ಸೀಟಿಯ ಸದ್ದು
ಚಿಂತಾಮಣಿ ಕೊಡ್ಲೆಕೆರೆ
*
ಶಾಲೆಯ ಮುಂದಿನ ರಸ್ತೆಯ ಆಚೆ
ಆಟದ ಮೈದಾನ
ನಾಯಕ ಮಾಸ್ತರು ಪಿ. ಇ. ಕಲಿಸುವರು
ನಾವೂ ಹೋಗೋಣ
ಸಮವಸ್ತ್ರದಲಿ ನಿಂತ ಮಕ್ಕಳು
ಎಲ್ಲ ಕ್ಲಾಸಿನವರು
ನಾಯಕ ಮಾಸ್ತರು ಸೀಟಿ ಊದುವರು
ಒರೆಸಿಕೊಂಡು ಬೆವರು
ಕೈಗಳು ಮೇಲೆ ಕೈಗಳು ಕೆಳಗೆ
ಎಡಬಲ ಚಲಿಸುತಿವೆ
ನಸು ನಗುತ್ತ ಆ ನೂರೂ ಮಕ್ಕಳು
ಲೆಫ್ಟ್ ರೈಟ್ ಮಾಡುತಿವೆ
ಲೆಫ್ಟ್ ರೈಟ್ ಲೆಫ್ಟ್ ರೈಟ್ ಒಂದೇ ಗತಿಯಲಿ
ಹೆಜ್ಜೆಗಳಿರಿಸುವರು
ಇಡೀ ಮೈದಾನ ನಗೆ ಚೆಲ್ಲುತ್ತಾ
ಬಾಗುತ ಬಳುಕುವರು
ಪಿ. ಇ. ಮುಗಿಯಿತು, ಎಲ್ಲರು ಇನ್ನು
ಶಾಲೆಗೆ ಮರಳುವರು
ನಾಯಕ ಮಾಸ್ತರು ಮಕ್ಕಳ ಒಂದೇ
ಸಾಲಲಿ ನಿಲಿಸುವರು
ಓಡಬಾರದು ಮೆಲ್ಲಗೆ ನಡೆಯಿರಿ
ಮುಖ್ಯರಸ್ತೆಯಲ್ಲಿ
ಬಸ್ಸು ಟ್ರಕ್ಕು ಓಡಾಡುತ್ತಿವೆ
ಹಾಗೇ ನಿಂತುಕೊಳ್ಳಿ
ಈಗ ಮಾಸ್ತರು ಸೀಟಿ ಊದುವರು
ಮಕ್ಕಳು ನಡೆಯುವರು
ಒಬ್ಬರ ಹಿಂದಿನ್ನೊಬ್ಬರು ಒಬ್ಬರು
ಹೆಜ್ಜೆಗಳಿರಿಸುವರು
ಬಸ್ಸು ಆಟೋ ಸ್ಕೂಟರು ನಿಂತಿವೆ
ಎರಡೂ ದಿಕ್ಕಿನಲ್ಲಿ
ಸೀಟಿ ಊದುತ್ತ ಮಾಸ್ತರು ಸನ್ನೆ
ಮಾಡುತಿಹರು: ನಿಲ್ಲಿ!
ಬೆಳೆಯುವ ಸಿರಿಗಳು ಒಂದೊಂದಾಗಿ
ರಸ್ತೆಯ ದಾಟುತಿವೆ
ನಾಯಕ ಮಾಸ್ತರ ಸೀಟಿಯ ಸದ್ದು
ಜಗವನೆ ನಿಲ್ಲಿಸಿದೆ
ಎರಡೂ ದಿಕ್ಕಲಿ ಅವರ ಕೈಗಳು
ಏರಿಳಿದಾಡುತಿವೆ
ನಗೆ ಇಲ್ಲದ ಆ ಬಿಗಿ ಮೊಗದಲ್ಲಿ
ಬೆವರೂ ಸುರಿಯುತಿದೆ
ಜಗವ ಕಾಯುವವು ಇಂಥ ಕೈಗಳೇ
ತಪ್ಪದವರ ಗಮನ
ಮಕ್ಕಳ ಹೂನಗೆ ಕಾಯ್ವ ಬಿಗಿ ಮೊಗವೆ
ಮತ್ತೆ ಮತ್ತೆ ನಮನ






0 Comments