ಚಿಕ್ ಚಿಕ್ ಸಂಗತಿ: 'ನನಗೆ ಒಂದು ಆಸೆ ಇದೆ' ಎಂದರು..

ಜಿ ಎನ್ ಮೋಹನ್ 

‘ನನಗೆ ಒಂದು ಆಸೆ ಇದೆ’ ಎಂದರು
ವೇದಿಕೆಯ ಮೇಲೆ ಕುಳಿತಿದ್ದ ನಾನು ಥಟ್ಟನೆ ಅವರೆಡೆಗೆ ತಿರುಗಿದೆ
ಅವರು ಹೈಕೋರ್ಟ್ ನ ನ್ಯಾಯಾಧೀಶರು. ಸಾಕಷ್ಟು ಹೆಸರು ಗಳಿಸಿದವರು
ನ್ಯಾಯಾಂಗ ಎಂದರೆ ಅದು ಒಂದು ಬೇರೆ ಲೋಕವೇ ಎನ್ನುವಂತೆ ನೂರೆಂಟು ಶಿಷ್ಟಾಚಾರ
ಅದಕ್ಕೆ ನಿಜಕ್ಕೂ ಭಾವಕೋಶವೂ ಇದೆಯೇ ಯಾರಿಗೆ ಗೊತ್ತು?
ಹಾಗಿರುವಾಗ ಈ ನ್ಯಾಯಾಧೀಶರು ಮಾತನಾಡಿದ್ದರು
ಏನಿರಬಹುದು ಎಂದು ನನಗೆ ಕುತೂಹಲವಾಯಿತು
ಈ ನ್ಯಾಯಾಧೀಶರ ಜೊತೆ ನಾನು ಸಾಕಷ್ಟು ಬಾರಿ ಮಾತನಾಡಿದ್ದೇನೆ ಕಷ್ಟ ಸುಖ ಕಣ್ಣೀರು ಲೋಕ ಎಲ್ಲದರ ಬಗ್ಗೆ
ಆದರೆ ಅವರು ಯಾವತ್ತೂ ನನಗೆ ಒಂದು ಆಸೆ ಇದೆ ಎಂದು ಹೇಳಿಕೊಂಡಿದ್ದೆ ಇಲ್ಲ
ಅವರೊಡನೆ ಮಾತನಾಡುವಾಗ ಅವರೊಬ್ಬರನ್ನು ಬಿಟ್ಟು ಜಗತ್ತನ್ನೆಲ್ಲಾ ಸುತ್ತಿ ಬರುತ್ತಿದ್ದೆವು
judiciaryಹಾಗಾಗಿಯೇ ನನಗೆ ಸಹಜವಾಗಿ ಅವರು ಅಂತರಂಗ ತೆರೆದುಕೊಳ್ಳಲು ಸಜ್ಜಾಗುತ್ತಿದ್ದಾರೆ ಅನಿಸಿದಾಗ ಆಶ್ಚರ್ಯವಾಗಿ ಹೋಯಿತು
ಏನಿರಬಹುದು? ಆ ನ್ಯಾಯದ ತಕ್ಕಡಿಯಡಿ ಕುಳಿತ, ಸದಾ ನೋವಿನ ಶಸ್ತ್ರ ಚಿಕಿತ್ಸೆ ಮಾಡಿಸುವ
ಅಂಗುಲಂಗುಲ ಕುಯ್ದು ನೋಡಿ ನ್ಯಾಯದ ಮಾತನಾಡುವ ಇವರ ಆಸೆ
ಅವರು ಮುಂದುವರಿಸಿದರು
ನಾನು ಎಷ್ಟೋ ವ್ಯಾಜ್ಯಗಳನ್ನು ನೋಡಿದ್ದೇನೆ
ಒಬ್ಬ ವಕೀಲನಾಗಿ ನಂತರ ನ್ಯಾಯಮೂರ್ತಿಯಾಗಿ
ಸಾಕಷ್ಟು ಕೊಲೆ ಸುಲಿಗೆ ಹಲ್ಲೆ ಜಗಳ ಇವೆಲ್ಲವೂ ಸಂಭವಿಸಿ ಹೋಗಿದೆ
ನೆರೆಯ ದೇಶ ನೆರೆ ರಾಜ್ಯ ನೆರೆ ಊರು ನೆರೆ ಮನೆ ಅಷ್ಟೇಕೆ ಮನೆಯೊಳಗೆ, ಅಪ್ಪ ಮಕ್ಕಳ ನಡುವೆ ಅನ್ನ ತಮ್ಮಂದಿರ ನಡುವೆ
ಆಸ್ತಿಗಾಗಿ, ಹೆಣ್ಣಿಗಾಗಿ, ರಾಗದ್ವೇಷಕ್ಕಾಗಿ
ಆದರೆ.. ಆದರೆ..
ನನಗೆ ಒಂದು ಆಸೆ ಇದೆ
ಈ ಒಂದು ಜಗಳವನ್ನು ನೋಡಬೇಕು, ಈ ಒಂದು ವ್ಯಾಜ್ಯ ಕೋರ್ಟಿನ ಮೆಟ್ಟಿಲೇರಬೇಕು ಎಂದು
ನಾನು ಆವಾಕ್ಕಾಗಿ ಹೋದೆ
ನ್ಯಾಯಾಧೀಶರು.. ಸಮಮಾಜ ನೆಮ್ಮದಿಯಾಗಿ ಇರಲಿ ಎಂದೇ ದಿಕ್ಸೂಚಿಗಳನ್ನು ನೀಡುವವರು ಅವರೇ ಒಂದು ವ್ಯಾಜ್ಯಕ್ಕಾಗಿ ಹಂಬಲಿಸುತ್ತಿದ್ದಾರೆ
ನ್ಯಾಯದ ತಕ್ಕಡಿ ಹಿಡಿದ ಕೈ.. ಎಂದು ಮೂಕನಾಗಿ ಅವರತ್ತಲೇ ನೋಡುತ್ತಿದ್ದೆ
ಅವರು ಹೇಳಿದರು ಒಂದು ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಜಗಳವಾಗಬೇಕು
ಈ ಆಸ್ತಿ ನನ್ನದು ನಾನು ಬಿಟ್ಟುಕೊಡಲಾರೆ ಎಂದು
ಆ ಆಸ್ತಿಯನ್ನು ಇನ್ನೊಬ್ಬನೂ ಬಿಟ್ಟು ಕೊಡಲು ಒಪ್ಪಬಾರದು
ಈ ವ್ಯಾಜ್ಯ ಕೋರ್ಟಿಗೆ ಬರಬೇಕು
ಮನೆಯಲ್ಲಿ ಅಪ್ಪ ತನ್ನ ಜೀವಮಾನವಿಡೀ ಕೊಂಡಿಟ್ಟ ಪುಸ್ತಕಗಳ ಆಸ್ತಿಗಾಗಿ ಜಗಳವಾಗಬೇಕು
ಈ ಪುಸ್ತಕ ನನಗೆ ಸೇರಬೇಕು ನನಗೆ ಸೇರಬೇಕು ಎಂದು
ಪುಸ್ತಕ ಹಂಚಿಕೆಯಲ್ಲಿ ಮೋಸವಾಗಿದೆ ಎಂದು
ನೀನು ನನಗಿಂತ ಒಂದು ಪುಸ್ತಕ ಜಾಸ್ತಿ ಎತ್ತಿಟ್ಟುಕೊಂಡಿದ್ದೀಯ ಎಂದು
ಅಪ್ಪ ವಿಲ್ ರಿಜಿಸ್ಟರ್ ಮಾಡಿಸಿಲ್ಲ ಅದಕ್ಕೆ ಮಾನ್ಯತೆ ಇಲ್ಲ
ಈಗ ಮತ್ತೆ ನಾವೇ ಹಂಚಿಕೊಳ್ಳೋಣ, ನಾನು ದೊಡ್ಡವನು ನನಗೆ ದೊಡ್ಡ ಪಾಲು ಸಲ್ಲಬೇಕು ಎಂದು
This is books scramble. Many books on white background.
ಭೂಮಿ ಎಂಬ ಆಸ್ತಿಗಾಗಿ ನೆತ್ತರ ಹೊಳೆ ಹರಿದು ಹೋಗಿದೆ
ಎಷ್ಟೋ ಗೋರಿಗಳಲ್ಲಿರುವ ದೇಹಗಳು ಆಸ್ತಿಗಾಗಿ ಹಂಬಲಿಸಿ ಅಲ್ಲಿ ಸೇರಬೇಕಾಗಿ ಬಂದಿದೆ
ಹೆಣ್ಣಿನ ಕಾರಣಕ್ಕಾಗಿ ಕಣ್ಣು ಕಳೆದುಕೊಂಡವರಿದ್ದಾರೆ
ವಿವೇಕವನ್ನು ಎಂದೋ ಯಾವುದೋ ಸಮುದ್ರದಲ್ಲಿ ವಿಸರ್ಜಿಸಿ ಬಂದಿದ್ದಾರೆ
ನನ್ನ ಬದುಕಿನುದ್ದಕ್ಕೂ ಇದನ್ನೇ ನೋಡುತ್ತಾ ಬಂದಿದ್ದೇನೆ ಇದನ್ನೇ ತೀರ್ಮಾನ ಮಾಡುತ್ತಾ ಕುಳಿತುಕೊಂಡಿದ್ದೇನೆ
ನನ್ನ ಈ ಆಸೆಯೂ ನಿಜವಾಗಿ ಹೋಗಲಿ
ಪುಸ್ತಕ ಎಂಬ ಆಸ್ತಿಗಾಗಿ ನಾನು ಕಾನೂನಿನ ಮೊರೆ ಹೋಗುವವರನ್ನು ನೋಡುವ ಕಾಲ ಬರಲಿ ಎಂದರು
ಅಷ್ಟು ಮಾತಾಡಿದವರೇ ಒಂದು ನಿಟ್ಟುಸಿರಿಟ್ಟರು
ಇನ್ನೂ ಒಂದು ಆಸೆ ಇದೆ ಎಂದರು
ಮತ್ತೆ ಎಲ್ಲ ಅವರ ಕಡೆ ನೋಡಿದರು
ಅವರು ಎಲ್ಲರನ್ನು ಒಮ್ಮೆ ನೋಡಿ ‘ಆ ಕೇಸು ನನ್ನ ಮುಂದೆಯೇ ಬರಲಿ’ ಎಂದರು
ಸಭಾಂಗಣ ಮೂಕವಾಗಿ ಹೋಗಿತ್ತು
ಆ ನಿಶಬ್ದವನ್ನು ಇಲ್ಲವಾಗಿಸಬೇಕು ಎನ್ನುವುದಕ್ಕಾಗಿಯೇ ಎಂಬಂತೆ ಜೋರು ಚಪ್ಪಾಳೆ ತನ್ನ ಹೆಜ್ಜೆಯಿಟ್ಟಿತು

‍ಲೇಖಕರು Avadhi

July 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Sudha ChidanandGowd

    ಸರ್, ಸ್ವಲ್ಪವೇ ಪ್ರಯತ್ನಿಸಿದ್ದರೂ ಇದೊಂದು ಅತಿಸುಂದರ ಸಣ್ಣಕಥೆಯಾಗುತ್ತಿತ್ತಲ್ಲ ಸರ್.
    .ಏಕೆ ನೀವು ಕಥೆ ಬರೆಯಲು ಪ್ರಯತ್ನಿಸುವುದಿಲ್ಲ ಎಂಬುದು ನಿಮ್ಮ ಬರವಣಿಗೆಯ ಅಭಿಮಾನಿಯಾಗಿ ನನ್ನ ತಕರಾರು…
    you could have tried.
    ಈಗಿರುವಂತೆಯೂ ತುಂಬ ಚೆನ್ನಾಗಿದೆ ಲೇಖನ.
    ನನ್ನದೂ ಚಪ್ಪಾಳೆ.

    ಪ್ರತಿಕ್ರಿಯೆ
  2. Shama, Nandibetta

    ನಂದೂ ಒಂದು ಚಪ್ಪಾಳೆಯ ಜತೆ ಈ ಕೇಸ್ ನಾನೇ ಹಾಕುವಂತಾದರೆ ಎಷ್ಟು ಚೆಂದ ಅನ್ನೋ ಒಂದು ದುರಾಸೆಯೂ ಮೊಳೆಯುತ್ತಿದೆ !!!

    ಪ್ರತಿಕ್ರಿಯೆ
  3. Kiran

    ಹಾಗೇ ಇನ್ನೊಂದು ಒಳ್ಳೆಯ ಕೇಸು ಎಂದರೆ ವಯಸ್ಸಾದ ಅಪ್ಪ-ಅಮ್ಮ ನನ್ನ ಜೊತೆಯಲ್ಲೇ ಇರಲೀ ಎಂದು ಜಗಳವಾಡುವ ಮಕ್ಕಳದು.
    ಆದರೆ ಆ ಜಗಳಕ್ಕೆ ಬೇರಾವುದೇ ಕಾರಣಕ್ಕಿಂತ ಅವರ ಮೇಲಿನ ಪ್ರೀತಿ ಮಾತ್ರ ಕಾರಣವಾಗಿರಬೇಕು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: