ಚಿಂತಾಮಣಿ ಕೊಡ್ಲೆಕೆರೆ – ಮಕ್ಕಳ ಪದ್ಯಗಳು…

ಚಿಂತಾಮಣಿ ಕೊಡ್ಲೆಕೆರೆ

೧. ನಡೆ ನಡೆ ಇಡೀ ದಿನ

ನಡೆ ನಡೆ ಇಡೀ ದಿನ
ನಡೆ ನಡೆ ನಡೆ
ಹಾರು ಹಾರು ಇಡೀ ದಿನ
ಹಾರು ಹಾರು ಹಾರು
ಓಡು ಓಡು ಇಡೀ ದಿನ
ಓಡು ಓಡು ಓಡು
ಹಾಡು ಹಾಡು ಇಡೀ ದಿನ
ಹಾಡು ಹಾಡು ಹಾಡು
ಓದು ಓದು ಇಡೀ ದಿನ
ಓದು ಓದು ಓದು
ಬರೆ ಬರೆ ಇಡೀ ದಿನ
ಬರೆ ಬರೆ ಬರೆ
ಕೊರೆ ಕೊರೆ ಇಡೀ ದಿನ
ಕೊರೆ ಕೊರೆ ಕೊರೆ

೨. ಇಪ್ಪತ್ತೆಂಟು ಕಪ್ಪೆಗಳು

ಶಾಲೆಗೆ ಹೊರಟವು ಕಪ್ಪೆಗಳು
ಇಪ್ಪತ್ತೆಂಟು ಕಪ್ಪೆಗಳು
ತೋಟದ ಕೆರೆಯ ಶಾಲೆಗೆ ಹೊರಟವು
ಇಪ್ಪತ್ತೆಂಟು ಕಪ್ಪೆಗಳು

ಕಪ್ಪೆ ಮರಿಗಳ ಹೋಮ್ ವರ್ಕ್ ಲ್ಲಿ
ಇಪ್ಪತ್ತೆಂಟು ತಪ್ಪುಗಳು
ಇಪ್ಪತ್ತೆಂಟೂ ಹೋಮ್ ವರ್ಕ್ ಲ್ಲಿ
ಇಪ್ಪತ್ತೆಂಟು ತಪ್ಪುಗಳು

“ಇಪ್ಪತ್ತೆಂಟು, ಇಪ್ಪತ್ತೆಂಟು
ಎಲ್ಲಾ ಇಪ್ಪತ್ತೆಂಟು”
ಕಪ್ಪೆ ಟೀಚರ್ ಕೂಗಾಡಿದರು
ತಿಂತಾ ಪೆಪ್ಪರ್ ಮೆಂಟು

ಕೆರೆ ನೀರಲ್ಲಿ ಮುಳುಗಿ, ಏಳಿ
ಇಪ್ಪತ್ತೆಂಟು ಬಾರಿ
ಇಪ್ಪತ್ತೆಂಟೂ ಕಪ್ಪೆಗಳು
ಇಪ್ಪತ್ತೆಂಟು ಸಾರಿ

ಕಪ್ಪೆ ಮರಿಗಳು ಮುಳುಗಿ ಎದ್ದವು
ಇಪ್ಪತ್ತೆಂಟು ಬಾರಿ
ಕಪ್ಪೆ ಟೀಚರೂ ಕೆರೆಗೆ ಹಾರಿದರು
ಇಪ್ಪತ್ತೆಂಟನೆ ಸಾರಿ

೩ ಕಾರಿನ ಧರ್ಮ

ಶೆಡ್ಡಲಿ ನಿಂತಿದೆ ಕಾರು
ಹೇಳುತ್ತಾ ಇದೆ ಬೋರು

ಮುಂದಿನ ಎರಡೂ ಚಕ್ರ
ನಿಂತುಬಿಟ್ಟಿವೆ ವಕ್ರ!

ಚಲನೆಯೆ ಕಾರಿನ ಧರ್ಮ 
ಹೀಗೆ ನಿಲ್ಲೋದು ಕರ್ಮ!

೪. ಕುರಿಗಳು ನಾವು

ಕುರಿಗಳು ನಾವು
ಬ್ಯಾ ಬ್ಯಾ ಬ್ಯಾ
ಕಾಗೆ ನಾವು
ಕಾ ಕಾ ಕಾ
ನಾಯಿ ನಾವು
ಬೌ ಬೌ ಬೌ
ಬೆಕ್ಕು ನಾವು
ಮ್ಯಾಂವ್ ಮ್ಯಾಂವ್ ಮ್ಯಾಂವ್
ಹಕ್ಕಿ ನಾವು
ಚಿಂವ್ ಚಿಂವ್ ಚಿಂವ್
ಚಿಂವ್ ಚಿಂವ್ ಚಿಂವ್ ಚಿಂವ್ ಚಿಂವ್ ಚಿಂವ್ ಚಿಂವ್

೫. ಉಷ್ಣ

ಯಾಕೆ ಹೀಗೆ ಮೂಗು ಸೇರಿಸುವೆ
ಏನಾಯ್ತೋ ಮರಿ, ಕೃಷ್ಣ?
ಏನಿಲ್ಲಪ್ಪಾ ಈಗಿತ್ಲಾಗಿ
ಥಂಡಿ ಕೆಮ್ಮು ಉಷ್ಣ!

೬. ಜಾಣ್ಮೆಯ ಬೆಳಕು

ಭಾಗ: ಒಂದು
ಒಂದೂರಲ್ಲಿ ಒಂದು ಮನೆ
ಆ ಮನೆಯಲ್ಲಿ ರೈತ
ವಾಸವಾಗಿದ್ದ ಹೆಂಡತಿ
ಮೂರು ಮಕ್ಕಳ ಸೈತ

ವಯಸ್ಸಾಯಿತು ರೈತನಿಗೆ
ಚಿಂತೆ ಬಂದೇ ಬಂತು
ನಾನು ಸತ್ತರೆ ಏನು ಗತಿ?
ಇವರು ಬಾಳುವರೆಂತು?

ಜಾಣರಾರು ಈ ಮಕ್ಕಳಲಿ?
ಕಂಡು ಹಿಡಿಯುವುದು ಹೇಗೆ?
ದಡ್ಡರ ಆಸ್ತಿ ರಣಹದ್ದಿಗೆ!
ಜೊತೆಗೆ ನಾಯಿ, ನರಿ, ಗೂಗೆ!

ಯೋಚಿಸಿ ಕಡೆಯಲಿ ರೈತನಿಗೆ
ಹೊಳೆಯಿತು ಒಂದು ಉಪಾಯ
ಮೂರೂ ಮಕ್ಕಳ ಕೈಯಲ್ಲಿ
ಇಟ್ಟನು ನೂರು ರುಪಾಯ

“ಕೊಂಡು ತನ್ನಿರಿ – ಏನಾದರೂ ಸರಿ –
ನಡೆದಿದೆ ಊರಿನ ಸಂತೆ! –
ತಂದ ಸರಕಿಂದ ಕೋಣೆ ತುಂಬಿಸಿ
ಸಂದೂ ಇರದಂತೆ!”

“ಈ ಸ್ಪರ್ಧೆಯಲಿ ಗೆಲ್ಲುವರಾರೋ
ಅವನಿಗೆ ಬಹುಮಾನ:
‘ನನ್ನ ನಂತರ ಈ ಮನೆಗೆ
ಅವನೇ ಯಜಮಾನ!’

ಭಾಗ: ಎರಡು

ಹುಡುಗರು ಹೊರಟರು ಮೂರು ಕಡೆ
ಏನು ಮಾಡೋದು ಈಗ?
ನೂರು ರುಪಾಯಿ ತುಂಬುವುದೆಂತು
ಆ ಇಡಿ ಕೋಣೆಯ ಜಾಗ?

ಯೋಚಿಸಿ ದಣಿದರು ಮೂರು ಜನ
ಸಂತೆಯ ಮೂರು ಎಡೆ
ಹತ್ತಿಯ ಕೊಂಡು, ಹುಲ್ಲನು ಕೊಂಡು
ಇಬ್ಬರು ಮನೆಯ ಕಡೆ

ಹೊರಟರು. ಇತ್ತ ಸಂತೆಮಾಳದಲೆ
ತಮ್ಮ ತಿರುಗುತ್ತಿದ್ದ
ಏನನೋ ಕೊಂಡ, ಕಿಸೆಯೊಳಗಿಟ್ಟ
ನಗುತಾ ಹೊರಬಿದ್ದ

ಹತ್ತಿ, ಹುಲ್ಲು ತುಂಬಬಲ್ಲವೇ
ಆ ಕೋಣೆಯ ಪೂರಾ!
ಹತಾಶ ರೈತ ಕೇಳಿದ ಕಿರಿಯನ
ನಿಂದೇನೋ ಧೀರಾ?

ಹುಡುಗ ಹೊರತೆಗೆದ ಕಿಸೆಯೊಳಗಿಂದ
ಪುಟ್ಟದು ಮೊ೦ಬತ್ತಿ!
ಅಣ್ಣಂದಿರು ಗಹಗಹಿಸಿ ವ್ಯಂಗ್ಯದಲಿ
ನಕ್ಕರು ಕೈತಟ್ಟಿ

ಕಡ್ಡಿ ಗೀರಿದ ಕಿರಿಯ ತಮ್ಮ – ಅದೊ
ಮೊ೦ಬತ್ತಿಯ ಬೆಳಕು
ಕೋಣೆಯ ತುಂಬಿ ತುಳುಕಿತು ಎಲ್ಲಡೆ
ಜಾಣತನದ ಝಲಕು!

ಅಪ್ಪಾ ಮೂರೇ ರೂಪಾಯಲ್ಲಿ
ಕೋಣೆಯ ತುಂಬಿರುವೆ
ಮಿಕ್ಕ ಹಣವನು ಪೈಸೆ ಬಿಡದೆ
ವಾಪಸು ತಂದಿರುವೆ

ನಕ್ಕನು ರೈತ. ಕಣ್ಣಲಿ ನೀರು!
ಮಗನ ಅಪ್ಪಿಕೊಂಡ
ಜಾಣ್ಮೆಯೆ ಬಾಳಿನ ಬೆಳಕು ಮಕ್ಕಳೆ
ಅರಿತು ಬಾಳಿರೆಂದ

೭. ಗುಡ್ ಗುಡ್ ಗುಡ್

ಹುಲಿರಾಯಗೆ ಸಿಟ್ಟು ಬಂತು
ಕುರಿಮರಿ ಐಸ್ಕ್ರೀಮ್ ತಂತು
ಐಸ್ಕ್ರೀಮ್ ತಿಂದು ಹುಲಿ ಅಂತು
ಗುಡ್ ಗುಡ್ ಗುಡ್

ಕುರಿಮರಿ ಓಡ್ತಾ ಇತ್ತು
ಹರ‍್ತಾ ಗುಡ್ಡ ಓಡ್ತಾ ಇತ್ತು
ಹಾಡ್ತಾ ಗುಡ್ಡ ಹರ‍್ತಾ ಇತ್ತು
ಗುಡ್ ಗುಡ್ ಗುಡ್

ಬದುಕಿದೆನಪ್ಪಾ ಬಡ ಜೀವಾತ್ಮ
ಗುಡ್ ಗುಡ್ ಗುಡ್

೮. ಮೆಟ್ರೋ

ರೈಲಿನ ಹೆಸರು ಮೆಟ್ರೋ!
ನೀವೂ ಹತ್ತೇ ಬಿಟ್ರೋ?
ಕಣ್ಣು ಮುಚ್ಚಿ ತೆಗೆವಷ್ಟ್ರಲ್ಲಿ
ಆಫೀಸ್ ಮುಟ್ಟೇಬಿಟ್ರೋ!

೯. ಟ್ರಾಫಿಕ್ ಜಾಮಲಿ

ಟ್ರಾಫಿಕ್ ಜಾಮಲಿ ಕೆಟ್ರೋ?
ಹತ್ಬೇಕಿತ್ತು ಮೆಟ್ರೋ
ಅರೆರೆ! ಸ್ಕೂಟರ್ ಪಕ್ಕಕೆ ನಿಲ್ಲಿಸಿ
ರೈಲಿಗೆ ಓಡೇ ಬಿಟ್ರೋ!

೧೦. ವೇಗದ ಕಷ್ಟ

ಮೆಟ್ರೋ ರೈಲಿನ ವೇಗ
ಅಣ್ಣಪ್ಪನಿಗೆ ಆಗ!
ಏನ್ಮಾಡೋದು ಆಫೀಸಲ್ಲಿ –
ಹೋದ್ರೆ ಇಷ್ಟೊಂದ್ ಬೇಗ!

‍ಲೇಖಕರು Admin

February 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: