ಲಿ ಕೋರಿಕೊಳ್ಳುವ ಮಾತು ಅದು: ಮಗು ತೊಡೆಯಲ್ಲಿ ಮಲಗಿದೆ, ಹಿಟ್ಟು ಬೀಸುವುದು ನಿಧಾನವಾಗುತ್ತಿದೆ, ಕೋಪಿಸಿಕೊಳ್ಳಬೇಡ, ಎಂದು. ನಾನೂ ನಿಮ್ಮ ಹಾಗೇ ಅತ್ತುಬಿಟ್ಟೆ, ಹಾಗೂ ಆ ಕವಿತೆಯ ಭಾವ ನನ್ನ ಮನಸ್ಸಿನಲ್ಲಿ ಅಳಿಯದೆ ನಿಂತಿದೆ. ಜನಪದ ಕವಿಯೊಬ್ಬರು ಈ ವಿಷಯದ ಕುರಿತು ಕವಿತೆ ಬರೆದರಲ್ಲ ಎನ್ನುವ ಸಂತೋಷವೂ ಇದೆ. (ಅದೇ ರೀತಿ, ‘ಕೆರೆಗೆ ಹಾರ’ ಕವಿತೆಯನ್ನು ಅನುವಾದಿಸಿದಾಗಲೂ ನನಗೆ ಇಂಥದೇ ಅನುಭವವಾಯಿತು.)
    ಥ್ಯಾಂಕ್ಸ್!

    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  2. ಲಕ್ಷ್ಮೀನರಸಿಂಹ

    ಕರುಳಿರಿಯುವ ಕಥನ. ಈ ತರಹದ ನೋವುಗಳು ದಕ್ಷಿಣ ಗೋಳಾರ್ಧದವರನ್ನೇ ಕಾಡುವುದೇಕೆ????

    ಪ್ರತಿಕ್ರಿಯೆ
  3. ಸುಮಿತ್ರಾ ಎಲ್ ಸಿ

    ಆಫ್ರಿಕಾ ದಲ್ಲಿ ಈ ಬಗೆಯ ಸ್ತ್ರೀವಿರೋದಿ ಆಚರನೆಗಳು ಈಗಲೂ ಇವೆ ಎಂಬುದು ವಿಷಾದನೀಯ. ವಾರಿಸ್ ಡೆರಿ ಸ್ತ್ರೀ ಸುನ್ನತಿಯ ವಿರುದ್ಧ ಹೋರಾಡಿದಂತೆ ಇದನ್ನೂ ಯಾರಾದರೂ ವಿರೋಧಿಸಬೇಕು. ಬರಹ ಚೆನ್ನಾಗಿದೆ

    ಪ್ರತಿಕ್ರಿಯೆ
  4. Sathyakama Sharma Kasaragodu

    ಹೆಣ್ಣು ಭ್ರೂಣ ಹತ್ಯೆ ಇದೆ ಸಾಲಿಗೆ ಸೇರುವ ಒಂದು ಹೇಯ ಕೃತ್ಯ. ಕೆಲವು ಭ್ರೂಣಗಳಿಗೆ ಆ ದುರ್ಗತಿ ಬಂದಿದ್ದರೆ, ಭಾರತ ಈ ಬಾರಿ ಒಲಿಂಪಿಕ್ಸ್ ನಲ್ಲಿ ಬರಿಗೈಯಲ್ಲಿ ವಾಪಾಸು ಬರಬೇಕಾಗುತ್ತಿತ್ತು!

    ಪ್ರತಿಕ್ರಿಯೆ
  5. Bharathi Hegade

    mohan sir avara baraha hagu k.v.tirumalesh avara pratikriye eradu manakalakuva hage iddavu. eradu kuda oduttiddante arivillade nanna kannugalu oddeyadavu

    ಪ್ರತಿಕ್ರಿಯೆ
  6. Sarojini Padasalagi

    ಹೆಣ್ಣು ಎಲ್ಲದರಲ್ಲಿಯೂ ಮುಂದಿರುವಾಗಲೂ ,ಅವಳು ಸಮಾನತೆಗೆ ಹೋರಾಡುವ ಕಾಲ ಹೋಗಿಯೇ ಇಲ್ಲ .ಅವಳೇ. ಆರಕ್ಷಕಳಾದರೂ ರಕ್ಷಣೆಗೆ ಮೊರೆ ಇಡುವುದು. ತಪ್ಪಿಲ್ಲ .ಲಾವಣ್ಯ ,ಲಾಸ್ಯ ,ಮಾಧುರ್ಯ ,ಕೋಮಲತೆ ,ಚಲುವು ಹೆಣ್ಣಿಗೆ ದೈವದತ್ತ ದೇಣಿಗೆ .ಆದರೆ ಹೆಣ್ತನದ ರಕ್ಷಣೆಗೆ ಆ ದೇಣಿಗೆಯ ಬಲಿನೇ ಬೇಕಾ ? ಕರುಳಿನಲ್ಲಿ ಕತ್ತರಿಯಾಡಿಸಿದಂತಹ ಯಾತನೆ .ಹೆಣ್ಣಿಲ್ಲದ ಜೀವನ ಊಹಿಸಲಸಾಧ್ಯ .ಆದರೂ ಶೋಷಣೆಗೆ ಅವಳೇ ಬಲಿ .ಎಂದು ಬಂದೀತು ಸುಕಾಲ ? “ಜಾಣೆಯಾಗಿರು ನನ್ನ ಮಲ್ಲಿಗೆ ನೀ ಹೆಣ್ಣಾಗಿ ಬಂದಿರುವಿ. ಇಲ್ಲಿಗೆ ” ಅಂತ ನನ್ನ ಮಗಳಿಗೆ ಹೇಳಿ ಕಣ್ಣೀರಿಟ್ಟದ್ದು ಇಂದಿಗೂ ಕಣ್ಣು ಒದ್ದೆಯಾಗಿಸುತ್ತದೆ .ಸಬಲೆಯರಾದ .ಅಬಲೆಯರ ಗೋಳು ಇದು .ತುಂಬಾ ಒಳ್ಳೆಯ ,ಕಣ್ತೆರೆಸುವ ಲೇಖನ

    ಪ್ರತಿಕ್ರಿಯೆ
  7. Kusuma patel

    It is shocking & hurting to know such practices still exist. Hope things will change for the better. It was great article sir.

    ಪ್ರತಿಕ್ರಿಯೆ
  8. Prasad

    ಹೆಸರಿಗಷ್ಟೇ `ಚಿಕ್ ಚಿಕ್ ಸಂಗತಿ’ ಎಂಬಂತಿರುವ ಈ ಅಂಕಣದ ವ್ಯಾಪ್ತಿಯು ಬಲುದೊಡ್ಡದು. ಮೊಟ್ಟಮೊದಲ ಬಾರಿಗೆ ಬ್ರೆಸ್ಟ್ ಐರನಿಂಗ್ ಎಂಬ ಸಂಪ್ರದಾಯದ ಬಗ್ಗೆ ತಿಳಿದುಬಂದಾಗ ನಾನು ಬೆಚ್ಚಿಬಿದ್ದದ್ದಂತೂ ಸತ್ಯ. ಈ ಹಿಂದೆ ಯೋನಿಛೇದನ ಕ್ರಿಯೆಯ ಬಗ್ಗೆ ಓದಿ ಬರೆಯುವಾಗಲೂ ಕಣ್ಣುಗಳು ತೇವವಾಗಿದ್ದವು. ಆಫ್ರಿಕಾ ಎಂಬ ಕಗ್ಗತ್ತಲಿನ ಖಂಡದ ಒಂದೊಂದೇ ಪದರಗಳನ್ನು ನಾಜೂಕಾಗಿ ಬಿಡಿಸುತ್ತಾ ಹೋದರೆ ಎದುರಾಗುವ ಸತ್ಯಗಳು ಎಂಥವರನ್ನೂ ದಂಗುಬಡಿಸುವಂಥವುಗಳು. ಧರ್ಮ, ಸಂಪ್ರದಾಯ, ಶಿಷ್ಟಾಚಾರ, ಮೂಢನಂಬಿಕೆ ಇತ್ಯಾದಿಗಳ ಹೆಸರಿನಲ್ಲಿ ಹೆಣ್ತನವನ್ನು ಹೊಸಕಿಹಾಕುವ ಪರಿಸ್ಥಿತಿಯು ಇಪ್ಪತ್ತೊಂದನೇ ಶತಮಾನದಲ್ಲೂ ಮುಂದುವರಿಯುತ್ತಿರುವುದು ಈ ಭೂಭಾಗದ ವಿಪಯರ್ಾಸವೇ ಸರಿ. ಚೆಂದದ, ಮನಮುಟ್ಟುವ ಬರಹವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.

    – ಪ್ರಸಾದ್ ನಾಯ್ಕ್, ರಿಪಬ್ಲಿಕ್ ಆಫ್ ಅಂಗೋಲ

    ಪ್ರತಿಕ್ರಿಯೆ
  9. Pradeep

    🙁 … ಇತ್ತೀಚಿಗೆ ನೋಡಿದ ಅಕಿರ ಸಿನೆಮಾ ಇಂತಹ ಆತಂಕಕ್ಕೆ ಪ್ರತಿಕ್ರಿಯೆಯೇ ಇರಬೇಕು

    ಪ್ರತಿಕ್ರಿಯೆ
  10. Boranna

    ಚಿಕ್ ಚಿಕ್ ಸಂಗತಿ ಅಂತ ಅಂಕಣದಲ್ಲಿ ಎಲ್ಲರ ಮನ ತಟ್ಟುವ ದೊಡ್ಡ ದೊಡ್ಡ ವಿಚಾರಗಳನ್ನು ತಿಳಿಸುತ್ತಿರುವ ಸರ್ ಗೆ ವಂದನೆಗಳು….,

    ಪ್ರತಿಕ್ರಿಯೆ
  11. nirmala I shettar

    mohan sir
    vishaya manakke vedane tanditu. hennannu innoo adeshtu teranaagi hattikkalaaguttide, naavu tiliyada vishaya adeshtu ideyo,,,,,,
    thanku sir

    ಪ್ರತಿಕ್ರಿಯೆ
  12. ನೂತನ ಎಮ್ ದೋಶೆಟ್ಟಿ

    ತಣ್ಣಗೆ ಕೊರೆಯುತ್ತಿದೆ….

    ಪ್ರತಿಕ್ರಿಯೆ
  13. Sangeeta Kalmane

    ಎಂಥ ಕರುಳು ಕಿವುಚುವ ಆಚರಣೆ! ವಯಸ್ಸಿಗೆ ಬರುತ್ತಿರುವ ಅಲ್ಲಿಯ ಹೆಣ್ಣುಮಕ್ಕಳ ಸ್ಥಿತಿ ಕಲ್ಪನಾತೀತ. ಪಾಪ!

    ಪ್ರತಿಕ್ರಿಯೆ
  14. Shashikala

    Sir,
    I suggest two books by “Ayaan Hirsi Ali”
    1. Infidel
    2. Nomad

    may be u would have read. If u have not u will thank me for suggesting
    I want u to write about these two books and the legendary person “Ayaan Hirsi Ali”

    Shashikala. M

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: