ಚಿಕ್ ಚಿಕ್ ಸಂಗತಿ: ಒಂದು ಹೋಮ್ ವರ್ಕ್ ನಿಂದಾಗಿ ಏನೆಲ್ಲಾ..

ಜಿ ಎನ್ ಮೋಹನ್ 

‘ಪಪ್ಪಾ ಹೋಮ್ ವರ್ಕ್ ಗೆ ಹೆಲ್ಪ್ ಮಾಡ್ತೀಯಾ..’
ಅಂತ ಆ ಪುಟ್ಟ ಹುಡುಗಿ ಓಡಿಬಂದಾಗ ನನ್ನ ಕಣ್ಣಲ್ಲಿ ಮಿಂಚು

ಹಾಗೆ ಓಡಿ ಬಂದ ಹುಡುಗಿಯನ್ನು ಮಡಿಲಿಗೆ ಸೇರಿಸಿಕೊಂಡು ಅವಳು ತಂದಿದ್ದ ಪುಸ್ತಕದ ಹಾಳೆ ತಿರುವುತ್ತಾ ಹೋದೆ
ಅವಳು ಒಂದು ಬದುಕಿನ ಕಥೆ ಹೆಕ್ಕಬೇಕಿತ್ತು
ಶಾಲೆಯ ಪುಸ್ತಕದಲ್ಲಿದ್ದ ಒಂದು ಪಾಠವನ್ನು ತನ್ನ ಕಣ್ಣುಗಳ ಮೂಲಕ ಕಟ್ಟಿಕೊಡಬೇಕಿತ್ತು

kinಸರಿ ದೋಸೆ ಮುಗುಚಿ ಹಾಕುವ ಕೆಲಸ ಅಷ್ಟೇ ತಾನೇ
ಅವರು ಹಾಗೆ ಬರೆದದ್ದನ್ನು ಹೀಗೆ ಬರೆದರೆ ಅವಳ ಹೋಮ್ ವರ್ಕ್ ರೆಡಿ ಅಂದುಕೊಂಡವನೇ ಆ ಪಾಠ ಓದತೊಡಗಿದೆ

ಒಹ್! ನಿಜಕ್ಕೂ ಅದು ಪಾಠ
ಬದುಕಿನ ಪಾಠ
ನನ್ನೊಳಗೆ ಇದ್ದ ಕತ್ತಲೆಯನ್ನು ಒಂದಿಷ್ಟು ಸರಿಸಿ ಹಾಕಿದ ಪಾಠ

ಆಕೆ- ರೋಸಾ ಪಾರ್ಕ್ಸ್
ಅಮೆರಿಕಾದ ಅಲಬಾಮಾದ ಮಹಿಳೆ

ಒಂದು ದಿನ ಹೀಗಾಯ್ತು
ಕರಿಯ ಮತ್ತು ಬಿಳಿಯ ಬಣ್ಣ ತನ್ನ ಆಟವನ್ನು ಆಡುತ್ತಿದ್ದ ಕಾಲ
ಜಗತ್ತು ಕಪ್ಪು ಎನ್ನುವ ಯಾವುದನ್ನೂ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ
ಕಪ್ಪು ಜನರಿಗೆ ಜೀವ ಒಂದು ಇದೆ ಎಂದೇ ಗೊತ್ತಿಲ್ಲದ ಕಾಲ
ಕಪ್ಪು ಜನರಿಗೆ ಜೀವ ಇದೆ ಎಂದರೆ ಅದೇ ಅಪರಾಧ ಎನ್ನುವಂತೆ ನೋಡುತ್ತಿದ್ದ ಕಾಲ

ಬಸ್ ನಲ್ಲಿ ಬಹುಪಾಲು ಸೀಟುಗಳು ಬಿಳಿಯರಿಗೆ ಮಾತ್ರ
ಕಪ್ಪು ಜನರೇ ಬಸ್ ನಲ್ಲಿ ತುಂಬಿದ್ದರೂ ಬಿಳಿಯರ ಮೀಸಲು ಸೀಟುಗಳು ಖಾಲಿ ಇದ್ದರೂ ಅವರು ಕುಳಿತುಕೊಳ್ಳುವಂತಿಲ್ಲ

ಅಂತಹ ಒಂದು ಬಸ್ ನಲ್ಲಿ ರೋಸಾ ಪಾರ್ಕ್ ಹತ್ತಿದಳು
ಇಡೀ ದಿನದ ದುಡಿಮೆ ಸಾಕಾಗಿ ಹೋಗಿತ್ತು.
ಬಳಲಿ ಬೆಂಡಾಗಿದ್ದ ರೋಸಾ ಕುಳಿತದ್ದು ಕಪ್ಪು ಜನರಿಗಾಗಿಯೇ ಇದ್ದ ಸೀಟ್ ನಲ್ಲೇ
ಆದರೆ ಆಗಿದ್ದು ಬೇರೆ
ಒಬ್ಬ ಬಿಳಿಯ ಬಂದವನೇ ಎದ್ದೇಳು ಅಂದ
ಬಿಳಿಯರಿಗಿದ್ದ ಸೀಟ್ ತುಂಬಿತ್ತು.
ಆದರೆ ಬಿಳಿಯ ಎಂದರೆ ಬಿಳಿಯನೇ ಅಲ್ಲವೇ
ಕರಿಯರ ಸೀಟ್ ಆದರೇನು
ನಾನೇರುವತ್ತರಕ್ಕೆ ನೀನೇರಬಲ್ಲೆಯಾ ಎಂಬ ಸೊಕ್ಕು

ರೋಸಾ ಪಾರ್ಕ್ಸ್ ಅವನತ್ತ ನೋಡಿದಳು
ಸುಸ್ತಾಗಿ ಹೋಗಿದ್ದ ಜೀವಕ್ಕೆ ನಿಲ್ಲಲ್ಲು ಸಾಧ್ಯವೇ ಇಲ್ಲ ಅನಿಸಿತು
ನಿಲ್ಲಲಿಲ್ಲ ಅಷ್ಟೇ
ಬಿಳಿಯ ಕೂಗಾಡಿದ
ಬಸ್ ಡ್ರೈವರ್, ಕಂಡಕ್ಟರ್ ಕೂಗಾಡಿದರು
ಬಸ್ ನಲ್ಲಿದ್ದ ಬಿಳಿಯರೆಲ್ಲಾ ಒಟ್ಟಾಗಿ ಕೂಗಿದರು

ರೋಸಾ ಒಂದಿನಿತೂ ಅಲುಗಳಿಲ್ಲ
ಕುಳಿತೇಬಿಟ್ಟಳು
ಅಷ್ಟೇ ಆದದ್ದು
ಆದರೆ ಅದು ಬಿಳಿಯರ ಕಣ್ಣಿಗೆ ಮಾತ್ರ ‘ಅಷ್ಟೇ’ ಆಗಿರಲಿಲ್ಲ
ಪೊಲೀಸರನ್ನು ಕರೆಸಿದರು
ಎಲ್ಲರ ಕಣ್ಣೆದುರಿಗೆ ರೋಸಾಗೆ ಕೈಕೋಳ ತೊಡಿಸಿ ಜೈಲಿಗೆ ಧೂಕಿದರು

464px-rosa_parks_bookingದೂಕಿದ್ದು ಕತ್ತಲ ಕೋಣೆಗೆ ಆದರೆ ಅದೇ ಬೆಳಕಿಗೆ ದಾರಿಯಾಗಿ ಹೋಯಿತು
ಯಾವಾಗ ರೋಸಾ ಕೂತಲ್ಲೇ ಕೂತುಬಿಟ್ಟಳೋ
ಅದೇ ಮಹಾಪರಾಧವಾಗಿ ಹೋಯಿತೋ
ಇಡೀ ದೇಶದ ಕರಿಯರು ಒಂದಾದರು
ಮನುಷ್ಯರಾಗಿದ್ದವರೆಲ್ಲರೂ ಅವರ ಜೊತೆಗೂಡಿದರು
ನಾಗರಿಕ ಹಕ್ಕುಗಳ ಚಳವಳಿ ಆರಂಭವಾಗಿ ಹೋಯಿತು
ನೋಡ ನೋಡುತ್ತಿದ್ದಂತೆಯೇ ಒಂದು ಪುಟ್ಟ, ಹೆಸರೇ ಕೇಳಿರದಿದ್ದ ಊರಿನಲ್ಲಿ ನಡೆದ ಘಟನೆ
ದೇಶದ ಗಡಿ ದಾಟಿ ಸುದ್ದಿ ಮಾಡುತ್ತಾ ಹೋಯಿತು
ಜಗತ್ತಿಗೆ ಜಗತ್ತೇ ಈ ಹೋರಾಟದ ಬೆನ್ನಿಗೆ ನಿಂತುಬಿಟ್ಟಿತು

ಚರಿತ್ರೆಯ ಪುಟಗಳಲ್ಲಿ ಏನು ಬರೆದಿದ್ದಾರೋ ಗೊತ್ತಿಲ್ಲ
ಏಕೆಂದರೆ ಚರಿತ್ರೆಯ ಪುಟಗಳು ಸೃಷ್ಟಿಯಾಗಿರುವುದು
ಬೇಟೆ ಆಡಿದವನ ಕಣ್ಣುಗಳಿಂದ ಮಾತ್ರ ಅಲ್ಲವೇ

ಆದರೆ ಹೀಗಾಗಿ ಹೋಯಿತು-
ಆಕೆ ಕುಳಿತಳು
ಇಡೀ ಜಗತ್ತು ಎದ್ದು ನಿಂತಿತು

ಇದಾಗಿ ಒಂದೆರಡು ವರ್ಷವಾಗಿತ್ತು
ನಾನು ವಾಷಿಂಗ್ಟನ್ ನ ಪ್ರೆಸಿಡೆಂಟ್ ಕಚೇರಿಯ ಎದುರು ಇದ್ದೆ
ಎದ್ದೇನೋ ಬಿದ್ದೆನೋ ಎಂದು ಅಲ್ಲಿಗೆ ಓಡಿ ಬರುವ ವೇಳೆಗೆ ಜನಸಾಗರ
ದೊಡ್ಡ ಕ್ಯೂ ಕಣ್ಣು ಆಯಾಸಗೊಳ್ಳುವವರೆಗೂ ಸಾಗಿ ಹೋಗಿತ್ತು
ನನಗೋ ಆತಂಕ
ಇನ್ನಿದ್ದದ್ದು ಒಂದು ಗಂಟೆಯಷ್ಟು ಸಮಯ ಮಾತ್ರ
ಈ ಕ್ಯೂ ನಲ್ಲಿ ನಿಂತರೆ ಶತಾಯ ಗತಾಯ ನಾನು ಅಧ್ಯಕ್ಷರ ಸಭಾಂಗಣ ಸೇರುವುದು ಸಾಧ್ಯವೇ ಇರಲಿಲ್ಲ

ತಕ್ಷಣ ನೆನೆಪಿಗೆ ಬಂತು
ಸೀದಾ ಮುಖ್ಯ ಗೇಟಿಗೆ ಹೋದವನೇ ನನ್ನ ಐ ಡಿ ಝಳಪಿಸಿದೆ
ನಾನು ಆಗ ಸಿ ಎನ್ ಎನ್ ನಲ್ಲಿದ್ದೆ
ಸಿ ಎನ್ ಎನ್ ಎಂದರೇನು ಸುಮ್ಮನೆಯೇ
ಅದು ಇಡೀ ಅಮೆರಿಕಾದ ಕಣ್ಣು ಕಿವಿ ನಾಲಿಗೆ ಎಲ್ಲಾ..
ಹಾಗಾಗಿ ಗೇಟು ತನ್ನಿಂದತಾನೇ ತೆರೆದುಕೊಡುಬಿಟ್ಟಿತ್ತು
ಅಕಸ್ಮಾತ್ ತೆರೆಯದಿದ್ದರೆ ನೇರಾ ಜಾರ್ಜ್ ಬುಷ್ ಬಳಿಗೆ ಕರೆದೊಯ್ಯಿರಿ ಎಂದು ಹೇಳುವಷ್ಟು
ಧೈರ್ಯವನ್ನು ಆ ಒಂದು ಪುಟ್ಟ ಐ ಡಿ ಕಾರ್ಡ್ ನನಗೆ ಕೊಟ್ಟುಬಿಟ್ಟಿತ್ತು

ಹಾಗೆ ನಾನು ಒಳಗೆ ನುಗ್ಗಿದ್ದು ಇನ್ನಾರಿಗೂ ಅಲ್ಲ
ಅದೇ ಆ ನಾಲ್ಕನೇ ಕ್ಲಾಸಿನ ಪಠ್ಯ ಪುಸ್ತಕದಲ್ಲಿ ಒಂದು ಪಾಠವಾಗಿದ್ದ
ನಾಲ್ಕು ದಿನಗಳ ಕಾಲ ನಾನೂ ನನ್ನ ಮಗಳೂ ಗೂಗಲ್ ಎಲ್ಲಾ ತಡಕಾಡಿ ಸಂಗ್ರಹಿಸಿದ್ದ
ಫೋಟೋ, ಚಿತ್ರಗಳನ್ನೆಲ್ಲಾ ಕತ್ತರಿಸಿ
ಹೊಸ ಸ್ಕೆಚ್ ಪೆನ್ ತಂದು ಡ್ರಾಯಿಂಗ್ ಹಾಳೆಯ ಮೇಲೆ
ನೀಟಾಗಿ ಕತ್ತರಿಸಿ ಒಂದು ಬದುಕು ಕಟ್ಟಿ ಕೊಟ್ಟಿದ್ದೆವಲ್ಲಾ
ಅದೇ ರೋಸಾ ಪಾರ್ಕ್ಸ್ ಗಾಗಿ

ರೋಸಾ ತಮ್ಮ೯೨ ವಯಸ್ಸಿನಲ್ಲಿ ಕಣ್ಣು ಮುಚ್ಚಿದ್ದರು
ಮೈಲುಗಟ್ಟಲೆ ದೂರದಲ್ಲಿದ್ದ ನನಗೇ , ಖಂಡಗಳ ಆಚೆ ಇದ್ದ ನನಗೇ
ದೇಶ ಗೊತ್ತಿರದಿದ್ದ, ಭಾಷೆ ಗೊತ್ತಿರದಿದ್ದ ನನಗೇ
ಒಮ್ಮೆಯೂ ನೋಡಿರದ ನನಗೇ
ಆ ಘಟನೆ ನಡೆದಾಗ ಹುಟ್ಟಿಯೂ ಇರದ ನನಗೇ
ರೋಸಾ ಅಷ್ಟು ದೊಡ್ಡದಾಗಿ ಕಾಡಿದ್ದಾಗ..
ಇನ್ನು ಅಮೆರಿಕಾಗೆ..

img_0017ರೋಸಾ ಪಾರ್ಕ್ಸ್ ಎನ್ನುವುದು ತಮ್ಮ ಬದುಕಿಗೆ ಏನು
ಎನ್ನುವುದು ಎಲ್ಲರಿಗೂ ಗೊತ್ತಿತ್ತು.. ಅಂತೆಯೇ ಸರ್ಕಾರಕ್ಕೂ
ಹಾಗಾಗಿಯೇ ಮೊಟ್ಟಮೊದಲ ಬಾರಿಗೆ ಅಧ್ಯಕ್ಷರ ಕಚೇರಿಯಲ್ಲಿ
ಅಧ್ಯಕ್ಷರಲ್ಲದವರ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು
ಯಾಕೆಂದರೆ ರೋಸಾ ಪಾರ್ಕ್ಸ್ ಅಧ್ಯಕ್ಷರಿಗಿಂತಲೂ ಒಂದು ಸಾಸಿವೆ ಕಾಳು ಹೆಚ್ಚು ತೂಗಿದವರೇ

ನಾನು ಕ್ಯಾಮೆರಾ ಕೈಗೆತ್ತಿಕೊಂಡವನೇ ಕ್ಲಿಕ್ಕಿಸುತ್ತಾ ಹೋದೆ
ಒಳಗೆ, ಹೊರಗೆ
ರೋಸಾ ಎಂಬ ಬೆಳಕು ನನ್ನ ಕ್ಯಾಮೆರಾದೊಳಗೆ ಅಡಗಿದ್ದ ಕತ್ತಲನ್ನೂ ಹೊರಗೆ ತಳ್ಳುತ್ತಾ ಕುಳಿತಿತ್ತು

ಇದಾಗಿ ಸ್ವಲ್ಪ ದಿನ ಹಿಂದಷ್ಟೇ
ನನ್ನೊಡನೆ ಸಿ ಎನ್ ಎನ್ ನಲ್ಲಿದ್ದ ಕೆನ್ಯಾದ ಮಾರ್ಕ್ ಬರ್ತೀಯಾ ನನ್ನ ಜೊತೆ ಎಂದ
ಎಲ್ಲಿಗೆ ಎಂದೆ ಅಲಬಾಮಾ ಅಂದ
ಅಲಬಾಮಾ….
ತಕ್ಷಣ ನನ್ನ ಕಿವಿ, ಬುದ್ದಿ ಎರಡೂ ಚುರುಕಾದವು

ಮತ್ತೆ ಅದೇ ಪುಟ್ಟ ಹುಡುಗಿಯ ಜೊತೆ ಮಾಡಿದ ಹೋಮ್ ವರ್ಕ್ ನೆನಪಿಗೆ ಬಂತು
ಅಲಬಾಮಾ- ಅಲ್ಲಿಯೇ ಆ ಘಟನೆ ನಡೆದದ್ದು
ರೋಸಾ ಬಸ್ ನಲ್ಲಿ ಜಗ್ಗದೆಯೆ, ಕುಗ್ಗದೆಯೆ ಕುಳಿತದ್ದು

ಸರಿ ಎಂದು ನಾನು ಅವನ ಜೊತೆಯಾಗಿ ನಡೆದೆ
ಟ್ರೇನ್ ಹಿಡಿಯಲು ಸ್ಟೇಷನ್ ತಲುಪಿದೆವು
ಒಳಗೆ ಹೋಗಬೇಕು ಎನ್ನುವಾಗ ನನ್ನ ಮುಖ ಅವನೂ, ಅವನ ಮುಖ ನಾನೂ ಇಬ್ಬರೂ ನೋಡಿಕೊಂಡೆವು
ಮನ್ನಸ್ಸುಗಳೇ ಮಾತಾಡಿಬಿಟ್ಟಿತ್ತು
ಯಾವ ಬಸ್ ಘಟನೆಯಿಂದಾಗಿ ಜಗತ್ತು ಎಚ್ಛೆತ್ತುಕೊಂಡಿತೋ
ಯಾವ ಬಸ್ ಘಟನೆಯಿಂದಾಗಿ ವರ್ಣಬೇಧದ ಬಗ್ಗೆ ಆಕ್ರೋಶ ಭುಗಿಲೆದ್ದಿತ್ತೋ
ಯಾವ ಬಸ್ ಘಟನೆಯಿಂದಾಗಿ ಮನಸ್ಸುಗಳು ನರಳಿ ಹೋಗಿದ್ದವೋ
ಯಾವ ಬಸ್ ಘಟನೆಯಿಂದಾಗಿ ಹೋರಾಟಗಳು ಅರಳಿ ನಿಂತವೋ

bus_number_2857_-_rosa_parks_-_the_henry_fordಅಂತಹ ಆ ಊರಿಗೆ ಟ್ರೇನ್ ನಲ್ಲಿ..!
ಉಹ್ಞೂ ಎಂದುಕೊಂಡವರೇ ನಾವಿಬ್ಬರೂ ಬಸ್ ಹತ್ತಿದೆವು

ಹಾಗೆ ಅನಿಸಿತೇನೋ ಆ ಒಬಾಮನಿಗೂ
ಥೇಟ್ ನಮ್ಮಂತೆಯೇ
ಅಧ್ಯಕ್ಷನಾದರೇನು ತನ್ನದೇ ವಿಮಾನ ಇದ್ದರೇನು
ಆಳುಕಾಳು ಜೊತೆಗಿದ್ದರೇನು ಅಂತ

ಒಂದು ದಿನ ಸೀದಾ ಹೆನ್ರಿ ಫೋರ್ಡ್ ಮ್ಯೂಸಿಯಂ ಬಾಗಿಲು ತಲುಪಿಕೊಂಡವರೇ
ಅಲ್ಲಿ ಇರಿಸಿದ್ದ, ರೋಸಾ ಪಾರ್ಕ್ಸ್ ಸಂಚರಿಸಿದ್ದ ಅದೇ ಬಸ್ ಅನ್ನು ಹುಡುಕಿದರು
ಬಸ್ ಏರಿದವರೇ ಅದೇ ಸೀಟನ್ನು ಹುಡುಕಿದರು
ಅಲ್ಲಿ ಅದೇ ಸೀಟ್ ನಲ್ಲಿ ಕುಳಿತು ಹೊರ ಜಗತ್ತು ನೋಡಿದರು
ಬೆಳಕಿನ ಕಿರಣಗಳು ಅವರಿಗೂ ಕಂಡಿರಬೇಕು
ಎದ್ದು ನಡೆದರು..

ಇದೆಲ್ಲಾ ನೆನಪಾಗಿದ್ದು ಗೆಳೆಯ ಸುದೇಶ್ ಮಹಾನ್ ನಿಂದ
ದೇಶದ ಎಲ್ಲೆಲ್ಲೂ ಆದಾಯ ತೆರಿಗೆ ಕಟ್ಟಲು ಸರ್ಕಾರ ಜಾಹಿರಾತುಗಳ ಫಲಕಗಳನ್ನು ನಿಲ್ಲಿಸಿತ್ತು
ಕೂಗಿ ಹೇಳುತ್ತಿತ್ತು- ನಿಮ್ಮ ಕಪ್ಪು ಹಣ ಬಿಳಿ ಮಾಡಿಕೊಳ್ಳಲು ಇದು ಕೊನೆಯ ಅವಕಾಶ

ಸುದೇಶ್ ಕೇಳಿದ ಎಂತಾ ನೀಚರಪ್ಪ..
ಕಪ್ಪು ಬಿಳಿ ಆಗುವುದು ಎಂದರೇನು
ಬಿಳಿ ಮಾತ್ರ ಸರಿ ಎಂದೇ, ಶ್ರೇಷ್ಠವೆಂದೇ

ನಾನು ಇಷ್ಟೆಲ್ಲಾ ಹೇಳಬೇಕಾಯಿತು.

800px-barack_obama_in_the_rosa_parks_bus rosaparks_bus

‍ಲೇಖಕರು Admin

September 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. s.p.vijayalakshmi

    ಚಿಕ್ ಚಿಕ್ ಸಂಗತಿ’ ದೊಡ್ಡ ದೊಡ್ಡ ಮಾಹಿತಿಗಳನ್ನು ಬಹಳ ಆಸಕ್ತಿದಾಯಕವಾಗಿ ಕಟ್ಟಿಕೊಡುತ್ತಿದೆ . ಸುಂದರ ಬರಹ , ಮನುಷ್ಯಸಂವೇದನೆ, ಕಲಕುವ ಕಥೆ ಗ್ರೇಟ್ .thank you sir

    ಪ್ರತಿಕ್ರಿಯೆ
  2. Anonymous

    innoo iddare sakastu rosa parks. ivaru atyacharakke bittu ulidellavakkoo kariyare…………..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: