ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಚಳಿಯಲ್ಲೊಂದು ಬೆಚ್ಚಗೆಯ ಗುನುಗು…' – ಸ್ಮಿತಾ ಅಮೃತರಾಜ್

ಸ್ಮಿತಾ ಅಮೃತರಾಜ್

ಮೆಲ್ಲಗೆ ಬರಲೋ ಬೇಡವೋ ಅಂತ ಅನುಮಾನಿಸುತ್ತಾ ಅಡಿಯಿಟ್ಟ ಚಳಿ ಈಗ ಮೆಲ್ಲ ಮೆಲ್ಲನೇ ಆವರಿಸಿಕೊಂಡು ಇದೀಗ ತನ್ನದೇ ಪಾಳಿ ಎಂಬಂತೆ ಅಧಿಪತ್ಯ ವಹಿಸಿಕೊಳ್ಳುವಂತಿದೆ.ಆದರೂ ಇದನ್ನು ಇದೇ ಚಳಿಗಾಲ ಎಂದು ಖಡಾ ಖಂಡಿತವಾಗಿ ಕಡ್ಡಿ ತುಂಡು ಮಾಡಿದಂತೆ ಹೇಳಲಾಗುವುದಿಲ್ಲ.ಯಾಕೆಂದರೆ ಎರಡು ದಿನ ಬೀಡು ಬಿಟ್ಟ ಚಳಿ ಕಚಗುಳಿ ಇಡುತ್ತಿದ್ದಂತೆಯೇ,ಎಲ್ಲಿಂದಲೋ ಯಾವುದೋ ಮಾಯಕದಲ್ಲಿ ಎಂಬಂತೆ ಉರಿಬಿಸಿಲು ವ್ಯಾಪಿಸಿ ಬಸವಳಿದು ಬೆವರು ಸುರಿಯಲು ತೊಡಗುತ್ತೆ.ಅಷ್ಟು ಹೊತ್ತಿಗಾಗಲೇ ಗುಡುಗು ಸಿಡಿಲು,ಜೋರಾದ ಮಳೆಯ ಆರ್ಭಟವೂ..ಈ ತಿಂಗಳಿಗೆ ಇಂತಹುದೇ ಕಾಲ ಅಂತ ವಗರ್ೀಕರಿಸಿ ಪರಿಗಣಿಸುವ ಕಾಲ ಯಾವತ್ತಿಗೋ ಮುಗಿದು ಹೋಗಿದೆ.ಅದೇನೇ ಇರಲಿ ಈಗ ಮತ್ತೆ ತಂಪು ತಂಪು ಎಲ್ಲಿಂದಲೋ ನಮಗಾಗಿಯೇ ಎಂಬಂತೆ ಬೀಸತೊಡಗಿದೆ.ಸಂಜೆ ಮತ್ತು ಮುಂಜಾವಗಳಲ್ಲಿ ಕೋರೈಸುವ ಚಳಿಯ ಪ್ರತಾಪ ಇರದಿದ್ದರೂ,ಮೈ ಕೈಗಳನ್ನ ತಂಪಾಗಿಸಿ ಕೊಂಚ ಅಲುಗಿಸಿಬಿಡುವುದಂತೂ ಹೌದು.ಕತ್ತಲಾಗುವಷ್ಟು ಹೊತ್ತು ಕಾಯಲು ತಾಳ್ಮೆಯೇ ಇಲ್ಲವೆಂಬಂತೆ ,ಸಂಜೆಯಾಗುತ್ತಲೇ ಇನ್ನು ಪುರುಸೊತ್ತೇ ಇಲ್ಲವೆಂಬಂತೆ ಆವರಿಸಿಬಿಡುವ ಇರುಳು.ಹೊತ್ತು ಏರುತ್ತಿದ್ದರೂ ಏಳಲು ಮನಸ್ಸಾಗದೆ, ಕಂಬಳಿಯೊಳಗೆ ಮೈಯೆಲ್ಲಾ ಹಿಡಿಯಾಗಿ ಹುದುಗಿಸಿಕೊಂಡು ಎಚ್ಚೆತ್ತುಕೊಳ್ಳಲು ಬಿಡದಂತೆ ಕಾಟ ಕೊಡುವ ಈ ಚಳಿ ದಿನದ ಕೆಲಸಗಳನ್ನೆಲ್ಲಾ ಹೇಗೆ ಏರುಪೇರು ಮಾಡಿಬಿಡುತ್ತದಲ್ಲಾ? ಅಂತ ಸುಮ್ಮಗೆ ಎಂಬಂತೆ ಮನಸ್ಸಿನೊಳಗೆ ಶಪಿಸಿಕೊಂಡು ಮತ್ತಷ್ಟೂ ಹೊದ್ದುಕೊಂಡು ಕನಸು ಕಾಣುತ್ತೇವೆ.
ಈಗಂತೂ ಬೆಳಗ್ಗೆ ಎದ್ದೊಡನೆ ಬಿಸಿ ಬಿಸಿ ಕಾಫಿ ಹೀರುತ್ತಾ ಚಳಿಕಾಯಿಸುವಾ ಅಂತ ಮನಸ್ಸಾದರೂ ಹೆಚ್ಚಿನ ಮನೆಗಳಲ್ಲಿ ಸೌದೆ ಒಲೆಗಳಿಲ್ಲ.ಅಡುಗೆ ಮಾಡಲು ಸೌದೆ ಒಲೆಯಿದ್ದರಂತೂ ಮುಗೀಯಿತು.ಎದ್ದು ಮುಖ ತೊಳೆದಾದ ಮೇಲೂ ಒಲೆಯ ಬುಡದಲ್ಲಿ ಸಣ್ಣಗೆ ಉರಿಯುವ ಬೆಂಕಿಯ ಮುಂದೆ ಚಳಿ ಕಾಯಿಸುತ್ತಾ ಕುಳಿತುಕೊಳ್ಳುವುದ್ದಕ್ಕಿಂತ ಪರಮ ಸುಖ ಮತ್ತೊಂದಿಲ್ಲ ಅನ್ನುವಷ್ಟರ ಮಟ್ಟಿಗೆ ಹಿತವೆನ್ನಿಸುತ್ತದೆ.ಈಗ ಒಲೆಯೇ ಇಲ್ಲದೆ ,ಉರಿಯೇ ಕಾಣದೆ ಯಾವುದೋ ಮಂತ್ರ ಸಿದ್ಧಿ ದಕ್ಕಿದವರ ಹಾಗೆ ಕ್ಷಣಾರ್ಧದಲ್ಲಿ ಅಡುಗೆ ಮಾಡುವಾಗ..ಎಳವೆಯಲ್ಲಿ ನಾವುಗಳು ಈ ಒಲೆಯ ಬುಡಕ್ಕಾಗಿ ಎಷ್ಟೊಂದು ಕಾದಾಟ ಮಾಡುತ್ತಿದ್ದೆವಲ್ಲಾ ಅಂತ ಅಂದುಕೊಂಡರೆ ಈಗ ನಗುವೂ ಬರುತ್ತದೆ..ಜತೆಗೆ ಸಣ್ಣದೊಂದು ವಿಷಾದದ ಸುಯಿಲು.

ಆ ಚಳಿಗೆ ಕಾಫಿ ಹೀರುವುದು,ಊಟ ಮಾಡುವುದು,ಓದಿದಂತೆ ನಟಿಸುತ್ತಾ ಸಣ್ಣಗೆ ತೂಕಡಿಸುವುದು ಎಲ್ಲವೂ ಒಲೆಯ ಬುಡದಲ್ಲಿ,ಅದೂ ಕದ್ದು ಮುಚ್ಚಿ ಆಗಾಗ್ಗೆ ದೊಡ್ಡವರ ಕಣ್ಣು ತಪ್ಪಿಸಿ.ಒಕ್ಕಲು ಕೆಲಸಗಳು, ಅಂದರೆ ಭತ್ತದ ಕಟಾವು,ರವಾನೆ,ಸಂಗ್ರಹಣೆ ಹೀಗೆ ಇನ್ನಿತರ ಹೊಲದ ಕೆಲಸಗಳು ಕೂಡ ಶುರುವಾಗುವುದು ಈ ಗದಗುಟ್ಟುವ ಚಳಿಗೇ.ಗದ್ದೆಯಿಂದ ಭತ್ತದ ಹೊರೆ ಹೊತ್ತು ತಂದು,ಭತ್ತ ಬಡಿದು ರಾಶಿ ಮಾಡುವಲ್ಲಿವರೆಗೆ ಹಿರಿಯರ ಜೊತೆ ಮಕ್ಕಳಿಗೂ ಕೂಡ ಬಿಡುವಿರದಷ್ಟು ಕೆಲಸ.ಆಗ ನಿಜಕ್ಕೂ ಚಳಿ ಹತ್ತಿರಕ್ಕೂ ಕೂಡ ಸುಳಿಯುವುದಿಲ್ಲ.ಆ ರಾತ್ರೆಯಿಡೀ ಮನೆ ಮಂದಿಗೆಲ್ಲಾ ಹುಲ್ಲನ್ನ ಒಟ್ಟಿ ಇಡುವ ಕೆಲಸ.ಅದಕ್ಕೆ ನಮ್ಮೂರ ಕಡೆ ಹುಲ್ಲು ಮುಂಡ ಅಂತ ಕರೆಯುವುದು ರೂಡಿ.ಆ ಸಮಯದಲ್ಲಿ ಮಾತ್ರ ಓದಿಕೊಳ್ಳಿ ಅಂತ ನಮ್ಮನ್ನ ಮನೆಯೊಳಗೆ ಕುಳ್ಳಿರಿಸಿ ಬಂದರೆ,ನಾವುಗಳು ಕುಳಿತಲ್ಲಿ ಕುಳಿತುಕೊಳ್ಳಲಾಗದೆ ಏನೋ ಕಳಕೊಂಡವರ ತರಹ ಚಡ ಪಡಿಸುತ್ತಾ,ಕೊಲೆ,ದೆವ್ವ ಭೂತ ಹೀಗೆ ಹೆದರಿಕೆಯ ಪದಪುಂಜಗಳ ನಾನಾ ಅಸ್ತ್ರಗಳನ್ನ ಪ್ರಯೋಗಿಸುತ್ತಾ ಮನೆಯಿಂದ ಮೆಲ್ಲಗೆ ಜಾರಿಕೊಳ್ಳುತ್ತಾ ಒಕ್ಕಲು ಕಳಕ್ಕೆ ಬಂದು ಸಾಮ್ರಾಜ್ಯ ಸ್ಥಾಪಿಸಿಬಿಡುತ್ತಿದ್ದೆವು.ಹಿರಿಯರೆಲ್ಲಾ ಅವರದೇ ತರಾತುರಿಯಲ್ಲಿರುವಾಗ ನಾವು ಮನೆ ಮಕ್ಕಳೆಲ್ಲಾ ಒಬ್ಬೊಬ್ಬರು ಒಂದೊಂದು ಕಡೆ ಸುತ್ತ ಹುಲ್ಲಿನ ಮೆದೆಯನ್ನು ಒಟ್ಟುತ್ತಾ ಮನೆಯಂತೆ ಮಾಡಿಕೊಂಡು,ಓದು ಬರಹವನ್ನೆಲ್ಲಾ ನಾಳೆಗೆ ಎಂಬಂತೆ ಜೋಪಾನವಾಗಿ ಚೀಲದೊಳಗಿಟ್ಟು,ಆ ಹುಲ್ಲಿನ ಮೆದೆಯೊಳಗೆ ಬೆಚ್ಚಗೆ ನಿದ್ದೆ ಹೋಗಿ ಬಿಡುತ್ತಿದ್ದೆವು.ಸುಖ ಎಂದರೆ ಇದೇ ಎಂದು ಅಸೂಯೆ ಪಟ್ಟುಕೊಳ್ಳುವ ಹಾಗೆ..ಅಂತಹ ಒಂದು ಗಳಿಗೆಯನ್ನು ಮೆಲುಕು ಹಾಕುವುದೇ ಇವತ್ತಿನ ಈ ಕ್ಷಣದ ಸುಖದ ಹಾಗೆ ಗೋಚರಿಸುತ್ತದೆ.ಆದರೆ ಕೆಲಸವೆಲ್ಲಾ ಮುಗಿದ ಬಳಿಕ ನಮ್ಮನ್ನು ಎಬ್ಬಿಸಿಕೊಂಡು ಹೋಗಿ ಬಚ್ಚಲು ಮನೆಯಲ್ಲಿ ನಿಲ್ಲಿಸಿದಾಗ ಮಾತ್ರ ಪಡುವ ಪಡಿಪಾಟಲು ಯಾರಿಗೆ ತಾನೇ ಬೇಕು? ಮೈಗೆ ಬಿಸಿ ನೀರು ತಾಕಿದ್ದೇ ತಡ ಒಣ ಹುಲ್ಲು ಮುಟ್ಟಿದ ಕಾರಣ ಮೈಯೆಲ್ಲಾ ತುರಿಸೋಕೆ ಶುರುವಾಗಿ ಆಗ ಮಾತ್ರ ನಿಂತಲ್ಲೇ ದೆವ್ವ ದೇವರುಗಳ ದರ್ಶನವಾದಂತಾಗಿ ನರ್ತನ ಶುರುವಾಗಿಬಿಡುತ್ತೆ. ತುರಿಸಿ ತುರಿಸಿ ಕೈಕಾಲುಗಳೆಲ್ಲಾ ಗೀರಿ ರಕ್ತ ಒಸರಲು ತೊಡಗಿದಾಗ , ನಾಳೆ ಮಾತ್ರ ಅತ್ತ ಕಡೆ ಸುಳಿಯುವುದೇ ಇಲ್ಲ,ಮನೆಯಲ್ಲೇ ಓದುತ್ತಾ ಕುಳಿತುಬಿಡಬೇಕೆಂದು ಸುಮ್ಮಗೆ ಒಂದು ಸುಳ್ಳು ಸುಳ್ಳೇ ನಿರ್ಧಾರಕ್ಕೆ ಬಂದು ಬಿಟ್ಟಿರುತ್ತೇವೆ.ಅದು ಆ ಕ್ಷಣದ ತೀರ್ಮಾನವಷ್ಟೆ.ಮತ್ತೆ ಎಂದಿನಂತೆ ಯಥಾಪ್ರಕಾರ ಮನಸ್ಸು ಬಣ್ಣ ಬದಲಾಯಿಸುವ ಗೋಸುಂಬೆ.
ಇನ್ನು ಬೆಳ್ಳಂಬೆಳಗ್ಗೆ ನದಿಯ ಕಡೆ ಹೋದರೆ ನದಿಯಂತೂ ಬಿಳಿಯ ಮಂಜಿನ ಹೊದಿಕೆಯನ್ನು ಹೊದ್ದು ಕೊಂಡು ಮಲಗಿದಂತೆ ಭಾಸವಾಗುತ್ತದೆ.ನೀರನ್ನು ಮುಟ್ಟುವುದು ಹೋಗಲಿ,ದೂರದಿಂದ ನೋಡುವಾಗಲೇ ನಡುಕ ಶುರುವಾಗುತ್ತೆ.ತಂಪು ತಂಪು ಮಂಜುಗೆಡ್ಡೆಯಂತಹ ನೀರಿನಲ್ಲಿ ಹೊತ್ತಾರೆಯೇ ಮುಳುಗು ಹಾಕಿ ಅಯ್ಯಪ್ಪ ಸ್ವಾಮಿಯ ಭಕ್ತರು ಧ್ಯಾನಿಸುತ್ತಾ ಸ್ವಾಮಿಯೇ ಶರಣಂ ಅಯ್ಯಪ್ಪ ಅಂತ ಕೂಗಿ ದೇವರನ್ನು ಕರೆಯುವಾಗ,ಅವರ ಬಗ್ಗೆ ಮತ್ತಷ್ಟು ಭಯ ಭಕ್ತಿ ಉಂಟಾಗಿ ,ಕಪ್ಪು ವಸ್ತ್ರಧಾರಿಗಳಾದ ಅವರನ್ನು ನೋಡುವಾಗ ಅವರೇ ದೇವರ ತದ್ರೂಪ ಅನ್ನುವಷ್ಟರ ಮಟ್ಟಿಗೆ ನಮ್ಮ ಮನಸ್ಸು ಪರವಶವಾಗಿ ಬಿಡುತ್ತಿತ್ತು.ಇನ್ನು ಶಾಲೆ ಬಿಟ್ಟು ಬರುವ ಸಂಜೆಯ ಹೊತ್ತಿನಲ್ಲಿ ನಮಗಾಗಿಯೇ ಕಾಯುತ್ತಾ ಹಾರುತ್ತಿದ್ದವೇನೋ ಎಂಬಂತೆ ಬಯಲ ತುಂಬಾ ಝೇಂಕರಿಸುತ್ತಾ ದುಂಬಿಗಳೆಲ್ಲಾ ಮುತ್ತಿಡುವಷ್ಟು ಪಕ್ಕಕ್ಕೆ ಬಂದು ಹಾರಾಡುತ್ತಿದ್ದವು.ಕೈಗೆ ಸಿಕ್ಕ ಸಿಕ್ಕ ದುಂಬಿಗಳಿಗೆಲ್ಲಾ ಬಾಲದ ತುದಿಗೆ ದಾರ ಕಟ್ಟಿ ಹಾರಿಸುವಾಗ ಸಿಕ್ಕಾಪಟ್ಟೆ ಮಜವಾಗುತ್ತಿತ್ತು.ಈಗ ನೆನೆಸಿಕೊಂಡಾಗಲೆಲ್ಲಾ ಅಯ್ಯೋ! ಅನ್ನಿಸಿ ಮನಸ್ಸು ಹನಿಗಣ್ಣಾಗಿಬಿಡುತ್ತದೆ. ಆ ಬದಿಯ ಮರ ತನ್ನದು ಈ ಬದಿಯ ಮರ ನಿನ್ನದು ಎಂದು ಮಾತಾಡಿಕೊಂಡು ಬಂದು ಕೂಡುವಂತೆ ಕೂರುತ್ತಿದ್ದ ಗಿಳಿ ಚೋರೆ ಹಕ್ಕಿಗಳು ಈಗ ಎಲ್ಲಿಗೆ ಹೋಗಿರುವರೆಂದು ಯಾರಿಗೂ ಸುಳಿವಿಲ್ಲ.ಪಚ್ಚೆ ಪೈರಿಲ್ಲದ ಗದ್ದೆ ತುಂಬಾ ವಾಣಿಜ್ಯ ಕೃಷಿ ಮೇಳೈಸಿ ,ಇದ್ಯಾವುದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಿರ್ಲಿಪ್ತವಾಗಿ ನೋಡುತ್ತಿದೆ. ಹೊಳೆಯ ದಂಡೆಯ ಬದಿಯ ಎರಡು ಮರಗಳು ಮಾತ್ರ ಮೂಕವಾಗಿ ಆ ಹಕ್ಕಿಗಳ ಕಲರವ ಕೇಳಲಿಕ್ಕಾಗಿಯೇ ಕಾಯುತ್ತಿರುವವೋ ಎಂಬಂತೆ ಚಿಗುರು ಹೊದ್ದುಕ್ಕೊಂಡು ರೆಂಬೆ ಕೊಂಬೆಗಳನ್ನು ಗಲ ಗಲ ಬೀಸಿಕೊಂಡು ಇನ್ನೂ ಜೀವಂತವಾಗಿದೆ.
ಈ ಹೊತ್ತಲ್ಲಿ ತಣ್ಣನೆ ಗಾಳಿ ಮೆಲ್ಲಗೆ ಬೀಸುತ್ತಾ ಚಳಿಗಾಲ ಬಂದದ್ದಕ್ಕೆ ಸಾಕ್ಷಿ ಹೇಳುತ್ತಿದೆ.ಒಂದೆರಡು ದುಂಬಿಗಳು ಏನನ್ನೋ ಹುಡುಕುತ್ತಾ ಅಂಗಳದ ತುಂಬೆಲ್ಲಾ ಸದ್ದಿಲ್ಲದೆ ಹಾರಾಡುತ್ತಿವೆ. ಮನಸ್ಸು ತುಂಬಿ ಬಂದು ದುಂಬಿ ಜೊತೆಗೇ ಹಾರುತ್ತಿದೆ. ಗದ್ದೆ, ಬಯಲು,ನದಿ,ಹುಲ್ಲಿನ ಮೆದೆ,ಹಕ್ಕಿ ಕುಳಿತ ಮರದ ಸುತ್ತಾ ಗಿರಕಿ ಹೊಡೆಯುತ್ತಿದೆ.ತಣ್ಣಗೆ ಚಳಿ ಗಾಳಿ ಕಾಲಿಗೆ ಅಡರುತ್ತಿದ್ದರೂ ,ಮನಸ್ಸು ಮಾತ್ರ ಹಿತವಾಗಿ ಗುನುಗುತ್ತಿದೆ.ನೆನಪುಗಳಿಗೆ ಉಯ್ಯಾಲೆ ಕಟ್ಟಿ ಜೀಕಿಸಿದ ಚಳಿಗೊಂದು ಬೆಚ್ಚಗೆಯ ಥ್ಯಾಂಕ್ಸ್ ಈ ಹೊತ್ತಲ್ಲಿ ಕಂಬಳಿಯೊಳಗಿನಿಂದ.
 

‍ಲೇಖಕರು G

29 November, 2014

4 Comments

  1. ಅಕ್ಕಿಮಂಗಲ ಮಂಜುನಾಥ

    ಬೆಳಿಗ್ಗೆ ಗಡ ಗಡ ನಡುಗುತ್ತ ಓದಿಕೊಂಡೆ.ಬೆಚ್ಚಗಾಯಿತು.

  2. mmshaik

    uttama niruupaNe..smita.

  3. vasudeva nadig

    illi naanu iro orai u.p li namma maneye haalinava ‘sardhi abhi thak shuru nahi hua! dhana paan naaasha ho raha hein'(chali innu aarambha aagilla belhe kalhu ella naasha agtaa ide) antha idda..naanu haaku haakisikollhuttaa nadugutta idde! avanu saada t shirt dharisi bevaruttidda!

  4. Anand Rugvedi

    ಕಥನಾತ್ಮಕವಾದ ನಿರೂಪಣೆ ತನ್ನ ವಿವರಗಳಲ್ಲಿ ಛಳಿಯ ವಿವಿಧತೆ ಮತ್ತು ಕಾವು ಪಡೆವ ತನ್ಮಯತೆಯನ್ನು ಅರ್ಥಪೂರ್ಣವಾಗಿ ಮಂಡಿಸಿದೆ. ಸ್ಮಿತಾ ಅವರ ಬರಹ ತನ್ನ ಎಂದಿನ ಲವಲವಿಕೆ ಮತ್ತು ಅತಿ ಭಾರವಿಲ್ಲದ ಹಗುರತೆಯಲ್ಲಿ ಮನ ಸೆಳೆಯುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading