ಚಿಕ್ ಚಿಕ್ ಸಂಗತಿ: 'ಅಮ್ಮನ ಕೈನಲ್ಲಿ ಇದ್ದದ್ದು ಒಂದು ಲೋಟ ಅಷ್ಟೇ..'

ಜಿ ಎನ್ ಮೋಹನ್ 

‘ಅಮ್ಮನ ಕೈನಲ್ಲಿ ಇದ್ದದ್ದು ಒಂದು ಲೋಟ ಅಷ್ಟೇ..’
ಎಂದು ಅರುಂಧತಿ ನಾಗ್ ನನ್ನೆಡೆಗೆ ತಿರುಗಿದರು
ಅವರ ಕಣ್ಣಲ್ಲಿ ನೀರಿನ ಪಸೆ ಇರಬಹುದು ಎಂದುಕೊಂಡೆ
ಖಂಡಿತಾ ಇಲ್ಲ. ಮನಸ್ಸು ಕಲಕಿರಬಹುದು, ಆದರೆ ಆಕೆ ಅಲುಗಿರಲಿಲ್ಲ
silenceನಾನು ಬೆಕ್ಕಸಬೆರಗಾಗಿ ಅವರ ಭಾವವನ್ನು ತನಿಖೆಗೆ ಒಳಪಡಿಸುತ್ತಾ ಇದ್ದದ್ದು ಅವರಿಗೆ ಗೊತ್ತಾಯಿತೇನೋ
ಇದು ಅಮ್ಮ ನನಗೆ ಕೊಟ್ಟ ಉಡುಗೊರೆ. ಅಮ್ಮ ಎನ್ನುವುದು ಆತ್ಮವಿಶ್ವಾಸ ಎಂದರು
ಅಮ್ಮ ಹಿಡಿದು ಹೊರಟ ಒಂದು ಲೋಟ ಹಾಗೂ ತಳ್ಳಿ ಬಂದ ಚಹಾ ಕಪ್ ಎರಡರ ನಡುವೆ ನಮ್ಮ ಮಾತು ತೂಗುತ್ತಿತ್ತು
”ಒಂದು ಲೋಟ, ಎರಡು ಸೀರೆ, ಐದು ರೂಪಾಯಿ ಹಿಡಿದುಕೊಂಡು ರಾಧಾಮೂರ್ತಿ ರಾವ್ ನಾಸಿಕ್ ನಿಂದ ಹೊರಟರು. ನಿಮ್ಮ ಬದುಕಿನ ಹಾದಿ ಬದಲಾಯಿತು ಅಲ್ಲವೇ..?” ಅನ್ನೋ ಪ್ರಶ್ನೆ ಮುಂದಿಟ್ಟಿದ್ದೆ
”ಆಕೆಯ ಹೆಸರು ಪ್ರೇಮಲತಾ ಸಾಠೆ. ಮದುವೆ ಆದಮೇಲೆ ರಾಧಾಮೂರ್ತಿ ರಾವ್” ಎಂದು ಅರುಂಧತಿ ತಿದ್ದಿದರು
ಈ ಎರಡು ಹೆಸರುಗಳ ನಡುವೆ ಒಂದು ದೊಡ್ಡ ಲೋಕವೇ ತೂಗುತ್ತಿತ್ತು
ನಾನು ಅರುಂಧತಿಯನ್ನು ಮಾತನಾಡಲು ಬಿಟ್ಟು ಬರೀ ಕಿವಿಯಾಗಿ ನಿಂತೆ
ಅರುಂಧತಿಯ ನೆನಪುಗಳ ಲೋಕಕ್ಕೆ ಕೈ ಇಟ್ಟಿದ್ದೆನೇನೋ
ಜೇನು ಗೂಡಿನಿಂದ ಎದ್ದ ನೊಣಗಳ ಹಿಂಡಿನಂತೆ ನೆನಪು ಹರಡಲಾರಂಭಿಸಿತು
”ಎಸ್ ಎಲ್ ಸಿ ಪಾಸಾದ ಮಾರ್ಕ್ಸ್ ಕಾರ್ಡ್, ಐದು ರೂಪಾಯಿ, ಎರಡು ಸೀರೆ, ಒಂದು ಲೋಟ ಹಿಡಿದು ಆಕೆ ಮನೆ ಬಿಟ್ಟು ಹೊರಡುವಾಗ ಅವಳ ಮದುವೆ ನಿಶ್ಚಯವಾಗಿತ್ತು
ಆದರೆ ಅಪ್ಪ ಶುರು ಮಾಡಿದ ಬೆಲ್ಲದ ಬ್ಯುಸಿನೆಸ್ ಪಾತಾಳ ಕಂಡಿತ್ತು
ರಾತ್ರೋರಾತ್ರಿ ಕಾರ್ಖಾನೆಗೆ ನುಗ್ಗಿದ ಯಾರೋ ಬೆಲ್ಲಕ್ಕೆ ನೀರು ಬೆರಸಿ ಹೋದರು ರಾತ್ರಿ ಕಳೆದು ಬೆಳಗಾಗುವುದರೊಳಗೆ ಅಪ್ಪ ಪಾಪರ್ ಆಗಿದ್ದರು”
”ಮದುವೆಗೆ ವರದಕ್ಷಿಣೆ ತೆರಬೇಕಾಗಿತ್ತು. ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರಿದ್ದರು
ರೈಲ್ವೆಯಲ್ಲಿ ಎಂಜಿನಿಯರ್ ಆಗಿದ್ದ ಅಪ್ಪ ಕೂಡಿಟ್ಟ ದುಡ್ಡೆಲ್ಲವೂ ಹೀಗೆ ಹೋಗಿಬಿಟ್ಟಿತ್ತು
ಅಮ್ಮ ಮದುವೆ ಬೇಡ ಎಂದಳು. ಅಜ್ಜಿಗೆ ಗುಮಾನಿ. ಇವಳು ಯಾರನ್ನೋ ಪ್ರೀತಿಸಿದ್ದಾಳೆ ಅಂತ. ಬಚ್ಚಲು ಮನೆಗೆ ಹೋಗಿ ಬರಲೂ ಕಾವಲು ಇಟ್ಟುಬಿಟ್ಟರು
ಆಗಲೇ ಅಮ್ಮ ಹೊರಟು ನಿಂತದ್ದು. ಅಪ್ಪನ ಬಳಿ ಹೋದಳು.
ನಾನು ಕೆಲಸ ಹುಡುಕಿಕೊಂಡು ಹೊರಟಿದ್ದೇನೆ. ಯಾರಾದರೂ ನನನ್ನನ್ನು ತಡೆದರೆ ಇನ್ನೆಂದೂ ವಾಪಸ್ ಬರುವುದಿಲ್ಲ, ತಡೆಯದಿದ್ದರೆ ಖಂಡಿತಾ ಬರುತ್ತೇನೆ ಎಂದವಳೇ ಹೊರಟೇ ಬಿಟ್ಟಳು”
”ಮುಂಬೈಗೆ ಹೋದವಳೇ ತನ್ನ ನೆಂಟರ ಮನೆ ಬಾಗಿಲು ತಟ್ಟಿದಳು
ಕಪ್ ನಲ್ಲಿ ಚಹಾ ಬಂತು. ಅಮ್ಮ ಇದ್ದ ಕಥೆಯೆಲ್ಲಾ ಹೇಳಿ ಕೆಲಸ ಹುಡುಕಲು ಬಂದಿದ್ದೇನೆ ಎಂದರು
ಆಗ ಆ ಮನೆಯವರು ನಿಂಗೆ ಇಲ್ಲಿ ಉಳಿಯಲು ಜಾಗ ಇಲ್ಲ ಎಂದರು
ಅಮ್ಮ ಚಹಾ ಕಪ್ ತಳ್ಳಿದವರೇ ಚಹಾ ಕುಡಿಯೋದಿಕ್ಕೆ ಅಂತ ಇನ್ನೊಂದು ಸಲ ಬರುತ್ತೇನೆ ಎಂದು ಹೊರಟುಬಿಟ್ಟರು”
ಅರುಂಧತಿ ಹೀಗೆ ಹೇಳುತ್ತಾ ಹೋಗುತ್ತಿದ್ದಾಗ ನನಗೆ ಇನ್ನೂ ಒಬ್ಬರು ನೆನಪಾದರು
ಅವರು ಕರುಣಾಳು. ಅವರ ಪ್ರತೀ ಮಾತು, ಬರಹ, ಎಲ್ಲವೂ ಕರುಣೆಯ ತವರೇ
‘ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ಎಂದು ಖಂಡಿತಾ ಅವರನ್ನು ಕರೆಯಬಹುದಿತ್ತು
wishಅವರು ಒಂದು ದಿನ ತಾವೇ ಮಾಡಿಸಲಿದ್ದ ಮದುವೆಗೆ ಬಂದರು
ಮದುವೆಯೂ ಆಯಿತು. ಬಂದವರೆಲ್ಲರೂ ಬಗೆ ಬಗೆ ಉಡುಗೊರೆಗಳನ್ನು ಜೋಡಿಯ ಕೈಗೆ ತುರುಕುತ್ತಿದ್ದರು
ಆ ಅಜ್ಜ ಬದಿಯಲ್ಲಿ ನಿಂತವರೇ ತಾವು ತಂದಿದ್ದ ತರಕಾರಿ ಬ್ಯಾಗ್ ನಿಂದ ಉಡುಗೊರೆ ಹೊರತೆಗೆದರು
ಅದು ಯಾವುದೇ ಬಣ್ಣ ಬಣ್ಣದ ಹೊದಿಕೆ ಹೊದ್ದಿರಲಿಲ್ಲ
ಥಳಕು ಬಳಕು ಆ ಉಡುಗೊರೆಗೂ ಗೊತ್ತಿರಲಿಲ್ಲ
ಅವರು ಒಂದು ಟಿಫಿನ್ ಬಾಕ್ಸ್ ನ್ನು ಇಬ್ಬರ ಕೈಗಿಟ್ಟವರೇ ಒಂದು ಬೆಳ್ಳಕ್ಕಿ ನಗೆ ಬೀರಿದರು
ನಿಮ್ಮ ಒಡಲು ಎಂದೂ ಖಾಲಿಯಾಗದಂತೆ ಇರಲಿ ಎಂದರೇ..?
ಅಥವಾ ಇದು ಉಂಡಷ್ಟೂ ಮುಗಿಯದೆ ಒಂದು ಅಗುಳು ಅನ್ನವನ್ನಾದರೂ ಉಳಿಸುವ ಅಕ್ಷಯ ಪಾತ್ರೆಯಾಗಿರಲಿ ಎಂದರೇ..?
ಹೀಗೆ ಟಿಫಿನ್ ಬಾಕ್ಸ್ ಕೈನಲ್ಲಿ ಹಿಡಿದ ಸಮಯದಲ್ಲಿಯೇ ಆ ಇನ್ನೊಬ್ಬರೂ ನೆನಪಾದರು
ಒಂದಿಷ್ಟು ಒಳ್ಳೆಯ ಬಣ್ಣ, ಎತ್ತರದ ಮೈಕಟ್ಟಿನ ಆತ ಕಾಣೆಯಾಗಿ ಹೋದರು. ಎದುರಿಗಿದ್ದರೂ..
ಒಂದು ಜಿದ್ದು ಗೆಲ್ಲುವುದಕ್ಕೋ ಎನ್ನುವಂತೆ ಮಕ್ಕಳ ಜಗತ್ತಿನಿಂದ ತಮ್ಮನ್ನು ಡಿಸ್ ಕನೆಕ್ಟ್ ಮಾಡಿಕೊಂಡು ಬಿಟ್ಟರು
ಮನೆಯಲ್ಲಿ ೬ ಮಂದಿ ಇದ್ದಾರೆ ಅದರಲ್ಲಿ ನಾಲ್ವರು ಇನ್ನೂ ಓದುತ್ತಿದ್ದಾರೆ
ಆಗಲೇ ಬಿ ಇ ಓಡುತ್ತಿದ್ದ್ದ ಮಗ ಪರೀಕ್ಷೆಯ ಫೀಸು ಕಟ್ಟಬೇಕಾಗಿ ಬಂತು
ಏನೆಂದರೆ ಏನೂ ತೋಚದ ಸಮಯದಲ್ಲಿ ಆಕೆ ಎದ್ದು ನಿಂತರು
ಸೀದಾ ಸ್ನಾನದ ಕೋಣೆಗೆ ಹೋದವರೇ ಅಲ್ಲೇ ಇದ್ದ ಹಾರೆಯಿಂದ ಬಿಸಿ ನೀರು ಕಾಯಿಸಲು ಇದ್ದ ಒಲೆಯನ್ನು ಒಡೆಯಲಾರಂಭಿಸಿದರು
ದೊಡ್ಡ, ಗಟ್ಟಿಮುಟ್ಟಾಗಿದ್ದ ತಾಮ್ರದ ಹಂಡೆ ಹೊರಬಂತು. ಅದನ್ನು ಬಗಲಿಗೆ ಏರಿಸಿದವರೇ ಸೀದಾ ಸೇಠು ಅಂಗಡಿಗೆ ನಡೆದರು
ಬಿಕರಿಯಾಗಿದ್ದು ಹಂಡೆ ಮಾತ್ರ, ಉಳಿದದ್ದು ಮಾತ್ರ ಕೈ ಚಾಚದ ಸ್ವಾಭಿಮಾನ
ಇಲ್ಲವಾಗಿದ್ದು ಒಂದಷ್ಟು ದಿನದ ಸ್ನಾನ ಮಾತ್ರ, ಆದರೆ ಉಳಿದದ್ದು ಇನ್ನೂ ಮುಗಿಯದ ನೆನಪಿನ ಮಹಾಮಜ್ಜನ.
6093bfaf24c2adc482c28c1666546d22

ಫೇಸ್ ಬುಕ್ ನಲ್ಲಿ ಈಜಾಡುತ್ತಿದ್ದೆ
ಅಲ್ಲಿ ಯಾವುದೋ ಒಂದು ವಿಡಿಯೋ ಕಾಣಿಸಿತು. ಒತ್ತಿದೆ
ಅದು ಹಂಡೆ ಮಾಡುವುದು ಹೇಗೆ ಎನ್ನುವುದನ್ನು ತೋರಿಸುತ್ತಿದ್ದ ವಿಡಿಯೋ
ಯಂತ್ರಗಾರಿಕೆ, ಕುಶಲತೆ, ಅದರೊಳಡಗಿದ್ದ ವಿಜ್ಞಾನ ಇದೆಲ್ಲವನ್ನೂ ಆ ವಿಡಿಯೋ ಬಣ್ಣಿಸುತ್ತಿತ್ತು

6093bfaf24c2adc482c28c1666546d22
ನನಗೋ ಆ ಒಂದು ಲೋಟ, ಒಂದು ಟಿಫಿನ್ ಕ್ಯಾರಿಯರ್, ಒಂದು ಹಂಡೆ ಕಟ್ಟಿಕೊಟ್ಟ ಬದುಕು ಕಣ್ಣ ಪರದೆಯ ಮುಂದೆ ಸರಿಯಲಾರಂಭಿಸಿತು

‍ಲೇಖಕರು Avadhi

July 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ನೀವು ಬಿಂಬಿಸಿದ ಸ್ವಾಭಿಮಾನದ ಬದುಕಿನ ಚಿತ್ರಗಳಿಗೆ ನಮೋನಮಃ.

    ಪ್ರತಿಕ್ರಿಯೆ
  2. Sudha Chidananda Gowd

    ಅಮ್ಮ ಎಂಬ ಚೆದುರಿದ ಚಿತ್ರಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: