ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಲನಶೀಲ ನಾಟಕ 'ಕರ್ವಾಲೋ'

ಶಶಿಕಾಂತ ಯಡಹಳ್ಳಿ

ಕನ್ನಡಿಗರ ಹೆಮ್ಮೆಯ ಪ್ರತಿಭಾವಂತ ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಬದುಕಿದ್ದರೆ ಈಗ 75 ವರ್ಷ ತುಂಬುತ್ತಿತ್ತು. ತೇಜಸ್ವಿಯವರ ಕಾದಂಬರಿ ‘ಕರ್ವಾಲೋ’ವನ್ನು ‘ರೂಪಾಂತರ’ ತಂಡವು ನಾಟಕವಾಗಿ ಅಭಿನಯಿಸುವ ಮೂಲಕ ಆ ಮಹಾಚೇತನಕ್ಕೆ ರಂಗನಮನವನ್ನು ಸಲ್ಲಿಸಿತು. ಕೆ ಎಸ್ ಡಿ ಎಲ್ ಚಂದ್ರುರವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಕರ್ವಾಲೋ ನೋಡುಗರ ಗಮನ ಸೆಳೆಯಿತು.
ಈ ಜಗ ಸೋಜಿಗದ ಜಾಗ,
ಅರಿತವರಿಲ್ಲ ಆಳ ಅಗಲ ಆಯಾ,
ಎಲ್ಲಾ ಕಣ್ಚಿತ್ತ ಮಾಯಾ…
ಬಸವರಾಜ ಸೂಳೇರಿಪಾಳ್ಯ ಬರೆದ ನಾಟಕದ ಈ ಶೀರ್ಶಿಕೆ ಗೀತೆ ‘ಕರ್ವಾಲೋ’ದ ಆಶಯವನ್ನು ಕಟ್ಟಿಕೊಡುವ ಮೂಲಕ ನಾಟಕದಾದ್ಯಂತ ಪ್ರತಿದ್ವನಿಸಿ ಕೇಳುಗರಿಗೆ ಖುಷಿ ಕೊಡುತ್ತದೆ. ಜೀವ ವಿಕಾಸದ ರಹಸ್ಯವೊಂದನ್ನು ಬೇಧಿಸಲು ವಿಜ್ಞಾನಿ ‘ಕರ್ವಾಲೋ’ ಮಾಡುವ ಪ್ರಯತ್ನ ಮತ್ತು ಪೂರಕವಾಗಿ ಹಲವು ದೃಶ್ಯಗಳು ರಂಗದ ಮೇಲೆ ಮೂಡುತ್ತಾ ಪ್ರೇಕ್ಷಕರಿಗೆ ಕಣ್ಚಿತ್ತ ಮಾಯೆಯನ್ನುಂಟು ಮಾಡುತ್ತವೆ.


ಈ ನಾಟಕದ ನಾಯಕ ವಿಜ್ಞಾನಿ ಕರ್ವಾಲೋ ಅಲ್ಲ, ಕಥೆಗಾರ ಪೂರ್ಣಚಂದ್ರರೂ ಅಲ್ಲ, ಕೇವಲ ಯಕ್ಕಶ್ಚಿತ್ ಎನ್ನಬಹುದಾದ ಹಳ್ಳಿಗಾಡಿನ ಮುಗ್ದ ಅಶಿಕ್ಷಿತ ಯುವಕ ‘ಮಂದಣ್ಣ. ಸಮಾಜದ ಕನಿಷ್ಟ ಪಾತ್ರಗಳಿಗೂ ಗರಿಷ್ಟ ಮಹತ್ವವನ್ನು ಕೊಟ್ಟು ಪಾತ್ರ ಪೋಷಿಸುವುದು ತೇಜಸ್ವಿಯವರ ಹಿರಿಮೆ. ಓದಿದವರಿಗಿಂತಾ, ಬುದ್ದಿವಂತ ಕಥೆಗಾರರಿಗಿಂತ, ವಿಜ್ಞಾನಿಗಳಿಗಿಂತ ಹೆಚ್ಚಿನ ಪ್ರಾಯೋಗಿಕ ಅನುಭವ ಇರುವ ಮಂದಣ್ಣ ‘ಕರ್ವಾಲೋ’ ನಾಟಕದ ಪ್ರಮುಖ ಪಾತ್ರವಾಗಿದ್ದಾನೆ. ಎಲ್ಲಾ ಜ್ಞಾನಕ್ಕಿಂತ ಜೀವನಾನುಭವ ಎನ್ನುವುದು ಬಹಳ ಮುಖ್ಯ ಎನ್ನುವುದನ್ನು ಮಂದಣ್ಣನ ಮೂಲಕ ಹೇಳಲು ತೇಜಸ್ವಿಯವರು ಪ್ರಯತ್ನಿಸಿದ್ದಾರೆ. ಮಂದಣ್ಣನನ್ನು ಪರಿಸರ ವಿಜ್ಞಾನಿ ಎಂದು ಘೋಷಿಸಿ ಸಮಾಜದಲ್ಲಿ ತುಚ್ಚೀಕರಣಗೊಂಡ ವ್ಯಕ್ತಿಯಲ್ಲೂ ಸಹ ಯಾವುದೋ ಒಂದು ಪ್ರತಿಭೆ ಅಂತರ್ಗತವಾಗಿ ಇರುತ್ತೆ ಎನ್ನುವುದು ತೇಜಸ್ವಿಯವರು ಸಮಾಜವನ್ನು ನೋಡುವ ಜನಪರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ.

ಕಗ್ಗಾಡಿನ ಹಳ್ಳಿಯ ಮುಗ್ದ ಮಂದಣ್ಣನಿಗೆ ಮದುವೆಯಾಗುವ ಬಯಕೆ. ಆತ ಪ್ರೀತಿಸಿದ ಹುಡುಗಿ ರಾಮಿಯ ತಂದೆ ಕೆಲಸವಿಲ್ಲದವನಿಗೆ ಮಗಳನ್ನು ಕೊಡಲು ನಿರಾಕರಿಸುತ್ತಾನೆ. ತನಗೆ ‘ಬೀ ಮ್ಯಾನ್’ ಕೆಲಸ ಕೊಡಿಸಲು ಕತೆಗಾರ ಪೂರ್ಣಚಂದ್ರ ಹಾಗೂ ಕೀಟವಿಜ್ಞಾನಿ ಕರ್ವಾಲೋರವರಿಗೆ ಮಂದಣ್ಣ ದುಂಬಾಲು ಬೀಳುತ್ತಾನೆ. ಅವರಿಬ್ಬರ ಮಧ್ಯಸ್ತಿಕೆಯಲ್ಲಿ ಕೊನೆಗೂ ಮಂದಣ್ಣನ ಮದುವೆಯಾಗುತ್ತದೆ. ಮಂದಣ್ಣನ ಮಾವನ ಮನೆಯಲ್ಲಿ ಇಟ್ಟಿದ್ದ ಜೇನು ಕೆಟ್ಟು ಕೊಳೆತು ಹುಳಿಯಾಗಿ ಹೆಂಡದಂತಾಗಿರುತ್ತದೆ. ಕಳ್ಳಬಟ್ಟಿ ಸಾರಾಯಿ ಆರೋಪದಲ್ಲಿ ಪೋಲಿಸರು ಮಂದಣ್ಣನನ್ನು ಬಂಧಿಸುತ್ತಾರೆ. ಹಾರುವ ಓತಿಯ ಹುಡಿಕಾಟದಲ್ಲಿದ್ದ ಕರ್ವಾಲೋ ಕೋರ್ಟ್ ಗೆ ಹೋಗಿ ಸಾಕ್ಷಿ ಹೇಳಿ ಮಂದಣ್ಣನನ್ನು ಬಿಡುಗಡೆಗೊಳಿಸುತ್ತಾರೆ. ಮಂದಣ್ಣ ನಾರ್ವೆ ಕಾಡಲ್ಲಿ ಕಂಡ ಜಗತ್ತಿನಿಂದಲೇ ಸರ್ವನಾಶವಾಗಿ ಹೋಗಿದೆ ಎಂದುಕೊಂಡ ಹಾರುವ ಓತಿ (ಓತಿಕ್ಯಾತ) ಯನ್ನು ಕಂಡುಹಿಡಿಯಲು ಕತೆಗಾರ, ಕಾರ್ವಲೋ ಮತ್ತಿತರರು ಕಾಡಿಗೆ ಹೋಗುತ್ತಾರೆ. ಕೊನೆಗೂ ಹಾರುವ ಓತಿಯನ್ನು ನೋಡಿ ಪುಳಕಿತರಾಗಿ ಸಂಭ್ರಮಿಸುತ್ತಾರೆ. ಕತೆಗಾರ, ಕಾವರ್ಾಲೋ ಮತ್ತು ಮಂದಣ್ಣ ಈ ಮೂವರೂ ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯ ಸಂಗತಿಗಳೇ ಈ ನಾಟಕದ ಕಥಾವಸ್ತುವಾಗಿದೆ.


ಮದುವೆಯಾಗಲು ಮುಗ್ದ ಮಂದಣ್ಣ ಪಡುವ ಪರದಾಟಗಳು, ಸಹಾಯ ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಕತೆಗಾರನ ತಳಮಳಗಳು, ಅಳಿವಿನ ಅಂಚಿನಲ್ಲಿರುವ ಅಪರೂಪದ ಜೀವರಾಶಿಗಳ ಸಂಶೋಧನೆಗೆ ತೊಡಗುವ ವಿಜ್ಞಾನಿ ಕರ್ವಾಲೋರ ಆತಂಕಗಳು ಮತ್ತು ಹಂದಿ ತಿನ್ನುವ ಆಸೆ ಹೊತ್ತು ಧರ್ಮನಿಂದನೆಗೆ ಹೆದರುವ ಸಾಬಿ ಪ್ಯಾರನ ಧರ್ಮಸಂಕಟಗಳನ್ನು ‘ಕರ್ವಾಲೋ’ ರಂಗ ಪ್ರಯೋಗ ಪ್ರೇಕ್ಷಕರ ಮುಂದೆ ವಿಡಂಬನಾತ್ಮಕವಾಗಿ ಅನಾವರಣ ಮಾಡುವಲ್ಲಿ ಯಶಸ್ವಿಯಾಗಿದ್ದು ನಿರ್ದೇಶಕರ ಶ್ರಮ ಸಾರ್ಥಕವಾಗಿದೆ. ಆನಿಮೇಶನ್ ತಂತ್ರಜ್ಞಾನ ಬಳಸಿ ಹಾರುವ ಓತಿಯನ್ನು ಸೃಷ್ಟಿಸಿ ಪ್ರೊಜೆಕ್ಟರ್ ಮೂಲಕ ಸೈಕ್ ಮೇಲೆ ಪ್ರದರ್ಶಿಸಿದ್ದು ನಾಟಕಕ್ಕೆ ವಿಶೇಷ ಮೆರುಗನ್ನು ಹಾಗೂ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭೂತಿಯನ್ನು ನೀಡುವಂತಿದೆ.

ಈ ಕರ್ವಾಲೋ ನಾಟಕ ಮೊದಲು ಪ್ರದರ್ಶನಗೊಂಡಿದ್ದು 2005, ಎಪ್ರಿಲ್ 25ರಂದು. ಕರಿಬಸಯ್ಯ, ಈಶ್ವರದಲ್, ಪ್ರಸನ್ನಕುಮಾರ ಮುಂತಾದವರು ಈ ನಾಟಕದಲ್ಲಿ ಅಮೋಘವಾಗಿ ಅಭಿನಯಿಸಿದ್ದರು. ರಂಗವಿನ್ಯಾಸವಂತೂ ಅದ್ಬುತವಾಗಿ ಮೂಡಿ ಬಂದಿತ್ತು. ಆದರೆ ಈಗ ಬಹುತೇಕ ಪಾತ್ರವರ್ಗ ಬದಲಾಗಿದೆ. ಒಂದಿಬ್ಬರನ್ನು ಹೊರತುಪಡಿಸಿ ಎಲ್ಲರೂ ಹೊಸ ಕಲಾವಿದರು ಪಾತ್ರವಾಗಿದ್ದಾರೆ. ರಂಗವಿನ್ಯಾಸ ಅಗತ್ಯಕ್ಕೆ ತಕ್ಕಷ್ಟೇ ಸರಳಗೊಂಡಿದೆ, ರಿಹರ್ಸಲ್ಸ ಕೊರತೆ ಕಂಡುಬರುತ್ತದೆ. ಸಂತೆ ಹೊತ್ತಿಗೆ ಮೂರು ಮೊಳ ನೇಯ್ದು ತಂದಂತೆ ಅವಸರವಸರದಲ್ಲಿ ಈ ನಾಟಕ ಮರುನಿರ್ಮಾಣಗೊಂಡಂತಿದೆ. ಯಾವ ಕೋನದಲ್ಲಿ ನೋಡಿದರೂ ಇನ್ಸಪೆಕ್ಟರ್ ಪಾತ್ರ ಪೋಷಣೆ ಪೇಲವವಾಗಿದೆ. ಆ ಪಾತ್ರ ಹಾಕಿದ ಪೋಲಿಸ್ ಕಾಸ್ಟೂಮ್ಸಗಳೋ ನಿರ್ದೇಶಕರಿಗೇ ಪ್ರೀತಿ. ಬೆಳಕಂತೂ (ಪ್ರಭಾಕರಬಾಬು) ನಿಧಾನಗತಿಯನ್ನು ಅಳವಡಿಸಿಕೊಂಡಿದೆ. ಪ್ರತಿ ದೃಶ್ಯ ಮುಗಿದು ನಟರೆಲ್ಲಾ ಸ್ಟಿಲ್ ಆಗಿ ಬೆಳಕು ಆರಲು ಕಾಯುತ್ತಿರುವಷ್ಟು ಆಭಾಸಕಾರಿಯಾಗಿದೆ. ಕೋರ್ಟ ದೃಶ್ಯದಲ್ಲಿ ಎಲ್ಲೂ ಗಲಾಟೆಯಾಗದಿದ್ದರೂ ನ್ಯಾಯಾಧೀಶ ಆರ್ಡರ್, ಆರ್ಡರ್ ಎನ್ನುವುದು ಅನಗತ್ಯವಾಗಿತ್ತು. ಇಲ್ಲವೇ ಗಲಾಟೆಯನ್ನಾದರೂ ಮಾಡಿಸಬೇಕಿತ್ತು.
ಕಥೆಗಾರ ಪಾತ್ರಕ್ಕೆ ವಾದಿರಾಜ್ ನ್ಯಾಯ ಒದಗಿಸಿದ್ದಾರೆ. ಆದರೆ ಈ ಪಾತ್ರಕ್ಕೆ ಮೇಕಪ್ನಲ್ಲಿ ಇನ್ನೊಂದಿಷ್ಟು ವಯಸ್ಸಾಗಿರುವಂತೆ ಮಾಡಿದ್ದರೆ ಪಾತ್ರ ಕಳೆಗಟ್ಟುತ್ತಿತ್ತು. ಕರ್ವಾಲೋ ಪಾತ್ರದಲ್ಲಿ ನರೇಂದ್ರಬಾಬು ಪರಕಾಯಪ್ರವೇಶ ಮಾಡಿದಂತೆ ಅಭಿನಯಿಸಿದ್ದಾರೆ. ಮಂದಣ್ಣನಾಗಿ ನಂಜುಂಡೇಗೌಡರು ನಟಿಸಿದ್ದಾರಾದರೂ ಆ ಪಾತ್ರಕ್ಕೆ ಬೇಕಾದ ಮುಗ್ದತೆಯನ್ನು ತೋರುವಲ್ಲಿ ಇನ್ನೂ ಶ್ರಮಿಸಬೇಕಿದೆ. ರಾಮಯ್ಯ ಹಾಗೂ ಕಲ್ಲಿದ್ದಲು ಕಾರ್ಮಿಕನ ಪಾತ್ರದಾರಿ ಹರೀಶ್ ತಮ್ಮ ವಿಚಿತ್ರ ಆಂಗಿಕಾಭಿನಯದಿಂದ ಎಲ್ಲರ ಗಮನ ಸೆಳೆದರು. ಇನ್ಸಪೆಕ್ಟರ್ ಪಾತ್ರದಾರಿ ಮಂಜೇಶ್ ಇನ್ನೂ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು. ಒಟ್ಟಾರೆಯಾಗಿ ಹೊಸ ನಟರಿಗೆ ಈ ನಾಟಕದಲ್ಲಿ ಅಭಿನಯಿಸುವುದೊಂದು ಸವಾಲಿನ ಕೆಲಸ. ವ್ಯಂಗ್ಯ ವಿಡಂಬನೆ ಮತ್ತು ಪಂಚ್ ಸಂಭಾಷಣೆಗಳೇ ಈ ನಾಟಕದ ಜೀವಾಳವಾಗಿದ್ದು ಸಮರ್ಥವಾಗಿ ಅಭಿನಯಿಸಿದಾಗ ಮಾತ್ರ ನಾಟಕ ಕಳೆಗಟ್ಟಲು ಸಾಧ್ಯ. ಹಾಡು ಮತ್ತು ಸಂಗೀತ (ಚಿದಾನಂದ ಕುಲಕರ್ಣಿ) ಬ್ಲಾಕ್ ಔಟ್ನಲ್ಲಿ ನಾಟಕದ ಮೂಡ ಉಳಿಸುವಲ್ಲಿ ಸ್ಪಂದಿಸಿದವು. ಆದರೆ ಹಾಡಿನ ಚರಣದ ಪುನರಾವರ್ತನೆ ಅತಿ ಎನಿಸುವಂತಿತ್ತು.
70ರ ದಶಕದ ಅಂತ್ಯದಲ್ಲಿ ಪ್ರಕಟಗೊಂಡ ತೇಜಸ್ವಿ ಅವರ ‘ಕರ್ವಾಲೋ’ ಕಾದಂಬರಿ ತನ್ನ ವಿಭಿನ್ನ ವಸ್ತು-ವಿಷಯದಿಂದಾಗಿ ಕನ್ನಡ ಸಾಹಿತ್ಯದಲ್ಲಿ ಹೊಸ ಸಂವೇದನೆಯನ್ನುಂಟುಮಾಡಿತ್ತು. ವೈಜ್ಞಾನಿಕ ಎನ್ನಬಹುದಾದ ವಿಷಯವನ್ನು ಇಷ್ಟೊಂದು ಸರಳವಾಗಿ ಹ್ಯೂಮರಸ್ ಆಗಿ ಹೇಳುವುದು ತೇಜಸ್ವಿಯವರಿಗೆ ಮಾತ್ರ ಸಾಧ್ಯ. ತೇಜಸ್ವಿಯವರ ಎಲ್ಲಾ ಕಥೆ ಮತ್ತು ಕಾದಂಬರಿಗಳಲ್ಲಿ ನಾಟಕೀಯ ತಿರುವುಗಳೆ ಹೆಚ್ಚಿರುವುದರಿಂದ ನಾಟಕವಾಗಿಸಲು ಸೂಕ್ತವಾಗಿವೆ. ಅಂತಹ ಮಹತ್ವದ ಮತ್ತು ಸಂಕೀರ್ಣವಾದ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕೆ ಅ.ನಾ.ರಾವ್ ಜಾದವ್ರವರು ಸಮರ್ಥವಾಗಿ ಅಳವಡಿಸಿದ್ದಾರೆ. ಈ ಕಾದಂಬರಿಯಲ್ಲಿ ಸಿದ್ದವಾದ ಕಥಾಹಂದರವಿಲ್ಲ. ಕೆಲವು ಘಟನೆಗಳ ಸರಮಾಲೆಗಳನ್ನು ವಿಡಂಬನಾತ್ಮಕವಾಗಿ ಪೋಣಿಸಲಾಗಿದೆ. ಅವು ನೋಡುಗರಲ್ಲಿ ಒಂಥರಾ ಖುಷಿ ಕೊಡುತ್ತವೆ. ಇಡೀ ನಾಟಕ ಎಲ್ಲೂ ನಿಂತಲ್ಲೆ ನಿಲ್ಲದೇ ದೃಶ್ಯದಿಂದ ದೃಶ್ಯಕ್ಕೆ ನಿರಂತರ ಚಲನೆಯಲ್ಲಿರುವುದರಿಂದ ಆ ಚಲನಶೀಲನೆಯೇ ಇಡೀ ನಾಟಕವನ್ನು ಮುನ್ನಡೆಸುತ್ತದೆ. ವಿಡಂಬನಾತ್ಮಕ ದೃಶ್ಯಗಳು ನೋಡುಗರಿಗೆ ಮಜಾಕೊಟ್ಟರೆ, ಪಂಚ್ ಸಂಭಾಷಣೆಗಳು ಕಚಗುಳಿ ಇಡುವಂತಿವೆ. ಇಡೀ ನಾಟಕ ಎಲ್ಲೂ ಬೋರ್ ಹೊಡಿಸದೇ ಪ್ರೇಕ್ಷಕರಿಗೆ ವಿಶಿಷ್ಟವಾದ ಅನುಭೂತಿಯನ್ನು ಕೊಡುವುದರಿಂದಾಗಿ ‘ಕರ್ವಾಲೋ’ ತೇಜಸ್ವಿಯವರ ಗಮನಾರ್ಹ ನಾಟಕವಾಗಿದೆ.

‍ಲೇಖಕರು G

18 September, 2013

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. malini guruprasanna

    matte ee nataka yelli pradarshanavaaguttade endu tilisiddare olleyadittu., date – time tilisidare upakrute.

    • Anonymous

      ಮರು ಪ್ರದರ್ಶನ ದಿನಾಂಕ 28-09-13 ರ ಶನಿವಾರ ಮಧ್ಯಾನ್ನ 1.೦೦ ಗಂಟೆಗೆ ಕರ್ನಾಟಕ ಸಚಿವಾಲಯ ಕ್ಲಬ್ ,ಕಬ್ಬನ್ ಪಾರ್ಕ್ ,ಬೆಂಗಳೂರು .

  2. Anonymous

    ಕರ್ವಾಲೋ ಮರು ಪ್ರದರ್ಶನ ದಿನಾಂಕ 28 -09 -13 ರ ಶನಿವಾರ ಮಧ್ಯಾನ್ನ 1.೦೦ ಗಂಟೆಗೆ ಕರ್ನಾಟಕ ಸಚಿವಾಲಯ ಕ್ಲಬ್ ,ಕಬ್ಬನ್ ಪಾರ್ಕ್ ,ಬೆಂಗಳೂರು .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading