ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಾಕಲೇಟ್ ‘ಲವ್’

ಪ್ರೇಮಿಗಳ ದಿನಕ್ಕೊಂದು ಗುಟ್ಟು

ಶಿವಪ್ರಸಾದ ಪಟ್ಟಣಗೆರೆ

ಹೇಗಾದರೂ ಮಾಡಿ ಇವತ್ತು ರಾಣಿಯನ್ನ ಮಾತನಾಡಿಸಲೇ ಬೇಕು ನಿನ್ನೆ ಗಾಳಿಗೆ ಕಿಟಕಿ ತೆರೆಯಲುಹೋದಾಗ ಕಿಟಕಿಯ ಗಾಜು ಮುರಿದು ಕೈಯೆಲ್ಲ ರಕ್ತವಾದಾಗ ರಾಣಿ ನಯವಾದ ಇಸ್ತ್ರೀ ಮಾಡಿದ ಬಿಳಿ ಕೋಮಲ ಕರವಸ್ತ್ರವನ್ನು ಒಂದರಗಳಿಗೆಯೂ ವಿವೇಚಿಸದೆ ಹರಿದು ನನ್ನ ಕೈಯಿಂದ ಸೋರುತಿದ್ದ ರಕ್ತವನ್ನು ನಿಲ್ಲಿಸಲು ಬಿಗಿಯಾಗಿ ಕಟ್ಟಿದಳು. ಅದೇ ಮೊದಲು ನನ್ನ ಪ್ರೀತಿಯ ಕುಸುಮಗಳೆಲ್ಲ ಎದೆಯೊಳಗೆ ಹೂಬಿಟ್ಟು ಪಲ್ಲವಿಸತೊಡಗಿದ್ದು,. ಈ ಕಾರಣ ನಿಮಿತ್ತ ಫೆಬ್ರವರಿ 14 ರಂದು ಹೇಗಾದರೂ ರಾಣಿಯನ್ನ ಮಾತನಾಡಿಸಬೇಕೆಂದು ಪಣತೊಟ್ಟೆ

ಈ ಘಟನೆ ಅಂದರೆ ರಕ್ತಚರಿತ್ರೆ ನಡೆದದ್ದು ಅದೇ ದಿನ

ನಾನು ಸ್ವಲ್ಪ ಸಂಕೋಚಭಾವಿ , ಹಾಗಾಗಿ ಅಂದು ಆಕೆಯನ್ನು ಮಾತಾನಡಿಸಲಾಗಲೇ ಇಲ್ಲ, ನನ್ನ ನಸೀಬಿಗೆ ಒಂದು ಧನ್ಯವಾದವನ್ನೂ ಸಹ ಹೆಳಲೂ ಆಗದ ಸಂಕೋಚ ಜೀವಿ, ನಾಳೆ ಹೇಗಾದರೂ ಮಾಡಿ ರಾಣಿಯನ್ನು ಮಾತನಾಡಿಸಬೇಕೆಂದುಕೊಂಡು ಕಾಲೇಜು ಬಿಟ್ಟ ನಂತರ ಮನೆಗೆ ಬಸ್ ಹತ್ತಿದೆ ನನ್ನ ದುರಾದೃಷ್ಟವಶಾತ್ ಅದೇ ಬಸ್ಸಿಗೆ ರಾಣಿಯೂ ಬಂದಳು. ಇಡೀ ಬಸ್ಸು ಕೆವಲ ನಮ್ಮಂತ ಪಡ್ಡೆ ಐಲುಗಳಿಂದ ತುಂಬಿಹೋಗಿತ್ತು. ನಾನು ತೀರಾ ಹೆಂಗಸರಿಗೆ ಮೀಸಿಲಿಟ್ಟ ಸೀಟಿನ ಹಿಂದೆಯೇ ಕುಳಿತಿದ್ದೆ. ಆಕೆ ನನ್ನ ನೋಡಿದೊಡನೇ ತಟ್ಟನೇ ನನ್ನ ಬಳಿಗೇ ಬಂದು ಕೂತುಬಿಟ್ಟಳು. ಕೈ ಸರಿಹೋಯ್ತಾ? ನಿಮ್ಮನೆ ಎಲ್ಲಿರದು? ಅಂತ ಮಾತಾನಾಡಿಸಿಬಿಟ್ಟಳು

ನಾನು ಆಗಲೂ ಬೊಬ್ಬಯ್ಯನಂತೆ ಸುಮ್ಮನೆ ಗುಮ್ಮನಹಾಗೆ ಕುಳಿತಿದ್ದೆ. ನನ್ನಿಂದ ಪ್ರತಿಕ್ರಿಯೆ ಬಾರದ ಕಾರಣ ಮರಳಿ ಮುಖ ಸಿಂಡರಿಸಿಕೊಂಡು ತನ್ನ ಸೀಟಿಗೆ ಮರಳಿ ಕೂತುಬಿಟ್ಟಳು. ನನ್ನ ಒಳ ಬನೀನು ತೀರಾ ಬೆವತುಹೋಯ್ತು. ಮಾತನಾಡಿಸಬಹುದಿತ್ತಲ್ಲವೇ? ನಾನೇಕೆ ಹೀಗೆ ಎನ್ನುತ್ತಾ ಯೋಚಿತ್ತಾ ಕೊನೆಯ ಸ್ಟಾಪಿನವರೆಗೂ ಮೈಮರೆತು ಅದೇ ಬಸ್ಸಿನಲ್ಲಿ ಸಂಚರಿಸಿದೆ. ನಾಳೆ ಹೆಗಾದರೂ ಮಾತನಾಡಿಸಿಬಿಡಬೇಕು ಒಂದು ಥ್ಯಾಂಕ್ಸ್ ಹೇಳಿಬಿಡಬೇಕು ಎಂದು ಪಣತೊಟ್ಟೆ. ಕೊನೆಗೆ ಹೇಗೋ ದೈರ್ಯಮಾಡಿ ಒಂದು ಡೈರಿಮಿಲ್ಕ್ ಸಹ ಕೊಂಡೆ. ಚೇಂಜ್ ಇಲ್ಲವೆಂದು ಗೋಗರೆಯುತಿದ್ದುದ ಕಂಡು ಹಾಗೆ ಒಂದು ಸುಧಾ ಮ್ಯಾಗ್ಝೈನ್ ಕೊಂಡೆ ಅದು ಪ್ರೇಮಿಗಳ ದಿನದ ವಿಶೇಷ ಸಂಚಿಕೆ. ಅದರ ಮೆಲೆ ಒಂದು ದೊಡ್ಡ ಹೃದಯ… ಅದೇ ಚಿತ್ರ ದೊಡ್ಡ ರೂಪಕವಾಗಿ ನನ್ನ ಇಡೀ ರಾತ್ರಿ ಕಾಡಿತು. ಬೆಳಿಗ್ಗೆಯವರೆಗೂ ನಿದ್ದೆಯೇ ಬರಲಿಲ್ಲ. ರಾಣಿಯ ಆ ಎತ್ತರದ ನಿಲುಕಟ್ಟು, ಅವಳ ಮುಖ ನಿಜವಾಗಿಯೂ ನಾನು ನೇರವಾಗಿ ನೋಡಿಯೇ ಇಲ್ಲ. ಆದರೆ ಅವರ ಧ್ವನಿ ನನಗೆ ಇಂದಿಗೂ ಈ ಗಳಿಗೆಯವರೆಗೂ ನೆನಪಿದೆ. ಆ ಸಿಹಿಭಾವಧ್ವನಿ ಮತ್ತೆ ಮತ್ತೆ ನನ್ನ ನೆನಪಿನಲ್ಲೇ ಕಾಡುತಿತ್ತು.

ಇನ್ನು ಬೆಳಗಾಯ್ತು ಮುಂಜಾನೆಯೇ ಎಲ್ಲಾ ತಯಾರಿಮಾಡಿಕೊಂಡು ಕಾಲೇಜಿಗೆ ಬೇಗನೆ ಹೊರಟೆ ತರಗತಿಗೆ ಬಂದೆ ಆ ತರಗತಿ ಪೂರಾ ಖಾಲಿ ಖಾಲಿ ಒಬ್ಬನೆ ಹೋಗಿ ಒಳಗೆ ಕುಳಿತೆ. ನನ್ನ ಬ್ಯಾಗ್ ಇಟ್ಟು ರಾಣಿ ಬರುವುದನ್ನೇ ಕಾದೆ. ಎದ್ದು ಈಚೆಗೆ ಹೊರಟೆ ಇನ್ನೇನು ಬಾಗಿಲ ಬಳಿಗೆ ಬರುವಷ್ಟರಲ್ಲಿ ಆ ತಿರುವಿಗೆ ಸರಿಯಾಗಿ ನನ್ನ ತಲೆಗೆ ಒಂದು ಪೆಟ್ಟುಬಿತ್ತು  ಅವಳ ತಲೆಯೂ ನನ್ನ ತಲೆಯೂ ಆಗತಾನೆ ಡಿಕ್ಕಿಹೊಡೆದು ನೋವೇ ಆಗಿಲ್ಲವೆಂಬಂತೆ ನಟಿಸತೊಡಗಿದೆವು. ಓ ಸಾರಿ, ಪೆಟ್ಟಾಯ್ತಾ, ಸೋಶಿಯಾಲಜಿ ನೋಟ್ಸ್ ಬರೀಬೇಕಿತ್ತು ಅದಕ್ಕೆ ತೀರಾ ಅರ್ಜೆಂಟಾಗಿ ಬಂದೆ ಹೀಗಾಯ್ತು ಸಾರಿ ಎಂದಳು

ಕೊನೆಗೆ ನಾನು ಸುಮ್ಮನೆ ಹೋಗಿ ನನ್ನ ಜಾಗದಲ್ಲಿ ಕೂತೆ. ನಿನ್ನೆ ಸಂಜೆ ಕೊಂಡುತಂದ ಹೃದಯಗಳಿಂದ ತುಂಬಿಹೋದ ಸುಧಾ ಪತ್ರಿಕೆಯನ್ನು ತೆಗೆದು ಟೇಬಲ್ಲಿನ ಮೇಲೆ ಮೆಲೆ ಇಟ್ಟು ನಿಧಾನವಾಗಿ ಡೈರಿಮಿಲ್ಕ್ ಚಾಕಲೇಟ್ ತೆಗೆದೆ. ಅಷ್ಟರಲ್ಲೆ ಎಲ್ಲಿದ್ದಳೋ ರಾಣಿ ಹಿಂಹಿಮದಿನಿಂದ ಬಂದು ತಟ್ಟನೆ ಚಾಕಲೇಟ್ ಕದ್ದು ಓಡಿಹೋದಳು. ನಾನು ರೀ ರೀ ಎಂದು ಕೂಗಿದೆ. ರಾಣಿ ಕೈಗೆ ಸಿಗಲೆ ಇಲ್ಲ, ತರಗತಿಗಳು ಮುಗಿದವು. ಮನೆಗೆ ಹಿಂತಿರುಗುತ್ತಿರುವಾಗ ಕೊನೆಗೂ ಒಂದು ಥ್ಯಾಂಕ್ಸ್ ಹೇಳಿ ಸರಿಯಾದ ಅನುಕ್ರಮದಲ್ಲಿ ಡೈರಿಮಿಲ್ಕ್ ನೀಡಲಾಗಲಿಲ್ಲವಲ್ಲ ಎಂಬ ಬೇಸರದಿಂಧ ನಡೆಯುತ್ತಾ ಹೊರಟೆ. ಅದೇಗೆ ನನ್ನ ಬೇಸರದ ಮುಸುಡಿ ಆಕೆಗೆ ಕಂಡಿತೋ ಏನೋ ‘ಏನಾಯ್ತು ? ಪ್ರಸಾದ್’ ಅಂತ ರಾಣಿ ವಿಚಾರಿಸಿದಳು…..’ನಾನು ಚಾಕ್ಲೇಟ್’ , … ಎಂದಷ್ಟೇ ಉದ್ಗಾರ ತೆಗೆದೆ,  ಆಕೆಗೆ ಎಲ್ಲಿತ್ತೋ ಸಿಟ್ಟು ಬ್ಯಾಗಿನಿಂದ ಆ ಚಾಕಲೇಟ್ ತೆಗೆದು ನನ್ನ ಮುಂದೆ ತಟ್ಟನೆ ಬಿಸಾಡಿ ಕೋಪಿಸಿಕೊಂಡು ಹೋಗಿಯೆ ಬಿಟ್ಟಳು., ಆಕೆ ನೀನು ಇನ್ನಾರಿಗೋ ತಂದಿರುವೆಯಾ ಅಂದುಕೊಂಡು ಕೋಪಗೊಂಡು ಹಾಗೆ ಮಾಡಿದಳೋ. ಅಥವಾ ಚಾಕಲೆಟು ಕೇಳಿದ್ದೇ ತಪ್ಪೋ… ನನಗೂ ಸರಿಯಾಗಿ ತಿಳಿಯಲಿಲ್ಲ,.. ನಮ್ಮಿಬ್ಬರ  ರಕ್ತಚರಿತ್ರೆ ಅಂದೇ ಕೊನೆಗೊಂಡಿತು.

ಆದರೆ ಅದೇ ಚರಿತ್ರೆ ಸುಮಾರು ವರ್ಷಗಳ ನಂತರ ನನಗೆ ನೆನಪು ಮಾಡಿದ್ದು ಮೈಸೂರಿನ ವೋಲ್ವೋ ಬಸ್ಸಿನಲ್ಲಿ … ಮುಂದಿನ ನಿಲ್ದಾಣ ‘ಜಾಖಿ ಕ್ವಾಟ್ರಸ್”…. ಎಂಬ ಆ ಸುಮಧುರ ಹೆಣ್ಣುಧ್ವನಿ. ಆ ಧ್ವನಿ ಮತ್ತೆ ಈ ಚರಿತ್ರೆಯನ್ನ ನೆನಪಿಸಿಬಿಟ್ಟಿತು. ಆ ಧ್ವನಿಯನ್ನು ಮತ್ತೆ ಅದೇ ಬಸ್ ಹತ್ತಕೊಂಡು ರೆಕಾರ್ಡ್ ಮಾಡಿಕೊಂಡೆ. ಈಗಲೂ ಮೈಸೂರಿಗೆ ಹೋದಾಗಲೆಲ್ಲಾ ಆ ಧ್ವನಿಯನ್ನು ಕೇಳಿಸಿಕೊಂಡೇ ಬರುವವ. ನಿಜವಾಗಿಯೂ ಆ ಧ್ವನಿ ಆಕೆಯದೇ ಇರಬಹುದಾ ?… ಗೊತ್ತಿಲ್ಲ..

‍ಲೇಖಕರು avadhi

14 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading