ಚಿಕ್ ಚಿಕ್ ಸಂಗತಿ: ಆ ಎರಡು ಜೊತೆ ಚಪ್ಪಲಿಗಳು

ಜಿ ಎನ್ ಮೋಹನ್ 

ಫಳಕ್ಕನೆ ಒಂದು ಹನಿ ಕಣ್ಣೀರು ಯಾರಿದ್ದರೇನಂತೆ ಎಂದು ಕೆನ್ನೆ ಮೇಲೆ ಜಾರಿಯೇ ಬಿಟ್ಟಿತು

ಆಗಿದ್ದು ಇಷ್ಟೇ-
ಅದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ
ನಾನೇ ನಿರ್ವಹಣೆ ಮಾಡುತ್ತಿದ್ದೆ

ವೇದಿಕೆಗೆ ಕರೆಯಲು ಎಲ್ಲಾ ಅತಿಥಿಗಳೂ ಬಂದಿದ್ದಾರೋ ಎಂದು ನೋಡಲು ಬಂದವನು
ಮತ್ತೆ ವೇದಿಕೆ ಹತ್ತಲು ಹೋಗುತ್ತಿದ್ದೆ
ಆಗ.. ಆಗ.. ಕಣ್ಣಿಗೆ ಕಾಣಿಸಿಕೊಂಡುಬಿಟ್ಟಿತ್ತು ಆ ಎರಡು ಜೊತೆ ಚಪ್ಪಲಿಗಳು
ಎರಡು ಜೊತೆ ಹವಾಯ್ ಚಪ್ಪಲಿಗಳು ನುಗ್ಗಾಗಿ ಒಂದು ಮೂಲೆಯಲ್ಲಿ ಬಿದ್ದಿತ್ತು

ಯಾರದ್ದು ಈ ಚಪ್ಪಲಿ ಎಂದು ಕೇಳಲು ಬಾಯಿ ತೆರೆದೆ
ತಕ್ಷಣ ಹೊಳೆದು ಹೋಯಿತು
‘ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೋ
ಶಿವನೇ ನಿನ್ನಾಟ ಬಲ್ಲವರು ಯಾರವರೋ..’
ಎಂದು ತಂಬೂರಿ ಮೀಟುತ್ತಾ ಬೋರಮ್ಮ ಏರು ಕಂಠದಲ್ಲಿ ಆ ಶಿವನನ್ನು ಮೆಚ್ಚಿಸುತ್ತಿದ್ದರು
ಪಕ್ಕದಲ್ಲಿ ತಂಬೂರಿ ಜವರಯ್ಯ ಕಂಜರಕ್ಕೆ ಸಣ್ಣ ಪೆಟ್ಟು ಕೊಡುತ್ತಾ ಸಾಥ್ ನೀಡಿದ್ದರು

ವಸ್ತುಷಃ ಇನ್ನೊಂದೇ ಲೋಕಕ್ಕೆ ಪ್ರತಿಯೊಬ್ಬರನ್ನೂ ಸೆಳೆದೊಯ್ಯುತ್ತಿದ್ದ
ನಾದದ ನದಿಯೊಂದು ಹರಿಯುವಂತೆ ಮಾಡಿದ್ದ ತಂಬೂರಿ ಜವರಯ್ಯ ಹಾಗೂ ಬೋರಮ್ಮನವರ ಚಪ್ಪಲಿಗಳು ಅವು

tamboori coupleಯಾಕೋ ನನಗೆ ಮತ್ತೆ ವೇದಿಕೆಗೆ ಹೆಜ್ಜೆಯಿಡುವ ಮನಸ್ಸೇ ಬರಲಿಲ್ಲ
ನಾದದ ಶ್ರೀಮಂತಿಕೆಯನ್ನೇ ಕಂಠದಲ್ಲಿ ಮೊಗೆದಿಟ್ಟುಕೊಂಡಿದ್ದ ದಂಪತಿಗಳ ಚಪ್ಪಲಿಗಳು ಮಾತ್ರ
ತಮ್ಮ ಕಡು ದುಃಖದ ಕಥೆಗಳನ್ನು ಹೇಳುತ್ತಾ ಬಿದ್ದಿದ್ದವು

ಇಡೀ ರಾತ್ರಿ ಎಂದರೆ ರಾತ್ರಿ, ಇಡೀ ಬೆಳಗು ಎಂದರೆ ಬೆಳಗು
ಇಲ್ಲ ಹಗಲೂ ರಾತ್ರಿ ಹಾಡಿ ಎಂದರೂ ಒಂದೇ ಸಮನೆ ಹಾಡುವ
‘ಇಲ್ಲೀಗೆ ಹರ ಹರ, ಇಲ್ಲೀಗೆ ಶಿವ ಶಿವ’
ಎಂದು ಮುಗಿತಾಯ ಮಾಡಲು ಗೊತ್ತಿಲ್ಲದ ಜೀವಗಳು ಅಲ್ಲಿ ಹೊಸ ಲೋಕ ಸೃಷ್ಟಿಸುತ್ತಾ ಕುಳಿತಿದ್ದವು

ರಾಗಿ ಕಲ್ಲಿನ ಮೇಲೆ ಚೆಲ್ಲೀದೆ ನಮ್ಮ ಹಾಡು
ಬಲ್ಲಂತ ಜಾಣರು ಬರಕೊಳ್ಳಿ। ನಮ ಹಾಡ
ಬಳ್ಳ ತಕ್ಕೊಂಡು ಆಳಕೊಳ್ಳಿ.. ಎನ್ನುವ ಹಾಗೆ

ಅವತ್ತೂ ಹೀಗೇ ಆಗಿತ್ತು
ಇಡೀ ಕನ್ನಡ ನಾಡು ನುಡಿಯ ಸಂಭ್ರಮದಲ್ಲಿತ್ತು
ನಾಡಿಗೆ ಗೌರವ ತಂದವರನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪದಕವನ್ನು ಅವರ ಕೊರಳಿಗೆ ಹಾಕಲು ಸಜ್ಜಾಗಿತ್ತು

ಆಗ ಅದೇ ಸಂಜೆ ನಾನು ಸುಳ್ಯದ ಕಾಡುಮೇಡುಗಳ ಒಳಗಿರುವ ಚಂದ್ರಗಿರಿ ಅಂಬು ಅವರ ಮನೆಯಲ್ಲಿದ್ದೆ
ಮನೆ ಎಂದರೆ ಮನೆ ಅಷ್ಟೇ
ಅದನ್ನು ಗುಡಿಸಲು ಎಂದರೆ ಗುಡಿಸಲು
ಎರಡೂ ಅಲ್ಲ ಅಂದರೆ ಎರಡೂ ಅಲ್ಲ ಎನ್ನುವ ಪರಿಸ್ಥಿತಿ ಅಲ್ಲಿತ್ತು.

ಒಂದು ಕಾಲಕ್ಕೆ ಕಣ್ಣ ಮುಂದೆ ಯಕ್ಷ ಕಿಂಕರರನ್ನು ತಂದು ನಿಲ್ಲಿಸುತ್ತಿದ್ದ
ದೇವ ದಾನವರನ್ನು ತಮ್ಮ ಧೀಂಗಿಣದಲ್ಲಿ ಧರೆಗಿಳಿಸಿಬಿಡುತ್ತಿದ್ದ
ಒಂದೇ ಒಂದು ಅಟ್ಟಹಾಸದಲ್ಲಿ ಅಷ್ಟೂ ಖಳರನ್ನು ನೆನಪಿಸಿಬಿಡುತ್ತಿದ್ದ ಅಂಬು ಹಣ್ಣಾಗಿ ಮಲಗಿದ್ದರು

ನಾಡು ಸಂಭ್ರಮದಲ್ಲಿತ್ತು
ಇನ್ನು ನಾನು ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ ಎನ್ನುವುದು ಅವರಿಗೆ ಗೊತ್ತಾಗಿ ಹೋಗಿತ್ತು
ಬಣ್ಣ ಕಳಚುವ ಸಮಯ ಸನ್ನಿಹಿತವಾಗಿತ್ತು

ನಾನು ಅವರ ಜೊತೆ ಒಂದೆರಡು ಮಾತು ಆಡುತ್ತಾ
ಅಜ್ಜಾ ನಿಮಗೆ ಬಂದ ರಾಜ್ಯೋತ್ಸವ ಪದಕ ಎಲ್ಲಿ ಎಂದೆ

ಅವರ ಕಣ್ಣು ಆಗಲೇ ಮಬ್ಬಾಗಿ ಹೋಗಿತ್ತು
ಹಾಗಾಗಿ ನನಗೆ ಅಲ್ಲಿ ಯಾವ ಭಾವನೆಯಿತ್ತೋ ಖಂಡಿತಾ ಓದಲಾಗಲಿಲ್ಲ
ಅದು ಎಂದೋ ಮಾರಿಯಾಯ್ತು ಎಂದರು
ನಾನು ಶಾಕ್ ಹೊಡೆದು ಕುಳಿತೆ
ಯಾಕಜ್ಜಾ ಎನ್ನುವ ನನ್ನ ದನಿ ನನಗೇ ಕೇಳಿಸದಷ್ಟು ಕ್ಷೀಣವಾಗಿತ್ತು

ಅದರಲ್ಲಿ ಬಂಗಾರದ ಲೇಪ ಇರುತ್ತಪ್ಪಾ ಅದನ್ನ ಮಾರಿ ಒಂದು ತಿಂಗಳು ಹೆಚ್ಚು ಬದುಕಿದೆ ಎಂದರು

ಅದೇ ವೇಳೆ ಅಂದರೆ ಅದೇ ವೇಳೆಗೆ ಸರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು
ಹಲವು ಕಲಾವಿದರ ಕೊರಳಿಗೆ ಅದೇ ಬಂಗಾರದ ಲೇಪವಿರುವ ಪದಕ ತೊಡಿಸುತ್ತಿದ್ದರು
ಯಾಕೋ ನನಗೆ ವೇದಿಕೆಯಲ್ಲಿ ಸಂಭ್ರಮ ಪಡುತ್ತಾ ಇದ್ದವರ ಭವಿಷ್ಯವನ್ನು ಕಣ್ಣಾರೆ ಕಾಣುತ್ತಿದ್ದೇನೆ ಎನಿಸಿ ಮರಗಟ್ಟಿದೆ

 

ಇನ್ನೊಂದು ಸಲ ಹೀಗಾಯ್ತು
ಎಲಿಸವ್ವ ಮಾದರ ಬಂದಿದ್ದರು
ಬಾರೆ ನವುಲ ಹಕ್ಕಿ ಸರಸೋತಿ …
ಎಂದು ಆಕೆ ದನಿ ತೆಗೆದರೆ ಹಾಡುತ್ತಿರುವ ಆಕೆಯೇ ಸರಸೋತಿ ಎನಿಸಿ ಹೋಗಿತ್ತು

tambooriಅಂತಹ ಎಲಿಸವ್ವ ಒಮ್ಮೆ ಮದುವೆ ಮನೆಯಲ್ಲಿ ಸೋಬಾನದ ಪದಗಳನ್ನು ಹೇಳುತ್ತಾ ಕುಳಿತಿದ್ದರು
ಗಟ್ಟಿ ಮೇಳ.. ಗಟ್ಟಿ ಮೇಳ ಎಂದದ್ದಷ್ಟೇ ಅವರಿಗೆ ಗೊತ್ತು ಆಮೇಲೆ ಏನಾಯ್ತು ಎನ್ನುವುದೇ ಅವರಿಗೆ ಗೊತ್ತಾಗಲಿಲ್ಲ
ಗೊತ್ತಾಗುವ ಸಮಯ ಬಂದಾಗ ಆಕೆಯ ಒಂದು ಕಣ್ಣೇ ಹೋಗಿತ್ತು
ಮಾಂಗಲ್ಯ ಕಟ್ಟುವ ವೇಳೆಗೆ ಜನ ಅಕ್ಷತೆ ಕಾಳು ತೂರಿದ್ದರು
ಹಾಡುತ್ತಾ ಕುಳಿತ ಎಲಿಸವ್ವನ  ಕಣ್ಣಿನತ್ತ ಆ ಕಾಳುಗಳು ತೂರಿ ಬಂದವು

ಯಾಕವ್ವಾ ಯಾರೂ ದವಾಖಾನಿಗೆ ಕರಕೊಂಡು ಹೋಗ್ಲಿಲ್ವಾ ಅಂದೆ
ಕರಕೊಂಡು ಹೋಗೋದಕ್ಕೆ ರಗಡ್ ಮಂದಿ ಆದಾರ
ಆದರೆ ಖರ್ಚು ನಿಭಾಯ್ಸೋ ಶಕ್ತಿ ಆ ಹಣಮಪ್ಪ ನಮಗೆ ಕೊಟ್ಟಿಲ್ಲ ಎಂದರು

ಎಚ್ ಎಲ್ ನಾಗೇಗೌಡರು ಆದಿವಾಸಿ ಮಹಿಳೆಯರ ಜಾನಪದ ಕಲಾಮೇಳ ಮಾಡಬೇಕು ಎಂದು ಮುಂದಾದರು
ಹಗಲೂ ರಾತ್ರಿ ಅದರ ರೂಪು ರೇಷೆ ಸಿದ್ಧಮಾಡಿಕೊಟ್ಟೆ
ಆಗ ಒಂದಷ್ಟು ದಿನ ಜೋಗತಿಯೊಬ್ಬಳ ಜೊತೆ ಓಡಾಡಬೇಕಾಯಿತು
ಅಣ್ಣಾ ಮಾಸಾಶನ ಸಿಗಬೋದ ಅಂದಳು
ಯಾಕವ್ವಾ ಅಂದೆ
ಮೈ ಮಾರಿಕೊಳ್ಳೋದಾದ್ರೂ ನಿಲ್ಲಿಸ್ತೀನಿ ಅಣ್ಣಾ ಎಂದು ಕಣ್ಣೀರಾದಳು

ಜಾನಪದ ಜಂಗಮ ಎನ್ನುವ ಬಿರುದನ್ನೇ ಇತ್ತರು ಎಸ್ ಕೆ ಕರೀಂ ಖಾನ್ ಅಜ್ಜನಿಗೆ
ಬೀದಿ ಬೀದಿಯಲ್ಲಿ, ಸಂತೆ ಸೇರುವಲ್ಲಿ ಜಾನಪದ ಗೀತೆಗಳ ಮೂಲಕವೇ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಿದ ಕಂಠ ಅದು

s k kareem khanನಾನು ಅವರ ಕೋಣೆಯ ಬಾಗಿಲು ತಟ್ಟಿದಾಗ ಅವರೂ ತಮ್ಮ ದಿನಗಳನ್ನು ಲೆಕ್ಕ ಮಾಡುತ್ತಿದ್ದರು
ಹೋಟೆಲ್ ನವರು ಕೊಟ್ಟ ಒಂದು ಕೋಣೆಯಲ್ಲೇ ಬದುಕು ತಳ್ಳುತ್ತಾ ಇದ್ದರು
ಔಷಧಿ ಬೇಕಿತ್ತು ಹಣವಿರಲಿಲ್ಲ
ಅವರ ಜೊತೆ ದಿನಗಟ್ಟಲೆ ಕಾಡು ಕಣಿವೆ ನದಿ ಸಮುದ್ರ ಎಲ್ಲವನ್ನೂ ಸುತ್ತಿದ್ದೆ
ಜೋಶ್ ಬಂದಾಗ ಆ ತಣ್ಣನೆಯ ರಾತ್ರಿಯನ್ನು ಸೀಳುವಂತೆ ಎತ್ತರದ ಕಂಠದಲ್ಲಿ ಹಾಡುವುದು ಕೇಳಿದ್ದೆ
ಅವರು ಈಗ ಒಂದು ಹಸುವಿನಂತೆ ಕಂಗಾಲಾಗಿ ನನ್ನೆಡೆ ನೋಡುತ್ತಿದ್ದರು
ಯಾಕೆ ಸರ್ ಸರ್ಕಾರವನ್ನ ಕೇಳಬಹುದಿತ್ತಲ್ಲಾ ಎಂದೆ

ಅವರು ಅಂತಹ ನೋವಿನಲ್ಲೂ ನಕ್ಕುಬಿಟ್ಟರು
ಸ್ವಾತಂತ್ರ್ಯ ಹೋರಾಟಗಾರರಿಗಿರುವ ಪಿಂಚಣಿ ಕೇಳಲು ಹೋದೆ
ನೀವು ಹೋರಾಟಗಾರ ಎನ್ನುವುದಕ್ಕೆ ಪ್ರೂಫ್ ಬೇಕು ಎಂದರು
ಏನು ಮಾಡಬೇಕು ಹೇಳಿ ಅಂದೆ
ನಿಮ್ಮ ಜೊತೆ ಆ ಕಾಲದಲ್ಲಿ ಹೋರಾಡಿದ ಇಬ್ಬರ ಸಹಿ ಬೇಕು ಅಂದರು

ಆ ಕಾಲದಲ್ಲಿದ್ದವರ ಪೈಕಿ ಎಲ್ಲರೂ ಸತ್ತು ಎಷ್ಟೋ ವರ್ಷವಾಗಿತ್ತು
ಅವರ ಸಹಿ ಕೇಳುವುದು ಹೇಗೆ

ನಾನು ಎರಡು ಸಹಿ ಕೊಡಲಿಲ್ಲ ಸ್ವಾತಂತ್ರ್ಯ ಹೋರಾಟಗಾರ ಎಂದು ಅನಿಸಿಕೊಳ್ಳಲಿಲ್ಲ
ಪಿಂಚಣಿ ಸಿಗಲಿಲ್ಲ ಎಂದರು

ಅದೇ ಅದೇ ಕರೀಂ ಖಾನ್ ಅಜ್ಜನ ಜೊತೆ ಸಮುದ್ರದ ಬದಿಯಲ್ಲಿ, ಬೆಳದಿಂಗಳ ಕೆಳಗೆ ಕುಣುಬಿಯರ ಕಾಲೋನಿಯಲ್ಲಿ ಹೆಜ್ಜೆ ಹಾಕುತ್ತಿದ್ದೆ

ಹಾದೀಲಿ ಹೋಗೋರೆ ಹಾಡೆಂದು ಕಾಡ್ಬೇಡಿ
ಹಾಡಲ್ಲ ನನ್ನ ಒಡಲುರಿ। ದೇವರೇ
ಬೆವರಲ್ಲ ನನ್ನ ಕಣ್ಣೀರು

ಅಂತ ಹಾಡಿದ್ದು ನೆನಪಾಯ್ತು

ಈಗ ಆ ಎರಡು ಚಪ್ಪಲಿಗಳತ್ತ ನೋಡಿದರೆ ಅವೂ ಅದೇ ಹಾಡು ಹಾಡುತ್ತಿದ್ದವು
ಹಾಡಲ್ಲ ನನ್ನ ಒಡಲುರಿ ದೇವರೇ ಅಂತ

‍ಲೇಖಕರು Admin

August 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. Dr. Prabhakar M. Nimbargi

    ತುಂಬ ಮಾರ್ಮಿಕವಾಗಿ ಬರೆದಿದ್ದೀರಿ. ‘ನೀನು ಜೀವಂತವಾಗಿರುವುದಕ್ಕೆ ಸಾಕ್ಷಿ ಕೊಡು’ ಎನ್ನುವ ಆಡಳಿತ ಇರುವ ತನಕ ಇವೆಲ್ಲ ನಡೆಯುವ ಸಂಗತಿಗಳೇ, ಬಡವ ಬಡವನಾಗಿ ಸಾಯಲೇಬೇಕು. ಏನೂ ಮಾಡದವರು ಏನೇನೋ ಗಳಿಸುವರು. ಇದು ನಮ್ಮಲ್ಲಿ ನಿರಂತರವಾಗಿ ನಡೆಯುವ ಘಟನೆಗಳು.

    ಪ್ರತಿಕ್ರಿಯೆ
  2. lalitha sid

    ಮನಸ್ಸು ಏಕಕಾಲಕ್ಕೆ ಕುದಿವ ಎಸರೂ ನೀರಾಡುವ ಕಣ್ಣೂ ಆಗಿಹೋಯಿತು.

    ಪ್ರತಿಕ್ರಿಯೆ
  3. B. Aravind

    Dear Sir, wonderful write up. You may have forgotten me. But how can I, as you were and are one of the ideal writers people like me always admire. Anyway after a long gap I read you and really really liked the article.
    B.Aravind
    (Ex-Chief Repoter, Prajavani)
    Mobile: 94490-72282

    ಪ್ರತಿಕ್ರಿಯೆ
  4. Gopal Wajapeyi

    ಚಿಕ್ ಸಂಗತಿಗಳೇ ಇವು?! ಮನಸ್ಸನ್ನು ಕಲಕಿ ಬಿಡುವ ಅಸಲಿ ಸಂಗತಿಗಳು ! ಮೋಹನ್ ಜೀ… ಒಂದು ಕ್ಷಣ ಆ ಎಲಿಸವ್ವ, ಆ ಕರೀಂಖಾನ್ ಅಜ್ಜ, ತಂಬೂರಿ ಬೋರಮ್ಮ-ಜವರಯ್ಯ ಎಲ್ಲ ಕಣ್ಣ ಮುಂದೆ ಬಂದರು.

    ಪ್ರತಿಕ್ರಿಯೆ
  5. ಲಿಂಗರಾಜು ಬಿ.ಎಸ್.

    ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ
    ಒಡಲ ಕಿಚ್ಚಲ್ಲೇ ಹೆಣಬೆಂದೋ/
    ದೇವರೆ ಬಡವರಿಗೆ ಸಾವ ಕೊಡಬೇಡ

    ಪ್ರತಿಕ್ರಿಯೆ
  6. Sudha ChidanandGowd

    ಅಬ್ಬಾ..
    ಹೃದಯ ಕಲಕಿತು ಈ ಲೇಖನ…
    ನಮ್ಮಜ್ಜ ಹೆಚ್. ಬಸಪ್ಪನವರು ಸ್ವಾತಂತ್ರ್ಯ ಹೋರಾಟಗಾರ….
    ನಿಜಲಿಂಗಪ್ಪನವರ ಪಿರಿಯಡ್ ನಲ್ಲಿ ಎಂ. ಎಲ್. ಸಿ ಯಾಗಿ ನಾಮಕರಣಗೊಂಡಿದ್ದರು.
    “ಅಸೆಂಬ್ಲಿಯಿದೆ, ಬರಬೇಕು” ಎಂಬಂಥಾ ಪತ್ರಗಳು ಬಂದಾಗ,
    “ಜ್ವಾಳ ಕೈಗೆ ಬಂದೈತಿ, ಸೊಪ್ಪು ಒಣಗತೈತಿ” ಎಂದು ತಪ್ಪಿಸಿಕೊಳ್ತಿದ್ರಂತೆ…
    ನಮಗೆ ಕಥೆ ಮಾಡಿ ಹೇಳ್ತಿದ್ರು…
    ಮತ್ತೆ ಮತ್ತೆ ನೆನಪಾಯ್ತು…
    ಸ್ವಾತಂತ್ರ್ಯಕ್ಕಾಗಿ ನಿಜಕ್ಕೂ ಹೋರಾಡಿದವರು ಸ್ವಾತಂತ್ರ್ಯಾನಂತರ ಸುಖವಾಗಿರಲೇ ಇಲ್ಲ,
    ದುಃಖಪಟ್ಟಿದ್ದೇ ಹೆಚ್ಚು.. ಎಂಬುದು ದಿಟ.

    ಪ್ರತಿಕ್ರಿಯೆ
  7. C. N. Ramachandran

    ಪ್ರಿಯ ಮೋಹನ್: ಇದು ’ಹಾಡಲ್ಲ ನನ್ನ ಒಡಲುರಿ’ ಎಂಬುದು ಎಲ್ಲಾ ಜಾನಪದ ಕಲಾವಿದರ ಬದುಕಿನ ಸಾರಾಂಶ. ಇಂತಹವರ ಬದುಕಿನ ಸಾರಾಂಶವನ್ನು ನಮ್ಮ ಕಣ್ಣುಗಳೂ ಆರ್ದ್ರವಾಗುವಂತೆ ಕಟ್ಟಿಕೊಟ್ಟಿದ್ದೀರಿ. ಇದು ಖಂಡಿತಾ ಚಿಕ್ಕ ಸಂಗತಿಯಲ್ಲ; ಅಧಿಕಾರಸ್ಥರ ಹೃದಯವನ್ನು ತಟ್ಟುವ ದೊಡ್ಡ ಸಂಗತಿಯಾಗಬೇಕು. ಹಾಗಾಗುವ ತನಕ ನೀವು ಇಂತಹ ಸಂಗತಿಗಳನ್ನು ಕಟ್ಟಿಕೊಡುತ್ತಿರಿ. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  8. ನಳಿನಿ ಮೈಯ

    ಸರಸ್ವತಿ ಇರೋ ಕಡೆ ಲಕ್ಷ್ಮಿ ಬರಲ್ವಾ? Beautiful article. Touched my heart

    ಪ್ರತಿಕ್ರಿಯೆ
  9. ಚಲಂ

    ಇಂತಹುಗಳೆಲ್ಲಾ ನಿಜಕ್ಕು ಚಿಕ್ ಚಿಕ್ ಸಂಗತಿಗಳಾಗಿ ಹೋಗಿವೆ ನಮ್ಮ ಮಾದ್ಯಮದವರ ಕಣ್ಣಿಗೆ.ನಿಮ್ಮಂತಹ ಕೆಲವರಿಂದ ಮಾತ್ರ ನಾವು ಇವನ್ನು ನೋಡಬಹುದು.ಧನ್ಯವಾದಗಳು ಸರ್

    ಪ್ರತಿಕ್ರಿಯೆ
  10. Mala Shylesh

    ತುಂಬಾ ವಿಷಾದನೀಯ.. ಕಣ್ತುಂಬಿ ಬಂತು Sir… Sad state of matters..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: