ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಆಗಿನ್ನೂ ಸೂರ್ಯನಿಗೆ ಬೆಳಗಾಗಿ ಎರಡು ತಾಸು ಕಳೆದಿದ್ದವು. ಆದರೆ ಅಲ್ಲಿದ್ದ ಜಗತ್ತು ಮಾತ್ರ ಮೆಲ್ಲಗೆ ತನ್ನ ಹೊದಿಕೆಯೆಡೆಯಿಂದ ಪಿಳಿಪಿಳಿ ಕಣ್ಣು ಬಿಡುತ್ತಿತ್ತಷ್ಟೆ. ಒಂದು ಹತ್ತಿಪ್ಪತ್ತು ಅಡಿ ಆಚೆಗೆ ಏನು ನಡೆಯುತ್ತಿದೆ ಎಂದು ಬರಿಗಣ್ಣಿಗೆ ಕಂಡರೆ ಅದೇ ದೊಡ್ಡ ಪುಣ್ಯ. ಅಷ್ಟು ಮಂಜು ಹೊದ್ದ ಚಳಿಚಳಿ ಬೆಳಗಿನಲ್ಲಿ ನಾನಂತೂ ಸೂರ್ಯನ ಜೊತೆಗೇ ಏಳಲು ಪ್ರಯತ್ನಿಸಿ ಗಂಗೆಯುದ್ದಕ್ಕೂ ಕ್ಯಾಮೆರಾ ಹಿಡಿದು ನಡೆದಾಡಿ ಒಂದಿಷ್ಟು ಚಿತ್ರಗಳನ್ನೂ, ಅವುಗಳ ಭಾವವನ್ನೂ ಒಳಗಿಳಿಸಿಕೊಂಡು ರಸ್ತೆಗಿಳಿದಿದ್ದೆ. ನನ್ನಂತೆ ವಾರಣಾಸಿಯ ಅಷ್ಟೂ ಮಂದಿ ಮೈಚಳಿ ಬಿಟ್ಟು ನಾಲ್ಕು ಗೋಡೆಯಿಂದಾಚೆ ಬಂದಂತಿತ್ತು.

ಚಳಿಯೂ ಕೂಡಾ ಹೀಗೆ ಭರ್ಜರಿ ಚುರುಕಾಗಿರುತ್ತದೆಯೆಂದು ಮೊದಲ ಬಾರಿ ಕಂಡದ್ದು ವಾರಣಾಸಿಯಲ್ಲೇ. ಸಾಮಾನ್ಯವಾಗಿ ಚಳಿಯೂರುಗಳು ಮೈಮುರಿದು ಆಕಳಿಸಿ ಬೆಳಗೆ ಏಳುವುದೇ ಸೂರ್ಯ ತಲೆ ಮೇಲೆ ನಿಂತಾಗ. ಹಾಗಿದ್ದಲ್ಲಿ ವಾರಣಾಸಿಯ ಚಳಿ-ಬೆಳಗು ನೋಡಿ ನನಗೆ ಆಶ್ಚರ್ಯವೂ ಆನಂದವೂ ಜೊತೆಗೇ ಆಗಿತ್ತು.

ನನಗದು ಅಲ್ಲಿನ ಮೂರನೇ ಬೆಳಗಾಗಿತ್ತು. ಮೊದಲೆರಡು ಬೆಳಗಲ್ಲೂ ಹೀಗೇ ಸೂರ್ಯನ ಜೊತೆಗೇ ಎದ್ದರೂ, ಸೂರ್ಯ ಮಾತ್ರ ಗಂಗೆಯ ಮೇಲೆ ಹೊಂಬಣ್ಣ ಚೆಲ್ಲಿರಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಆ ದಿನವೂ ಎದ್ದುಬಿಟ್ಟಿದ್ದೆ. ಆ ದಿನವೂ ಗಂಗೆ ಮಾತ್ರ ಸೂರ್ಯನನ್ನು ಹತ್ತಿರವೂ ಬಿಟ್ಟುಕೊಳ್ಳದೆ ಚಳಿಗಾಲದ ಮಬ್ಬಿನಲ್ಲಿ ಇನ್ನೂ ಬೆಳ್ಳಗಾಗಿದ್ದಳು.

ಒಂದಿಷ್ಟು ಜನ ಚಳಿಯಲ್ಲಿ ನಡುಗುತ್ತಾ ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮಣಿಕರ್ಣಿಕಾದಲ್ಲಿ ಈ ಜಗತ್ತು ಸಾಕೆಂದು ಬಿಟ್ಟುಹೋದವರ ಕಳಿಸಲು ಒಂದಿಷ್ಟು ಮಂದಿ ನೆರೆದಿದ್ದರು. ಕೆಲವರು ಈ ಜಗತ್ತೇ ಇಷ್ಟೇ ಎಂಬ ವೈರಾಗ್ಯದಿಂದ ಗಂಗೆ ನೋಡುತ್ತಾ ಕಾವಿಯುಟ್ಟು ನಾಮ ತೊಟ್ಟು ಜುಟ್ಟು ಬಿಟ್ಟು ಕೂತಿದ್ದರು.

ಒಬ್ಬೊಬ್ಬರ ಮುಖಭಾವ ಒಂದೊಂದು. ಇದ್ಯಾವುದರ ಪರಿವೆಯೇ ಇಲ್ಲದಂತೆ, ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂಬಂತೆ, ಬಿಸಿ ಬಿಸಿ ಚಹಾವನ್ನು ನೇತಾಡಿಸಿಕೊಂಡು ಚಾಯ್‌ ಚಾಯ್‌ ಎಂದು ತಿರುಗುವವರೂ, ಈ ಮಬ್ಬಿನಲ್ಲೂ ಗಂಗೆ ದಾಟಿಸುತ್ತೇವೆ ಎಂದು ದೋಣಿಯತ್ತ ಕರೆಯುವವರೂ, ವಿಶ್ವನಾಥನ ದರ್ಶನ ಮಾಡಿಸುತ್ತೇವೆಂದು ಹಿಂದೆ ಹಿಂದೆ ಬರುವವರೂ, ದಾನ ಮಾಡಿರೆಂದು ಕೈಚಾಚಿ ಕೂತವರ ಸಂಖ್ಯೆಯೂ ದೊಡ್ಡದಿತ್ತು. ಬಿಸಿ ಬಿಸಿ ಚಹಾ ಹೊಟ್ಟೆಗಿಳಿಸಿ ಚಳಿ ಕಡಿಮೆ ಮಾಡಿಕೊಳ್ಳಲು ಹೆಣಗುವವರಿಂದಾಗಿ ಆ ಇಡೀ ಘಾಟಿನಲ್ಲಿ ಚಳಿಯ ಸೌಂದರ್ಯ ಇನ್ನೂ ಇಮ್ಮಡಿಗೊಂಡಿತ್ತು.

ಇಂತಹ ಆ ಬೆಳಗಿನಲ್ಲಿ, ನಾನು ಮಾತ್ರ ಬೇಸಗೆಯಲ್ಲಿ ಇಲ್ಲಿಗೆ ಮತ್ತೊಮ್ಮೆ ಬರಬೇಕು, ಗಂಗೆಯನ್ನು ಹೊಂಬಣ್ಣದಲ್ಲಿ ನೋಡಲು ಎಂದು ಲೆಕ್ಕಾಚಾರ ಹಾಕುತ್ತಾ ಸಿಗದ ಫೋಟೋಗೆ ಮುಖ ಸಪ್ಪಗೆ ಮಾಡಿಕೊಂಡು ದಶಾಶ್ವಮೇಧ ಘಾಟಿನ ಆ ಗಲ್ಲಿಯುದ್ದಕ್ಕೂ ನಡೆದು, ಅಲ್ಲೇ ಪುಟ್ಟ ಪುಟ್ಟ ಅಂಗಡಿಗಳಲ್ಲಿ ರೆಡಿಯಾಗುತ್ತಿದ್ದ ಇಡ್ಲಿಯ ಹಬೆಯನ್ನೂ, ಎಣ್ಣೆಯಲ್ಲಿ ಬೇಯುತ್ತಿದ್ದ ಪೂರಿಯ ಘಮವನ್ನು ಒಳಗೆಳೆದುಕೊಳ್ಳುತ್ತಾ ಇನ್ನೇನು ಮುಖ್ಯ ರಸ್ತೆಗೆ ಬರಬೇಕು ಅನ್ನುವಷ್ಟರಲ್ಲಿ ಆತ ರಸ್ತೆಬದಿಯಲ್ಲಿ ಒಂದು ದೊಡ್ಡ ಪಾತ್ರೆಯಲ್ಲಿ ಅದೇನೋ ತುಂಬಿಸಿಕೊಂಡು ನಿಂತಿದ್ದು ಕಾಣಿಸಿತು.

ಆಗಷ್ಟೇ ಸ್ವಲ್ಪ ಹೊತ್ತಿಗೆ ಮುಂಚೆ ಆತನ ಎಡಕ್ಕಿದ್ದ ಸಣ್ಣ ಹುಡುಗ ಅದೇ ರಸ್ತೆಬದಿಯಲ್ಲಿ ನಿಂತು ಮಾಡಿಕೊಡುತ್ತಿದ್ದ ಬಿಸಿ ಬಿಸಿ ಮಟಕಾ ಚಹಾ ಹೊಟ್ಟೆಗಿಳಿಸಿಕೊಂಡಾಗಿತ್ತಷ್ಟೆ. ಈಗ ಆ ಬಿಸಿಯನ್ನು ಮತ್ತೆ ತಣ್ಣಗಾಗಿಸಲೋ ಎಂಬಂತೆ ಇದು ಕಣ್ಣಿಗೆ ಬಿತ್ತು.

ಹೌದಲ್ಲಾ! ಇದೇ ನಿಮಿಷ್!‌ ನೋಡಿದಾಕ್ಷಣ ನನಗೆ ಗೊತ್ತಾಗಿಬಿಟ್ಟಿತ್ತು. ಚಳಿಗಾಲದಲ್ಲಿ ಮಾತ್ರ ಸಿಗುವ ವಾರಣಾಸಿ ಸ್ಪೆಷಲ್!‌ ನಿಮಿಷದಲ್ಲಿ ಬಾಯೊಳಗೆ ಕರಗಿಬಿಡುವ ತಿನಿಸಿನ ಬಗ್ಗೆ ಓದಿ ಕೇಳಿ ಗೊತ್ತಿತ್ತು. ತಿಂದಿರಲಿಲ್ಲ. ಮುನ್ನಾ ದಿನ ರಾತ್ರಿ ಅಲ್ಲೇ ಹತ್ತಿರದಲ್ಲಿ ಚಾಟ್‌ ತಿನ್ನುತ್ತಿದ್ದಾಗ ನಿಮಿಷ್‌ ಬೇಕಿದ್ದರೆ ಬೆಳಗ್ಗೆ ಬನ್ನಿ. ಬೆಳಗ್ಗೆ ಅದನ್ನು ತಿಂದರೆ ಫ್ರೆಶ್ಶಾಗಿರುತ್ತದೆ.

ರಾತ್ರಿ ಎಲ್ಲ ತಿನ್ನೋದಕ್ಕೆ ಹೋಗಬೇಡಿ ಎಂದು ಪ್ರಾಮಾಣಿಕ ಸಲಹೆ ಕೊಟ್ಟಿದ್ದ. ಹಾಗಾಗಿ ಮಾರನೇ ದಿನ ಬೆಳಗ್ಗೆ ತಿನ್ನಬೇಕು ಅಂದುಕೊಂಡಿದ್ದೆ. ಇದು ʻನಿಮಿಷ್‌ ಅಲ್ವಾ?ʼ ಎಂದೆ. ಆತ ʻಮಲೈಯೋ ಮಲೈ. ಬನಾರಸ್‌ ಸ್ಪೆಷಲ್.‌ ಟೇಸ್ಟ್‌ ಮಾಡ್ತೀರಾ?ʼ ಅಂದ. ಅದು ನಿಮಿಷದ ಇನ್ನೊಂದು ಹೆಸರು. ಹೊರಗಡೆ ಜನರಿಗಿದು ನಿಮಿಷವಾಗಿ ಗೊತ್ತಿದ್ದರೆ, ಲೋಕಲ್‌ ಮಂದಿಗಿದು ಮಲೈಯೋ ಮಲೈ. ಲಖನೌನಲ್ಲಿ ನಿಮಿಷ್‌, ಕಾನ್‌ಪುರದಲ್ಲಿ ಮಲೈ ಮಖ್ಖನ್‌, ದೆಹಲಿ ಮಂದಿಗಿದು ದೌಲತ್‌ ಕೀ ಚಾಟ್!‌

ಮಟ್ಕಾದಲ್ಲಿ ಕೆಳಗಿನ ಕಾಲು ಭಾಗ ಕೇಸರಿಯುಕ್ತ ಹಾಲು ಸುರಿದು ಅದರ ಮೇಲೆ ಮೋಡದ ಹಾಗೆ ಮುಕ್ಕಾಲು ಭಾಗ ತುಂಬಿಸಿ, ಪಿಸ್ತಾ ಬಾದಾಮಿ ಉದುರಿಸಿ, ಒಂದು ಚಮಚ ಮೇಲಿಟ್ಟು ಕೊಡುತ್ತಾ ೩೦ ರುಪಾಯಿ ಎಂದ ಆತನ ಹೆಸರು ಚಂದೀಲಾಲ್‌ ಯಾದವ್. ನಾನಿದನ್ನು ಬಾಯಿಗಿಡುವಷ್ಟರಲ್ಲಿ ಇನ್ನೂ ಮೂರ್ನಾಲ್ಕು ಮಂದಿ ಗುಂಪುಗೂಡಿದರು. ಇದು ನೋಡಿ, ಮಧ್ಯಾಹ್ನವಾಗುವುದರೊಳಗೆ ಇಷ್ಟೂ ಮಲೈಯೋ ಖಾಲಿಯಾಗಿಬಿಡುತ್ತದೆ ಎಂದ. ನನಗೆ ಆಶ್ಚರ್ಯ. ಇದನ್ನು ಹೇಗೆ ಮಾಡ್ತೀರಿ ಎಂದೆ.

ಮೊಸರಿನಿಂದ ಮಜ್ಜಿಗೆ ಮಾಡಲು ಕಡೆಯೋ ಹಾಗೆ ಸಂಜೆಯ ಹಾಲನ್ನು ಚೆನ್ನಾಗಿ ಕಡೆದು ಅದರಲ್ಲಿ ಮೇಲೆ ಬರುವ ನೊರೆಯಂಥ ಮಲೈಯನ್ನು ಸಂಗ್ರಹಿಸುತ್ತೇವೆ. ಇದಕ್ಕಾಗಿ ರಾತ್ರಿಯಿಡೀ ಹಾಲನ್ನು ಮನೆಯ ಛಾವಣಿಯ ಮೇಲೆ ಬಟ್ಟೆ ಬಿಗಿದಿಟ್ಟು, ಬೆಳಗಿನ ಜಾವ ಬೇಗ ಎದ್ದು ಹೀಗೆ ಮಾಡುತ್ತೇವೆ. ಚಳಿಗಾಲದ ರಾತ್ರಿಗಳಲ್ಲಿ ಮಾತ್ರ ಇದು ಸಾಧ್ಯ. ಬೇರೆ ಸೀಸನ್‌ನಲ್ಲಿ ಈ ಹದ ಬರೋದಿಲ್ಲ. ನವೆಂಬರ್‌ ಅರ್ಧದಿಂದ ಫೆಬ್ರವರಿ ಅರ್ಧದವರೆಗೆ ಮಾತ್ರ ಮೂರು ತಿಂಗಳು ಇದರ ಸೀಸನ್.‌ ಈ ಮೂರು ತಿಂಗಳು ಬಿಟ್ಟರೆ, ಯಾವತ್ತೂ ಇದು ಸಿಗಲ್ಲ ಎಂದ. ಮಾತಿನ ಮಧ್ಯೆ ಅರ್ಧ ಖಾಲಿಯಾಗಿದ್ದ ನನ್ನ ಮಟ್ಕಾ ನೋಡಿ, ಇನ್ನೂ ಹಾಕಲಾ ಎಂದ.

ನೋಡಿ, ನಾವು ಇದನ್ನು ಮಾಡೋದು ಸಾಂಪ್ರದಾಯಿಕ ಶೈಲಿಯಲ್ಲಿ. ನಿಮಗೆ ಇಲ್ಲಿ ಹೆಚ್ಚಿನ ಎಲ್ಲ ಪ್ರಸಿದ್ಧ ಜಾಗಗಳಲ್ಲಿ ಇದು ಸಿಗುತ್ತೆ. ಆದ್ರೆ ಅವರೆಲ್ಲ ಇದಕ್ಕೆಂದೇ ಇರೋ ಯಂತ್ರದ ಸಹಾಯದಿಂದ ಮಾಡ್ತಾರೆ. ಕೈಯಲ್ಲಿ ಮಾಡೋರು ಬಹಳ ಕಡಿಮೆ. ಬಹಳ ವರ್ಷಗಳಿಂದ ಇದನ್ನು ನಾವು ಮಾಡ್ತಾ ಬಂದಿರೋದ್ರಿಂದ ನಾವು ಮಾತ್ರ ಅದೇ ಶೈಲಿ ಪಾಲಿಸ್ಕೊಂಡು ಬಂದಿದ್ದೇವೆ ಎಂದ.

ʻಅದ್ಸರಿ. ಚಳಿಗಾಲದಲ್ಲಿ ಮೂರು ತಿಂಗಳು ಮಾತ್ರ ಈ ನಿಮಿಷ್‌ ಇರೋದು ಅಂದ್ರಲ್ಲಾ? ಬೇರೆ ತಿಂಗಳುಗಳಲ್ಲಿ ಹೊಟ್ಟೆಪಾಡಿಗೇನು ಮಾಡ್ತೀರಿ?ʼ ಎಂದೆ. ʻಏನೂ ಮಾಡದಿದ್ರೂ ನಡೀತದೆʼ ಎಂದು ನಕ್ಕ. ನನಗೋ ಫುಲ್‌ ಶಾಕು. ʻಏನೂ ಮಾಡೋದಿಲ್ವಾ? ನಿಜಕ್ಕೂ?ʼ ಎಂದೆ. ʻಮೂರು ತಿಂಗಳು ನಾನು ಇದನ್ನು ಹಿಡಿದು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮಾರಾಟ ಮಾಡಿದರೆ ಸಾಕು.

ನಮ್ಮ ಕುಟುಂಬಕ್ಕೆ ವರ್ಷದ ಖರ್ಚಿಗೆ ಸಾಕಾಗುತ್ತದೆʼ ಎಂದ. ʻಮಿಕ್ಕಂತೆ ಹಾಲು ಮಾರಾಟ ಇದ್ದೇ ಇರುತ್ತದೆ. ಸಣ್ಣ ಪುಟ್ಟ ತರಕಾರಿ ಮಾರೋ ಕೆಲಸ ಸುಮ್ಮನೆ ಕೆಲವೊಮ್ಮೆ ಮಾಡ್ತೇನೆ ಬಿಟ್ಟರೆ, ಮಹಾ ತಲೆಕೆಡಿಸಿಕೊಂಡು ಮಾಡುವಂಥಾ ತೊಂದರೆಯೇನೂ ನನಗೆ ಇರೋದಿಲ್ಲʼ ಎಂದ. ಒಂದು ಕ್ಷಣ ಈ ಯಾದವನ ಉತ್ತರಕ್ಕೆ ದಂಗಾಗಿ ಹಾಗೆಯೇ ನಿಂತಿದ್ದೆ.

ಇವಿಷ್ಟೆಲ್ಲ ನೆನಪಾಗಲು ಕಾರಣವೂ ಇದೆ. ದೆಹಲಿಗೆ ಬಂದು ಇಷ್ಟು ವರ್ಷಗಳಾದರೂ, ಅದ್ಯಾಕೋ ಈ ದೌಲತ್‌ ಕೀ ಚಾಟ್‌ನ ದೌಲತ್‌ ನೋಡುವ ಭಾಗ್ಯ ಬಂದಿರಲಿಲ್ಲ. ಮೊನ್ನೆ ಮೊನ್ನೆ ಪರಾಥಾ ಗಲಿಯಲ್ಲಿ ಅಡ್ಡಾಡುತ್ತಿದ್ದಾಗ, ಕಣ್ಣಿಗೆ ಬಿದ್ದ ಇದನ್ನು ಬಾಯಿಗಿಟ್ಟರೆ, ಬನಾರಸ್ಸಿನ ನಿಮಿಷಕ್ಕಿಂತ ಚೂರು ಭಿನ್ನ ಅನಿಸಿತು. ಈತ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಅದರ ಮೇಲೆ ಕೇಸರಿ ಬಾದಾಮಿ, ಪಿಸ್ತಾಗಳಲ್ಲದೆ, ಸಕ್ಕರೆ ಪುಡಿಯನ್ನೂ ಉದುರಿಸಿ ಕೊಟ್ಟಿದ್ದ. ಹಾಗಾಗಿ ದೆಹಲಿಯ ದೌಲತ್ತಿಗೆ ಸ್ವಲ್ಪ ದೌಲತ್ತು ಜಾಸ್ತಿಯೇ ಇದೆ ಅನಿಸಿತು.

ಹೆಸರೇ ಹೇಳುವಂತೆ ದೌಲತ್!‌ ಐಶ್ವರ್ಯದ ಸಂಕೇತ. ಅದನ್ನು ಮಾಡುವ ಅತ್ಯಂತ ಕಷ್ಟದಾಯಕ ಕ್ರಮ ಹಾಗೂ ಅದರ ಪ್ರತಿಫಲಕ್ಕಾಗಿಯೇ ಈ ಹೆಸರಂತೆ. ಕೆಲವರು ಇದು ಆಫ್ಘಾನಿಸ್ತಾನ್‌ ಮೂಲದ್ದೆಂದೂ, ಇನ್ನೂ ಕೆಲವರು ಇದರ ಮೂಲ ಗುಜರಾತೆಂದೂ ಇನ್ನೂ ಕೆಲವರು ಇದು ಲಖನೌನದ್ದೇ ಮೂಲ ತಿನಿಸೆಂದೂ ವಾದ ಮಾಡುತ್ತಾರೆ. ಆದರೆ ನಿಜವಾದ ಉತ್ತರ ಬಲ್ಲವರಿಲ್ಲ. ಕಾಲದಿಂದ ಕಾಲಕ್ಕೆ ಇದು ಬದಲಾಗುತ್ತಾ ಸಾಗಿದ್ದೂ ನಿಜವೇ. ಕೇಸರಿಯೂ ಇದರ ಜೊತೆಗೆ ಸೇರಿದ್ದು ಮೊಘಲರ ಕಾಲದಲ್ಲಿ ಎಂದೂ ಹೇಳುವವರಿದ್ದಾರೆ.

ಎಡೆಬಿಡದೆ ಸುರಿವ ಮಳೆಯಲ್ಲಿ ಗುಡುಗುಡು ನಡುಗಿಕೊಂಡು ಅಗ್ಗಿಷ್ಟಿಕೆಯ ಮುಂದೆ ಕೂತು ಚಳಿ ಕಾಯಿಸುತ್ತಾ, ಹಪ್ಪಳ ಸುಡುತ್ತಾ ಕರುಕುರುಂ ಕಳೆಯುವ ದಿನಗಳು ಪ್ರತಿ ವರ್ಷ ಬಂದೇ ಬರುತ್ತದೆ. ಈಗೆಲ್ಲ ಇಂಥ ದೃಶ್ಯಗಳು ಕಾಣುವುದು ಅಪರೂಪವಾದರೂ, ಮಳೆಗಾಲಕ್ಕೊಂದು ಅದರದ್ದೇ ಆದ ಘಮವಿದೆ. ಧೋ ಎಂದು ಸುರಿವ ಮಳೆಯನ್ನು ನೋಡುತ್ತಾ ಸುಮ್ಮನೆ ಜಗಲಿಯಲ್ಲಿ ಕೂರುವುದೂ ಒಂದು ಮಜಾ.

ಹೀಗೆ ಮಲೆನಾಡಿನ ಮಳೆಗಾಲವೆಂದರೆ ನಮಗೆ ಹೇಗೋ ಹಾಗೆಯೇ ಈ ಚಳಿಯೂರಗಳ ಚಳಿಗಾಲದ ಸುಗಂಧವೂ ಒಂಥರಾ ಹಿತವಾದದ್ದು. ಬೆಳಗೆದ್ದು ಹೀರುವ ಬಿಸಿಬಿಸಿ ಚಹಾದಿಂದ ಹಿಡಿದು ಕತ್ತಲಾದ ಮೇಲೆ ರಸ್ತೆಗಳಲ್ಲಿ ಅಡ್ಡಾಡಿ ತಿನ್ನುವ ಬಿಸಿಬಿಸಿ ಜಿಲೇಬಿವರೆಗೆ ಚಳಿಗಾಲವೆಂದರೆ ಸೊಗಸೋ ಸೊಗಸು. ಹಾಗಾಗಿ ಚಳಿಗಾಲವೇ ಒಂದು ದೌಲತ್‌ ಕೀ ಚಾಟ್!

‍ಲೇಖಕರು ರಾಧಿಕ ವಿಟ್ಲ

March 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: